36 ವರ್ಷದ ಅನುಪಮಾ ಮಹಿಳಾ ಉಪನ್ಯಾಸಕಿ. ಅವರು ಮನೋವಿಜ್ಞಾನದಲ್ಲಿ ಪಿ.ಎಚ್.ಡಿ ಮಾಡಿ ತಮಗಾಗಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಅವರ ಪತಿ ಪದವೀಧರರಾಗಿ ಪ್ರಾಪರ್ಟಿ ಡೀಲಿಂಗ್ ನ ವ್ಯವಹಾರ ನಡೆಸುತ್ತಾರೆ. ಮನೆಯಲ್ಲಿ ಅತ್ತೆ ಮಾವನ ಹೊರತಾಗಿ, ವಿಚ್ಛೇದಿತ ಮೈದುನು ಇದ್ದಾನೆ.
ಅನುಪಮಾಗೆ ಎಲ್ಲರೂ ನೌಕರಿ ಬಿಟ್ಟು ಮನೆಯಲ್ಲಿಯೇ ಇರಲು ಸಲಹೆ ಕೊಡುತ್ತಾರೆ. ಆದರೆ ಅನುಪಮಾಗೆ ಅದು ಇಷ್ಟವಾಗುವುದಿಲ್ಲ. ನೌಕರಿಯ ನೆಪದಲ್ಲಿ ತಾನೇ ಕೆಲವು ಗಂಟೆಗಳಾದರೂ ನಾಲ್ಕು ಗೋಡೆಗಳಿಂದ ಹೊರಗಿರಬಹುದು ಎಂಬ ಯೋಚನೆ ಅವರದ್ದಾಗಿದೆ.
ಅನುಪಮಾ ಬಹಳ ಕಷ್ಟಪಟ್ಟು ಎಲ್ಲರನ್ನೂ ಒಪ್ಪಿಸಿ ತಮ್ಮ ಉದ್ಯೋಗ ಮುಂದುವರಿಸಿಕೊಂಡು ಹೊರಟಿದ್ದಾರೆ. ಕಾಲೇಜಿಗೆ ಹೋಗುವ ಮುನ್ನ ಅವರು ಮನೆಯ ಎಲ್ಲ ಕೆಲಸಗಳನ್ನು ಮಾಡಬೇಕಾಗಿ ಬರುತ್ತದೆ. ಬೆಳಗ್ಗೆ ತಿಂಡಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮಧ್ಯಾಹ್ನದ ಅಡುಗೆ ಕೂಡ ಮಾಡಬೇಕಾಗುತ್ತದೆ. ಹೀಗಾಗಿ ಅವರು ಧಾವಂತದಿಂದಲೇ ಕಾಲೇಜಿಗೆ ತೆರಳುತ್ತಾರೆ. ಇಡೀ ದಿನ ಕೆಲಸ ಮಾಡಿ ಸುಸ್ತಾಗಿ ಮನೆಗೆ ಮರಳಿದಾಗ, ಅವರಿಗೆ ಯಾರೊಬ್ಬರೂ ಒಂದು ಕಪ್ ಚಹಾ ಸಹ ಮಾಡಿಕೊಡುವುದಿಲ್ಲ. ಅತ್ತೆ ಯಾವುದಾದರೂ ದೂರು ಹೊತ್ತುಕೊಂಡು ಅವರ ಮುಂದೆ ಪ್ರತ್ಯಕ್ಷರಾಗುತ್ತಾರೆ.
ಮಗಳಿಗೆ ಓದಿಸುವುದೇ ಆಗಿರಬಹುದು ಅಥವಾ ಬೇರೆ ಯಾವುದೇ ಕೆಲಸ ಇರಬಹುದು, ಗಂಡ ಅವರ ಮೇಲೆ ಅಧಿಕಾರ ಚಲಾಯಿಸುತ್ತಿರುತ್ತಾನೆ.
ಅವರು ಯಾವುದಾದರೂ ವಿಷಯಕ್ಕೆ ಸಂಬಂಧಪಟ್ಟಂತೆ ವಿರೋಧ ವ್ಯಕ್ತಪಡಿಸಿದರೆ ತಮ್ಮದೇ ಅಭಿಪ್ರಾಯಕ್ಕೆ ಕಟ್ಟುಬಿದ್ದರೆ ಆಗ ಗಂಡ ಅವರನ್ನು ಗದರಿಸುತ್ತಾ ಹೀಗೆ ಹೇಳುತ್ತಾನೆ, “ನೀನು ಓದು ಬಲ್ಲವಳೆಂಬ ಅಹಂನಿಂದ ಮೆರೀತಿದಿಯಾ? ನನಗೇ
ವಾದ ಮಾಡ್ತೀಯಾ? ಹಾಗೇನಾದರೂ ಮಾಡ್ತಾ ಇದ್ದರೆ ನಿನ್ನ ನಾಲಿಗೆ ಕಿತ್ತು ಕೈಗೆ ಕೊಡಬೇಕಾಗುತ್ತೆ.”
ಹಿಂದಿನಿಂದ ಅತ್ತೆ ಕೂಡ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ ಮಾಡುತ್ತಾ ಹೇಳುತ್ತಾರೆ, “ನಿನಗೆ ಅದೆಷ್ಟು ಸಲ ಹೇಳಿದ್ದೆ. ಈ ಓದಿದ ಹುಡುಗಿಯರು ಯಾವುದೇ ಕೆಲಸಕ್ಕೆ ಬರುವದಿಲ್ಲವೆಂದು. ತಾನೇ ದುಡಿದು ಮನೆ ನಡೆಸುತ್ತಿದ್ದೇನೆ ಎಂಬ ರೀತಿ ನಡೆದುಕೊಳ್ಳುತ್ತಾಳೆ. ನೀನು ಒಂದು ವಿಷಯ ತಿಳಿದುಕೊ, ದುಡಿದು ತರುವ ಕೆಲವೇ ಸಾವಿರ ರೂ.ಗಳಿಂದ ನಮ್ಮ ಮನೆಯೇನೂ ನಡೆಯುವುದಿಲ್ಲ. ನೀನು ಸೊಸೆಯಾಗಿದ್ದೀಯ. ಸೊಸೆಯ ರೀತಿಯಲ್ಲಿ ಇರುವುದನ್ನು ಕಲಿತುಕೊ. ಇಲ್ಲದಿದ್ದರೆ ನಿಮ್ಮಪ್ಪನ ಮನೆಗೆ ಹೋಗಿ ಅಲ್ಲಿಯೇ ಇದ್ದುಬಿಡು.”
