ದೈನಂದಿನದ ಚಟುವಟಿಗಳಿಂದ ಬೇಸತ್ತವರಿಗೆ ಮುದ ನೀಡಲು ನಮ್ಮ ಹಿರಿಯರು ಹಬ್ಬದ ಆಚರಣೆಗಳನ್ನು ರೂಢಿಗೆ ತಂದರು. ಕೇವಲ ಮಾನವರು ಮಾತ್ರವಲ್ಲದೇ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಸಾಕು ಪ್ರಾಣಿಗಳಿಗೂ ತುಸು ನೆಮ್ಮದಿ ಮತ್ತು ಸಂತೋಷವನ್ನು ನೀಡಲು ಕೆಲವು ವಿಶೇಷ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೆ ಪ್ರಕೃತಿ, ಪ್ರಾಣಿ, ಪಶು ಮತ್ತು ಮಾನವವರು ಎಲ್ಲರೂ ಕೂಡಿ ಸಂತಸದಿಂದ ವೈವಿದ್ಯಮಯವಾಗಿ ಸಂಭ್ರಮಿಸುವ ಹಬ್ಬವೇ ಮಕರ ಸಂಕ್ರಾಂತಿ. ಇದನ್ನು ಸುಗ್ಗಿಯ ಹಬ್ಬವೆಂದೂ ಕರೆಯಲಾಗುತ್ತದೆ.

13

ಇಡೀ ಭೂಸಂಕುಲದ ಎಲ್ಲಾ ಚಟುವಟಿಕೆಗಳು ಸೂರ್ಯ ಮತ್ತು ಚಂದ್ರನ ಮೇಲೆಯೇ ಅವಲಂಭಿತವಾಗಿದೆ. ಪ್ರತಿ ಸಂವತ್ಸರ(ವರ್ಷ)ವನ್ನು ಎರಡು ಅಯನಗಳಾಗಿ ವಿಂಗಡಿಸಲಾಗಿದೆ.ಉತ್ತರಾಯಣ ( ಪುಷ್ಯಮಾಸದಿಂದ ಆಷಾಢಮಾಸದವರೆಗೆ) ಮತ್ತು ದಕ್ಷಿಣಾಯನ ( ಆಷಾಡ ಮಾಸದಿಂದ ಪುಷ್ಯಮಾಸದವರೆಗೆ)ಹೀಗೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಕಾಲವನ್ನು ಮಕರ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನು ಪ್ರತೀ ರಾಶಿಯಲ್ಲಿ ಒಂದೊಂದು ತಿಂಗಳ ಕಾಲವಿದ್ದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ. ಸಾಧಾರಣವಾಗಿ ಪ್ರತೀ ವರ್ಷ ಜನವರಿ 14 ಅಥವಾ 15ರಂದು ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ಮೂಲಕ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುವ ಕಾರಣ, ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ.

1

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿರುವ ಕಾರಣ, ಈ ಸಮಯದಲ್ಲಿ ಮೃತರಾದವರು ಸೀದಾ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನೂ ಸಹಾ ಭಗದ್ಗೀತೆಯಲ್ಲಿ ಆಯಣಗಳಲ್ಲಿ ಉತ್ತರಾಯಣವೇ ಅತಿ ಶ್ರೇಷ್ಠ ಎಂದಿದ್ದಾನೆ. ಹಾಗಾಗಿಯೇ ಕುರುಕ್ಷೇತ್ರದ ಯುದ್ಧದಲ್ಲಿ ಭೀಷ್ಮ ಪಿತಾಮಹರು ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಇಚ್ಛಿಸದೇ, ಉತ್ತರಾಯಣದ ಪುಣ್ಯಕಾಲದವರೆಗೂ ಅರ್ಜುನ ನಿರ್ಮಿಸಿದ ಬಾಣಗಳ ಮಂಚದ ಮೇಲೆ ದಿನಗಳನ್ನು ಕಳೆದು ಅಷ್ಟಮಿ ದಿನದಂದು ಇಚ್ಛಾ ಮರಣಿಯಾಗುತ್ತಾರೆ.

