`ರೆಕ್ಕೆ ಇದ್ದರೆ ಸಾಕೆ… ಹಕ್ಕಿಗೆ ಬೇಕು ಬಾನು ಬಯಲಲ್ಲಿ ತೇಲುತ ತಾನು ಮ್ಯಾಲೆ ಹಾರೋಕೆ….’ ಎಂಬ ಸುಪ್ರಸಿದ್ಧ ಹಾಡನ್ನು ಕೇಳದ ಕನ್ನಡಿಗರಿಲ್ಲ. `ಚಿನ್ನಾರಿ ಮುತ್ತ’ ಚಿತ್ರದ ಈ ಹಾಡನ್ನು ತನ್ನ ಸಿರಿಕಂಠದಿಂದ ಹಾಡಿ ಎಲ್ಲರ ಮನದಲ್ಲಿ ನಿಂತ ಬಾಲ ಗಾಯಕಿ ರೇಖಾ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಯುವ ಪ್ರತಿಭೆ.
ಮಂಗಳಾ ಹಾಗೂ ಅಂಜನ್ ಕುಮಾರ್ ರ ಮಗಳಾಗಿ ರೇಖಾ ಹುಟ್ಟಿದ್ದು ಸೆಪ್ಟೆಂಬರ್ 1981ರಲ್ಲಿ. ಸಂಗೀತ ಕುಟುಂಬದ ಹಿನ್ನೆಲೆ. ತಾಯಿಯನ್ನು ಆಗಲೇ ಕನ್ನಡದ ಉಷಾ ಉತ್ತುಪ್, ಜೂ. ಎಲ್.ಆರ್. ಈಶ್ವರಿ ಅಂತಲೂ ಕರೀತಿದ್ದರು. ಹಳ್ಳಿ ಮೇಷ್ಟ್ರು, ಚೈತ್ರದ ಪ್ರೇಮಾಂಜಲಿ ಹೀಗೆ ಹಲವಾರು ಚಿತ್ರಗಳಲ್ಲಿ ಹಾಡಿರುವರು. ಅವರ ಹಾಡಿನ ಧಾಟಿಯಲ್ಲಿ ಗ್ರಾಮ್ಯಭಾಷೆಯ ಸೊಗಡಿದ್ದು, ಪದಗಳು ಬಹಳ ಸರಾಗವಾಗಿ ಮೂಡಿಬರುತ್ತಿದ್ದದ್ದು ವಿಶೇಷ. ಇಂತಹ ಕಲೆಯನ್ನು ಗುರುತಿಸಿದ ಸಂಗೀತ ನಿರ್ದೇಶಕರು ಇವರಿಗೆ ಬಹಳಷ್ಟು ಗಮನ ನೀಡುತ್ತ ಉದಯೋನ್ಮುಖ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದವರು. ಇವರ ಗರಡಿಯಲ್ಲಿ ಅದೆಷ್ಟೋ ನವ ತಾರೆಯರು ಇಂದು ತಮ್ಮ ಕಾಲ ಮೇಲೆ ತಾವು ನಿಂತು ಸಂಗೀತ ಕ್ಷೇತ್ರದಲ್ಲಿ ತಮ್ಮ ಸಾಧನೆಯೊಂದಿಗೆ ಗುರುತಿಸಿಕೊಳ್ಳುತ್ತಿರುವರು. ದಂಪತಿಗಳಿಬ್ಬರೂ ಇಳಯರಾಜ ಮೊದಲುಗೊಂಡು ಎಲ್ಲ ಸಂಗೀತ ನಿರ್ದೇಶಕರೊಂದಿಗೆ ಕೆಲಸ ನಿರ್ವಹಿಸಿರುವರು.
ಅಂಜನ್ ರವರ ತಾಯಿ ಶಾರದಾ ದಾಸಿ, ಅಂದಿನ ಕಾಲಕ್ಕೇ ದೇವರ ನಾಮಗಳನ್ನು ರಚಿಸಿ ರಾಗ ಹಾಕಿ ಹಾಡುತ್ತಿದ್ದ ಪ್ರತಿಭಾನ್ವಿತರು. ಅಂತಹ ಒಂದು ಸಂಗೀತದ ಕೌಟುಂಬಿಕ ಹಿನ್ನೆಲೆಯಲ್ಲಿ ಬೆಳೆದು ಇಂದು ಹೊಸ ಪ್ರಯತ್ನದ ಹೆಜ್ಜೆಯೊಂದಿಗೆ ಮುನ್ನಡೆಯಲು ತೊಡಗಿರುವವರು ರೇಖಾ ಮೋಹನ್ (ರೆಮೋ).
