ಗಂಡ ನರೇಂದ್ರನನ್ನು ಸರಿದಾರಿಗೆ ತರಲು ಕಮಲಾ ಮೂಢನಂಬಿಕೆಯ ಮೊರೆಹೋದಳು. ಆದರೆ ಇದರಿಂದ ಪ್ರಕರಣ ಬಗೆಹರಿಯುವ ಬದಲು ಮತ್ತಷ್ಟು ಹದೆಗಟ್ಟಿತು.
ಕಮಲಾ ತನ್ನ ಕಪ್ಪು ಕೂದಲನ್ನು ಬಾಲ್ಕನಿಯಲ್ಲಿ ನಿಂತುಕೊಂಡು ಬಾಚಿಕೊಳ್ಳುತ್ತಾ ಸಿಕ್ಕು ಬಿಡಿಸಿಕೊಳ್ಳುತ್ತಿದ್ದಳು. ಅವಳ ಹೊಳೆಯುವ ಬಣ್ಣ, ಅವಳ ಕಪ್ಪು ಕೂದಲಿನೊಂದಿಗೆ ಇನ್ನಷ್ಟು ಮಾದಕ ಎನಿಸುತ್ತಿತ್ತು. ಅವಳ ಮದುವೆಯಾಗಿ 10 ವರ್ಷಗಳೇ ಕಳೆದುಹೋಗಿದ್ದ. ಗಂಡ ಮೊದಲ ವರ್ಷ ಅವಳ ಬಗ್ಗೆ ಎಷ್ಟು ಮೋಹ ಇಟ್ಟುಕೊಂಡಿದ್ದನೋ, ಈಗಲೂ ಅದೇ ಮೋಹ ಅವನನ್ನು ಸೆಳೆಯುತ್ತಿತ್ತು. ನರೇಂದ್ರನೊಂದಿಗಿನ ಪ್ರೀತಿ ಅವಳ ಗೆಳತಿಯರಿಗೆ ಅಸೂಯೆಯ ವಿಷಯವಾಗಿತ್ತು. ಆದರೆ ಒಮ್ಮೊಮ್ಮೆ ನರೇಂದ್ರನ ವರ್ತನೆಯ ಬಗ್ಗೆ ಅವಳಿಗೆ ಸಂದೇಹ ಉಂಟಾಗುತ್ತಿತ್ತು. ಅವನದು ನಿಜವಾದ ಪ್ರೀತೀನಾ ಅಥವಾ ತೋರಿಕೇನಾ?
ಒಟ್ಟಾರೆ ಹೇಳಬೇಕೆಂದರೆ, ಅವಳ ಜೀವನದ ಬಂಡಿ ಸರಿದಾರಿಯಲ್ಲಿಯೇ ಸಾಗುತ್ತಿತ್ತು. ಅವಳದು ಪುಟ್ಟ ಕುಟುಂಬ. ಗಂಡ ನರೇಂದ್ರ ಹಾಗೂ ಮಗಳು ವಿನುತಾ. ಕಳೆದ ಕೆಲವು ತಿಂಗಳಿಂದ ಗಂಡ ರಾತ್ರಿ ಬಹಳ ತಡವಾಗಿ ಮನೆಗೆ ಬರುತ್ತಿರುವುದು ಅವಳ ಗಮನಕ್ಕೆ ಬಂದಿತ್ತು. ಅವಳು ಈ ಬಗ್ಗೆ ಕೇಳಿದಾಗೆಲ್ಲ ಅವನು ಹೇಳುತ್ತಿದ್ದ, “ನನ್ನ ಮನಸ್ಸು ಯಾವಾಗಲೂ ನಿನಗಾಗಿ ಮತ್ತು ವಿನುತಾಳಿಗಾಗಿ ಕಾತರಿಸುತ್ತಾ ಇರುತ್ತೆ. ಅದಕ್ಕಾಗಿಯೇ ನಾನು ಇಷ್ಟೊಂದು ಕಷ್ಟಪಟ್ಟು ದುಡಿಯುತ್ತಾ ಇರುವುದು.”
ಆದರೂ ಕಮಲಾಳ ಮನಸ್ಸಿಗೆ ಎಲ್ಲೋ ಏನೋ ತಪ್ಪು ಇದೆ ಎಂದೆನಿಸುತ್ತಿತ್ತು. ಈಗಲೂ ಹೊರಗಡೆ ನಿಂತು ಕೂದಲನ್ನು ಒಣಗಿಸಿಕೊಳ್ಳುತ್ತಾ ಅವಳ ಮನಸ್ಸಿನೊಳಗೆ ತಾಕಲಾಟ ಮುಂದುವರಿದಿತ್ತು. ಅಷ್ಟರಲ್ಲಿಯೇ ಬಾಗಿಲ ಗಂಟೆ ಬಾರಿಸಿತು. ಬಾಗಿಲು ತೆರೆದು ನೋಡಿದರೆ, ಎದುರಿಗೆ ನರೇಂದ್ರ ನಿಂತಿದ್ದ.
ಅವಳು ಅವನಿಗೆ ಏನಾದರೂ ಕೇಳುವ ಮುಂಚೆಯೇ ಅವನು ಹೇಳಿದ, “ನಾನಿವತ್ತು ರಾತ್ರಿ ಹೈದರಾಬಾದಿಗೆ ಹೋಗುತ್ತಿರುವೆ. ಐದು ದಿನದ ಬಿಸ್ ನೆಸ್ ಟೂರ್. ಅದಕ್ಕಾಗಿ ಇಡೀ ದಿನ ನಿನ್ನ ಜೊತೆಗೆ ಕಳೆಯಬೇಕೆಂದು ಬಂದೆ,” ಎಂದು ಹೇಳಿದ. ಅವನು ಅವಳ ಕೈಗೆ 2 ಪ್ಯಾಕೆಟ್ ಕೊಟ್ಟ.
