ಬ್ಯಾಂಕ್‌ ಮ್ಯಾನೇಜರ್‌ ವಿಶ್ವನನ್ನು ಕಂಡರೆ ನೀತಾಗೆ ಅವ್ಯಕ್ತ ಭಯ. ನೀತಾ ಅಟೆಂಡರ್‌ ಕೆಲಸಕ್ಕೆ ಸೇರಿ ಆರು ತಿಂಗಳಾದರೂ ಇನ್ನೂ ಭಯದಿಂದ ಆಕೆ ಮುಕ್ತವಾಗಿರಲಿಲ್ಲ. ಬ್ಯಾಂಕಿನಲ್ಲಿನ ಎಲ್ಲಾ ಸ್ತ್ರೀಯರ ಸೌಂದರ್ಯದಲ್ಲಿ ನೀತಾಗೇ ಮೊದಲನೇ ಸ್ಥಾನ. ತುಂಬಿದೆದೆ, ನೀಳವಾದ ಜಡೆ ನಿತಂಬದ ತನಕವಿತ್ತು. ಕೆಂಪು ವರ್ಣದಲ್ಲಿ ಅಪ್ರತಿಮ ಸುಂದರಿ, ತಿದ್ದಿ ತೀಡಿದ ಗೊಂಬೆ. ಸಾದಾ ಸೀರೆಯಲ್ಲೂ ನೀತಾಳ ಸೌಂದರ್ಯ ಗಮನಾರ್ಹವೇ!

ಒಂದೊಂದು ದಿನ, ಪಿಂಕ್‌ ಸೀರೆಯಲ್ಲಿ ಬ್ಯಾಂಕಿಗೆ ಬಂದಾಗ ಮ್ಯಾನೇಜರ್‌ ಎಲೆಯಿಕ್ಕದೆ ಆಕೆಯನ್ನು ಗಮನಿಸುತ್ತಲೇ ಇರುವುದು ಇರುಸುಮುರುಸು ಉಂಟು ಮಾಡಿರುವುದು ಸುಳ್ಳಲ್ಲ. `ವಿಶ್ವ ನನ್ನನ್ನು ನುಂಗುವಂತೆ ನೋಡುತ್ತಿದ್ದಾನೆ’ ಎಂಬ ಸತ್ಯ ಅರಿವಾದ ದಿನದಿಂದಲೂ ನೀತಾಳಿಗೆ ಯಾಕೋ ಬ್ಯಾಂಕ್‌ ಆವರಣದೊಳಗೆ ಕಾಲಿಟ್ಟ ತಕ್ಷಣ ಎದೆ ಹೊಡೆದುಕೊಳ್ಳಲಾರಂಭಿಸುತ್ತಿತ್ತು.

ನೀತಾಳಿಗೆ ಅಂದು ಅರ್ಧ ದಿನ ರಜೆ ಬೇಕಾಗಿತ್ತು. ಹಾಗಾಗಿ ವಿರಾಮದ ವೇಳೆಯಲ್ಲಿ, `ಮೇ ಐ ಕಮಿನ್‌ ಸಾರ್‌…..’ ಎಂದು ಗಾಜಿನ ಕಿಟಕಿಯನ್ನು ಹೊಂದಿದ್ದ ಬಾಗಿಲನ್ನು ದೂಡಿದಳು.

“ಎಸ್‌ ಪ್ಲೀಸ್‌… ಕಮ್ ಇನ್‌,” ಎಂದ ವಿಶ್ವ ನೀತಾಳ ತುಂಬಿದ ಎದೆಯನ್ನೇ ಅವಲೋಕಿಸಿದ. ಏರಿಳಿಯುತ್ತಿದ್ದ ಅವಳ ಎದೆಯನ್ನು ನೋಡಿ ವಿಶ್ವನ ಮುಖದಲ್ಲಿ ಹರ್ಷದ ಗೆರೆ ಮಿಂಚಿತು.

“ಎಕ್ಸ್ ಕ್ಯೂಸ್‌ ಮಿ….” ಅಂದು ನೀತಾ ಒಳಬಂದಳು.

