ತ್ರಿನೇತ್ರಾ ಶ್ರೀಮಂತ ಕುಟುಂಬದ ಯುವತಿ. ಆದರೆ ಅವಳಲ್ಲಿ ಒಂದಿಷ್ಟೂ ಅಹಂ ಇರಲಿಲ್ಲ. ಅವಳು ಹರ್ಷ ಹೆಸರಿನ ಸಾಧಾರಣ ಕುಟುಂಬದ ಯುವಕನನ್ನು ಪ್ರೀತಿಸುತ್ತಿದ್ದಳು. ಅವಳ ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪವಾದಾಗ, ಅವಳು ತನ್ನ ಅಮ್ಮ ಅಪ್ಪನಿಗೆ ಹರ್ಷನನ್ನು ಭೇಟಿ ಮಾಡಿಸಿದಳು. ಆದರೆ ತ್ರಿನೇತ್ರಾಳ ಅಮ್ಮನಿಗೆ ಹರ್ಷ ಒಂದಿಷ್ಟೂ ಇಷ್ಟವಾಗಲಿಲ್ಲ. ಇದಕ್ಕೆ ತದ್ವಿರುದ್ಧ ಎಂಬಂತೆ ಅವಳ ತಂದೆಗೆ ಹರ್ಷನನ್ನು ಭೇಟಿಯಾಗಿ ಬಹಳ ಖುಷಿಯಾಯಿತು. ನಳಿನಿ ತನ್ನ ಮಗಳ ಮದುವೆಯನ್ನು ಅಮೆರಿಕಾದ ಯುವಕ ವಿಲಿಯಮ್ ಜೊತೆಗೆ ಮಾಡಬೇಕೆನ್ನುವುದಾಗಿತ್ತು. ಆದರೆ ತ್ರಿನೇತ್ರಾಳಿಗೆ ಅದು ಇಷ್ಟವಿರಲಿಲ್ಲ. ಹಾಗಾಗಿ ನಳಿನಿ ಹರ್ಷನ ಹಿನ್ನೆಲೆ ಕಂಡುಕೊಳ್ಳಲು ಖಾಸಗಿ ಪತ್ತೇದಾರನನ್ನು ನೇಮಿಸಿದಳು.

ಮುಂದೆ ಓದಿ…..

ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದು ದೊಡ್ಡವಳಾದ ತ್ರಿನೇತ್ರಾ ಅಮೆರಿಕಾದ ಯುವಕ ವಿಲಿಯಮ್ ಜೊತೆಗೆ ಮದುವೆಯಾಗದೆ, ಸಾಧಾರಣ ಕುಟುಂಬದ ಹರ್ಷನ ಜೊತೆಗೆ ಮದುವೆಯಾಗಲು ಹೊರಟಿರುವುದು ಅಮ್ಮ ನಳಿನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಅವಳು ಇಬ್ಬರನ್ನು ಪ್ರತ್ಯೇಕಗೊಳಿಸಲು ತನ್ನದೇ ಆದ ಒಂದು ಉಪಾಯ ಹೂಡಿದಳು. ರಾತ್ರಿ ಹೋಟೆಲ್ ‌ನಲ್ಲಿ ನಡೆದ ಪಾರ್ಟಿಯಲ್ಲಿ ಆ ಅವಕಾಶ ಸಿಕ್ಕಿತೇ. ಹೋಟೆಲ್ ‌ನ ಆ ಪಾರ್ಟಿಯಲ್ಲಿ ವಿಲಿಯಮ್ ಅಂಥದ್ದೇನು ಮಾಡಿದ. ಅದರಿಂದ ನಳಿನಿಯ ಕಣ್ಣಷ್ಟೇ ತೆರೆಯಲಿಲ್ಲ. ವಿಲಿಯಮ್ ನ  ನಿಜವಾದ ಬಣ್ಣ ಸಹ ಬಯಲಾಯಿತಾ……?

 

ಪತ್ತೇದಾರನ ಪತ್ತೇದಾರಿಕೆಯಿಂದ ಹರ್ಷ ಸಾಧಾರಣ ಕುಟುಂಬದ ಯುವಕ ಎನ್ನುವುದು ತಿಳಿಯಿತು. ತಂದೆ ಸಾಧಾರಣ ನೌಕರಿ ಮಾಡುತ್ತಾರೆ. ಅದರಿಂದ ಅವರ ಕುಟುಂಬದ ನಿರ್ವಹಣೆ ಹಾಗೂ ತಮ್ಮ ತಂಗಿಯರ ಓದಿನ ಖರ್ಚು ಆಗುತ್ತದೆ. ಅಮ್ಮ  ಗೃಹಿಣಿಯಾಗಿದ್ದಾರೆ. ಅವರಿಗೆ ಸ್ವಂತ ಮನೆಯಿಲ್ಲ, ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ.

ಹರ್ಷ ಕೆಲವು ಮಕ್ಕಳಿಗೆ ಟ್ಯೂಷನ್‌ ಹೇಳಿ ತನ್ನ ಓದಿನ ಖರ್ಚನ್ನು ಭರಿಸುತ್ತಾನೆ. ಅವನು ಸ್ಕಾಲರ್‌ ಶಿಪ್‌ ಗೂ ಅರ್ಜಿ ಹಾಕಿದ್ದಾನೆ. ಹುಡುಗನ ಚಾರಿತ್ರ್ಯದ ಬಗೆಗೂ ಅವರಿಂದ ಒಳ್ಳೆಯ ಅಭಿಪ್ರಾಯ ಕೇಳಬಂತು.

`ಮನೆಯಲ್ಲಿ ದಾರಿದ್ರ್ಯವಿದ್ದರೂ ಪಾಯಸ ಉಣ್ಣುವ ಬಯಕೆ. ನನ್ನ ಮಗಳ ಜೊತೆ ಮದುವೆ ಮಾಡಿಕೊಳ್ಳಬೇಕಂತೆ,’ ಎಂದು ನಳಿನಿ ತನಗೆ ತಾನೇ ಹೇಳಿಕೊಂಡಳು. ನಿನ್ನ ಚಾರಿತ್ರ್ಯವನ್ನು ನಾನು ಹಾಳು ಮಾಡ್ತೀನಿ, ಅದೂ ಕೂಡ ನನ್ನ ಮಗಳ ಎದುರಿನಲ್ಲಿಯೇ! ನೀವು ಅಪ್ಪ ಮಗ ಒಂದು ತಿಂಗಳಲ್ಲಿ ಗಳಿಸುವಷ್ಟು ಹಣವನ್ನು ನನ್ನ ಮಗಳು ಒಂದೇ ದಿನ ಖರ್ಚು ಮಾಡುತ್ತಾಳೆ. ಹಣವುಳ್ಳ ಹುಡುಗಿಯ ಜೊತೆ ಮದುವೆ ಮಾಡಿಕೊಂಡು ಜೀವನವಿಡೀ ಮೋಜು ಮಾಡಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದಾರೆ. ನನ್ನ ಮಗಳ ಜೊತೆ ಮದುವೆ ಮಾಡಿಕೊಳ್ಳುವ ಕನಸು ಕಂಡವರಿಗೆ ಸರಿಯಾದ ಪಾಠ ಕಲಿಸಬೇಕು.’ತ್ರಿನೇತ್ರಾಳಿಗೆ ಈಗಲೇ ಸತ್ಯ ಹೇಳಿಬಿಡಬೇಕು ಎನಿಸಿತು. ಅವನು ನಿನಗೆ ತಕ್ಕನವಲ್ಲ. ಅವನು ಪ್ರೀತಿಸುತ್ತಿರುವುದು ನಿನ್ನನ್ನಲ್ಲ, ನಿನ್ನ ಹಣವನ್ನು ಎಂದು ಹೇಳಬೇಕೆನಿಸಿತು. ಆದರೆ ಆ ಮಾತಿಗೆ ಅವಳು ತಕ್ಷಣವೇ, `ಅಮ್ಮ, ಹಣವೇ ನಿಮಗೆ ಎಲ್ಲ ಅಲ್ಲವೇ? ಪ್ರೀತಿಗೆ ಒಂದಿಷ್ಟೂ ಬೆಲೆ ಇಲ್ಲವೇ? ಏನೇ ಆಗಲಿ ನಾನು ಹರ್ಷನನ್ನು ಪ್ರೀತಿಸ್ತೀನಿ,’ ಎಂದು ಹೇಳಿಬಿಡುತ್ತಾಳೆ. ಆ ಬಳಿಕ ನಾನು ಅವಳಿಗೆ ಬೇರೇನೂ ವಿಷಯ ಹೇಳಲು ಆಗುವುದಿಲ್ಲ ಎನಿಸಿತು.

