ಅನೂಪ್‌ ಗೆ ಹೊಸದಾಗಿ ನೌಕರಿ ಸಿಕ್ಕಿತ್ತು. ಅವನು ಯಾವ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದನೊ, ಅದೇ ಆಫೀಸಿನಲ್ಲಿ ಅವನಿಗೆ ಕೋಮಲಾಳ ಪರಿಚಯ ಆಗುತ್ತದೆ. ಅದೇ ಪರಿಚಯ ಸ್ನೇಹವಾಗಿ ನಂತರ ಪ್ರೀತಿಯಲ್ಲಿ ಬದಲಾಯಿತು. ಅನೂಪ್‌ ಕೋಮಲಾಳ ಜೊತೆಗೆ ಮದುವೆ ಮಾಡಿಕೊಳ್ಳಲು ಇಚ್ಛಿಸುತ್ತಿದ್ದ. ಆದರೆ ಕೋಮಲಾ ಮದುವೆಗೆ ನಿರಾಕರಿಸುತ್ತಲೂ ಇರಲಿಲ್ಲ, ಒಪ್ಪಿಗೆಯನ್ನೂ ನೀಡುತ್ತಿರುಲಿಲ್ಲ. ಅನೂಪ್‌ ಇದಕ್ಕೆ ಕಾರಣ ತಿಳಿಯಲು ಬಯಸಿದ್ದ. ಒಂದು ದಿನ ಆ ಅವಕಾಶ ಬಂದೇಬಿಟ್ಟಿತು. ಇಬ್ಬರೂ ಮುಖಾಮುಖಿಯಾಗಿ ಕುಳಿತಿದ್ದರು……..

ಮುಂದೆ ಓದಿ……

ಕೋಮಲಾಳ ಸಾಂಗತ್ಯ ಸಿಗುತ್ತಿದ್ದಂತೆ ಅನೂಪ್‌ ಗೆ ಜೀವನದ ದಿಕ್ಕು ದೆಸೆಯೇ ಬದಲಾಗಿಬಿಟ್ಟಿತು. ಒಂದೆಡೆ ಅವನು ಖುಷಿಗೊಂಡಿದ್ದನಾದರೆ, ಇನ್ನೊಂದೆಡೆ ಕೋಮಲಾಳ ನಿರ್ಧಾರದ ಬಗ್ಗೆ ಆತಂಕ ಇತ್ತು…..ಆಕಸ್ಮಿಕವಾಗಿ ಮೊಬೈಲ್ ನ ರಿಂಗ್‌ಹೊಡೆದುಕೊಳ್ಳತೊಗಿದಾಗ ಅವನಿಗೆ ನಿದ್ರೆಯಿಂದ ಎಚ್ಚರವಾಯಿತು. ಗಡಿಯಾರ ನೋಡಿದಾಗ 12 ಗಂಟೆ ತೋರಿಸುತ್ತಿತ್ತು. ಅದು ಕೋಮಲಾಳ ನಂಬರ್‌ ಆಗಿತ್ತು. ಅವನು ತಕ್ಷಣವೇ ಫೋನ್‌ ಎತ್ತಿಕೊಂಡ.

“ನೀವು ಮಲಕ್ಕೊಂಡಿದ್ರಾ? ನನ್ನಿಂದ ನಿಮ್ಮ ನಿದ್ರೆಗೆ ಅಡ್ಡಿಯುಂಟಾಗಿದ್ದರೆ ಕ್ಷಮಿಸಿ.”

“ಇಲ್ಲ… ಇಲ್ಲ….. ಹಾಗೇನೂ ಇಲ್ಲ. ಈಗಷ್ಟೆ ಮಲಗುತ್ತಿದ್ದೆ. ಸ್ವಲ್ಪ ನಿದ್ರೆ ಬಂದಿತ್ತು…..”

“ನೀವು ಸರಿಯಾಗಿ ಮನೆ ಸೇರಿದ್ರಾ…..?”

