ಬಾಲಿವುಡ್ ಸದಾ ಪುರುಷಪ್ರಧಾನ ಇಂಡಸ್ಟ್ರಿ ಎನಿಸಿದೆ, ಆದರೆ ಭಾರತೀಯ ಚಿತ್ರರಂಗವನ್ನು ಆಮೂಲಾಗ್ರವಾಗಿ ಪರಿಶೀಲಿಸಿದಾಗ, ಹಿಂದಿ ಒಳಗೊಂಡಂತೆ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ಆ ಕಾಲದಿಂದ ಈ ಕಾಲದವರೆಗೂ ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇದ್ದೇ ಇದೆ. ಇದಕ್ಕೆ ಮುಖ್ಯ ಕಾರಣ ಸ್ತ್ರೀ ಪ್ರಧಾನ ಚಿತ್ರಗಳನ್ನು ಎಲ್ಲರೂ ಇಷ್ಟಪಡುತ್ತಾರೆ.
ಕನ್ನಡದಲ್ಲಂತೂ ಕಾದಂಬರಿ ಆಧಾರಿತ ಚಿತ್ರಗಳು ಮುಖ್ಯವಾಗಿ ಸ್ತ್ರೀಪ್ರಧಾನವಾಗಿದ್ದು, ಪುಟ್ಟಣ್ಣ ನಾಯಕಿಯರನ್ನು ಗೆಲ್ಲಿಸುವ ನಿರ್ದೇಶಕರೆಂದೇ ಖ್ಯಾತಿ ಪಡೆದಿದ್ದರು.
ಹಾಗೆಯೇ `ಮದರ್ ಇಂಡಿಯಾ’ ಚಿತ್ರದಿಂದ `ಮಾಮ್’ವರೆಗೂ, `ಚಾಂದಿನಿ’ಯಿಂದ `ಚಾಲ್ ಬಾಸ್,’ `ಕ್ವೀನ್’ನಿಂದ `ಮಣಿಕರ್ಣಿಕಾ’ವರೆಗೂ ಬಹುತೇಕ ಎಲ್ಲಾ ಮಹಿಳಾ ಪ್ರಧಾನ ಚಿತ್ರಗಳನ್ನೂ ಪ್ರೇಕ್ಷಕರು ಗೆಲ್ಲಿಸಿ ಕೊಟ್ಟಿದ್ದಾರೆ. ಶ್ರೀದೇವಿ ತನ್ನ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ನಟಿಸಿದ ಇಂಗ್ಲಿಷ್ ವಿಂಗ್ಲಿಷ್ ಇರಲಿ, ವಿದ್ಯಾಳ ಡರ್ಟಿ ಪಿಕ್ಚರ್, ಬಾಕ್ಸ್ ಆಫೀಸಿನಲ್ಲಿ ಪ್ರಚಂಡ ಯಶಸ್ಸು ಗಳಿಸಿವೆ.
ಅದೇ ರೀತಿ ಕೊರೋನಾ ಕಾಲದಲ್ಲಿ ಎಲ್ಲಾ ಥಿಯೇಟರ್ ಗಳೂ ಮುಚ್ಚಲ್ಪಟ್ಟಿದ್ದಾಗ, OTT ಪ್ಲಾಟ್ ಫಾರ್ಮ್ ಮೇಲುಗೈ ಸಾಧಿಸಿ, ಮನೆ ಮಂದಿಯೆಲ್ಲಾ ಹಾಯಾಗಿ ಟಿವಿಯಲ್ಲಿ ಹೊಸ ಸಿನಿಮಾ ವೀಕ್ಷಿಸುವಂತಾಯಿತು. ಇಲ್ಲಿಯೂ ನೀವು ಸೂಕ್ಷ್ಮವಾಗಿ ಗಮನಿಸಿದರೆ ಸ್ತ್ರೀ ಪ್ರಧಾನ ಚಿತ್ರಗಳೇ ಮೇಲುಗೈ ಸಾಧಿಸಿವೆ. ಇದರಲ್ಲಿ ವಿಶೇಷ ಸಂಗತಿ ಎಂದರೆ, OTT ಯಲ್ಲಿ ಸ್ತ್ರೀ ಪ್ರಧಾನ ಚಿತ್ರಗಳಿಗೆ ವಿಶೇಷ ಸ್ಥಾನ ಉಂಟು.