ಇನ್ನು ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣ ಕಾಲದಲ್ಲಿಯೇ. ಹಾಗಾಗಿ ಬಹುತೇಕ ವಿವಾಹಗಳು, ನಾಮಕರಣ, ಚೌಲಉಪನಯನ ಮತ್ತು ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು ಉತ್ತರಾಯಣಕಾಲದಲ್ಲಿ ಹೆಚ್ಚಾಗಿ ಮಾಡಲ್ಪಡುತ್ತದೆ. ಮಾಘ ಮಾಸದಲ್ಲಿ ನದಿಗಳಲ್ಲಿ ಸ್ನಾನ ಮಾಡಿ ಗಂಗೆ ಪೂಜೆ ಮಾಡಿದರೂ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನು ಹಳ್ಳಿಗಾಡಿನಲ್ಲಿ ಬೇರೆಲ್ಲಾ ಹಬ್ಬಗಳಿಗಿಂತ ಈ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಆಗ ತಾನೆ ಬೆಳೆದ ಫಸಲುಗಳೆಲ್ಲವನ್ನೂ ಕಟಾವು ಮಾಡಿ ಕಣಜಗಳಲ್ಲಿ ರಾಶಿ ರಾಶಿಯಾಗಿ ತಂಬಿರುವ ಪರಿಣಾಮವಾಗಿ ಇದನ್ನು ಸುಗ್ಗಿ ಹಬ್ಬ ಎಂದೂ ಕರೆಯುತ್ತಾರೆ. ಸುಗ್ಗಿಯು ಬಂದಿತು, ಹಿಗ್ಗನು ತಂದಿತು, ನಮ್ಮಯ ನಾಡಿನ ಜನಕೆಲ್ಲ ಎಂಬ ಜನಪದ ಹಾಡು ಬಹಳ ಪ್ರಸಿದ್ಧವಾಗಿದೆ.

2

ಸಂಕ್ರಾಂತಿ ಹಬ್ಬದ ದಿನದಂದು ಬೆಳ್ಳಂಬೆಳಗ್ಗೆಯೇ ಮನೆಯವರರೆಲ್ಲಾ ಎದ್ದು ಎಣ್ಣೆಯ ಅಭ್ಯಂಜನ ಮಾಡಿ, ಮನೆಯ ಹೆಣ್ಣು ಮಕ್ಕಳು ಮನೆಯ ಮುಂದೆ ದೊದ್ಡ ದೊಡ್ಡದಾದ ರಂಗೋಲಿಗಳನ್ನು ಇಟ್ಟು ಮನಯನ್ನು ಸಿಂಗರಿಸಿದರೆ, ಮನೆಯ ಗಂಡಸರು ಮನೆಯಲ್ಲಿರುವ ದನಕರುಗಳಿಗೆ ಸ್ನಾನ ಮಾಡಿಸಿ, ಕೊಟ್ಟಿಗೆ ಶುಚಿಗೊಳಿಸಿ ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಕಣಜದಲ್ಲಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಇನ್ನು ಮಕ್ಕಳು ಹೊಸಬಟ್ಟೆ ತೊಟ್ಟು ಅದರಲ್ಲೂ ಹೆಣ್ಣುಮಕ್ಕಳು ಲಂಗ ರವಿಕೆ ತೊಟ್ಟು, ತಲೆಗೆ ಬೈತಲೆಬಟ್ಟು , ಮುಡಿ ತುಂಬಾ ಹೂ ಮುಡಿದು ವೈಯಾರವಾಗಿ ಓಡಾಡುವುದನ್ನು ವರ್ಣಿಸುವುದಕ್ಕಿಂತ ನೋಡಿ ನಲಿಯುವುದಕ್ಕೇ ಆನಂದ.