“ಹೌದು. ಯಾವುದೇ ತೊಂದರೆಯಾಗಲಿಲ್ಲ. ಅಲ್ಲಿಂದ ನಮ್ಮ ಮನೆ ಸಮೀಪವೇ ಅಲ್ವಾ….?”

“ಅನೂಪ್‌, ನಾನು ಮನೆ ಸೇರಿ ಬಹಳ ಯೋಚಿಸಿದೆ. ನಿಮ್ಮಂಥ ವ್ಯಕ್ತಿ ಲೈಫ್‌ ಪಾರ್ಟ್‌ ನರ್‌ ಆದರೆ ಜೀವನ ನೆಮ್ಮದಿಯಿಂದ ಸಾಗಬಹುದು ಅನಿಸಿತು. ನಾನು ನಿಮ್ಮ ಬಗ್ಗೆ ನನ್ನ ಅಪ್ಪ ಅಮ್ಮನಿಗೂ ವಿಷಯ ತಿಳಿಸಿದೆ. ಅವರು ನಿಮ್ಮನ್ನು ಭೇಟಿಯಾಗಲು ಇಚ್ಛಿಸಿದ್ದಾರೆ. ನಾಳೆಯೇ ಬರುವುದಾದರೆ ಬನ್ನಿ. ನಾನು ನಿಮಗೆ ವಾಟ್ಸ್ ಆ್ಯಪ್‌ ನಲ್ಲಿ ವಿಳಾಸ, ಲೊಕೇಶನ್‌ ಕಳಿಸುತ್ತೇನೆ.”

“ಹೀಗೂ ಆಗಬಹುದು ಎಂದು ನನಗೆ ನಂಬಿಕೆಯೇ ಬರ್ತಿಲ್ಲ. ಒಬ್ಬ ವ್ಯಕ್ತಿ ಅಪೇಕ್ಷಿಸಿದ್ದು ಇಷ್ಟು ಬೇಗ ಈಡೇರಲು ಸಾಧ್ಯವೇ? ಥ್ಯಾಂಕ್ಸ್ ಕೋಮಲಾ, ನಾನು ನಿಮಗೆ ಏನು ಹೇಳಬೇಕು ಎನ್ನುವುದಕ್ಕೆ ನನ್ನ ಬಳಿ ಪದಗಳೇ ಇಲ್ಲ. ನಾಳೆ ಬೆಳಗ್ಗೆವರೆಗೂ ಹೇಗೆ ಕಾಯುವುದು ಎಂದು ಯೋಚನೆ ಮಾಡ್ತಿರುವೆ. ನಾಳೆ 11 ಗಂಟೆಗೆ ನಿಮ್ಮ ಮನೆಗೆ ಬರುತ್ತೇನೆ.”

“ಬನ್ನಿ, ನಾಳೆ ನಾವೆಲ್ಲ ಜೊತೆ ಜೊತೆಗೆ ಕುಳಿತು ಊಟ ಮಾಡೋಣ. ನಾಳೆ ಭೇಟಿ ಆಗೋಣ. ಗುಡ್‌ ನೈಟ್‌.”

“ಟೇಕ್‌ ಕೇರ್‌ ಗುಡ್‌ ನೈಟ್‌.”

