*ಪ್ರಾತಃ ಸುಭಾಷಿತ*
*ಪರೋಪಕಾರಶೀಲತ್ವಂ*
*ಪರದುಃಖಾಸಹಿಷ್ಣುತಾ |*
*ದಯಾಪರತ್ವಂ ದಾಕ್ಷಿಣ್ಯಂ*
*ಸತಾಂ ಸ್ವಾಭಾವಿಕಾ ಗುಣಾಃ ||*
_“ಇತರರಿಗೆ ಸಹಾಯಮಾಡುವ ಪ್ರವೃತ್ತಿ, ಯಾರಾದರೂ ಕಷ್ಟದಲ್ಲಿದ್ದಾರೆಂದು ತಿಳಿದರೆ ನೋವಿಗೊಳಗಾಗುವುದು, ಬೇರೆಯವರಲ್ಲಿ ದಯೆ ತೋರುವುದು, ಇತರರಿಗೆ ಅನುಕೂಲಕರವಾಗುವಂತೆ ಯೋಚಿಸುವುದು – ಇವು ಸಂಸ್ಕಾರವಂತರ ಸಹಜಸ್ವಭಾವ.”_
ಸಮಾಜೋನ್ನತರೂ ಸಂಪನ್ನರೂ ವಿವಿಧರೀತಿಯ ಜನೋಪಯೋಗಿ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅಪರೂಪವಲ್ಲ. ಇಂತಹ ಪ್ರಯತ್ನಗಳು ಸರ್ವಥಾ ಪ್ರಶಂಸಾರ್ಹಗಳು. ಏನೇನೋ ವಿಷಮತೆಗಳೂ ಅಸಮತೋಲನಗಳೂ ಕ್ಲೇಶಮಯ ಸನ್ನಿವೇಶಗಳೂ ತುಂಬಿರುವ ಜಗತ್ತಿನಲ್ಲಿ ಒಂದಷ್ಟು ಜನರಿಗಾದರೂ ಸಾಂತ್ವನವನ್ನು ಉಂಟುಮಾಡುವ ಇಂತಹ ಸಾತ್ವಿಕ ಕಾರ್ಯಗಳು ಅಸಂಖ್ಯ ಜನರ ಬದುಕನ್ನು ಸಹ್ಯವಾಗಿಸುತ್ತವೆ.
ಮೇಲಿನಂತಹ ನೆರವನ್ನು ಒದಗಿಸಬಲ್ಲವರು ಅನುಕೂಲವಂತರು, ಪ್ರೌಢರು. ಆ ವರ್ಗಕ್ಕೆ ಸೇರದ ಕೇವಲ ಒಂಬತ್ತೇ ವರ್ಷ ವಯಸ್ಸಿನ ಒಂದು ಮಗು ವ್ಯಾಪಕ ಸೇವಾ-ಆಂದೋಲನಕ್ಕೆ ಕಾರಣವಾಯಿತೆಂಬುದನ್ನು ಕಲ್ಪಿಸಿಕೊಳ್ಳಲಾದೀತೆ? ಆದರೆ ಇದು ನಡೆದದ್ದು ವಾಸ್ತವ.
ರಾಚೆಲ್ ಬೆಕ್ವಿತ್ ಹುಟ್ಟಿನಿಂದಲೇ ಜೀವಾನುಕಂಪ ಪ್ರವೃತ್ತಿಯವಳು. ಆಲೋಪೆಸಿಯಾ ಎಂಬ ವಿಚಿತ್ರ ವ್ಯಾಧಿಗೆ ತುತ್ತಾದ ಮಕ್ಕಳಿಗೆ ತಲೆಗೂದಲು ಬೆಳೆಯುವುದಿಲ್ಲ ಎಂಬ ಸಂಗತಿ ಗಮನಕ್ಕೆ ಬಂದೊಡನೆ, ತನ್ನ ಐದನೆಯ ವಯಸ್ಸಿನಲ್ಲಿಯೇ ತನ್ನ ಕೂದಲಷ್ಟನ್ನೂ ಕತ್ತರಿಸಿ ‘ಲಾಕ್ಸ್ ಆಫ್ ಲವ್’ ಎಂಬ ವಿಗ್ ತಯಾರಿಕೆ ಸಂಸ್ಥೆಯೊಂದಕ್ಕೆ ದಾನ ಮಾಡಿದ್ದಳು! ಎಂಟನೇ ವಯಸ್ಸಿನಲ್ಲಿಯೆ ಇಥಿಯೋಪಿಯಾ ಮೂಲೆಯ ಗ್ರಾಮಗಳಲ್ಲಿ ಬಾವಿ ನಿರ್ಮಾಣಕ್ಕಾಗಿ ತನ್ನಲ್ಲಿದ್ದ ಹಣ ಕಳಿಸಿದ್ದಳು.
