ಒಟ್ಟು ಕುಟುಂಬದಲ್ಲಿ ಇರುವುದರಿಂದ ಲಾಭಗಳೇ ಹೆಚ್ಚು. ತಾಯಿ ತಂದೆಯಾದವರು ಮಗ ಸೊಸೆಯ ಒತ್ತಡಭರಿತ ಜೀವನದಲ್ಲಿ ಬಹಳಷ್ಟು ಸಮನ್ವಯತೆ ಸಾಧಿಸಿ ಮುನ್ನಡೆಯಬೇಕು.
ತನುಜಾಳ ಮದುವೆ ಅವಿಭಕ್ತ ಕುಟುಂಬದ ವರನ ಜೊತೆಗೆ ಆಗಿತ್ತು. ಆರಂಭದಲ್ಲಿ ಎಲ್ಲ ಸರಿಯಾಗಿಯೇ ಇತ್ತು. ಆದರೆ ಕೆಲವು ತಿಂಗಳುಗಳ ಬಳಿಕ ತನುಜಾಳಿಗೆ ಅಲ್ಲಿ ಉಸಿರುಗಟ್ಟಿದಂತೆ ಅನಿಸತೊಡಗಿತು. ಎಲ್ಲಿಗಾದರೂ ಹೋಗುವುದಿದ್ದರೆ ಅತ್ತೆ ಮಾವನ ಅನುಮತಿ ಪಡೆಯಬೇಕಿತ್ತು. ಯಾವುದೇ ಕೆಲಸ ಮಾಡುವ ಮೊದಲು ಅವರನ್ನು ಕೇಳದೇ ಮಾಡಬಾರದು, ಈ ಎಲ್ಲ ಸಂಗತಿಗಳಿಂದ ತನುಜಾಳ ಮನಸ್ಸಿನಲ್ಲಿ ಒಂದು ರೀತಿಯ ಸಾತ್ವಿಕ ಕ್ರೋಧ ಬರುತ್ತಿತ್ತು. ಗಂಡ ಪುನೀತ್ ಗೆ ಈ ಬಗ್ಗೆ ತಿಳಿಸಿದಾಗ ಆತ ನಾವು ಇದೆಲ್ಲವನ್ನೂ ಅಮ್ಮ ಅಪ್ಪನ ಗೌರವಕ್ಕಾಗಿ ಪಾಲಿಸುತ್ತಿದ್ದೇವೆ ಎಂದು ಹೇಳುತ್ತಿದ್ದ. ಅದು ತನುಜಾಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
ತನುಜಾ ಎಂ.ಎನ್.ಸಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದಳು. ತನ್ನ ಅತ್ತೆ ಮಾವನ ಕಾರಣದಿಂದ ಲೇಟ್ ನೈಟ್ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ.
ಬಟ್ಟೆಗಳಲ್ಲಿ ಹೆಚ್ಚಾಗಿ ಸೂಟ್ ಅಥವಾ ಅದಕ್ಕೂ ಮಿಗಿಲೆಂದರೆ ಜೀನ್ಸ್ ಕುರ್ತಾ ಧರಿಸುತ್ತಿದ್ದಳು. ತನ್ನ ಸಹೋದ್ಯೋಗಿಗಳು ಪ್ರತಿಯೊಂದು ಬಗೆಯ ಡ್ರೆಸ್ ಧರಿಸುವುದು ಹಾಗೂ ಲೇಟ್ ನೈಟ್ ಪಾರ್ಟಿಗಳಲ್ಲಿ ಎಂಜಾಯ್ ಮಾಡುತ್ತಿದ್ದುದನ್ನು ಅವಳಿಗೆ ತನ್ನ ಸ್ಥಿತಿಯ ಬಗ್ಗೆ ಬಹಳ ಕೋಪ ಬರುತ್ತಿತ್ತು. ತನುಜಾ ಪುನೀತ್ ನಿಂದ ಮೊದಲನೇ ವರ್ಷದ ವಿವಾಹದ ಉಡುಗೊರೆಯ ರೂಪದಲ್ಲಿ ತನಗಾಗಿ ಒಂದು ಹೊಸ ಮನೆಯ ಬೇಡಿಕೆಯಿಟ್ಟಳು.