ಭೇದಭಾವಕ್ಕೆ ತುತ್ತಾಗುತ್ತಾರೆ
ಅವರಿಗೆ ಈ ರೀತಿಯ ಬೆದರಿಕೆ ಹಾಗೂ ಗಂಡನಿಂದ ಹೊಡೆತ ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಅವರು ಮಾತ್ರ ಏನೂ ಮಾತಾಡಾದೇ ಮೌನದಿಂದ ಇರುತ್ತಾರೆ. ಏಕಾಂಗಿಯಾಗಿದ್ದಾಗ ಅವರು ಕಣ್ಣೀರು ಹಾಕಿ ತನ್ನ ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಕೆಲಸದಲ್ಲಿ ಮಗ್ನಳಾಗುತ್ತಾರೆ. ತಮ್ಮ ತವರಿನಲ್ಲೂ ಯಾರೊಬ್ಬರೂ ಅವರ ನೋವನ್ನು ಕೇಳುವವರಿಲ್ಲ. ಬಾಲ್ಯದಲ್ಲೂ ತಾಯಿ ತಂದೆ ಹಾಗೂ ಅಣ್ಣ ಕೂಡ ಇದೇ ರೀತಿಯ ಭೇದಭಾವ ತೋರುತ್ತಿದ್ದರು. ಅವರು ಎಷ್ಟೊಂದು ಗಳಿಸುತ್ತಾರೆಂದರೆ, ತನ್ನ ಮಗಳ ಜವಾಬ್ದಾರಿಯನ್ನು ಅವರು ಅಪಾರವಾಗಿ ನೋಡಿಕೊಳ್ಳಬಹುದು. ಆದರೆ ಏಕಾಂಗಿಯಾಗಿರುವ ಮಹಿಳೆಯರ ಬಗೆಗಿನ ಸಮಾಜದ ದೃಷ್ಟಿಕೋನ ಹೇಗಿರುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.
ಹೆಚ್ಚಿನ ಮಧ್ಯಮ ವರ್ಗದ ಮಹಿಳೆಯರು ಇದೇ ತೆರನಾದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರು ಎಷ್ಟೇ ಕಲಿತಿರಬಹುದು, ಆದರೆ ಅವರಿಗೆ ಸಿಗುವ ಮಹತ್ವ ಮತ್ತು ಕಾಳಜಿ ಬಗ್ಗೆ ಕೇಳಿದರೆ ನಿರಾಶೆಯಾಗುತ್ತದೆ. ಒಂದು ವೇಳೆ ಅವಳು ವಿವಾಹಿತೆಯಾಗಿದ್ದು, ಗಂಡ ಕಡಿಮೆ ಓದಿದವನಾಗಿದ್ದರೂ, ಗಂಡ ಅವಳ ಮೇಲೆ ದರ್ಪ ತೋರಿಸುವುದನ್ನು ತನ್ನ ಹಕ್ಕು ಎಂದು ಭಾವಿಸುತ್ತಾನೆ.
ಒಂದು ವೇಳೆ ಮಹಿಳೆ ಉದ್ಯೋಗಸ್ಥೆ ಆಗಿರದೇ ಇದ್ದರೆ, ಅವಳ ಇಡೀ ದಿನ ಮನೆಗೆಲಸದವಳ ಹಾಗೆ ಕಳೆದುಹೋಗುತ್ತದೆ. ಆದರೆ ಮನೆಯಲ್ಲಿ ಅವಳಿಗೆ ಯಾವುದೇ ಮಹತ್ವ ದೊರಕುವುದಿಲ್ಲ. ಅವಳು ಉದ್ಯೋಗಸ್ಥೆ ಆಗಿದ್ದರೆ ಆಫೀಸಿನ ಜೊತೆಗೆ ಮನೆಯ ಎಲ್ಲ ಕೆಲಸಗಳನ್ನು ದಣಿವು ಎನ್ನದೇ ಮಾಡುತ್ತಿರಬೇಕಾಗುತ್ತದೆ. ಮನೆಯಲ್ಲಿ ಯಾರೊಬ್ಬರೂ ಅವಳಿಗೆ ನೆರವು ನೀಡುವ ಪ್ರಯತ್ನ ಮಾಡುವುದಿಲ್ಲ. ಇಬ್ಬಗೆಯ ಜವಾಬ್ದಾರಿ ನಿಭಾಯಿಸಿಯೂ ಅವಳ ಬಗ್ಗೆ ಯಾರೊಬ್ಬರೂ ಎರಡು ಒಳ್ಳೆಯ ಮಾತು ಆಡುವುದಿಲ್ಲ.
ಶಿಕ್ಷಣ ಕೂಡ ಅತ್ಯವಶ್ಯ
ನಮ್ಮ ಸ್ವಾಭಿಮಾನವನ್ನು ಜಾಗೃತಗೊಳಿಸಲು ಹಾಗೂ ಸ್ವಾತಂತ್ರ್ಯ ದೊರಕಿಸಿಕೊಡುವ ಏಕೈಕ ದಾರಿಯೆಂದರೆ ಅದು ಶಿಕ್ಷಣ. ಅದು ಎಂತಹ ಒಂದು ಮೆಟ್ಟಿಲೆಂದರೆ, ಅದನ್ನು ಹತ್ತುತ್ತ ಹೋದಂತೆ ಅವಳಿಗೆ ಸಂವಿಧಾನ ಕೊಟ್ಟ ಹಕ್ಕುಗಳ ಬಗ್ಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಯಶಸ್ಸಿನ ಹೊಸ ದಾರಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಶಿಕ್ಷಣವೇ ಮಹಿಳೆಯರ ಸಬಲೀಕರಣದ ಮೊದಲ ಷರತ್ತಾಗಿರುತ್ತದೆ. ಆದರೆ ಶಿಕ್ಷಣದ ಜೊತೆಗೆ ಮಹಿಳೆಯರ ಓವರ್ ಆಲ್ ಸ್ಥಿತಿಯ ಬಗ್ಗೆ ಗಮನಿಸಿದಾಗ, ಶಿಕ್ಷಣದ ಹೊರತಾಗಿಯೂ ಮಹಿಳೆಯರ ಸ್ಥಿತಿ ಎಷ್ಟು ದಯನೀಯವಾಗಿದೆ ಎನ್ನುವುದು ತಿಳಿಯುತ್ತದೆ.