ರಾಚೆಲ್ 9ನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಅವಳಿಗೆ ಅನ್ನಿಸಿತು: “ಜಗತ್ತಿನ ಲಕ್ಷಾಂತರ ಮಕ್ಕಳು 5ನೇ ಹುಟ್ಟುಹಬ್ಬವನ್ನೂ ಕಾಣಲಾರರು. ಹೀಗಿರುವಾಗ ನಾನು 9ನೇ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಿಕೊಳ್ಳುವುದು ಯುಕ್ತವೆ?” ಹೀಗೆ ಯೋಚಿಸಿದ ಅವಳು ತನಗೆ ಹುಟ್ಟುಹಬ್ಬದ ಉಡುಗೊರೆ ಕೊಡಬಯಸುವವರೆಲ್ಲ ಹಣದ ರೂಪದಲ್ಲಿಯೇ ಕೊಡುವಂತೆ ಬಿನ್ನವಿಸಿದಳು. ಆ ಹಣವನ್ನು ಆಫ್ರಿಕಾದ ಮೂಲೆಯ ಹಳ್ಳಿಯೊಂದರ ಹದಿನೈದು ಮಕ್ಕಳ ನೀರಿನ ವ್ಯವಸ್ಥೆಗಾಗಿ ಕಳಿಸುವುದು ತನ್ನ ಇಚ್ಛೆ ಎಂದಳು.
ದುರದೃಷ್ಟದಿಂದ ಅದಾದ ಐದೇ ವಾರಗಳ ತರುವಾಯ ಕಾರಿನ ಅಪಘಾತದಲ್ಲಿ ರಾಚೆಲ್ ಮೃತಳಾದಳು. ಆ ವೇಳೆಗೆ ಅವಳಲ್ಲಿ 220 ಡಾಲರ್ ಸಂಗ್ರಹವಾಗಿತ್ತು.
ಈ ವಿಷಯ ಹೇಗೋ ತಿಳಿದುಬಂದ “ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ ನಿಕೊಲಸ್ ಕ್ರಿಸ್ಟಾಫ್ ಇದರ ಬಗೆಗೆ ಲೇಖನ ಬರೆದ. ಆ ಲೇಖನವನ್ನು ಓದಿದ ಪಾದರಿಯೊಬ್ಬ ಆ ಶ್ಲಾಘನೀಯ ಯೋಜನೆಯನ್ನು ತಾನು ಕೈಗೆತ್ತಿಕೊಳ್ಳಲು ಮುಂದಾದ. ಪ್ರಕಟಣೆಗೆ ಪ್ರತಿಕ್ರಿಯೆಯಾಗಿ ಜಗತ್ತಿನೆಲ್ಲೆಡೆಯಿಂದ ಹತ್ತು ಲಕ್ಷ ಡಾಲರಿಗೂ ಅಧಿಕ ಮೊತ್ತ ಹರಿದುಬಂದಿತು.
ರಾಚೆಲ್ ನೀಡಿದ ಪ್ರೇರಣೆಯ ಫಲವಾಗಿ ಈವರೆಗೆ 51,000ಕ್ಕೂ ಹೆಚ್ಚು ಜನಕ್ಕೆ ಒಂದಲ್ಲ ಒಂದು ರೀತಿಯ ನೆರವು ದೊರೆತಿದೆ.
ಮೂರು ಹೊತ್ತೂ ಕೆಟ್ಟಸುದ್ದಿಗಳ ಭರಾಟೆ ತುಂಬಿರುವ ಪರಿಸರದಲ್ಲಿ ಇಂತಹ ವೃತ್ತಗಳು ಚಂದ್ರಕಿರಣಗಳು.
(ಉತ್ಥಾನ 2012 “ಸೂಕ್ತಿ-ಸಂಚಯ”)
*ಶುಭದಿನವಾಗಲಿ!*
ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು.