ಮೀನಾಕ್ಷಿಯ ಮದುವೆಗಾಗಿ ಎಲ್ಲರೂ ಅವಳಿಗೆ ದುಂಬಾಲು ಬಿದ್ದಿದ್ದರು. “ಸಕಾಲಕ್ಕೆ ಮದುವೆಯಾಗಬೇಕು, ಇಲ್ಲದಿದ್ದರೆ ಒಳ್ಳೆಯ ಗಂಡ ಸಿಗುವುದಿಲ್ಲ,” ಎಂದು ಅವಳಿಗೆ ಹೇಳುತ್ತಿದ್ದರು.
ಮೀನಾಕ್ಷಿ ಏನೆಲ್ಲ ವ್ರತ ಉಪವಾಸ ಕೈಗೊಂಡಿದ್ದಳು. ಈಗ ಅವಳಂತೂ ರಾಜಕುಮಾರನ ನಿರೀಕ್ಷೆಯಲ್ಲಿದ್ದಳು. ಅವನು ಕುದುರೆಯ ಮೇಲೆ ಬರುತ್ತಾನೆ ಹಾಗೂ ತನ್ನ ಕನಸನ್ನು ನನಸು ಮಾಡುತ್ತಾನೆ. ಜೀವನ ಸುಂದರವಾಗುತ್ತದೆ ಎಂದೇ ಅವಳು ಭಾವಿಸಿದ್ದಳು. ಅವಳ ನಿರೀಕ್ಷೆಗಂತೂ ವಿರಾಮ ಸಿಕ್ಕಿತು. ರಾಜಕುಮಾರ ಕುದುರೆಯ ಮೇಲೆ ಬರಲಿಲ್ಲ. ಆದರೆ ಕಾರಿನಲ್ಲಂತೂ ಬಂದ.
ಅಂದಹಾಗೆ ಮದುವೆಯ ಮೊದಲಿನ ವಿಷಯಗಳನ್ನು ತಿಳಿಸುವುದು ಅತ್ಯವಶ್ಯ. ಮದುವೆಯ ನಿಶ್ಚಿತಾರ್ಥದ ಬಳಿಕ ಆ ರಾಜಕುಮಾರ ಫೋನ್ ಮಾಡುತ್ತಿದ್ದ. ಗಂಟೆಗಟ್ಟಲೆ ಜೊತೆ ಜೊತೆಗೆ ಕಾಲಕಳೆಯುತ್ತಿದ್ದ. ಬೇಕಿದ್ದುದನ್ನು ತಿನ್ನಿಸುತ್ತಿದ್ದ. ಮೀನಾಕ್ಷಿಗಂತೂ ಅದೃಷ್ಟದ ಖಜಾನೆ ಸಿಕ್ಕಂತಾಗಿತ್ತು. ಓದುಬರಹ ಬಲ್ಲ ಕಟ್ಟುಮಸ್ತಾದ ಯುವಕ ಅವಳ ಪಾಲಿಗೆ ಸಿಕ್ಕಿದ್ದ. ಶೀಘ್ರದಲ್ಲಿಯೇ ವಿಜೃಂಭಣೆಯಿಂದ ಮದುವೆಯೂ ಆಯಿತು. ಮೀನಾಕ್ಷಿಯ ನಗುವಿಗೆ ಮತ್ತಷ್ಟು ಚಾಲನೆ ಸಿಕ್ಕಿತು.
ಅವಳ ರಾಜಕುಮಾರ ಕೂಡ ಆರಂಭದಲ್ಲಿ ಹೀರೋನ ಹಾಗೆ ರೊಮ್ಯಾಂಟಿಕ್ ಆಗಿದ್ದ. ಆದರೆ ಪತಿಯಾಗುತ್ತಿದ್ದಂತೆ ಅವನ ಪಿತ್ತ ನೆತ್ತಿಗೇರಿತು. ಈ ಪತಿ ಮಹಾಶಯನಿಗೆ ಅದೇನಾಗಿ ಹೋಯಿತೋ ಎಂದು ಅವಳಿಗೂ ಅಚ್ಚರಿಯಾಯಿತು. ಈವರೆಗೆ ನಗು ನಗುತ್ತಾ ಮಾತಾಡುತ್ತಿದ್ದ ಪತಿ ಮಹಾಶಯ ಈಗ ಮುಖ ಉಬ್ಬಿಸಿಕೊಂಡು ಕುಳಿತುಕೊಳ್ಳಲಾರಂಭಿಸಿದ. ಪ್ರೇಮದ ಅರಮನೆಯಲ್ಲಿ ಆದೇಶಗಳ ಸುರಿಮಳೆ ಅವಳಿಗೆ ಇಷ್ಟವಾಗಲಿಲ್ಲವಾದರೂ, ಮದುವೆ ಮಾಡಿಕೊಂಡಾಗಿದೆ, ಸಹಿಸಿಕೊಳ್ಳಲೇಬೇಕೆಂದು ಮೀನಾಕ್ಷಿ ತನ್ನ ಮನಸ್ಸನ್ನು ತಾನು ಒಪ್ಪಿಸಿದಳು.