ಆಕಸ್ಮಿಕವಾಗಿ ಒದಗಿ ಬಂದ ಈ ಅವಕಾಶದಿಂದ ಅನೂಪ್‌ ತನ್ನನ್ನು ತಾನು ಜಗತ್ತಿನ ಅತ್ಯಂತ ಖುಷಿಯುಳ್ಳ ವ್ಯಕ್ತಿಯೆಂದು ಭಾವಿಸತೊಡಗಿದ. ಕಣ್ಣಿನಿಂದ ನಿದ್ರೆ ಮಾಯವಾಗಿ ಹೋಗಿತ್ತು. ಅವನಿಗೆ ಮರುದಿನ ಕೋಮಲಾಳ ಮನೆಗೆ ಹೋಗುವ ಕುರಿತಂತೆ ಟೆನ್ಶನ್‌ ಆಗುತ್ತಿತ್ತು. ಅವರ ಮನೆಯವರು ತನಗೆ ಏನೇನು ಪ್ರಶ್ನೆ ಕೇಳಬಹುದು, ತಾನು ಅದಕ್ಕೆ ಏನು ಉತ್ತರ ಕೊಡಬಹುದು, ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿರುತ್ತದೋ ಎಂದೆಲ್ಲ ಅವನಿಗೆ ಯೋಚನೆ ಆಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ಅವನಿಗೆ ನಿದ್ರೆಯಾದರೂ ಹೇಗೆ ಬರುತ್ತದೆ? ಅವನು ಟಿವಿ ಆನ್‌ ಮಾಡಿದ ಹಾಗೂ ಚಾನೆಲ್ ಗಳನ್ನು ಬದಲಿಸತೊಡಗಿದ. ಯಾವುದೊ ಒಂದು ಟಿ.ವಿ ಚಾನೆಲ್ ‌ಗಳಲ್ಲಿ ಹಳೆಯ ಸಿನಿಮಾ ಬರುತ್ತಿತ್ತು. ಅದನ್ನು ನೋಡುತ್ತಲೇ ಅವನು ನಿದ್ರೆಗೆ ಜಾರಿದ.

ಬೆಳಗ್ಗೆ 8 ಗಂಟೆಗೆ ಅವನಿಗೆ ಎಚ್ಚರವಾಯಿತು. ಎದ್ದು ನೋಡುತ್ತಾನೆ ಟಿ.ವಿ. ಹಾಗೆಯೇ ಆನ್‌ ನಲ್ಲಿತ್ತು. ಅವನು ತಕ್ಷಣವೇ ತನಗಾಗಿ ಚಹಾ ತಯಾರಿಸಿಕೊಂಡ ಹಾಗೂ ಕೈಯಲ್ಲಿ ಪೇಪರ್‌ ಹಿಡಿದು ಕುಳಿತ. ಆದರೆ ಅವನಿಗೆ ಪೇಪರ್‌ ಓದುವ ಮನಸ್ಸಾಗಲಿಲ್ಲ. ಅವನ ಮನಸ್ಸಿನಲ್ಲಿ ಕೇವಲ ಕೋಮಲಾ ಮಾತ್ರ ತುಂಬಿಕೊಂಡಿದ್ದಳು. ಅವನು ಕೋಮಲಾಳ ಪೋಷಕರು ಕೇಳಬಹುದಾದ ಪ್ರಶ್ನೆಗಳಿಗೆ ಅವನ ಮನಸ್ಸು ಉತ್ತರ ಸಿದ್ಧಪಡಿಸಿಕೊಳ್ಳುತ್ತಿತ್ತು. ಇಂದು ಅವನ ಗಡಿಯಾರದ ಮುಳ್ಳುಗಳು ಮುಂದೆ ಹೋಗುತ್ತಲೇ ಇರಲಿಲ್ಲ.

10 ಗಂಟೆಗೆ ಅವನು ಹಿಂದೊಮ್ಮೆ ಇಂಟರ್‌ ವ್ಯೂಗೆ ಹಾಕಿಕೊಂಡಿದ್ದ ಡ್ರೆಸ್‌ ನ್ನು ಕೈಗೆತ್ತಿಕೊಂಡು ಧರಿಸಿದ. ಹೊರಗೆ ಬಂದಾಗ ಆಟೋ ಕರೆದು ಕೋಮಲಾ ಕೊಟ್ಟಿದ್ದ ವಿಳಾಸಕ್ಕೆ ಹೋಗಲು ಸೂಚಿಸಿದ. ಆಟೋದಿಂದಲೇ ಕೋಮಲಾಳಿಗೆ ಸಂದೇಶ ಕೂಡ ಕಳಿಸಿದ.