ಜಗತ್ತಿನಾದ್ಯಂತ ಮಹಿಳೆಯರ ಸ್ಥಿತಿ ಶಿಕ್ಷಣದ ಬಾಬತ್ತಿನಲ್ಲಿ ಬಹಳಷ್ಟು ಸುಧಾರಣೆ ಆಗಿರಬಹುದು. ಆದರೆ ಅದರ ಹೊರತಾಗಿಯೂ ಅವರು ದೌರ್ಜನ್ಯ ಹಾಗೂ ಭೇದಭಾವ ಸಹಿಸಿಕೊಳ್ಳಬೇಕಾಗಿ ಬರುತ್ತದೆ. ಯುನಿಸೆಫ್ ನ ತಾಜಾ ವರದಿಯ ಪ್ರಕಾರ, ಜಗತ್ತಿನಾದ್ಯಂತ ಮಹಿಳೆಯರು ಹಾಗೂ ಹುಡುಗಿಯರ ವಿರುದ್ಧ ದೌರ್ಜನ್ಯ ನಡೆಯುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಒಂದು ವರದಿಯ ಪ್ರಕಾರ, ಕಳೆದ 20 ವರ್ಷಗಳಿಂದ ಶಾಲೆಗೆ ಹೋಗದ ಹುಡುಗಿಯ ಪ್ರಮಾಣ 7 ಕೋಟಿ 90 ಲಕ್ಷ ಕಡಿಮೆಯಾಗಿದೆ. ಕಳೆದ 1 ದಶಕದಲ್ಲಿ ಸೆಕೆಂಡರಿ ಸ್ಕೂಲ್ ಗಳಲ್ಲಿ ಹುಡುಗರಿಗೆ ಹೋಲಿಸಿದಲ್ಲಿ ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ.
ಒಂದು ವೇಳೆ ಭಾರತದ ಬಗ್ಗೆ ಪ್ರಸ್ತಾಪಿಸುವುದಾದರೆ, ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹುಡುಗರ ಲಿಂಗ ಅನುಪಾತಕ್ಕೆ ಹೋಲಿಸಿದರೆ ಅದು ಉತ್ತಮಗೊಂಡಿದೆ. ಪ್ರಾಥಮಿಕ ಶಾಲೆಗಳಲ್ಲಿ ಆ ಪ್ರಮಾಣದಲ್ಲಿ ಸುಧಾರಣೆಯಾಗಿದೆ. ಆ ಕಾರಣದಿಂದ ಬಾಲ್ಯವಿವಾಹದ ಪ್ರಮಾಣ ಕಡಿಮೆಗೊಂಡಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಜಗತ್ತಿನಾದ್ಯಂತ 15 ರಿಂದ 19 ವರ್ಷದ ವಯೋಮಿತಿಯ 1 ಕೋಟಿ 30 ಲಕ್ಷ ಹುಡುಗಿಯರು ಅಂದರೆ 20ರಲ್ಲಿ ಒಬ್ಬ ಹುಡುಗಿ ಅತ್ಯಾಚಾರಕ್ಕೆ ತುತ್ತಾಗುತ್ತಿದ್ದಾಳೆ.
ಭಾರತದಲ್ಲಿ ರಾಷ್ಟ್ರೀಯ ಆರೋಗ್ಯ ಕುಟುಂಬ ಸಮೀಕ್ಷೆಯ 2015-2016ರ ಅಂಕಿಅಂಶಗಳ ಪ್ರಕಾರ, 15 ವರ್ಷ ವಯೋಮಿತಿ ತನಕ ಭಾರತದಲ್ಲಿ ಐವರಲ್ಲಿ ಒಬ್ಬಳು ಹುಡುಗಿ ಅಂದರೆ 1 ಕೋಟಿ 20 ಲಕ್ಷ ಹುಡುಗಿಯರು ದೈಹಿಕ ಹಿಂಸೆ ಅನುಭವಿಸುತ್ತಿದ್ದಾರೆ. 15-19 ವರ್ಷಗಳ ತನಕ ಪ್ರತಿ ಮೂವರು ಹುಡುಗಿಯರಲ್ಲಿ ಒಬ್ಬ ಹುಡುಗಿ (ಶೇ.35) ಅವಳು ಮದುವೆ ಆಗಿರಬಹುದು ಅಥವಾ ಕುಟುಂಬದ ಜೊತೆಗೆ ಇರಬಹುದು, ತನ್ನ ಗಂಡ ಅಥವಾ ಸಂಗಾತಿಯಿಂದ ದೈಹಿಕ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾಳೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಶೇ.16 ರಷ್ಟು ಹುಡುಗಿಯರು (15-19) ತಮ್ಮೊಂದಿಗೆ ಆದ ದೌರ್ಜನ್ಯದ ಬಗ್ಗೆ ಹೇಳಿದ್ದಾರೆ. 15-19 ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಶೇ.31ರಷ್ಟು ಜನರು ಗಂಡನಿಂದ ತಾವು ದೈಹಿಕ, ಲೈಂಗಿಕ ಹಾಗೂ ಮಾನಸಿಕ ದೌರ್ಜನ್ಯ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಕಾರ್ಯಸ್ಥಳದಲ್ಲೂ ಭೇದಭಾವ
25 ವರ್ಷದ ಮಿಸ್ ಜ್ಯೂಲಿ ಇತ್ತೀಚೆಗೆ ಕಂಪನಿ ಜಾಯಿನ್ ಆಗಿದ್ದಳು. ಅವಳು ಆ್ಯಡ್ ಡೆವಲಪರ್ ಆಗಿ ನೇಮಕವಾಗಿದ್ದಳು. ಆ ದಿನ ಮೀಟಿಂಗ್ ನಲ್ಲಿ ಹೊಸ ಸಾಫ್ಟ್ ಡ್ರಿಂಕ್ ವೊಂದರ ಲಾಂಚ್ ಬಗ್ಗೆ ಮಾತುಕತೆ ನಡೆದಿತ್ತು. ಮ್ಯಾನೇಜರ್ ಬಾಟಲ್ ನ ಬಣ್ಣದ ಬಗ್ಗೆ ಪ್ರಸ್ತಾಪಿಸಿದಾಗ, ಜ್ಯೂಲಿ ಆರೆಂಜ್ ಕಲರ್ ಆಯ್ಕೆ ಮಾಡಲು ಸೂಚಿಸಿದಳು.
