ಹುಟ್ಟು ಗುಣವದು ವೈರಾಗ್ಯ, ಗುರುವಿನ
ಸಂಗದಿ ಇನ್ನಷ್ಟು ಪರಿಪುಷ್ಟಿ...
ರಾಮಕೃಷ್ಣರ ಉಪದೇಶಾಮೃತದಿ ವಿವಾಹ
ವಿತೃಷ್ಣೆ, ತ್ಯಾಗ ಬುದ್ದಿಗಳ ಅಭಿವೃದ್ಧಿ...
ಅದ್ವೈತ, ವೇದಾಂತ ರಹಸ್ಯಗಳ ಪರಿಹಾಸ್ಯ
ಮಾಡಿದ್ದನು ಒಂದೊಮ್ಮೆ ನರೇಂದ್ರನು...
ಪರಮಹಂಸರ ಸ್ಪರ್ಶದಿ ತೇಲಿ,
"ಬ್ರಹ್ಮವಲ್ಲದ ವಿಶ್ವ ಬೇರೊಂದಿಲ್ಲ"ವೆನುತಾ ಸಮಾಧಿಸ್ಥನಾದನು...
ಧನಕನಕ ಪ್ರಾಪ್ತಿಗೆ ಜಗದಂಬೆಯ ಬೇಡಲು
ಪಾಲಿಸಿದನು ಶಿಷ್ಯನು, ಗುರುವಿನಾಣತಿಯ...
ಬೇಡಿದನು ಜಗನ್ಮಾತೆಯ, ಜ್ಞಾನ
ಭಕ್ತಿಯೊಡನೆ ಆಕೆಯ ಶಾಶ್ವತ ದರುಶನವ...
ಪರಿವ್ರಾಜಕ ಸನ್ಯಾಸಿ ಅರುಹಿದನೊಮ್ಮೆ ಅರಿವಿರದೆ,
ಪ್ರಭಾತದ ಸಮುದ್ರ ತೀರದಲಿ ನಿಂತು...
ನಾನೊಂದು ದಿನ ವೀಚಿವಿಕ್ಷೋಭಿತ ಸಿಂಧುವನು ದಾಟಿ,
ದೂರ ದೇಶಗಳಿಗೆ ಹೋಗುವೆನೆಂದು...
ಶ್ರೀಚಾಮರಾಜೇಂದ್ರ ಒಡೆಯರ ಮೈತ್ರಿಯಲಿ,
ಸತ್ಯವೇ ಸನ್ಯಾಸಿಗಳ ಧರ್ಮವೆನ್ನುತಾ ಸುಳ್ಳಾಡದವನು...
ಪರಿಶೋಭಿತೆ, ಸಸ್ಯಶಾಮಲೆ ನವ್ಯ ಭಾರತದ ಸುನೀಲ
ಶರಧಿಯೆದುರು ಮಂತ್ರ ಗುರುವಾದನು...
ನವಾಬರ ಪ್ರೀತಿಯುಂಡವನು, ಸಪ್ನದಲಿ ಪಶ್ಚಿಮಾಭಿಮುಖ
ನಡೆದ ಗುರುವನ್ನು ಹಿಂಬಾಲಿಸಲು ಸಿದ್ಧವಾದನು...
ಧೀಮಂತ ಯತಿಚಕ್ರೇಶನು ಹರಡಲು ದೇಶದ ಸನಾತನ
ಧರ್ಮವನು, ವಿದೇಶದ ಹಡಗನ್ನೇರಿಯೇ ಬಿಟ್ಟನು...
ಅಂತರಾಳದ ಜ್ಞಾನಸೂರ್ಯ ಜ್ಯೋತಿ ಮುಖಮಂಡಲದಲಿ
ಪ್ರಜ್ವಲಿಸಲು, ಚಿಕಾಗೋ ಸಾಕ್ಷಿಯಾಯಿತು...
"ಭ್ರಾತೃ, ಭಗಿನಿಯರೆ" ಎನುವ ಸಂಭೋದನೆಯು,
ಭಾರತಾಂಬೆಯ ಎತ್ತರ ಅಳೆಯುವ ಬ್ರಹ್ಮನಿನಾದವಾಯಿತು...
ಸರ್ವಧರ್ಮ ಸಮನ್ವಯದ ಭಾವಾರ್ಥ
ವಿವರಿಸಲು, ಕರತಾಡನ ಮುಗಿಲು ಮುಟ್ಟಿತು...
'ಭಾರತಖಂಡಕೆ ಬೇಕಿಹುದು ಅನ್ನ. ಧರ್ಮವಲ್ಲ'ವೆನಲು,
ವಿದೇಶದವರೊಡನೆ ದ್ವೇಷ ಹುಟ್ಟಿತು. ಅರಳೆಯ ಹಾಸಿಗೆ ಮುಳ್ಳಾಯಿತು...
ಸಮನ್ವಯವ ವಿಶ್ವದೆಲ್ಲೆಡೆ ಮೊಳಗಿಸಿ, ತತ್ವಕೆ
ಜಗತ್ತನೊಡಗೂಡಿಸಿದ ಯುಗಧರ್ಮವಾಣಿ ಕಣ್ಮರೆಯಾಯಿತು...
ರಣಶ್ರಾಂತ ವೀರ, ಬ್ರಹ್ಮಚಾರಿಯ ಎದೆಗಪ್ಪಿ ಹೊರಟಳು
ಜಗನ್ಮಾತೆ, ವಿಷಣ್ಣವದನವೊಂದೇ ಮಿಗಿಲಾಯಿತು...
ಸ್ವರ್ಣಾಕ್ಷರದಿ ಚಿರನಾಮವಾದವನು ಅವನೇ
ವಿವೇಕಾನಂದ, ಭಾರತೀಯರ ಪ್ರೀತಿಪಾತ್ರನು...
ಕಾಲಕಾಲಕ್ಕೂ ಯುವಕರನ್ನೆಚ್ಚರಿಸುವ ಗಂಭೀರ
ಧ್ವನಿಯ ಧೀರ ಪುರುಷೋತ್ತಮ ಭಾರತಮಾತೆಯ ಪುತ್ರನು...
*ಶಾಂತಿವಾಸು*