“ಏನ್ಸಮಾಚಾರಾ, ಇನ್ನೂ ಊಟ ಮಾಡಿಲ್ವಾ?” ವಿಶ್ವ ತೆಳು ನಗೆ ಹರಿಸಿದ.

“ಇಲ್ಲ ಸರ್‌, ಸ್ವಲ್ಪ ವೈಯಕ್ತಿಕ ಕೆಲಸ ಇದೆ. ಅರ್ಧ ದಿನ ರಜೆ ಹಾಕ್ತೀನಿ, ತಮ್ಮ ಪರ್ಮಿಷನ್‌ ಸಿಕ್ಕಿದರೆ…..” ಎಂದಂದು ರಜಾ ಚೀಟಿಯನ್ನು ವಿಶ್ವನ ಟೇಬಲ್ ಮೇಲಿಟ್ಟು, ತನ್ನ ಉದ್ದನೆಯ ಜಡೆಯನ್ನು ಕೈಯಲ್ಲಿ ತೆಗೆದುಕೊಂದು ತಲೆ ತಗ್ಗಿಸಿ ನಿಂತಳು. ವಿಶ್ವ ರಜಾ ಚೀಟಿಯನ್ನು ಗಮನಿಸುತ್ತಾ, “ಬೆಳಗ್ಗೇನೆ ಯಾಕೆ ಹೇಳಲಿಲ್ಲ….? ಬಿಡಿ ಪರವಾಗಿಲ್ಲ, ವೈಯಕ್ತಿಕ ಕೆಲಸ ಅಂತಿದ್ದೀರಿ ಆಲ್ ರೈಟ್‌…. ಅಂದಹಾಗೆ ನಿಮ್ಮನ್ನು ನೋಡಿದ್ರೆ ಮೂರು ಮಕ್ಕಳ ತಾಯಿ ಅಂತ ಕಣ್ಣಿದ್ದರು ಖಂಡಿತಾ ಹೇಳಲ್ಲ. ನಿಮ್ಮ ಕಣ್ಣನ್ನು ನೋಡುತ್ತಿದ್ದರೆ, ಆ ಉದ್ದನೆಯ ಜಡೆ ಹೊಯ್ದಾಡುತ್ತಿದ್ದರೆ, ನಿಮ್ಮ ಆ…. ಬೇಡ ಬಿಡಿ ಒಟ್ಟಿನಲ್ಲಿ ನೀವು ಚಂದನದ ಗೊಂಬೆ!” ಎಂದುಬಿಟ್ಟ ವಿಶ್ವ.

ನೀತಾಳಿಗೆ ಮೈಯೆಲ್ಲ ಕೆಂಪಿರುವೆಗಳು ಕಡಿದಂತಾಗಿ, “ಸರ್‌, ಹಾಗಾದರೆ ನಾನು ಬರಲೇ?” ಎಂದು ಹೊರಟಳು.

“ನೀತಾ, ಒನ್‌ ಮಿನಿಟ್‌. ಹೊರಗಡೆ ಸುಧಾಕರನ ಟೇಬಲ್ ಮೇಲೆ ಕೆಂಪು ಬಣ್ಣದ ಒಂದು ಫೈಲ್ ‌ಇದೆ. ತಂದುಕೊಡಿ,” ಎಂದು ಹೇಳಿ ಕೈಗೆ ಮೊಬೈಲ್ ‌ತೆಗೆದುಕೊಂಡು ನಂಬರ್‌ ಗಳನ್ನು ಅದುಮತೊಡಗಿದ.