3

ಈ ಹಬ್ಬಕ್ಕೆ ವಿಶೇಷವಾಗಿ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಮತ್ತು ಕಡಲೇಕಾಯಿ ಬೀಜದ ಮಿಶ್ರಣದ ಜೊತೆಗೆ ಸಕ್ಕರೆಯ ಪಾಕದಿಂದ ತಯಾರಿಸಿದ ಸಕ್ಕರೇ ಅಚ್ಚು, ಮತ್ತು ಕಬ್ಬನ್ನು ಇಟ್ಟು ಪೂಜಿಸುತ್ತಾರೆ. ಈ ಹಬ್ಬಕ್ಕೆ ತುಪ್ಪಾ, ಅಕ್ಕಿ, ಹೆಸರುಬೇಳೆ, ಜೀರಿಗೆ, ಮೆಣಸು, ಹಸೀ ಮೆಣಸಿನಕಾಯಿ, ಅರಿಷಿನ ತೆಂಗಿನ ಕಾಯಿ ಮತ್ತು ಬೆಲ್ಲದ ಮಿಶ್ರಣದಿಂದ ಮಾಡಿದ ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)ಯನ್ನು ನೈವೇದ್ಯ ಮಾಡಿ, ಮನೆಯ ಹಿರಿಯರು ಎಲ್ಲರಿಗೂ ಎಳ್ಳು-ಬೆಲ್ಲದ ಮಿಶ್ರಣವನ್ನು ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೇ ಮಾತನಾಡೋಣ ಎಂದು ಹೇಳುತ್ತಾ ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ.

5

ಸಾಧಾರಣವಾಗಿ ಶುಭಸಮಾರಂಭಗಳಲ್ಲಿ ಎಳ್ಳಿನ ಬಳಕೆ ಇರುವುದಿಲ್ಲ, ಎಳ್ಳನ್ನು ಅಪರ ಕರ್ಮಗಳಲ್ಲಿ ತರ್ಪಣ ಬಿಡುವುದಕ್ಕೆ ಮತ್ತು ಶನಿ ಗ್ರಹದ ದೋಷ ಪರಿಹಾರಕ್ಕಾಗಿ ಉಪಯೋಗಿಸುವುದು ರೂಡಿಯಲ್ಲಿರುವ ಕಾರಣ ಸಾಮಾನ್ಯ ದಿನಗಳಂದು ಎಳ್ಳಿನ ದಾನವನ್ನು ಸ್ವೀಕರಿಸಲು ಹಿಂದು ಮುಂದು ನೋಡುತ್ತಾರೆ. ಆದರೆ ಸಂಕ್ರಾಂತಿಯಂದು ಮಾತ್ರ ಎಳ್ಳು ಬೀರುವುದೇ ಸಂಪ್ರದಾಯ. ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಇದು ಚಳಿಗಾಲವಾದ್ದರಿಂದ ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಮಾಡುವುದಲ್ಲದೇ ಚರ್ಮದ ಕಾಂತಿಯನ್ನೂ ಹೆಚ್ಚುತ್ತದೆ. ಇನ್ನು ಕೊಬ್ಬರಿ‌ ಮತ್ತು ಕಡಲೇಕಾಯಿ ಬೀಜವೂ ಸಹಾ ಎಣ್ಣೆ ಅಂಶದ ವಸ್ತುಗಳಾಗಿದ್ದು ಅವುಗಳ‌ಜೊತೆ ಸರಿದೂಗಿಸಲು ಹುರಿಗಡಲೆ ಮತ್ತು ಬೆಲ್ಲವನ್ನು ಬೆರೆಸಲಾಗಿರುತ್ತದೆ. ಇದೇ ರೀತಿ ಅಕ್ಕಿ, ಹೆಸರುಬೇಳೆ, ಜೀರಿಗೆ ಮತ್ತು ಮೆಣಸು ಮಿಶ್ರಿತ ಹುಗ್ಗಿಯೂ ಕೂಡಾ ಇದೇ ದೇಹಕ್ಕೆ ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಹೆಣ್ಣು ಮಕ್ಕಳು ನೆರೆಹೊರೆಯವರೊಂದಿಗೆ ಎಳ್ಳು ಬೆಲ್ಲ, ಕಬ್ಬು, ಬಾಳೆಹಣ್ಣುಗಳನ್ನು ಪರಸ್ಪರ ಎಳ್ಳುಬೆಲ್ಲ ಬೀರುವ ( ವಿನಿಮಯ ಮಾಡಿಕೊಳ್ಳುವ) ಸಂಪ್ರದಾಯ ರೂಢಿಯಲ್ಲಿದೆ.