ಅಲ್ಲಿಯೇ ಸಮೀಪದಲ್ಲಿ ಕುಳಿತಿದ್ದ ಪುರುಷ ಸಹೋದ್ಯೋಗಿಯೊಬ್ಬ ಅವಳತ್ತ ಬೇರೆ ರೀತಿಯ ದೃಷ್ಟಿಕೋನ ಬೀರುತ್ತಾ, “ಮಿಸ್‌ಜ್ಯೂಲಿ, ನೀವು ಆರೆಂಜ್ ಕಲರ್ ಹೇಳಿಯೇ ಹೇಳುತ್ತೀರಿ, ಏಕೆಂದರೆ ಆ ಕಲರ್ ನಿಮ್ಮ ಲಿಪ್ ಸ್ಟಿಗ್ ಗೆ ಮ್ಯಾಚ್ ಆಗುತ್ತಲ್ಲ…..” ಎಂದು ಹೇಳಿದ.
ಆ ಸಹೋದ್ಯೋಗಿ ಆ ರೀತಿ ಹೇಳುತ್ತಿದ್ದಂತೆ, ಉಳಿದ ಪುರುಷ ಸಹೋದ್ಯೋಗಿಗಳು ಜೋರಾಗಿ ನಕ್ಕರು. ಆ ಕಾರಣದಿಂದ ಜ್ಯೂಲಿ ಬೇಜಾರಾದಳು. ಸಾಮಾನ್ಯವಾಗಿ ಮಹಿಳೆಯರು ಈ ರೀತಿಯ ಲಿಂಗ ಆಧಾರಿತ ಟಿಪ್ಪಣಿಗಳನ್ನು ಎದುರಿಸಬೇಕಾಗಿ ಬರುತ್ತವೆ. ಪುರುಷರು ಸಾಮಾನ್ಯವಾಗಿ ಮಹಿಳೆಯರನ್ನು ಕಡಿಮೆ ಎಂಬಂತೆ ಬಿಂಬಿಸಲು, ಅವರನ್ನು ತಮಾಷೆ ಮಾಡಲು ಈ ರೀತಿ ಮಾತನಾಡುತ್ತಾರೆ. ಮಹಿಳೆಯರಿಗೆ ಫ್ಯಾಷನ್ ಹಾಗೂ ಮೇಕಪ್ ಹೊರತಾಗಿ ಬೇರೇನೂ ಗೊತ್ತಿರುವುದಿಲ್ಲ ಎನ್ನುವುದು ಅವರ ಭಾವನೆಯಾಗಿರುತ್ತದೆ.
ಪುರುಷರು ಎಂದೂ ಬೌದ್ಧಿಕವಾಗಿ ಮಹಿಳೆಯರನ್ನು ತಮ್ಮ ಸರಿಸಮಾನ ಅಥವಾ ಅದಕ್ಕೂ ಹೆಚ್ಚು ಎಂದು ಭಾವಿಸಲು ಸಿದ್ಧರಾಗುವುದಿಲ್ಲ. ಈ ಮಾನಸಿಕತೆ ಆ ಪುರುಷವಾದಿ ಯೋಚನೆಯನ್ನು ಪ್ರತಿಬಿಂಬಿಸುತ್ತದೆ. ಅದು ಪರಿಪೂರ್ಣವಾಗಿ ಕೊನೆಗೊಳ್ಳಲು ಶತಶತಮಾನಗಳೇ ಬೇಕಾಗಬಹುದು.
ಸಮಾನತೆಯ ದರ್ಜೆ
ಪೇಬರ್ಸ್ ಕಳೆದ ವರ್ಷ ಪ್ರಕಟಿಸಿದ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಟಾಪ್ 100ರಲ್ಲಿ 4 ಭಾರತೀಯ ಮಹಿಳೆಯರು ಕೂಡ ಸೇರಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪ್ 500 ಕಂಪನಿಗಳಿದ್ದು, ಅದರಲ್ಲಿ ಶೇ.10 ರಷ್ಟು ಮಹಿಳೆಯರೇ ಸೀನಿಯರ್ ಮ್ಯಾನೇಜರ್ ಆಗಿದ್ದಾರೆ. ಭಾರತದಲ್ಲಿ ಶೇ.3 ಕ್ಕಿಂತ ಕಡಿಮೆ ಮಹಿಳೆಯರಷ್ಟೇ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿದ್ದಾರೆ. ವಾಸ್ತವ ಸಂಗತಿಯೆಂದರೆ, ಪ್ರಮುಖ ನಿರ್ಣಾಯಕ ಹಾಗೂ ಪ್ರತಿಷ್ಠಿತ ಹುದ್ದೆಗಳಲ್ಲಿ ಮಹಿಳೆಯರ ಉಪಸ್ಥಿತಿ ಏನೂ ಇಲ್ಲ ಎಂಬಷ್ಟು ಕಡಿಮೆ ಇದೆ.
ಅಂದಹಾಗೆ, ಬಹಳಷ್ಟು ಕಡಿಮೆ ಪುರುಷರು ಹೇಗಿದ್ದಾರೆಂದರೆ, ಅವರು ಮಹಿಳೆಯರಿಗೆ ಸಮಾನತೆಯ ದರ್ಜೆ ಕೊಡುತ್ತಾರೆ.