ವಿಶ್ವನ ಕ್ಯಾಬಿನ್‌ ನಿಂದ ಹೊರಬಂದು, ಸುಧಾಕರನ ಟೇಬಲ್ ಮೇಲಿದ್ದ ಕೆಂಪು ಬಣ್ಣದ ಫೈಲನ್ನು ತೆಗೆದುಕೊಳ್ಳಹೋದಾಗ ಸುಧಾಕರ್‌, “ನೀತಾರವರೇ, ನಿಮ್ಮ ಉದ್ದ ಜಡೆಯನ್ನು ನೀವು ಹೇಗೆ ಮೇಂಟೇನ್‌ ಮಾಡ್ತೀರೋ….?” ಎಂದು ಕೆಣಕಿದಾಗ ನೀತಾಳಿಗೆ ತನ್ನ ಸೌಂದರ್ಯವೇ ತನಗೆ ಶತ್ರುವಾಗುತ್ತಿದೆ ಎಂದೆನಿಸದೆ ಇರಲಿಲ್ಲ. ಮತ್ತೆ ವಿಶ್ವನ ಕ್ಯಾಬಿನ್‌ ಗೆ ಬಂದು, ಫೈಲನ್ನು ಟೇಬಲ್ ಮೇಲಿಟ್ಟು, “ಬರ್ತೀನಿ ಬಾಸ್‌,” ಎಂದು ತುಸು ನಕ್ಕಾಗ, ವಿಶ್ವನ ಮುಖ ಪ್ರಫುಲ್ಲವಾಯಿತು.

ವಿಶ್ವ ಫೈಲನ್ನು ಗಮನಿಸದೆ, ನೀತಾಳ ಅನುಪಮ ಸೌಂದರ್ಯದ ಬಗ್ಗೆ ದೀರ್ಘವಾಗಿ ಯೋಚಿಸತೊಡಗಿದ. ಚಿಕ್ಕಂದಿನಲ್ಲೇ ಮದುವೆಯಾಗದ ಪ್ರಾಯಕ್ಕೆ ಮದುವೆಯಾಗಿ, ಮಕ್ಕಳಾಗದ ವಯಸ್ಸಿಗೆ ಮಕ್ಕಳಾಗಿ, ಗಂಡ ತೀರಿಹೋದರೂ ಇನ್ನೂ ಅದೆಷ್ಟೋ ರಸಪುರಿ ಹಣ್ಣಿನ ತರಹ ಇದ್ದಾಳೆ, ಮೂರು ಮಕ್ಕಳ ತಾಯಿ ಎಂದರೆ ನಂಬುವುದೇ ಕಷ್ಟ. ಯಾವತ್ತು ಬ್ಯಾಂಕಿಗೆ ಬಂದು ಸೇರಿದಳೋ ತನ್ನ ಮನಸ್ಸನ್ನೆಲ್ಲಾ ಆರಿಸಿ, ತನ್ನಲ್ಲಿ ಹುಚ್ಚೆಬ್ಬಿಸಿದ್ದಾಳೆ. ಆ ಮಾದಕ ಕಣ್ಣುಗಳ ನೋಟ, ವಿನಯ, ಬುದ್ಧಿವಂತಿಕೆ, ಮೋಹಕ ನಗೆ, ಸುಶ್ರಾವ್ಯ ಸ್ವರ ತನ್ನನ್ನು ವಿಚಲಿತನನ್ನಾಗಿ ಮಾಡಿಬಿಟ್ಟಿದೆ. ಹೇಗಾದರೂ ಆ ಸೌಂದರ್ಯದ ಖನಿಯನ್ನು ತನ್ನದಾಗಿಸಿಕೊಳ್ಳಬೇಕು. ಆದರೇನು? ತಾನೆಷ್ಟೋ ಸಲ ಪ್ರಯತ್ನಿಸಬೇಕೆಂಬ ಕಲ್ಪನೆಯಲ್ಲೇ ದಿನಕಳೆದು ಬಿಟ್ಟೆನಲ್ಲ! ಎಂದೆಲ್ಲ ಯೋಚಿಸುತ್ತ ಒಮ್ಮೆ ಬಲವಾಗಿ ತಲೆ ಕೊಡವಿಕೊಂಡ ವಿಶ್ವ.

ಆ ದಿನ ಶನಿವಾರ. ಫೈಲುಗಳ ಜೊತೆ ಕ್ಯಾಬಿನ್‌ ಗೆ ಬಂದ ನೀತಾಳನ್ನು ಹುಚ್ಚು ಮನಸ್ಸು ಮಾಡಿ ವಿಶ್ವ, “ನೀತಾ, ಒಳ್ಳೆಯ ಕನ್ನಡ ಚಿತ್ರವೊಂದು ಬಂದಿದೆ. ನಿನ್ನ ಒಪ್ಪಿಗೆ ಇದ್ದರೆ, ನನ್ನ ಮೇಲೆ ಕಿಂಚಿತ್ತು ಅಭಿಮಾನವಿದ್ದರೆ ನಾಳೆ ಹೋಗೋಣವೇ?” ಎಂದು ಏಕವಚನದಲ್ಲಿ ಕೇಳಿಯೇಬಿಟ್ಟ.