ಅತ್ತ ತನುಜಾಳ ಗಂಡ ಹಾಗೂ ಅತ್ತೆ ಮಾವನಿಗೆ ತನುಜಾ ಹೀಗೇಕೆ ಇಚ್ಛಿಸುತ್ತಿದ್ದಾಳೆ ಎಂದು ತಿಳಿಯದಾಗಿತ್ತು. ಅವಳಿಗೆ ಸಾಕಷ್ಟು ತಿಳಿವಳಿಕೆ ಹೇಳಿದ ಬಳಿಕ ಅವಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕದೇ ಇದ್ದಾಗ, ಪುನೀತ್ ಹೊಸದೊಂದು ಫ್ಲ್ಯಾಟ್ ಖರೀದಿಸಿದ.
ತನುಜಾ ಕೆಲವು ದಿನಗಳವರೆಗೆ ಬಹಳ ಖುಷಿಯಿಂದಿದ್ದಳು. ಅವಳು ತನ್ನ ಫ್ಲ್ಯಾಟ್ ನ್ನು ತನ್ನದೇ ಆದ ರೀತಿಯಲ್ಲಿ ಅಲಂಕರಿಸಿದಳು. ತನಗಿಷ್ಟವಾದ ಅದೆಷ್ಟೋ ಬಟ್ಟೆಗಳನ್ನು ಶಾಪಿಂಗ್ ಮಾಡಿದಳು. ಆದರೆ ಒಂದು ತಿಂಗಳು ಕಳೆಯುವಷ್ಟರಲ್ಲಿ ಆಫೀಸ್ ಹಾಗೂ ಮನೆ ಎರಡನ್ನೂ ಸಂಭಾಳಿಸುತ್ತಾ ಸುಸ್ತಾಗಿ ಹೋದಳು. ಅತ್ತೆ ಮಾವನ ಮನೆಯಲ್ಲಿದ್ದಾಗ ಎಲ್ಲ ಕೆಲಸಗಳು ಸಕಾಲಕ್ಕೆ ಹಾಗೂ ಸಮರ್ಪಕವಾಗಿ ಆಗುತ್ತಿದ್ದವು. ಈಗ ಮನೆ ಸದಾ ಅಸ್ತವ್ಯಸ್ತವಾಗಿರುತ್ತಿತ್ತು.
ತನುಜಾ ಗಾಢವಾಗಿ ಯೋಚಿಸಿದಳು. ಲೇಟ್ ನೈಟ್ ಪಾರ್ಟಿಗೆ ಹೋಗಲು ಅಥವಾ ಸಹೋದ್ಯೋಗಿಗಳನ್ನು, ಸ್ನೇಹಿತೆಯರನ್ನು ಮನೆಗೆ ಆಹ್ವಾನಿಸುವ ಬಗ್ಗೆ, ಬಟ್ಟೆಗಳನ್ನು ಧರಿಸುವ ಬಗ್ಗೆ ಅತ್ತೆ ಬಳಿ ಕೇಳಿರಲೇ ಇಲ್ಲ. ಆಕೆಯ ಮನಸ್ಸಿನಲ್ಲಿ ಅತ್ತೆ ಮಾವನ ಬಗ್ಗೆ ಅದೊಂದು ರೀತಿಯ ಭಾವನೆ ಮನೆ ಮಾಡಿಬಿಟ್ಟಿತ್ತು. ಆ ಕಾರಣದಿಂದ ಆಕೆ ಎಂದೂ ಅವರ ಹತ್ತಿರ ಸಹ ಸುಳಿದಿರಲಿಲ್ಲ. ಈಗ ಯಾವ ಮುಖ ಹೊತ್ತು ಅವರ ಬಳಿ ಹೋಗುತ್ತಾಳೆ?