ಇತ್ತೀಚೆಗಂತೂ ಮನರಂಜನೆಗೆ ಹೆಚ್ಚಿನ ಪ್ರಾಥಮಿಕತೆ ನೀಡಲೆಂದು, ಬಾಲಿವುಡ್ ಉತ್ತಮ ವಿಷಯಗಳನ್ನು ಕೈಬಿಟ್ಟು, ಕೇವಲ ಗ್ಲಾಮರ್, ಸೆಕ್ಸೀ, ಮಾರಾಮಾರಿಯ ಮಸಾಲಾ ಸೂತ್ರಗಳಿಗೇ ಅಂಟಿಕೊಂಡಿತ್ತು. ಆದರೆ ಲಾಕ್ ಡೌನ್ ಕೃಪೆಯಿಂದ ನೆಟ್ ಫ್ಲಿಕ್ಸ್, ಅಮೆಝಾನ್ ಪ್ರೈಂ, ಝೀ 5, ಇತ್ಯಾದಿ ಹೊಸ ಹೊಸ OTT ಪ್ಲಾಟ್ ಫಾರ್ಮ್ ಕಾರಣ, ಹೊಸ ಹೊಸ ವಿಷಯಗಳನ್ನು ಇನ್ನಷ್ಟು ಗಂಭೀರವಾಗಿ ಪ್ರಸ್ತುತಪಡಿಸಲಾಗತ್ತಿದೆ. ಈ ಕಾರಣದಿಂದಲೇ ಮಹಿಳಾಪ್ರಧಾನ ಚಿತ್ರಗಳನ್ನು ಲೇಖಕಿ, ನಿರ್ಮಾಪಕಿ, ನಿರ್ದೇಶಕಿಯರು ತಮ್ಮದೇ ಆದ ವಿಭಿನ್ನ ಶೈಲಿಯಿಂದ ಮುನ್ನುಗ್ಗುತ್ತಿದ್ದಾರೆ. ಈ ಕುರಿತಾಗಿ ಹೆಚ್ಚಿನ ವಿವರ ತಿಳಿಯೋಣವೇ?
ಕೊರೋನಾ ಕಾಲದಲ್ಲಿ OTT ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆದ ಮಹಿಳಾ ಪ್ರಧಾನ ಚಿತ್ರಗಳು ಮತ್ತು ಸೀರೀಸ್ :
ಕಳೆದ ವರ್ಷದಿಂದ ಲಾಕ್ ಡೌನ್, ಕೊರೋನಾ ಕಾರಣ OTT ಪ್ಲಾಟ್ ಫಾರ್ಮ್ ನಲ್ಲಿ ಪ್ರದರ್ಶಿತಗೊಂಡ ಎಷ್ಟೋ ಚಿತ್ರಗಳು ಮಹಿಳಾ ಪವರ್ ನ್ನು ಎತ್ತಿಹಿಡಿದದ್ದಲ್ಲದೆ, ಮಹಿಳಾ ಸಮಾಜಕ್ಕೆ ಒಂದು ಪಾಠ ಆಗಿತ್ತು. ನಿಮ್ಮ ಇಚ್ಛಾಶಕ್ತಿ ದೃಢವಾಗಿದ್ದು, ಏನಾದರೂ ಸಾಧಿಸಬೇಕು ಎನ್ನುವ ಛಲವಿದ್ದರೆ, ಆಗ ಯಾವ ಅಡ್ಡಿ ಆತಂಕಗಳೂ ಹಿರಿದಲ್ಲ. ಹೆಣ್ಣು ದುರ್ಬಲಳೇ ಆಗಿದ್ದರೂ ಗೆದ್ದು ತೋರಿಸಬಹುದು ಎಂದು ಈ ಚಿತ್ರಗಳು ಸಾರುತ್ತವೆ. ಇಂಥದೇ ಒಂದು ಚಿತ್ರ `ಗುಂಜನ್ ಸಕ್ಸೇನಾ.’