ಈಗ ಮಹಿಳೆಯರು ಹಾಗೂ ಪುರುಷರು ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ ನಿಜ, ಆದರೆ ಸಮಾಜದಲ್ಲಿ ಈಗಲೂ ಲಿಂಗ ಆಧಾರಿತ ಬಡ್ತಿ ಏಕೆ ದೊರಕುದಿಲ್ಲವೆಂದರೆ, ಆಕೆ ಮಹಿಳೆಯಾಗಿದ್ದಾಳೆಂಬ ಏಕೈಕ ಕಾರಣದಿಂದ ಹಾಗೂ ನೇಮಕ ಮಾಡುವ ಅಧಿಕಾರಿಗೆ ಒಂದು ರೀತಿಯ ಭಯವಿರುತ್ತದೆ. ಅದೆಂದರೆ, ಅವಳಿಗೆ ಬಹುಬೇಗ ಮದುವೆಯಾಗುತ್ತದೆ. ಅವಳು ತನ್ನ ಸಮಯವನ್ನು ಪರಿಪೂರ್ಣವಾಗಿ ಆಫೀಸಿಗೆ ಕೊಡುವುದಿಲ್ಲ ಎನ್ನುವುದಾಗಿರುತ್ತದೆ.
ಅದೇ ರೀತಿ ಎಷ್ಟೋ ಸಲ ಮೆಟರ್ನಿಟಿ ರಜೆಯ ಬಳಿಕ ಮಹಿಳೆಯರನ್ನು ಕೆಲಸಕ್ಕೆ ಪುನಃ ತೆಗೆದುಕೊಳ್ಳಲಾಗುವುದಿಲ್ಲ. ಅದೆಷ್ಟೋ ಮಹಿಳೆಯರು ಹಾಗೂ ಹುಡುಗಿಯರು ಆಫೀಸಿನಲ್ಲಿ ಪುರುಷ ಸಹೋದ್ಯೋಗಿಗಳಿಂದ ಲಿಂಗ ಆಧಾರಿತ ಭೇದಭಾವದಿಂದ ಕೂಡಿದ ಟೀಕೆ ಟಿಪ್ಪಣಿಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುತ್ತದೆ.
ಸಾಮಾನ್ಯವಾಗಿ ಮಹಿಳೆಯರ ಸಾಮರ್ಥ್ಯದ ಮೇಲೂ ಪ್ರಶ್ನೆ ಎತ್ತಲಾಗುತ್ತದೆ. ಅವರ ಸರಿಯಾದ ನಿರ್ಧಾರಗಳನ್ನು ತಪ್ಪು ಎಂದು ನಿರ್ಧರಿಸಲಾಗುತ್ತದೆ. ಪುರುಷ ದೃಢ ನಿರ್ಧಾರ ಕೈಗೊಂಡರೆ, ಅದನ್ನು ಡೈನಾಮಿಕ್ ಎಂದು ತಿಳಿಯಲಾಗುತ್ತದೆ. ಆದರೆ ಮಹಿಳೆಯೊಬ್ಬಳು ಅದೇ ದೃಢತೆಯಿಂದ ಕಾರ್ಯಪ್ರವೃತ್ತಳಾದರೆ, ಆಕೆ ಪುರುಷರ ಕೆಂಗಣ್ಣಿಗೆ ತುತ್ತಾಗುತ್ತಾಳೆ.
ಎಂದಾದರೊಮ್ಮೆ ಮಹಿಳೆಯರು ತಮ್ಮ ಕಾರ್ಯಸ್ಥಳದಲ್ಲಿ ಸೆಕ್ಸುವಲ್ ಪಾಲಿಟಿಕ್ಸ್ ನ್ನು ಎದುರಿಸಬೇಕಾಗಿ ಬರುತ್ತದೆ. ಕೆಲವು ಪುರುಷರು ಮಹಿಳಾ ಸಹೋದ್ಯೋಗಿಗಳ ಬಗ್ಗೆ ಯಾವ ಧೋರಣೆ ಹೊಂದಿರುತ್ತಾರೆಂದರೆ, ಮಹಿಳೆಯರಾಗಿರುವ ಕಾರಣದಿಂದ ಆಕೆಗೆ ಬಾಸ್ ನ ಫೇವರ್ ಸಿಗುತ್ತದೆಂಬ ಭಾವನೆ ಅವರದ್ದಾಗಿರುತ್ತದೆ. ಅವಳ ಪರಿಶ್ರಮ ಹಾಗೂ ಕೆಲಸದ ಬಗೆಗಿನ ಸಮರ್ಪಣೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ ಹಾಗೂ ಬೆನ್ನ ಹಿಂದೆ ಅವಳ ತಮಾಷೆ ಮಾಡಲಾಗುತ್ತದೆ.
ಎಲ್ಲಿಯವರೆಗೆ ಈ ರೀತಿಯ ಮಾನಸಿಕತೆ ಬದಲಾಗುವುದಿಲ್ಲವೋ ಆಕೆ ಎಷ್ಟೇ ಓದಿದರೂ ಕೂಡ ಅವಳ ಜೊತೆಗಿನ ಭೇದಭಾವ ಹಾಗೆಯೇ ನಿರಂತರವಾಗಿರುತ್ತದೆ.
ಬಾಲ್ಯದಿಂದಲೇ ಭೇದಭಾವ
ನೀವು ಮಕ್ಕಳ ಶಾಲೆಯ ಪುಸ್ತಕವನ್ನು ತೆಗೆದು ನೋಡಿ, ಹೆಚ್ಚಿನ ಪುಸ್ತಕಗಳಲ್ಲಿ ಮಹಿಳೆಯರನ್ನು ಪರಂಪರಾಗತ ಪಾತ್ರಗಳಲ್ಲಿ ತೋರಿಸಲಾಗುತ್ತದೆ. ಇಲ್ಲವೇ ಪುಸ್ತಕಗಳಲ್ಲಿ ಹುಡುಗಿಯರ ಚಿತ್ರಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ರೀತಿಯ ಭೇದಭಾವವನ್ನು ಪ್ರತಿಯೊಂದು ಕ್ಲಾಸಿನ ಪಠ್ಯಪುಸ್ತಕಗಳಲ್ಲೂ ತೋರಿಸಲಾಗುತ್ತದೆ. ಈ ಬಗ್ಗೆ ನಾವಂತೂ ಯೋಚಿಸಲು ಹೋಗುವುದಿಲ್ಲ.
