ಫ್ರಿಝೀ ಕೂದಲು ಅಂದ್ರೆ ಡ್ರೈ, ಸಿಕ್ಕುಸಿಕ್ಕಾದ, ಹೇಗೋ ಹರಡಿದ ಒರಟು ಕೂದಲು. ಇದನ್ನು ಸಂಭಾಳಿಸುವುದು ಖಂಡಿತಾ ಸುಲಭವಲ್ಲ. ಇದಕ್ಕೆ ಕಾರಣ ಕೂದಲಿನ ಆರ್ದ್ರತೆ ಮತ್ತು ಪೋಷಣೆಯ ಕೊರತೆ, ಎಷ್ಟೋ ಸಲ ಕೂದಲಿಗೆ ಅತ್ಯಧಿಕ ಡ್ರೈಯರ್‌, ಬ್ಲೋಯರ್‌ ಗಳ ಬಳಕೆಯಿಂದಾಗಿಯೂ ಕೂದಲು ಹೀಗಾಗುತ್ತದೆ. ಇದರ ನಿವಾರಣೆ ಹೇಗೆ ಎಂದು ತಿಳಿಯೋಣವೇ?

ಉತ್ತಮ ಕ್ವಾಲಿಟಿಯ ಶ್ಯಾಂಪೂ ಆರಿಸಿ : ಶ್ಯಾಂಪೂಗಳಲ್ಲಿ ಸಲ್ಫೇಟ್‌ ನ ಪ್ರಾಣ ಹೆಚ್ಚಾದಷ್ಟೂ ಅದು ಕೂದಲಿನ ನೈಸರ್ಗಿಕ ಜಿಡ್ಡಿನಂಶವನ್ನು ಹೀರಿಬಿಡುತ್ತದೆ. ಆದ್ದರಿಂದ ಸದಾ ಸಲ್ಫೇಟ್‌ ಪ್ಯಾರಾಬೇನ್‌ ಫ್ರೀ ಇರುವಂಥ ಶ್ಯಾಂಪೂ ಮಾತ್ರ ಆರಿಸಬೇಕು. ಜೊತೆಗೆ ಶ್ಯಾಂಪೂನಲ್ಲಿ ಗ್ಲಿಸರಿನ್‌ ಪ್ರಮಾಣ ಎಷ್ಟಿದೆ ಎಂಬುದನ್ನೂ ಪರೀಕ್ಷಿಸಿ. ಗ್ಲಿಸರಿಸ್‌ ಕೂದಲಿನ ಫ್ರಿಝೀನೆಸ್‌ ತಗ್ಗಿಸಲು ಬಹಳ ಸಹಕಾರಿ. ಯಾವಾಗ ತಲೆ ಸ್ನಾನ ಮಾಡಬೇಕಿದ್ದರೂ, ಒದ್ದೆ ಕೈಗೆ ಕೆಲವು ಹನಿ ಶ್ಯಾಂಪೂ ಹಾಕಿ, ಅದಕ್ಕೆ 4-5 ಹನಿ ನೀರು ಹಾಕಿ ಬೆರೆಸಿ, ತಿಕ್ಕಿ, ತಲೆಗೆ ಹಚ್ಚಿ ಮಸಾಜ್‌ ಮಾಡಿ. ಈ ರೀತಿ ಶ್ಯಾಂಪೂ ಬಳಸಬೇಕು.

ನಿಯಮಿತವಾಗಿ ಹೇರ್ಕಟ್ಮಾಡಿಸಿ : ನಿಯಮಿತವಾಗಿ ನಿಮ್ಮ ಕೂದಲನ್ನು ಕಟ್‌ಟ್ರಿಮ್ ಮಾಡಿಸಿ. ಇದರಿಂದ ಫ್ರಿಝೀನೆಸ್ ಹಾಗೂ ಸೀಳು ತುದಿಯ ಕೂದಲ ಸಮಸ್ಯೆ ತಗ್ಗುತ್ತದೆ. ನೀವು 40-50 ದಿನಗಳಿಗೊಮ್ಮೆ ತಪ್ಪದೆ ಹೇರ್‌ ಕಟ್‌ ಮಾಡಿಸುತ್ತಿರಿ.