ಹೆಂಡತಿ ಸಹಿಸಿಕೊಂಡಳು. ಆದರೆ ಗಂಡು ಪ್ರಾಣಿ ಹೇಗೆ ತಾನೇ ಸಹಿಸಿಕೊಂಡೀತು. ಇಲ್ಲದಿದ್ದರೆ ಗಂಡನಾಗಿ ಏನು ಲಾಭ ಎಂದು ಅವನ ಮನಸ್ಸು ಯೋಚಿಸಿತು.
“ಬಟ್ಟೆಗಳನ್ನು ಇನ್ನೂ ಏಕೆ ಒಣ ಹಾಕಿಲ್ಲ. ಇಲ್ಲದಿದ್ದರೆ ಅವು ವಾಷಿಂಗ್ ಮೆಷಿನ್ ನಲ್ಲಿಯೇ ಕೊಳೆತು ಹೋಗುತ್ತವೆ,” ಪತಿ ಮಹಾಶಯ ಆದೇಶದ ಬಾಣಬಿಟ್ಟ.
ಮೀನಾಕ್ಷಿ ಏನೋ ಯೋಚಿಸಿ, “ಇಲ್ಲ ಮರೆತು ಬಿಟ್ಟಿದ್ದೆ,” ಎಂದಳು.
“ಫೇಸ್ ಬುಕ್, ವಾಟ್ಸ್ ಆ್ಯಪ್, ಪುಸ್ತಕಗಳು ನೆನಪಲ್ಲಿರುತ್ತವೆ. ಇದೆಲ್ಲ ಹೇಗೆ ಮರೆತು ಹೋಗುತ್ತದೆ?” ಎಂದು ವಿಚಿತ್ರವಾಗಿ ಕೇಳಿದ.
“ಮರೆತು ಹೋದದ್ದನ್ನು ಮರೆತುಬಿಡಿ, ಈಗ ಆ ತಪ್ಪನ್ನು ಸುಧಾರಿಸಿಕೊಳ್ಳಲಾಗುತ್ತೆ,” ಎಂದು ತನ್ನ ಮನಸಲ್ಲೇ ಹೇಳಿಕೊಂಡಳು.
“ಮರೆತು ಬಿಡುವುದು ಎಷ್ಟೊಂದು ದೊಡ್ಡ ತಪ್ಪು. ಈಗ ನೀನೇನೂ ಕೆಲಸ ಮಾಡುವುದು ಬೇಡ. ನನ್ನ ಕೆಲಸ ನಾನೇ ಮಾಡಿಕೊಳ್ತೀನಿ,” ಪತಿ ಮಹಾಶಯ ಹೊಸದೊಂದು ಆದೇಶ ನೀಡಿದ.
“ಹಾಗೆ ಮಾಡಿ ಪತಿ ಮಹಾಶಯ. ನನಗೂ ಬಟ್ಟೆ ಒಣ ಹಾಕುವುದು ಇಷ್ಟದ ಕೆಲಸವಲ್ಲ,” ಎಂದು ಮೀನಾಕ್ಷಿ ಮನಸ್ಸಲ್ಲಿಯೇ ಹೇಳಿಕೊಂಡಳು.