ಈ ಒಂದು ಉದಾಹರಣೆಯನ್ನು ಗಮನಿಸಿದರೆ, ನಿಮಗೊಂದು ಸಂಗತಿ ಗಮನಕ್ಕೆ ಬರುತ್ತದೆ. ಅವಳು ಮನಸ್ಸಿನಲ್ಲಿಯೇ ಒಂದು ನಿರ್ಧಾರ ಮಾಡಿಬಿಟ್ಟಿದ್ದಳು. ತಾನು ಅತ್ತೆ ಮಾವ ಹೇಗೆ ಬಯಸುತ್ತಾರೋ ಹಾಗೆಯೇ ಇರಬೇಕೆಂದು. ಆದರೆ ಅವಳೆಂದೂ ತನ್ನ ಅತ್ತೆ ಮಾವನ ಮುಂದೆ ಈ ವಿಷಯದ ಬಗ್ಗೆ ಮಾತನಾಡಿರಲೇ ಇಲ್ಲ. ಇನ್ನೊಂದೆಡೆ ಪುನೀತ್ ಕೂಡಾ ತನುಜಾಳ ಅಂತರ್ಮನದಲ್ಲಿದ್ದ ಆ ಭಯವನ್ನು ಅರಿತುಕೊಳ್ಳಲು ಪ್ರಯತ್ನ ಮಾಡಲಿಲ್ಲ. ಇಂದಿನ ಹೆಂಡತಿಯರೇ ಹಾಗೆ ಎಂದು ಅಂದುಕೊಳ್ಳುತ್ತಾ ತನ್ನ ಅಮ್ಮ ಅಪ್ಪನ ಮನೆ ಬಿಟ್ಟು ಹೊಸ ಫ್ಲ್ಯಾಟ್ ಗೆ ಶಿಫ್ಟ್ ಆಗಿದ್ದ.
ಅತ್ತ ನೀಲೇಶ್ ಮದುವೆಯಾದಾಗಿನಿಂದ ಅವನು ಸದಾ ತನ್ನ ಹೆಂಡತಿಯ ಬಗ್ಗೆ ಗಮನ ಕೊಡುತ್ತಾನೆ ಎನ್ನುವುದು ಅವನ ತಾಯಿ ತಂದೆಯರ ಆಪಾದನೆಯಾಗಿತ್ತು. ಆದರೆ ವಾಸ್ತವ ಹಾಗಿರಲಿಲ್ಲ. ನೀಲೇಶನ ಕಂಪನಿಯಲ್ಲಿ ವರ್ಕ್ ಪ್ರೆಶರ್ ಬಹಳ ಇತ್ತು. ಈ ಕಾರಣದಿಂದ ಅವನು ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಆಗುತ್ತಿರಲಿಲ್ಲ. ಮೊದಲು ಅವನು ತನ್ನ ತಾಯಿ ತಂದೆಗೆ ಸಮಯ ಕೊಡುತ್ತಿದ್ದ. ಈಗ ಅದೇ ಸಮಯವನ್ನು ಹೆಂಡತಿ ಚೇತನಾಳಿಗೆ ಕೊಡುತ್ತಿದ್ದ. ಅಮ್ಮ ಅಪ್ಪ ಅವನನ್ನು ಅರ್ಥ ಮಾಡಿಕೊಳ್ಳಲಿಲ್ಲ. ತಾಯಿ ತಂದೆಯರಿಂದ ಅವನು ಈ ರೀತಿಯ ಅಪೇಕ್ಷೆ ಇಟ್ಟುಕೊಂಡಿರಲಿಲ್ಲ. ಮನನೊಂದು ಅವನು ಎರಡೇ ತಿಂಗಳಲ್ಲಿ ಪ್ರತ್ಯೇಕವಾಗಿ ವಾಸಿಸತೊಡಗಿದ.
ಈಗ ನೀಲೇಶನ ತಾಯಿ ತಂದೆಯರಿಗೆ ಮಗ ಸೊಸೆ ಇಲ್ಲಿದ್ದಾಗ ಎಷ್ಟೆಲ್ಲ ಕೆಲಸಗಳು ಸುಲಭವಾಗಿ ಆಗುತ್ತಿದ್ದವು. ಈಗ
ಅಲ್ಲೆಲ್ಲ ಬೆಟ್ಟದಂತೆ ಭಾಸವಾಗತೊಡಗಿದ್ದವು.
ಒಟ್ಟು ಕುಟುಂಬದಲ್ಲಿ ಇರುವುದರ ಲಾಭದ ಜೊತೆಗೆ ಕೆಲವು ಹಾನಿಗಳು ಕೂಡ ಇವೆ. ಇಲ್ಲಿ ಅನೇಕ ಮಕ್ಕಳು ಜೊತೆಗಿರುತ್ತಾರೆ. ಒಂದಿಷ್ಟು ಜಗಳಗಳು ಆಗುತ್ತವೆ. ಆದರೂ ತಾಯಿ ತಂದೆಗೆ ಅದು ಅಷ್ಟೇನೂ ವ್ಯತ್ಯಾಸ ಅನಿಸದು. ಅದೇ ಮಕ್ಕಳ ಮದುವೆಯ ಬಳಿಕ ಸಂಬಂಧದ ಸಮೀಕರಣ ಬದಲಾಗುತ್ತದೆ. ಒಂದು ಕಾಲಕ್ಕೆ ಪ್ರೀತಿಪಾತ್ರರು ಈಗ ವೈರಿಗಳಂತೆ ಕಂಡುಬರುತ್ತಾರೆ.