ಡಯೆಟ್‌ : ನೀವು ಏನನ್ನೇ ಸೇವಿಸಿದರೂ ಅದು ನಿಮ್ಮ ದೇಹಕ್ಕೆ ಹೇಗೆ ಪೋಷಣೆ ಒದಗಿಸುತ್ತದೋ ಕೂದಲಿಗೂ ಹಾಗೆ ಒದಗಿಸುತ್ತದೆ. ನಿಮ್ಮ ಆಹಾರದಲ್ಲಿ ಸದಾ ಪ್ರೋಟೀನ್‌ ಬೆರೆತಿರಲಿ. ಸಂಜೆಯ ತಿಂಡಿಗಾಗಿ ಡ್ರೈಫ್ರೂಟ್ಸ್, ಗ್ರೀನ್‌ ಟೀ ಸೇವಿಸಿ. ಜೊತೆಗೆ ಹಸಿ ಟೊಮೇಟೋ, ಅಗಸೆಬೀಜ, ತಾಜಾ ಹಸಿರು ತರಕಾರಿ, ಹಣ್ಣು, ಪನೀರ್‌, ಕಡಲೆಕಾಳು ಸೇವಿಸಬೇಕು.

ಶವರ್ಆದ ನಂತರ ಕೂದಲಿನ ಬ್ರಶ್ಶಿಂಗ್ಮಾಡಿ : ಇಂಥ ಫ್ರಿಝೀ ಕೂದಲು ಉಳ್ಳವರು, ತಲೆ ಸ್ನಾನದ ನಂತರವೇ ಕೂದಲನ್ನು ಒಣಗಿಸಿ ನಂತರ ಬ್ರಶ್ಶಿಂಗ್‌ ಮಾಡಬೇಕು. ಶವರ್‌ ನಂತರ, ಒದ್ದೆ ಕೂದಲನ್ನು ಕೆಳಭಾಗದಿಂದ ಮೇಲಕ್ಕೆ ಬ್ರಶ್ಶಿಂಗ್‌ ಮಾಡಿದರೂ ಸರಿ.

ಹೀಟಿಂಗ್ಟೂಲ್ಸ್ ಬಳಸದಿರಿ : ಡ್ರೈಯರ್‌, ಬ್ಲೋಯರ್‌ ನಂಥ ಕೂದಲನ್ನು ತಕ್ಷಣ ಒಣಗಿಸುವ ಹೀಟಿಂಗ್‌ ಟೂಲ್ಸ್ ‌ನಿಂದ ಆದಷ್ಟೂ ದೂರವಿರಿ. ಇದು ನಮ್ಮ ಕೂದಲಿನ ಎಲ್ಲಾ ಮಾಯಿಶ್ಚರ್‌ ಎಳೆದುಬಿಡುತ್ತದೆ. ಇಂಥ ಟೂಲ್ಸ್ ‌ನಿಮ್ಮ ಕೂದಲನ್ನು ನಿರ್ಜೀವ, ಶುಷ್ಕಗೊಳಿಸುತ್ತದೆ. ಯಾವುದೇ ಸಮಾರಂಭಕ್ಕೆ ಹೋಗುವುದಿದ್ದರೆ, ನೀವು ಕೂದಲನ್ನು ಸ್ಟ್ರೇಟ್‌, ಕರ್ಲ್ ಮಾಡಲೇಬೇಕಿದ್ದರೆ, ಅದರ ಸೆಟ್ಟಿಂಗ್ಸ್ ನ್ನು ಕೂಲ್ ಮೋಡ್‌ ಗೆ ಇರಿಸಿ, ಸದಾ ಲೋ ಮೋಡ್‌ ನಲ್ಲೇ ಆನ್‌ ಮಾಡಿ.

ಸರಿಯಾದ ಬಾಚಣಿಗೆ : ಇಂಥ ಫ್ರಿಝೀ ಕೂದಲಿಗಾಗಿ ಬ್ರಾಂಡ್‌ ಬ್ರಿಸಲ್ಸ್ ಹೇರ್‌ ಬ್ರಶ್‌ ಯಾ ಕೋಂಬ್‌ ಉತ್ತಮ ಆಯ್ಕೆ. ಇದರ ಜೊತೆಗೆ ಒದ್ದೆ ಕೂದಲನ್ನು ಬಾಚಬೇಕಾದಲ್ಲಿ, ವೈಡ್‌ ಬ್ರಶ್‌ ಬಳಸಲು ಮರೆಯದಿರಿ.

