ಸಾಮಾನ್ಯವಾಗಿ ಇಂದಿನ ಯುವ ಜನತೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಅವರಿಗೆ ಪಾಶ್ಚಾತ್ಯ ಸಂಸ್ಕೃತಿಯ ಮೇಲೆ ಮೋಹ ಹೆಚ್ಚು. ಅವರು ತಮ್ಮತನವನ್ನು ಮರೆಯುತ್ತಿದ್ದಾರೆ ಎನ್ನುವ ಆರೋಪವಿದೆ. ಆದರೆ ಎಲ್ಲರೂ ಹಾಗೇನಿಲ್ಲ. ಇವೆಲ್ಲಕ್ಕೂ ಅಪಾದವೆನ್ನುವಂತೆ ಶ್ರೀಷ್ಮಾ ಸುಕುಮಾರ್‌ ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಪಾರಂಗತರಾಗಿದ್ದಾರೆ. ಅವರೇ ಹಾಡುಗಳನ್ನು ರಚಿಸುತ್ತಾರೆ, ಹಾಡುತ್ತಾರೆ. ಅದಲ್ಲದೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅನೇಕ ವಿಷಯಗಳಲ್ಲಿ ಪರಿಣತಿಯನ್ನು ಪಡೆದಿದ್ದಾರೆ.

ಬಾಲ್ಯದಿಂದಲೂ ಓದಿನಲ್ಲಿ ಚುರುಕು. ಜೊತೆಗೆ ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಶಾಲೆಯಲ್ಲಿ ಕ್ರೀಡಾ ಕ್ಯಾಪ್ಟನ್‌ ಆಗಿದ್ದು ಹಾಡುಗಾರಿಕೆ, ಭಾಷಣ, ನೃತ್ಯ ಮತ್ತು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸುತ್ತಿದ್ದರು. ಬೆಂಗಳೂರಿನ ವಿಜಯಾ ಕಾಂಪೋಸಿಟಿ ಕಾಲೇಜಿನಲ್ಲಿ ಪಿಯುಸಿಯಲ್ಲಿ 95.33% ಅಂಕಗಳನ್ನು ಪಡೆದಿದ್ದರು. ಬಿಎಂಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ನಲ್ಲಿ ಬ್ಯಾಚ್ಯುಲರ್‌ ಆಫ್‌ ಎಂಜಿನಿಯರಿಂಗ್‌ ಇನ್‌ ಕಂಪ್ಯೂಟರ್‌ ಸೈನ್ಸ್ ನಲ್ಲಿ 83.5% ಗಳಿಸಿದರು. ಇಷ್ಟು ಅಂಕ ಗಳಿಸಿದವರಿಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕೇ ಸಿಗುತ್ತದೆ. ಹ್ಯಾವ್ ವಿಲ್ ‌ಪ್ಯಾಕರ್ಡ್‌ ಕಂಪನಿಯಲ್ಲಿ ಆರು ವರ್ಷ ಸೀನಿಯರ್‌ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸಿದರು. ನಂತರ ಮದುವೆ, ತಾಯ್ತನ ನಿರ್ವಹಣೆಗಾಗಿ ಉದ್ಯೋಗದಿಂದ ವಿರಾಮ ತೆಗೆದುಕೊಂಡರು.

ಇವರಿಗೆ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ. ಇವರ ತಾಯಿಯೇ ಇವರ ಮೊದಲ ಗುರು. ಸಂಗೀತದ ಜೂನಿಯರ್‌ ಮತ್ತು ಸೀನಿಯರ್‌ ಪರೀಕ್ಷೆಗಳಲ್ಲೂ ಪ್ರಥಮ ಸ್ಥಾನ ಪಡೆದರು. ಕೋವಿಡ್‌ ನ ಸಮಯದಲ್ಲಿ ಇವರ ಸಂಗೀತ ಸಾಧನೆ ಮತ್ತೂ ಬಲವಾಯಿತು. ಅನೇಕ ಕನ್ನಡದ ಕವಿತೆಗಳಿಗೆ, ಬಸವಣ್ಣನ ವಚನ, ಸೋಮಯ್ಯನ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಅನೇಕ ಬಹುಮಾನಗಳನ್ನೂ ಗಳಿಸಿದ್ದಾರೆ. ಇವರು ಮೊದಲನೆಯ ತರಗತಿಯಿಂದ ಹಿಡಿದು ಈಗಿನವರೆಗೂ ಶಾಲಾ ಕಾಲೇಜು, ಅನಂತರ ಕಾಲೇಜು ಮತ್ತು ರಾಜ್ಯ ಮಟ್ಟದ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.