ವಿಶ್ವಸಂಸ್ಥೆಯ ಎಜುಕೇಶನ್ ಸೈಂಟಿಫಿಕ್ ಅಂಡ್ ಕಲ್ಚರ್ ಆರ್ಗನೈಜೇಶನ್ ತನ್ನ ಮಾನಿಟರಿಂಗ್ ರಿಪೋರ್ಟ್ 2020 ಪ್ರಸ್ತುತ ನಡೆಸಿತು. ಇದರಲ್ಲಿನ ವರದಿಯ ಪ್ರಕಾರ, ಬೇರೆ ಬೇರೆ ದೇಶಗಳ ಪಠ್ಯಗಳಲ್ಲಿ ಮಹಿಳೆಯರನ್ನು ಕಡಿಮೆ ಪ್ರತಿಷ್ಠಿತ ಉದ್ಯೋಗ ಇರುಳು ಎಂದು ಬಿಂಬಿಸಲಾಗಿದೆ ಜೊತೆಗೆ ಅವರ ಸ್ವಭಾವವನ್ನು ಅಂತರ್ಮುಖಿ ಹಾಗೂ ಸಂಕೋಚ ಪ್ರವೃತ್ತಿಯವಳು ಎಂದು ತೋರಿಸಲಾಗಿದೆ. ಪುಸ್ತಕದಲ್ಲಿ ಒಂದೆಡೆ ಪುರುಷರನ್ನು ಡಾಕ್ಟರ್ ಎಂಬಂತೆ ಹೇಳಲಾಗುತ್ತದೆ, ಮಹಿಳೆಯರನ್ನು ಮಾತ್ರ ನರ್ಸ್ ರೂಪದಲ್ಲಿ ತೋರಿಸಲಾಗುತ್ತದೆ.
ಯುನೆಸ್ಕೋ ತಿಳಿಸಿದ ವರದಿಯಲ್ಲಿ ಮಹಿಳೆಯರನ್ನು ಕೇವಲ ಫುಡ್, ಫ್ಯಾಷನ್ ಮತ್ತು ಮನರಂಜನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಮಾತ್ರ ತೋರಿಸಲಾಗುತ್ತದೆ.
ಯುನೆಸ್ಕೋದ ಈ ವರದಿಯ ಪ್ರಕಾರ, ಫಾರ್ಸಿ ಹಾಗೂ ಇತರೆ ವಿದೇಶಿ ಭಾಷೆಗಳ 60, ವಿಜ್ಞಾನದ 63 ಹಾಗೂ ಸಮಾಜ ವಿಜ್ಞಾನದ 74 ಶೇಕಡಾ ಪುಸ್ತಕಗಳಲ್ಲಿ ಮಹಿಳೆಯರ ಯಾವುದೇ ಚಿತ್ರಗಳಿಲ್ಲ.
ಪಿತೃ ಪ್ರಧಾನ ಯೋಚನೆ
ಮಲೇಷಿಯನ್ ಪ್ರಾಥಮಿಕ ಶಾಲೆಯೊಂದರ ಪಠ್ಯಪುಸ್ತಕದಲ್ಲಿ ಹೇಳಲಾಗಿರುವ ಒಂದು ವಿಷಯವೆಂದರೆ, ಹುಡುಗಿಯರು ತಮ್ಮ ಶೀಲ ರಕ್ಷಣೆ ಮಾಡಿಕೊಳ್ಳದಿದ್ದರೆ ಅವರಿಗೆ ಸಂಕೋಚಪಡುವ ಹಾಗೂ ಬಹಿಷ್ಕಾರಕ್ಕೆ ಒಳಗಾಗುವ ಅಪಾಯವಿರುತ್ತದೆ. ಅಮೆರಿಕದ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ಮಹಿಳೆಯರ ಪಾಲುದಾರಿಕೆ ಕೇವಲ ಶೇ.18ರಷ್ಟಿತ್ತು. ಅದರಲ್ಲೂ ಕೂಡ ಆಹಾರ, ಫ್ಯಾಷನ್ ಹಾಗೂ ಮನರಂಜನೆ ಕ್ಷೇತ್ರಕ್ಕೆ ಮಾತ್ರ ಸಂಬಂಧಪಟ್ಟಿತ್ತು.
ಈ ವರದಿಯಲ್ಲಿ 2019ರ ಮಹಾರಾಷ್ಟ್ರದ ಆ ನಿಲುವನ್ನು ಕೂಡ ಪ್ರಸ್ತಾಪಿಸಲಾಗಿದೆ. ಅದರಲ್ಲಿ ಪುಸ್ತಕಗಳಿಂದ ಲಿಂಗ ಆಧಾರಿತ ಅಭ್ಯಾಸವನ್ನು ನಿವಾರಿಸುವ ಚಿತ್ರಗಳ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯ ಬಳಿಕ ಪುಸ್ತಕಗಳಲ್ಲಿ ಮಹಿಳೆ ಹಾಗೂ ಪುರುಷರು ಮನೆಯ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುವುದನ್ನು ತೋರಿಸಲಾಗಿದೆ.
ಅಷ್ಟೇ ಅಲ್ಲ, ಮಹಿಳೆಯರನ್ನು ಡಾಕ್ಟರ್ ರೂಪದಲ್ಲಿ ಪುರುಷರನ್ನು ಶೆಫ್ ರೂಪದಲ್ಲಿ ತೋರಿಸಲಾಗಿದೆ. ಮಕ್ಕಳನ್ನು ಈ ಚಿತ್ರಗಳ ಬಗ್ಗೆ ಗಮನಕೊಡಲು ಮತ್ತು ಚರ್ಚಿಸಲು ಹೇಳಲಾಯಿತು.
ನಮ್ಮ ಸಮಾಜದಲ್ಲಿ ಪಿತೃಪ್ರಧಾನ ಯೋಚನೆ ಆರಿಸಿಕೊಂಡಿದೆ. ಅದು ಪುಸ್ತಕಗಳಲ್ಲೂ ಕಂಡುಬರುತ್ತದೆ. ಈ ಪುಸ್ತಕಗಳನ್ನು ಪ್ರಜ್ಞಾವಂತರು ಸಿದ್ಧಪಡಿಸುತ್ತಾರೆ. ಆದರೆ ಅವರೂ ಕೂಡ ಎಲ್ಲೋ ಪುರುಷ ಪ್ರಧಾನ ಯೋಚನೆಯಿಂದ ಸಂಚಾಲಿತರಾಗಿರುತ್ತಾರೆ. ಇಂತಹದರಲ್ಲಿ ಮಹಿಳೆಯರನ್ನು ಪಾರಂಪರಿಕ ಪಾತ್ರಗಳಲ್ಲಿ ಬಿಂಬಿಸಲಾಗುತ್ತದೆ ಹಾಗೂ ಅವರ ಪಾಲುದಾರಿಕೆಯನ್ನು ಕಡಿಮೆ ಎಂಬಂತೆ ತೋರಿಸಲಾಗುತ್ತದೆ.
