ಪಾಕಿಸ್ತಾನ ತಂಡವನ್ನು 5 ವಿಕೆಟ್ ಗಳಿಂದ ಪರಾಭವಗೊಳಿಸಿದ ಟೀಂ ಇಂಡಿಯಾ 9ನೇ ಬಾರಿ ಏಷ್ಯಾ ಕಪ್ ಜಯಿಸಿದೆ. ಭಾನುವಾರ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಮತ್ತು ತಿಲಕ್ ವರ್ಮಾ ಅವರು ಭಾರತದ ಗೆಲುವಿನ ರೂವಾರಿಯಾದರು.
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ನೋ ಹ್ಯಾಂಡ್ ಶೇಕ್ ಮೌನ ಪ್ರತಿಭಟನೆ ಮಾಡಿದ್ದ ಭಾರತ ತಂಡ ಮೈದಾನದಲ್ಲೂ ಅತ್ಯುತ್ಕೃಷ್ಟ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು.
ಕುಲ್ದೀಪ್ ಯಾದವ್ ಅವರ ಉತ್ತಮ ಬೌಲಿಂಗ್ ಮತ್ತು ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರ ಅದ್ಭುತ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ತಂಡ ಅಜೇಯವಾಗಿ ಏಷ್ಯಾ ಕಪ್ 2025 ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಅತ್ಯುತ್ತಮ ಕ್ರಿಕಟ್ ಆಟದ ಮೂಲಕ ಪಾಕಿಸ್ತಾನದ ಬಾಯಿ ಮುಚ್ಚಿಸಿದೆ. ಕೇವಲ 6 ತಿಂಗಳ ಹಿಂದಷ್ಟೇ ದುಬೈನಲ್ಲಿ ಏಕದಿನ ಪಂದ್ಯದಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದಿದ್ದ ಟೀಂ ಇಂಡಿಯಾ, ಇದೀಗ ಟಿ20 ಯಲ್ಲಿ ಏಷ್ಯಾ ಕಪ್ ನಲ್ಲೂ ವಿಜಯಿಯಾಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 146 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ 9ನೇ ಬಾರಿ ಏಷ್ಯಾ ಕಪ್ ಜಯಿಸಿತು.