ಸೋನಾಳಿಗೆ ಯಾರಾದರೂ ಪಾರ್ಟ್ ನರ್ ಸಿಕ್ಕಿದರೆ?
ಸೋನಾ ಬೇಬಿ ಇತ್ತೀಚೆಗೆ ತನ್ನ ರಿಂಗ್ ಫಿಂಗರ್ ಹೈಲೈಟ್ ಗೊಳಿಸುತ್ತಾ ಒಂದು ಫೋಟೋವನ್ನು FBಗೆ ಪೋಸ್ಟ್ ಮಾಡಿದ್ದಳು. ಅವಳ ಅಳಿದುಳಿದ ಫ್ಯಾನ್ಸ್ ಗೆ ತುಸು ಗಾಬರಿಯಾಗಿ, ಇವಳಿಗೆ ಯಾರಾದರೂ ಲೈಫ್ ಫಾರ್ಟ್ ನರ್ ಸಿಕ್ಕಿಬಿಟ್ಟರೆ ಎಂದು ಗಾಬರಿಗೊಂಡಿದ್ದರು. ಅವಳು ತನ್ನ ರಿಂಗ್ ಫಿಂಗರ್ ಗೆ ಲಕ್ಷಣವಾಗಿ ವಜ್ರದುಂಗುರ ಧರಿಸಿರುವುದು ಕಾಣಿಸುತ್ತಿದೆ, ಇದರಿಂದ ಇವಳು ಗುಟ್ಟುಗುಟ್ಟಾಗಿ ಎಂಗೇಜ್ ಮೆಂಟ್, ಮಾಡಿಕೊಂಡಳೇ ಎಂದು ಎಲ್ಲರೂ ಊಹಿಸುವುದರಲ್ಲಿ ತಪ್ಪೇನಿಲ್ಲ. ಇವಳಿಗೆ ಈಗಾಗಲೇ ಬಾಲಿವುಡ್ ನಿಂದ ಸೋಡಾ ಚೀಟಿ ದೊರಕಿರುವುದರಿಂದ ಇನ್ನಾದರೂ ಸಂಸಾರ ಕಟ್ಟಿಕೊಳ್ಳೋಣ ಎಂದು ಅವಳು ನಿರ್ಧರಿಸಿದ್ದರೆ ಅದಕ್ಕಾಗಿ ಬೇರೆಯವರೇಕೆ ಕಂಗಾಲಾಗಬೇಕು….?
ಆಶ್ರಮ ಸೇರಿದ ಈಶಾಳ ಸಾಹಸ
ಇದೇನಪ್ಪಾ, ಈಶಾಳಿಗೆ ಇಷ್ಟು ಬೇಗ ಆಶ್ರಮ ಸೇರುವಂಥದ್ದೇನಾಯಿತು ಅಂದುಕೊಂಡಿರಾ? ಹಾಗೇನಿಲ್ಲ, ಅವಳೀಗ ವೆಬ್ ಸೀರೀಸ್ `ಆಶ್ರಮ್’ನ 3ನೇ ಸೀಸನ್ ನಲ್ಲಿದ್ದಾಳೆ. ಇತ್ತೀಚೆಗಷ್ಟೆ, ಬಿಡುಗಡೆಗೊಂಡ ಇದರ ಟ್ರೇಲರ್ ನೋಡಿ ವೀಕ್ಷಕರು ಬೆಕ್ಕಸ ಬೆರಗಾದರು. ತನ್ನ ಬೋಲ್ಡ್ ಸೀನ್ ಗಳಿಗೆ ಖ್ಯಾತಳಾದ ಈಶಾಳಿಗೆ ಈ ಚಿತ್ರದಲ್ಲಿ ಒಂದೆರಡಲ್ಲ, 6 ಬೋಲ್ಡ್ ಸೀನ್ಸ್ ಇವೆ! ಇತ್ತ ಈಶಾ ಬೋಲ್ಡ್ ನೆಸ್ ಹೆಚ್ಚಿಸಿಕೊಳ್ಳುತ್ತಿದ್ದಂತೆ ಅತ್ತ ಪ್ರಕಾಶ್ ರ, ಬಾಬಿ ಈ ಆಶ್ರಮದ ತಾಪಮಾನ ಹೆಚ್ಚಿಸಿದರು. ಈ ಸೆಕ್ಸೀ ಬೋಲ್ಡ್ ನೆಸ್ ಗೆ ಬದಲಾಗಿ ಈ ಚಿತ್ರದಲ್ಲಿ ಬೇರೇನಾದರೂ ಹೂರಣವಿದೆಯೇ ಎಂದು ಕಾದು ನೋಡಬೇಕಿದೆ. ನಮ್ಮ ದೇಶದಲ್ಲಿ ಇಂಥ ಬೋಲ್ಡ್ ನೆಸ್ ಮೆರೆದ ಎಷ್ಟೋ ಆಶ್ರಮಗಳು ಬಂದ್ ಆಗಿವೆ, ಅದರ ಬಾಬಾಗಳು ಜೇಲು ಸೇರಿದ್ದಾರೆ!