ಕೋಮಲಾಳ ಫ್ಲಾಟ್‌ ಹುಡುಕಲು ಅವನಿಗೆ ಹೆಚ್ಚೇನೂ ಶ್ರಮಪಡಬೇಕಾಗಲಿಲ್ಲ. ಅವಳು ಅಪಾರ್ಟ್‌ಮೆಂಟ್‌ನ ಕೆಳಭಾಗಕ್ಕೆ ಬಂದಿದ್ದಳು. ಅವನನ್ನು ಸ್ವಾಗತಿಸಿದಳು. ನಂತರ ಇಬ್ಬರೂ ಫ್ಲಾಟ್‌ ನತ್ತ ಹೊರಟರು. ಅವಳ ಫ್ಲಾಟ್‌ 7ನೇ ಮಹಡಿಯಲ್ಲಿತ್ತು. ಅನೂಪ್‌ ಮನೆಯ ಕಾಲ್ ಬೆಲ್ ‌ಒತ್ತಿದಾಗ ಅವನ ಹೃದಯ ಬಡಿತ ತೀವ್ರವಾಯಿತು. ಕೋಮಲಾ ಮೃದು ಧ್ವನಿಯಲ್ಲಿ ಅವನಿಗೆ `ಆಲ್ ದಿ ಬೆಸ್ಟ್’ ಎಂದು ಮುಗುಳ್ನಕ್ಕಳು.

ಮನೆಯ ಬಾಗಿಲನ್ನು ಕೋಮಲಾಳ ಅಮ್ಮ ತೆರೆದು, “ಬನ್ನಿ ಅನೂಪ್‌…. ನಾವು ನಿಮ್ಮದೇ ದಾರಿ ಕಾಯುತ್ತಿದ್ದೆವು.”

ಅನೂಪ್‌ ಮುಗುಳ್ನಗುತ್ತಾ ಅವರಿಗೆ ಧನ್ಯವಾದ ಹೇಳುತ್ತಾ, ಸೋಫಾದ ಮೇಲೆ ಕುಳಿತ. ಕೋಮಲಾಳ ತಾಯಿ ಬಹಳ ಆಕರ್ಷಕ ವ್ಯಕ್ತಿತ್ವದ ಮಹಿಳೆಯಾಗಿದ್ದರು. ನಂತರ ಅವನು ಹಾಲ್ ‌ನ್ನು ಗಮನಹರಿಸಿದಾಗ ಅದು ಬಹಳ ಆಕರ್ಷಕವಾಗಿ ಅಲಂಕರಿಸಲ್ಪಟ್ಟಿತ್ತು. ಆ ನಂತರ ಕೋಮಲಾ ಅವನಿಗಾಗಿ ನೀರು ತೆಗೆದುಕೊಂಡು ಬಂದಳು. ಅವನಿಗೆ ಅದರ ಅವಶ್ಯಕತೆ ಇದೆಯೆಂದು ಅವಳ ಗಮನಕ್ಕೆ ಬಂದಿತ್ತು. ಅವಳು ಬರುತ್ತಿದ್ದಂತೆ ಅವನಿಗೆ ಕೊಂಚ ನಿರಾಳತೆ ದೊರಕಿದಂತಾಯಿತು.

ಅಮ್ಮನೇ ಮಾತುಕತೆ ಮುಂದುವರಿಸುತ್ತಾ, “ನೀವು ಮಾರತ್‌ ಹಳ್ಳಿಯಲ್ಲಿ ಇರುತ್ತೀರಲ್ವಾ……..?”

“ಹೌದು ಆಂಟಿ…..” ಎಂದು ಅನೂಪ್‌ ಸಂಕೋಚದಿಂದಲೇ ಹೇಳಿದ. ಬಳಿಕ ಸ್ವಲ್ಪ ಸಂಕೋಚದಿಂದಸಲೇ, “ಕಂಪನಿ ನನಗೆ ಅಲ್ಲಿ ಫ್ಲಾಟ್‌ ಕೊಟ್ಟಿದೆ,” ಎಂದು ಮಾತು ಮುಂದುವರಿಸಿದ.

“ನಿಮ್ಮ ಊರು, ತಾಯಿ ತಂದೆ?” ಎಂದು ಕೋಮಲಾ ತಾಯಿ ಪ್ರಶ್ನಿಸಿದರು.