ಇಂದಿನ ಕಾಲದ ಮಕ್ಕಳೊಂದಿಗೆ ವಾದ ವಿವಾದ ಮಾಡುವುದೆಂದರೆ, ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಂತೆ ಎಂಬುದರ ಅರಿವಿದ್ದ ನಳಿನಿ ತನ್ನ ಕಾಲ ಮೇಲೆ ಚಪ್ಪಡಿ ಎಳೆದುಕೊಳ್ಳಲು ಸಿದ್ಧಳಿರಲಿಲ್ಲ. ಆದರೆ ಅವಳು ತನ್ನ ಮಗಳ ಕಾಲಿಗೆ ಬೇಡಿ ಹಾಕಲು ನಿರ್ಧರಿಸಿದ್ದಳು. ಆದರೆ ಯೋಚಿಸಿ, ವಿಚಾರ ಮಾಡಿ ಹೆಜ್ಜೆ ಇಡಬೇಕೆಂದು ಅವಳು ಮನಸ್ಸಿನಲ್ಲೇ ತೀರ್ಮಾನಿಸಿದ್ದಳು.

ಗಂಡನ ಬಗ್ಗೆ ಯಾವುದೇ ಭರವಸೆ ಇಡಲಾಗದು. ಅವರಂತೂ ನೂರಕ್ಕೆ ನೂರರಷ್ಟು ಮಗಳಿಗೆ ಸಾಥ್‌ ಕೊಡುತ್ತಾರೆ. ಎಲ್ಲರಿಗೂ ತಮ್ಮದೇ ಆದ ರೀತಿಯಲ್ಲಿ ಜೀವಿಸುವ ಹಕ್ಕಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪತಿ ತಮ್ಮ ಮಗಳನ್ನು ಬಹಳ ಪ್ರೀತಿಸುತ್ತಾರೆ ಹಾಗೂ ಅವಳಿಗಾಗಿ ಏನನ್ನಾದರೂ ಮಾಡಲು ಸಿದ್ಧರಿದ್ದಾರೆ.

ಆದರೆ ಮಗಳ ಹಿತಾಸಕ್ತಿಯನ್ನು ಗಮನಿಸದಷ್ಟು ನಳಿನಿ ಮೂರ್ಖಳೇನೂ ಆಗಿರಲಿಲ್ಲ. ಮಗಳ ಮದುವೆಯನ್ನು ಹರ್ಷನ ಜೊತೆಗೆ ಮಾಡಿಕೊಡಬಾರದೆಂದು ಅವಳು ನಿರ್ಧರಿಸಿಬಿಟ್ಟಿದ್ದಳು.

ತನ್ನ ಮನೆ ಕೆಲಸದವರಿಂದ ಹರ್ಷನನ್ನು ಹೊಡೆದು ಬಿಸಾಡಿ ಬಿಡಬಹುದಾಗಿತ್ತು. ಆದರೆ ಮಗಳ ಮುಖ ನೋಡಿ ಅವಳು ಅಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗಲಿಲ್ಲ.

ಹರ್ಷನನ್ನು ಭೇಟಿಯಾದ ಬಳಿಕ ನಳಿನಿಯ ಮನಸ್ಸಿನಲ್ಲಿ ಒಂದು ರೀತಿಯ ಆತಂಕವೇ ಉಂಟಾಗಿಬಿಟ್ಟಿತ್ತು. ಒಂದು ವೇಳೆ ತ್ರಿನೇತ್ರಾ ಅವನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದುಬಿಟ್ಟರೆ ತಾನೇನು ಮಾಡಲು ಸಾಧ್ಯ? ಸಮಾಜದಲ್ಲಿ ತನ್ನ ಮಾನ ಮರ್ಯಾದೆಯ ಗತಿ ಏನಾಗುತ್ತದೆ? ಭಾರಿ ಶ್ರೀಮಂತೆ ಎಂದು ಕೊಚ್ಚಿಕೊಳ್ಳುತ್ತಾಳೆ. ಆದರೆ ಮಗಳ ಮದುವೆಯನ್ನು ಸ್ವಂತ ಮನೆಯೇ ಇಲ್ಲದ ವ್ಯಕ್ತಿಯ ಜೊತೆ ಮಾಡಿ ಕೈ ತೊಳೆದುಕೊಂಡಳು ಎಂದು ತನ್ನನ್ನು ಗೇಲಿ ಮಾಡಿ ನಗಬಹುದು.

ಹರ್ಷನನ್ನು ಹೇಗಾದರೂ ಮಾಡಿ ತನ್ನ ಮಗಳಿಂದ ದೂರ ಇಡಬೇಕೆಂದು ನಳಿನಿ ಬಯಸುತ್ತಿದ್ದಳು. ಅದಕ್ಕಾಗಿ ಅವಳು ಏನು ಬೇಕಾದರೂ ಮಾಡಲು ಸಿದ್ಧಳಾಗಿದ್ದಳು.

ಅದೊಂದು ದಿನ ಅವಳು ಹರ್ಷನ ಮನೆ ವಿಳಾಸ ಕಂಡುಹಿಡಿದು ಅವನ ಮನೆ ತಲುಪಿ ಮನೆಯವರನ್ನು ಬಾಯಿಗೆ ಬಂದಂತೆ ತೆಗಳಿ ಅವರ ಮಾನ ಕಳೆಯತೊಡಗಿದಳು.

“ನೀವೆಲ್ಲ ಉದ್ದೇಶಪೂರ್ವಕವಾಗಿ ನನ್ನ ಮಗಳ ಬೆನ್ನು ಬಿದ್ದು ಆಸ್ತಿ ಹೊಡೆಯುವ ಸಂಚು ಹೂಡಿದ್ದೀರಿ. ಅಪ್ಪ ಮಗ ಇದರಲ್ಲಿ ಯಶಸ್ವಿಯಾಗುತ್ತೀರಿ ಎಂದು ತಿಳಿದಿದ್ದೀರೇನು? ನಾನು ನಿಮ್ಮ ಪ್ರಯತ್ನವನ್ನು ಯಶಸ್ವಿಯಾಗಲು ಅವಕಾಶ ಕೊಡುವುದಿಲ್ಲ,” ಎಂದು ಬಾಯಿಗೆ ಬಂದಂತೆ ಮಾತನಾಡಿದಳು.

