ಮನೆಯಲ್ಲಿ ಎಲ್ಲ ಸಾಮಾನ್ಯವಾಗಿರುವಂತೆ ಗೋಚರಿಸುತ್ತಿತ್ತು. ಆದರೆ ವಾಸ್ತವದಲ್ಲಿ ಹಾಗಿರಲಿಲ್ಲ. ರಮ್ಯಾಳ ಹೃದಯದಲ್ಲಿ ಬಿರುಗಾಳಿಯೇ ಎದ್ದಿತ್ತು. ಇಡೀ ದಿನ ಮನೆಯಲ್ಲಿ ಕುಳಿತು ಕುಳಿತು ಜಡ್ಡು ಹಿಡಿದಂತಾಗಿತ್ತು. ಅದೂ ಕೂಡ ಒನ್ ಬೆಡ್ ರೂಮಿನ ಫ್ಲ್ಯಾಟ್ ನಲ್ಲಿ. ಹೊರಗೆ ಹೋಗುವುದಾದರೂ ಹೇಗೆ ಎಂದು ಅವಳು ಯೋಚನೆ ಮಾಡುತ್ತಿದ್ದಳು. ಸಂಜಯ್ ಜೊತೆ ಅವಳಿಗೆ ಮಾತನಾಡಲು ಯಾವುದೇ ಅವಕಾಶಗಳು ಸಿಗುತ್ತಿರಲಿಲ್ಲ.
ಕೊರೋನಾದ ಕಾರಣದಿಂದ ಗಂಡ ರವಿ ಮನೆಯಲ್ಲಿಯೇ ಇರುತ್ತಿದ್ದ. ಅವನಿಗೆ ವರ್ಕ್ ಫ್ರಂ ಹೋಮ್ ಆಗಿತ್ತು. 2 ವರ್ಷದ ಅಶ್ವಿನಿಗೆ ಅಮ್ಮ ಅಪ್ಪ ಸದಾ ಕಣ್ಮುಂದೆ ಇರುತ್ತಿದ್ದುದು ಖುಷಿಯನ್ನುಂಟು ಮಾಡಿತ್ತು. ಆದರೆ ಅಮ್ಮನ ಹೃದಯದಲ್ಲಿ ಏಳುತ್ತಿದ್ದ ಬಿರುಗಾಳಿಯ ಬಗ್ಗೆ ಮಾತ್ರ ಆ ಕಂದನಿಗೆ ಕಿಂಚಿತ್ತೂ ಅರಿವಿರಲಿಲ್ಲ.
ಆಫೀಸಿನ ಕೆಲಸ ಕಾರ್ಯಗಳಿಂದ ಅಷ್ಟಿಷ್ಟು ಬಿಡುವು ಸಿಕ್ಕಾಗೆಲ್ಲ, ರವಿ ಹೆಂಡತಿಗೆ ಮನೆಗೆಲಸಗಳಲ್ಲಿ ನೆರವಾಗುತ್ತಿದ್ದ. ಆದರೆ ರಮ್ಯಾಳ ಮುಖದಲ್ಲಿ ಸಿಟ್ಟು, ಆಕ್ರೋಶ ಮಾತ್ರ ಕಡಿಮೆಯಾಗುತ್ತಿರಲಿಲ್ಲ.
ಕೊನೆಗೊಂದು ದಿನ ಅವನು ಕೇಳಿಯೇ ಬಿಟ್ಟ, ``ರಮ್ಯಾ, ನಿನಗೆ ಯಾವ ಕೆಲಸಗಳು ಕಷ್ಟ ಅನಿಸುತ್ತಲೇ ನನಗೆ ಅದರ ಬಗ್ಗೆ ಹೇಳು ತಿಳಿಸು. ನಿನ್ನ ಮುಖದಲ್ಲಂತೂ ನಗುವೇ ಮಾಯ ಆಗಿಬಿಟ್ಟಿದೆಯಲ್ಲ.....''
ರಮ್ಯಾ ಒಮ್ಮೆಲೆ ಸಿಡಿದಳು,``ನನಗೆ ಇಡೀ ದಿನ ಮನೆಯಲ್ಲಿ ಹೀಗೆ ಬಂಧಿಯಾಗಿರಲು ಸಾಧ್ಯವಿಲ್ಲ.''