“ನಾನು ಮೂಲತಃ ತುಮಕೂರು ಹತ್ತಿರದ ಹಳ್ಳಿಯವನು. ನನ್ನ ತಾಯಿ ತಂದೆ ಬಹಳ ಹಿಂದೆಯೇ ತೀರಿಕೊಂಡಿದ್ದಾರೆ. ನನ್ನ ಚಿಕ್ಕಮ್ಮನೇ ನನ್ನನ್ನು ಸಾಕಿ ಸಲುಹಿದ್ದಾರೆ. ಅವರಿಗೂ ಕೂಡ ನನ್ನನ್ನು ಬಿಟ್ಟು ಯಾರೂ ಇಲ್ಲ,” ಎಂದು ಹೇಳುತ್ತಾ ಅನೂಪ್‌ಕೋಮಲಾಳ ತಾಯಿಯ ಮುಖವನ್ನೇ ಗಮನಿಸುತ್ತಿದ್ದ.

ಅವರು ಅವನನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದರು. ಬಹುತೇಕ ಅಲ್ಲಿನ ಭಾವನೆಗಳನ್ನು ಓದಲು ಪ್ರಯತ್ನಿಸುತ್ತಿದ್ದರೊ ಏನೋ? ಅಷ್ಟರಲ್ಲಿ ಕೋಮಲಾ ತಂದೆ ಬರುತ್ತಿರುವುದನ್ನು ನೋಡಿ ಅನೂಪ್‌ ಎದ್ದು ನಿಂತು ಅವರಿಗೆ ಗೌರವ ಸೂಚಿಸಿದ. ಅವರು ಅವನತ್ತ ನಗುತ್ತಲೇ, “ಯಸ್‌ ಯಂಗ್‌ ಮ್ಯಾನ್‌ ಹೇಗಿದ್ದೀರಾ? ಬೀ ರಿಲ್ಯಾಕ್ಸ್ಡ್,” ಎಂದರು.

“ಸರಿ ಅಂಕಲ್,” ಎಂದು ಅನೂಪ್‌ ಮುಗುಳ್ನಗುತ್ತಾ ಹೇಳಿದ.

“ನಿಮ್ಮ ಬಗ್ಗೆ ಕೋಮಲಾ ಎಲ್ಲ ವಿಷಯ ಹೇಳಿದ್ದಾಳೆ. ನಿಜ ಹೇಳಬೇಕೆಂದರೆ, ನನಗೆ ನನ್ನ ಮೇಲೆ ಎಷ್ಟು ವಿಶ್ವಾಸವಿದೆಯೋ, ಅದಕ್ಕೂ ಹೆಚ್ಚು ವಿಶ್ವಾಸ ನನ್ನ ಮಗಳ ಮೇಲಿದೆ. ಅವಳು ನಿಮ್ಮನ್ನು ಇಷ್ಟಪಟ್ಟಿದ್ದಾಳೆಂದರೆ, ಅದರ ಬಗ್ಗೆ ಯೋಚಿಸಿಯೇ ನಿರ್ಧಾರ ಮಾಡಿರುತ್ತಾಳೆ. ಅವಳ ಪ್ರತಿಯೊಂದು ನಿರ್ಧಾರದ ಹಿಂದೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ನಾನು ಒಂದು ವಿಷಯ ನಿಮಗೆ ಹೇಳಲು ಇಚ್ಛಿಸುತ್ತೇನೆ, ಕೋಮಲಾ ನನಗೆ ಜೀವಕ್ಕಿಂತಲೂ ಹೆಚ್ಚು ಪ್ರೀತಿ. ಅವಳ ಹೃದಯವನ್ನೆಂದೂ ನೋಯಿಸಬೇಡಿ. ನಾನು ಅವಳನ್ನು ಬಹಳ ಪ್ರೀತಿಯಿಂದ ಸಲುಹಿದ್ದೇನೆ,” ಅವರು ಅದೆಷ್ಟು ಎಮೋಶನ್‌ ಆಗಿದ್ದಾರೆಂದು ಅವರ ಮುಖಭಾವವೇ ಹೇಳುತ್ತಿತ್ತು.