ಹರ್ಷನ ತಂದೆ ಕೂಡ ಪ್ರತ್ಯುತ್ತರ ಎಂಬಂತೆ ಆ ಕ್ಷಣವೇ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ಮಾನ ಹರಾಜಿಗೆ ಹಾಕಬಹುದಿತ್ತು. ಆದರೆ ಅವರು ಹಾಗೇನೂ ಮಾಡದೇ ಮೌನವಾಗಿರುವುದೇ ಉತ್ತಮ ಎಂದು ನಳಿನಿ ಅಂದು ಆಡಿದ್ದನ್ನು ಕೇಳಿಸಿಕೊಂಡು ಸುಮ್ಮನಾದರು.

ಅಮ್ಮ ನಳಿನಿ ತಮ್ಮ ಮನೆಗೆ ಬಂದು ಬಾಯಿಗೆ ಬಂದಂತೆ ಮಾತಾಡಿ ಮಾನ ಹರಾಜು ಹಾಕಿ ಹೋದ ವಿಷಯವನ್ನು ಹರ್ಷ ತ್ರಿನೇತ್ರಾಳ ಮುಂದೆ ಪ್ರಸ್ತಾಪಿಸಲಿಲ್ಲ. ಆದರೆ ಆ ವಿಷಯ ಹೇಗೋ ತ್ರಿನೇತ್ರಾಳಿಗೆ ಗೊತ್ತಾಯಿತು. ಅಮ್ಮ ಅವರನ್ನು ಹಣದಿಂದ ಕೊಂಡುಕೊಳ್ಳಲು ಯತ್ನಿಸಿರುವ ವಿಷಯ ತಿಳಿಯಿತು.

ಅಮ್ಮ ಹೀಗೆ ಮಾಡಿ ಬರಬಹುದೆಂದು ತ್ರಿನೇತ್ರಾ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಅವಳು ಕೋಪದಿಂದ ಕೆಂಡದುಂಡೆಯಂತಾಗಿ ಅಮ್ಮನ ಕೋಣೆಗೆ ಹೋಗಿ, “ನೀವೇಕೆ ಹೋಗಿ ಈ ರೀತಿ ಮಾಡುತ್ತೀರಿ? ಹೀಗೆ ಮಾಡಿ ನಿಮ್ಮ ಗೌರವವನ್ನು ನೀವೇ ಕಳೆದುಕೊಂಡಿರಿ. ಇದು ನನ್ನ ಜೀವನ, ನಾನು ಯಾರನ್ನು ಬೇಕಾದರೂ ಮದುವೆ ಮಾಡಿಕೊಳ್ಳಬಹುದು. ನಾನು ಪ್ರಾಪ್ತ ವಯಸ್ಕಳು, ನನ್ನ ಮೇಲೆ ನೀವು ಯಾವುದೇ ನಿರ್ಬಂಧ ಹೇರಲು ಸಾಧ್ಯವಿಲ್ಲ. ಹಾಗೆ ನೋಡಿದರೆ ನಾನು ಮನೆ ಬಿಟ್ಟು ಹೋಗಲು ಸಿದ್ಧಳಿದ್ದೆ. ಆದರೆ ಅಪ್ಪನ ಮುಖ ನೋಡಿ ಸುಮ್ಮನಿದ್ದೇನೆ,” ಎಂದು ಹೇಳಿ ತನ್ನ ರೂಮಿಗೆ ಹೊರಟುಹೋದಳು.

ಪತಿ ಅಮರ್‌ ರಂತೂ ಹೆಂಡತಿಯ ವರ್ತನೆಯ ಬಗ್ಗೆ ಬೇಸತ್ತು ಹೋಗಿದ್ದರು. ನಳಿನಿ ಎಂದೂ ಅಮರ್‌ ಗೆ ಗಂಡನೆಂದು ಗೌರವ ಕೊಟ್ಟಿರಲಿಲ್ಲ. ಅವಳು ಹೇಗೆ ಹೇಳುತ್ತಾಳೋ ಮನೆಯಲ್ಲಿ ಅದೇ ನಡೆಯುತ್ತಿತ್ತು. ಅಮರ್‌ ಎಂದೂ ಕೂಡ ಹೆಂಡತಿಯ ಮಾತನ್ನು ನಿರಾಕರಿಸಿರಲಿಲ್ಲ. ಅಷ್ಟು ಧೈರ್ಯ ಅವರಲ್ಲಿ ಇರಲೇ ಇಲ್ಲ.

ನಳಿನಿ ಶ್ರೀಮಂತ ಮನೆತನದವಳು. ಅವಳ ಅಪ್ಪ ನೇವಿಯಲ್ಲಿ ದೊಡ್ಡ ಅಧಿಕಾರಿ ಆಗಿದ್ದರು. ಹಳ್ಳಿಯಲ್ಲೂ ಅವರಿಗೆ ಸಾಕಷ್ಟು ಆಸ್ತಿಪಾಸ್ತಿ ಇತ್ತು. ಆದರೆ ನಳಿನಿ ಅವರಿಗೆ ಏಕೈಕ ಪುತ್ರಿಯಾಗಿದ್ದಳು.

ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದು ದೊಡ್ಡವಳಾದ ನಳಿನಿ ಬಾಲ್ಯದಿಂದಲೇ ಬಹಳ ಹಠಮಾರಿ ಸ್ವಭಾವದವಳಾಗಿದ್ದಳು. ಅವಳ ತಂದೆ ತನ್ನ ಮಗಳಿಗೆ ಶಾಂತ ಸ್ವಭಾವದ ವರನನ್ನು ಹುಡುಕುತ್ತಿದ್ದರು. ಅವಳ ಕೋಪ ಸಹಿಸಿಕೊಳ್ಳುವ ವ್ಯಕ್ತಿ ಅವರಿಗೆ ಬೇಕಿತ್ತು.

ಅಮರ್‌ ನಂತಹ ವರನೇ ನಳಿನಿಗೆ ಸೂಕ್ತ ಎಂದು ಅವಳ ತಂದೆ ನಿರ್ಧರಿಸಿದರು. ವರದಕ್ಷಿಣೆಯ ಆಸೆಗಾಗಿ ಅಮರ್‌ ನ ತಾಯಿ ತಂದೆ ಕೂಡ ನಳಿನಿ ಜೊತೆ ತಮ್ಮ ಮಗನ ಮದುವೆ ಮಾಡಲು ಸಿದ್ಧರಾದರು. ಆದರೆ ಹಣವೆಂದೂ ಸುಖ ನೀಡುವುದಿಲ್ಲ ಎನ್ನುವುದರ ಬಗ್ಗೆ ಅವರು ಯೋಚಿಸಲು ಹೋಗಲಿಲ್ಲ.

ನಳಿನಿ ಎಂದೂ ಅಮರ್‌ ಜೊತೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಅತ್ತೆ ಮಾವರನ್ನು ಕೂಡ ಗೌರವಿಸುತ್ತಿರಲಿಲ್ಲ. ಅವಳಿಗೆ ತನ್ನ ಆಸ್ತಿ ಅಂತಸ್ತಿನ ಬಗ್ಗೆ ಎಷ್ಟು ಅಹಂ ಇತ್ತೆಂದರೆ, ಅವಳು ತನ್ನೆದುರಿನ ಪ್ರತಿಯೊಬ್ಬ ವ್ಯಕ್ತಿಯನ್ನು ತುಚ್ಛವಾಗಿ ಕಾಣುತ್ತಿದ್ದಳು.

