ಎಂದಾದರೊಮ್ಮೆ ಎಫ್‌ ಬಿ ಯಲ್ಲಿ ಅವರ ಸಂದೇಶ ವಿನಿಮಯ ಆಗುತ್ತಿರುತ್ತಿತ್ತು. ಇಂದು ಮಾಲಿನಿ ಮೆಸೆಂಜರ್‌ ನಲ್ಲಿ ಕಾಲ್ ‌ರಿಂಗ್ ಆಯಿತು.

“ಗುಡ್‌ ಮಾರ್ನಿಂಗ್‌” ಅದೇ ಮೊದಲಿನ ಧ್ವನಿ, ಮಾತುಕತೆಯಲ್ಲಿ ಅದೇ ತುಂಟತನ ಮನಸೋಕ್ತ ನಗು, “ಹೇಗಿದ್ದೀಯಾ ಡಿಯರ್‌, ಎಲ್ಲ ಸತ್ಯ ತಾನೇ? ನೀನು ನನ್ನ ಮೊದಲಿನ ಮಾಧವನೇ ಆಗಿರುವೆ.”

ಮಾಧವ ತನ್ನ ಪರಿಚಿತ ಧಾಟಿಯಲ್ಲಿ, “ಹೌದು ಬಾಸ್‌, ಎಲ್ಲ ಸರಿಯಾಗಿದೆ. ನೀವು ಬಿಟ್ಟು ಹೋಗುವಾಗ ಹೇಗಿದ್ದೆನೊ ಈಗಲೂ ಹಾಗೆಯೇ ಇದ್ದೇನೆ. ಕಾಲೇಜಿನ ದಿನಗಳ ಬಳಿಕ ನಿನ್ನೊಂದಿಗೆ ಈ ರೀತಿಯ ಮಾತುಕತೆ ನಡೆಯುತ್ತಿದೆ. ಅವು ಎಂತಹ ಸುವರ್ಣ ದಿನಗಳು! ಆಗ ನಮ್ಮಿಬ್ಬರ ನಡುವೆ ದಿನ ಮಾತುಕತೆ ಮುಂದುವರಿಯುತ್ತಿತ್ತು.”

ಮಾಲಿನಿ ಮಾತನ್ನು ಮಧ್ಯದಲ್ಲಿಯೇ ತುಂಡರಿಸುತ್ತಾ, “ನೀವು ಇಷ್ಟಪಟ್ಟರೆ ಇಂದು ನಾವು ಹೋಟೆಲ್`ಚಂದ್ರಕಲಾ’ದಲ್ಲಿ ಭೇಟಿಯಾಗೋಣ. ಸಂಜೆ 4 ಗಂಟೆಗೆ ನಾನು ನಿಮಗಾಗಿ ಕಾಯ್ತಾ ಇರ್ತೀನಿ,” ಎಂದು ಹೇಳಿದಳು.

ಸ್ನೇಹಾ ಮೊದಲಿನಂತೆ ಈಗಲೂ ಸಮಯ ಪಾಲನೆಗೆ ಬದ್ಧಳಾಗಿದ್ದಳು. ಅವಳು 10 ನಿಮಿಷ ಮುಂಚೆಯೇ ಅಲ್ಲಿಗೆ ತಲುಪಿದಳು.

ಸ್ವಲ್ಪ ಹೊತ್ತಿನಲ್ಲಿಯೇ ಮಾಧವ ಕೂಡ ಅಲ್ಲಿಗೆ ಬಂದ. ಅವನು ಕೂಡ ಮೊದಲಿನ ಹಾಗೆಯೇ ಕೈಯಲ್ಲಿ ಹೂಗುಚ್ಛ ಹಿಡಿದು ಮಾಲಿನಿ ಎದುರು ನಿಂತಿದ್ದ.

ಮಾಲಿನಿ ಹಳದಿ ಬಣ್ಣದ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಳು. ಮುಕ್ತ ಕೂದಲು ಸ್ಟ್ರೇಟ್‌ ಮಾಡಲ್ಪಟ್ಟು ಅವಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಕೊಟ್ಟಿದ್ದವು.

