ಸುಮಾರು 16 ವರ್ಷಗಳ ಬಳಿಕ ಶ್ವೇತಾ ಸೀಮಾಳ ಫೋಟೋವನ್ನು ಫೇಸ್ ಬುಕ್ ನಲ್ಲಿ ನೋಡಿದಳು. ಜಿಂಕೆಯಂತೆ ಒಮ್ಮೆಲೆ ಕುಣಿದು ಕುಪ್ಪಳಿಸಿದಳು. ಅಂದಹಾಗೆ 2 ದಶಕಗಳ ಮೊದಲು ಶ್ವೇತಾ ಮತ್ತು ಸೀಮಾ ಆತ್ಮೀಯ ಗೆಳತಿಯರಾಗಿದ್ದರು. ಇಬ್ಬರ ಮನೆತನಗಳಲ್ಲಿ ಯಾವುದೇ ಸಮಾನತೆ ಇರಲಿಲ್ಲ. ಸೀಮಾಳದು ಅರಮನೆಯಂತಹ ಮನೆ ಬೆಂಗಳೂರಿನ ಸದಾಶಿವನಗರದಲ್ಲಿ ಇತ್ತು. ಶ್ವೇತಾಳ ಸಾಧಾರಣ ಮನೆ ಮಧ್ಯಮ ವರ್ಗದವರಿರುವ ರಾಜಾಜಿನಗರದಲ್ಲಿತ್ತು. ಶ್ವೇತಾ ಹಾಗೂ ಸೀಮಾರ ಸ್ನೇಹ ಜುಳು ಜುಳು ಹರಿಯುವ ನದಿಯ ಹಾಗೆ ನಿರಂತರವಾಗಿ ಸಾಗುತ್ತಿತ್ತು.
ಸೀಮಾಳದು ಸಾಧಾರಣ ಗೋಧಿಗೆಂಪು ವರ್ಣ, ಸಾಧಾರಣ ಚೆಲುವು. ಆದರೆ ಅವಳು ಅದ್ಭುತ ಆತ್ಮವಿಶ್ವಾಸ ಹೊಂದಿದ್ದಳು. ಶ್ವೇತಾಳದು ಗೌರವರ್ಣ, ಕಂದು ಕಣ್ಣುಗಳು ಎಂಥವರನ್ನಾದರೂ ಸೆಳೆಯುವ ರೂಪ ಅವಳದ್ದಾಗಿತ್ತು. ಇಬ್ಬರೂ ರೂಪದಲ್ಲಷ್ಟೇ ಅಲ್ಲ, ಆಚಾರ ವಿಚಾರದಲ್ಲೂ ತದ್ವಿರುದ್ಧ ಆಗಿದ್ದರು. ಸೀಮಾ ಅತ್ಯಂತ ಬಿಂದಾಸ್‌ಹಾಗೂ ಹೃದಯಪೂರ್ವಕ ಮುಕ್ತ, ಸ್ಪಷ್ಟ ವ್ಯಕ್ತಿತ್ವ ಹೊಂದಿದ್ದರೆ, ಶ್ವೇತಾ ಮಾತ್ರ ಸಂಕುಚಿತ ಸ್ವಭಾವ ಹಾಗೂ ತನ್ನಲ್ಲಿ ತಾನು ಕಳೆದುಹೋಗುವವಳಂತೆ ಆಗಿದ್ದಳು.
ಶ್ವೇತಾ ಮನಸ್ಸಿನಲ್ಲಿಯೇ ತನ್ನ ಜೀವನಮಟ್ಟವನ್ನು ಸೀಮಾಳ ಜೀವನಮಟ್ಟದೊಂದಿಗೆ ಹೋಲಿಸಿ ನೋಡುತ್ತಿದ್ದಳು. ತನ್ನನ್ನು ತಾನು ಅವಳಿಗಿಂತ ಕಡಿಮೆ ಎಂದು ಭಾವಿಸುತ್ತಿದ್ದಳು. ಅವಳಿಗೆ ತನ್ನ ರೂಪ ಲಾವಣ್ಯದ ಮೇಲೆ ಅದೆಷ್ಟು ವಿಶ್ವಾಸ ಇತ್ತೆಂದರೆ, ತಾನು ಯಾವುದಾದರೂ ದೊಡ್ಡ ಶ್ರೀಮಂತ ಕುಟುಂಬದ ಸೊಸೆಯಾಗುತ್ತೇನೆಂಬ ನಂಬಿಕೆ ಅವಳಲ್ಲಿತ್ತು. ಸೀಮಾಳ ಮನೆಗೆ ಅವಳು ಆಗಾಗ ಹೋಗಲು ಕಾರಣವೇನೆಂದರೆ, ದೊಡ್ಡ ಕುಟುಂಬವೆಂದರ ಜೀವನಶೈಲಿ ಹೇಗಿರುತ್ತದೆ ಎಂಬುದನ್ನು ಗಮನಿಸಲು ಹಾಗೂ ಅದನ್ನು ಅನುಕರಣೆ ಮಾಡಲು.