“ಇದರಲ್ಲಿ ನನಗೆ ಆಸಕ್ತಿ ಇಲ್ಲ ಸಾರ್‌. ನೀವು ಹೋಗಿಬನ್ನಿ…” ಎಂದು ನಿಖರವಾಗಿ ಉತ್ತರಿಸಿದಳು.

“ನನಗೆ ನಿನ್ನ ಜೊತೇನೇ ಆ ಸಿನಿಮಾ ನೋಡಬೇಕೆಂಬ ಇರಾದೆಯಿದೆ. ಅದಕ್ಕಾಗಿ ಕೇಳುತ್ತಿದ್ದೇನೆ ಅಷ್ಟೆ…” ಎಂದ ವಿಶ್ವ.

“ಸಾರ್‌… ನೀವು ಇಂಥ ಅಪೇಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ. ನಾನು ಮೂರು ಮಕ್ಕಳ ತಾಯಿ, ಮಕ್ಕಳನ್ನು ಆಶ್ರಮದಲ್ಲಿ ಬಿಟ್ಟು ಕಷ್ಟಪಟ್ಟು ಬದುಕುತ್ತಿದ್ದೀನಿ. ಇವತ್ತು ಸಿನಿಮಾಗೆ ಕರೀತೀರಿ, ನಾಳೆ ಹೋಟೆಲ್ ‌ನಲ್ಲಿ ರೂಮು ಮಾಡೋಣ ಅಂತೀರಿ. ಆಗ ಸಾರ್ ನಾನು ಅಂತಹ ಹೆಣ್ಣಲ್ಲ. ಬೇರೆ ಯಾರಿಗಾದರೂ ಟ್ರೈ ಮಾಡಿ ಪ್ಲೀಸ್‌,” ಎಂದು ಮುಖಕ್ಕೆ ಹೊಡೆದಂತೆ ಹೇಳಿ ಅವನ ಕ್ಯಾಬಿನ್‌ ನಿಂದ ಹೊರಬಂದಳು.

Geddhavalu-2

ವಿಶ್ವ ನಂತರದ ದಿನಗಳಲ್ಲಿ ಚುರುಕಾದ. ಹೇಗಾದರೂ ನೀತಾಳನ್ನು ಅನುಭವಿಸಿಯೇ ತೀರಬೇಕೆಂದು ಮನದಲ್ಲೇ ಮಂಡಿಗೆ ಮೆಲ್ಲಲಾರಂಭಿಸಿದ. ಅವನು ಕೆಲವು ಸಂದರ್ಭಗಳನ್ನು ಉಪಯೋಗಿಸಿಕೊಂಡು ಅವಳಿಗೆ ಆದೇಶ ಕೊಡುವಾಗ, ಮೈ ಕೈ ಸೋಕಿಸಲು ಸ್ಪರ್ಶಿಸಲು ಪ್ರಯತ್ನಿಸಿದ್ದ. ಒಮ್ಮೆಯಂತೂ ಅವಳ ಉದ್ದನೆಯ ಜಡೆಯನ್ನು ಮೆಲ್ಲನೆ ಕೈಯಿಂದ ಸ್ಪರ್ಶಿಸುತ್ತಾ, “ನೀತಾ, ನಂಗೆ ನಿನ್ನ ಈ ಜಡೆ ಮತ್ತು ಕಣ್ಣುಗಳು ತುಂಬಾ ಇಷ್ಟ. ಗೊತ್ತಾ?”