ಪತಿ ಮಹಾಶಯ ಮುಖ ಊದಿಸಿಕೊಂಡು ಕುಳಿತುಬಿಟ್ಟ. ಈಗ ಮಾತಾಡೋದು ಬಂದ್. ಅದು 1-2 ಗಂಟೆಯಲ್ಲ, 3-4 ದಿನ ಬಿಲ್ ಕುಲ್ ಮಾತು ಬಂದ್. ಮೀನಾಕ್ಷಿ ಮಾಡಿದ ತಪ್ಪಿಗೆ ಅವಳ ಗಂಡ ಈ ರೀತಿಯ ಶಿಕ್ಷೆ ಕೊಡಲು ಹೊರಟಿದ್ದ. ಈಗ ಮೀನಾಕ್ಷಿಗೆ ಪಚನ ಆಗೋದಾದ್ರೂ ಹೇಗೆ ಹೇಳಿ. ಅಸಿಡಿಟಿ ಆಗುವುದು ಪಕ್ಕಾ. ಬಳಿಕ ತಲೆನೋವು ಕೂಡ.
ಅದೊಂದು ಸಲ ಮೀನಾಕ್ಷಿ ತನ್ನ ಪತಿ ಮಹಾರಾಜರ ಜೊತೆ ಆಫೀಸ್ ಟೂರ್ ಗೆಂದು ಹೋಗಿದ್ದಳು. ಪತಿರಾಯ ರಾತ್ರಿ ಗೆಸ್ಟ್ ಹೌಸ್ ನ ಕೋಣೆಯಲ್ಲಿ ಸೋಪ್ ಕೇಳಿದ. ಮೀನಾಕ್ಷಿ ಸೋಪ್ ಬಾಕ್ಸ್ ಕೊಟ್ಟಳು. ಆದರೆ ಅದರಲ್ಲಿದ್ದುದು ಒಂದು ಪುಟ್ಟ ತುಂಡು ಅಷ್ಟೇ. ಪತಿ ಮಹಾಶಯನಿಗೆ ಅದನ್ನು ಕಂಡು ಕೋಪ ನೆತ್ತಿಗೇರಿತು. ಆ ಬಳಿಕ ಆತ 7 ದಿನಗಳ ಕಾಲ ಅವಳೊಂದಿಗೆ ಮಾತಾಡಿರಲಿಲ್ಲ. ಆಫೀಸ್ ಟೂರ್ ನೆಪದಲ್ಲಿ ಹೊರಗೆ ಸುತ್ತಾಡಲೆಂದು ಬಂದ ಮೀನಾಕ್ಷಿ ಗೆಸ್ಟ್ ಹೌಸ್ ನಲ್ಲೇ ಅತ್ತಿತ್ತ ಸುತ್ತಾಡಬೇಕಾಯಿತು. ಅವಳು ಮಾಡಿದ ತಪ್ಪಿಗೆ ಅವಳಿಗೆ ಇಷ್ಟೊಂದು ದೊಡ್ಡ ಶಿಕ್ಷೆ ದೊರಕಿತ್ತು. ಆ ಬಳಿಕ ಮೀನಾಕ್ಷಿ ಟೂರ್‌ಹೋಗುವಾಗ ಮನೆಯಿಂದ ಸೋಪ್ ತೆಗೆದುಕೊಂಡು ಹೋಗುವುದನ್ನು ಮರೆಯಲಿಲ್ಲ.
ಪತಿ ಮಹಾಶಯ ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯತೊಡಗಿದ. ಮೀನಾಕ್ಷಿ ಮಾಡಿದ ಅಷ್ಟೊಂದು ದೊಡ್ಡ ತಪ್ಪನ್ನು ತಾನು ತಿದ್ದಿದೆ ಎನ್ನುವುದರ ಹೆಮ್ಮೆ ಅವನಿಗಿತ್ತು. ಕೋಪ ಮಾಡಿಕೊಳ್ಳುವ, ಮುಖ ಊದಿಸಿಕೊಳ್ಳುವ ತಪ್ಪು ಸುಧಾರಣೆ ಆಗಬೇಕೆಂದು ಅವಳು ಬಯಸಿದ್ದಳು. ಆದರೆ ಪತಿ ಮಹಾಶಯ ಹೇಗೆ ತಾನೇ ಸುಧಾರಣೆ ಆಗುತ್ತಾನೆ. ಆತ ಬಲೂನ್ ನಂತೆ ಮುಖ ಊದಿಸಿಕೊಂಡರೆ ಬಹುಬೇಗ ಅದು ತನ್ನ ಮೂಲರೂಪಕ್ಕೆ ಬರುವುದಿಲ್ಲ. ಅವನು ಪತಿ ಅಲ್ವೇ ಅದಕ್ಕೆ!