ಅನೂಪ್‌ ಮೆಲ್ಲನೆಯ ಧ್ವನಿಯಲ್ಲಿ ಹೇಳಿದ, “ಅಂಕಲ್, ನೀವು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಡಬಹುದು. ಕೋಮಲಾ ಜೊತೆಗೆ ನನ್ನ ಸ್ನೇಹ ಬಹಳ ಹಳೆಯದಿರಬಹುದು. ಆದರೆ ಅವಳಿಗಿಂತ ಒಳ್ಳೆಯ ಸಂಗಾತಿ ನನಗೆ ಸಿಗಲು ಸಾಧ್ಯವಿಲ್ಲ.”

“ಥ್ಯಾಂಕ್ಯೂ ಮೈ ಸನ್‌….. ನೀವಿಬ್ಬರೂ ಖುಷಿಯಿಂದಿರಿ. ಇದಕ್ಕೂ ಹೆಚ್ಚಿಗೆ ನನಗೆ ಇನ್ನೇನು ಬೇಕಿಲ್ಲ.”

ಆಗ ಅವಳ ಅಮ್ಮ, “ಕೋಮಲಾ, ಅನೂಪ್‌ ಗೆ ನಮ್ಮ ಮನೆಯನ್ನೆಲ್ಲ ತೋರಿಸು. ಅಲ್ಲಿಯವರೆಗೆ ನಾನು ಊಟಕ್ಕೆ ರೆಡಿ ಮಾಡ್ತೀನಿ,” ಎಂದರು.

ಕೋಮಲಾ ಅನೂಪ್‌ ನನ್ನು ತನ್ನ ರೂಮಿಗೆ ಕರೆದೊಯ್ದಳು. ಅವಳು ಬಹಳ ಖುಷಿಯಿಂದಿರುವಂತೆ ಕಾಣುತ್ತಿದ್ದಳು.

“ಕೋಮಲಾ, ನಿಮ್ಮ ಕುಟುಂಬದವರು ಬಹಳ ಒಳ್ಳೆಯವರು,” ಎಂದು ಅನೂಪ್‌ ಹೇಳಿದ.

“ಅವರೀಗ ಕೇವಲ ನನ್ನವರು ಮಾತ್ರವಲ್ಲ, ನಿಮ್ಮವರು ಕೂಡ. ಅಂದಹಾಗೆ ಅನೂಪ್‌ ನನ್ನನ್ನು `ನೀವು’ ಎಂದೆಲ್ಲ ಕರೆಯಬೇಡಿ. ನೀನು ಅಂತ ಏಕವಚನದಲ್ಲಿ ಕರೆಯಬಹುದು,” ಎಂದಳು.

“ಓ.ಕೆ. ನೀನು ಸರಿಯಾಗೇ ಹೇಳಿದೆ. ನಿನ್ನಂಥ ಒಳ್ಳೆಯ ಹೃದಯದ ಹುಡುಗಿಯನ್ನು ನನಗೆ ತೋರಿಸಿದ್ದಕ್ಕಾಗಿ ನಾನು ಆ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ,” ಎಂದ ಅನೂಪ್‌.

“ನೀವು ತುಂಬಾ ಒಳ್ಳೆಯವರು. ಅಂದಹಾಗೆ ಈಗಲೇ ನಿಮ್ಮ ಚಿಕ್ಕಮ್ಮನಿಗೆ ಫೋನ್‌ ಮಾಡಿ ಅಮ್ಮನ ಜೊತೆ ಮಾತನಾಡಿಸಬೇಕು. ನಾನೂ ಕೂಡ ಮಾತಾಡಬೇಕು.”

ಅನೂಪ್‌ ಚಿಕ್ಕಮ್ಮನಿಗೆ ಫೋನ್‌ ಮಾಡಿ ಅವರಿಗೆ ಎಲ್ಲ ವಿಷಯ ತಿಳಿಸಿದ. ಬಳಿಕ ಕೋಮಲಾಳ ಕೈಗೆ ಫೋನ್‌ ಹಸ್ತಾಂತರಿಸಿದ. ಕೋಮಲಾ ಹಾಗೂ ಅವಳ ಅಮ್ಮ ಬಹಳ ಹೊತ್ತು ಸಂಭಾಷಣೆ ನಡೆಸಿದರು.