ಕಮಲಾ ಅದನ್ನು ತೆರೆದಳು ಒಂದರಲ್ಲಿ ಸುಂದರ ಜಾಕೆಟ್ ಇದ್ದರೆ, ಇನ್ನೊಂದರಲ್ಲಿ ಟ್ರ್ಯಾಕ್ ಸೂಟ್ ಇತ್ತು.
ಕಮಲಾ ಮುಗುಳ್ನಗುತ್ತಾ, “ನೀವು ನನಗೆ ತಪ್ಪುದಂಡ ತೆರುತ್ತಿದ್ದೀರಿ ಅನಿಸುತ್ತೆ. ಹೊಸ ವರ್ಷಕ್ಕೆ ನೀವು ಇಲ್ಲಿ ಇರಲಿಲ್ಲವಲ್ಲ ಅದಕ್ಕಿರಬಹುದಾ?” ಎಂದು ಕೇಳಿದಳು.
ನರೇಂದ್ರ ಅವಳ ಮಾತು ಕೇಳಿ ಉದಾಸ ಸ್ವರದಲ್ಲಿ, “ಕಮಲಾ ಇನ್ನೆರಡು ವರ್ಷ ಅಷ್ಟೇ, ಆಮೇಲೆ ನಾನು ಯಾವಾಗಲೂ ನಿನ್ನ ಹಾಗೂ ವಿನುತಾ ಜೊತೆಗೇ ಇರ್ತೀನಿ,” ಎಂದು ಹೇಳಿದ.
ಕಮಲಾ ಅಡುಗೆ ಮನೆಯಲ್ಲಿ ಚಹಾ ತಯಾರಿಸುತ್ತಾ ಗಂಡ ಯಾವಾಗಲೂ ಕುಟುಂಬದ ಹಿತಕ್ಕಾಗಿ ಇಷ್ಟೆಲ್ಲ ಕಷ್ಟಪಡುತ್ತಿರುತ್ತಾನೆ, ತಾನು ಅವನ ಬಗ್ಗೆ ಸಂದೇಹ ಪಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವಳು ಯೋಚಿಸಿದಳು.
ರಾತ್ರಿ ಇಡೀ ಕುಟುಂಬ ವಿನುತಾಳಿಗೆ ಇಷ್ಟವಾಗುವ ಹೋಟೆಲ್ ನಲ್ಲಿ ಊಟ ಮಾಡುತ್ತಿತ್ತು. ಬಳಿಕ ಎಲ್ಲರೂ ಸೇರಿ ಲಾಂಗ್ ಡ್ರೈವ್ ಹೋಗಿ ಬಂದರು. ಆ ಬಳಿಕ ನರೇಂದ್ರ ಕಮಲಾಳಿಗೆ ಇಷ್ಟವಾಗುವ ಪಾನ್ ಹಾಗೂ ವಿನುತಾಳಿಗೆ ಇಷ್ಟವಾಗುವ ಐಸ್ ಕ್ರೀಮ್ ಕೊಡಿಸಿದ.
ರಾತ್ರಿ ಕಮಲಾ ನರೇಂದ್ರನ ಸಾಮೀಪ್ಯ ಬಯಸಲು ಯತ್ನಿಸಿದಳು. ಆದರೆ ಅವನು, “ಕಮಲಾ ನಾನು ಬಹಳಷ್ಟು ದಣಿದಿದ್ದೇನೆ. ಇವತ್ತು ಬೇಡ,” ಎಂದು ಹೇಳಿದ.
ಕಮಲಾ ಮನಸ್ಸು ಮುದುರಿಕೊಂಡು, “ಕಳೆದ 7 ತಿಂಗಳಿಂದ ನೀವು ಇದನ್ನೇ ಹೇಳುತ್ತಾ ಬರುತ್ತಿದ್ದೀರಿ,” ಎಂದಳು.
ಅದಕ್ಕೆ ನರೇಂದ್ರ, “ನನಗೆ ವರ್ಕ್ ಪ್ರೆಶರ್ ಎಷ್ಟಿದೆಯೆಂದರೆ, ಅದರ ಬಗ್ಗೆ ಏನು ಹೇಳಲಿ. ಟೂರ್ ನಿಂದ ಬಂದ ನಂತರ ನಾವು ಡಾಕ್ಟರ್ ಬಳಿ ಹೋಗಿ ಮಾತಾಡೋಣ. ಕೆಲಸದ ಕಾರಣದಿಂದ ನನ್ನ ಪೌರುಷ ಶಕ್ತಿ ಕಡಿಮೆ ಆಗಿದೆ ಅನಿಸುತ್ತೆ,” ಎಂದು ಹೇಳಿದ.
ನರೇಂದ್ರ ಗಾಢ ನಿದ್ರೆಗೆ ಜಾರಿದ್ದರೆ, ಕಮಲಾ ಮಾತ್ರ ಚಿಂತೆಯಲ್ಲಿದ್ದಳು. ನರೇಂದ್ರನ ದೈಹಿಕ ಬಯಕೆ ಬೇರೆ ಕಡೆ ಏನಾದರೂ ಈಡೇರುತ್ತಿರಬಹುದಾ? ಆದರೆ ಅವಳ ಒಳ ಮನಸ್ಸು ಮಾತ್ರ ಅದನ್ನು ಒಪ್ಪಲು ತಯಾರಿರಲಿಲ್ಲ.
ಮರುದಿನ ಬೆಳಗ್ಗೆ ನರೇಂದ್ರ ಏರ್ ಪೋರ್ಟ್ ಹೋದನಾದರೆ, ಕಮಲಾ ವಿನುತಾಳ ಜೊತೆಗೆ ಶಾಪಿಂಗ್ ಮಾಡಲು ಹೊರಟಳು. ಮನೆಗೆ ಬಂದಾಗ ವಿನುತಾ ತನ್ನದೇ ಆದ ವಸ್ತುಗಳ ಜೊತೆ ಮಗ್ನಳಾದಳು. ಕಮಲಾ ತನ್ನ ಮೊಬೈಲ್ ಎತ್ತಿಕೊಂಡು ನೋಡಿದಳು. ಅವಳಿಗೆ ನರೇಂದ್ರನಿಂದ ಮೆಸೇಜ್ ಬಂದಿತ್ತು. ತಾನೀಗ ಏರ್ ಪೋರ್ಟ್ ತಲುಪಿದ್ದು, ಹೈದರಾಬಾದ್ ತಲುಪಿದ ಬಳಿಕ ಫೋನ್ ಮಾಡುವುದಾಗಿ ಹೇಳಿದ್ದ.
