ಬ್ಯಾಂಕ್ ಮ್ಯಾನೇಜರ್ ವಿಶ್ವನನ್ನು ಕಂಡರೆ ನೀತಾಗೆ ಅವ್ಯಕ್ತ ಭಯ. ನೀತಾ ಅಟೆಂಡರ್ ಕೆಲಸಕ್ಕೆ ಸೇರಿ ಆರು ತಿಂಗಳಾದರೂ ಇನ್ನೂ ಭಯದಿಂದ ಆಕೆ ಮುಕ್ತವಾಗಿರಲಿಲ್ಲ. ಬ್ಯಾಂಕಿನಲ್ಲಿನ ಎಲ್ಲಾ ಸ್ತ್ರೀಯರ ಸೌಂದರ್ಯದಲ್ಲಿ ನೀತಾಗೇ ಮೊದಲನೇ ಸ್ಥಾನ. ತುಂಬಿದೆದೆ, ನೀಳವಾದ ಜಡೆ ನಿತಂಬದ ತನಕವಿತ್ತು. ಕೆಂಪು ವರ್ಣದಲ್ಲಿ ಅಪ್ರತಿಮ ಸುಂದರಿ, ತಿದ್ದಿ ತೀಡಿದ ಗೊಂಬೆ. ಸಾದಾ ಸೀರೆಯಲ್ಲೂ ನೀತಾಳ ಸೌಂದರ್ಯ ಗಮನಾರ್ಹವೇ!
ಒಂದೊಂದು ದಿನ, ಪಿಂಕ್ ಸೀರೆಯಲ್ಲಿ ಬ್ಯಾಂಕಿಗೆ ಬಂದಾಗ ಮ್ಯಾನೇಜರ್ ಎಲೆಯಿಕ್ಕದೆ ಆಕೆಯನ್ನು ಗಮನಿಸುತ್ತಲೇ ಇರುವುದು ಇರುಸುಮುರುಸು ಉಂಟು ಮಾಡಿರುವುದು ಸುಳ್ಳಲ್ಲ. `ವಿಶ್ವ ನನ್ನನ್ನು ನುಂಗುವಂತೆ ನೋಡುತ್ತಿದ್ದಾನೆ' ಎಂಬ ಸತ್ಯ ಅರಿವಾದ ದಿನದಿಂದಲೂ ನೀತಾಳಿಗೆ ಯಾಕೋ ಬ್ಯಾಂಕ್ ಆವರಣದೊಳಗೆ ಕಾಲಿಟ್ಟ ತಕ್ಷಣ ಎದೆ ಹೊಡೆದುಕೊಳ್ಳಲಾರಂಭಿಸುತ್ತಿತ್ತು.
ನೀತಾಳಿಗೆ ಅಂದು ಅರ್ಧ ದಿನ ರಜೆ ಬೇಕಾಗಿತ್ತು. ಹಾಗಾಗಿ ವಿರಾಮದ ವೇಳೆಯಲ್ಲಿ, `ಮೇ ಐ ಕಮಿನ್ ಸಾರ್.....' ಎಂದು ಗಾಜಿನ ಕಿಟಕಿಯನ್ನು ಹೊಂದಿದ್ದ ಬಾಗಿಲನ್ನು ದೂಡಿದಳು.
``ಎಸ್ ಪ್ಲೀಸ್... ಕಮ್ ಇನ್,'' ಎಂದ ವಿಶ್ವ ನೀತಾಳ ತುಂಬಿದ ಎದೆಯನ್ನೇ ಅವಲೋಕಿಸಿದ. ಏರಿಳಿಯುತ್ತಿದ್ದ ಅವಳ ಎದೆಯನ್ನು ನೋಡಿ ವಿಶ್ವನ ಮುಖದಲ್ಲಿ ಹರ್ಷದ ಗೆರೆ ಮಿಂಚಿತು.
``ಎಕ್ಸ್ ಕ್ಯೂಸ್ ಮಿ....'' ಅಂದು ನೀತಾ ಒಳಬಂದಳು.
``ಏನ್ಸಮಾಚಾರಾ, ಇನ್ನೂ ಊಟ ಮಾಡಿಲ್ವಾ?'' ವಿಶ್ವ ತೆಳು ನಗೆ ಹರಿಸಿದ.