ಹಣೆಯ ಮೇಲೆ ಪುಟ್ಟ ಕೆಂಪು ಬಣ್ಣದ ಬೊಟ್ಟು, ಕಣ್ಣಿಗೆ ಕಾಡಿಗೆ ಲೇಪಿಸಿಕೊಂಡಿದ್ದಳು. ಮಾಧವ ಅವಳನ್ನು ನೋಡುತ್ತಲೇ ಉಳಿದುಬಿಟ್ಟ. ಅವಳಲ್ಲಿ ಒಂದಿಷ್ಟೂ ಬದಲಾವಣೆಯಾಗಿರಲಿಲ್ಲ. ಅವಳ ತುಟಿಗಳ ಮೇಲೆ ಮೊದಲಿಗಿಂತ ಸ್ವಲ್ಪ ಹೆಚ್ಚೇ ಲಿಪ್‌ ಸ್ಟಿಕ್ ಲೇಪಿಸಿಲ್ಪಟ್ಟಿತ್ತು. ಹೀಗಾಗಿ ಅವಳು ಬಹಳ ಸುಂದರವಾಗಿ ಕಂಡುಬರುತ್ತಿದ್ದಳು.

“ಏನ್ರೀ ಮಾಧವ್, ನನ್ನನ್ನು ಹೀಗೇಕೆ ನೋಡ್ತಿರುವಿರಿ?” ಮಾಲಿನಿ ಮಾಧವನ ಕೈ ಹಿಡಿದುಕೊಂಡು ಅವನನ್ನು ಹೆಚ್ಚುಕಡಿಮೆ ಎಳೆದುಕೊಂಡು ಹೋಗುತ್ತಾ ಹೇಳಿದಳು.

ಆದರೆ ಮಾಧವ ಅವಳ ಈ ತೆರನಾದ ಸ್ಪರ್ಶದಿಂದಾಗಿ ಬೆವರಿ ನೀರಾದ. ಕ್ಷಣ ಮಟ್ಟಿಗೆ ಹಾವು ಕಚ್ಚಿದಂತೆ ಸ್ತಬ್ಧನಾದ.

ಅವಳಿಗೆ ಈಗಲೂ ನನ್ನ ಮೇಲೆ ಅದೇ ಪ್ರೀತಿ ಇದೆಯಾ ಎಂದು ಅವನು ಯೋಚಿಸತೊಡಗಿದ. `ಅವಳ ಸ್ಪರ್ಶ ಈಗಲೂ ನನ್ನನ್ನು ಹುಚ್ಚನನ್ನಾಗಿಸುತ್ತಿದೆ. ಅದೇ ಮಾದಕತೆ ಅವಳ ಕಣ್ಣುಗಳಲ್ಲಿ ಇನ್ನೂ ನೆಲೆ ನಿಂತಿದೆ. ಅವಳು ಹೊರಟು ಹೋದ ಬಳಿಕ ಅವಳ ತುಂಟಾಟ ನನಗೆ ಬೇರಾರಲ್ಲೂ ಕಂಡುಬರಲಿಲ್ಲ. ಅವಳ ಸ್ಪರ್ಶದಿಂದ ನಾನಿಂದು ಮತ್ತೆ ಉಲ್ಲಸಿತನಾಗಿರುವೆ. ಜೀವನ ಸುಂದರ ಹಾಗೂ ವರ್ಣಮಯ ಎನಿಸುತ್ತಿದೆ.’

ಅವನು ಮನಸಾರೆ ಪ್ರೇಮದ ಆಳವನ್ನು ಸ್ಪರ್ಶಿಸುತ್ತಿದ್ದ. ಅದನ್ನು ಅವನೆಂದೂ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ.

ಮಾಧವ ಮಾಲಿನಿಯನ್ನು ಭೇಟಿಯಾಗಿ ಬಂದಾಗಿನಿಂದ ಅವನ ಸ್ಥಿತಿ ದಯನೀಯವಾಗಿತ್ತು. ಅವನ ತಳಮಳ ಕಡಿಮೆಯಾಗುತ್ತಿರಲಿಲ್ಲ. ಅವನ ಕಣ್ಣುಗಳ ಎದುರು ಸುಂದರ ಮುಖ ಗೋಚರಿಸುತ್ತಿತ್ತು. ಅವನಿಗೆ ಯಾವುದೇ ಕೆಲಸದಲ್ಲಿ ಮನಸ್ಸು ನಿಲ್ಲುತ್ತಿರಲಿಲ್ಲ.
ಅತ್ತ ಮಾಲಿನಿ ಕೂಡಾ ಹಾಸಿಗೆಯ ಮೇಲೆ ಬಿದ್ದುಕೊಂಡು ವಿಚಾರಗಳಲ್ಲಿ ಮಗ್ನಳಾಗಿದ್ದಳು ಮತ್ತು ಮನಸ್ಸಿನಲ್ಲಿಯೇ ಮುಗುಳ್ನಗುತ್ತಿದ್ದಳು.