ಕಂಡೀಶನರ್ಬಳಕೆ : ಕಂಡೀಶನರ್‌ಸೀರಂ ಬಳಕೆಯಿಂದ ಕೂದಲು ಬಲು ಸಾಫ್ಟ್ ಆಗುತ್ತದೆ. ಶ್ಯಾಂಪೂ ಮಾಡಿದ ನಂತರ, ಕೂದಲಿನ ಬುಡದಿಂದ ಹಿಡಿದು ಅದರ ತುದಿಯವರೆಗೂ ಕಂಡೀಶನರ್‌ ಹಚ್ಚಬೇಕು. 2 ನಿಮಿಷ ಬಿಟ್ಟು ಕೂದಲು ತೊಳೆಯಿರಿ. ಇದರಿಂದ ಕೂದಲು ಸಶಕ್ತಗೊಳ್ಳುತ್ತದೆ.

ಮನೆಮದ್ದು ಬಳಸಿ ಈ ಫ್ರಿಝೀ ಕೂದಲನ್ನು ಸರಿಪಡಿಸುವುದು ಹೇಗೆಂದು ತಿಳಿಯೋಣ.

ಬನಾನಾ ಮಾಸ್ಕ್ : ಬಾಳೆಹಣ್ಣು ವಿಟಮಿನ್ಸ್ ಗಳಿಂದ, ನೈಸರ್ಗಿಕ ತೈಲ, ಕಾರ್ಬೋಹೈಡ್ರೇಟ್‌, ಪೊಟ್ಯಾಶಿಯಂ, ಕಬ್ಬಿಣಾಂಶಗಳ ಭಂಡಾರವಾಗಿದೆ. ಇದು ಒಣ, ನಿರ್ಜೀವ ಕೂದಲನ್ನು ಸರಿಪಡಿಸಲು ನೆರವಾಗುತ್ತದೆ. ಇದು ಕೂದಲನ್ನು ಹೊಳೆಯುವಂತೆ ಮಾಡಿ, ಮೃದುಗೊಳಿಸುತ್ತದೆ.

1 ಮಾಗಿದ ಬಾಳೆಹಣ್ಣು, 2 ಚಮಚ ಜೇನುತುಪ್ಪ, ಹಿಪ್ಪೆ ಎಣ್ಣೆ ಒಂದು ಬಟ್ಟಲಿಗೆ ಹಾಕಿಕೊಂಡು ಚೆನ್ನಾಗಿ ಕಿವುಚಿರಿ. ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಶ್ಯಾಂಪೂನಿಂದ ತೊಳೆದು, ಆಮೇಲೆ ಕಂಡೀಶನರ್‌ ಬಳಸಿರಿ.

1 ಮಾಗಿದ ಬಾಳೆ, ಅರ್ಧ ಕಪ್‌ ಮೊಸರು, ಕೆಲವು ಹನಿ ಗುಲಾಬಿ ಜಲ, ನಿಂಬೆರಸ ಬೆರೆಸಿ, ಕಿವುಚಿ, ಆ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ 1 ಗಂಟೆ ಕಾಲ ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಹಾಲು ಜೇನಿನ ಹೇರ್ಮಾಸ್ಕ್ : 4-5 ಚಮಚ ಹಾಲಿಗೆ 2-3 ಚಮಚ ಜೇನು ಬೆರೆಸಿ. ಈ ಮಿಶ್ರಣವನ್ನು ಬೆರಳಿನಿಂದ ಕೂದಲಿಗೆ ತೀಡುತ್ತಾ, ಮಸಾಜ್‌ ಮಾಡಿ. 1 ಗಂಟೆ ಕಾಲ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ.

ಮೊಟ್ಟೆಯ ಮಾಸ್ಕ್ : ಮೊಟ್ಟೆ ಒಡೆದು ಬಿಳಿ ಭಾಗ ಬೇರ್ಪಡಿಸಿ. ಇದಕ್ಕೆ 1 ನಿಂಬೆಹಣ್ಣು ಹಿಂಡಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಗೊಳಿಸಿ, ಕೂದಲಿಗೆ ಹಚ್ಚಿ, ಮುಕ್ಕಾಲು ಗಂಟೆ ಬಿಟ್ಟು, ಶ್ಯಾಂಪೂ ಹಾಕಿ ಬಿಸಿ ನೀರಿನಿಂದ ತೊಳೆಯಿರಿ.