ಕಮಲಾ ಇನ್ನೇನು ಫೋನ್ ಬ್ಯಾಗಿಗೆ ಹಾಕಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಅವಳಿಗೆ ಕಸಿನ್ ಸಿದ್ದಾರ್ಥ್ ನಿಂದ ಮೆಸೇಜ್ ಬಂದಿತ್ತು. ಆ ಮೆಸೇಜ್ ಓದಿ ಅವಳಿಗೆ ತಲೆ ತಿರುಗಿದಂತಾಯಿತು.
ಸಿದ್ದಾರ್ಥ್ ನ ಪ್ರಕಾರ, ನರೇಂದ್ರ ಹೈದರಾಬಾದ್ ನಲ್ಲಿ ಅಲ್ಲ, ಜಯನಗರದ ಹೋಟೆಲ್ ಒಂದರಲ್ಲಿ ಪೂಜಾ ಎಂಬ ಮಹಿಳೆಯ ಜೊತೆ ರಾಸಲೀಲೆ ನಡೆಸುತ್ತಿದ್ದ.
ತನ್ನೊಂದಿಗೆ ಸಿದ್ದಾರ್ಥ್ ತಮಾಷೆ ಮಾಡುತ್ತಿದ್ದಾನಾ ಎಂದು ಕಮಲಾಳಿಗೆ ಅನಿಸಿತು. ಹೀಗಾಗಿ ಅವಳು ಆ ಮೆಸೇಜ್ ಗೆ , “ನೀನು ಸತ್ಯವನ್ನೇ ಹೇಳುತ್ತಿದ್ದಿ ಎಂದು ನಾನು ಹೇಗೆ ನಂಬಲಿ,?’ ಎಂದು ಉತ್ತರಿಸಿದಳು.
ಅತ್ತ ಕಡೆಯಿಂದ ಉತ್ತರ ಬಂತು, “ರೂಮ್ ನಂಬರ್ 204. ಹೋಟೆಲ್ ಆದರ್ಶ.”
ಇಡೀ ರಾತ್ರಿ ಕಮಲಾ ಏನೇನೋ ತಳಮಳದಲ್ಲಿದ್ದಳು. ಮರುದಿನ ನರೇಂದ್ರನ ಫೋನ್ ಬಂತು. ಕಮಲಾಳಿಗೆ ಕೆಂಪು ಸೀರೆ, ವಿನುತಾಳಿಗಾಗಿ ಹೊಸ ಮಾದರಿಯ ಡ್ರೆಸ್ ಖರೀದಿಸಿರುವುದಾಗಿ ಹೇಳಿದ.
ಫೋನ್ ಮೆಸೇಜ್ ನಿಂದ ತಾನು ಅದೆಷ್ಟು ತಪ್ಪಾಗಿ ಯೋಚಿಸುತ್ತಿದ್ದೆ ಎಂದು ಅವಳಿಗೆ ಅನಿಸಿತು. ಮಧ್ಯಾಹ್ನ ಅವಳು ಸಿದ್ದಾರ್ಥನ ಹೆಸರನ್ನು ಬ್ಲಾಕ್ ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಅವನಿಂದ ಮೆಸೆಂಜರ್ ನಲ್ಲಿ ಯಾವುದೋ 2 ಫೋಟೋ ಬಂದಿತ್ತು. ಆ ಫೋಟೋ ನೋಡಿದಾಗ ನರೇಂದ್ರ ಮಹಿಳೆಯೊಬ್ಬಳ ಜೊತೆ ನಗುತ್ತಾ ನಿಂತಿದ್ದ. ಕೆಳಗೆ ಅವಳ ಹೆಸರನ್ನು ಉಲ್ಲೇಖಿಸಿದ್ದ. ಪೂಜಾ ಎನ್ನುವ ಈ ಮಹಿಳೆ ತನ್ನದೇ ವಯಸ್ಸಿನವಳು. ತುಟಿಗೆ ಕೆಂಪು ಬಣ್ಣ ಸವರಿಕೊಂಡಿದ್ದಳು. ಕೆಂಪು ಸೀರೆ ತನಗೆ ಕೊಂಡಿದ್ದಾಗಿ ಹೇಳಿದ್ದ ಗಂಡ ಅವಳಿಗೆ ಕೊಡಿಸಿದ್ದಾನೆಂದು ಅನಿಸಿತು.
ಮರುದಿನ ಕಮಲಾ ಮಗಳು ವಿನುತಾಳನ್ನು ಕರೆದುಕೊಂಡು ಅಪ್ಪನ ಮನೆಗೆ ಹೋದಳು. ಈಗ ಅವಳಿಗೆ ದ್ವಂದ್ವದಲ್ಲಿ ಇರಲು ಇಷ್ಟ ಆಗುತ್ತಿರಲಿಲ್ಲ. ಅಪ್ಪನ ಮನೆ ತಲುಪಿದಾಗ, ಅಮ್ಮ ಅಪ್ಪ ಊರಿಗೆ ಹೋಗಿದ್ದಾರೆಂದು ತಿಳಿಯಿತು. ತಂಗಿಯನ್ನು ನೋಡಿ ಅಣ್ಣ ಹರಿಪ್ರಸಾದ್ ಕೇಳಿದ, “ಏನಿದು, ಹೀಗೆ ಏನೂ ಮುನ್ಸೂಚನೆ ಕೊಡದೆ ಬಂದಿರುವೆ?”