ಇಬ್ಬರಲ್ಲಿ ಮೊದಲಿನ ಪ್ರೀತಿ ಮರುಕಳಿಸಿದಾಗ, ಎರಡೂ ಕಡೆ ಮೊದಲಿಗಿಂತ ಹೆಚ್ಚು ಸಂಚಲನ ಉಂಟಾಗಿತ್ತು. ಅವರಿಬ್ಬರಲ್ಲಿ ನಿರಂತರ ಮಾತುಕತೆ ನಡೆಯುತ್ತಿತ್ತು.

ಇಬ್ಬರ ಪ್ರೀತಿ ಈಗ ಪರಸ್ಪರರಿಗೆ ಅತ್ಯಗತ್ಯವಾಗಿತ್ತು. ದಿನ ಯಾವುದಾದರೂ ನೆಪದಲ್ಲಿ ಭೇಟಿಯಾಗುವುದು. ಪರಸ್ಪರರಿಗೆ ಸಮರ್ಪಿತರಾಗುತ್ತಿದ್ದರು. ಎಲ್ಲಿಯವರೆಗೆ ಇಬ್ಬರೂ ಭೇಟಿಯಾಗುತ್ತಿರಲಿಲ್ಲವೋ, ಅಲ್ಲಿಯವರೆಗೆ ಅವರಿಗೆ ತಮ್ಮ ಜೀವನ ಅಪೂರ್ಣ ಎನಿಸುತ್ತಿತ್ತು.

ಅದೊಂದು ದಿನ ಮಾಲಿನಿ ಮಾಧವನನ್ನು ಭೇಟಿಯಾಗಲು ಬಂದಾಗ, ಅವಳು ಮಾಧವನೆದುರು ಮದುವೆ ಪ್ರಸ್ತಾಪವಿಟ್ಟಳು.

ಆದರೆ ಅವಳ ಬಾಯಿಂದ ಮದುವೆ ಪ್ರಸ್ತಾಪದ ವಿಷಯ ಕೇಳ್ತಿದ್ದಂತೆ ಅವನು ಮೌನವಾಗಿಬಿಟ್ಟ.

“ಅರೆ ಏನಾಯ್ತು? ನಾನು ನಿನಗೆ ತಪ್ಪೇನೂ ಕೇಳಲಿಲ್ಲ ತಾನೇ?” ಮಾಲಿನಿ ಮಾಧವನೆದುರು ಚಿಟಿಕೆ ಹೊಡೆಯುತ್ತಾ ಹೇಳಿದಳು.

“ಇಲ್ಲ…. ಇಲ್ಲ….” ತನ್ನೊಳಗೆ ಅದುಮಿಟ್ಟ ಧ್ವನಿಯನ್ನು ಹೊರಹೊಮ್ಮಿಸುತ್ತ ಹೇಳಿದ.

“ಹಾಗಾದರೆ ಮತ್ತೇನು…..?” ಮಾಲಿನಿ ಕೇಳಿದಳು.

“ಅಂದಹಾಗೆ, ನನ್ನ ಮದುವೆ ಆಗಿಬಿಟ್ಟಿತು. ಈ ವಿಷಯದ ಬಗ್ಗೆ ನಾನು ನಿನಗೆ ಹೇಳಲು ಆಗಿರಲಿಲ್ಲ. ಅದಕ್ಕೂ ಮೊದಲು ನೀನು ನನ್ನ ಜೀವನದಿಂದ ದೂರ ಸರಿದಿದ್ದೆವು. ನನ್ನ ಮನೆಯವರು ನನ್ನ ಮದುವೆ ಮಾಡಿ ಮುಗಿಸಿದ್ದರು. ಆದರೆ ನಾನು ನಿನ್ನನ್ನು ಮರೆಯಲು ಆಗಿರಲಿಲ್ಲ. ನನ್ನ ಹೆಂಡತಿಯನ್ನೂ ಸ್ವೀಕರಿಸಲು ಆಗಲಿಲ್ಲ. ಈ ಕಾರಣದಿಂದ ಅವಳು ಖನ್ನತೆಗೆ ತುತ್ತಾದಳು. ಪ್ರತಿಯೊಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನ ಜಗಳವಾಡುತ್ತಿದ್ದಳು. ಒಂದು ದಿನ ನಾನು ಅವಳಿಗೆ ಹೇಳದೆ ಕೇಳದೆ, ಕೆಲಸದ ನಿಮಿತ್ತ ಎಲ್ಲೋ ಹೊರಟುಹೋದೆವು. ನಾನು ಉದ್ದೇಶಪೂರ್ವತವಾಗಿ ಅವಳನ್ನು ಬಿಟ್ಟುಹೋದೆ ಎಂದು ಅವಳು ಭಾವಿಸಿದಳು.

