ದೀಪಾವಳಿಯ ದಿನದಂದು ಮಧ್ಯಾಹ್ನ ಹೇಮಾಳ ಮನೆಯತ್ತ ಲಗುಬಗೆಯಿಂದ ಹೆಜ್ಜೆ ಹಾಕುತ್ತಿದ್ದ ರವಿರಾಜ್ ಗೆ ಸ್ನೇಹಿತ ಪ್ರಸಾದ್ ಭೇಟಿಯಾದ. ಪರಿಚಯದ ನಗು ನಕ್ಕು ಕೈ ಕುಲುಕಿದ ಪ್ರಸಾದ್, ``ಗೆಳೆಯಾ ಹ್ಞೂಂ.... ಅಂತೀಯಾ, ಉಹ್ಞೂಂ ಅಂತಿಯಾ ಬೇಗ ತಿಳಿಸು ಮಹಾರಾಯ!'' ಎಂದ.
``ಹ್ಞೂಂ... ಎನ್ನಬೇಕಾ? ಉಹ್ಞೂಂ ಎನ್ನಬೇಕಾ? ಎಂದು ಇನ್ನೂ ಆಲೋಚಿಸುತ್ತಿದ್ದೇನೆ,'' ಎಂದ ರವಿರಾಜ್.
``ಹಾಗಲ್ಲ ರವಿ.... ಈಗಾಗ್ಲೆ ನಿನಗೆ 32 ವರ್ಷ ಆಗ್ತಾ ಬಂತು. ಮದುವೆ ಆದಮೇಲೆ ಮಕ್ಕಳು ಮರಿ ಅಂತೆಲ್ಲ ಆಗ್ತಿ. ನಿನಗೆ 60 ವರ್ಷ ತುಂಬುವಷ್ಟರಲ್ಲಿ ಮಕ್ಕಳೂ ಸೆಟಲ್ ಆದರೆ ಒಳ್ಳೆಯದಲ್ಲವೇ?''
``ನೀನು ಹೇಳುತ್ತಿರುವುದೇನೋ ಸರಿ ಕಣೋ, ಆದರೆ ನನಗೆ ಎರಡನೇ ಮದುವೆ ಮಾಡಿಕೊಳ್ಳಲು ಆಸಕ್ತಿಯೇ ಬರುತ್ತಿಲ್ಲ.''
``ಗೆಳೆಯ, ನನ್ನ ವಿಧವೆ ನಾದಿನಿ ತುಂಬಾ ಸುಂದರವಾಗಿದ್ದಾಳೆ, ಜಾಣೆ ಕೂಡ. ನನ್ನ ಮಾವನ ಮನೆಯವರೆಲ್ಲ ಇಂದು ನಮ್ಮ ಮನೆಗೆ ಬಂದಿದ್ದಾರೆ. ಅವಳೂ ಕೂಡ ಬಂದಿದ್ದಾಳೆ. ನೀನು ಒಂದ್ಸಲ ಅವರನ್ನು ಭೇಟಿಯಾದರೂ ಮಾಡು.''
``ಇನ್ನೊಂದ್ಸಲ ಭೇಟಿಯಾಗುವೆ ಬಿಡು. ಈಗ ಸ್ವಲ್ಪ ಅರ್ಜೆಂಟ್ ನಲ್ಲಿದ್ದೇನೆ, ಮತ್ತೆ ಸಿಗೋಣ,'' ಎಂದು ವಿದಾಯ ಹೇಳಲು ಕೈ ಮುಂದೆ ಚಾಚಿದ.
``ಇನ್ನೂ ಹೆಚ್ಚು ದಿನ ಕಾಯುವ ತಾಳ್ಮೆ ಅವರಿಗಿಲ್ಲ ಕಣೋ.''
``ಹಾಗಾದರೆ ಬೇರೆ ಸಂಬಂಧಗಳನ್ನು ನೋಡಲು ಹೇಳು,'' ಎಂದ ರವಿರಾಜ್ ಅವನ ಕೈ ಕುಲುಕಿ ಅಲ್ಲಿಂದ ಹೊರಟೇಬಿಟ್ಟ.
ಹೇಮಾಳ ಮನೆ ತಲುಪುತ್ತಿದ್ದಂತೆಯೇ ಅವಳ ಗಂಡ ಸಂದೀಪನ ಕೈಯಲ್ಲಿ 2 ಸಾವಿರ ರೂಪಾಯಿಗಳನ್ನಿಟ್ಟು, ``ರಾಹುಲ್ ಮತ್ತು ಮೇಘಾರಿಗೆ ಪಟಾಕಿ ಕೊಡಿಸಿ ಹೋಗಿ,'' ಎಂದ.