ಅದಕ್ಕೆ ತಕ್ಷಣ ನೀತಾ, “ಸಾರ್‌ ಜಡೆಯನ್ನು ಬೇಕಾದರೆ ಕತ್ತರಿಸಿ ಕೊಡಬಹುದು. ಆದರೆ ಕಣ್ಣುಗಳನ್ನು ಕಿತ್ತು ಕೊಡೋಕೆ ಆಗುತ್ತಾ? ಸಾರ್‌, ನಂಗೆ ಇದೆಲ್ಲ ಇಷ್ಟವಾಗಲ್ಲ….” ಅಂದಾಗ ವಿಶ್ವ ಇನ್ನಷ್ಟು ಕುಬ್ಜನಾಗಿ ಹೋದ.

ಕೆಲವು ದಿನಗಳು ಉರುಳಿದವು.

ಇದ್ದಕ್ಕಿದ್ದಂತೆ ವಿಶ್ವ ಮೌನವಾದದ್ದು ಕಂಡು ನೀತಾಳಿಗೂ ಒಳಗೊಳಗೆ ಆತಂಕವಾಯಿತು. ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಿದ್ದ. ಹಿಂದೆಲ್ಲಾ ಫೈಲುಗಳನ್ನು ಕೈಗಳಿಂದ ತೆಗೆದುಕೊಳ್ಳಲೆಂದೇ ಆಸಕ್ತಿ ವಹಿಸುತ್ತಿದ್ದವನು ಈಗ ನೀತಾಳತ್ತ ಸರಿಯಾಗಿ ಕಣ್ಣೆತ್ತಿಯೂ ನೋಡದೆ, “ಟೇಬಲ್ ಮೇಲಿಟ್ಟು ಹೋಗು,” ಎಂದು ಕಡಕ್‌ ಆಗಿ ಹೇಳುತ್ತಿದ್ದ. ವಿಶ್ವನ ಮನಸ್ಸು ಬೇಡ ಬೇಡವೆಂದರೂ ನೀತಾಳನ್ನೇ ಬಯಸುತ್ತಿತ್ತು. ಹೇಗಾದರೂ ಅವಳನ್ನು ತನ್ನವಳನ್ನಾಗಿಸಿಕೊಂಡೇ ತೀರಬೇಕೆಂಬ ಅವನ ಮಹತ್ತರ ಬಯಕೆ ಹೆಚ್ಚುತ್ತಾ ಹೋಯಿತು. ನೀತಾಳನ್ನು ಪ್ರೇಮಿಸುವುದು ತಪ್ಪೇ? ಮೂವರು ಮಕ್ಕಳ ತಾಯಿಯಾದರೂ ಆಕೆಯ ರೂಪರಾಶಿಯ ಮುಂದೆ ಯಾವ ಹೆಣ್ಣೂ ಕುರೂಪಿಯೇ! ಅವಳು ಮನಸಾರೆ ಯಾವುದಕ್ಕೂ ಒಪ್ಪುವವಳಲ್ಲ. ಒಂದು ವೇಳೆ ಇಚ್ಛಿಸಿ ಮುಂದೆ ಬರುವವಳೂ ಅಲ್ಲ. ತಾನು ಬ್ಯಾಂಕ್‌ ಮ್ಯಾನೇಜರ್‌ ತನಗೇನು ಕಡಿಮೆ ಇದೆ? ಆರೋಗ್ಯವಂತ, ಕೈ ತುಂಬಾ ಸಂಬಳ, ಮನೆ, ಕಾರು ಎಲ್ಲ ಇದೆ. ಆದರೆ ನೀತಾಳ ಮನವೊಲಿಸಲು ಹೇಗೆ ಸಾಧ್ಯ? ಸೂತ್ರ ಯಾವುದು? ಹೇಗೆ ಸಂಚು ಹೂಡಲಿ? ಹೀಗೆ ವಿಶ್ವ ಮನಸ್ಸನ್ನು ವಿಕೃತಗೊಳಿಸುತ್ತಾ ಹೋದ. ಏನಾದರೂ ಸರಿ, ಅವಳ ಮನನ್ನು ಒಲಿಸಿಕೊಂಡು ಅನುಭವಿಸಿದರಾಯಿತು ಎಂದು ಲೆಕ್ಕಾಚಾರ ಹಾಕಲಾರಂಭಿಸಿದ.