“ಅವಳು ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಅವಳಿಗೆ ಬ್ರೇನ್‌ ಹ್ಯಾಮರೇಜ್‌ ಆಯ್ತು ಮತ್ತು ಈ ಜಗತ್ತನ್ನೇ ಬಿಟ್ಟು ಹೊರಟುಹೋದಳು. ನಾನು ಈಗಲೂ ಅವಳ ಸಾವಿನ ತಪ್ಪಿತಸ್ಥನಾಗಿರುವೆ. ಮಾಲಿನಿ, ಆಗಿನಿಂದ ನಾನು ಊರು ಮನೆ ತೊರೆದು ಇಲ್ಲಿ ಬೆಂಗಳೂರಿನಲ್ಲಿಯೇ ವಾಸ ಮಾಡುತ್ತಿರುವೆ. ಎಂದಾದರೊಮ್ಮೆ ಊರಿಗೆ ಹೋಗಿ ನಮ್ಮ ಮನೆಯವರನ್ನು ಭೇಟಿ ಆಗಿ ಬರುತ್ತೇನೆ. ಆದರೆ ನೀನು ಭೇಟಿಯಾದಾಗಿನಿಂದ ಪುನಃ ನಿನ್ನ ಅಮಲು ನನ್ನಲ್ಲಿ ಮತ್ತೆ ಜೀವನೋತ್ಸಾಹ ಮೂಡಿಸಿದೆ. ಆದರೆ ಈಗ ಮದುವೆ ಮಾಡಿಕೊಳ್ಳಲಾರೆ. ಮೊದಲು ನಾನು ಮದುವೆಗೆ ಸಿದ್ಧನಾಗಿದ್ದೆ. ಆಗ ನೀನು ತಯಾರಿರಲಿಲ್ಲ.”

“ಸಾಕು….. ಸಾಕು…. ನಿಮ್ಮ ಮಾತು ಕೇಳಿಸಿಕೊಂಡೆ, ಅರ್ಥ ಮಾಡಿಕೊಂಡೆ. ಆದರೆ ನಾನೀಗ ಇದ್ದರೆ ನಿಮ್ಮ ಜೊತೆಗೇ ಇರಬೇಕು ಅಂದುಕೊಂಡಿರುವೆ,” ಮಾಲಿನಿ ದೀರ್ಘ ನಿಟ್ಟುಸಿರು ಬಿಡುತ್ತಾ ತನ್ನ ಅದೇ ತುಂಟತನದಿಂದ ಹೇಳಿದಳು.

“ಅದ್ಹೇಗೆ? ನಿನ್ನ ಮದುವೆ? ಆಗಿಲ್ಲವೇನು?” ಮಾಧವ ಪುನಃ ತನ್ನ ಚಿರಪರಿಚಿತ ಶೈಲಿಯಲ್ಲಿ ಆಶ್ಚರ್ಯಚಕಿತನಾಗಿ ಕೇಳಿದ.

“ಇಲ್ಲ. ನಾನು ಮದುವೆ ಆಗಲಿಲ್ಲ. ನಿಮ್ಮನ್ನು ಬಿಟ್ಟುಬಂದು ನಾನು ಖುಷಿಯಾಗಿದ್ದೇನೆ ಎಂದು ನಿಮಗನ್ನಿಸಿತ್ತೇನೊ. ಆದರೆ ಹಾಗಿರಲಿಲ್ಲ. ನಾನು ಬಹಳಷ್ಟು ವಿಶತೆಯಲ್ಲಿದ್ದೆ. ಮುಂದೆ ಏನಾದರೂ ಮಾಡ ಬಯಸಿದ್ದೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಹಾಗಾಗಿ ಮುಂದೆ ಓದಲಾಗಲಿಲ್ಲ.