“ಹಾಗೇನಿಲ್ಲ ಅಣ್ಣ, ನನ್ನ ಫ್ರೆಂಡ್ ಒಬ್ಬರದು ಗೆಟ್ ಟು ಗೆದರ್ ಇದೆ. ಹಾಗಾಗಿ ದಿಢೀರನೇ ಹೊರಟು ಬಂದೆ. ಇದರ ಜೊತೆ ನನ್ನ ಕೆಲವು ಗೆಳತಿಯರನ್ನು ಭೇಟಿ ಆಗಬೇಕಿದೆ,” ಎಂದಳು.
ಅಣ್ಣನ ಮನೆಯಲ್ಲಿ ತಿಂಡಿ ತಿಂದ ಕಮಲಾ ಜೋರಾಗಿ ಹೊಡೆದುಕೊಳ್ಳುತ್ತಿದ್ದ ತನ್ನ ಹೃದಯದೊಂದಿಗೆ ಹೋಟೆಲ್ ರಿಸೆಪ್ಶನ್ ಗೆ ಹೋದಳು. ಅಷ್ಟರಲ್ಲಿಯೇ ಎದುರಿನಿಂದ ಬರುತ್ತಿದ್ದ ನರೇಂದ್ರ ಮತ್ತು ಪೂಜಾ ಅವಳಿಗೆ ಮುಖಾಮುಖಿಯಾದರು. ಅವಳನ್ನು ನೋಡುತ್ತಿದ್ದಂತೆ ನರೇಂದ್ರನ ಮುಖ ಬಿಳಚಿಕೊಂಡಿತು. ಅವನು ಗಾಬರಿಯಿಂದ, “ಕಮಲಾ, ನೀನಿಲ್ಲಿ ಏನು ಮಾಡುತ್ತಿರುವೆ?” ಎಂದು ಕೇಳಿದ.
ಕಮಲಾ ಕಣ್ಣೀರು ಸುರಿಸುತ್ತಾ, “ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿರುವೆ……”
“ನಾನೇನು ಹಾಲು ಕುಡಿಯುವ ಮಗು ಅಲ್ಲ. ದಾರಿ ತಪ್ಪಿದ್ದೇನೆ ಎಂದು ತಿಳಿದಿರುವೆಯಾ?” ಎಂದು ಕೇಳಿದ.
ಕಮಲಾ ಪೂಜಾಳತ್ತ ಕೋಪದಿಂದ ನೋಡುತ್ತಾ, “ನಿಮ್ಮದು ಇದೇನು ಅರ್ಜೆಂಟ್ ಕೆಲಸ. ಹೈದರಾಬಾದ್ ಗೆ 5 ದಿನ ಹೋಗ್ತೀನಿ ಅಂದಿದ್ರಿ,” ಕೇಳಿದಳು.
ನರೇಂದ್ರ ಯಾವುದೇ ಹಿಂಜರಿಕೆಯಿಲ್ಲದೆ, “ ಹೌದು ಇವಳೇ ಪೂಜಾ. ನನಗೆ ನನ್ನ ಬಿಸ್ ನೆಸ್ ನಲ್ಲಿ ನೆರವಾಗುತ್ತಾಳೆ. ನಿನ್ನೆಯಷ್ಟೇ ನಾವು ಹೈದರಾಬಾದ್ ನಿಂದ ಬಂದೆವು. ನಾನು ಸಂಜೆಯ ಹೊತ್ತಿಗೆ ಮನೆಗೆ ಬಂದು ನಿನಗೆ ಸರ್ಪ್ರೈಸ್ ಕೊಡಬೇಕೆಂದಿದ್ದೆ.”
ಕಮಲಾ ಏನೊಂದೂ ಮಾತನಾಡದೇ ತನ್ನ ಅಪ್ಪನ ಮನೆ ಕಡೆ ನಡೆದಳು. ಅವಳ ಅಣ್ಣ ಹಾಗೂ ಅತ್ತಿಗೆ ಅವಳು ಹೇಳಿದ್ದನ್ನು ಕೇಳಿಸಿಕೊಂಡರು.
“ಆ ಹೆಂಗಸಿಗಾಗಿ ನೀನು ಮನೆ ಬಿಟ್ಟು ಬರುವ ತಪ್ಪು ಮಾಡಬೇಡ. ನಾನು ನಿನ್ನನ್ನು ಒಳ್ಳೆಯ ಗುರುಗಳ ಬಳಿ ಕರೆದುಕೊಂಡು ಹೋಗುವೆ. ನೀನು ಚಿಂತೆ ಮಾಡಬೇಡ,” ಎಂದರು ಅತ್ತಿಗೆ.
ಮರುದಿನ ಕಮಲಾ ತನ್ನ ಅತ್ತಿಗೆ ಜೊತೆ ಆಶ್ರಮಕ್ಕೆ ಹೋದಾಗ, ಗುರುಗಳು ಅವಳಿಗೆ ಏನೂ ಹೇಳದೆಯೇ ಅವಳ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಂಡರು.
ಕಮಲಾಳಿಗೆ ಎಂಥಹುದೋ ಬಿಳಿ ಪುಡಿ ಕೊಡುತ್ತಾ, “ಇದನ್ನು ನಿನ್ನ ಗಂಡನ ಊಟದಲ್ಲಿ ಮಿಶ್ರಣ ಮಾಡು. ಒಂದು ತಿಂಗಳ ಕಾಲ ಇದನ್ನು ಅನುಸರಿಸಿದರೆ ನಿನ್ನ ಗಂಡನಿಗೆ ತಗುಲಿಕೊಂಡಿರುವ ಆ ಹೆಂಗಸಿನ ಭೂತ ಹೊರಟು ಹೋಗುತ್ತದೆ. ಆ ಹೆಂಗಸು ನಿನ್ನ ಗಂಡನಿಗೆ ವಶೀಕರಣದ ಮಂತ್ರ ಹಾಕಿದ್ದಾಳೆ. ಗಂಡ ವಾಪಸ್ ಬಂದಾಗ ನೀನು ಏನೂ ಮಾತನಾಡಬೇಡ. ಗುರುವಾರದಂದು ಬಾಳೆಗಿಡದ ಪೂಜೆ ಮಾಡು ಮತ್ತು ಶುಕ್ರವಾರದಂದು ಪೂರ್ಣ ನಿಷ್ಠೆಯಿಂದ ಉಪವಾಸ ಮಾಡಬೇಕು,” ಎಂದರು.