ಒಂದು ಸಂಜೆ ಎಲ್ಲರೂ ಬ್ಯಾಂಕ್‌ ಕೆಲಸ ಮುಗಿಸಿ ಮನೆಗೆ ಹೋಗುವ ಆತುರದಲ್ಲಿದ್ದರು. ಆದರೆ ವಿಶ್ವ ಯಾವುದೋ ನೆಪವೊಡ್ಡಿ ನೀತಾಳನ್ನು ತನ್ನ ಕೊಠಡಿಯಲ್ಲೇ ಉಳಿಸಿಕೊಂಡ. ಎಲ್ಲರೂ ಹೊರಟುಹೋದ ಮೇಲೆ, ಹೊರಗೆ ಸೆಕ್ಯೂರಿಟಿ ಮಾತ್ರ ಉಳಿದ. ಮ್ಯಾನೇಜರ್‌ ಕ್ಯಾಬಿನ್‌ ನಲ್ಲಿ ವಿಶ್ವ ಮತ್ತು ನೀತಾ ಇಬ್ಬರೇ!

ವಿಶ್ವ ಕುಳಿತಲ್ಲಿಂದ ನಿಧಾನವಾಗಿ ಎದ್ದು, ಕಪಾಟಿನ ಹತ್ತಿರ ಹೋಗಿ ಸುಮ್ಮನೆ ಅದರ ಬಾಗಿಲು ತೆರೆದ. ಯಾವುದೋ ಹೊಸ ಫೈಲ್ ಗಳನ್ನು ತೆಗೆದು, ನೀತಾಳನ್ನು ಹತ್ತಿರ ಕರೆದ. ಅವಳು ಧಾವಿಸಿ ಬಂದು ಹತ್ತಿರ ನಿಂತುಕೊಂಡಳು. ಹೊಸ ಫೈಲ್ ಗಳನ್ನು ಅವಳ ಕೈಗಿಡುತ್ತಾ, “ನನ್ನ ಟೇಬಲ್ ಮೇಲಿಟ್ಟು ಆಮೇಲೆ ಮನೆಗೆ ಹೋಗು,” ಎಂದ.

ಅವಳು ಇನ್ನೇನು ಅವನಿಗೆ ಬೆನ್ನು ಹಾಕಬೇಕೆನ್ನುವಷ್ಟರಲ್ಲಿ ಹಿಂದಿನಿಂದ ಅವಳನ್ನು ಬಲವಾಗಿ ತಬ್ಬಿಕೊಂಡ. ನೀತಾ ಅದೆಷ್ಟೇ ಜೋರಾಗಿ ಕಿರುಚಿದರೂ ಆ ಗಾಜಿನ ರೂಮಿನಿಂದ ಅವಳ ಸ್ವರ ಹೊರಗೆ ಕೇಳಿಸದೆ ಹೋಯಿತು. ಅವಳು ಎಷ್ಟೇ ಕಿರುಚಿದರೂ, ಕೊಸರಾಡಿದರೂ ಅವನ  ಹಿಡಿತ ಸಡಿಲವಾಗಲಿಲ್ಲ. ತಬ್ಬಿಕೊಂಡು ಚುಂಬಿಸಲು ಪ್ರಯತ್ನಿಸಿದ. ಬೇರೆ ದಾರಿ ಕಾಣದೆ ಅವಳು ಕೆಳಗೆ ಜಾರಿಕೊಂಡು ನೆಲದಲ್ಲಿ ಕುಳಿತುಬಿಟ್ಟಳು. ಆಗಬಾರದ್ದು ಆಗುವ, ನಡೆಯಬಾರದ್ದು ನಡೆಯುವ ಕೆಲವೇ ಸೆಕೆಂಡುಗಳ ಒಳಗೆ ಸೆಕ್ಯೂರಿಟಿ ನಡೆದು ಬರುತ್ತಿರುದನ್ನು ವಿಶ್ವ ಗಮನಿಸಿದ.

