ಮನೆ ನಿಮ್ಮ ವಿಚಾರಗಳ, ಸಂಸ್ಕಾರಗಳ ಹಾಗೂ ವ್ಯಕ್ತಿತ್ವದ ಕನ್ನಡಿಯಂತಿರುತ್ತದೆ. ನೀವು ಮನೆಯನ್ನು ಯಾವಾಗಲೂ ಅತ್ಯಂತ ಅಚ್ಚುಕಟ್ಟಾಗಿ ಅಲಂಕರಿಸುತ್ತೀರಿ. ಆದರೆ ಹಬ್ಬದ ಸಂದರ್ಭದಲ್ಲಿ ಮನೆಯನ್ನು ನವ ವಧುವಿನಂತೆ ಸಿಂಗರಿಸುವುದರಲ್ಲಿ ವಿಶಿಷ್ಟ ಮಜವಿದೆ. ನಿಮ್ಮ ಮನೆಗೆ ಬರುವ ಅತಿಥಿಗಳು ನಿಮ್ಮ ಈ ವಿಶಿಷ್ಟ ಅಲಂಕಾರದ ನೈಪುಣ್ಯತೆಯ ಬಗ್ಗೆ ಪ್ರಭಾವಿತರಾಗದೇ ಇರುವುದಿಲ್ಲ.
ನಿಮಗಾಗಿ ಇಲ್ಲಿ ಕೆಲವು ಕಿವಿಮಾತುಗಳಿದ್ದು, ಅವನ್ನು ಅನುಸರಿಸಿ ನೀವು ನಿಮ್ಮ ಮನೆಗೆ ಕಲ್ಪನೆಗೂ ಮೀರಿದ ಕಳೆ ನೀಡಬಹುದು.
ಮೊದಲೇ ಸಿದ್ಧತೆ ಮಾಡಿಕೊಳ್ಳಿ
ಮನೆಯ ಪರದೆಗಳನ್ನು ಚೆನ್ನಾಗಿ ಝಾಡಿಸಿ ಧೂಳು ಹೋಗುವಂತೆ ಮಾಡಿ. ಹೆಚ್ಚು ಕೊಳೆಯಾಗಿದ್ದರೆ ಒಗೆದು ಇಸ್ತ್ರಿ ಮಾಡಿಡಿ.
ಅಡುಗೆಮನೆಯ ಕಪಾಟುಗಳನ್ನು ಹೊರಬದಿ ಹಾಗೂ ಒಳಬದಿ ಎರಡೂ ಕಡೆ ಸ್ವಚ್ಛಗೊಳಿಸಿ ಸಾಮಾನುಗಳನ್ನು ಪುನಃ ಯಥಾಸ್ಥಳದಲ್ಲಿ ಇಡಿ. ಫ್ರಿಜ್ ಕೂಡ ಸ್ವಚ್ಛಗೊಳಿಸಿ.
ಅಡುಗೆಮನೆಯ ಬೇಳೆ ಹಾಗೂ ಮಸಾಲೆಗಳ ಡಬ್ಬಿಗಳು ಚೆನ್ನಾಗಿ ಹೊಳೆಯುವಂತೆ ತಿಕ್ಕಿ ಒರೆಸಿಡಿ. ಟೈಲ್ಸ್ ಹಾಗೂ ಸಿಂಕ್ ಗಳು ಕೂಡ ಕಂಗೊಳಿಸುವಂತೆ ಮಾಡಿ.
ಮನೆಯಲ್ಲಿ ಕುರ್ಚಿಗಳು ಕಡಿಮೆಯಿದ್ದರೆ, ನಿಮ್ಮ ಶಕ್ತಿಗನುಸಾರ ಜಮಖಾನೆ, ಚಾಪೆ ಅಥವಾ ಕಾರ್ಪೆಟ್ ಖರೀದಿಸಬಹುದು.
ಹೂಕುಂಡಗಳ ಅಂದ
ಮಣ್ಣಿನ ಅಥವಾ ಟೆರಾಕೋಟಾದಿಂದ ತಯಾರಿಸಲ್ಪಟ್ಟ ಹೂಕುಂಡಗಳು, ಕಲಾಕೃತಿಗಳು 200 ರೂ.ಗಳಿಂದ ಹಿಡಿದು 1000 ರೂ.