ಕಮಲಾ ಮರುದಿನ ತನ್ನ ಗಂಡನ ಮನೆಗೆ ಹೋಗಲು ತಯಾರಾದಳು “ಕಮಲಾ, ನೀನು ಈ ವಿಷಯದ ಬಗ್ಗೆ ಅಮ್ಮ ಅಪ್ಪನ ಜೊತೆ ಪ್ರಸ್ತಾಪಿಸಬೇಡ. ನೀನು ಈ ಉಪಾಯ ಅನುಸರಿಸಿದರೆ, ನಿನ್ನ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ,” ಎಂದರು ಅತ್ತಿಗೆ.
ಕಮಲಾ ತನ್ನ ಗಂಡನ ಮನೆಗೆ ವಾಪಸ್ ಹೋದಳು. ಮರುದಿನ ಅವಳ ಗಂಡ ನರೇಂದ್ರ ಕೂಡ ಮನೆಗೆ ಬಂದ. ನರೇಂದ್ರ ತಾನು ಮಾಡಿದ ಕೃತ್ಯದ ಬಗ್ಗೆ ಯಾವುದೇ ಸ್ಪಷ್ಟೀಕರಣ ಕೂಡ ಕೊಡಲಿಲ್ಲ. ಕಮಲಾ ಅವನನ್ನು ಏನೂ ಪ್ರಶ್ನಿಸಲಿಲ್ಲ. ಮನೆಯ ವಾತಾವರಣ ಅಷ್ಟಿಷ್ಟು ಹದಗೆಟ್ಟಿತ್ತು. ಆದರೆ ಕಮಲಾಳಿಗೆ ತಾನು ಗಂಡನನ್ನು ಸರಿದಾರಿಗೆ ತಂದೇ ತರುತ್ತೇನೆ ಎಂಬ ವಿಶ್ವಾಸವಿತ್ತು.
ಪ್ರತಿದಿನ ಚಹಾ ಅಥವಾ ತಿಂಡಿಯಲ್ಲಿ ಕಮಲಾ ಬಿಳಿ ಪೌಡರ್‌ಬೆರೆಸಿ ಕೊಡುತ್ತಿದ್ದಳು. ಗುರೂಜಿಯವರ ಉಪಾಯ ಕೆಲಸ ಮಾಡುತ್ತಿದೆ ಎಂದು ಕಮಲಾಳಿಗೆ ಅನಿಸುತ್ತಿತ್ತು.
ನರೇಂದ್ರ ಚಾಲಾಕಿ ವ್ಯಕ್ತಿ. ಅವನು ಈಗಲೂ ತನ್ನ ಬೇಟೆಯಾಡುವ ಆ ಖಯಾಲಿ ಮುಂದುವರಿಸಿದ್ದ. ಆದರೆ ಈಗ ಅವನು ತನ್ನ ಆಟದ ವಿಧಾನವನ್ನು ಬದಲಿಸಿಕೊಂಡಿದ್ದ. ಅವನೀಗ ತನ್ನ ಮಹಿಳಾ ಮಿತ್ರರಿಗೆ ಮನೆಯಿಂದಲೇ ಕಾಲ್ ಮಾಡುತ್ತಿದ್ದ. ಅವಳು ಏನಾದರೂ ಚಕಾರ ಎತ್ತಿದರೆ ತನ್ನ ಮಾತುಗಳಿಂದ ಸುಮ್ಮನಾಗಿಸುತ್ತಿದ್ದ. ಕಮಲಾಳಿಗೆ ತನ್ನ ಬುದ್ಧಿಗಿಂತ ಹೆಚ್ಚಿಗೆ ಮಂತ್ರಿಸಿದ ಬೂದಿ ಹಾಗೂ ವ್ರತದ ಮೇಲೆ ವಿಶ್ವಾಸವಿತ್ತು. ಅವಳು ಎಲ್ಲವನ್ನೂ ತಿಳಿದು ಕೂಡ ಕಣ್ಮುಚ್ಚಿಕೊಂಡು ಕುಳಿತುಕೊಳ್ಳುವಂತಾಗಿತ್ತು. ಅದೊಂದು ದಿನವಂತೂ ಅವನು ಕಮಲಾಳ ಎದುರೇ ನಾಚಿಕೆ ಇಲ್ಲದವನಂತೆ ಪೂಜಾಳಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ.
ಕಮಲಾ ತಾಳ್ಮೆ ಕಳೆದುಕೊಂಡು ಕೋಪದಿಂದ ಅವನ ಕೈಯಿಂದ ಮೊಬೈಲ್ ಕಿತ್ತುಕೊಂಡು, “ನೀವಂತೂ ನಿಮ್ಮ ಇತಿಮಿತಿ ಮರೆತುಬಿಟ್ಟಿದ್ದೀರಿ. ನನ್ನ ವಿಚಾರ ಬಿಡಿ. ವಿನುತಾಳ ಬಗೆಗಾದರೂ ಯೋಚಿಸಿ. ನನ್ನಲ್ಲಿ ಏನು ಕೊರತೆ ಇದೆ?” ಎಂದು ಕೇಳಿದಳು.
ನರೇಂದ್ರ ಅವಳತ್ತ ಕಣ್ಣೆತ್ತಿ ಕೂಡ ನೋಡದೆ, “ನಿನ್ನಲ್ಲಿ ಮೊದಲಿನ ಚೆಲುವು, ಮಾದಕತೆ ಇಲ್ಲ. ನಾನು ಜೀವಂತ ಶವದ ಜೊತೆ ಹೇಗೆ ತಾನೇ ನನ್ನ ದೈಹಿಕ ಹಸಿವು ನೀಗಿಸಿಕೊಳ್ಳಲಿ ಹೇಳು? ನಿನ್ನನ್ನು ಚೆನ್ನಾಗಿ ನೋಡಿಕೊಳ್ತಿರುವೆ. ನಿನ್ನ ಹೆಸರ ಜೊತೆ ನನ್ನ ಹೆಸರು ಸೇರಿಸಲು ಅವಕಾಶ ಕೊಟ್ಟಿರುವೆ. ಇದೇ ಹೆಚ್ಚು. ಇನ್ನೇನು ಬೇಕು…..?” ಎಂದು ಕೇಳಿದ.