ಅಂದು ಬಾಲಗಾಯಕಿಯಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಆ ಮಗುವಿಗಿನ್ನೂ 3 ವರ್ಷ. ಮನೆಯ ವಾತಾವರಣ ಮುಖ್ಯ ಕಾರಣ. ಮಕ್ಕಳ ಸಾಕ್ಷಿ, ರಕ್ಷಕರೇ ಭಕ್ಷಕರು, ಹೃದಯ ಬಂಧನ…… ಹೀಗೆ ಹಲವಾರು ಸಿನಿಮಾಗಳಲ್ಲಿ ಸೋಲೋ ಸಾಂಗ್ ಹಾಡುತ್ತ ಬೆಳೆದ ಈ ಬಾಲಪ್ರತಿಭೆ ಜಾನಕಿಯಮ್ಮ. ಎಸ್.ಪಿ.ಬಿ. ಮುಂತಾದ ಮಹಾನ್ ಗಾಯಕರುಗಳ ಜೊತೆ ಹಾಡುತ್ತ ತಮ್ಮ ಕೆರಿಯರ್ ಮುಂದುವರಿಸಿದರು. ಹಂಸಲೇಖ ಇವರ ಮುಖ್ಯ ಗುರು, ಇವರೇ ಸ್ಛೂರ್ತಿ. ಆರ್.ಪಿ. ಪಟ್ನಾಯಕ್, ಇಳಯರಾಜಾರವರೊಂದಿಗೆ ಕೋರಸ್ ನಲ್ಲಿ ಹಾಡಿರುವರು. ಸಿ. ಅಶ್ವತ್ಥ್ ರವರೊಂದಿಗೆ ಹಲವಾರು ಸಿಡಿಗಳಲ್ಲಿ ಇವರ ಧ್ವನಿಯಿದೆ.
“ನಾನು ಯಾವುದೇ ಕಾಂಪಿಟಿಷನ್ಸ್ ಅಂತ ಹೋಗಲೇ ಇಲ್ಲ. ಕಾರಣ ನನ್ನ ಮೊದಲನೇ ಹಾಡೇ ಚಿನ್ನಾರಿ ಮುತ್ತದ್ದು. ನನ್ನ ಹೆಸರೂ ನ್ಯಾಷನಲ್ ಅವಾರ್ಡ್ ಗೆ ನೇಮಕ ಆಗಿತ್ತು. ಆದರೆ ಪ್ರಶಸ್ತಿಯೇನೂ ಬರಲಿಲ್ಲ. ಮುಂದೆ ಜನ ನನ್ನನ್ನು ಮಕ್ಕಳ ಹಾಡಿನ ಕಾರ್ಯಕ್ರಮದಲ್ಲಿ ಜಡ್ಜ್ ಆಗಿಯೋ ಅಥವಾ ಅತಿಥಿಯಾಗಿಯೋ ಕರೆದುಬಿಡುತ್ತಿದ್ದರು. ಹಾಗಾಗಿ ನಾನು ಯಾವ ಕಾಂಪಿಟಿಷನ್ ಗೂ ಹೋಗಲೇ ಇಲ್ಲ,” ಎಂದು ಹೇಳುತ್ತಾರೆ. 1994ರಲ್ಲಿ ಪತ್ರಕರ್ತರ ಅದ್ಧೂರಿ ಕಾರ್ಯಕ್ರಮವೊಂದು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ಆ ಕಾರ್ಯಕ್ರಮಕ್ಕೆ ಇಳಯರಾಜ, ಎಸ್.ಪಿ.ಬಿ.ಯಂತಹ ಮಹಾನ್ ಸಂಗೀತ ದಿಗ್ಗಜರು ಆಗಮಿಸಿದ್ದು ಆ ಸುಸಂದರ್ಭದಲಿ, `ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು….’ ಹಾಡನ್ನು ಹಾಡಿ ಎಲ್ಲರಿಂದ ಪ್ರಶಂಸೆ ಪಡೆದರು. ಇದರ ಪರಿಣಾಮ ಮುಂದೆ ಕೆಲವು ಸಿನಿಮಾಗಳಲ್ಲಿ ಹಾಡುವ ಅವಕಾಶ ಅರಸಿ ಬಂದಿತು.