ಗಳ ತನಕ ದೊರೆಯುತ್ತವೆ. ಸುಂದರ ಬಣ್ಣಗಳಿಂದ ಚಿತ್ರಿಸಿದ, ಆಕಾರದಲ್ಲಿ ಉದ್ದವಾಗಿರುವ ಆದರೆ ಗಾತ್ರದಲ್ಲಿ ತೆಳ್ಳಗೆ ಇರುವ ಬಿದಿರನ್ನು ಇರಿಸಿ, ಕೆಳಗೆ ಉದ್ದನೆಯ ಕೋಲು ಇರುವ ಕೃತಕ ಹೂಗಳ ಗುಚ್ಛವನ್ನು ಅದರಲ್ಲಿ ಹಾಕಿ ಡ್ರಾಯಿಂಗ್ ರೂಮಿನ ಮೂಲೆಯಲ್ಲಿ ಇಡಿ. ಕೋಣೆಯ ಲುಕ್ ಬದಲಾಗುತ್ತದೆ. ಅದಕ್ಕಾಗಿ ಬೇರೆ ಜಾಗವನ್ನು ಹುಡುಕಬೇಕಾದ ಪ್ರಸಂಗ ಬಾರದು.
ಹೂಗಳ ಚೆಂದದ ಅಲಂಕಾರ
ಅನೇಕ ಹೂಗಳ ಒಂದೇ ಗುಚ್ಛ ಮಾಡಿ ನಡು ಮಧ್ಯದ ಟೇಬಲ್ ನಲ್ಲಿ ಇಡುವುದಕ್ಕಿಂತ ಬೇರೆ ಬೇರೆ ಬಣ್ಣದ ಒಂದೊಂದು ಅಥವಾ ಎರಡೆರಡನ್ನು ಪಾರದರ್ಶಿ ಬಾಟಲ್ ಗಳಲ್ಲಿ ನೀರು ತುಂಬಿಡಿ. ಈ ಬಾಟಲ್ ಗಳನ್ನು ಮನೆಯ ಬೇರೆ ಬೇರೆ ಭಾಗಗಳಲ್ಲಿ ಇಡಿ. ಇಡೀ ಮನೆಗೆ ಸುಂದರ ಲುಕ್ ದೊರೆಯುತ್ತದೆ.
ಕುಳಿತುಕೊಳ್ಳುವ ವ್ಯವಸ್ಥೆ
ಡ್ರಾಯಿಂಗ್ ರೂಮಿನಲ್ಲಿ ಎಲ್ಲ ಕುರ್ಚಿಗಳನ್ನು ಗೋಡೆಯ ಭಾಗದತ್ತ ಸರಿಸಿ. ಅವುಗಳ ಸಮೀಪ ಒಂದು ಸ್ಟೂಲ್ ಕೂಡ ಇಡಿ. ಅತಿಥಿಗಳು ಅವುಗಳ ಮೇಲೆ ಪ್ಲೇಟ್, ಕಪ್ ಮುಂತಾದವುಗಳನ್ನು ಇಡಲು ಅನುಕೂಲವಾಗುತ್ತದೆ.
ನಿಮ್ಮ ಮನೆಯಲ್ಲಿ ಕುರ್ಚಿಗಳ ಸಂಖ್ಯೆ ಕಡಿಮೆ ಇದ್ದರೆ ಡ್ರಾಯಿಂಗ್ ರೂಮಿನಲ್ಲಿ ಒಂದು ಬೆಡ್ ಹಾಕಿ ಅದರ ಮೇಲ್ಭಾಗದಲ್ಲಿ ಒಂದು ಸುಂದರ ಹೊದಿಕೆ ಹೊದಿಸಿ. ಹಿಂಭಾಗದಲ್ಲಿ ದುಂಡನೆಯ ಹಾಗೂ ಉದ್ದನೆಯ ಕುಶನ್ ಗಳನ್ನು ಇಡಿ.
ಮಕ್ಕಳ ಕೋಣೆಯಿಂದ ಅನವಶ್ಯಕ ಸಾಮಾನುಗಳನ್ನು ಹೊರಗೆ ಹಾಕಿ, ಅಲ್ಲಿ ಒಂದು ಕಾರ್ಪೆಟ್ ಹಾಸಿ. ಮಕ್ಕಳಿಗೆ ಅಲ್ಲಿಯೇ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ.
– ಸಿ. ಶಾಂತಾ




 
  
         
    




 
                
                
                
                
                
                
               