ಕಮಲಾ ಕೋಪದಿಂದ, “ನಾನೇನು ಅನಾಥಳಾ? ಬೀದಿಯಲ್ಲಿ ಬೆಳೆದ ಹುಡುಗೀನಾ? ನನಗೂ ಅಮ್ಮ, ಅಪ್ಪ, ಅಣ್ಣ ಇನ್ನೂ ಜೀವಂತ ಇದ್ದಾರೆ. ನಿಮ್ಮ ಗೌರವಕ್ಕೆ ಚ್ಯುತಿ ಬರಬಾರದೆಂದು ನಾನು ಈವರೆಗೆ ಸುಮ್ಮನಿದ್ದೆ. ನಿಮ್ಮದೇ ಹಠ ಮುಂದುವರಿಸಿದರೆ, ಅವರು ನಿಮ್ಮನ್ನು ನನ್ನ ಸಮೀಪ ಕೂಡ ಬರಲು ಅವಕಾಶ ಕೊಡುವುದಿಲ್ಲ,” ಎಂದು ಹೇಳಿದಳು.
ಅವಳ ಮಾತಿಗೆ ನರೇಂದ್ರ, “ನಾನು ನಿನ್ನ ಹಿಂದೆಯೇ ಸುತ್ತು ಹಾಗಿದ್ದರೆ ನಾನೇಕೆ ಹೊರಗೆ ಹೋಗುತ್ತಿದ್ದೆ?” ಎಂದು ಕೇಳಿದ.
ಕಮಲಾಳಿಗೆ ಅವನ ಮಾತುಗಳನ್ನು ಕೇಳಿಸಿಕೊಳ್ಳಲಾಗಲಿಲ್ಲ. ಅವಳು ರಾತ್ರಿಯೇ ವಿನುತಾಳನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋದಳು. ಈಗ ಅವಳ ಬಳಿ ಯಾವುದೇ ಉಪಾಯ ಉಳಿದಿರಲಿಲ್ಲ. ಅವಳಿಗೀಗ ತನ್ನ ತಾಯಿ ತಂದೆ, ಅಣ್ಣನಿಗೆ ಎಲ್ಲ ವಿಷಯವನ್ನು ತಿಳಿಸಲೇಬೇಕಾಯಿತು. ಅಮ್ಮ ಅಪ್ಪ ಅವಳು ಹೇಳಿದ್ದನ್ನು ಕೇಳಿ ಗಾಬರಿಗೊಂಡರು.
ಅಣ್ಣ ಅವಳ ಮಾತಿಗೆ ಪ್ರತಿಯಾಗಿ, “ಕಮಲಾ ನೀನು ಮಾಡಿದ್ದು ಸರಿ. ನೀನು ಇನ್ನೆಂದೂ ಅಲ್ಲಿಗೆ ವಾಪಸ್ ಹೋಗಬೇಡ. ವಿನುತಾ ಹಾಗೂ ನಿನ್ನ ಸಂಪೂರ್ಣ ಜವಾಬ್ದಾರಿ ನನ್ನದು,” ಎಂದು ತಂಗಿಯನ್ನು ಸಮಾಧಾನಿಸಿದ.
ಆದರೆ ಅತ್ತಿಗೆಗೆ ಮಾತ್ರ ಆ ಮಾತು ಸರಿ ಎನಿಸಲಿಲ್ಲ. ಆಕೆ ಮಧ್ಯದಲ್ಲಿಯೇ ತಡೆಯುತ್ತಾ, “ನೀವು ಎಂತಹ ಹುಚ್ಚು ಮಾತು ಆಡ್ತಿರುವಿರಿ? ಯಾರಾದರೂ ಹೀಗೆ ಮನೆ ಬಿಟ್ಟು ಬರುತ್ತಾರಾ? ನೀವು ಇವತ್ತಿನದಲ್ಲ, ನಾಳೆಯ ಬಗ್ಗೆ ಯೋಚಿಸಿ. ಇದು ವಿನುತಾ ಹಾಗೂ ಕಮಲಾಳ ಜೀವನದ ಪ್ರಶ್ನೆ. ಕಮಲಾಗೆ ಯಾವುದೇ ಉದ್ಯೋಗ ಕೂಡ ಇಲ್ಲ. ಅವಳು ತನ್ನ ಮಗಳನ್ನು ಹೇಗೆ ಸಾಕಿ ಸಲಹುತ್ತಾಳೆ ಹೇಳಿ?” ಎಂದು ಕೇಳಿದಳು.
“ಈ ಮನೆಯಲ್ಲಿ ಅವಳಿಗೆ ಸಮಾನ ಹಕ್ಕು ಇದೆಯಲ್ಲ. ನಿನಗೇನು…..?” ಎಂದು ಅಣ್ಣ ಹೇಳಿದ.
ಅತ್ತಿಗೆ ಅದಕ್ಕೆ ಏನೂ ಪ್ರತಿಕ್ರಿಯೆ ಕೊಡಲಿಲ್ಲ. ಆದರೆ ಗಂಡನ ಮಾತುಗಳ ಬಗ್ಗೆ ಆಕೆ ಅತೃಪ್ತಳಾಗಿದ್ದಾಳೆ ಎನ್ನುವುದು ಕಮಲಾಳಿಗೆ ಗೊತ್ತಾಯಿತು. ದಿನಗಳು, ವಾರಗಳು, ತಿಂಗಳುಗಳು ಸರಿದು ಹೋದವು. ಆದರೆ ನರೇಂದ್ರನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈಗ ಕಮಲಾಳಿಗೆ ತಾನು ಮಾಡಿದ್ದು ಸರಿಯಾ ತಪ್ಪಾ? ಎಂಬ ಸಂದೇಹ ಬರತೊಡಗಿತು. ವಿನುತಾಳ ಕಾಂತಿಹೀನ ಕಣ್ಣುಗಳು ಹಾಗೂ ಅಮ್ಮ ಅಪ್ಪನ ಮೌನ ಈಗ ಅವಳನ್ನು ಕಾಡುತ್ತಿತ್ತು.