ಮೆಹೆಂದಿ ಮಾಸ್ಕ್ : ಇದು ಶುಷ್ಕ, ಒರಟಾದ, ಗುಂಗುರು ಕೂದಲಿಗೆ ಬಹಳ ಉಪಯುಕ್ತ ಹರ್ಬಲ್ ಮಾಸ್ಕ್ ಎನಿಸಿದೆ. 1 ಕಪ್‌ ಟೀ ಡಿಕಾಕ್ಷನ್ನಿಗೆ, 3-4 ಸಣ್ಣ ಚಮಚ ಮೆಹೆಂದಿ ಪೌಡರ್‌, ಮೊಸರು ಬೆರೆಸಿ ಗಟ್ಟಿ ಮಿಶ್ರಣ ಮಾಡಿಕೊಂಡು ತಲೆಕೂದಲಿಗೆ ಹಚ್ಚಿ  ಮಸಾಜ್‌ ಮಾಡಿ. ಹೆಚ್ಚು ಹೊತ್ತು ಬಿಟ್ಟಷ್ಟೂ ಲಾಭ. ಇಡೀ ರಾತ್ರಿ ಹಾಗೇ ಬಿಟ್ಟು (ತಲೆಗೊಂದು ತೆಳು ಬಟ್ಟೆ ಕಟ್ಟಿಕೊಂಡಿರಿ) ಮಾರನೇ ದಿನ, ಹರ್ಬಲ್ ಶ್ಯಾಂಪೂ ಬಳಸಿ ಸ್ನಾನ ಮಾಡಿ.

ಎಣ್ಣೆ ಹಚ್ಚಲು ಮರೆಯದಿರಿ

ಕೊಬ್ಬರಿ ಎಣ್ಣೆಗೆ ತುಸು ಆಲಿವ್ ಆಯಿಲ್ ‌(ಹಿಪ್ಪೆ ಎಣ್ಣೆ) ಬೆರೆಸಿಕೊಂಡು ತುಸು ಬೆಚ್ಚಗೆ ಮಾಡಿ. ಪ್ರತಿ ದಿನ ಇದನ್ನು ತಲೆಗೆ ಹಚ್ಚಿ ಮಸಾಜ್‌ ಮಾಡಿ, ನಂತರ ಜಡೆ ಹೆಣೆಯಿರಿ. ಇದೇ ತರಹ ಕೊಬ್ಬರಿ ಎಣ್ಣೆಗೆ ಜೋಜೋಬಾ ಆಯಿಲ್ ‌ಬೆರೆಸಿ ಟ್ರೈ ಮಾಡಿ. ಪ್ರತಿ ಸಲ ಆಯಿಲ್ ಮಸಾಜ್‌ಮಾಡಿದಾಗಲೂ 1-2 ಗಂಟೆ ಕಾಲ ಹಾಗೇ ಉಳಿಸಿಕೊಳ್ಳುವುದು ಲೇಸು.

ಶ್ಯಾಂಪೂ ಕಂಡೀಶನರ್‌ ಗಳನ್ನು ಬಳಸಿದ ನಂತರ, ಕೂದಲನ್ನು ಚೆನ್ನಾಗಿ ತೊಳೆಯಿರಿ. ನಂತರ ದಪ್ಪ ಟರ್ಕಿ ಟವೆಲ್ ‌ನಿಂದ ನಿಧಾನ ಒರೆಸಿರಿ. ಇದಾದ ಮೇಲೆ 4 ಹನಿ ಹೇರ್‌ ಸೀರಂ ಹಸ್ತದ ಮೇಲೆ ಹಾಕಿಕೊಂಡು, ನಿಧಾನವಾಗಿ ತಲೆಗೆ ತಿಕ್ಕಬೇಕು. ಅದನ್ನು ಹಾಗೇ ಒಣಗಲು ಬಿಡಿ. ಸೀರಂ ಕೂದಲಿಗೆ ಆರ್ದ್ರತೆ ಒದಗಿಸಿ, ಅದನ್ನು ಸಾಫ್ಟ್ ಸಿಲ್ಕಿ, ಶೈನಿ ಮಾಡುತ್ತದೆ. ನಿಮ್ಮ ಕೂದಲಿನ ಪ್ರಕಾರ ಅನುಸರಿಸಿ ಎಂಥ ಸೀರಂ ಬೇಕೋ ಆರಿಸಿಕೊಳ್ಳಿ.

ನರ್ಮದಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