ಇದು ಮಾಗಿಯ ಕಾಲವಾದ್ದರಿಂದ ಅಗ ತಾನೆ ಸೊಗಡಿನ ಮಣಿ ಅವರೇಕಾಯಿಯನ್ನು ತಂದು ಮಧ್ಯಾಹ್ನದ ಅಡುಗೆಯಲ್ಲಿ ಬಹತೇಕ ಅವರೇಕಾಯಿ ಮಯವಾಗಿರುತ್ತದೆ, ಅವರೇಕಾಯಿ-ಮೆಣಸು ಮಿಶ್ರಿತ ಉದ್ದಿನ ಕಡುಬು (ಅವರೇಕಾಯಿ ಇಡ್ಲಿ), ಅವರೇಕಾಯಿ ಹುಳಿ ಇಲ್ಲವೇ ಹಿದುಕಿದ ಆವರೇಕಾಯಿ ಕೂಟು, ಅವರೇಕಾಯಿ-ಕುಂಬಳಕಾಯಿ ಪಲ್ಯ ಇಲ್ಲವೇ ತೊವ್ವೆ, ಸಿಹಿಗೆಣಸಿನ ಪಲ್ಯದೊಂದಿಗೆ ಮನೆಯವರೆಲ್ಲರೂ ಸಂತೃಪ್ತಿಯಿಂದ ಊಟದ ಶಾಸ್ತ್ರ ಮುಗಿಸಿ ಭುಕ್ತಾಯಾಸ ಪರಿಹರಿಸಿಕೊಳ್ಳಲು ಸಣ್ಣದಾದ ನಿದ್ದೆಯನ್ನು ಮಾಡಿದರೆ ಅರ್ಧ ಸಂಕ್ರಾಂತಿ ಮುಗಿದ ಹಾಗೆಯೇ.

4

ಇನ್ನು ಸಂಜೆ ಹೊತ್ತು ಹೆಣ್ಣು ಮಕ್ಕಳು ಮತ್ತೊಮ್ಮೆ ಸಿಂಗರಿಸಿಕೊಂಡು ಎಳ್ಳು ಬೀರುವುದದನ್ನು ಮುಂದುವರೆಸಿದರೆ, ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮೊದಲ ವರ್ಷ ಮುತ್ತೈದೆಯರಿಗೆ ಐದು ಬಾಳೆಹಣ್ಣುಗಳನ್ನು ಕೊಟ್ಟು ಮುಂದಿನ ಐದು ವರ್ಷಗಳ ಕಾಲ ಕ್ರಮೇಣವಾಗಿ ಐದರಿಂದ ಹೆಚ್ಚಿಸಿಕೊಂಡು, ಐದನೇ ವರ್ಷಕ್ಕೆ ಇಪ್ಪತ್ತೈದು ಬಾಳೇ ಹಣ್ಣುಗಳನ್ನು ಬಾಗಿಣವಾಗಿ ಕೊಡುವ ಮೂಲಕ ಮುಕ್ತಾಯ ಮಾಡುತ್ತಾರೆ, ಗಂಡಸರುಗಳು ತಮ್ಮ ತಮ್ಮ ದನಕರುಗಳಿಗೆ ನಾನಾ ರೀತಿಯ ಹೂಗಳಿಂದ ಸಿಂಗಾರ ಮಾಡಿ, ಕೊರಳಿಗೆ ಮತ್ತು ಕಾಲ್ಗಳಿಗೆ ಗೆಜ್ಜೆ ಕಟ್ಟಿ ಕೆಲವರು ಅವುಗಳ ಕೋಡುಗಳಿಗೆ ಬಣ್ಣ ಬಳಿದು, ಉಸುರುಬುಡ್ಡೆ(ಬೆಲೂನ್)ಗಳನ್ನು ಕಟ್ಟಿ ಕತ್ತಲಾದ ಮೇಲೆ ಊರಿನ ಅರಳೀ ಕಟ್ಟೆಯ ಮುಂದೆ ದೊಡ್ಡದಾದ ಬೆಂಕಿಯನ್ನು ಹಾಕಿ, ಬೆಂಕಿಯ ಮೇಲೆ ತಮ್ಮ ಹಸುಗಳನ್ನು ಹಾರಿಸುತ್ತಾರೆ. ರೀತಿಯಾಗಿ ಕಿಚ್ಚು ಹಾಯಿಸುವುದನ್ನು ನೋಡಲೆಂದೇ, ಊರಿನ ಹಿರಿ ಕಿರಿಯರೆಲ್ಲಾ ಸಂಭ್ರಮ ಸಡಗರದಿಂದ ವರ್ಷವಿಡೀ ಕಾಯುತ್ತಿರುತ್ತಾರೆ, ಈ ರೀತಿಯಾಗಿ ಕಿಚ್ಚಾಯಿಸುವುದರಿಂದ ಹಸುಗಳ ಮೇಲಿರಬಹುದಾದ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿಕೀಟಗಳು ಬೆಂಕಿಯ ಶಾಖಕ್ಕೆ ನಾಶವಾಗುತ್ತದೆ ಎನ್ನುವುದು ಇದರ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ.