ಅಣ್ಣನೇನೋ ತಾನು ಈ ಮನೆಯಲ್ಲಿ ಸಮಾನ ಹಕ್ಕುದಾರಳೆಂದು ಹೇಳಿಬಿಟ್ಟಿದ್ದ. ಆದರೆ ಕಮಲಾಳಿಗೆ ಅದನ್ನು ಪಡೆಯುವ ಧೈರ್ಯವಾದರೂ ಎಲ್ಲಿತ್ತು?
ಅದೊಂದು ದಿನ ಕಮಲಾ ತನ್ನ ತಂದೆ ಬಳಿ ಬೊಟಿಕ್ ತೆರೆಯುವುದರ ಬಗ್ಗೆ ಚರ್ಚಿಸುತ್ತಿದ್ದಳು. ಆಗ ಅಮ್ಮ ಕೈ ಜೋಡಿಸಿ, “ಕಮಲಾ, ನಮ್ಮ ವೃದ್ಧಾಪ್ಯ ಕಿರಿಕಿರಿಯಿಂದ ಕಳೆಯಬೇಕೆನ್ನುವುದು ನಿನ್ನ ಯೋಚನೆನಾ….? ಒಂದು ವೇಳೆ ನಿನ್ನಪ್ಪ ನಿನಗೆ ಬೊಟಿಕ್ ತೆರೆಯಲು ಹಣ ಕೊಟ್ಟರು ಎಂದಿಟ್ಟುಕೊ. ಅದು ನಿನ್ನ ಅತ್ತಿಗೆಗೆ ಎಳ್ಳಷ್ಟೂ ಸರಿ ಎನಿಸುವುದಿಲ್ಲ. ನಮ್ಮ ವೃದ್ಧಾಪ್ಯದ ಆಸರೆ ಅವಳೇ ತಾನೇ? ನಾನು ಇಂದು ಬೆಳಗ್ಗೆಯಷ್ಟೇ ನರೇಂದ್ರನ ಜೊತೆ ಮಾತನಾಡಿದೆ. ಅವನು ಹೇಳಿದ, ನೀನು ನಿನ್ನ ಇಚ್ಛೆಯಿಂದ ಮನೆ ಬಿಟ್ಟು ಬಂದಿರುವೆಯಂತೆ. ನೀನಾಗಿಯೇ ವಾಪಸ್ ಹೋಗಬೇಕೆನ್ನುವುದು ಅವನ ಇಚ್ಛೆ,” ಎಂದರು.
ಕಮಲಾ ಆತುರಾತುರದಲ್ಲಿ ಕೋಪ ಮಾಡಿಕೊಂಡು ಮನೆಬಿಟ್ಟು ಬಂದಿದ್ದಳು. ತಾನು ಯಾವ ಮುಖ ಹೊತ್ತುಕೊಂಡು ಅಲ್ಲಿಗೆ ಹೋಗಬೇಕೆಂದು ಅವಳಿಗೆ ಗೊತ್ತಾಗುತ್ತಿರಲಿಲ್ಲ. ಅಣ್ಣನ ಒತ್ತಡ, ಅತ್ತಿಗೆಯ ಮೌನ ಕಮಲಾಳಿಗೆ ಯೋಚನೆ ಮಾಡುವ ಅನಿವಾರ್ಯತೆ ಸೃಷ್ಟಿಸಿತು.
ಮೊದಲ ವಾರ ವಿನುತಾ ಮನೆಯ ಎಲ್ಲರ ಕಣ್ಮಣಿ ಆಗಿದ್ದಳು. ಆದರೆ ಈಗ ಅವಳು ಯಾರಿಗೂ ಬೇಡವಾದ ಹುಡುಗಿ ಎಂಬಂತಾಗಿದ್ದಳು. ಅದೊಂದು ದಿನ ಅಣ್ಣನ ಮಕ್ಕಳಾದ ಗೀತಾ ಮತ್ತು ಶೇಖರ್ ಪಿಜ್ಜಾಗೆ ಹಠ ಮಾಡುತ್ತಿದ್ದರು. ಆಗ ವಿನುತಾ, “ಶೇಖರ್ ನನಗೂ ಡಬಲ್ ಚೀಸ್ ಪಿಜ್ಜಾ ತರಿಸು,” ಎಂದಳು.
ಆಗ ಗೀತಾ, “ನಿನ್ನ ಹಠವನ್ನು ನಿಮ್ಮ ಅಪ್ಪನ ಮುಂದೆ ತೋರಿಸಿಕೊ. ಈಗ ನಾವೇನು ತರಿಸುತ್ತೇವೋ ಅದನ್ನೇ ತಿನ್ನಬೇಕು,” ಎಂದಳು.
ಅದೆಷ್ಟೋ ಸಲ ಮಾವನ ಮಕ್ಕಳು ಬಾದಾಮಿ, ಐಸ್ ಕ್ರೀಮ್, ಚಾಕ್ಲೇಟ್ ಮುಂತಾದವನ್ನು ಕದ್ದುಮುಚ್ಚಿ ತಿನ್ನುವುದನ್ನು ವಿನುತಾ ನೋಡಿದ್ದಳು. ಈಗ ಅವಳು ಹೆಚ್ಚು ಕಡಿಮೆ ಹಠ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳು.