ಮಕ್ಕಳು ಇಂತಹ ಪುಸ್ತಕಗಳ ಪುಟಗಳನ್ನು ತಿರುವಿದಾಗ, ಅಥವಾ ಓದಿದಾಗ ಬಾಲ್ಯದಿಂದಲೇ ಅವರ ಮನಸ್ಸಿನಲ್ಲಿ ಸ್ತ್ರೀ-ಪುರುಷರಿಗೆ ಸಂಬಂಧಪಟ್ಟ ಭೇದಭಾವದ ಗೆರೆ, ಇನ್ನಷ್ಟು ಗಾಢವಾಗುತ್ತ ಹೋಗುತ್ತದೆ. ಮಹಾರಾಷ್ಟ್ರ ಸರ್ಕಾರದ ಹಾಗೆ ಎಲ್ಲ ಕಡೆಯೂ ಈ ದಿಟ್ಟ ಹೆಜ್ಜೆ ಇಡುವ ಅಗತ್ಯವಿದೆ.
ನೀವು ಯಾರನ್ನಾದರೂ ಕಡೆಗಣಿಸಿ ಮಾತನಾಡಲು ಇಚ್ಛಿಸುವಿರಾದರೆ, ತೊಂದರೆ ಕೊಡಲು ಬಯಸಿದರೆ, ಆ ಮನೆಯ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಬೈಗುಳದ ಮಳೆ ಸುರಿಸಿ, ಏಕೆಂದರೆ ಅವರು ವಿಚಲಿರಾಗಬಹುದು. ಈ ಮಾನಸಿಕತೆ ಏನನ್ನು ಬಿಂಬಿಸುತ್ತದೆಂದರೆ, ಮಹಿಳೆಯರು ಎಷ್ಟೋ ಉನ್ನತ ಹುದ್ದುಗೇರಿದರೂ ಅವರನ್ನು ಕಡೆಗಣಿಸಿ ನೋಡಲು ತಮ್ಮ ಪರಸ್ಪರ ಕಚ್ಚಾಟದಲ್ಲಿ ಅವರನ್ನು ಎಳೆದುತರುತ್ತಾರೆ. ಒಂದು ವೇಳೆ ಸಾಮಾನ್ಯ ರೂಪದಲ್ಲಿ ಬಳಸಲಾದ ಬೈಗುಳಗಳನ್ನು ಗಮನಿಸುವುದಾದರೆ, ಶೇ.30-40ರಷ್ಟು ಬೈಗುಳ ಮಹಿಳೆಯರನ್ನು ಕಡೆಗಣಿಸಿ ತೋರಿಸುವಂಥದ್ದಾಗಿರುತ್ತವೆ.
ಅಂದಹಾಗೆ ನಮ್ಮ ಸಮಾಜದಲ್ಲಿ ಹಳೆಯಕಾಲದಲ್ಲಿ ಸ್ತ್ರೀಯರನ್ನು ಪುರುಷರ ಆಸ್ತಿ ಎಂಬಂತೆ ಭಾವಿಸಲಾಗುತ್ತಿತ್ತು. ಅಮ್ಮ ಅಕ್ಕನ ಬಗ್ಗೆ ಬೈಗುಳಗಳ ಮಳೆ ಸುರಿಸಿ, ಪುರುಷರು ತಮ್ಮ ಅಹಂಕಾರವನ್ನು ತೀರಿಸಿಕೊಳ್ಳುತ್ತಾರೆ ಮತ್ತು ಬೇರೆಯವರನ್ನು ಕಡೆಗಣಿಸುತ್ತಾರೆ. ಯಾರನ್ನಾದರೂ ಅಮಾನಿಸಬೇಕಿದ್ದರೆ, ಅವರ ಮನೆಯ ಮಹಿಳೆಯರನ್ನು ಉದ್ದೇಶಿಸಿ ಬೈಯುತ್ತಾರೆ. ಯಾರಾದರೂ ಪುರುಷರ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿದ್ದರೆ, ನಿನ್ನ ಹೆಂಡತಿ/ತಂಗಿಯನ್ನು ಎತ್ತಿಕೊಂಡು ಹೋಗುತ್ತೇವೆ ಎಂದು ಹೇಳಲಾಗುತ್ತದೆ. ಮೊದಲು ಇಂತಹ ಬೈಗುಳಗಳನ್ನು ಸಮಾಜದ ತಳ ಹಂತದಲ್ಲಿರುವವರಷ್ಟೇ ಆಡಿ ತೋರಿಸುತ್ತಿದ್ದರು. ಆದರೆ ಈಗ ಓದು ಬರಹ ಬಲ್ಲ ಸ್ಥಿತಿವಂತ ಜನರು ಕೂಡ ಇಂತಹ ಬೈಗುಳಗಳನ್ನು ಪ್ರಯೋಗಿಸುತ್ತಾರೆ. ಜನರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಓದಿಸುತ್ತಿದ್ದಾರೆನ್ನುವುದೇನೊ ನಿಜ, ಆದರೆ ಅದರ ಬಗೆಗಿನ ಯೋಚನೆಯನ್ನು ಮಾತ್ರ ಬದಲಿಸಿಕೊಂಡಿಲ್ಲ.