ಇದೊಂದು ಬಯೋಪಿಕ್ ಚಿತ್ರ. ಗುಂಜನ್ ಸಕ್ಸೇನಾ ಎಂಬ ಅತಿ ಸಾಧಾರಣ ಹುಡುಗಿ, ಮುಂಬೈ ಮಹಾನಗರಿಗೆ ಬಂದು, ಹೇಗೋ ವಿದ್ಯಾಭ್ಯಾಸ ಕಲಿತು, ಮೊದಲ ಮಹಿಳಾ ಏರ್ ಪೋರ್ಸ್ ಪೈಲಟ್ ಆಗುವಲ್ಲಿ ಯಶಸ್ವಿಯಾಗಿದ್ದಾಳೆ. ಈಕೆ 1999ರ ಕಾರ್ಗಿಲ್ ಯುದ್ಧದಲ್ಲಿ ಯುದ್ಧ ವಿಮಾನದಲ್ಲಿ ಯಶಸ್ವೀ ಹಾರಾಟ ನಡೆಸಿದ ಮೊದಲಿಗಳಾಗುತ್ತಾಳೆ! ಈಕೆಯ ಪಾತ್ರ ನಿರ್ವಹಿಸಿದವಳು ಶ್ರೀದೇವಿಯ ಮಗಳು ಜಾಹ್ನವಿ ಕಪೂರ್, ತನ್ನ ಕೆರಿಯರ್ ನ 2ನೇ ಚಿತ್ರದಿಂದಲೇ ಅವಳು ಎಲ್ಲರ ಗಮನ ಸೆಳೆದಳು!
ಇದಾದ ನಂತರದ ಚಿತ್ರ `ಶಕುಂತಲಾ ದೇವಿ.’ ಅಮೆಝಾನ್ ಪ್ರೈಂ ವಿಡಿಯೋದಲ್ಲಿ ವಿದ್ಯಾಬಾಲನ್ ನಟಿಸಿದ, ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಗಣಿತಜ್ಞೆ ಶಕುಂತಲಾ ದೇವಿಯವರ ಬಯೋಪಿಕ್ ಚಿತ್ರವಿದು. ಅವರಂತೂ ಮಾನವ ಕಂಪ್ಯೂಟರ್ ಎಂದೇ ಗಣಿತದಲ್ಲಿ ಮಹಾರಥಿ ಎನಿಸಿ, ಗಿನಿಸ್ ದಾಖಲೆ ಸಾಧಿಸಿದ್ದರು. ವಿದ್ಯಾ ಅಂತೂ ಶಕುಂತಲಾರ ಪಾತ್ರದಲ್ಲಿ ಅಚ್ಚಳಿಯದೆ ಎಲ್ಲರ ಮನದಲ್ಲಿ ನಿಲ್ಲುತ್ತಾಳೆ. ಅದೇ ರೀತಿ ಬಿಪಾಶಾ ಬಸು ಎಷ್ಟೋ ವರ್ಷಗಳ ನಂತರ ಸೆಕೆಂಡ್ ಇನ್ನಿಂಗ್ಸ್ ಪಡೆದು, ವೆಬ್ ಸೀರೀಸ್ ನಲ್ಲಿ ಡೇಂಜರಸ್ ಚಿತ್ರದಲ್ಲಿ ಸ್ಕಾಟ್ ಲೆಂಡ್ ನ ಡಿಟೆಕ್ಟಿವ್ ನೇಹಾಳ ಪಾತ್ರದಲ್ಲಿ ಮಿಂಚಿದಳು. ಈಕೆಯ ಆ್ಯಕ್ಷನ್ ರೋಲ್ ಅದ್ಭುತ!
