ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರಮುಖ ಎನಿಸುವ ಅಸ್ಸಾಂ ಎಲ್ಲೆಲ್ಲೂ ಹಸಿರು ತುಂಬಿಕೊಂಡು ಸುಂದರ ಪರ್ವತ ಶೃಂಖಲೆಗಳಿಂದ ಅನಾಯಾಸವಾಗಿ ಯಾರನ್ನಾದರೂ ಆಕರ್ಷಿಸುತ್ತದೆ. ಅಲ್ಲಿನ ನಡೆನುಡಿ, ಸಂಸ್ಕೃತಿ, ಆಹಾರ ವಿಹಾರ, ಋತು ಎಲ್ಲವೂ ಒಂದಕ್ಕಿಂತ ಒಂದು ಸುಂದರ! ಅಲ್ಲಿನ ಸ್ಥಳೀಯ ಹೆಂಗಸರ ಮುಖ್ಯ ಧಿರಿಸು ಎಂದರೆ ಮೇಖಾ ಚಾದೋರ್‌. ಈ ಸಾಂಪ್ರದಾಯಿಕ ಉಡುಗೆ ಬಹುತೇಕ ಸಿಲ್ಕ್ ಯಾ ಕಾಟನ್‌ ಆಗಿರುತ್ತದೆ. ಅದರ ಮೇಲೆ ಸುರಸುಂದರ ಕಸೂತಿಯ ವಿನ್ಯಾಸಗಳಿರುತ್ತವೆ. ಆದರೆ ಇತ್ತೀಚೆಗೆ ಆಧುನಿಕತೆಯ ಸುಳಿಗಾಳಿಯಿಂದ ಈ ಬಗೆಯ ಉಡುಗೆಗಳ ಕ್ರೇಝ್ ಕಡಿಮೆ ಎಂದೇ ಹೇಳಬಹುದು. ಏಕೆಂದರೆ ಆಧುನಿಕ ಯುವ ಜನತೆ ಈ ಪ್ರಾಚೀನ ಡಿಸೈನ್‌ ಗಳನ್ನು ಅಷ್ಟಾಗಿ ಮೆಚ್ಚಿಕೊಳ್ಳುತ್ತಿಲ್ಲ, ಹೀಗಾಗಿ ಇದರ ನೇಕಾರರು ಆರ್ಥಿಕವಾಗಿ ಕುಗ್ಗಿ ಹೋಗಿರುತ್ತಾರೆ. ಸಹಜವಾಗಿಯೇ ಜನ ನೌಕರಿ ಬೇಟೆಗೆ ಭಾರತವಿಡೀ ಹರಡಿದ್ದಾರೆ.

ಸಂಯುಕ್ತಾರ ಸಾಹಸ

ಅಸ್ಸಾಂ ರಾಜ್ಯದ ರಾಜಧಾನಿ ಗೌಹಾಟಿ ನಿವಾಸಿ ಫ್ಯಾಷನ್‌ ಡಿಸೈನರ್‌ ಸಂಯುಕ್ತಾ ದತ್ತಾ ಇಂಥದೇ ಕರಕುಶಲ ನೇಕಾರರನ್ನು ಒಗ್ಗೂಡಿಸಿ, ಅವರ ಸಂಪಾದನೆಗೊಂದು ದಾರಿ ಮಾಡಿದ್ದಾರೆ. ಈ ರೀತಿ ರೂಪುಗೊಂಡಿರುವ ಅಸ್ಸಾಂ ಸಿಲ್ಕ್ ಮೂಂಗಾ ಸಿಲ್ಕ್ ಸೀರೆಗಳನ್ನು ಮಾರುಕಟ್ಟೆಗೆ ತಲುಪಿಸಿ, ಅವರ ಕರಕುಶಲತೆಯನ್ನು ವಿಶ್ವವಿಡೀ ಹರಡುತ್ತಿದ್ದಾರೆ. ಹೀಗಾಗಿ ಈ ನೇಕಾರರ ಮುಂದಿನ ಪೀಳಿಗೆ ಇದನ್ನು ಕಲಿಯಲು ಇತ್ತೀಚೆಗೆ ಆಸಕ್ತಿ ತೋರಿಸುತ್ತಿದೆ.

