-ಶರತ್ ಚಂದ್ರ
ಬೆಂಗಳೂರಿನ ವಿದ್ಯಾರ್ಥಿ ಭವನ ಹೋಟೆಲ್ ಯಾರಿಗೂ ಗೊತ್ತಿಲ್ಲ? ಎಷ್ಟೇ ಜನ ಜಂಗುಳಿ ಇದ್ದರೂ ಕಾದು, ಇಲ್ಲಿನ ಮಸಾಲೆ ದೋಸೆ ಸವಿಯುವುದೇ ಒಂದು ಮಜಾ. ಈ ಹೋಟೆಲ್ ಗೆ ಶುಕ್ರವಾರ ರಜಾ ದಿನ, ಆದರೆ ಕಳೆದ ಶುಕ್ರವಾರ ಹೋಟೆಲ್ ಮುಂಭಾಗ ಜನ ಸಂದಣಿ ನೋಡಿ ಇದೇನೂ ಹೋಟೆಲ್ ಇವತ್ತು ಓಪನ್ ಆಗಿದ್ಯಾ ಅಂತ ನೋಡಿದ್ರೆ ಅಲ್ಲಿ ಯೋಗರಾಜ್ ಭಟ್ ಅವರು ಟೇಬಲ್ ಚೇರ್ ಹಾಕಿ ಕೂತಿದ್ರು. ಸಂಗೀತ ನಿರ್ದೇಶಕ ಹರಿಕೃಷ್ಣ ಕೀಬೋರ್ಡ್ ಮುಂದೆ ಕೂತಿದ್ರು.ಅವರ ಹಿಂದೆ ಎಲ್ ಈ. ಡಿ ಪರದೆ ಮೇಲೆ ಲಿರಿಕಲ್ ಹಾಡೊಂದು ಪ್ರದರ್ಶನವಾಗುತ್ತಿತ್ತು.
ಹೌದು ವ್ಯಾಲೆಂಟೈನ್ಸ್ ಡೇ ದಿನ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ 'ಮನದ ಕಡಲು ' ಚಿತ್ರದ ಅವರೇ ಬರೆದಿರುವ ಹರಿಕೃಷ್ಣ ಸಂಗೀತ ನೀಡಿ ವಿಜಯ ಪ್ರಕಾಶ್ ಮತ್ತು ಶ್ರೀ ಲಕ್ಷ್ಮಿ ಬೆಲ್ಮಣ್ಣು ಹಾಡಿರುವ 'ನಗುತಲಿದೆ ನಾಯಿಕೊಡೆ' ಎಂಬ ರೋಮ್ಯಾಂಟಿಕ್ ಸಾಂಗ್ ಅನ್ನು ಸಾರ್ವಜನಿಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು .
ಒಂದಷ್ಟು ಯುವಕ ಯುವತಿಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಚಿತ್ರದ ನಾಯಕ ಸುಮುಖ್, ನಾಯಕಿಯರಾದ ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ಒಂದಷ್ಟು ಸ್ಪರ್ಧೆಗಳನ್ನು ಮಾಡಿ ಗಿಫ್ಟ್ ಮತ್ತು ಚಾಕ್ಲೇಟ್ಸ್ ನೀಡಿ ವಿಶಿಷ್ಟ ರೀತಿಯ ಪ್ರಚಾರ ಕೈಗೊಂಡರು.
ನಾಯಕ ಸುಮುಖ್ ಹುಡುಗಿಯೊಬ್ಬಳಿಗೆ ಸ್ಥಳದಲ್ಲಿ ಜಡೆ ಹಾಕಿ ಗಮನ ಸೆಳೆದರು. ನಾಯಕಿಯರು ಕೂಡ ಪ್ರಪೋಸ್ ಮಾಡುವ ಮೂಲಕ ಒಂದಷ್ಟು ಕೀಟಲೆ ತಮಾಷೆ ಮಾಡಿ ಕಾರ್ಯಕ್ರಮವನ್ನು ರಂಗೇರಿಸಿದರು.
ಭಟ್ರು ಸಂದರ್ಭಕ್ಕೆ ತಕ್ಕಂತೆ ಆಶು ಕವಿತೆ ರಚಿಸಿ ಅದಕ್ಕೇ ಹರಿಕೃಷ್ಣ ಸ್ಥಳದಲ್ಲೇ ಕಂಪೋಸ್ ಮಾಡಿದ್ದು ವಿಶೇಷ. ಕಾರ್ಯಕ್ರಮದಲ್ಲಿ ಗಾಯಕ ವಿಜಯ ಪ್ರಕಾಶ್ ಭಾಗವಹಿಸಿ ಕನ್ನಡದಲ್ಲಿ ತಾನು ಪ್ರಪ್ರಥಮ ಬಾರಿಗೆ ಹಾಡಿದ' ಗಾಳಿಪಟ 'ಚಿತ್ರದ ಕವಿತೆ ಕವಿತೆ ಹಾಡಿನ ಒಂದಷ್ಟು ಸಾಲುಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.
ಭಟ್ರೇ ಪರಿಚಯಿಸಿದ ಮಳೆ ಹುಡುಗಿ ಪೂಜಾ ಗಾಂಧಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ' ಮುಂಗಾರು ಮಳೆ ಚಿತ್ರದ ಅನುಭವಗಳನ್ನು ಮೆಲುಕು ಹಾಕಿ ಆ ಚಿತ್ರದಂತೆ ಈ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಅಂತ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಟ ದತ್ತಣ್ಣ, ವಾಣಿ ಹರಿಕೃಷ್ಣ, ಯೋಗರಾಜ್ ಭಟ್ರ 'ಮಜಾ ಟಾಕೀಸ್ ಸ್ನೇಹಿತ ಸೃಜನ್ ಲೋಕೇಶ್, ಗಾಯಕಿ ಶ್ರೀಲಕ್ಸ್ಮಿ ಬೆಲ್ಮಣ್ಣು ಮುಂತಾದವರು ಭಾಗವಹಿಸಿದ್ದರು.
ಮುಂಗಾರು ಮಳೆ ನಂತರ ನಿರ್ಮಾಪಕ ಈ. ಕೃಷ್ಣಪ್ಪ ಮತ್ತು ಯೋಗರಾಜ್ ಭಟ್ರ ಕಾಂಬಿನೇಶನ್ ನಲ್ಲಿ ಬರುತ್ತಿರುವ 'ಮನದ ಕಡಲು ಮುಂದಿನ ತಿಂಗಳು ಮಾರ್ಚ್ 28 ರಂದು ಬಿಡುಗಡೆಯಾಗಲಿದೆ.