ಯೋಚನೆಯಲ್ಲಿ ಬದಲಾವಣೆ ಅವಶ್ಯ
ಅಂದಹಾಗೆ ಮಹಿಳೆಯರಿಗೆ ಶಿಕ್ಷಣ ದೊರಕಿಸಿಕೊಡುವುದಷ್ಟೇ ಮುಖ್ಯವಲ್ಲ. ನಮಗೆ ಜನರ ವರ್ತನೆ ಮತ್ತು ಹುಡುಗಿಯರ ಬಗೆಗಿನ ಅವರ ಯೋಚನೆಯನ್ನು ಬದಲಿಸಬೇಕಾಗಿದೆ. ಮಹಿಳೆಯರು ಹಾಗೂ ಹುಡುಗಿಯರ ಜೊತೆಗಿನ ದೌರ್ಜನ್ಯ ಹಾಗೂ ಭೇದಭಾವಕ್ಕೆ ಮೂಲಕಾರಣ ನಮ್ಮ ಪಿತೃಪ್ರಧಾನ ಸಮಾಜವಾಗಿದೆ. ಪುರುಷರ ಈ ಸ್ವಾಭಾವಿಕ ಪ್ರವೃತ್ತಿ ಅವರು ತಮ್ಮನ್ನು ತಾವು ಸುಪೀರಿಯರ್ ಎಂದು ತಿಳಿಯುವುದೇ ಆಗಿದೆ. ಮಹಿಳೆಯರ ಮೇಲೆ ಶಕ್ತಿ ಪ್ರದರ್ಶಿಸಲು ಹಾಗೂ ಅವರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪುರುಷರು ಅವರಿಗೆ ಎಂದೂ ಸಮಾನತೆಯ ಹಕ್ಕು ಕೊಡಲು ಇಚ್ಛಿಸುವುದಿಲ್ಲ. ಮಹಿಳೆಯರ ಜೊತೆಗೆ ಆಗುವ ಭೇದಭಾವ ದೂರಗೊಳಿಸಲು ಶಿಕ್ಷಣದ ಜೊತೆ ಜೊತೆಗೆ ಈ ಪಿತೃಪ್ರಧಾನ ಯೋಚನೆಯಲ್ಲಿ ಬದಲಾವಣೆ ಆಗಬೇಕಿದೆ.
ಬಾಲ್ಯದಲ್ಲಿರುವಾಗಲೇ ಅವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ರೂಪದಲ್ಲಿ ಮಕ್ಕಳಿಗೆ ಸಮಾನತೆಯ ಪಾಠ ಬೋಧಿಸಬೇಕಿದೆ. ಗಂಡುಮಕ್ಕಳ ಬೇಕಾಬಿಟ್ಟಿತನಕ್ಕೆ ಕಡಿವಾಣ ಹಾಕಬೇಕಿದೆ. ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಇತರರ ದೌರ್ಜನ್ಯ ಸಹಿಸಿಕೊಳ್ಳುವ ಬದಲಿಗೆ ಅದರ ವಿರುದ್ಧ ದನಿ ಎತ್ತಲು ಕಲಿಸಿ ಕೊಡಬೇಕು. ಸಾಮಾನ್ಯವಾಗಿ ಮಹಿಳೆಯರೇ ಮಹಿಳೆಯರ ವೈರಿಯಾಗಿರುತ್ತಾರೆ. ಮನೆಯ ಮಹಿಳೆಯರು ತಮ್ಮ ಹೆಣ್ಣುಮಕ್ಕಳಿಗೆ ಗಂಡುಮಕ್ಕಳ ಬಗ್ಗೆ ಹೆದರಿಕೆ ಹಾಕುತ್ತಾರೆ. ಮನೆಯ ಅತ್ತೆ ತನ್ನ ಸೊಸೆಗೆ, ನೀನು ಗಂಡನ ದಾಸಿಯ ಹಾಗೆ ಇರಬೇಕೆಂದು ಹೇಳುತ್ತಾರೆ. ಈ ರೀತಿಯ ಯೋಚನೆ ಬದಲಾಗಬೇಕಿದೆ. ಮಹಿಳೆಯರು ಮಹಿಳೆಯರಿಗೆ ಬೆಂಬಲ ಕೊಡಬೇಕಿದೆ. ಇದು ಎಲ್ಲಿಯವರೆಗೆ ಎಂದರೆ ಪುರುಷ ಮತ್ತು ಮಹಿಳೆ ಒಂದೇ ಎಂದು ಸಮಾಜ ಒಪ್ಪುವ ತನಕ. ಅಲ್ಲಿಯವರೆಗೆ ಮಹಿಳೆಯರ ವಿರುದ್ಧ ದೌರ್ಜನ್ಯ ಮತ್ತು ಭೇದಭಾವ ನಡೆಯುತ್ತಲೇ ಇರುತ್ತದೆ.
– ಗೌರಿ
ಹೆಚ್ಚಿನ ಬೈಗುಳ ಮಹಿಳೆಯರನ್ನೇ ಕೇಂದ್ರೀಕರಿಸಿರುತ್ತವೆ. ಇಬ್ಬರು ವ್ಯಕ್ತಿಗಳ ನಡುವೆ ವಾದವಿವಾದ ಅಥವಾ ಜಗಳ ನಡೆಯುತ್ತಿದ್ದರೆ, ಆಗ ಬೈಗುಳಗಳು ಶುರುವಾಗುತ್ತವೆ. ಈ ಬೈಗುಳಗಳು ಹೆಚ್ಚಾಗಿ ಮಹಿಳೆಯರನ್ನೇ ಕೆಂದ್ರೀಕರಿಸಲ್ಪಡುತ್ತವೆ. ಜಗಳ ಇಬ್ಬರು ಪುರುಷರ ನಡುವೆ ನಡೆಯುತ್ತಿದ್ದರೂ, ಬೈಗುಳ ಮಾತ್ರ ಮಹಿಳೆಯರಿಗೆ ಸಂಬಂಧಪಟ್ಟಂತೆ ಇರುತ್ತವೆ. ಖೇದದ ಸಂಗತಿ ಎಂದರೆ, ಇದು ಯಾರೊಬ್ಬರಿಗೂ ಆಕ್ಷೇಪಾರ್ಹ ಎನಿಸುವುದಿಲ್ಲ. ಈ ಬೈಗುಳಗಳು ಮಹಿಳೆಯರನ್ನು ಅವಮಾನ ಮಾಡಲು ಹಾಗೂ ಅವರನ್ನು ಕಡೆಗಣಿಸುವ ದೃಷ್ಟಿಯಿಂದ ಪ್ರಯೋಗಿಸಲಾಗುತ್ತದೆ.