ಮಗಳು ಹರ್ಷನನ್ನು ತಾನಾಗಿಯೇ ತಿರಸ್ಕರಿಸುವಂತಹ ಯಾವುದಾದರೂ ಉಪಾಯ ಮಾಡಬೇಕೆಂದು ನಳಿನಿ ಮನಸ್ಸಿನಲ್ಲಿ ಯೋಚಿಸಿದಳು.

ಅದೊಂದು ದಿನ ನಳಿನಿ ಕಾರಿನಲ್ಲಿ ಎಲ್ಲೋ ಹೊರಟಿದ್ದಾಗ, ಹರ್ಷ ಯಾವುದೊ ಹುಡುಗಿಯ ಜೊತೆ ಬಸ್‌ ನಿಲ್ದಾಣದಲ್ಲಿ ನಿಂತಿರುವುದು ಕಂಡುಬಂತು. ಇಬ್ಬರೂ ಅದೆಷ್ಟು ನಿಕಟರಾಗಿ ನಿಂತಿದ್ದರೆಂದರೆ, ನಳಿನಿಗೆ ಸಂದೇಹ ಉಂಟಾಯಿತು. ಅವಳು ತನ್ನ ಗಾಡಿಯನ್ನು ಒಂದು ಕಡೆ ಪಾರ್ಕ್‌ ಮಾಡಿದಳು. ಇಬ್ಬರೂ ನಗು ನಗುತ್ತಾ ಮಾತನಾಡುತ್ತಿರುವುದನ್ನು ನೋಡಿದಳು. ಬಳಿಕ ಇಬ್ಬರೂ ಜೂಸ್‌ ಕುಡಿದರು.

ಬಸ್‌ ನಲ್ಲಿ ಕೂರಿಸುವ ಮುನ್ನ ಆ ಹುಡುಗಿ ಹರ್ಷನನ್ನು ತಬ್ಬಿಕೊಂಡಳು. ಬಳಿಕ ಹರ್ಷ ಅವಳ ಕೆನ್ನೆ ಸವರುತ್ತಾ ಅವಳನ್ನು ಬೀಳ್ಕೊಟ್ಟ. ನಳಿನಿ ಆ ಎಲ್ಲ ದೃಶ್ಯಗಳನ್ನು ತನ್ನ ಫೋನ್‌ ನಲ್ಲಿ ಸೆರೆಹಿಡಿದಳು.

ಹರ್ಷ ಹಾಗೂ ಆ ಹುಡುಗಿಯ ಫೋಟೋವನ್ನು ಮಗಳಿಗೆ ತೋರಿಸುತ್ತಾ, “ನೋಡು ನಿನ್ನ ಹರ್ಷನ ಚಾರಿತ್ರ್ಯ ಹೇಗಿದೆ? ನೀನು ಅವನನ್ನು ಕಣ್ಮುಚ್ಚಿ ನಂಬಿರುವೆ. ವಾಸ್ತವದಲ್ಲಿ ಅವನೇನು ಎನ್ನುವುದನ್ನು ನೀನು ತಿಳಿದುಕೋ. ಅವನು ನಿನ್ನವನ್ನಲ್ಲ, ನಿನ್ನ ಹಣವನ್ನು ಪ್ರೀತಿಸುತ್ತಿದ್ದಾನೆ. ಪ್ರೀತಿಯ ನಾಟಕವಾಡಿ ಅವನು ನಿನ್ನನ್ನು ಮೋಸಗೊಳಿಸುತ್ತಿದ್ದಾನೆ,” ಎಂದು ಒಂದೇ ಉಸಿರಿನಲ್ಲಿ ನಳಿನಿ ಹೇಳಿದಳು.

“ಅಮ್ಮ, ನಿಮಗೇನಾಗಿದೆ? ನೀವು ಹಿಂದೆ ಮುಂದೆ ಯೋಚಿಸದೆ ಏನೇನೋ ಹೇಳುತ್ತಿರುವಿರಿ. ಈ ಫೋಟೋ ತೋರಿಸಿ, ಅವನ ಚಾರಿತ್ರ್ಯದ ಬಗ್ಗೆ ಅವಹೇಳನ ಮಾಡುತ್ತಿರುವಿರಿ. ಅವನ ಜೊತೆಗಿದ್ದ ಹುಡುಗಿ ಅವನ ಚಿಕ್ಕಪ್ಪನ ಮಗಳು. ಅವಳು ಇಲ್ಲಿಗೆ ಬ್ಯಾಂಕ್ ಎಕ್ಸಾಮ್ ಗೆ ಬಂದಿದ್ದಳು. ಹರ್ಷ ಅವಳನ್ನು ಊರಿಗೆ ಕಳಿಸಲು ಬಸ್‌ ಸ್ಟಾಂಡ್‌ಗೆ ಹೋಗಿದ್ದ.

“ಹಣ…. ಹಣ….. ಹಣ ನಿಮಗೆ ಕಣ್ಣಿಗೆ ಕಾಣುವುದು ಕೇವಲ ಹಣ ಮಾತ್ರವೇ? ಮನುಷ್ಯನಿಗೆ ಹಣವೇ ಎಲ್ಲವೂ ಆಗಿರುತ್ತಾ? ಹರ್ಷ ನನ್ನನ್ನು ಹಣಕ್ಕಾಗಿ ಪ್ರೀತಿಸುತ್ತಾನೆ ಅನ್ನುವುದು ನಿಮ್ಮ ತಪ್ಪು ಕಲ್ಪನೆ. ನನಗೆ ನಿಮ್ಮ ಹಣ ಬೇಕಿಲ್ಲ. ನಾನು ಹರ್ಷನ ಜೊತೆಗೆ ಎಂಥದೇ ಸ್ಥಿತಿಯಲ್ಲೂ ಖುಷಿಯಾಗಿರ್ತೀನಿ,” ಎಂದು ಹೇಳುತ್ತಾ ತ್ರಿನೇತ್ರಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು.

ಅಮ್ಮನ ನಡವಳಿಕೆಯಿಂದ ತ್ರಿನೇತ್ರಾ ಬೇಸತ್ತು ಹೋಗಿದ್ದಳು. ಆಗಾಗ ಹರ್ಷನ ವಿಷಯ ಪ್ರಸ್ತಾಪಿಸಿ ಅವನನ್ನು ಅವಹೇಳನ ಮಾಡಲು ಪ್ರಯತ್ನಿಸುತ್ತಿದ್ದಳು. ತನಗೆ ಅವನು ಸೂಕ್ತ ಜೋಡಿಯಲ್ಲವೆಂದು ಅವರು ಒತ್ತಿ ಒತ್ತಿ ಹೇಳುತ್ತಿದ್ದರು. ಅವರು ಕಡುಬಡವರು. ಅವರು ನಿನ್ನನ್ನು ಹೇಗೆ ತಾನೇ ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ ಎಂದು ಅವರು ಒತ್ತಿ ಒತ್ತಿ ಹೇಳುತ್ತಿದ್ದರು.

ನಳಿನಿ ತನ್ನ ಸ್ನೇಹಿತೆಯ ಮಗ ವಿಲಿಯಮ್ ಜೊತೆಗೆ ಮಗಳ ಮದುವೆ ಆಗಿ ಅಮೆರಿಕಾದಲ್ಲಿ ಸುಖವಾಗಿರಬೇಕೆಂದು ಬಯಸುತ್ತಿದ್ದರು. ವಿಲಿಯಮ್ ಜೊತೆ ತನ್ನ ಮಗಳು ಸ್ವಲ್ಪ ಸುತ್ತಾಡಿದರೆ ಅವನು ಇಷ್ಟವಾಗಬಹುದು ಎಂದುಕೊಂಡಿದ್ದಳು. ಆದರೆ ತ್ರಿನೇತ್ರಾ ಮಾತ್ರ ಅವನನ್ನು ಇಷ್ಟಪಡುತ್ತಿರಲಿಲ್ಲ.