ಮೀನಾಕ್ಷಿ ಅದೊಂದು ಸಲ ಹೊರಗಡೆ ಸುತ್ತಾಡಲೆಂದು ಗಂಡನ ಜೊತೆ ಹೋಗಿದ್ದಳು. ಗಂಡ ಅವಳಿಗಾಗಿ ಹೈಹೀಲ್ಸ್ ಸ್ಯಾಂಡಲ್ಸ್ ಖರೀದಿಸಿಕೊಟ್ಟ. ಅವಳು ಅದನ್ನು ಧರಿಸಿ ಹಾಗೆಯೇ ಮುಂದೆ ಮುಂದೆ ಸಾಗಿದಳು. ಹೋಗುತ್ತಿರುವಾಗಲೇ ಒಂದು ಕಾಲಿನ ಸ್ಯಾಂಡಲ್ ಕಿತ್ತುಹೋಗಿತ್ತು. ಆಗ ಪತಿ ಮಹಾಶಯ ಮುನಿಸಿಕೊಂಡ. ಆಗ ಆತ ಅವಳನ್ನು ತರಾಟೆಗೆ ತೆಗೆದುಕೊಂಡ.
“ನೀನು ಈ ಮೊದಲು ಎಂದೂ ಹೈ ಹೀಲ್ಸ್ ಸ್ಯಾಂಡಲ್ಸ್ ಧರಿಸಿರಲಿಲ್ಲ ಎಂದಿದ್ದರೆ, ಇದನ್ನು ತೆಗೆದುಕೊಂಡಿದ್ದಾರೂ ಏಕೆ? ಈಗ ನೀನು ಬ್ಯಾಗ್ ಪ್ಯಾಕ್ ಮಾಡುವ, ಹೊರಡಲು ತಯಾರಾಗುವ.”
ಮೀನಾಕ್ಷಿಗೆ ಅವನ ಮಾತು ಕೇಳಿ ಆಶ್ಚರ್ಯವಾಯಿತು. ಇಷ್ಟೊಂದು ಸಣ್ಣ ವಿಷಯಕ್ಕೆ ಅಷ್ಟೊಂದು ದೊಡ್ಡ ಗುಲ್ಲೆಬ್ಬಿಸುವುದೇ? ಕಿತ್ತು ಹೋಗಿರುವುದು ಸ್ಯಾಂಡಲ್. ಒಂದು ಹೋದರೆ ಮತ್ತೊಂದು ತೆಗೆದುಕೊಳ್ಳಬಹುದು. ಇಲ್ಲವಾದರೆ ಇಲ್ಲ. ಒಂದು ಸಲ ಪತಿ ಮಹಾಶಯನ ಮುಖ ತ್ರಿಕೋನವಾಗಿಬಿಟ್ಟರೆ, ಅದು ನೇರವಾಗಿ ಪರಿವರ್ತನೆಯಾಗಲು ಸಾಕಷ್ಟು ಸಮಯ ತಗಲುತ್ತದೆ. ಆದರೆ ಮೀನಾಕ್ಷಿಗೆ ಅವನನ್ನು ಹೇಗೆ ನೇರಗೊಳಿಸಬೇಕೆನ್ನುವುದು ಚೆನ್ನಾಗಿ ಗೊತ್ತು. ಅವಳು `ಸಾರಿ’ ಹೇಳಿ ಪ್ರಕರಣವನ್ನು ಅಲ್ಲಿಗೆ ಮುಚ್ಚಿಹಾಕಿಬಿಟ್ಟಳು ಮತ್ತು ಪತಿ ಮಹಾಶಯನನ್ನು ಸುತ್ತಾಡಿಸಿ ಸುತ್ತಾಡಿಸಿ ಸುತ್ತಿಸಿಬಿಟ್ಟಳು. ಒಮ್ಮೊಮ್ಮೆ ಪತಿ ಮಹಾಶಯನ ಸ್ವರ ಸಕ್ಕರೆಯ ಪಾಕದಲ್ಲಿ ಅದ್ದಿದಂತೆ ಮಗು