ಜೊತೆಗಿರುವುದು ಏಕಿಷ್ಟವಿಲ್ಲ?
ಮದುವೆಯ ಬಳಿಕ ಒಬ್ಬ ಯುವತಿ ಒಟ್ಟು ಕುಟುಂಬದಲ್ಲಿ ಇರಲು ಏಕೆ ಇಷ್ಟಪಡುವುದಿಲ್ಲ ಎನ್ನುವುದರ ಕಾರಣಗಳ ಮೇಲೊಮ್ಮೆ ಗಮನಹರಿಸಬೇಕು. ಅವಳು ಮುಂಚೆ ಒಟ್ಟು ಕುಟುಂಬದಲ್ಲಿ ಇದ್ದವಳೇ ಆಗಿದ್ದಳು.
ಪರ್ಸನಲ್ ಸ್ಪೇಸ್ : ಇಂದಿನ ಯುವ ಪೀಳಿಗೆಯ ಶಬ್ದಕೋಶದ ಮುಖ್ಯ ಶಬ್ದ ಮದುವೆಯ ಬಳಿಕ ಗಂಡಹೆಂಡತಿ ಜೊತೆ ಜೊತೆಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ. ಏಕೆಂದರೆ ಅವರು ಆ ಸಮಯದಲ್ಲಿಯೇ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಇಂತಹ ಸೂಕ್ಷ್ಮ ಸಮಯದಲ್ಲಿ ಹಿರಿಯರ ಅವಶ್ಯಕತೆ ಹಸ್ತಕ್ಷೇಪ ಅವರ ಹಿತಕ್ಕೆ ಹೇಳುವ ಕಿವಿಮಾತುಗಳಂತಿದ್ದರೂ ಅವರಿಗೆ ಬಂಧನದಂತೆ ಭಾಸವಾಗುತ್ತದೆ.
ರೀತಿನೀತಿಗಳ ಜಾಲ : ನವ ವಧು ಅತ್ತೆಯ ಜೊತೆ ಇರಬೇಕಾಗಿ ಬಂದಾಗ, ಅವಳಿಗೆ ಇಷ್ಟವಿಲ್ಲದಿದ್ದರೂ ಕೆಲವು ರೀತಿ ನೀತಿಗಳು ಅಂದರೆ ಸ್ನಾನ ಮಾಡಿಯೇ ಅಡುಗೆ ಮನೆಗೆ ಹೋಗಬೇಕು, ಹಲವು ವ್ರತಗಳನ್ನು ಮಾಡಬೇಕು, ಯಾರಾದರೂ ಮನೆಗೆ ಬಂದರೆ ಅವರ ಜೊತೆಗೆ ಮುಖ ಕೊಟ್ಟು ಮಾತನಾಡಬಾರದು ಎಂಬೆಲ್ಲ ಕಟ್ಟುನಿಟ್ಟುಗಳು ಅವಳಿಗೆ ಉಸಿರುಗಟ್ಟಿದಂತೆ ಭಾಸವಾಗುತ್ತವೆ.
ಆರ್ಥಿಕ ಸ್ವಾತಂತ್ರ್ಯ : ಕೆಲವು ಅವಿಭಕ್ತ ಕುಟುಂಬದಲ್ಲಿ ಸೊಸೆಯಾದವಳು ತನ್ನ ಸಂಬಳ ಪೂರ್ತಿ ಭಾಗವನ್ನು ಅತ್ತೆಯ ಕೈಗೆ ಕೊಡಬೇಕು ಎನ್ನುವುದಾಗಿರುತ್ತದೆ. ಕೆಲವೊಂದು ಕುಟುಂಬದಲ್ಲಿ ಆ ವ್ಯವಸ್ಥೆ ಇರದೇ ಇದ್ದರೂ, ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸೊಸೆಯ ಮೇಲೆ ಹಾಕಿಬಿಡುತ್ತಾರೆ.