ಇದೇ ತರಹ ವೆಬ್ ಸೀರೀಸ್ ನಿಂದ ಮರುಹುಟ್ಟು ಪಡೆದವರೆಂದರೆ, ಮಾಜಿ ಭುವನಸುಂದರಿ ಸುಶ್ಮಿತಾ ಸೇನ್. ಈಕೆಯ `ಆರ್ಯಾ’ ಚಿತ್ರ ಅಪೂರ್ವ ಪ್ರಶಂಸೆ ಗಳಿಸಿತು. ಒಬ್ಬ ಸಾಧಾರಣ ಗೃಹಿಣಿ, ಕಾನೂನುಬದ್ಧವಾಗಿ ಹೋರಾಡಿ ಹೇಗೆ ತನ್ನ ಗಂಡನನ್ನು ಕಾಪಾಡಿಕೊಂಡಳು ಎಂಬುದೇ ಕಥಾಸಾರ. ಇಂಥ ಮತ್ತೊಂದು ಉದಾಹರಣೆ, ಪಾನಿಪೂರಿ ಭೇಲ್ ಪೂರಿ ಕರಿಶ್ಮಾ ಕಪೂರ್. ಮದುವೆ, ತಾಯ್ತತನ, ವಿಚ್ಛೇದನಗಳಿಂದ ಬೆಳ್ಳಿತೆರೆಯಿಂದ ದೂರ ಸರಿದಿದ್ದ ಈಕೆ, ಇದೀಗ `ಮೆಂಟಲ್ ಹುಡ್’ ವೆಬ್ ಚಿತ್ರದ ಮೂಲಕ 3 ಮಕ್ಕಳ ತಾಯಿಯಾಗಿ, ಅಪ್ಪಟ ಗೃಹಿಣಿಯಾದಳು ಸಮಾಜದಲ್ಲಿ ಹೇಗೆ ತನ್ನ ಐಡೆಂಟಿಟಿ ಪಡೆದುಕೊಳ್ಳಬಲ್ಲಳು ಎಂಬುದನ್ನು ನಿರೂಪಿಸಿದ್ದಾಳೆ.
OTT ಯಲ್ಲಿ ಗಮನಸೆಳೆದ ಇತರ ಮಹಿಳಾ ಪ್ರಧಾನ ಚಿತ್ರಗಳು :
ಅಸಲಿ ಜೀವನದಲ್ಲಂತೂ ಎಲ್ಲೆಲ್ಲೂ ಹೆಣ್ಣಿನ ಅತ್ಯಾಚಾರ, ಕೊಲೆಯಂಥ ಹೀನಸುದ್ದಿಗಳೇ ಕೇಳಿಬರುತ್ತಿವೆ. ಸಿನಿಮಾ ಸಮಾಜದ ಕನ್ನಡಿ ಆಗಿರುವುದರಿಂದ, ಸಾವಿರ ಪ್ರಯತ್ನಗಳನ್ನು ಮಾಡಿ ಹೆಣ್ಣು ಸಮಾಜದಲ್ಲಿ ತನ್ನದೇ ಐಡೆಂಟಿಟಿ ಸ್ಥಾಪಿಸಿಕೊಳ್ಳುವ ಚಿತ್ರಗಳು ಬೇಕಾದಷ್ಟು ಬರುತ್ತಲಿವೆ. ಸಿನಿಮಾ ಅಂದ್ರೆ ಕೇವಲ ಮನಸ್ಸಿಗೆ ಹಿತ ನೀಡುವಂಥ ಉತ್ತಮ ಮನರಂಜನೆಯನ್ನಷ್ಟೇ ಒದಗಿಸುವ ವೇದಿಕೆ ಎಂದುಕೊಳ್ಳಬೇಡಿ. ಅದರಲ್ಲೂ OTT ಸರಣಿಯ ಚಿತ್ರಗಳಂತೂ, ನಾವು ಮಾತನಾಡಲಿಕ್ಕೆ ಹೆದರುವಂಥ ಮಾಫಿಯಾ ಹಿನ್ನೆಲೆಯನ್ನು ಹೊಂದಿರುತ್ತವೆ. ಉದಾ : ನೆಟ್ ಫ್ಲಿಕ್ಸ್ ನ `ಡೇಲಿ ಕ್ರೈಂ’ ಚಿತ್ರ ನಿರ್ಭಯಾ ಕಾಂಡವನ್ನಾಧರಿಸಿದೆ. ಈ ಚಿತ್ರದಲ್ಲಿ ಶೈಫಾಲಿಕಾ ಲೇಡಿ ಇನ್ ಸ್ಪೆಕ್ಟರ್ ವರ್ತಿಕಾಳಾಗಿ ಎಷ್ಟು ಪರ್ಫೆಕ್ಟ್ ಆಗಿ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಹೊಂದಿದ್ದಾಳೆಂದರೆ, ವೀಕ್ಷಕರು ಬೆಚ್ಚಿಬೀಳುವಂತಿದೆ! ಇಲ್ಲಿ ಶೈಫಾಲಿ ತನ್ನ ಅಂತರ್ಮನದ ದ್ವಂದ್ವವನ್ನು ಡೈಲಾಗ್ ಮೂಲಕವಲ್ಲ, ತನ್ನ ಹಾವಭಾವ ಕಂಗಳ ಮೂಲಕವೇ ಹೇಳುತ್ತಾ ಹೋಗುತ್ತಾಳೆ.