“ನೀತಾ, ಬೇಗ ಬೇಗ ಫೈಲುಗಳನ್ನು ಜೋಡಿಸು. ಸೆಕ್ಯೂರಿಟಿ ಬರುತ್ತಿದ್ದಾನೆ. ಯಾರ ಹತ್ತಿರವಾದ್ರೂ ಬಾಯಿಬಿಟ್ಟರೆ ಗೊತ್ತಲ್ಲ…. ನೀನು ಕೆಲಸ ಕಳಕೊಳ್ಳಬೇಕಾಗುತ್ತೆ ಹುಷಾರ್‌!” ಎಂದವನೇ ಏನೂ ನಡೆದೇ ಇಲ್ಲವೆಂಬಂತೆ ಸುಮ್ಮನೆ ಮೊಬೈಲ್ ನಲ್ಲಿ ಮಾತನಾಡುತ್ತಿರುವವನಂತೆ ನಟಿಸಿದ.

ನೀತಾ ಫೈಲುಗಳನ್ನು ಜೋಡಿಸಿ, ತುಂಬಿದ ಕಣ್ಣುಗಳಿಂದ, ದಿಗ್ಭ್ರಮೆಯಿಂದ ವಿಶ್ವನತ್ತ ನೋಡಿ, “ಸಾರಿ ಸಾರ್‌…. ನಾನು ಈ ಜನ್ಮದಲ್ಲಿ ನಿಮಗೆ ಸಿಗಲಾರೆ. ಇವತ್ತೇ ಕೊನೆ… ನಾಳೆಯಿಂದ ನಾನು ಈ ಕೆಲಸಕ್ಕೆ ಬರಲ್ಲ! ಯಾರಿಗೂ ಈ ವಿಷಯ ಹೇಳಲ್ಲ… ಧೈರ್ಯವಾಗಿರಿ. ಆದರೆ ಯಾವತ್ತೂ ಇಂತಹ ಅಪರಾಧದ ಕೆಲಸಕ್ಕೆ ಕೈಹಾಕಬೇಡಿ. ನೀವೇ ಊಹಿಸಿ, ಒಂದು ವೇಳೆ ಸೆಕ್ಯೂರಿಟಿ ಬಾರದಿರುತ್ತಿದ್ದರೆ ಏನಾಗುತ್ತಿತ್ತು? ನೀವು ನನಗೆ ಬಾಳು ಕೊಡುತ್ತಿದ್ದಿರಾ? ನನ್ನ ಮೂವರು ಮಕ್ಕಳಿಗೆ ಆಶ್ರಯ ಕೊಡುತ್ತಿದ್ದಿರಾ? ಹೇಳಿ ಸಾರ್‌,

“ನಿಮ್ಮ ಹೆಂಡತಿ ಮಕ್ಕಳನ್ನು ಏನು ಮಾಡುತ್ತಿದ್ದೀರಿ? ಸಾರ್‌ ನಾನು ನಿಮಗೆ ನಿನ್ನೇನೇ ಹೇಳಬೇಕೆಂದಿದ್ದೆ, ನನಗೆ ಮೂವರು ಮಕ್ಕಳಿದ್ದರೂ ನನ್ನನ್ನು ಎರಡನೇ ಮದುವೆಯಾಗಲು ಒಬ್ಬ ಪುಣ್ಯಾತ್ಮ ಒಪ್ಪಿಕೊಂಡಿದ್ದಾರೆ. ನನ್ನ ಮಕ್ಕಳಿಗೂ ಆಶ್ರಯ ಕೊಡಲು ಮುಂದೆ ಬಂದಿದ್ದಾರೆ. ಆದರೆ… ಆದರೆ…. ನೀವು…? ಬರ್ತೀನಿ ಸಾರ್‌ ಗುಡ್‌ ಬೈ…..”  ಎಂದು ಹೇಳುತ್ತಾ, ನೀತಾ ಬಿರುಗಾಳಿಯಂತೆ ಗಾಜಿನ ಬಾಗಿಲನ್ನು ಹೊರತಳ್ಳಿ ಹೊರಟುಹೋದಾಗ ವಿಶ್ವ ಸರ್ವಸ್ವವನ್ನೂ ಕಳೆದುಕೊಂಡವನಂತೆ ದಿಗ್ಭ್ರಾಂತನಾಗಿ ದಿಕ್ಕೇ ತೋಚದಂತೆ ಕುಳಿತೇ ಇದ್ದ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