ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಹೆಚ್ಚು ಮನ್ನಣೆ ಸಿಗುತ್ತಿದೆ. ಸ್ಯಾಂಡಲ್ವುಡ್, ಮಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ನಿಂದಲೂ ಕೆಲ ನಟ, ನಟಿಯರು ಜಗತ್ತಿನೆಲ್ಲೆಡೆ ಕೋಟಿ ಕೋಟಿ ಫ್ಯಾನ್ಸ್ ಹೊಂದಿದ್ದಾರೆ.
ತಮ್ಮದೇ ಆದ ಕ್ರೇಜ್ ಸೃಷ್ಟಿಸಿಕೊಂಡು ಹಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಬಾಲಿವುಡ್ನ ಬಿಗ್ ಆಕ್ಟರ್ಗಳಾದ ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ಕೂಡ ಹಾಲಿವುಡ್ಗೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಇಬ್ಬರು ನಟರಿಗೂ ಅಲ್ಲಿಂದಲೇ ಆಫರ್ ಬಂದಿದೆ.
ಹಿಂದಿ ಚಿತ್ರರಂಗದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ತಮ್ಮದೇ ಆದ ದೊಡ್ಡ ಪ್ರೇಕ್ಷಕ ವರ್ಗವನ್ನು ಹೊಂದಿದ್ದಾರೆ. ಇನ್ನು ಅವರಿಬ್ಬರೂ ಕೂಡ ಒಟ್ಟಿಗೆ ನಟಿಸಬೇಕೆಂದು ಅದೆಷ್ಟೋ ಅಭಿಮಾನಿಗಳು ಆಸೆ ಹೊಂದಿದ್ದಾರೆ. ಇದೀಗ ಆ ಆಸೆನೂ ಈಡೇರುವ ಕಾಲ ಸನ್ನಿಹಿತವಾಗಿದೆ.
‘ಸಾಜನ್’, ‘ಚಲ್ ಮೇರೆ ಭಾಯ್’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ ಬಳಿಕ ಮತ್ತೆ ಒಟ್ಟಿಗೆ ನೋಡಬೇಕೆಂಬ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಾಲಿವುಡ್ ಸಿನಿಮಾವೊಂದರಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ತ ಅವರು ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಹಾಲಿವುಡ್ನ ಆ ಸಿನಿಮಾ ಯಾವುದು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದ್ರೆ, ದುಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಆ ಶೂಟಿಂಗ್ ಸಲುವಾಗಿಯೇ ಇಬ್ಬರೂ ಈಗಾಗಲೇ ದುಬೈ ಸೇರಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದ್ದು, ಬಳಿಕವಷ್ಟೇ ಆ ಸಿನಿಮಾ ಯಾವುದು ಅನ್ನೋದು ಗೊತ್ತಾಗಲಿದೆ. ಹಾಗಂತ ಹಾಲಿವುಡ್ನ ಆ ಸಿನಿಮಾದಲ್ಲಿ ಇಬ್ಬರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿಲ್ಲ.
ಬದಲಿಗೆ ಇಬ್ಬರೂ ಕೂಡ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಇಬ್ಬರೂ ಕೂಡ ದೇಶವಷ್ಟೇ ಅಲ್ಲದೇ ಹೊರದೇಶಗಳಲ್ಲೂ ಅಸಂಖ್ಯಾತ ಫ್ಯಾನ್ಸ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಇಬ್ಬರೂ ನಟಿಸಿದಲ್ಲಿ ಸಿನಿಮಾ ಸೂಪರ್ ಹಿಟ್ ಆಗಲಿದೆ ಅನ್ನೋದು ಆ ಚಿತ್ರತಂಡದ ಉದ್ದೇಶವಾಗಿದೆ.
ಸದ್ಯ ಬಾಲಿವುಡ್ನ ‘ಸಿಕಂದರ್’ ಸಿನಿಮಾದಲ್ಲಿ ಬ್ಯುಸಿ ಆಗಿರುವ ಸಲ್ಮಾನ್ ಖಾನ್ಗೆ ಮತ್ತಷ್ಟು ಸಿನಿಮಾಗಳ ಆಫರ್ ಕೂಡ ಬರ್ತಿದೆ. ಇನ್ನು ಸಂಜಯ್ ದತ್ ಅವರು ‘ಹೌಸ್ಫುಲ್ 5’, ‘ಬಾಘಿ 4’ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.