ನಳಿನಿಯ ಗೆಳತಿ ಭಾರತದವಳೇ. ಆದರೆ ಅವಳು ಅಮೆರಿಕಾಕ್ಕೆ ಹೋಗಿ ಅಲ್ಲಿಯವನನ್ನೇ ಮದುವೆಯಾಗಿ ಅಲ್ಲಿಯವಳೇ ಆಗಿಹೋದಳು. ಆದರೂ ಇಬ್ಬರೂ ಗೆಳತಿಯರ ನಡುವೆ ಮಾತುಕತೆ ನಿರಂತರವಾಗಿ ನಡೆಯುತ್ತಿತ್ತು.

ಅದೆಷ್ಟೋ ಸಲ ನಳಿನಿ ಅಮೆರಿಕಾಕ್ಕೆ ಹೋಗಿ ಅವಳ ಮನೆಯಲ್ಲಿ ಉಳಿದು ಬಂದಿದ್ದಳು. ಅವಳಿಗೆ ವಿಲಿಯಮ್ ಬಹಳ ಇಷ್ಟವಾಗುತ್ತಿದ್ದ. ಗೆಳತಿಯ ಮಗನ ಜೊತೆ ಮದುವೆ ಮಾಡಿ ತಾನೇಕೆ ಹೊಸದೊಂದು ಅಧ್ಯಾಯ ಬರೆಯಬಾರದೆಂದು ನಳಿನಿ ಯೋಚಿಸುತ್ತಿದ್ದಳು. ಆದರೆ ತ್ರಿನೇತ್ರಾ ಕನಸು ಮನಸ್ಸಿನಲ್ಲಿಯೂ ವಿಲಿಯಮ್ ಜೊತೆ ಮದುವೆಯಾಗಲು ಯೋಚಿಸುತ್ತಿರಲಿಲ್ಲ.

ಅಮ್ಮನ ಒತ್ತಾಯಕ್ಕೆ ಮಣಿದು ಅವಳು ಕೆಲವು ಸಲ ವಿಲಿಯಮ್ ಜೊತೆ ಸುತ್ತಾಡಲು ಹೋಗುತ್ತಿದ್ದಳು. ಆದರೆ ಮದುವೆಯ ಬಗ್ಗೆ ಮಾತ್ರ ಖಂಡಿತಾ ಒಪ್ಪುತ್ತಿರಲಿಲ್ಲ. ವಿಲಿಯಮ್ ತನ್ನ ಅಮೆರಿಕನ್‌ ಸ್ನೇಹಿತರ ಜೊತೆ ಫೋನ್‌ ನಲ್ಲಿ ಹುಡುಗಿಯರ ಪ್ರೈವೇಟ್‌ ಪಾರ್ಟ್‌ ಗಳ ಬಗ್ಗೆ ಮಾತನಾಡುತ್ತಾ ನಗುತ್ತಿದ್ದ. ಅವನ ಆ ಕೆಟ್ಟ ವರ್ತನೆ ಬಗ್ಗೆ ಅವಳಿಗೆ ಹೇಸಿಗೆ ಅನಿಸುತ್ತಿತ್ತು.

ವಿಲಿಯಮ್ ನ ಚರ್ಮ ಮಾತ್ರ ಬೆಳ್ಳಗಿತ್ತು. ಅವನ ಮನಸ್ಸು ಮಾತ್ರ ಕಾಡಿಗೆ ಕಪ್ಪಿನಂತಿತ್ತು. ಅವನು ಎಷ್ಟೋ ಸಲ ತ್ರಿನೇತ್ರಾಳನ್ನು ತಬ್ಬಿಕೊಳ್ಳಲು, ಚುಂಬಿಸಲು ಯತ್ನಿಸುತ್ತಿದ್ದ. ಆದರೆ ತ್ರಿನೇತ್ರಾ ಅವನಿಗೆ ಅದಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ನಳಿನಿ ತ್ರಿನೇತ್ರಾಳನ್ನು ವಿಲಿಯಮ್ ಗೆ ಎಷ್ಟು ಹತ್ತಿರ ಮಾಡಲು ಪ್ರಯತ್ನ ಪಡುತ್ತಿದ್ದಳೋ ಅವಳು ಅವನಿಂದ ದೂರವಾಗಲು ಅಷ್ಟೆ ಪ್ರಯತ್ನಿಸುತ್ತಿದ್ದಳು.

ತ್ರಿನೇತ್ರಾ ತನ್ನ ಅಮ್ಮನಿಗೆ ವಿಲಿಯಮ್ ಒಳ್ಳೆಯ ಹುಡುಗನಲ್ಲ. ಅವನು ಹುಡುಗಿಯರನ್ನು ಬಹಳ ಕೀಳಾಗಿ ಕಾಣುತ್ತಾನೆ ಎಂದು ಹೇಳುತ್ತಿದ್ದಳಾದರೂ ಅವರು ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ.

ಸ್ಕಾಲರ್‌ ಶಿಪ್‌ ಗಾಗಿ ಹರ್ಷ ಪರೀಕ್ಷೆ ಬರೆದಿದ್ದ. ಅದರಲ್ಲಿ ಉತ್ತೀರ್ಣನಾಗಿ ಆಯ್ಕೆಯೂ ಆದ. 2 ವರ್ಷಗಳ ಮಟ್ಟಿಗೆ ಸ್ಕಾಲರ್‌ ಶಿಪ್ ಮೇಲೆ ಸ್ವಿಡ್ಜರ್ಲೆಂಡ್‌ ಗೆ ಹೋದ. ತ್ರಿನೇತ್ರಾ ಕೂಡ ಬಿಬಿಎ ಮಾಡಿದ ಬಳಿಕ ಎಂಬಿಎ ಮಾಡಲು ಸ್ವಿಡ್ಜರ್ಲೆಂಡ್‌ ಗೆ ಹೋದಳು.

ಅಲ್ಲಿಂದ ವಾಪಸ್ಸಾದ ಬಳಿಕ ಇಬ್ಬರೂ ಮದುವೆಯಾಗುವುದೆಂದು ನಿರ್ಧರಿಸಿದ್ದರು. ತ್ರಿನೇತ್ರಾ ತನ್ನ ಯೋಜನೆಯನ್ನು ಅಪ್ಪನಿಗೆ ಮೊದಲೇ ತಿಳಿಸಿದ್ದಳು. ಆದರೆ ಅಮ್ಮನಿಗೆ ಈ ವಿಷಯ ತಿಳಿಸಲು ಅವಳಿಗೆ ಹೆದರಿಕೆ ಆಗುತ್ತಿತ್ತು. ಅವರೆಲ್ಲಿ ಇದಕ್ಕೂ ಕಲ್ಲು ಹಾಕುತ್ತಾರೋ ಎಂದು ಅವಳಿಗೆ ಭೀತಿ ಕಾಡುತ್ತಿತ್ತು. ಭಾರತಕ್ಕೆ ಬಂದ ನಂತರವೇ ಹೇಳಿದರಾಯಿತು ಎಂದು ಅವಳು ಅಂದುಕೊಂಡಿದ್ದಳು.