ಇದೇ ತರಹ ಬಾಲಾಜಿ ಪ್ರೊಡಕ್ಷನ್ಸ್ `ಟೆಸ್ಟ್ ಕೇನ್’ ಚಿತ್ರದಲ್ಲಿ ಶಿಖಾ ಪಾತ್ರ ವಹಿಸಿದ ನಮ್ರತಾ ಕೌರ್, ಮೊದಲ ಮಹಿಳಾ ಕಮಾಂಡೋ ಪಾತ್ರದಲ್ಲಿ ಸಜೀವವಾಗಿ ನಟಿಸಿದ್ದಾಳೆ ಎನ್ನಬಹುದು. ಪುರುಷಪ್ರಧಾನ ಸಿನಿಮಾ ಜಗತ್ತಿಗೆ ಇದು ಸವಾಲಿನ ಪಾತ್ರ. ವೆಬ್ ಸೀರೀಸ್‌ನ `ಫಾರ್ ಮೋರ್ ಶಾರ್ಟ್ಸ್’ ಚಿತ್ರವನ್ನೂ ವೀಕ್ಷಕರು ಬಹಳ ಮೆಚ್ಚಿದರು. ಇಲ್ಲಿನ ಕಥೆ ನಾಲ್ವರು ಉದ್ಯೋಗಸ್ಥ ವನಿತೆಯರ ಬವಣೆಯನ್ನಾಧರಿಸಿದೆ. ಇವರುಗಳ ವಿಚಾರ ಸ್ವತಂತ್ರ ಮಹಿಳೆಯ ಆಧುನಿಕ ನಿಲುವಿನದು. ಈ ನಾಲ್ವರು ಹೆಂಗಸರೂ ಆತ್ಮವಿಶ್ವಾಸದಿಂದ ತುಂಬಿದ್ದು, ತಮ್ಮ ತಪ್ಪುಗಳನ್ನು ಮುಚ್ಚಿಡುವ ಬದಲು ಒಪ್ಪಿಕೊಂಡು, ನಿರ್ಭಯವಾಗಿ ಅದರೊಂದಿಗೆ ಬದುಕು ಸಾಗಿಸುತ್ತಾರೆ.
`ಕೋಡ್’ ಮತ್ತೊಂದು ವೆಬ್ ಸೀರೀಸ್ ಚಿತ್ರವಾಗಿತ್ತು. ಭಾರತೀಯ ಆರ್ಮಿಯ ವಕೀಲೆ ಮೋನಾ ಮೆಹ್ರಾಳ ಕಥೆ ಹೇಳುತ್ತದೆ. ಒಬ್ಬ ಆರ್ಮಿ ಆಫೀಸರ್ ನ ಮರ್ಡರ್ ಮಿಸ್ಟ್ರಿ ಸಲಾಮ್ ಮಾಡುವುದೇ ಇವಳ ಗುರಿ. ಈ ಕೇಸಿನ ಪ್ರತ್ಯಕ್ಷ ಸಾಕ್ಷಿ ಸಹ ಕೊಲೆಯಾಗಿರುತ್ತಾನೆ. ಈ ವಕೀಲೆ ಮಿಲಿಟರಿ ಎನ್ ಕೌಂಟರ್ ಕೇಸ್ ನ್ನು ಪರಿಹರಿಸುವುದಷ್ಟೇ ಅಲ್ಲ, ಎಷ್ಟೋ ಅತಿ ಭಯಂಕರ ವಿಲನ್ ಗಳನ್ನು ಹಿಡಿದುಹಾಕುತ್ತಾಳೆ. ಈ ಮಿಲಿಟರಿ ಎನ್ ಕೌಂಟರ್ ನ್ನು ಪರಿಹರಿಸುವ ವಕೀಲೆಯ ಪಾತ್ರದಲ್ಲಿ ಕಿರುತೆರೆ ನಟಿ ಜೆನಿಫರ್ ವಿಂಗೆಟ್ ಅದ್ಭುತವಾಗಿ ನಟಿಸಿದ್ದಾಳೆ.
ನಟಿ ಮಾತ್ರವಲ್ಲದೆ ನಿರ್ಮಾಪಕಿಯೂ ಆಗಿರುವ ಅನುಷ್ಕಾ ಶರ್ಮ, ನಿರ್ದೇಶಕ ಅನ್ವಿತಾ ದತ್ತಾರೊಂದಿಗೆ ಕೂಡಿ ಮಾಡಿದ `ಬುಲ್ ಬುಲ್’ ಚಿತ್ರದಲ್ಲಿ ಒಬ್ಬ ಸಾಧಾರಣ ಹುಡುಗಿ 5 ವರ್ಷದಲ್ಲೇ ಬಾಲ್ಯ ವಿವಾಹದ ಶಾಪಕ್ಕೇ ತುತ್ತಾಗಿ ಒಬ್ಬ ಪ್ರೌಢ ಜಮೀನ್ದಾರನ ಕೈ ಹಿಡಿಯುತ್ತಾಳೆ. ಮುಂದೆ ಪ್ರಾಪ್ತ ವಯಸ್ಕಳಾದಾಗ ತನ್ನದೇ ಸಮಯಸ್ಸಿನ ಮೈದುನನ್ನೇ ಪ್ರೇಮಿಸುತ್ತಾಳೆ. ಅವನು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋದಾಗ, ಮರಳಲು 20 ವರ್ಷ ಆಗುತ್ತದೆ. ಅಷ್ಟು ಹೊತ್ತಿಗೆ ಇವಳು ಪ್ರೌಢ ಜಮೀನ್ದಾರಿಣಿ ಆಗಿರುತ್ತಾಳೆ, ಗತಿಸಿದ ಪತಿಯ ಜವಾಬ್ದಾರಿಯನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಾಳೆ. ಮುಂದಿನ ಅವಳ ಜೀವನದಲ್ಲಿ ನಾನಾ ಬದಲಾಣೆಗಳಾಗುತ್ತವೆ. ಈ ಚಿತ್ರದ ನಾಯಕಿ ಬುಲ್ ಬುಲ್ ಪಾತ್ರಧಾರಿ ತೃಪ್ತಿ ಧಿಮಾರಿ, ಬಲು ಅಚ್ಚುಕಟ್ಟಾಗಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ. ನೆಟ್ ಫ್ಲಿಕ್ಸ್ ನಲ್ಲಿ `ಬುಲ್ ಬುಲ್’ ಚಿತ್ರ ಅಪಾರ ಯಶಸ್ವಿ ಎನಿಸಿದೆ.
ಇರೋಸ್ ನೌನಲ್ಲಿ ಪ್ರದರ್ಶಿತಗೊಂಡ `ಫ್ಲಾಶ್’ ಚಿತ್ರ ಹುಡುಗಿಯರ ಸಾಗಾಣಿಕೆ, ಮಾರಾಟದ ಕಥೆ ಹೊಂದಿದೆ. ಈ ವೆಬ್ ಸೀರೀಸ್ ನಲ್ಲಿ ಲೇಡಿ ಇನ್ ಸ್ಪೆಕ್ಟರ್ ರಾಧಾ ತನ್ನ ಬಹಾದ್ದೂರ್ ಗುಣಗಳಿಂದ ಗಮನಸೆಳೆಯುತ್ತಾಳೆ. ಇವಳು ಇಂಥ ರಾಕೆಟ್ ನಡೆಸುವವರ ಬಂಡಾಳ ಬಯಲಿಗೆಳೆದು ಹೆಣ್ಣುಮಕ್ಕಳ ಜೀವ ಉಳಿಸುತ್ತಾಳೆ. ದೇಹ ದಂಧೆಯ ವಿರೋಧದ ಈ ಚಿತ್ರ ಮುಂಬೈನ ರೆಡ್ ಲೈಟ್ ಏರಿಯಾದ ಕೆಂಗಣ್ಣಿಗೆ ಗುರಿಯಾಯಿತು. ರಾಧಾಳ ಪಾತ್ರದಲ್ಲಿ ಮಿಂಚಿದಳು ಸ್ವರಾ ಭಾಸ್ಕರ್. ಮೊದಲಿನಿಂದಲೂ ತನ್ನ ಸಶಕ್ತ ನಟನೆಗಾಗಿ ಹೆಸರು ಗಳಿಸಿದಳು. ಈ ವೆಬ್ ಸೀರೀಸ್ ನಲ್ಲಿ ಈಕೆ ಸಖತ್ತಾಗಿ ಮಿಂಚಿದ್ದಾಳೆ.
ಅಮೆಝಾನ್ ಪ್ರೈಂ ಸೀರೀಸ್ ನ `ಮೇಡ್ ಇನ್ ಹೆವನ್’ ವೀಕ್ಷಕರ ಅಪಾರ ಮೆಚ್ಚುಗೆ ಗಳಿಸಿತು. ಈ ಸೀರೀಸ್ ನ ಕಥೆ ಒಬ್ಬ ವೆಡ್ಡಿಂಗ್ ಪ್ಲಾನರ್ ಳ ಕುರಿತಾದುದು. ತನ್ನ ಕೆಲಸಕ್ಕೆ ನ್ಯಾಯ ಒದಗಿಸಲು ಅವಳು ಏನು ಮಾಡಲಿಕ್ಕೂ ತಯಾರು. ಇದರ ವಿಶೇಷ ಎಂದರೆ ನಿರ್ಮಾಪಕಿಯರು ಮತ್ತು ನಿರ್ದೇಶಕಿಯರೆಲ್ಲ ಮಹಿಳೆಯರೇ. `ಮೇಡ್ ಇನ್ ಹೆವನ್’ನ ಮುಖ್ಯ ಪಾತ್ರಧಾರಿ ತಾರಾಳ ಪಾತ್ರ ನಿರ್ವಹಿಸಿರುವಳು ಮೋಬಿತಾ ಧೂಲಿಪಾಲಾ. ಈ ಸೀರೀಸ್ ಸಾಕಷ್ಟು ಯಶಸ್ವಿಯಾಯಿತು.
ಸ್ತ್ರೀಪ್ರಧಾನ ಚಿತ್ರಗಳು
ವೆಬ್ ಸೀರೀಸ್ ಜೊತೆಯಲ್ಲೇ ಮಹಿಳಾ ನಿರ್ಮಾಪಕಿ, ನಿರ್ದೇಶಕಿ, ಲೇಖಕಿಯರ ಹೆಚ್ಚುತ್ತಿರುವ ವರ್ಚಸ್ಸು :