ಇಂದು ಮೇಖಾ ಚಾದೋರ್

ವಿಶ್ವವಿಡೀ ತನ್ನ ಸ್ಟೈಲಿಶ್‌ ಡಿಸೈನ್ಸ್ ನಿಂದಾಗಿ ಬಹು ಚರ್ಚಿತ ಉಡುಗೆ ಎನಿಸಿದೆ. ಲ್ಯಾಕ್ಮೆ ಫ್ಯಾಷನ್‌ ವೀಕ್‌ ವಿಂಟರ್‌ ಕಲೆಕ್ಷನ್‌ ನಲ್ಲಿ ಸಂಯುಕ್ತಾರ `ಚಿಕಿಮಿಕಿ’ ಕಾನ್ಸೆಪ್ಟ್ ರಾಂಪ್ ಏರಿ, ಆ ರೂಪದರ್ಶಿಗಳು ಧರಿಸಿದ್ದ ಬ್ಲ್ಯಾಕ್‌ ಮೇಖಾ ಚಾದೋರ್‌ ಬೆಲ್ಟೆಡ್‌ ಸೀರೆ ಸ್ಟ್ರಾಪಿಂಗ್‌ ಚೋಲಿ ಜೊತೆ ಎಲ್ಲರ ಗಮನ ಸೆಳೆಯಿತು.

ವಿಲುಪ್ತ ಕಲೆಯ ಸಂರಕ್ಷಣೆ

ಈ ಕಲೆಯ ಬಗ್ಗೆ ಸಂಯುಕ್ತಾ ಹೇಳುತ್ತಾರೆ, ಹ್ಯಾಂಡ್‌ ಲೂಂ ವಸ್ತ್ರಗಳನ್ನು ಜನರವರೆಗೆ ತಲುಪಿಸುವುದು ಬಹಳ ಕಠಿಣ ಕೆಲಸ. ಏಕೆಂದರೆ ಇಂಥ ವಸ್ತ್ರಗಳು ಮಾರುಕಟ್ಟೆಯ ಆಧುನಿಕ ಸೀರೆಗಳ ಜೊತೆ ಹೋಲಿಸಿದಾಗ ಖಂಡಿತಾ ದುಬಾರಿ. ಪವರ್‌ ಲೂಮಿಗೆ ಅಧಿಕ ಬೇಡಿಕೆ ಸಿಗುತ್ತಿರುವ ಮುಖ್ಯ ಕಾರಣವೇ, ಅದರಲ್ಲಿ ನೇಯ್ಗೆ ಬಹು ಬೇಗ ಬೇಗ ಹಾಗೂ ಕೈಮಗ್ಗಕ್ಕೆ ಹೋಲಿಸಿದಾಗ ಅಗ್ಗ ಆಗಿರುತ್ತದೆ. ಆದರೆ ಕೈಮಗ್ಗದ ನೇಯ್ಗೆಯ ಸೀರೆಗಳ ಬೆಡಗು ಎಂದೆಂದೂ ಮಾಸುವುದಿಲ್ಲ.

ಪವರ್‌ ಲೂಮಿನಲ್ಲಿ ಅವರು ಈ ಅಸ್ಸಾಂ ಸಿಲ್ಕ್ ಸೀರೆಗಳ ಬೆಡಗನ್ನು ಎಂದೂ ತರಲಾಗದು. ಈ ಕಾರಣಕ್ಕಾಗಿಯೇ ಈ ಕೈಮಗ್ಗದ ನೇಕಾರರ ಕುಶಲಕಲೆ ಜನರ ಅಭಿಮಾನ ಗಳಿಸುತ್ತದೆ. ಹೀಗಾಗಿ ಈ ಕಲೆಯನ್ನು ಮಾಸಿಹೋಗದಂತೆ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಸಂಯುಕ್ತಾ, ಮೇಖಾ ಚಾದೋರ್‌ ಡ್ರೆಸ್‌ ಮುಂದಿನ ಪೀಳಿಗೆಗೂ ಸರಾಗವಾಗಿ ಸಾಗುತ್ತಿರಬೇಕು ಎನ್ನುತ್ತಾರೆ. ಹಿಂದೆಲ್ಲ ತಾನು ಅಸ್ಸಾಮಿನಿಂದ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದಾಗ, ಜನ ಇತರ ಎಲ್ಲಾ ಬಗೆಯ ವೆರೈಟಿಗಳ ಬಗ್ಗೆ ಕೇಳುತ್ತಿದ್ದರು, ಆದರೆ ಅಸ್ಸಾಂ ಸಿಲ್ಕ್, ಮೇಖಾ ಚಾದೋರ್‌ ಅವರಿಗೆ ತಿಳಿಯುತ್ತಿರಲಿಲ್ಲ ಎನ್ನುತ್ತಾರೆ.