FM 93.5ನಲ್ಲಿ `ಲಂಡನ್ ರಾಣಿ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ಬಹಳ ಜನಪ್ರಿಯತೆಯನ್ನೂ ಪಡೆಯಿತು. ಹಂಸಲೇಖಾರ ಪ್ರೋತ್ಸಾಹದಿಂದ `ಪ್ರೀತಿಗಾಗಿ’ ಧಾರಾವಾಹಿಯಲ್ಲಿ 30ಕ್ಕೂ ಹೆಚ್ಚು ಕಂತುಗಳಲ್ಲಿ ನಟಿಸಿರುವರು. ನಂತರದ 8 ವರ್ಷಗಳು ಈ ಬಾಲಪ್ರತಿಭೆ ಯಾಕೋ ಮೌನವಾಗಿದ್ದುಬಿಟ್ಟರು. ಆ ಸಮಯದಲ್ಲಿ ಬಿ.ಕಾಂ., ಡಿಪ್ಲಮೋ ಇನ್‌ಎನ್.ಐ.ಟಿ. ಓದಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಒಳ್ಳೆಯ ಹೆಸರನ್ನು ಸಂಪಾದಿಸಿದರು. ಹಲವಾರು ತಿಂಗಳು ಕಳೆದು ಒಮ್ಮೆ ಕಾಫಿ ಟೈಂನಲ್ಲಿ ಹಾಡನ್ನು ಗುನುಗುನಿಸುತ್ತಿದ್ದಾಗ ಅವರ ಬಾಸ್ ಯಾರಿದು ಕೋಗಿಲೆ ಎಂದರಂತೆ. ಈ ಕೆಲಸ ನಿಮಗೆ ಬೇಡಮ್ಮ, ನಿಮ್ಮ ಕಲೆಯ ಕ್ಷೇತ್ರವೇ ಬೇರೆ ಇದೆ ಎಂದು ಹೇಳಿದ್ದು ಇವರಲ್ಲಿ ಮತ್ತೆ ಸಂಗೀತದ ಆಸೆ ಹೊರಹೊಮ್ಮಲು ಪ್ರೇರೇಪಿಸಿದರಂತೆ.
ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ರೆಮೋ ಸೀದಾ ಗುರು ಹಂಸಲೇಖಾರ ಬಳಿ ಹೋದರು. ಮತ್ತೆ ಇವರ ಹಾಡಿನ ಹಕ್ಕಿ ರೆಕ್ಕೆ ಬಿಚ್ಚಿ ಹಾರತೊಡಗಿತು. ಹರಿಕೃಷ್ಣರಿಗೆ ಟ್ರ್ಯಾಕ್ ಸಿಂಗರ್ ಆಗುವುದರ ಮುಖೇನ ಹಲವಾರು ಸಂಗೀತ ನಿರ್ದೇಶಕರ ಜೊತೆಗೆ ತಮ್ಮ ಪಯಣವನ್ನು ಬೆಳೆಸಿದರು.
ಪತಿ ಮೋಹನ್ ಹಂಸಲೇಖಾರ ಜೂನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. `ಮಾಯದಂಥ ಮಳೆ’ ಚಿತ್ರದ ಮುಖೇನ ಸಂಗೀತ ನಿರ್ದೇಶಕರಾಗಿ ಚಿತ್ರ ಜಗತ್ತಿಗೆ ಇಳಿದರು. ಇಬ್ಬರೂ ಒಂದೇ ಕ್ಷೇತ್ರದಲ್ಲಿರುವುದರಿಂದ ಸಾಧನೆಗೆ ಮತ್ತಷ್ಟು ಹುರುಪು ಹುಮ್ಮಸ್ಸು ಮೂಡುತ್ತಿದೆ. ಸದ್ಯ ತಮ್ಮ ಒಂದು ಸಣ್ಣ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಟಿವಿ ಸೀರಿಯಲ್ ಗಳಿಗೆ, ಕಿರುಚಿತ್ರಗಳಿಗೆ ವಾದ್ಯ ಹಾಗೂ ರಾಗ ಸಂಯೋಜನೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ರಾಣಿ ಮಹಾರಾಣಿ, ಆಕಾಶದೀಪ, ಇದು ಯಾರು ಬರೆದ ಕಥೆಯೋ ಮುಂತಾದವು ಇವರ ಸ್ಟುಡಿಯೋದಲ್ಲಿ ರೂಪು ಪಡೆದಿದ್ದವು. ತಮ್ಮ 7ನೇ ತರಗತಿಯಿಂದಲೇ ಸಣ್ಣ ಕವಿತೆಗಳನ್ನು ಬರೆಯುತ್ತ ಬಂದಿರುವರು. ನಾನು ಕವನಗಳನ್ನು ಬರೆಯುವಾಗ ಕನ್ನಡದಲ್ಲಿ ಪದ ಸಿಗದಿದ್ದಾಗ ನನ್ನ ಪತಿಯೇ ನನಗೆ ಮುಖ್ಯ ನಿಘಂಟು ಎನ್ನುತ್ತಾರೆ ರೆಮೋ. ಅಣ್ಣ ಹಾಗೂ ಸ್ನೇಹಿತರ ಸಹಕಾರ ಇವರ ಏಳಿಗೆಗೆ ಬಹಳ ಪೂರಕ.