ಆದರೂ ಬಹಳಷ್ಟು ಕಷ್ಟಪಟ್ಟು ನನ್ನನ್ನು ನಾನು ಒಳ್ಳೆಯ ಸ್ಥಿತಿ ಪಡೆದುಕೊಂಡೆ. ಈಗ ನನಗೆ ಯಾರ ಮುಂದೆಯೂ ಕೈಯೊಡ್ಡುವ ಪರಿಸ್ಥಿತಿ ಇಲ್ಲ. ಆದರೆ ನನಗೆ ಇದಕ್ಕಾಗಿ ಬಹುದೊಡ್ಡ ಬೆಲೆ ತೆರಬೇಕಾಗಿ ಬಂತು.

“ಅಪ್ಪನಂತೂ ಇರಲಿಲ್ಲ. ಡಿಗ್ರಿಯ ಬಳಿಕ ಅಮ್ಮ ಅಣ್ಣಂದಿರ ಮನೆಯಲ್ಲಿ ಇರತೊಡಗಿದರು. ನನ್ನ ಓದು ಇತರ ಜವಾಬ್ದಾರಿಗಳು ಅವರ ತಲೆಯ ಮೇಲಿತ್ತು. ನನ್ನ ಮಾಮ ಬಹಳ ಶ್ರೀಮಂತರು. ಅವರು ಓದಿಗಾಗಿ ನನಗೆ ಹಣವನ್ನೇನೊ ಕೊಟ್ಟರು. ಆದರೆ ತಮ್ಮ ಮದ್ಯದ ಅಡ್ಡಾಗೆ ಬರುವ ಕುಡುಕರ ಎದುರು ನನ್ನನ್ನು ಶೋಪೀಸ್‌ ಹಾಗೆ ಪ್ರದರ್ಶಿಸುತ್ತಿದ್ದರು. ಅವರ ವಹಿವಾಟು ಹೆಚ್ಚಲೆಂದು ನನ್ನನ್ನು ನರ್ತಕಿಯಂತೆ ಬಳಸಿಕೊಳ್ಳುತ್ತಿದ್ದರು. ಇದೇ ಕಾರಣದಿಂದ ಅವರು ಮದುವೆ ಆಗದೇ ಇರುವ ನನ್ನ ನಿರ್ಧಾರಕ್ಕೆ ಯಾವುದೇ ಆಕ್ಷೇಪ ಎತ್ತುತ್ತಿರಲಿಲ್ಲ. ಈಗಂತೂ ನಾನು ನನ್ನ ಕಾಲ ಮೇಲೆ ನಿಂತಿದ್ದೇನೆ. ಎಲ್ಲ ಜಂಜಾಟಗಳಿಂದ ದೂರ. ಸಾಫ್ಟ್ ವೇರ್‌ ಎಂಜಿನಿಯರ್‌ಆಗಿ ಕೆಲಸ ಮಾಡುತ್ತಿರುವೆ. ಅಮ್ಮ ಮನೆ ಸಂಭಾಳಿಸುತ್ತಾರೆ. ನೀವು ಅಪೇಕ್ಷೆಪಟ್ಟರೆ ನಾವು ಮೂವರು ಒಂದೇ ಮನೆಯಲ್ಲಿ ಇರಬಹುದು.”

“ಇಲ್ಲ, ನಾನು ಮತ್ತೆ ಮದುವೆ ಆಗುವುದಿಲ್ಲ ಎಂದು ಮೊದಲೇ ಹೇಳಿದ್ದೇನೆ. ಆದರೆ ನನ್ನ ಮನಸ್ಸಿನಲ್ಲಿ ನಿನ್ನ ಬಗ್ಗೆ ಗೌರವ, ಪ್ರೀತಿ ಇನ್ನೂ ಹೆಚ್ಚಾಗಿದೆ.”

“ಓ.ಕೆ. ಮದುವೆ ಮಾಡಿಕೊಳ್ಳಬೇಡಿ. ನಿಮಗೆ ಮಾಡಿಕೊಳ್ಳಬೇಕೆನಿಸಿದಾಗ ಮಾಡಿಕೊಳ್ಳುವಿರಂತೆ. ಏಕೆಂದರೆ ನಾನೀಗ ನಿಮ್ಮನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇಡೀ ಜೀವನ ನಿಮ್ಮೊಂದಿಗೆ ಕಳೆಯಲು ಇಚ್ಛಿಸುತ್ತೇನೆ,” ಮಾಲಿನಿ ಸ್ವಲ್ಪ ಮೆತ್ತಗಿನ ಧ್ವನಿಯಲ್ಲಿ ಹೇಳಿದಳು.