ಅಂದು ಸೀಮಾಳ ಹುಟ್ಟುಹಬ್ಬ. ನಗರದ ಪಂಚತಾರಾ ಹೋಟೆಲೊಂದರಲ್ಲಿ ಏರ್ಪಾಡಾಗಿತ್ತು. ಆಗ ಸೀಮಾ ತನ್ನೆಲ್ಲ ಗೆಳತಿಯರಿಗೆ ವಿಜಯ್ ನನ್ನು ಪರಿಚಯಿಸಿದಳು. ಅವನು ಅವಳ ತಂದೆಯ ಸ್ನೇಹಿತನ ಮಗ. ಅವನು ನಗರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ತನ್ನ ಓದು ಮುಂದುವರಿಸಿದ್ದ. 5 ಅಡಿ 10 ಅಂಗುಲದ ವಿಜಯ್‌ಆಕರ್ಷಕ ವ್ಯಕ್ತಿತ್ವದ ಮಾಲೀಕನಾಗಿದ್ದ. ಎಲ್ಲ ಹುಡುಗಿಯರು ವಿಜಯ್ ನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರೆ, ಶ್ವೇತಾ ಮಾತ್ರ ಒಂದು ಕಡೆ ಸುಮ್ಮನೆ ಕುಳಿತುಬಿಟ್ಟಿದ್ದಳು. ವಿಜಯ್‌ಮುಗುಳ್ನಗುತ್ತಲೇ, ``ಮುಟ್ಟಿದರೆ ಮುನಿ ಎಂಬಂತೆ ಕುಳಿತಿರುವ ಈ ಕೋಮಲಾಂಗಿ ನನಗೆ ಕಪ್ಪೆಚಿಪ್ಪಿನಲ್ಲಿರುವ ಮುತ್ತಿನ ಥರ ಅನಿಸುತ್ತಿದ್ದಾಳೆ,'' ಎಂದು ಹೇಳಿದ.
ಸೀಮಾ ಅವಳನ್ನು ಕೈಹಿಡಿದು ಎಳೆದುಕೊಂಡು ಬಂದು ವಿಜಯ್ ನ ಮುಂದೆ ನಿಲ್ಲಿಸಿ, ``ಕಪ್ಪೆಚಿಪ್ಪಿನ ಈ ಮುತ್ತು ನನ್ನ ಆತ್ಮೀಯ ಗೆಳತಿ ಶ್ವೇತಾ. ಅವಳು ಅತ್ಯಂತ ಹಳೆಯ ಹಾಗೂ ನಿಕಟ ಗೆಳತಿ.''
ಬಳಿಕ ಊಟಕ್ಕೆ ಆರ್ಡರ್‌ಮಾಡುವುದು ಆರಂಭವಾಯಿತು. ಅಲ್ಲಿ ಎಂತಹ ಕೆಲವು ಡಿಶ್ ಗಳಿಗೆ ಆರ್ಡರ್‌ಮಾಡಲಾಗುತ್ತಿತ್ತು ಎಂದರೆ, ಶ್ವೇತಾ ಆ ಹೆಸರುಗಳನ್ನು ಈ ಮೊದಲು ಕೇಳಿರಲೇ ಇಲ್ಲ. ಯಾವುದಕ್ಕೆ ಆರ್ಡರ್‌ಕೊಡುವುದೆಂದು ಅವಳಿಗೆ ಗಲಿಬಿಲಿ ಉಂಟಾಯಿತು. ಆಗ ವಿಜಯ್‌ಅವಳ ಹತ್ತಿರ ಬಂದು, ಮೆನು ಕಾರ್ಡ್ ನ್ನು ಅವಳ ಕೈಯಿಂದ ಎತ್ತಿಕೊಂಡು, ಅವಳ ಕಿವಿಯಲ್ಲಿ ಮೆಲ್ಲನೆ ಉಸುರಿದ, ``ನಾನು ಯಾವುದು ಆರ್ಡರ್‌ಮಾಡುತ್ತೇನೊ, ನೀನೂ ಕೂಡ ಅದನ್ನೇ ಆರ್ಡರ್‌ಮಾಡಬೇಕು.''