`ಅಂತರ್ಜಾಲದಲ್ಲಿ ಕೂಲಂಕಶವಾಗಿ ನೋಡಿ ಖಚಿತಪಡಿಸಿಕೊಂಡಿರುವೆ. ನಮ್ಮ ದಕ್ಷಿಣ ಭಾರತದಲ್ಲಿ ಇದುವರೆವಿಗೂ ಯಾರೂ ಇಂಥಹ ಸಾಹಸ ಮಾಡಿಲ್ಲ,’ ಎಂದು ಬಹಳ ಉತ್ಸುಕತೆಯಿಂದ ಹೇಳುತ್ತಾರೆ. ಗೀತರಚನೆ, ಸಂಗೀತ, ಹಾಡುಗಾರಿಕೆ ಎಲ್ಲವೂ ರೆಮೋ ಅವರದೇ. ಜೊತೆಗೆ, “ಇದು ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ. ಹಾಗಂತ ನಾನೇನೂ ಪುರುಷದ್ವೇಷಿಯಲ್ಲ. ಇದೊಂದು ಹೊಸ ಪ್ರಯತ್ನವಷ್ಟೇ,” ಎಂದು ಬಹಳ ವಿನಯದಿಂದ ಹೇಳುತ್ತಾರೆ. ಕಳೆದ ಫೆಬ್ರವರಿಯ ಪ್ರೇಮಿಗಳ ದಿನದಂದು `ಗೆಳತಿ ಎನ್ನಲೇ, ಹುಡ್ಗೀರ್ಗೋಸ್ಕರ’ ಎಂಬ ನುಡಿಯೊಟ್ಟಿಗೆ ಧ್ವನಿಸುರಳಿಯನ್ನು ಬಿಡುಗಡೆಗೊಳಿಸಿದರು. ಇದಕ್ಕೆ ಪತಿಯ ಪರಿಪೂರ್ಣ ಸಹಕಾರವಿತ್ತು. ಹಾಡುಗಾರಿಕೆಯಲ್ಲಿ ರೆಮೋ, ಅನುರಾಧಾ ಭಟ್, ಆಕಾಂಕ್ಷಾ ಬಾದಾಮಿ, ಅರ್ಚನಾ ರವಿ ಮುಖ್ಯ ಗಾಯಕಿಯರಾಗಿ ಮಿಂಚುತ್ತಿದ್ದಾರೆ. ಸಹಗಾಯನದಲ್ಲಿ ಲಕ್ಷ್ಮಿ, ಶಿಲ್ಪಾ ಇದ್ದಾರೆ.