ಮಗಳ ಬಾಯಿಯಿಂದ ಹರ್ಷನ ಜೊತೆಗೆ ಮದುವೆ ಎಂಬ ವಿಷಯ ತಿಳಿದು ತಾಯಿಮಗಳ ನಡುವೆ ಮಾತಿನ ಚಕಮಕಿಯೇ ನಡೆಯಿತು. ತ್ರಿನೇತ್ರಾ ಅಮ್ಮನ ಮಾತನ್ನು ಒಪ್ಪಲು ತಯಾರಿರಲಿಲ್ಲ ಹಾಗೂ ಅಮ್ಮ ಮಗಳ ಭಾವನೆಯನ್ನು ತಿಳಿದುಕೊಳ್ಳಲು ಸಿದ್ಧರಿರಲಿಲ್ಲ.

ಹರ್ಷನ ರೀತಿನೀತಿ, ಉಡುಪು, ಊಟ, ತಿಂಡಿ ಎಲ್ಲ ಭಿನ್ನವಾಗಿದೆ. ಎರಡೂ ಕುಟುಂಬಗಳಿಗೂ ಯಾವುದರಲ್ಲೂ ಹೊಂದಾಣಿಕೆಯಾಗುವುದಿಲ್ಲ. ಅಂಥ ಹುಡುಗನ ಜೊತೆ ನೀನು ಹೇಗೆ ಸಂಸಾರ ಸಾಗಿಸುತ್ತೀಯಾ? ಎಂದು ಮಗಳಿಗೆ ಕೇಳುತ್ತಿದ್ದಳು. ನೀನೇನಾದರೂ ಅವನನ್ನು ಮದುವೆಯಾದರೆ ಸಮಾಜದಲ್ಲಿ ನನ್ನ ಮಾನ ಹರಾಜಾಗುತ್ತದೆ ಎಂದು ಹೇಳುತ್ತಿದ್ದಳು.

ಆದರೆ ತ್ರಿನೇತ್ರಾ ತಾಯಿಯ ಯಾವ ಮಾತನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ತಾನು ಸಾಯುತ್ತೇನೇ ಹೊರತು ಹರ್ಷನ ವಿನಾ ಬೇರಾರನ್ನು ಮದುವೆಯಾಗುವುದಿಲ್ಲ ಎಂದು ಹಟ ಹಿಡಿಯುತ್ತಿದ್ದಳು. ತ್ರಿನೇತ್ರಾ ಪ್ರಬುದ್ಧ ವಯಸ್ಸಿನವಳಾಗಿದ್ದು, ತನ್ನ ಇಚ್ಛೆಯ ಮೇರೆಗೆ ಯಾರನ್ನಾದರೂ ಮದುವೆಯಾಗಬಹುದು. ತಾನು ಅದನ್ನು ತಡೆಯಲು ಆಗುವುದಿಲ್ಲ ಎಂದು ಹೆದರಿಕೆ ಉಂಟಾಗುತ್ತಿತ್ತಾದರೂ ಅವಳು ತನ್ನ ಸೋಲು ಒಪ್ಪಲು ತಯಾರಿರಲಿಲ್ಲ.

ನಳಿನಿ ತ್ರಿನೇತ್ರಾಳಿಗೆ ಹರ್ಷನನ್ನು ಭೇಟಿಯಾಗಲು ನಿರ್ಬಂಧ ಹೇರಿದಳು. ಅವಳು ಏಕಾಂಗಿಯಾಗಿ ಎಲ್ಲಿಯೂ ಹೋಗಲು ಅವಕಾಶ ಕೊಡುತ್ತಿರಲಿಲ್ಲ. ಫೋನ್‌ ನಲ್ಲಿ ಅವಳು ಯಾರೊಂದಿಗೆ ಎಷ್ಟು ಸಮಯ ಮಾತಾಡುತ್ತಾಳೆ ಎಂಬ ಬಗ್ಗೆಯೂ ಹದ್ದಿನ ಕಣ್ಣು ಇಟ್ಟಿದ್ದಳು. ಮನೆಯ ಆಸುಪಾಸು ಸುರಕ್ಷತೆ ವ್ಯವಸ್ಥೆಯನ್ನು ಬಲಪಡಿಸಿದ್ದಳು. ಹರ್ಷ ತನ್ನ ಮನೆ ಆಸುಪಾಸು ಸುಳಿಯದಂತೆ ನೋಡಿಕೊಂಡಿದ್ದಳು. ಅವಳು ಎಲ್ಲಿಯವರೆಗೆ ವಿಲಿಯಮ್ ನನ್ನು ಮದುವೆಯಾಗಲು ಒಪ್ಪಿಗೆ ಕೊಡುವುದಿಲ್ಲವೇ, ಅಲ್ಲಿಯವರೆಗೆ ಹೀಗೆಯೇ ಇರಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಳು.

ತ್ರಿನೇತ್ರಾ ಅಮ್ಮನ ಪ್ರತಿ ಮಾತಿಗೆ ಪ್ರತ್ಯುತ್ತರ ಕೊಡಬಹುದಿತ್ತು. ಮನೆಯಿಂದ ಓಡಿಹೋಗಿ ಹರ್ಷನ ಜೊತೆ ಮದುವೆಯಾಗಬಹುದಿತ್ತು. ಆದರೆ ಅವಳು ಅಪ್ಪನ ಯೋಚನೆಗೆ ಮನ್ನಣೆ ಕೊಟ್ಟು ಸುಮ್ಮನಿದ್ದಳು. ತಾನೇನಾದರೂ ಮನೆಬಿಟ್ಟು ಹೋದರೆ ಅಮ್ಮ ಅಪ್ಪನ ಜೀವನ ನರಕ ಆದೀತೆಂದು ತ್ರಿನೇತ್ರಾಳಿಗೆ ಚೆನ್ನಾಗಿ ಗೊತ್ತಿತ್ತು.

ಅಂದು ವಿಲಿಯಮ್ ನ ಹುಟ್ಟುಹಬ್ಬ. ನಳಿನಿ ಅಮರ್‌ ಹಾಗೂ ತ್ರಿನೇತ್ರಾ ಆ ಪಾರ್ಟಿಗೆ ವಿಶೇಷ ಅತಿಥಿಗಳಾಗಿದ್ದರು. ತ್ರಿನೇತ್ರಾ ಆ ಪಾರ್ಟಿಗೆ ಹೋಗಲು ಇಚ್ಛಿಸುತ್ತಿರಲಿಲ್ಲ. ಆದರೆ ಮನೆಯಲ್ಲಿ ನಳಿನಿ ಮಾಡಿದ ರಂಪಕ್ಕೆ ಹೆದರಿ ಅಪ್ಪ ಮಗಳನ್ನು ಪಾರ್ಟಿಗೆ ಹೋಗಲು ಒಪ್ಪಿಸಿದರು.

ಆ ಪಾರ್ಟಿ ನಗರದ ಭವ್ಯ ಹೋಟೆಲ್ ‌ನಲ್ಲಿ ಏರ್ಪಾಟಾಗಿತ್ತು. ಆ ಪಾರ್ಟಿಗೆ ನಗರದ ಗಣ್ಯಾತಿಗಣ್ಯರ ಹೊರತಾಗಿ ಅಮೆರಿಕಾದಿಂದ ಅವನ ಕೆಲವು ಗೆಳೆಯರು ಬಂದಿದ್ದರು. ಅವರನ್ನು ವಿಲಿಯಮ್ ತ್ರಿನೇತ್ರಾಳನ್ನು ಭೇಟಿ ಮಾಡಿಸಲು ಯೋಚಿಸಿದ್ದ.