ಹೀಗಾಗಿ ಈಗ ನಾನು ಮಾಡುವ ಎಲ್ಲಾ ಫ್ಯಾಷನ್‌ ಶೋಗಳಲ್ಲೂ ಮೇಖಾ ಚಾದೋರ್‌ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೇನೆ, ಏಕೆಂದರೆ ಇದಕ್ಕೆ ಸಂಬಂಧಿಸಿದ ಎಲ್ಲಾ ವತರ್ಕರೂ, ಬ್ಲಾಗರ್‌ ವರೆಗೂ ಎಲ್ಲರೂ ಬಂದಿರುತ್ತಾರೆ, ಆಗ ಮಾತ್ರ ಇದನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ.

ನೌಕರಿ ಬಿಡಬೇಕಾಯಿತು

ಸಂಯುಕ್ತಾ ತಮ್ಮ ನೌಕರಿಯನ್ನು ಒಬ್ಬ ಸರ್ಕಾರಿ ಎಂಜಿನಿಯರ್‌ ಆಗಿ ಆರಂಭಿಸಿದ್ದರು. 10 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಆಕೆ ಆ ಕೆಲಸ ಬಿಟ್ಟರು. ಅಸ್ಸಾಂ ಸಿಲ್ಕ್ ಪಾಪ್ಯುಲರ್‌ ಮಾಡಲೇಬೇಕು ಎಂದು ಕಂಕಣ ಕಟ್ಟಿ ದುಡಿಯತೊಡಗಿದರು. ಆಕೆ ಈ ನಿರ್ಧಾರಕ್ಕೆ ಬರುವುದು ಸುಲುಭವಾಗಿರಲಿಲ್ಲ. ಏಕೆಂದರೆ ಅವರ ತಂದೆಯ ಮರಣಾನಂತರ, ತಾಯಿ ಇಡೀ ಸಂಸಾರದ ಪಾಲನೆ ಪೋಷಣೆಯ ಜವಾಬ್ದಾರಿ ಹೊತ್ತಿದ್ದರು. ಹಾಗಾಗಿ ತಾಯಿ ಈಕೆಯನ್ನು ಕೆಲಸ ಬಿಡಬೇಡ ಎಂದೇ ಹೇಳುತ್ತಿದ್ದರು.

ನಾನು ಡಿಸೈನರ್‌ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಪಡೆಯದಿರುವುದೇ ಅಮ್ಮ ಹೀಗೆ ಹೇಳಲು ಕಾರಣವಾಗಿತ್ತು. ಪತಿ ಸಪೋರ್ಟ್ ಮಾಡಿ, ನಿನ್ನ ಮನಸ್ಸಿನ ದನಿ ಕೇಳು ಎಂದರು. ಇದ್ದ ನೌಕರಿ ಬಿಟ್ಟು ನಾನು ಫ್ಯಾಷನ್‌ ಡಿಸೈನರ್‌ ಆದೆ. ಆಗ ನನ್ನ ಬಳಿ ಇದಕ್ಕಾಗಿ ಯಾವ ಫ್ಯಾಕ್ಟರಿಯೂ ಇರಲಿಲ್ಲ. ಪ್ರತಿ ಸಲ ನೇಕಾರರು ತಮ್ಮ ಕೆಲಸಕ್ಕಾಗಿ ಅಡ್ವಾನ್ಸ್ ಹಣ ಕೇಳುತ್ತಿದ್ದರು. ಇದನ್ನು ನಿಭಾಯಿಸುವುದು ಬಹಳ ಕಷ್ಟವಾಗಿತ್ತು. ಮಾರ್ಕೆಟ್‌ ಬೇಡಿಕೆಗಳ ಬಗ್ಗೆ ಗೊತ್ತಿರುವ ಅವರು, ನನ್ನ ಆಧುನಿಕ ಡಿಸೈನ್ಸ್ ಒಪ್ಪುತ್ತಿರಲಿಲ್ಲ. `ಅಪ್ಪ ಹಾಕಿದ ಆಲದ ಮರ’ ಎಂಬಂತೆ ತಮಗೆ ಗೊತ್ತಿದ್ದನ್ನು ಮಾತ್ರ ಮಾಡುತ್ತಿದ್ದರು. ಹೊಸ ಬಗೆಯ ಪ್ರಯೋಗಗಳಿಗೆ ಅವರು ಸಿದ್ಧರಿರಲಿಲ್ಲ. ನನ್ನ ಪಾಲಿಗೆ ಇದು ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ.

ಕೈಮಗ್ಗಕ್ಕೆ ಅಪಾರ ಶ್ರಮವಿದೆ

ಅಸಲಿಗೆ ಒಂದು ಮೇಖಲಾ ಚಾದೋರ್‌ ಸಿದ್ಧಪಡಿಸಲು 25-30 ದಿನಗಳ ಕಠಿಣ ಶ್ರಮ ಅಡಗಿದೆ. ಆದರೆ ಇದಕ್ಕಾಗಿ ಅವರಿಗೆ ಸಿಗುತ್ತಿದ್ದ ಮಜೂರಿ ಖಂಡಿತಾ ಈ ಶ್ರಮದ ಮುಂದೆ ಏನೇನೂ ಇರಲಿಲ್ಲ. ಹೀಗಾಗಿ ಈ ಶ್ರಮದಾಯಕ ಕೈಮಗ್ಗ ಪಕ್ಕಕ್ಕೆ ಒತ್ತರಿಸಿ, ಅವರು ಬೇರೆ ಕೆಲಸ ಹುಡುಕುತ್ತಿದ್ದರು. ಅವರ ಅಗತ್ಯಗಳನ್ನು ಗಮನಿಸಿ ಉತ್ತಮ ಮಜೂರಿಯೊಂದಿಗೆ ಉಚಿತವಾಗಿ ಊಟ, ವಸತಿ, ವೈದ್ಯಕೀಯ ಸೌಲಭ್ಯ ಒದಗಿಸಿದೆ. ನಾನು ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ ಎಂದು ಅವರಿಗೆ ಅರ್ಥವಾಯಿತು. ಈಗ ನನ್ನ ಬಳಿ 150 ಕೈಮಗ್ಗಗಳಿವೆ, ಈ ಎಲ್ಲಾ ನೇಕಾರರಿಗೂ ನಾನು ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ, ಎನ್ನುತ್ತಾರೆ.

ನನ್ನ ಫ್ಯಾಕ್ಟರಿಯನ್ನು 2015ರಲ್ಲಿ ಆರಂಭಿಸಿದೆ. ಸದ್ಯಕ್ಕೆ ನನಗೆ ಯಾವುದೇ ಸಮಸ್ಯೆಗಳಿಲ್ಲ. ನೇಕಾರರು ತಾವಾಗಿಯೇ ಕೆಲಸ ಹುಡುಕಿಕೊಂಡು ನನ್ನ ಬಳಿ ಬರುತ್ತಾರೆ. ಇಲ್ಲಿ ವಯಸ್ಕರು ಮಾತ್ರವಲ್ಲ, ಯುವಜನತೆ ಸಹ ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿದ್ದಾರೆ. ಅವರ ಪ್ರಾಥಮಿಕ ಅಗತ್ಯಗಳಿಗೆ ಇಲ್ಲಿ ಮಾನ್ಯತೆ ಸಿಗುತ್ತಿದೆ. ಜೊತೆಗೆ ಉತ್ತಮ ಕೆಲಸಕ್ಕಾಗಿ ನಾನು ಅವರಿಗೆ ಇನ್ಸೆಂಟಿವ್ಸ್ ಸಹ ನೀಡುತ್ತೇನೆ.

ನೇಕಾರರ ಸಹಕಾರ

ಈ ನೇಕಾರರು ಈ ಆಧುನಿಕ ಇಂಡಸ್ಟ್ರಿಯತ್ತ ಹೆಚ್ಚು ಆಸಕ್ತಿ ತೋರಿಸಲಿ ಎಂದು ಹಲವು ಪ್ರಯತ್ನಗಳು ನಡೆಯುತ್ತಿವೆ. ನನ್ನ ಮುಖ್ಯ ಕೆಲಸ ಅಸ್ಸಾಂ ಮಲ್ಬರಿ ಸಿಲ್ಕ್, ಮೂಂಗಾ ಸಿಲ್ಕ್ ಹ್ಯಾಂಡ್‌ ಲೂಂ ಆಗಿದೆ. ಹ್ಯಾಂಡ್‌ ಲೂಂ ಸದಾ ಸಮೃದ್ಧವಾಗಿರಲಿ ಎಂದು ಬಯಸುತ್ತೇನೆ. ಏಕೆಂದರೆ ಪವರ್‌ ಲೂಂ ಇದನ್ನು ಹಿಂದಿಕ್ಕಿ ಮುಂದೋಡುತ್ತಿದೆ. ಅಲ್ಲಿ ಒಂದು ಮೇಖಾ ಚಾದೋರ್‌ ಸಿದ್ಧಪಡಿಸಲು 1 ದಿನ ಸಾಕು, ಹೀಗಾಗಿ ತಿಂಗಳಿಗೆ 30 ತಯಾರಿಸಿ, ಅಗ್ಗವಾಗಿ ಮಾರುತ್ತಾರೆ. ಆದರೆ ಅದು ಹೆಚ್ಚು ಬಾಳಿಕೆ ಬಾರದು.

ಈ ಕೈಮಗ್ಗದ ನೇಕಾರರಿಗೆ ಯಾರಾದರೂ ಸಹಾಯ ಮಾಡದಿದ್ದರೆ ಒಂದು ದಿನ ಇವರ ಉದ್ಯಮ ಸತ್ತೇ ಹೋಗುತ್ತದೆ. ಸರ್ಕಾರದ ವತಿಯಿಂದ ಯಾವುದೇ ಸಹಾಯ ಇಲ್ಲ. ಹೀಗಾಗಿ ನಾನು ಅತ್ಯಧಿಕ ಫ್ಯಾಷನ್‌ ಶೋ ಏರ್ಪಡಿಸಿ, ಈ ಕಲೆ ವಿನಾಶದ ಅಂಚಿಗೆ ಸಿಲುಕದಂತೆ ಗಮನಿಸುತ್ತೇನೆ. ಅಸ್ಸಾಂ ಸಿಲ್ಕ್ ನಿಂದ ತಯಾರಾದ ಈ ವಸ್ತ್ರವನ್ನು ಯಾವುದೇ ಶುಭ ಸಮಾರಂಭಕ್ಕೂ ಬಳಸಬಹುದು.