ಮರಳಿ ಬರುತ್ತಿದ್ದಾನೆ ಗುಡ್ಡು ಭೈಯಾ
`ಮಿರ್ಜಾಪುರ್’ ಚಿತ್ರದ ಭೈಯಾಗಳ ಲೋಕವೇ ಅತಿ ವಿಚಿತ್ರ ಅದು ಮುನ್ನಾ, ಕಾಲೀನ್, ಗುಡ್ಡು ಭೈಯಾ ಯಾರೇ ಆಗಿರಲಿ….. ಈ ಸಲ ಬಾಂಬ್ ಸ್ಛೋಟಿಸಿರುವುದು ಗುಡ್ಡು. ಅಲಿ ಫಸ್ ಅಂದ್ರೆ ಗುಡ್ಡು, FBನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿ ಬರೆದಿದ್ದು ಏನೆಂದರೆ, `ಬರಲಿದ್ದಾನೆ….. ಗುಡ್ಡು ಭೈಯಾ, ಎಚ್ಚರ! ಇದೀಗ ಕೇಡಿಗರಿಗೆ ಬೂಟಿನೇಟು, ಗುಂಡಿನ ಸುರಿಮಳೆ ತಪ್ಪಿದ್ದಲ್ಲ!’ ಇದನ್ನು ಗಮನಿಸಿದ ವೀಕ್ಷಕರ ಉತ್ಸಾಹ ಮೇರಿ ಮೀರಿದೆ. ಹೀಗಾಗುವುದು ಸಹಜ, ಸ್ವಾಭಾವಿಕ. ದೇಶದಲ್ಲಿ ಈಗ ಒಂದು ನಕಾರಾತ್ಮಕ ವಿಚಾರ ಹರಿದಾಡುತ್ತಿದೆ, ಅದರ ಕಾರಣ ಈಗ ಎಲ್ಲೆಡೆ ಹಿಂಸೆ, ಹತ್ಯಾಕಾಂಡಗಳು ಹರಡುತ್ತಿವೆ.
ಟ್ರೆಕ್ಕಿಂಗ್….. ಫ್ಯಾಷನ್ ಸಾಹಸ
ಸಾರಾ ಅಲಿ ಖಾನ್ ಇದೀಗ ಹಾಲಿಡೇ ಮೂಡ್ ನಲ್ಲಿ ಕಾಶ್ಮೀರದ ಬೆಟ್ಟಗುಡ್ಡಗಳನ್ನು ಏರುತ್ತಿದ್ದಾಳೆ. FBನಲ್ಲಿ ರಾರಾಜಿಸುತ್ತಿರುವ ಇವಳ ಚಿತ್ರಗಳು, ಟ್ರೆಕ್ಕಿಂಗ್ ಎಷ್ಟು ಮಜವಾಗಿರುತ್ತೆ ಎಂದು ಸಾರುತ್ತಿವೆ, ಅದೀಗ ಫ್ಯಾಷನ್ ಸಹ ಆಗಿದೆ. ವೀಕ್ಷಕರು ಸಹ ಇವಳಿಂದ ಬೇಕಾದಷ್ಟು ಕಲಿಯಬಹುದು. ಟ್ರೆಕ್ಕಿಂಗ್ ಗೆ ಮೊದಲು ಧಾರಾಳ ಶಾಪಿಂಗ್ ಮಾಡಿ, ನಿಮ್ಮಿಷ್ಟದ ಬೆಟ್ಟಗುಡ್ಡ ಅರಸಿ ಹೊರಡಿ. ಸಾರಾಳಿಗೆ ಬಂದಷ್ಟು ಲೈಕ್ಸ್ ನಿಮ್ಮ ಮುಸುಡಿಗೆ ಬರದಿರಬಹುದು, ಆದರೆ ಆರೋಗ್ಯ ಸುಧಾರಿಸಿ, ಮೂಡ್ ಸರಿಹೋಗುವುದಂತೂ ಗ್ಯಾರಂಟಿ.
ಅಡುಗೆ ಬಿಟ್ಟು ಆ್ಯಕ್ಟಿಂಗ್ ನೋಡು
ಸೆಲೆಬ್ರಿಟಿ ಶೆಫ್ ರಣವೀರ್ ಬ್ರಾಝ್ ಕಿಚನ್ ನಿಂದ ಹೊರಬಂದು, ನಟನೆಯ ಲೋಕಕ್ಕೆ ಇಳಿದಿದ್ದಾನೆ. ವೆಬ್ ಸೀರೀಸ್ `ಮಾಡರ್ನ್‌ಲವ್ ಮುಂಬೈ’ನ ಒಂದು ದೃಶ್ಯದಲ್ಲಿ ರಣವೀರ್ ಪ್ರತಾಪ್ ಗಾಂಧಿಯವರ ಜಬರ್ದಸ್ತ್ ಜುಗಲ್ ಬಂದಿ ನೋಡಬಹುದು. ಶೆಫ್ ರಣವೀರ್ ಇಲ್ಲಿ ತನ್ನ ಅಮೋಘ ನಟನೆಯ ಒಗ್ಗರಣೆ ಚೆನ್ನಾಗಿಯೇ ಕೊಟ್ಟಿದ್ದಾನೆ ಎನ್ನಬಹುದು. ವೀಕ್ಷಕರಂತೂ ಈ ಚಿತ್ರಕ್ಕಾಗಿ ಆತುರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಇದು ಒಂದು ಅಮೆರಿಕನ್ ಸೀರೀಸ್ ನಿಂದ ಪ್ರಭಾವಿತ. ಆದರೆ ಇಲ್ಲಿ ದೊರಕಿರುವ ಭಾರತೀಯ ಟಚ್ ಪ್ರಶಂಸನೀಯ. ರಣವೀರ್ ಜೊತೆ ಅರ್ಶದ್ ವಾರ್ಸಿ, ಫಾತಿಮಾ ಸನಾ ಇತ್ಯಾದಿ ತಾರೆಗಳೂ ಇಲ್ಲಿದ್ದಾರೆ. ಮುಂಬೈನಲ್ಲಿ ಚಿಗುರುತ್ತಿರುವ ಹೊಸ ಪ್ರೇಮಕಥೆಗಳ ಹೂರಣ ಇಲ್ಲಿ ಲಭ್ಯ.
ಈ `ಖಾನ್ ದಾನ್’ಗೆ ಆಗಿರುವುದೇನು?
ಮೊದಲು ಅರ್ಬಾಸ್, ಇದೀಗ ಸೊಹೇಲ್…… ಸುದ್ದಿಗಾರರ ಪ್ರಕಾರ ಸೊಹೇಲ್ ಸಹ ತನ್ನ ಪತ್ನಿ ಸೀಮಾಳಿಗೆ ವಿಚ್ಛೇದನ ನೀಡಲಿದ್ದಾನೆ. ಖಾನ್ ಗಳ ಈ ಖಾನ್ ದಾನ್ ನಲ್ಲಿ ಇಷ್ಟೊಂದು ತಲಾಖ್ ತಲಾಖ್ ಅವಾಂತರ ಏಕೆ ಆಗುತ್ತಿದೆ? ಈ ಕಾರಣದಿಂದಲೇ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆಯ ತಂಟೆಯೇ ಬೇಡ ಎನ್ನುತ್ತಿದ್ದಾನಾ? ತನ್ನದೇ ರೀತಿಯಲ್ಲಿ ಜೀವನ ನಡೆಸಬೇಕು ಎಂಬ ಅತಿ ಉತ್ಸಾಹದಲ್ಲಿ, ಡೈವೋರ್ಸ್‌ಗೆ ಮೊರೆಹೋಗುವುದು ವಿವೇಕಶಾಲಿಗಳ ಕೆಲಸವಲ್ಲ. ತಲಾಖ್ ಪಡೆಯುವುದು ಎಷ್ಟು ಕಷ್ಟಕರ ಎಂದು ಸೊಹೇಲ್ ಒಮ್ಮೆ ಅರ್ಬಾಸ್ ನನ್ನು ವಿಚಾರಿಸಿದ್ದರೆ ಚೆನ್ನಾಗಿತ್ತೇನೋ…..
ಯಾವ ಜೋರೂ ಇಲ್ಲದ ಜೋರ್ ದಾರ್
ದುರ್ಭಿಕ್ಷದಲ್ಲಿ ಅಧಿಕ ಮಾಸ ಎಂಬ ಗಾದೆ ಬಾಲಿವುಡ್ ಗೆ ಅಕ್ಷರಶಃ ಅನ್ವಯಿಸುತ್ತದೆ. ಹಿಂದಿ ಚಿತ್ರಗಳಲ್ಲಿ ಮೊದಲೇ ದಮ್ ಇರಲಿಲ್ಲ, ವೀಕ್ಷಕರಂತೂ ಇದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ಸಾಮಾಜಿಕ ಕಥಾಹಂದರವುಳ್ಳ `ಜಯೇಶ್ ಭಾಯಿ ಜೋರ್ ದಾರ್’ ಚಿತ್ರವನ್ನು ಹೇಗಾದರೂ ಸಕ್ಸಸ್ ಮಾಡಿಸಿಯೇ ತೀರುತ್ತೇನೆ ಎಂದು ನಾಯಕ ರಣವೀರ್ ಸಿಂಗ್ ಎಷ್ಟೇ ಜೋರಾಗಿ ಎಳೆದಾಡಿದರೂ, ಚಿತ್ರದಲ್ಲಿನ ಅನೇಕ ಲೋಪದೋಷಗಳು ಇವನ ಪ್ರಯತ್ನಕ್ಕೆ ವಿರುದ್ಧವಾಗಿವೆ. ಹಣದ ಮಳೆ ಸುರಿಯಬಹುದೆಂದು ಕಾದಿದ್ದ ನಿರ್ಮಾಪಕರಿಗೆ ಬರದ ಭರಾಟೆ ಎದುರಿಸಬೇಕಾದ ಕರ್ಮ ತಪ್ಪಲಿಲ್ಲ. ಸದಾ ದಕ್ಷಿಣದ ಚಿತ್ರಗಳಿಗೆ ಬಾಯಿ ಬಿಟ್ಟು ಕೂರುವ ಬಾಲಿವುಡ್ ಇನ್ನಾದರೂ ಎಚ್ಚೆತ್ತುಕೊಂಡೀತೇ….?
ರಾಧಿಕಾ ಇದೀಗ ಹೊಸ ಖಿಲಾಡಿ
`ಅಂಗ್ರೇಝಿ ಮೀಡಿಯಂ’ ಚಿತ್ರದ ರಾಧಿಕಾ ಇತ್ತೀಚೆಗೆ ಫುಲ್ ಸ್ಪೀಡಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಈ ವರ್ಷದ ಮೊದಲ 4 ಪ್ರಾಜೆಕ್ಟ್ ಗಳನ್ನು ಅವಳು ಈಗಾಗಲೇ ಪೂರೈಸಿದ್ದಾಳೆ. ತನ್ನ ಹೊಸ ಪ್ರಾಜೆಕ್ಟ್ ಗಾಗಿ ಇದೀಗ ಅವಳು ಮುಂಬೈನಿಂದ ಹೊರಗೆ ಹೊರಟಿದ್ದಾಳೆ. ಜೊತೆಗೆ ಈ ಹೊಸ ಪ್ರಾಜೆಕ್ಟ್ ಸಹ ವರ್ಷಕ್ಕೆ 4 ಚಿತ್ರ ಮಾಡುವ ಅಕ್ಷಯ್ ಕುಮಾರ್ ಜೊತೆ. ಅಕ್ಷಯ್, ಇದೀಗ ನಿನ್ನ ಜೊತೆಗೆ ಖಿಲಾಡಿ ಆಗಿರಲು ಬರ್ತಿದ್ದಾಳೆ ರಾಧಿಕಾ, ಎಚ್ಚರ!
ಸನಿ ಈಗ ಸೇಲೆಬಲ್ ಅಲ್ಲ!
ಹೀಗೆ ಅಂತ ಡಿಕ್ಲರೇಶನ್ ಕೊಡುತ್ತಿರುವವರು ನಾವಲ್ಲ, ಬದಲಿಗೆ ಯಶ್ ರಾಜ್ ಫಿಲಮ್ಸ್ ನವರು. ಸುದ್ದಿಗಾರರ ಪ್ರಕಾರ `ಪೃಥ್ವಿರಾಜ್’ ಚಿತ್ರಕ್ಕಾಗಿ ಮೊದಲು ಸನಿ ಡಿಯೋಲ್ ನನ್ನು ಆರಿಸಲಾಗಿತ್ತು. ಅದಕ್ಕಾಗಿ ಆತ ಸಾಕಷ್ಟು ತಯಾರಿ ಸಹ ನಡೆಸಿದ್ದ. ಆದರೆ ಏನಾಯ್ತೋ ಏನೋ…. ಯಶ್ ರಾಜ್ ಫಿಲಮ್ಸ್ ನವರು ನಿರ್ದೇಶಕರ ಮೇಲೆ ಒತ್ತಡ ಹೇರಿ, ಚಿತ್ರ ಯಶಸ್ವಿಯಾಗಬೇಕಾದರೆ ಯಾರಾದರೂ ಸೇಲೆಬಲ್ ಹೀರೋ ಹುಡುಕಿ ಅಂತ. ಸನಿ ಜಾಗಕ್ಕೆ ಈಗ ಅಕ್ಷಯ್ ಬಂದಿದ್ದಾನೆ. ಹಿರಿಯ ನಟ ಧರ್ಮೇಂದ್ರ ಸಿಂಗ್ ಅವರಿಗೆ ತಮ್ಮ ಮಗನನ್ನು ಹೀಗೆ ನಡು ನೀರಿನಲ್ಲಿ ಬಿಟ್ಟರೆಂದು ಗೊತ್ತಾದರೆ, ಯಶ್ ರಾಜ್ ಸಂಸ್ಥೆಯನ್ನು ಸುಮ್ಮನೆ ಬಿಟ್ಟಾರೆಯೇ?
