ಮಳೆಯಿಂದ ಹಾನಿಯಾದ, ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು. ಜನರ ಕಷ್ಟಗಳನ್ನು ಆಲಿಸಿ ಸೂಕ್ತ ಕ್ರಮ ವಹಿಸಿ ತಕ್ಷಣವೇ ವರದಿ ಸಲ್ಲಿಸಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ಸೇಡಂ ತಾಲೂಕಿನ ಮಳಖೇಡ ಕಾಗಿಣಾ ನದಿ ಪ್ರವಾಹ ಉಂಟಾಗಿದ್ದು, ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚಿಸಿದರು. ಮಳಖೇಡದ ಕೋಲಿವಾಡ, ದರ್ಗಾ ಕಾಲೋನಿ ಹಾಗೂ ಮಳಖೇಡ ಕಾಲೋನಿ ರಸ್ತೆ, ಹಳ್ಳ ಹಾಗೂ ಕಾಗಿಣಾ ನದಿ ತೀರದ ಪ್ರದೇಶಗಳಲ್ಲಿನ ಮನೆಗಳಿಗೆ ಭೇಟಿ ನೀಡಿ , ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವರು, ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತ ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪಂಚಾಯತ್ ಅಧಿಕಾರಿಗಳು ಪ್ರವಾಹ ಪೀಡಿತರನ್ನು ಗುರುತಿಸಿ ನಿಗಾ ವಹಿಸಬೇಕು. ಕಾಗಿಣಾ ನದಿ ಪಾತ್ರದ ಸ್ಥಳದಲ್ಲಿ ಜನ ಜಾನುವಾರುಗಳು ಇಳಿಯದಂತೆ ಪೊಲೀಸರು ಹಾಗೂ ಅಧಿಕಾರಿಗಳು ಎಚ್ಚರಿಕೆ ನೀಡಿ, ಡಂಗುರ ಹೊಡೆಸಲು ಸೂಚಿಸಿದರು.ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ವಿವಿಧ ಗ್ರಾಮಗಳಿಗೆ ಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ತಾಲೂಕಾಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ತಾಕೀತು ಮಾಡಿ, ಸಾರ್ವಜನಿಕರಿಗೆ ಮಳೆಯಿಂದ ಆದ ಹಾನಿಯ ಬಗ್ಗೆ ನಿಗಾಯಿಟ್ಟು ವರದಿ ಬರೆದುಕೊಳ್ಳಿ ಎಂದು ಸೂಚಿಸಿದರು.ಸೇಡಂ ತಾಲೂಕಿನ ಬೀರನಳ್ಳಿ, ಮೀನಹಾಬಳ, ಯಡಗಾ, ಕುಕ್ಕುಂದಾ, ಕಾಚೂರು ಗ್ರಾಮ ಸೇರಿದಂತೆ ಇನ್ನು ಅನೇಕ ಅತಿವೃಷ್ಟಿಯಿಂದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಮಾತುಗಳನ್ನು ಆಲಿಸಿದೆ. ಪ್ರವಾಹ ಹಾನಿ ಪರಿಶೀಲನೆ ನಡೆಸಿ, ಯಾವ ಯಾವ ಗ್ರಾಮಗಳಲ್ಲಿ ಇರುವುದಕ್ಕೂ ಮನೆಯಿರುವುದಿಲ್ಲ ಅಂತಹ ಗ್ರಾಮಸ್ಥರಿಗೆ ಮನೆ ಕಲ್ಪಿಸಿ, ಪಂಚಾಯತ್ ಕಡೆಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸೂಕ್ತ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸಹಾಯಕ ಆಯುಕ್ತರಿಗೆ ಹಾಗೂ ತಹಶಿಲ್ದಾರರಿಗೆ ತಿಳಿಸಿದರು.