ಮಗಳು ಹೇಗಾದರೂ ಮಾಡಿ ವಿಲಿಯಮ್ ನನ್ನು ಇಷ್ಟಪಡಬೇಕು ಹಾಗೂ ಹರ್ಷನನ್ನು ಮರೆತುಬಿಡಬೇಕು ಎಂದು ಅಮ್ಮ ನಳಿನಿ ಬಯಸಿದ್ದಳು. ಹಾಗಾಗಿ ಅವಳು ಮಗಳಿಗೆ ಒತ್ತಡ ತಂದು ವಿಲಿಯಮ್ ಜೊತೆಗೆ ಡ್ಯಾನ್ಸ್ ಮಾಡಲು ಕಳಿಸಿಕೊಟ್ಟಳು.

ಒಂದು ಅರ್ಜೆಂಟ್‌ ಕಾಲ್ ಬಂದ ಕಾರಣದಿಂದ ನಳಿನಿಗೆ ಪಾರ್ಟಿಯ ಮಧ್ಯದಲ್ಲಿಯೇ ಹೊರಗೆ ಹೋಗಬೇಕಾಗಿ ಬಂದಿತು. ಪಾರ್ಟಿ ಬಹಳ ಹೊತ್ತಿನ ತನಕ ನಡೆಯಿತು. ಡ್ಯಾನ್ಸ್ ಬಳಿಕ ವಿಲಿಯಮ್ ತ್ರಿನೇತ್ರಾಳಿಗೆ ಡ್ರಿಂಕ್‌ ತಂದು ಕೊಟ್ಟ. ಇಷ್ಟವಿಲ್ಲದಿದ್ದರೂ ಅವಳು ಅದನ್ನು ಕುಡಿಯಬೇಕಾಗಿ ಬಂತು. ಆದರೆ ಡ್ರಿಂಕ್‌ ಕುಡಿಯುತ್ತಿದ್ದಂತೆ ಅವಳಿಗೆ ಮತ್ತೇರತೊಡಗಿತು. ಅವಳು ಹಾಗೆಯೇ ಸೋಫಾದ ಮೇಲೆ ಒರಗಿದಳು.

ವಿಲಿಯಮ್ ಗೆ ತ್ರಿನೇತ್ರಾಳ ಬಗ್ಗೆ ಒಳ್ಳೆಯ ಭಾವನೆ ಇರಲಿಲ್ಲ. ಆ ವಿಷಯವನ್ನು ಹರ್ಷ ಮೊದಲೇ ಅರಿತಿದ್ದ. ಹೀಗಾಗಿ ಅವನು ಹೇಗೋ ಕಷ್ಟಪಟ್ಟು ಆ ಪಾರ್ಟಿಯಲ್ಲಿ ಸೇರಿಕೊಂಡಿದ್ದ.

ವಿಲಿಯಮ್ ತ್ರಿನೇತ್ರಾಳನ್ನು ಕೋಣೆಗೆ ಕರೆದುಕೊಂಡು ಹೋಗುವುದನ್ನು ಹರ್ಷ ಗಮನಿಸಿದ. ಆದರೆ ಯಾವ ಕೋಣೆಗೆ ಕರೆದುಕೊಂಡು ಹೋದ ಎಂಬುದು ಗೊತ್ತಾಗಲಿಲ್ಲ. ಹೋಟೆಲ್ ‌ನ ಒಂದು ಕೋಣೆಯ ಮುಂದೆ ತ್ರಿನೇತ್ರಾಳ ಬ್ರೇಸ್‌ ಲೆಟ್‌ ಬಿದ್ದಿರುವುದು ಕಾಣಿಸಿತು. ಆ ಕೋಣೆಯ ಬಾಗಿಲಿಗೆ ಕಿವಿ ಇಟ್ಟಾಗ ಒಳಗೆ ಏನೇನೋ ಸದ್ದುಗಳು ಕೇಳಿಬಂದವು. ತ್ರಿನೇತ್ರಾ ಇದೇ ಕೋಣೆಯಲ್ಲಿದ್ದಾಳೆ ಎಂಬುದು ಅವನ ಗಮನಕ್ಕೆ ಬಂದಿತು.

ಅವನು ತಕ್ಷಣವೇ ಹೋಟೆಲ್ ಮ್ಯಾನೇಜರ್‌ ಬಳಿ ಹೋಗಿ ಎಲ್ಲ ವಿಷಯ ತಿಳಿಸಿದ.

“ಒಂದು ವೇಳೆ ಆ ಹುಡುಗಿಯ ಜೊತೆ ಅಂಥದ್ದೇನಾದರೂ ಘಟಿಸಿದರೆ, ಅದಕ್ಕೆ ಹೋಟೆಲ್ ‌ಹೊಣೆಯಾಗುತ್ತದೆ. ಕೆಟ್ಟ ಹೆಸರು ಕೂಡ ಬರುತ್ತದೆ, ಹಾಗಾಗಬಾರದು,” ಎಂದ.

ಹರ್ಷನ ಮಾತು ಆಲಿಸಿ ಹೋಟೆಲ್ ಮ್ಯಾನೇಜರ್‌ ಬೇರೊಂದು ಬೀಗದ ಕೈ ಜೊತೆಗೆ ಹೋಗಿ ಬಾಗಿಲು ತೆಗೆಸಿದ. ಅಲ್ಲಿನ ದೃಶ್ಯ  ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು.

ವಿಲಿಯಮ್ ತನ್ನ ಇಬ್ಬರು ಗೆಳೆಯರ ಜೊತೆ ಅವಳ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸುತ್ತಿದ್ದ. ಅವರೆ ಪ್ರಜ್ಞಾವಸ್ಥೆಯಲ್ಲಿಯೇ ಅವಳು ತನ್ನನ್ನು ತಾನು ಬಚಾವ್ ‌ಮಾಡಿಕೊಳ್ಳಲು ಪ್ರಯತ್ನಿಸಿದ್ದಳು.

“ನನ್ನ ಮಗಳ ಜೊತೆ ಈ ರೀತಿ ನಡೆದಕೊಳ್ಳಲು ನಿನಗೆಷ್ಟು ಧೈರ್ಯ?” ಎಂದು ಜೋರಾಗಿ ಕೂಗುತ್ತಾ ನಳಿನಿ ವಿಲಿಯಮ್ ನ ಕೆನ್ನೆಗೆ ಜೋರಾಗಿ ಬಾರಿಸಿದಳು. ಉಳಿದ ಇಬ್ಬರು ಹುಡುಗರಿಗೂ ಕೂಡ ಅವಳು ಕಪಾಳಮೋಕ್ಷ ಮಾಡಿದಳು.

ತನ್ನ ಗೆಳತಿಯನ್ನು ಕೂಡ ಅವಳು ಚೆನ್ನಾಗಿ ತರಾಟೆಗೆ ತೆಗೆದುಕೊಂಡಳು, “ನಿನ್ನ ಮಗನ ಬಣ್ಣ ಈಗಲೇ ಬಯಲಾಯಿತು. ಇಲ್ಲದಿದ್ದರೆ ನಾನು ಹಾಳಾಗಿ ಹೋಗುತ್ತಿದ್ದೆ,” ಎಂದಳು.

ಅಷ್ಟು ಹೊತ್ತಿಗೆ ಪೊಲೀಸರು ಅಲ್ಲಿಗೆ ಬಂದರು. ವಿಲಿಯಮ್ ನ ತಾಯಿ ಎಲ್ಲರೆದರು ನಳಿನಿಗೆ ಕೈ ಮುಗಿದಳು ಕಾಲು ಕೂಡ ಹಿಡಿದಳು. ಆದರೆ ನಳಿನಿ ಅವಳ ಯಾವೊಂದು ಮಾತಿಗೂ ಬೆಲೆ ಕೊಡಲಿಲ್ಲ. ವಿಲಿಯಮ್, ಅವನ ಇಬ್ಬರೂ ಗೆಳೆಯರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋದರು.