ಕೌಟುಂಬಿಕ ರಾಜಕಾರಣ : ಅತ್ತೆ ಸೊಸೆಯ ರಾಜಕೀಯ ಕೇವಲ ಧಾರಾವಾಹಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಅದು ಅವಿಭಕ್ತ ಕುಟುಂಬದಲ್ಲಿ ಪೀಳಿಗೆಯಿಂದ ಪೀಳಿಗೆಗೆ ನಡೆದುಕೊಂಡು ಬರುತ್ತಿದೆ. ಪರಸ್ಪರರ ರೀತಿ ನೀತಿಗಳು, ಜೀವನಶೈಲಿಯ ವಿಧಾನಗಳು, ತಮ್ಮನ್ನು ಇತರರಿಗಿಂತ ಒಳ್ಳೆಯವರೆಂದು ಸಾಬೀತುಪಡಿಸುವ ಮನೋಭಾವ ಅವರಲ್ಲಿ ಬಂದುಬಿಡುತ್ತದೆ.
ಹೇಗೆ ಸಮನ್ವಯ ಸಾಧಿಸುವುದು?
ಇದರಲ್ಲಿ ಆಗಬೇಕಾದದ್ದು ಇಷ್ಟೆ. ಹಿರಿಯರು ಒಂದಿಷ್ಟು ವಿಶಾಲ ಮನೋಭಾ ಹೊಂದಬೇಕು. ಕಿರಿಯರು ಒಂದಿಷ್ಟು ಸಹನಶೀಲತೆ ರೂಢಿಸಿಕೊಳ್ಳಬೇಕು. ಎರಡೂ ಪೀಳಿಗೆಯರು ಈ ಕೆಳಕಂಡ ಸಲಹೆಗಳ ಬಗ್ಗೆ ಗಮನಕೊಟ್ಟರೆ ಸಂಬಂಧದಲ್ಲಿ ಸಮನ್ವಯತೆ ಸಾಧಿಸುದು ಅಸಾಧ್ಯವೇನಲ್ಲ.
ಮುಕ್ತವಾಗಿ ಮಾತನಾಡಿ : ಮಗನ ಮದುವೆಯ ಬಳಿಕ ಅವನ ವೈವಾಹಿಕ ಜೀವನ ಸಮರ್ಪಕವಾಗಿ ನಡೆಯಲು ಅವನಿಗೆ ಅವನ ಹೆಂಡತಿಗೆ ಒಂದಷ್ಟು ಪ್ರೈವೆಸಿ ಅವಶ್ಯ ಬೇಕು. ನಿಮ್ಮ ಪಾಲನೆ ಪೋಷಣೆಯಲ್ಲಿ ಭರವಸೆ ಇದ್ದರೆ, ನಿಮ್ಮ ಮಗ ಎಂದೂ ನಿಮ್ಮವನೇ ಆಗಿರುತ್ತಾನೆ. ಮಗ ಸೊಸೆಗೆ ಪ್ರೈವೆಸಿ ಕೊಟ್ಟರೆ ಅವರು ಅವಶ್ಯವಾಗಿ ನಿಮಗೆ ಆದರ ಸನ್ಮಾನ ಕೊಡುತ್ತಾರೆ. ನಿಮಗೆ ಯಾವುದೇ ವಿಷಯ ಹಿಡಿಸದೇ ಇದ್ದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟು ಕೊರಗುವ ಬದಲು ಮಗ ಸೊಸೆಯ ಮುಂದೆ ಆ ವಿಷಯ ಚರ್ಚಿಸಿ. ಅದರಿಂದ ಒಂದು ಸಂಗತಿ ದಾರಿ ತೆರೆದುಕೊಳ್ಳುತ್ತದೆ. ಆ ದಾರಿಯಲ್ಲಿಯೇ ನಡೆಯಲು ಅನುಕೂಲವಾಗುತ್ತದೆ.