ಮಧುರವಾಗಿರುತ್ತದೆ. ಆದರೆ ಹಾಗಾಗುವುದು ಬಹಳ ಕಡಿಮೆ. ಏಕೆಂದರೆ ಅವನು ಹಿಟ್ಲರ್ ನ ಸಂಬಂಧಿಕ ಅಲ್ವೆ? ಅದೊಂದು ಸಲ ಮೀನಾಕ್ಷಿಯ ಹುಟ್ಟುಹಬ್ಬದ ದಿನದಂದು ಅವಳನ್ನು ಹೊರಗೆ ಕರೆದುಕೊಂಡು ಹೋಗುವ ಭರವಸೆ ನೀಡಿ ಆಫೀಸಿಗೆ ಹೊರಟುಹೋದ. ಆತ ವಾಪಸ್ ಬಂದಾಗ ಮೀನಾಕ್ಷಿ ಸಿಂಗರಿಸಿಕೊಂಡು ಬರಲು ಕೇವಲ 5 ನಿಮಿಷ ತಡ ಮಾಡಿದ್ದಕ್ಕೆ ಅವಳ ಮೇಲೆ ಉರಿದುಬಿದ್ದ. ಆದರೆ ಮೀನಾಕ್ಷಿಯ ಬಾಯಿಂದ ಒಂದೇ ಒಂದು ಶಬ್ದ ಹೊರಬರಲಿಲ್ಲ. ಮೀನಾಕ್ಷಿ ತನ್ನ ಹಣೆಬರಹವನ್ನು ಹಳಿದುಕೊಂಡಳು. ಏಕೆಂದರೆ ಅವಳಿಗೆ ಅಂತಹ ಪತಿ ದೊರಕಿದ್ದ.
ಮೀನಾಕ್ಷಿ ತನ್ನ ಗಂಡನಿಗಾಗಿ ನಿರೀಕ್ಷಿಸುತ್ತ ಕೂತಿದ್ದಳು. ಆತ ಊರಿನಿಂದ ವಾಪಸ್ಸಾದ ಬಳಿಕ ಇಬ್ಬರೂ ಜೊತೆ ಜೊತೆಗೆ ಊಟ ಮಾಡೋಣವೆಂದು ಅವಳು ಅಂದುಕೊಂಡಿದ್ದಳು. ಆದರೆ ಆತ ವಾಪಸ್ಸಾದಾಗ ರಾತ್ರಿ 11 ಗಂಟೆ ಆಗಿತ್ತು. ಮೀನಾಕ್ಷಿ ಇನ್ನೂ ಊಟವನ್ನೇ ಮಾಡಿಲ್ಲವೆಂದು ವಿಷಯ ತಿಳಿದು ಅವನು ಅವಳನ್ನೇ ಬೈದ ಹಾಗೂ ಇಡೀ ರಾತ್ರಿ ಮುಖ ಊದಿಸಿಕೊಂಡು ಪಕ್ಕಕ್ಕೆ ತಿರುಗಿ ಮಲಗಿದ. ಮೀನಾಕ್ಷಿ ಸಿನಿಮಾದಲ್ಲಿ ಬೇರೆಯದನ್ನೇ ನೋಡಿದ್ದಳು. ಆದರೆ ಇಲ್ಲಿ ವಾಸ್ತವ ಬೇರೆಯೇ ಆಗಿತ್ತು. ಇಂದು ಮೀನಾಕ್ಷಿ ಗಂಡನನ್ನು ನಿರೀಕ್ಷಿಸದೆಯೇ ಊಟ ಮಾಡುವ ನಿಯಮವನ್ನು ಹಾಕಿಕೊಂಡಳು. ಹಸಿವಿನಿಂದ ಇದ್ದುಕೊಂಡು ತಾನೇಕೆ ಏನೂ ತಿನ್ನಬಾರದು? ಹಸಿವಿನಿಂದ ಇರುವುದರಿಂದ ತನಗೆ ಲಾಭವೇನು ಇಲ್ಲವಲ್ಲ.