ಕರ್ನಾಟಕ ಪ್ರತಿಭಾರ್ಧಕ ಅಕಾಡೆಮಿಯವರು ಬ್ಯಾಂಡಿನ ಎಲ್ಲ ಮಹಿಳೆಯರಿಗೂ ರವೀಂದ್ರ ಕಲಾಕ್ಷೇತ್ರದಲ್ಲಿ `ಸಂಗೀತ ಸುಧಾ’ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಶ್ಯಾಮಲಾ ಭಾವೆಯವರಿಂದ ಪ್ರಶಂಸೆಯೂ ದೊರೆತು ಆಶೀರ್ದಿಸಿದ್ದಾರೆ. ಮುಂಬೈನ ಕಲರ್ಸ್ ಚಾನೆಲ್ ನಡೆಸುವ `ಇಂಡಿಯಾ ಹ್ಯಾಸ್ ಗಾಟ್ ಟ್ಯಾಲೆಂಟ್’ ಎಂಬ ಶೋಗೂ ಆಹ್ವಾನಿಸಿದ್ದಾರೆ. `ಸಂಸೈ’ ಎಂಬ ಸಂಸ್ಥೆಯನ್ನೂ ತೆರೆದಿರುವರು. ಅಂದರೆ ಸಂಸಾರಕ್ಕೂ ಸೈ ಸಂಗೀತಕ್ಕೂ ಸೈ ಎಂಬುದು ಇದರ ಅರ್ಥ. ಮಹಿಳೆಯರಿಗೆ ಇದರಲ್ಲಿ ಆದ್ಯತೆ. 6 ಜನರಿದ್ದ ಈ ತಂಡಕ್ಕೆ ಮತ್ತೊಬ್ಬ ಕೀಬೋರ್ಡ್ ಆರ್ಟಿಸ್ಟ್ ಭುವನೇಶ್ವರಿ ಜೊತೆಗೂಡಿದ್ದಾರೆ. ಇವರ ಬ್ಯಾಂಡ್ ನಲ್ಲಿ 6 ಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್, ಮಲೆಯಾಳಂಗಳಲ್ಲಿ ಹಾಡಿ ಸಾಧನೆ ಮೆರೆದಿದ್ದಾರೆ. ಅದರಲ್ಲಿ `ಸಂತೋಷಕ್ಕೆ ಹಾಡು ಸಂತೋಷಕ್ಕೆ…..’ ಹಾಗೂ `ಜಗವೇ ಒಂದು ರಣರಂಗ….’ ಹಾಡುಗಳಿಗೆ ಒನ್ಸ್ ಮೋರ್ ಎನ್ನೋದಂತೂ ಗ್ಯಾರಂಟಿ.
ಹೆಣ್ಣುಮಕ್ಕಳು ತಾವಾಗಿ ಹೋಗಿ ಅಪ್ರೋಚ್ ಮಾಡೋದು ಬಹಳ ಕಷ್ಟ. ಹಾಗಾಗಿ ಅಂತಹ ಮಕ್ಕಳಿಗೆ ವೇದಿಕೆಯೊಂದನ್ನು ಕಲ್ಪಿಸಬೇಕು ಎಂಬ ಮಹದಾಸೆಯಿಂದ `ಮ್ಯೂಸಿಕ್ ಸ್ಪಾರ್ಕ್’ ಎಂಬ ಮಹಿಳಾ ಬ್ಯಾಂಡ್ ನ್ನು ಅಂದು ಉದ್ಘಾಟಿಸಿದರು. ಈ ಧ್ವನಿಸುರಳಿಯಲ್ಲಿ ರೆಮೋ ಗಂಡು ಧ್ವನಿಯಲ್ಲಿ ಹಾಡುತ್ತಿರುವುದು ಮತ್ತೊಂದು ವಿಶೇಷ ಸಂಗತಿ. ಡ್ರಮ್ಸ್ ಪ್ಯಾಡ್ಸ್ ನುಡಿಸುವ ಪ್ರಿಯಾ, ಕೀಬೋರ್ಡ್ ಕಲಾವಿದರಾದ ಅವರ, ಖುಶೀ, ಗಾಯಕಿಯರಾದ ಲಕ್ಷ್ಮಿ, ಶಿಲ್ಪಾ, ಪ್ರಾರ್ಥನಾ ಈ ಹೊಸ ಟೀಂನಲ್ಲಿದ್ದಾರೆ. ಮುಂದಿನ ಪೀಳಿಗೆಯವರ ಮೇಲಿರುವ ಇವರ ಕಾಳಜಿ ನಿರಂತರವಾಗಿರಲಿ, ಚಿರಾಯುವಾಗಿರಲಿ. ನಮ್ಮ ನಡುವೆ ಬೆಳೆಯುತ್ತಿರುವ ಈ ಯುವ ಟೀಮಿಗೆ ಗೃಹಶೋಭಾ ಪರವಾಗಿ ಆಲ್ ದಿ ಬೆಸ್ಟ್!
– ಸವಿತಾ ನಾಗೇಶ್