ಕಮಲಾ ಯಾವುದಾದರೂ ನೌಕರಿಗೆ ಹೋಗಬೇಕೆಂದು ಯೋಚಿಸಿ ಅರ್ಜಿ ಹಾಕುತ್ತಿದ್ದಳು. ಆದರೆ ಎಲ್ಲೂ ನೌಕರಿ ಸಿಕ್ಕಿರಲಿಲ್ಲ. ಎಲ್ಲ ಕಡೆಯಿಂದಲೂ ಸೋಲು ಕಂಡು ಅವಳು ಗುರೂಜಿಗೆ ಫೋನ್ ಮಾಡಿ ಕೇಳಿದಳು.
ಅದಕ್ಕೆ ಗುರೂಜಿ, “ನೀನು ಈ ಅಮಾಸ್ಯೆ ದಿನದಂದು ನಿನ್ನ ಗಂಡನ ಮನೆಗೆ ಹೋದರೆ ಎಲ್ಲವೂ ಸರಿ ಹೋಗುತ್ತದೆ,” ಎಂದು ಹೇಳಿದರು.
ಕಮಲಾ ತನ್ನ ಈ ನಿರ್ಧಾರವನ್ನು ಕುಟುಂಬದವರ ಮುಂದೆ ಹೇಳಿದಾಗ ಅತ್ತಿಗೆ ಖುಷಿಯಿಂದ, “ಕಮಲಾ ನೀನು ಸರಿಯಾದ ನಿರ್ಧಾರ ಮಾಡಿದೆ. ಮಗುವಿಗೆ ಅಮ್ಮ ಅಪ್ಪನ ಇಬ್ಬರ ಅವಶ್ಯಕತೆ ಇರುತ್ತದೆ. ಯಾವುದೊ ಒಂದು ಪಾತರಗಿತ್ತಿಗಾಗಿ ನೀನೇಕೆ ಮನೆ ತೊರೆದು ಬರಬೇಕಿತ್ತು. ನೀನು ಆ ಮನೆಯ ರಾಣಿ. ಅದೇ ಗೌರವ ಕೂಡ. ನೀನು ಅಲ್ಲಿಯೇ ಇರಬೇಕು,” ಎಂದು ಹೇಳಿದರು.
ತಾನು ರಾಣಿಯಲ್ಲ, ಆದರೆ ಈ ಮನೆಗೆ ಬೇಡದ ಅತಿಥಿ ಎಂಬುದು ಮಾತ್ರ ಕಮಲಾಳಿಗೆ ಚೆನ್ನಾಗಿ ಗೊತ್ತಿತ್ತು. ಗಂಡನ ಮನೆ ಕೂಡ ಅಂಥದ್ದೇ ಆದರೂ ತಾನು ಅಲ್ಲಿಯೇ ಇರಬೇಕು ಎಂದು ಅವಳು ನಿರ್ಧರಿಸಿದಳು.
ಮರುದಿನ ಕಮಲಾ ತನ್ನ ಲಗೇಜ್ ಜೊತೆಗೆ ಗಂಡನ ಮನೆಗೆ ಹೋದಳು. ಅವನು ಮಗಳನ್ನೇನೊ ಅಪ್ಪಿ ಮುದ್ದಾಡಿದ. ಆದರೆ ಕಮಲಾಳನ್ನು ನೋಡಿ ವ್ಯಂಗ್ಯವಾಗಿ ಮುಗುಳ್ನಕ್ಕ.
ಈಗ ನರೇಂದ್ರನಿಗೆ ಸಂಪೂರ್ಣ ಸ್ವಾತಂತ್ರವಿತ್ತು. ಈಗ ಅವನಿಗೆ ಚೆನ್ನಾಗಿ ಗೊತ್ತಾಗಿತ್ತು. ತನ್ನ ಮನೆಯ ಹೊರತಾಗಿ ಇವಳಿಗೆ ಬೇರೆ ಯಾವುದೇ ಆಧಾರ ಇಲ್ಲ ಎಂದು. ಈಗ ಅವನು ಬೇಕೆಂದಾಗ ಹೊರಗೆ ಹೋಗುತ್ತಿದ್ದ, ತನ್ನ ಮನಸ್ಸಿಗೆ ಬಂದಾಗ ಬರುತ್ತಿದ್ದ. ಮೊದಲು ಅವನಿಗೆ ಇದ್ದ ಅಷ್ಟಿಷ್ಟು ಸಂಕೋಚ, ಭಯ ಈಗ ಯಾವುದೂ ಇರಲಿಲ್ಲ. ಅವನು ಮುಕ್ತವಾಗಿಯೇ ಕೋಣೆಯಲ್ಲಿಯೇ ಕುಳಿತುಕೊಂಡು ತನ್ನ ಗರ್ಲ್ ಫ್ರೆಂಡ್ಸ್ ಗಳ ಜೊತೆ ಹರಟುತ್ತಿದ್ದ. ಒಮ್ಮೊಮ್ಮೆ ಅವರ ನಡುವೆ ಅಶ್ಲೀಲ ಮಾತುಕತೆಗಳೂ ಕೂಡ ನಡೆಯುತ್ತಿದ್ದವು.
ಕಮಲಾಳಿಗೆ ನರೇಂದ್ರನ ಈ ವರ್ತನೆ ಹಿಡಿಸದೇ ಇದ್ದಾಗ, ಅವಳು ಬಾಲ್ಕನಿಗೆ ಹೋಗಿ ನಿಂತುಬಿಡುತ್ತಿದ್ದಳು. ಆ ದಿನ ಕೂಡ ಅವಳು ಹೀಗೆಯೇ ನಿಂತಾಗ ಎಲ್ಲಿಂದಲೋ ಹಾಡೊಂದು ಅವಳಿಗೆ ಕೇಳಿ ಬರುತ್ತಿತ್ತು.`ಯಾರಿಗೆ ಯಾರೋ ಎರವಿನ ಸಂಸಾರ……’ ಹಾಡಿನ ಸಾಲುಗಳ ಜೊತೆಗೆ ಕಮಲಾಳ ಕಣ್ಣುಗಳಿಂದ ಕಣ್ಣೀರು ಟಪಟಪನೇ ಉದುರುತ್ತಿದ್ದವು.