``ಇಷ್ಟೊಂದು ಹಣಕ್ಕೆ ಪಟಾಕಿಯೇ....?''
``ಬೇಗ ಹೊರಡಿ, ಮಕ್ಕಳು ಕಾಯ್ತಾ ಇವೆ,'' ಎಂದ ರವಿರಾಜ್ ಅವನಿಗೆ ಹೆಚ್ಚು ಮಾತನಾಡುವ ಅವಕಾಶ ಕೊಡಲಿಲ್ಲ.
``ನೀವು ಬನ್ನಿ, ಹೋಗಿ ಬರೋಣ.''
``ಬೇಡ, ನಾನು ಬೆಳಗ್ಗೆಯಿಂದ ಮನೆ ಕ್ಲೀನಿಂಗ್ ಮಾಡಿ ಸುಸ್ತಾಗಿದ್ದೇನೆ. ಹೇಮಾ ಕೈಯಲ್ಲಿ ಒಂದು ಕಪ್ ಬಿಸಿ ಬಿಸಿ ಕಾಫಿ ಕುಡಿದು ಸುಧಾರಿಸಿಕೊಳ್ಳುವೆ.''
``ಸರಿ ಹಾಗಾದ್ರೆ, ನಾವು ಹೊರಡುತ್ತೇವೆ,'' ಎಂದ ಸಂದೀಪನ ಧ್ವನಿಯಲ್ಲಿ ಋಣಭಾರದ ಛಾಯೆ ಸ್ಪಷ್ಟ ಗೋಚರಿಸಿತ್ತು. ಮಕ್ಕಳಿಬ್ಬರನ್ನೂ ಕರೆದುಕೊಂಡು ಹೊರಟುನಿಂತ.
ಅವರು ಮೂವರು ಹೊರಟುಹೋದ ನಂತರ ಭದ್ರವಾಗಿ ಬಾಗಿಲು ಮುಚ್ಚಿದ ಹೇಮಾ ತಿರುಗಿದಾಗ, ರವಿರಾಜ್ ಬಾಹುಗಳನ್ನು ಅಗಲಿಸಿದ. ಹೇಮಾ ಇನ್ನಿಲ್ಲದ ಪ್ರೀತಿಯಿಂದ ಮಾದಕ ನಗೆ ಬೀರುತ್ತ ಅವನ ಎದೆಯ ಮೇಲೆ ಒರಗಿಕೊಂಡಳು.
``ಇನ್ನೇನು ದೀಪಾವಳಿಯ ಮಹದಾನಂದವನ್ನು ಅನುಭವಿಸಲು ಶುರು ಮಾಡೋಣವೇ?'' ಎಂದು ರವಿರಾಜ್ ಅವಳ ಕಿವಿಯಲ್ಲಿ ಪಿಸುಗುಟ್ಟಿದ.
``ಇಂತಹ ಮಹದಾನಂದ ಅನುಭವಿಸಲು ನಾನು ಯಾವಾಗಲೂ ಸಿದ್ಧಳಾಗಿರುತ್ತೇನೆ. ಅದ್ಸರಿ, ಸಾಹೇಬರು ಸುಸ್ತಾಗುವಷ್ಟು ಕೆಲಸ ಏನು ಮಾಡಿದಿರೊ ಮನೆಯಲ್ಲಿ?'' ಎಂದು ಬಿನ್ನಾಣದಿಂದ ಕೇಳಿದಳು.
``ಏನೇನೂ ಮಾಡಿಲ್ಲ ಡಾರ್ಲಿಂಗ್. ಚೆನ್ನಾಗಿ ತಿಂದುಂಡು ನಿದ್ದೆ ಮಾಡಿ, ಇವತ್ತಿನ ಮಹಾನಂದವನ್ನು ಸಂಪೂರ್ಣವಾಗಿ ಅನುಭವಿಸಲು ಎಲ್ಲಾ ಎನರ್ಜಿಯನ್ನು ಕ್ರೋಢೀಕರಿಸಿಕೊಂಡು ಬಂದಿದ್ದೇನೆ.''
``ಪಟಾಕಿಗೇ ಅಂತ ಅಷ್ಟೊಂದು ಹಣ ಕೊಟ್ರಲ್ಲ, ಅಷ್ಟೊಂದು ಏಕೆ ಖರ್ಚು ಮಾಡುವುದು?''
``ರಾಹುಲ್ ಮತ್ತು ಮೇಘಾ ಸಂತೋಷವಾಗಿರುವುದನ್ನು ಕಂಡರೆ ನನಗೆ ತುಂಬಾ ಇಷ್ಟ. ಅದಕ್ಕೇ ಕೊಟ್ಟೆ.''