– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಲವ್ ಯೂ ಮುದ್ದು
ನಿರ್ದೇಶನ: ಕುಮಾರ್
ನಿರ್ಮಾಣ: ಕಿಶನ್
ತಾರಾಂಗಣ: ಸಿದ್ದು ಮೂಲಿಮನಿ,ರೇಷ್ಮಾ,ರಾಜೇಶ್ ನಟರಂಗ,ತಬಲಾ ನಾಣಿ,ಗಿರಿ ಶಿವಣ್ಣ,ಶ್ರೀವತ್ಸ ಮೊದಲಾದವರು
ರೇಟಿಂಗ್: 3.5/5
ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದ ಮಹಾರಾಷ್ಟ್ರದ ಸೋಲಾಪುರದ ಮೂಲದ ಅಂಜಲಿ ಬಾಯಿ ಶಿಂಧೆ ಮತ್ತು ಆಕಾಶ್ ನಾರಾಯಣಕರ್ ಯುವ ದಂಪತಿ ಬಾಳಿನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಚಿತ್ರವೇ ‘ಲವ್ ಯೂ ಮುದ್ದು’. ಸಿದ್ದು ಮತ್ತು ರೇಷ್ಮಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳ ಖ್ಯಾತಿಯ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಿಶನ್ ಅವರು ನಿರ್ಮಾಣ ಮಾಡಿದ್ದಾರೆ.
ಕರ್ಣ (ಸಿದ್ದು ಮೂಲಿಮನಿ) ಹಾಗೂ ಸುಮತಿ (ರೇಷ್ಮಾ) ಅನಿರೀಕ್ಷಿತವಾಗಿ ಪ್ರೀತಿಯಲ್ಲಿ ಒಂದಾಗುತ್ತಾರೆ. ಅವರ ಬದುಕಿನಲ್ಲಿ ಸಾಕಷ್ಟು ಅನಿರೀಕ್ಷಿತ ಟ್ವಿಸ್ಟ್ & ಟರ್ನ್‌ಗಳು ಎದುರಾಗುತ್ತವೆ. ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡ ಸುಮತಿ ಕೋಮಾಕ್ಕೆ ಜಾರುತ್ತಾಳೆ. ಆಗ ಆಕೆಯನ್ನು ಕರ್ಣ ಯಾವೆಲ್ಲಾ ರೀತಿ ಆರೈಕೆ ಮಾಡುತ್ತಾನೆ? ಎಂತೆಂಥ ಚಾಲೆಂಜ್‌ಗಳನ್ನು ಎದುರಿಸುತ್ತಾನೆ? ಈ ಅಪಘಾತದ ಹಿಂದೆ ಯಾರಿದ್ದಾರೆ? ಸುಮತಿ ಮತ್ತೆ ಆರೋಗ್ಯವಂತಳಾಗಿ ಕರ್ಣನ ಬಾಳಿಗೆ ಬರುತ್ತಾಳಾ? ಎನ್ನುವುದೇ ಚಿತ್ರದ ಪ್ರಮುಖ ಕಥಾ ಹಂದರ..
ಚಿತ್ರವು ನಿಜವಾದ ಪ್ರೀತಿಯ ಶಕ್ತಿಯನ್ನು ಸಾರಿ ಹೇಳಿದೆ. . ಎಮೋಷನಲ್ ಪ್ರೇಕ್ಷಕರ ಕಣ್ಣು ಒದ್ದೆಯಾಗಿಸುತ್ತದೆ. ‘ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲ ಎಂದಮೇಲೆ ಪ್ರೀತಿಯನ್ನೇ ಮಾಡೋಕೆ ಹೋಗಬಾರದು. ಪ್ರೀತಿಸಿದ ಮೇಲೆ ಯಾವ ಕಾರಣಕ್ಕೂ ಕೈ ಬಿಡಬಾರದು’ ಎನ್ನುವುದು ಚಿತ್ರದ ಸಂದೇಶ. ಯಾವ ಅತಿರೇಕ, ಅಡಂಬರವಿಲ್ಲದೆ ಸರಳಆಗಿ ಸಾಗುವ ಕಥೆ ಇಲ್ಲಿದೆ. ರಾಜೇಶ್ ನಟರಂಗ, ತಬಲಾ ನಾಣಿ ಅವರಂತಹಾ ಅನುಭವಿ ಕಲಾವಿದರು ಹೊಸ ಕಲಾವಿದರ ಜೊತೆ ನಟಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದ ಒಟ್ಟೂ ಅವಧಿ 2 ಗಂಟೆ 12 ನಿಮಿಷ ಇದರಲ್ಲಿ ಮೊದಲರ್ಧ ಕೆಲವು ಅನಗತ್ಯ ಹಾಸ್ಯ ಸನ್ನಿವೇಶದಿಂದ ಕೂಡಿದೆ. ಆದರೆ ದ್ವಿತೀಯಾರ್ಧ ಕಥೆಗೆ ತಕ್ಕಂತೆ ಯಾವ ಅಡೆತಡೆ ಇಲ್ಲದೆ ಸಾಗಿದೆ. ಅಂದರೆ ಸಿನಿಮಾ ಸತ್ವ ಅಡಗಿರುವುದೇ ಇಲ್ಲಿ..ಅನಿರುದ್ಧ ಶಾಸ್ತ್ರಿ ನೀಡಿರುವ ಸಂಗೀತ ಮತ್ತು ಕೃಷ್ಣ ದೀಪಕ್ ಅವರ ಛಾಯಾಗ್ರಹಣ ಚಿತ್ರಕಥೆಗೆ ಸೊಗಸಾಗಿ ಹೊಂದಿಕೆ ಆಗಿದೆ.
ಸಿದ್ದು ಮೂಲಿಮನಿ ತಮ್ಮ ಪಾತ್ರದಲ್ಲಿ ಸ್ವತಃ ಜೀವಿಸಿದ್ದಾರೆ. ಕೆಲ ಬಾವನಾತ್ಮಕ ಸನ್ನಿವೇಶಗಳಲ್ಲಿ ಕಣ್ಣೀರು ತರಿಸುತ್ತಾರೆ. ಹಾಗೆಯೇ ನವ ನಟಿ ರೇಷ್ಮಾ ತಮ್ಮ ಮೊದಲ ಚಿತ್ರದಲ್ಲೇ ಸವಾಲಿನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಭವಿಷ್ಯದಲ್ಲಿ ತಾವು ಉತ್ತಮ ನಟಿಯಾಗಬಲ್ಲೆ ಎನ್ನುವ ಭರವಸೆಯನ್ನು ರೇಷ್ಮಾ ಈ ಚಿತ್ರದಲ್ಲಿ ತೋರಿಸಿದ್ದಾರೆ. ಒಟ್ಟಾರೆ ಸಿನಿಮಾ ನೈಜ ಘಟನೆ ಆಧರಿಸಿಯೂ ಮನರಂಜನಾತ್ಮಕವಾಗಿದ್ದು ಪ್ರೇಕ್ಷಕರಿಗೆ ಮನಸ್ಸು ಗೆಲ್ಲುತ್ತದೆ.