ಅಲ್ಲಿಯವರೆಗೆ ಅನೂಪ್‌ ಕೋಮಲಾಳ ತಂದೆಯ ಜೊತೆ ಬಿಸ್‌ ನೆಸ್‌ ಹಾಗೂ ಕುಟುಂಬದ ಬಗ್ಗೆ ಮಾತನಾಡಿದ. ಅವನಿಗೆ ಅವರು ಬಹಳ ಆಸಕ್ತಿದಾಯಕ ಹಾಗೂ ಸಹಜ ಸರಳ ವ್ಯಕ್ತಿ ಎನಿಸಿದರು. ಅಮ್ಮ ಮತ್ತು ಚಿಕ್ಕಮ್ಮನ ನಡುವೆ ಫೋನ್‌ ಸಂಭಾಷಣೆ ಒಂದು ಗಂಟೆ ಕಾಲ ನಡೆಯಿತು. ಬಳಿಕ ಎಲ್ಲರೂ ಸೇರಿ ಖುಷಿಯಿಂದ ಊಟ ಮುಗಿಸಿದರು.

ಅನೂಪ್‌ ಹೊರಡಲು ಅನುವಾದಾಗ ಕೋಮಲಾಳ ಅಪ್ಪ ಅವನಿಗೆ ಡ್ರಾಪ್‌ ಕೊಡುವ ಬಗ್ಗೆ ಹೇಳಿದರು. ಅನೂಪ್‌ ಎಷ್ಟೇ ಬೇಡವೆಂದರೂ ಅವರು ಒಪ್ಪದೇ ಎಲ್ಲರೂ ಗಾಡಿಯಲ್ಲಿ ಕುಳಿತರು. ಕಾರನ್ನು ಕೋಮಲಾ ಡ್ರೈವ್ ‌ಮಾಡುತ್ತಿದ್ದಳು. ಅವಳ ಪಕ್ಕದಲ್ಲಿ ಅನೂಪ್‌ ಕುಳಿತಿದ್ದ. ಅವಳ ಅಮ್ಮ ಅಪ್ಪ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಅವರೆಲ್ಲ ಅನೂಪ್‌ ನನ್ನು ಅವನ ಅಪಾರ್ಟ್‌ ಮೆಂಟ್‌ ಬಳಿ ಬಿಟ್ಟು ಹೊರಟುಹೋದರು. ಇವತ್ತು ಅನೂಪ್‌ ನ ಖುಷಿಗೆ ಮೇರೆಯೇ ಇರಲಿಲ್ಲ.

ಶೀಘ್ರದಲ್ಲಿಯೇ ಮದುವೆಯ ದಿನಾಂಕ ನಿರ್ಧರಿಸಲಾಯಿತು. ಎಂಗೇಜ್‌ ಮೆಂಟ್‌ ಹಾಗೂ ಮದುವೆ ಎರಡನ್ನೂ ಒಂದೇ ಸಲ ಮಾಡುವುದೆಂದು ತೀರ್ಮಾನಿಸಲಾಯಿತು. ಈ ವಿಷಯವನ್ನು ಅನೂಪ್‌, ತನ್ನ ಸಹೋದ್ಯೋಗಿಗಳ ಮುಂದೆ ಹೇಳಿದಾಗ ಅವರೆಲ್ಲ ಬಹಳ ಖುಷಿಪಟ್ಟರು.

ಮದುವೆ ಇನ್ನೂ 15 ದಿನಗಳಿರುವಾಗಸೇ ಅನೂಪ್‌ ತನ್ನ ಚಿಕ್ಕಮ್ಮನನ್ನು ಬೆಂಗಳೂರಿಗೆ ಕರೆಸಿಕೊಂಡ. ಫ್ಲಾಟ್‌ ಗೆ ಬೇಕಾದ ಸಾಮಗ್ರಿಗಳನ್ನೆಲ್ಲ ಅನೂಪ್‌ ಖರೀದಿಸಲು ಯೋಚಿಸಿ, ಅದಕ್ಕಾಗಿ ಕೋಮಲಾ ಹಾಗೂ ಚಿಕ್ಕಮ್ಮನ ನೆರವು ಪಡೆದ.