11

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವೂ ಇದೆ ಈ ರೀತಿಯಾಗಿ ಕರ್ನಾಟಕ ಮತ್ತು ಆಂದ್ರ ಪ್ರದೇಶಗಳಲ್ಲಿ ಆಚರಿಸುತ್ತಾರೆ.

10

ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂಬ ಹೆಸರಿನಿಂದ ಸಂಭ್ರಮದಿಂದ ಹಬ್ಬದ ಹಿಂದಿನ ದಿನ ಭೋಗಿ ಎಂಬ ಹೆಸರಿನಲ್ಲಿ ಮನೆಯಲ್ಲಿದ್ದ ಎಲ್ಲಾ ಕಸಕಡ್ಡಿಗಳನ್ನು ಮನೆಯ ಮುಂದೆ ಹಾಕಿ ಅದಕ್ಕೆ ಬೆಂಕಿ ಇಟ್ಟು ಮನೆಯ ಸುತ್ತಮುತ್ತ ಸ್ವಚ್ಚಗೊಳಿಸುತ್ತಾರೆ ಹಬ್ಬದ ದಿನವನ್ನು ಪೊಂಗಲ್ ಎಂಬ ಹೆಸರಿನಲ್ಲಿ ಸಮೃದ್ಧಿಯ ಸಂಕೇತವಾಗಿ ಹಾಲಿನ ಜೊತೆಗೆ ಬೆಲ್ಲ ಸೇರಿಸಿ ಕುದಿಸಿ ಉಕ್ಕಿಸಲಾಗುತ್ತದೆ ಮತ್ತು ಹಬ್ಬದ ಮಾರನೆಯ ದಿನ ಮಾಟ್ಟು ಪೊಂಗಲ್ ಎಂಬ ಹೆಸರಿನಲ್ಲಿ ಗೋಪೂಜೆ ಮಾಡುತ್ತಾರೆ

8

ಹಲವಾರು ಕಡೆ ಬಾರಿ ಅಪಾಯಕಾರಿ ಮತ್ತು ಸಾಹಸಮಯವಾದ ಜಲ್ಲಿಕಟ್ಟು ಎಂಬ ಹೆಸರಿನಲ್ಲಿ ಗೂಳಿಯನ್ನು ಪಳಗಿಸುವ ಆಟವಾಡಿಸುತ್ತಾರೆ. ಈ ಆಟವಾಡುವಾಗ, ಪ್ರಾಣಿ ಹಿಂಸೆಯಾಗುವುದಲ್ಲದೇ ಜನರಿಗೂ ಗಾಯವಾಗುವ ಕಾರಣ ಕೆಲಕಾಲ ಇದನ್ನು ನಿಷೇಧಿಸಲಾಗಿದ್ದರೂ ಈಗ ಸಾಂಕೇತಿಕವಾಗಿ ಆಚರಿಸಲು ನ್ಯಾಯಾಲಯಗಳು ಅನುಮತಿ ನೀಡಿದೆ. ನಾಲ್ಕನೇ ದಿನ ಕಾಣುಮ್ ಪೊಂಗಲ್ ಎಂಬ ಹೆಸರಿನಲ್ಲಿ ರುಚಿ ರುಚಿಯಾದ ಬಗೆ ಬಗೆಯ ಭಕ್ಷ ಭೋಜನಗಳನ್ನು ತಯಾರಿಸಿ ಮನೆಮಂದಿಯೆಲ್ಲಾ ಸೇವಿಸಿ ಸಂಭ್ರಮಿಸುತ್ತಾರೆ.