ನೀಡಿರುವ ಸಂಗೀತ ಪ್ರದರ್ಶನಗಳು

ಎಫ್‌ಕೆಸಿಸಿಐನವರು ನಡೆಸಿದ ಮಹಿಳಾ ಉದ್ಯಮಶೀಲತಾ ದಿನದ ಸಂಭ್ರಮಾಚರಣೆಯಲ್ಲಿ ಪ್ರಾರ್ಥನಾ ಗೀತೆ ಹಾಡಿ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮೆಚ್ಚುಗೆ ಗಳಿಸಿದ್ದಾರೆ.

ವಿಶ್ವ ಸಂಗೀತದ ದಿನದಂದು ಫೇಸ್‌ ಬುಕ್‌ ಲೈವ್ ‌ನಲ್ಲಿ ಒಂದು ಘಂಟೆಯ ಕಾರ್ಯಕ್ರಮವನ್ನು ನೀಡಿದ್ದಾರೆ.

ನವೆಂಬರ್‌ ರಂದು ವಿಕಸನ ವೃಂದದವರು ಆಯೋಜಿಸಿದ ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮ ಸೌರಭ ಸಭೆಯಲ್ಲಿ `ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಹಾಡಿ ಮೆಚ್ಚುಗೆ ಗಳಿಸಿದ್ದಾರೆ.

ಕನ್ನಡವೇ ಅಲ್ಲದೆ, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರದ ಹಾಡುಗಳನ್ನು ಹಾಡಿ ಪ್ರದರ್ಶನಗಳನ್ನು ನೀಡಿದ್ದಾರೆ.

ಲಾಕ್‌ ಡೌನ್‌ ಸಮಯದಲ್ಲಿ ಝೂಮ್ ನಲ್ಲಿ ಅನೇಕ ವರ್ಚ್ಯುವಲ್ ‌ಕಾರ್ಯಕ್ರಮಗಳನ್ನು, ಫೇಸ್‌ ಬುಕ್‌ ಲೈವ್ ‌ನಲ್ಲಿ ಅನೇಕ ಸಮಾರಂಭಗಳಲ್ಲಿ ಸಂಗೀತ ಪ್ರದರ್ಶನ ನೀಡಿದ್ದಾರೆ. ಯಾವುದೇ ಮುಖ್ಯ ಸಮಾರಂಭಗಳಲ್ಲಿ ಪ್ರಾರ್ಥನಾ ಗೀತೆ ಇವರದೇ. ಹೀಗಾಗಿ ಇವರು ನೀಡಿರುವ ಸಂಗೀತ ಕಾರ್ಯಕ್ರಮಗಳು ಹಲವಾರು. ಆರ್ಯ ವೈಶ್ಯ ಸಮಾಜದಲ್ಲಿ ತಮ್ಮ ಪ್ರತಿಭೆಯಿಂದ ಜನಪ್ರಿಯರಾಗಿದ್ದಾರೆ.

ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಇವರಿಗೆ ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ದತ್ತಿ ನಿಧಿ ಪ್ರಶಸ್ತಿ ನೀಡಿತು.

ಮ್ಯಾಜಿಕ್‌ ಆಫ್‌ ಮ್ಯೂಸಿಕ್‌ತಮ್ಮದೇ ಸಂಗೀತ ಶಾಲೆ ಮ್ಯಾಜಿಕ್‌ ಆಫ್‌ ಮ್ಯೂಸಿಕ್‌ ಮೂಲಕ ನಾಲ್ಕರಿಂದ ಹತ್ತು ವರ್ಷದ ಮಕ್ಕಳಿಗೆ ಶ್ಲೋಕ, ಹಾಡು, ಶಾಸ್ತ್ರೀಯ ಸಂಗೀತ ಮತ್ತು ಪೌರಾಣಿಕ ಕಥೆಗಳನ್ನು ಹೇಳಿಕೊಡುತ್ತಿದ್ದಾರೆ. ದೊಡ್ಡವರಿಗೆ ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ದೇಶಭಕ್ತಿ ಗೀತೆ ಹೇಳಿಕೊಡುತ್ತಿದ್ದಾರೆ. ಬಹರೇನ್‌, ನ್ಯೂ ಜರ್ಸಿ, ಟೆಕ್ಸಾಸ್‌, ಸಿಂಗಾಪೂರ್‌, ಯುಕೆ, ಗುರುಗಾಂವ್‌, ಭೂಪಾಲ್, ಚೆನ್ನೈ, ಬಾಗೇಪಲ್ಲಿ, ಚಿಕ್ಕಮಗಳೂರುಗಳಿಂದಲೂ ಇವರಿಗೆ ಶಿಷ್ಯರಿದ್ದಾರೆ. ಆನ್‌ ಲೈನ್‌ ಬೇಸಿಗೆ ಶಿಬಿರ ಮತ್ತು ವಾರ್ಷಿಕೋತ್ಸವಗಳನ್ನೂ ನಡೆಸಿದ್ದಾರೆ.