ಮತ್ತೊಂದು ಠುಸ್ ಚಿತ್ರ
ಹೀರೋಪಂತಿ ದೇಶದಲ್ಲಿ ಈಗ ಎಲ್ಲೆಡೆ ಭಗವಾ ಬುಲ್ಡೋಝರ್ ಜೋರಾಗಿದೆ, ಹಾಗೇ ಬಾಲಿವುಡ್ ನಲ್ಲಿ ದಕ್ಷಿಣದ ಚಿತ್ರಗಳ ಸುಗ್ಗಿ! ಇದೀಗ ಬಿಡುಗಡೆಯಾದ ಅಪ್ಪಟ ಹಿಂದಿಯ `ಹೀರೋಪಂತಿ-2′ ದಕ್ಷಿಣದ ಅದರಲ್ಲೂ ಕನ್ನಡದ ಕುವರ ಯಶ್ ಚಿತ್ರ ಬುಲ್ಡೋಝರ್ ಎದುರು ಅಪ್ಪಚ್ಚಿಯಾಯಿತು! ಯಶ್ ಗಾಗಿ ಹುಚ್ಚರಾಗಿದ್ದ ವೀಕ್ಷಕರ ಮುಂದೆ ಟೈಗರ್ ಘರ್ಜನೆ ಏನೇನೂ ನಡೆಯಲಿಲ್ಲ. ಹಾಗೆಂದು ದಕ್ಷಿಣದ ಚಿತ್ರಗಳಲ್ಲೆಲ್ಲ ವಾಸ್ತವಿಕತೆಯ ಕನ್ನಡಿ ಹಿಡಿಯುತ್ತಿದೆ ಅಂತಲ್ಲ, ಆದರೆ ಹಿಂದಿ ಚಿತ್ರಗಳಲ್ಲಿ ಲೇಶ ಮಾತ್ರ ದಮ್ ಇಲ್ಲದಿರುವುದು ದುರಾದೃಷ್ಟಕರ. ಏನಾದರೂ ಮಾಡ್ರಪ್ಪ….. ಇಲ್ಲದಿದ್ದರೆ ಹೀರೋಪಂತಿ ತರಹ ಮುಂದಿನ ಚಿತ್ರಗಳೂ ಠುಸ್ಸೆಂದಾವು.
ಇರಿಟೇಟ್ ಆಗದೆ ಹೋದೀತೇ?
ಹಿರಿಯ ನಟ ಸುನೀಲ್ ಶೆಟ್ಟಿ ಇದೀಗ ತಮ್ಮ FB ಫ್ಯಾನ್ಸ್ ಎಂದರೆ ಸಿಡಿಸಿಡಿ ಎಂದು ರೇಗುತ್ತಾರೆ. ಯಾರೋ ಒಬ್ಬ ಅಭಿಮಾನಿ ಈತನನ್ನು `ಗುಟ್ಕಾ ಕಿಂಗ್’ ಎಂದಿದ್ದೇ ಇಷ್ಟೆಲ್ಲ ರಾದ್ಥಾಂತಕ್ಕೆ ಕಾರಣ. ಆ ಫ್ಯಾನ್ ದು ತಪ್ಪಿರಬಹುದು, ಆದರೆ ಸುನೀಲ್ ಶೆಟ್ಟಿ ಅದಕ್ಕೆ ಅಷ್ಟೊಂದು ಕೋಪಗೊಳ್ಳಬೇಕೇ? ಮೊದಲು ಆ ಫ್ಯಾನಿಗೆ ಎಚ್ಚರಿಕೆ ನೀಡಿದ್ದಾಯಿತು, ನಂತರ ಒಂದು ಈವೆಂಟ್ ನಲ್ಲಿ, `60ರ ಪ್ರಾಯದಲ್ಲೂ ನಾನು ಫಿಟ್ ಆಗಿರಲು ಕಾರಣ, ಇಂಥದ್ದರಿಂದ ದೂರ ಉಳಿದಿರುವುದರಿಂದ!’ ಎಂದು ತಿಪ್ಪೆ ಸಾರಿಸಿದ್ದಾಯಿತು. ಬಿಡಪ್ಪ ಸುನೀಲ್….. ಅಜಯ್, ಶಾರೂಖ್, ಅಕ್ಷಯ್ ರಂಥವರು ಮುಗ್ಧರು. ಏಲಕ್ಕಿಗೂ ಗುಟ್ಕಾಗೂ ಅವರಿಗೆಲ್ಲಿ ವ್ಯತ್ಯಾಸ ತಿಳಿಯಬೇಕು? ಏಲಕ್ಕಿಯ ಜಾಹೀರಾತಿಗಾಗಿ ಯಾರಾದರೂ ಇಷ್ಟು ಖರ್ಚು ಮಾಡುತ್ತಾರಾ ಎಂದು ಅವರಿಗೇನು ಗೊತ್ತು….? ಪಾಪ ಮುಗ್ಧರು!