“ಹೌದು ಮಾಲಿನಿ. ನನ್ನ ಹೃದಯಪೂರ್ವಕ ಇಚ್ಛೆ ಕೂಡ ನಾವಿಬ್ಬರೂ ಜೀವನವಿಡೀ ಒಂದೇ ಮನೆಯಲ್ಲಿ ಇರಬೇಕೆನ್ನುವುದಾಗಿದೆ,” ಮಾಧವ ಮುಗುಳ್ನಗುತ್ತಾ ಹೇಳಿದ, “ಪ್ರೀತಿಯ ರಿಲೇಶನ್‌ ಶಿಪ್‌ ನಲ್ಲಿ ಮದುವೆ ಮಾಡಿಕೊಂಡರೆ ಡಂಗುರ ಹೊಡೆಯಬೇಕಾಗುತ್ತದೆ. ನೂರಾರು ಜನರಿಗೆ ಉತ್ತರ ಕೊಡಬೇಕಾಗುತ್ತದೆ.”

“ಹಾಗಾದರೆ ನೀವು ಇಂದೇ ರೂಮ್ ಖಾಲಿ ಮಾಡಿ ನನ್ನ ಮನೆಗೆ ಬಂದುಬಿಡಿ. ಅಮ್ಮ ನಿಮ್ಮನ್ನು ನೋಡಿ ಬಹಳ ಖುಷಿಪಡುತ್ತಾರೆ. ಅವರಿಗೂ ಒಬ್ಬ ಮಗ ಸಿಕ್ಕಂತಾಗುತ್ತದೆ,” ಮಾಲಿನಿ ಖುಷಿಯಿಂದ ಹೇಳಿದಳು.

“ಹೌದು, ನಾನು ಇವತ್ತೇ ಸಂಜೆ ನನ್ನ ಲಗೇಜ್‌ ತೆಗೆದುಕೊಂಡು ಬರುತ್ತೇನೆ. ಅಂದಹಾಗೆ ನನ್ನ ಲಗೇಜಾದರೂ ಏನಿದೆ? ಕೇವಲ ಬಟ್ಟೆಗಳು ಮತ್ತು ಒಂದಿಷ್ಟು ಪುಸ್ತಕಗಳು…..”

“ಸರಿ ಸರಿ…. ನಾನೇ ಸಂಜೆ ನಿಮ್ಮನ್ನು ಕರೆದುಕೊಂಡು ಬರಲು ಕಾರು ತೆಗೆದುಕೊಂಡು ಬರ್ತೀನಿ.”

ಇಂದು ಇಬ್ಬರ ಖುಷಿಗೆ ಮೇರೆಯೇ ಇರಲಿಲ್ಲ. ಅವರೆಂದೂ ಇಂತಹ ಕನಸು ಕೂಡ ಕಂಡಿರಲಿಲ್ಲ. ಇದು ಇಂದು ನನಸಾಗುತ್ತಿತ್ತು.

ಮಾಧ ಬೈ ಹೇಳುತ್ತಾ ತನ್ನ ರೂಮಿನ ಕಡೆ ಹೊರಟ. ಮಾಲಿನಿ ಮಾತ್ರ ಅಲ್ಲಿಯೇ ನಿಂತಳು. ಮಾಧವ ಕೊಟ್ಟಿದ್ದ ಗುಲಾಬಿ ಹೂಗಳ ಗುಚ್ಛದ ಸುವಾಸನೆ ಆಸ್ವಾದಿಸುತ್ತಾ ಅವನು ಹೋಗುತ್ತಿರುವುದನ್ನು ನೋಡಿ ಮನಸ್ಸಿನಲ್ಲಿಯೇ ಬಹಳ ಖುಷಿಗೊಂಡಳು. ತನ್ನ ಕನಸು ನನಸಾಗುತ್ತಿರುವುದನ್ನು ಕಣ್ಣಾರೆ ಗಮನಿಸುತ್ತಿದ್ದಳು. ಜೊತೆ ಜೊತೆಗೆ ಕಳೆದ ಕ್ಷಣಗಳನ್ನು, ಆ ಮಧುರ ಸ್ಪರ್ಶವನ್ನು ನೆನಪಿಸಿಕೊಳ್ಳುತ್ತಾ, ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದಳು. ಹೊಸದಾದ ರೀತಿಯಲ್ಲಿ ಹೊಸದಾದ ಭಾವನೆಯಿಂದ ತನ್ನ ಜೀವನಕ್ಕೊಂದು ಅರ್ಥ ಕೊಡಲು ದೃಢ ನಿರ್ಧಾರ ಮಾಡಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