ಇಂದು ಹರ್ಷ ಇಲ್ಲಿಗೆ ಬರದೇ ಇದ್ದಿದ್ದರೆ ತನ್ನ ಮಗಳ ಸ್ಥಿತಿ ಏನಾಗುತ್ತಿತ್ತು ಎಂದು ಯೋಚಿಸಿ ನಳಿನಿ ಕಂಗಾಲಾಗಿ ಹೋಗಿದ್ದಳು. ಆ ದುರುಳರು ಅವಳನ್ನು ಬಲಾತ್ಕರಿಸಿ ಕೊಲೆ ಕೂಡ ಮಾಡಿದ್ದರೂ ತಾನೇನು ಮಾಡಲು ಆಗುತ್ತಿತ್ತು?

ನಳಿನಿಗೆ ಇಂದು ಮೊದಲ ಬಾರಿ ಮಗಳು ಸರಿಯಾದ ನಿರ್ಧಾರ ಕೈಗೊಂಡಿದ್ದಳು. ತನ್ನ ನಿರ್ಧಾರವೇ ತಪ್ಪಾಗಿತ್ತು ಎಂದೆನಿಸಿತು. ಹಣವೇ ಎಲ್ಲವೂ ಅಲ್ಲ ಎಂದು ತ್ರಿನೇತ್ರಾ ಸರಿಯಾಗಿ ಹೇಳುತ್ತಿದ್ದಳು. ಮನುಷ್ಯ ಒಳ್ಳೆಯನಾಗಿರಬೇಕು, ಸತ್ಯ ಅವನ ಜೊತೆಗಿರಬೇಕು. ಹಣವನ್ನು ಹೇಗೆ ಬೇಕಾದರೂ ಗಳಿಸಬಹುದು. ಆದರೆ ಒಳ್ಳೆಯ ಸಂಸ್ಕಾರ ಎಲ್ಲರ ಬಳಿಯೂ ಇರುವುದಿಲ್ಲ.

ಓದಿ ಬರೆದು ದೊಡ್ಡ ವ್ಯಕ್ತಿಯಾಗುವುದು, ಒಳ್ಳೆಯ ಬಟ್ಟೆ ಧರಿಸುವುದು, ಒಳ್ಳೆಯ ಊಟ ಮಾಡುವುದು ಇವು ಒಳ್ಳೆಯ ಸಂಸ್ಕಾರಗಳಲ್ಲಿ ಸೇರುವುದಿಲ್ಲ. ಒಳ್ಳೆಯ ಸಂಸ್ಕಾರಗಳೆಂದರೆ ಇನ್ನೊಬ್ಬರ ದುಃಖವನ್ನು ಅರ್ಥ ಮಾಡಿಕೊಳ್ಳುವುದು, ತನಗಿಂತ ದೊಡ್ಡವರನ್ನು ಗೌರವಿಸುವುದು ಈ ಯಾವ ಗುಣವೂ ವಿಲಿಯಮ್ ನಲ್ಲಿ ಇರಲಿಲ್ಲ.

ವಿಲಿಯಮ್ ಒಳ್ಳೆಯ ಹುಡುಗನಲ್ಲ ಎಂದು ಅದೆಷ್ಟೋ ಸಲ ತ್ರಿನೇತ್ರಾ ಹೇಳಲು ಪ್ರಯತ್ನಿಸಿದ್ದಳು. ಆದರೆ ನಳಿನಿ ಅವಳ ಮಾತನ್ನು ನಿರ್ಲಕ್ಷಿಸಿ, ಅವಳ ಬಾಯಿ ಮುಚ್ಚಿಸುತ್ತಿದ್ದಳು. ಮನೆ ತಲುಪಿ ನಳಿನಿ ಕೇವಲ ಮಗಳು ತ್ರಿನೇತ್ರಾ, ಪತಿ ಅಮರ್‌ ರ ಕ್ಷಮೆಯನ್ನಷ್ಟೇ ಕೇಳಲಿಲ್ಲ. ಹರ್ಷನ ಎದುರು ಅವಳು ತಲೆ ತಗ್ಗಿಸಿ ನಿಂತಳು. ಅವಳು ಕೈ ಜೋಡಿಸಿ ತನ್ನನ್ನು ಕ್ಷಮಿಸುವಂತೆ ಕೇಳಿದಳು. ಮನುಷ್ಯ ಮನುಷ್ಯತ್ವದ ಆಯ್ಕೆಯಲ್ಲಿ ತಾನು ಎಡವಿದೆ ಎಂದು ತನ್ನ ತಪ್ಪು ಒಪ್ಪಿಕೊಂಡಳು.

“ಇಲ್ಲ ಆಂಟಿ ಪ್ಲೀಸ್‌, ನೀವು ಹೀಗೆ ಹೇಳಬೇಡಿ. ನೀವು ನಿಮ್ಮ ಸ್ಥಾನದಲ್ಲಿದ್ದುಕೊಂಡು ಸರಿಯಾಗಿ ಹೇಳಿದಿರಿ. ಅಮ್ಮ ಅಪ್ಪ ತಮ್ಮ ಮಕ್ಕಳಿಗೆ ಹೆಚ್ಚೆಚ್ಚು ಸುಖ ಕೊಡಲು ಪ್ರಯತ್ನಿಸುತ್ತಾರೆ. ನೀವು ಕೂಡ ಹಾಗೆಯೇ ಯೋಚಿಸಿದ್ದಿರಿ. ಅದರಲ್ಲಿ ನಿಮ್ಮ ತಪ್ಪೇನೂ ಇರಲಿಲ್ಲ. ವಿಲಿಯಮ್ ಜೊತೆಗೆ ಮದುವೆಯಾಗಿ ತ್ರಿನೇತ್ರಾ ಸುಖಿಯಾಗಿರುತ್ತಾಳೆಂದು ಭಾವಿಸಿದಿರಿ, ಅದರಲ್ಲಿ ತಪ್ಪೇನೂ ಇರಲಿಲ್ಲ.”

ಅವನ ಬಗ್ಗೆ ತಾನು ಕೆಟ್ಟದಾಗಿ ಯೋಚಿಸಿ ಅದೆಷ್ಟು ತಪ್ಪು ಮಾಡಿದೆ ಎಂದು ಅವಳಿಗೆ ಅನಿಸಿತು. ತನ್ನ ಹಠ ಹಾಗೂ ಅಹಂನ ಕಾರಣದಿಂದ ವಜ್ರವನ್ನು ಕಲ್ಲೆಂದು ಹಾಗೂ ಕಲ್ಲನ್ನು ವಜ್ರವೆಂದು ಭಾವಿಸಿದ್ದೆ ಎಂದು ಅವಳಿಗೆ ಅನಿಸಿತು.

ಇಂದು ಹರ್ಷನನ್ನು ಭೇಟಿಯಾಗಿ ನಳಿನಿಗೆ ಬಹಳ ಖುಷಿಯಾಗುತ್ತಿತ್ತು. ಇವತ್ತು ಅವಳು ಹೃದಯಪೂರ್ವಕವಾಗಿ ಹರ್ಷನನ್ನು ತನ್ನ ಅಳಿಯನೆಂದು ಭಾವಿಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