``ಆದರೆ ಡಿಯರ್ ನೀನು ಮೊದಲು ಮನೆಯಲ್ಲಿಯೇ ಇರುತ್ತಿದ್ದೆಯಲ್ಲ, ನಾನೊಬ್ಬನೇ ತಾನೇ ಆಫೀಸಿಗೆ ಹೋಗುತ್ತಿದ್ದುದು. ಈಗ ನಾನು ಮನೆಯಲ್ಲಿಯೇ ಮೌನವಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ದೂರು ಕೂಡ ಹೇಳ್ತಿಲ್ಲ. ನಿನ್ನನ್ನು ಹಾಗೂ ಅಶ್ವಿನಿಯನ್ನು ನೋಡಿ ನನಗೆ ಖುಷಿಯಾಗುತ್ತದೆ.''
ರಮ್ಯಾ ಮನಸ್ಸಿನಲ್ಲಿಯೇ ಪಿಸುಗುಟ್ಟತೊಡಗಿದಳು. ತನ್ನ ಮನದ ಮಾತನ್ನು ಅವನಿಗೆ ಹೇಗೆ ಹೇಳಬೇಕೆಂದು ಚಡಪಡಿಸತೊಡಗಿದಳು. ತಾನು ಸಂಜಯ್ ನನ್ನು ಪ್ರೀತಿಸುತ್ತಿರುವುದು ಹಾಗೂ ಅವನು ತನ್ನನ್ನು ದಿನ ಭೇಟಿಯಾಗುತ್ತಿದ್ದ ಎಂದು ಹೇಗೆ ತಾನೇ ತಿಳಿಸುವುದು, ಸಂಜೆ ಅವಳು ಮಗಳನ್ನು ಕರೆದುಕೊಂಡು ಪಾರ್ಕಿಗೆ ಹೋದಾಗ ಅವನೂ ಕೂಡ ಅಲ್ಲಿ ಬಂದಿರುತ್ತಿದ್ದ, ಕಣ್ಣಂಚಿನಲ್ಲಿಯೇ ಅವನ ದಷ್ಟಪುಷ್ಟ ಶರೀರ ನೋಡಿ ಹೊಗಳಿದಾಗ ಅವನಿಗೂ ಅರ್ಥವಾಗುತ್ತಿತ್ತು. ಅವನನ್ನು ನೋಡಿ ಸ್ಮೈಲ್ ಕೊಟ್ಟಾಗ ಅವನು ಹಾಗೆಯೇ ಸಮೀಪದಿಂದ ಹಾದು ಹೋಗುತ್ತಿದ್ದ ಎಂದು ಹೇಗೆ ತಾನೇ ಮನವರಿಕೆ ಮಾಡುವುದು, ಅವನೊಂದಿಗೆ ತನಗೆ ಪ್ರೀತಿಯಾಗಿದೆ ಎಂದು ತಿಳಿಸುವುದಾದರೂ ಹೇಗೆ?
ಹಾಯ್, ಹಲೋದಿಂದ ಶುರುವಾದ ಅವರ ಮಾತುಕತೆ ಈಗ ಅಫೇರ್ ತನಕ ಬಂದು ತಲುಪಿದೆ. ಸಂಜಯ್ ಅವಿವಾಹಿತನಾಗಿದ್ದ. ಸಮೀಪದಲ್ಲಿಯೇ ಇದ್ದ ಒಂದು ಅಪಾರ್ಟ್ ಮೆಂಟ್ ನಲ್ಲಿ ತನ್ನ ತಾಯಿ ತಂದೆ ಹಾಗೂ ತಂಗಿಯ ಜೊತೆಗೆ ವಾಸಿಸುತ್ತಿದ್ದ. ರವಿ ಇಲ್ಲದೇ ಇದ್ದಾಗ ರಮ್ಯಾ 12 ಸಲ ಸಂಜಯ್ ನನ್ನು ಮನೆಗೂ ಕರೆಸಿಕೊಂಡಿದ್ದಳು.
ಹೆಚ್ಚಿನ ಮಾತುಕತೆಗಳು ಭೇಟಿಯಾದಾಗ ಇಲ್ಲವೇ ಫೋನ್ ನಲ್ಲಿಯೇ ಆಗುತ್ತಿದ್ದ. ಪ್ರತಿದಿನ ಭೇಟಿಯಾಗುವುದು ಒಂದು ನಿಯಮವೇ ಆಗಿಬಿಟ್ಟಿತು. ಚೆನ್ನಾಗಿ ಅಲಂಕರಿಸಿಕೊಂಡು ಅಶ್ವಿನಿಯನ್ನು ಕರೆದುಕೊಂಡು ಪಾರ್ಕಿಗೆ ಹೋಗುದು ಸಂಜಯ್ ಜೊತೆಗೆ ಮಾತುಕತೆ ನಡೆಸುವುದು ಅವಳಲ್ಲಿ ಹೊಸ ಉತ್ಸಾಹ ತುಂಬಿಸುತ್ತಿತ್ತು.