ಹೊಸ ಹೊಸ ಡಿಸೈನ್ಸ್

ಪ್ರತಿ ಸಲ ಡಿಸೈನ್ಸ್ ನಲ್ಲಿ ಹೊಸತನ ತರಲು ಸಂಯುಕ್ತಾ ಖುದ್ದಾಗಿ ತಾವೇ ಡ್ರಾ ಮಾಡುತ್ತಾರೆ. ಈ ಕೆಲಸದಲ್ಲಿ ದೊಡ್ಡ ಪ್ರೋಸೆಸ್ ಇದೆ. ಇದಕ್ಕಾಗಿ ಅವರು ಬಹಳ ಚಿಂತಿಸುತ್ತಾರೆ. ನಂತರ ಈ ಡಿಸೈನ್‌ ನ್ನು ಕಂಪ್ಯೂಟರ್‌ ಗೆ ಫೀಡ್‌ ಮಾಡಿ, ಕಾರ್ಡ್ಸ್ ಸಿದ್ಧಪಡಿಸುತ್ತಾರೆ. ಅದನ್ನು ಕೈಮಗ್ಗಕ್ಕೆ ಜೋಡಿಸುತ್ತಾರೆ. ನಂತರ ಅದೇ ಡಿಸೈನಿನ ನೇಯ್ಗೆ ವಸ್ತ್ರದ ಮೇಲೆ ಆಗುತ್ತದೆ. ಈ ರೀತಿ ಹಲವು ಪ್ರಕ್ರಿಯೆಗಳ ನಂತರ ಡ್ರೆಸಸ್‌ ತಯಾರಾಗುತ್ತವೆ. ಸಂಯುಕ್ತಾರ ದೊಡ್ಡ ಖುಷಿ ಎಂದರೆ, ಇಷ್ಟರಲ್ಲಿ ಇವರು ನ್ಯೂಯಾರ್ಕ್ ಫ್ಯಾಷನ್‌ ವೀಕ್‌ ನಲ್ಲಿ ಭಾಗಹಿಸಲು, ಅವರ ಪಾರಂಪರಿಕ ಉಡುಗೆಗಳಿಗೆ ಮಾನ್ಯತೆ ನೀಡಲಾಗಿದೆ.

ವಿದೇಶಗಳಲ್ಲೂ ಬೇಡಿಕೆ

ಸಂಯುಕ್ತಾ ಹೇಳುತ್ತಾರೆ, ಕೋವಿಡ್‌ ಕಾಲದಲ್ಲಿ ಇಡೀ ದೇಶ ಲಾಕ್‌ ಡೌನ್‌ ಆಗಿತ್ತು. ಆದರೆ ಫ್ಯಾಕ್ಟರಿಯ ಕೆಲಸ ನಡೆಯುತ್ತಿತ್ತು. ನೇಕಾರರು ಫ್ಯಾಕ್ಟರಿಯಲ್ಲಿದ್ದುಕೊಂಡೇ ಹಗಲಿರುಳೂ ದುಡಿಯುತ್ತಿದ್ದರು. ಅವರಿಗೆ ಹೊರಗೆ ಹೋಗುವ ಅಗತ್ಯವೇ ಬರಲಿಲ್ಲ. ಅವರ ಎಲ್ಲಾ ಅಗತ್ಯ ಪೂರೈಸಲಾಗುತ್ತಿತ್ತು. ಹೀಗಾಗಿ ಲಾಕ್‌ ಡೌನ್‌ ಓಪನ್‌ ಆದಾಗ, ನನ್ನ ಬಳಿ ಅಪಾರ ಡ್ರೆಸೆಸ್‌ ಸಂಗ್ರಹಗೊಂಡಿತ್ತು. 3 ತಿಂಗಳ ಬಿಸ್‌ ನೆಸ್‌ ಆಗ ಒಂದೇ ತಿಂಗಳಲ್ಲಿ ನಡೆಯಿತು!

ಬಾಂಗ್ಲಾದೇಶದಲ್ಲಿ ಇವರ ಈ ಕ್ರಿಯೇಟಿವಿಟಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲಿ ಇವರ ಡ್ರೆಸೆಸ್‌ ಚೆನ್ನಾಗಿ ಮಾರಾಟವಾಗುತ್ತದೆ. ಇಷ್ಟು ಮಾತ್ರಲ್ಲದೆ ಇಂಡೋನೇಷ್ಯಾ, ದೋಹಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್‌ ನ ಜನ ಸಹ ಅಸ್ಸಾಂ ಸಿಲ್ಕ್ ಗೆ ಮಾರುಹೋಗಿದ್ದಾರೆ! ಈ ಜನ ಮೇಖಾ ಚಾದೋರ್‌ ಧರಿಸಿ ಅಸ್ಸಾಮಿ ಸ್ಥಳೀಯ ಕಲೆಗೆ ಮನ್ನಣೆ ನೀಡುತ್ತಿದ್ದಾರೆ.

ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