ಕೇರಳದ ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿಯಂದು ಸಂಜೆ ಕಾಣುವ ಮಕರಜ್ಯೋತಿಯನ್ನು ಕಣ್ತುಂಬ ನೋಡಲು ದೇಶಾದ್ಯಂತ ಮಾಲೆ ಧರಿಸಿದ ಅಯ್ಯಪ್ಪ ವ್ರತಾಧಾರಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಶಬರಿಮಲೆಗೆ ಆಗಮಿಸುತ್ತಾರೆ. ಸಂಜೆ ಮಕರಜ್ಯೋತಿಯ ನಂತರ ಕೇರಳಾದ್ಯಂತ ಎಲ್ಲಾ ಆಸ್ತಿಕ ಬಂಧುಗಳ ಮನೆಯಲ್ಲಿ ನಂದಾದೀಪವನ್ನು ಬೆಳಗಿ ಸೂರ್ಯನು ಪಥವನ್ನು ಬದಲಿಸುವ ಸಮಯ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತಾರೆ.

14

ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನವನ್ನು ಗಾಳಿಪಟದ ಹಬ್ಬವನ್ನಾಗಿ ಆಚರಿಸುತ್ತಾರೆ. ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ , ಕರ್ನಾಟಕದಂತೆಯೇ ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ ( ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾನಾಡೋಣ) ಎಂದು ಹೇಳುತ್ತಾ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವಿದೆ.

ಈ ರೀತಿಯಾಗಿ ನಮ್ಮ ಹಿರಿಯರು ರೂಢಿಗೆ ತಂದ ಪ್ರತಿಯೊಂದು ಹಬ್ಬಗಳಲ್ಲಿಯೂ ಸಾಮಾಜಿಕ ಸಾಮರಸ್ಯದ ಜೊತೆಗೆ, ಪ್ರಾಕೃತಿಕವಾಗಿಯೋ, ಸ್ಥಳೀಯ ಐತಿಹಾಸಿಕವಾಗಿಯೋ,ಇಲ್ಲವೇ ಪೌರಾಣಿಕವಾಗಿಯೋ ಮತ್ತು ವೈಜ್ಞಾನಿಕವಾಗಿ ಮಹತ್ವ ಪಡೆದಿರುತ್ತವೆ. ಆದರೆ ವಿಪರೀತವಾದ ಪಾಶ್ಚಾತ್ಯ ಅಂಧಾನುಕರಣೆ ಮತ್ತು ನಮ್ಮ ಹಬ್ಬಗಳ ವೈಚಾರಿಕತೆಯ ಬಗ್ಗೆ ಸರಿಯಾದ ತಿಳುವಳಿಕೆ ನಮ್ಮ ಇಂದಿನ ಯುವಜನತೆಗೆ ಇಲ್ಲದ ಕಾರಣ ಹಬ್ಬಗಳ ಸಡಗರ ಸಂಭ್ರಮ ಆಚರಣೆ ಹಿಂದಿನಂತೆ ಇಲ್ಲದಿರುವುದು ತುಸು ಬೇಸರದ ಸಂಗತಿಯಾದರೂ, ಮನೆಯ ಹಿರಿಯರು ಪರಂಪರಾಗತವಾಗಿ ರೂಡಿಯಲ್ಲಿರುವ ಆಚರಣೆಗಳನ್ನು ಮತ್ತದರ ಹಿಂದಿರುವ ಮಹತ್ವಗಳನ್ನು ತಿಳಿಸುವ ಮೂಲಕ ಮತ್ತೊಮ್ಮೆ ಗತವೈಭವವನ್ನು ಮರಳಿ ತರಬಹುದಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