ಅತ್ತೆಯೂ ಹಿಂದೆ ಸೊಸೆಯಾಗಿದ್ದಳು : ನಿಮ್ಮ ವೈವಾಹಿಕ ಜೀವನವನ್ನು ಅಪ್ಪಿತಪ್ಪಿಯೂ ಮಗ ಸೊಸೆಯ ಜೀವನದ ಜೊತೆಗೆ ಹೋಲಿಸಿ ನೋಡಬೇಡಿ. ನೀನು ಅತ್ತೆ ಮನೆಯ ರೀತಿ ರಿವಾಜುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಸೊಸೆಗೆ ಮೇಲಿಂದ ಮೇಲೆ ಹೇಳುತ್ತಿರಬೇಡಿ. ಏಕೆಂದರೆ ನೀವು ಒಮ್ಮೆ ಸೊಸೆ ಆಗಿದ್ದಿರಿ, ಆಗ ನಿಮಗೂ ಅತ್ತೆ ಹೀಗೆ ಹೇಳಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಿ. ಆಧುನಿಕ ಪೀಳಿಗೆಯವರು ತಮ್ಮ ಕೆಲಸ ಕಾರ್ಯಗಳಲ್ಲಿ ಬಹಳ ಒತ್ತಡದಿಂದಿರುತ್ತಾರೆ. ಮಗ ಸೊಸೆ ನಿಮ್ಮ ಬಳಿ ಬರಲಾಗದಿದ್ದರೆ, ನೀವೇ ಅವರತ್ತ ಹೋಗಿ. ಅವರ ಯೋಗಕ್ಷೇಮ ವಿಚಾರಿಸಿ. ಆಗ ಅವರಿಗೆ ನಿಮ್ಮ ಈ ಆಪ್ತತೆಯ ಭಾವ ಇಷ್ಟವಾಗದೇ ಇರದು.
ಜೊತೆ ಜೊತೆಗೆ ಸಿಗುವ ಖುಷಿ : ಮನೆ ಒಂದು ಸಂಘಟಿತ ಸಂಸ್ಥೆಯಂತೆ. ನೀವು ಕೇವಲ ನೌಕರಿಯಿಂದ ನಿವೃತ್ತರಾಗಿರುತ್ತೀರೇ ಹೊರತು ಜೀವನದಿಂದ ಅಲ್ಲ. ನಿಮ್ಮ ಮಕ್ಕಳು ಮನೆಯ ಸಾಲ ಮತ್ತಿತರ ದೊಡ್ಡ ಹೊರೆ ಹೊತ್ತುಕೊಂಡಿದ್ದರೆ, ನೀವು ಆಗಾಗ ಮನೆಯವರಿಗೆ ಹಾಲು ಹಣ್ಣು ಅಥವಾ ಏನಾದರೂ ವಿಶೇಷವಾದದ್ದನ್ನು ತೆಗೆದುಕೊಂಡು ಬಂದು ಎಲ್ಲರ ಜೊತೆ ಖುಷಿ ಖುಷಿಯಿಂದ ತಿನ್ನಿ. ಮೊಮ್ಮಕ್ಕಳ ಬಗ್ಗೆ ಕಾಳಜಿ ವಹಿಸುವುದರಿಂದ ನೀವು ಕೆಲಸಗಾರರೇನೂ ಆಗುವುದಿಲ್ಲ. ನಿಮ್ಮ ಆರೋಗ್ಯ ಎಷ್ಟರ ಮಟ್ಟಿಗೆ ಅವಕಾಶ ಕೊಡುತ್ತೋ ಅಷ್ಟು ಮನೆಯವರಿಗಾಗಿ ಸಹಕಾರ ಕೊಡಿ.
ಮುಕ್ತ ಮನಸ್ಸಿನಿಂದ ಪ್ರಶಂಸಿಸಿ : ನಿಮಗೆ ಮಗ ಸೊಸೆಯ ಯಾವುದಾದರೂ ಮಾತು ಇಷ್ಟವಾಗದೇ ಹೋದರೆ, ಇಬ್ಬರ ಜೊತೆ ಕುಳಿತುಕೊಂಡು ಚರ್ಚಿಸಿ, ಅವರ ಯಾವುದಾದರೂ ಮಾತು ಇಷ್ಟವಾದರೆ, ಅವರ ಯಾವುದಾದರೂ ಕೆಲಸ ಹಿಡಿಸಿದರೆ, ಮುಕ್ತ ಕಂಠದಿಂದ ಪ್ರಶಂಸಿಸಿ. ಇದರಿಂದ ಅವರು ಖುಷಿಯಿಂದಿರುತ್ತಾರೆ. ಜೊತೆಗೆ ನಾವು ಖುಷಿಯಿಂದಿರಲು ಸಾಧ್ಯವಾಗುತ್ತದೆ.
– ರಶ್ಮಿ