ಯಾವಾಗಲಾದರೊಮ್ಮೆ ಭ್ರಮೆಯ ಗಂಟೆ ವ್ಯಕ್ತಿಯನ್ನು ತನ್ನೊಳಗೆ ಸಿಲುಕಿಸುತ್ತದೆ. ಪತಿ, ಮಹಾಶಯನ ತ್ರಿಕೋನ ಈ ಸರಳ ರೇಖೆಯಲ್ಲಿ ಪರಿವರ್ತನೆಯಾಗುತ್ತದೆ ಎಂದು ಅವಳಿಗೆ ಅನಿಸಿತು. ಆದರೆ ಭ್ರಮೆ ಭ್ರಮೆಯೇ ಆಗಿರುತ್ತದೆ. ಅದರಲ್ಲಿ ಸತ್ಯ ಎಲ್ಲಿರುತ್ತದೆ……
ಪತಿ ಮಹಾಶಯ ಒಂದು ಸಲ ವ್ಯಂಗ್ಯ ಬಾಣ ಬಿಡುತ್ತ ಹೇಳಿದ, “ನೀನು ಇತ್ತೀಚೆಗೆ ಓದೋದು ಬರೋದು ಮಾತ್ರ ಮಾಡ್ತಾ ಇರ್ತಿಯಾ. ಮನೆಗೆಲಸವನ್ನು ಕೂಡ ಮನಸ್ಸಿಂದ ಮಾಡ್ತಾ ಇರು. ಇಲ್ಲದಿದ್ದರೆ ನೀನು ಕೆಲಸ ಮಾಡುವ ಅಗತ್ಯವೇ ಇಲ್ಲ.”
ಮೀನಾಕ್ಷಿ ಸ್ವಲ್ಪ ಎತ್ತರದ ಧ್ವನಿಯಲ್ಲಿಯೇ ಹೇಳಿದಳು, “ನಾನೆಷ್ಟು ಕೆಲಸ ಮಾಡ್ತಾ ಇರ್ತೀನಿ. ಅದು ಕಾಣೋದಿಲ್ವೇ?”
ಅಷ್ಟು ಹೇಳುತ್ತಿದ್ದಂತೆ ಪತಿ ಮಹಾಶಯ ಮುಖ ಉಬ್ಬಿಸಿಕೊಂಡು ಕುಳಿತುಕೊಂಡ. ಓದು ಬರಹ ಬಲ್ಲ ಮೀನಾಕ್ಷಿಗೆ ಏನು ಮಾಡಬೇಕು ಎಂಬುದೇ ತೋಚದಂತಾಯಿತು.
ಮೀನಾಕ್ಷಿ ಈ ಸಲ ತಾನು ಗಂಡನನ್ನು ಓಲೈಸಲು ಪ್ರಯತ್ನ ಮಾಡುವುದಿಲ್ಲ ಎಂದುಕೊಂಡಳು. ಆದರೆ ಎಂದಿನಂತೆಯೇ ಅವಳೇ ಅವನನ್ನು ಓಲೈಸಿದಳು. ಸಿನಿಮಾಗಳಲ್ಲಿ ನಾಯಕ ನಾಯಕಿಯ ಕೋಪ ಶಮನಗೊಳಿಸಲು ಪ್ರಯತ್ನಿಸುತ್ತಾನಾದರೆ ಇಲ್ಲಿ ಲಿಂಗ ಬದಲಿಸಿ ನಾಯಕಿಯೇ ನಾಯಕನ ಕೋಪ ಶಮನಗೊಳಿಸುವ ಪ್ರಯತ್ನ ಮುಂದುವರಿಸುತ್ತಾಳೆ.
ಮೀನಾಕ್ಷಿ ಅದೊಂದು ಸಲ ತನ್ನ ಮಾತೋಶ್ರೀಗೆ ತನ್ನ ಕಥೆಯ ವ್ಯಥೆ ಹೇಳಿಕೊಂಡಳು. ಆ ಬಳಿಕ “ಅಪ್ಪ ಹೀಗಿರಲಿಲ್ಲ ಅಲ್ವೇ?” ಎಂದು ಅಮ್ಮನನ್ನೇ ಕೇಳುತ್ತಾಳೆ.