ಯೂ ಟ್ಯೂಬ್‌ ಚಾನೆಲ್ ‌ತಮ್ಮ ಸಂಗೀತದ ರಚನೆಗಳನ್ನು ಪ್ರಸ್ತುತಪಡಿಸುವ ಸಲುವಾಗಿ ತಮ್ಮದೇ ಆದ ಯೂ ಟ್ಯೂಬ್‌ ಚಾನೆಲ್ ಒಂದನ್ನು ಪ್ರಾರಂಭಿಸಿದ್ದಾರೆ. ತಮ್ಮ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಚಾನೆಲ್ ‌ನ್ನು ಶುರು ಮಾಡಿದ್ದಾರೆ. ಈವರೆಗೂ 50ಕ್ಕಿಂತ ಹೆಚ್ಚು ವಿಡಿಯೋಗಳನ್ನು ಪ್ರಸ್ತುತಪಡಿಸಿದ್ದಾರೆ.

ಬೇಕಿಂಗ್ಕೌಶಲತೆ

ಇವರು ಮಗನಿಗೆ ಆರೋಗ್ಯಕರ ಲಂಚ್‌ ಬಾಕ್ಸ್ ನೀಡುವ ಸಲುವಾಗಿ ಹುಡುಕಾಟದ ಸಂದರ್ಭದಲ್ಲಿ ಸಂಸ್ಥೆ ಪ್ರಾರಂಭಿಸಿದರು. ಇವರು ಆರೋಗ್ಯಕರ ಹಿಟ್ಟು ಮತ್ತು ನೈಸರ್ಗಿಕ ಸಿಹಿಕಾರಕಗಳೊಂದಿಗೆ ತಯಾರಿಸಿದ ಕೇಕ್‌ ಗಳನ್ನು ಸಹ ಮಾರಾಟ ಮಾಡುತ್ತಾರೆ. ಫೇಸ್‌ ಬುಕ್‌ ಸಮುದಾಯದಿಂದ ಬೇಕರ್‌ ಗಳಿಗಾಗಿ ಹೊರ ಬಂದ ಆರೋಗ್ಯಕರ ಬೇಕಿಂಗ್‌ ಪುಸ್ತಕ ಸರಣಿಯಲ್ಲಿ ಇವರ ಐದು ಆರೋಗ್ಯಕರ ಬೇಕಿಂಗ್‌ ರೆಪಿಸಿಗಳು ಆಯ್ಕೆಯಾಗಿ ಪ್ರಕಟವಾಗಿವೆ. ಇದರಿಂದ ಬಂದ ಲಾಭವನ್ನು ಎರಡು ಎನ್.ಜಿ.ಓ. ಗಳಿಗೆ ನೀಡುತ್ತಿದ್ದಾರೆ.

ಮಕ್ಕಳಿಗಾಗಿ ಕೋಡಿಂಗ್

ಓದಿದ್ದು ಎಂಜಿನಿಯರಿಂಗ್‌. ಜೊತೆಗೆ ಇವರು ಸಾಫ್ಟ್ ವೇರ್‌ ಉದ್ಯಮದಲ್ಲಿ ಕೆಲಸ ಮಾಡಿದ್ದರಿಂದಾಗಿ ಮಕ್ಕಳಿಗಾಗಿ `ಕೋಡಿಂಗ್‌ಫಾರ್‌ ಕಿಡ್ಸ್’ ಪ್ರಾರಂಭಿಸಿದ್ದಾರೆ. ಆರರಿಂದ ಹನ್ನೆರಡು ವರ್ಷದ ಮಕ್ಕಳಿಗೆ ಸ್ಕ್ರಾಚ್‌ ಜ್ಯೂನಿಯರ್‌ ಕೋಡಿಂಗ್‌ ನ್ನು ಕಲಿಸುತ್ತಿದ್ದಾರೆ.

ಒಟ್ಟಾರೆ 36ರ ಹರೆಯದ ಶ್ರೀಷ್ಮಾ ಸುಕುಮಾರ್‌ ರ ಸಾಧನೆಗಳು ಅಪಾರ. ಇಂತಹ ಚಿಕ್ಕ ವಯಸ್ಸಿನಲ್ಲೇ ಅವರಿಗೆ ಎಲ್ಲವನ್ನೂ ಮಾಡುವ ಆಸಕ್ತಿ. ಸಂಸಾರದೊಂದಿಗೆ ಈ ಸಕಲವನ್ನೂ ನಿರ್ವಹಿಸುತ್ತಿರುವ ಇವರಿಗೆ ಗೃಹಶೋಭಾ ಪರವಾಗಿ ಅಭಿನಂದನೆಗಳು!

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