``ಇಲ್ಲ ಸರ್, ಸ್ವಲ್ಪ ವೈಯಕ್ತಿಕ ಕೆಲಸ ಇದೆ. ಅರ್ಧ ದಿನ ರಜೆ ಹಾಕ್ತೀನಿ, ತಮ್ಮ ಪರ್ಮಿಷನ್ ಸಿಕ್ಕಿದರೆ.....'' ಎಂದಂದು ರಜಾ ಚೀಟಿಯನ್ನು ವಿಶ್ವನ ಟೇಬಲ್ ಮೇಲಿಟ್ಟು, ತನ್ನ ಉದ್ದನೆಯ ಜಡೆಯನ್ನು ಕೈಯಲ್ಲಿ ತೆಗೆದುಕೊಂದು ತಲೆ ತಗ್ಗಿಸಿ ನಿಂತಳು. ವಿಶ್ವ ರಜಾ ಚೀಟಿಯನ್ನು ಗಮನಿಸುತ್ತಾ, ``ಬೆಳಗ್ಗೇನೆ ಯಾಕೆ ಹೇಳಲಿಲ್ಲ....? ಬಿಡಿ ಪರವಾಗಿಲ್ಲ, ವೈಯಕ್ತಿಕ ಕೆಲಸ ಅಂತಿದ್ದೀರಿ ಆಲ್ ರೈಟ್.... ಅಂದಹಾಗೆ ನಿಮ್ಮನ್ನು ನೋಡಿದ್ರೆ ಮೂರು ಮಕ್ಕಳ ತಾಯಿ ಅಂತ ಕಣ್ಣಿದ್ದರು ಖಂಡಿತಾ ಹೇಳಲ್ಲ. ನಿಮ್ಮ ಕಣ್ಣನ್ನು ನೋಡುತ್ತಿದ್ದರೆ, ಆ ಉದ್ದನೆಯ ಜಡೆ ಹೊಯ್ದಾಡುತ್ತಿದ್ದರೆ, ನಿಮ್ಮ ಆ.... ಬೇಡ ಬಿಡಿ ಒಟ್ಟಿನಲ್ಲಿ ನೀವು ಚಂದನದ ಗೊಂಬೆ!'' ಎಂದುಬಿಟ್ಟ ವಿಶ್ವ.
ನೀತಾಳಿಗೆ ಮೈಯೆಲ್ಲ ಕೆಂಪಿರುವೆಗಳು ಕಡಿದಂತಾಗಿ, ``ಸರ್, ಹಾಗಾದರೆ ನಾನು ಬರಲೇ?'' ಎಂದು ಹೊರಟಳು.
``ನೀತಾ, ಒನ್ ಮಿನಿಟ್. ಹೊರಗಡೆ ಸುಧಾಕರನ ಟೇಬಲ್ ಮೇಲೆ ಕೆಂಪು ಬಣ್ಣದ ಒಂದು ಫೈಲ್ ಇದೆ. ತಂದುಕೊಡಿ,'' ಎಂದು ಹೇಳಿ ಕೈಗೆ ಮೊಬೈಲ್ ತೆಗೆದುಕೊಂಡು ನಂಬರ್ ಗಳನ್ನು ಅದುಮತೊಡಗಿದ.
ವಿಶ್ವನ ಕ್ಯಾಬಿನ್ ನಿಂದ ಹೊರಬಂದು, ಸುಧಾಕರನ ಟೇಬಲ್ ಮೇಲಿದ್ದ ಕೆಂಪು ಬಣ್ಣದ ಫೈಲನ್ನು ತೆಗೆದುಕೊಳ್ಳಹೋದಾಗ ಸುಧಾಕರ್, ``ನೀತಾರವರೇ, ನಿಮ್ಮ ಉದ್ದ ಜಡೆಯನ್ನು ನೀವು ಹೇಗೆ ಮೇಂಟೇನ್ ಮಾಡ್ತೀರೋ....?'' ಎಂದು ಕೆಣಕಿದಾಗ ನೀತಾಳಿಗೆ ತನ್ನ ಸೌಂದರ್ಯವೇ ತನಗೆ ಶತ್ರುವಾಗುತ್ತಿದೆ ಎಂದೆನಿಸದೆ ಇರಲಿಲ್ಲ. ಮತ್ತೆ ವಿಶ್ವನ ಕ್ಯಾಬಿನ್ ಗೆ ಬಂದು, ಫೈಲನ್ನು ಟೇಬಲ್ ಮೇಲಿಟ್ಟು, ``ಬರ್ತೀನಿ ಬಾಸ್,'' ಎಂದು ತುಸು ನಕ್ಕಾಗ, ವಿಶ್ವನ ಮುಖ ಪ್ರಫುಲ್ಲವಾಯಿತು.