ಅಮ್ಮ ಮುಗುಳ್ನಕ್ಕರು “ಮೀನೂ, ನಿನ್ನ ಅಪ್ಪ ಬಹಳ ಒಳ್ಳೆಯರು. ಆದರೆ ಪತಿ ಹೇಗಿರುತ್ತಾರೆ ಎಂದು ಆ ದುಃಖ ನಿನಗೆ ಹೇಗೆ ಹೇಳುವುದು. ನನ್ನ ನೋವಿನ ನರವನ್ನು ನೀನಿಂದು ಸ್ಪರ್ಶಿಸಿಬಿಟ್ಟೆ. ಅಂದಹಾಗೆ ಈ ಪತಿಯೆಂಬ ಪ್ರಾಣಿಗಳು ಇರುವುದೇ ಹೀದೆ. ಈ ಪ್ರಭೇದದ ಮೇಲೆ ಯಾವುದೇ ಜೈವಿಕ ವಿಕಾಸದ ನಿಯಮಗಳು ಅನ್ವಯಿಸುವುದಿಲ್ಲ. ಹೀಗಾಗಿ ಅವನು ಹೇಗಿದ್ದಾನೊ ಅವನನ್ನು ಹಾಗೆಯೇ ಎದುರಿಸಬೇಕು. ಅವನೆಂದೂ ಸುಲಿದ ಬಾಳೆಹಣ್ಣಿನಂತೆ ಸುಲಲಿತವಾಗುವುದಿಲ್ಲ. ಹುಡುಗರು ಪ್ರೇಮಿಯಾಗಿ, ಸೋದರನಾಗಿ, ಸ್ನೇಹಿತನಾಗಿ, ಅಪ್ಪನಾಗಿ ಇಷ್ಟವಾಗುತ್ತಾರೆ. ಆದರೆ ಪತಿಯಾಗುತ್ತಿದ್ದಂತೆ ದೇವರು ಅವರ ಮೇಲೆ ಸವಾರಿ ಮಾಡುತ್ತಾನೆ.” ಮೀನಾಕ್ಷಿ ದೇವಿ ಸವಾರಿ, ಮಾಡುವುದನ್ನು ಕೇಳಿದ್ದಳು. ಆದರೆ ದೇವರು…. ಒಳ್ಳೆಯದೊ, ಕೆಟ್ಟದೊ ನನ್ನ ಪತಿ ಯಾವಾಗಲೂ ನನ್ನವನೇ…..
“ಆದರೆ ಅಮ್ಮ, ಮಹಿಳಾ ಹಕ್ಕುಗಳು ಹಾಗೂ ಸ್ತ್ರೀ ವಿಮರ್ಶೆಯ ಪ್ರಶ್ನೆಗಳೇನು?”
“ನೋಡು ಮಗಳೇ, ನಿನ್ನ ಪತಿ ತ್ರಿಕೋನ ಆಗಿದ್ದರೇನಾಯ್ತು? ಅವನನ್ನು ಸರಳರೇಖೆಗೆ ತರುವ ವಿಫಲ ಪ್ರಯತ್ನ ಮಾಡಬೇಡ. ಸಮೋಸಾ ತ್ರಿಕೋನ ಆಕಾರದಲ್ಲಿರುತ್ತದೆ. ಹಾಗೆಂದು ಅದು ನಿನಗೆ ಇಷ್ಟ ಆಗುತ್ತಲ್ವೇ?”
“ಖಂಡಿತ ಇಷ್ಟ ಆಗುತ್ತಮ್ಮ……”
“ಹಾಗಾದರೆ ಮತ್ತೇನೂ ವಿಷಯ ಇಲ್ಲ. ಅವನ ಮಾತನ್ನು ಒಂದು ಕಿವಿಯಿಂದ ಕೇಳಿಸಿಕೋ, ಇನ್ನೊಂದು ಕಿವಿಯಿಂದ ಬಿಟ್ಟುಬಿಡು. ನಿನ್ನ ಕೆಲಸಗಳನ್ನು ನಿಧಾನವಾಗಿ, ಮಾಡ್ತಾ ಹೋಗು,” ಅಮ್ಮ ಪತಿಯ ಮರ್ಮ ವಿವರಿಸಿದಳು.
ಮೀನಾಕ್ಷಿ ಈಗ ನೆಮ್ಮದಿಯ ನಿಟ್ಟುಸಿರುಬಿಟ್ಟಳು. ಅವಳ ಬಾಯಿಂದ, “ಅಬ್ಬಾ ಈ ಪತಿ,” ಎಂಬ ಮಾತು ಹೊರಹೊಮ್ಮಿತು.