ಈ ಲಾಕ್ ಡೌನ್, ಕೊರೋನಾ ಕಾಲದಲ್ಲಿ ಎಲ್ಲೆಡೆ ಉದ್ಯಮ ಸ್ಥಗಿತಗೊಂಡಾಗ OTT ಮಾತ್ರ ಮನರಂಜನೆ ಹೆಸರಿನಲ್ಲಿ ಶುಕ್ಲಪಕ್ಷದ ಚಂದ್ರನಂತೆ ಹಿಗ್ಗುತ್ತಿದೆ. ನಂಬಲರ್ಹ ಸುದ್ದಿಮೂಲಗಳ ಪ್ರಕಾರ, ಎಷ್ಟೋ ನಿರ್ಮಾಪಕರೇ ಇದಕ್ಕಾಗಿ 1500-2000 ಕೋಟಿ ಹೂಡಲಿಕ್ಕೂ ತಯಾರು! ಹಿಂದೆಲ್ಲ ಕೇವಲ ಒಂದು ಸೀಮಿತ ವರ್ಗ ಈ ಪ್ಲಾರ್ಟ್ ಫಾರ್ಮ್ ಗೆ ಮನ್ನಣೆ ನೀಡುತ್ತಿತ್ತು. ಕೊರೋನಾ ಕೃಪೆಯಿಂದಾಗಿ, ಥಿಯೇಟರ್ ಹೋಗಲಾರದ ಬಹುತೇಕರು ಇಂದು ಇದಕ್ಕೆ ಶರಣಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಸ್ತ್ರೀಪ್ರಧಾನ ಚಿತ್ರಗಳು, ವೆಬ್ ಸೀರೀಸ್ ಸಖತ್ ಮಿಂಚುತ್ತಿವೆ. ಈ ನಿಟ್ಟಿನಲ್ಲಿ ಏಕ್ತಾ ಕಪೂರ್, ಜೋಯಾ ಅಖ್ತರ್, ಅನುಷ್ಕಾ ಶರ್ಮಾರಂಥ ನಿರ್ಮಾಪಕಿಯರು ತಮ್ಮ ಮಹಿಳಾ ಪ್ರಧಾನ ವೆಬ್ ಸೀರೀಸ್ ನ್ನು ಧಡಧಡನೆ OTTಗೆ ಇಳಿಸುತ್ತಿದ್ದಾರೆ. ಹಾಗೆಯೇ `ಫ್ಲಾಶ್’ ಲೇಖಕಿ ಪೂಜಾ ಶೃತಿ, `ಮೇಡ್ ಇನ್ ಹೆವನ್’ನ ರಿಯೀ ಕಾಗತಿ, ನಿರ್ದೇಶಕಿಯರಾದ ನಿತ್ಯಾ ಮೆಹ್ರಾ, ಅಲಂಕೃತಾ ಶ್ರೀವಾಸ್ತವ್, `ಬುಲ್ ಬುಲ್’ನ ಅನ್ವಿತ್ತಾ ದತ್ತಾ `ಶಕುಂತಲಾ ದೇವಿ’ಯ ಅನು ಮೆನನ್ ಹಾಗೂ ಸಂಭಾಷಣಾಗಾರ್ತಿ ಇಶಿತಾ ಮೊಯಿತ್ತಾ, `ಕೋಡ್’ನ ಶುಭಾ ಚಟರ್ಜಿ ತಮ್ಮ ಹೃದಯಸ್ಪರ್ಶಿ ಕಥೆಗಳಿಂದ ವೀಕ್ಷಕರ ಮನಸೂರೆಗೊಳ್ಳುತ್ತಿದ್ದಾರೆ.
ಮುಖ್ಯವಾಗಿ OTT ಪ್ಲಾಟ್ ಫಾರ್ಮಿನಲ್ಲಿ ಪ್ರದರ್ಶಿತಗೊಳ್ಳುತ್ತಿರುವ ಮಹಿಳಾಪ್ರಧಾನ ಚಿತ್ರಗಳು, ವೆಬ್ ಸೀರೀಸ್ ಗಳು, ಒಂದು ಹೊಸ ಇತಿಹಾಸವನ್ನೇ ಬರೆದಿವೆ. ಇದರಿಂದ ಸ್ಪಷ್ಟ ಆಗುವುದೆಂದರೆ, ದೈಹಿಕವಾಗಿ ಹೆಂಗಸರು ತುಸು ದುರ್ಬಲರಾದರೂ, ಆಧುನಿಕ ಹೆಂಗಸರಾಗಿ ಅಳುತ್ತಾ ಅಬಲೆಯರಾಗಿ ಉಳಿದಿಲ್ಲ, ಸಬಲೆಯರಾಗಿ ಮುನ್ನುಗ್ಗುತ್ತಿದ್ದಾರೆ! ಇವರು ಎಂದೂ ಎದೆಗುಂದುವವರಲ್ಲ, ಆತ್ಮವಿಶ್ವಾಸದಿಂದ ಮುನ್ನಡೆಯುವವರು!
– ಆರತಿ