ಮದುವೆಗೆ 2 ದಿನ ಮೊದಲೇ ಎಂಗೇಜ್‌ ಮೆಂಟ್‌ ವಿಧಿವಿಧಾನಗಳು ನಡೆದವು. ಅದರಲ್ಲಿ ಅನೂಪ್‌ ನ ಆಫೀಸಿನ ಕೆಲವು ಜನರು ಹಾಗೂ ಕೋಮಲಾಳ ಕಡೆಯಿಂದ ಸಾಕಷ್ಟು ಜನರು ಪಾಲ್ಗೊಂಡಿದ್ದರು.

ಮದುವೆಗೆಂದು ಅವನ ಕೆಲವು ಹಳೆಯ ಸ್ನೇಹಿತರು ಬಂದಿದ್ದರು. ಅವರೆಲ್ಲ ಅವನ ಫ್ಲಾಟ್‌ ನಲ್ಲಿ ಉಳಿದುಕೊಂಡಿದ್ದರು. ಮನೆಯಿಂದಲೇ ಕಲ್ಯಾಣ ಮಂಟಪದ ತನಕ ದಿಬ್ಬಣದ ಮೆರವಣಿಗೆ ಏರ್ಪಾಟಾಗಿತ್ತು. ಅದರಲ್ಲಿ ಸಾಕಷ್ಟು ಜನ ಖುಷಿಯಿಂದ ಕುಣಿದರು. ಆಫೀಸಿನ ಹಲವರು ಮೆರವಣಿಗೆಯುದ್ದಕ್ಕೂ ಅನೂಪ್‌ ಜೊತೆಗೆ ಇದ್ದು ಅವನ ಖುಷಿ ಹೆಚ್ಚಿಸಿದರು.

ಮದುವೆ ಬಹಳ ಅದ್ಧೂರಿಯಿಂದ ಜರುಗಿತು. ಎಲ್ಲ ವಿಧಿ ವಿಧಾನಗಳು ಮುಗಿದ ಬಳಿಕ ಅನೂಪ್‌ ಕೋಮಲಾಳನ್ನು ತನ್ನ ಮನೆಗೆ ಕರೆದುಕೊಂಡು ಬಂದ. ಅವನ ಗೆಳೆಯರು ಮರುದಿನವೇ ತಮ್ಮ ಊರಿಗೆ ವಾಪಸ್ಸಾದರು. ಚಿಕ್ಕಮ್ಮನನ್ನು ಕೆಲವು ದಿನ ತನ್ನ ಮನೆಯಲ್ಲಿಯೇ ಉಳಿಸಿಕೊಂಡ. ಅನೂಪ್‌ ಹಾಗೂ ಕೋಮಲಾ ಇಬ್ಬರೂ ಒಂದು ವಾರದ ರಜೆ ಪಡೆದಿದ್ದರು. ಈ ಅವಧಿಯಲ್ಲಿ ಇಬ್ಬರಿಗೂ ಸಾಕಷ್ಟು ವಿಷಯ ತಿಳಿಸಿಕೊಟ್ಟಿದ್ದರು.

ಮುಂದಿನ ಭಾನುವಾರದಂದು ಚಿಕ್ಕಮ್ಮ ಊರಿಗೆ ಹೊರಡುವುದು ನಿಶ್ಚಿತವಾಗಿತ್ತು. ಅವರನ್ನು ಕಳಿಸುವ ದಿನದಂದು ಕೋಮಲಾಳ ತಾಯಿ ತಂದೆ ಕೂಡ ಬಂದಿದ್ದರು. ಅವರನ್ನು ಬಸ್‌ ಗೆ ಹತ್ತಿಸುವವರೆಗೂ ಎಲ್ಲರೂ ಜೊತೆ ಜೊತೆಗಿದ್ದರು. ಚಿಕ್ಕಮ್ಮ ನವದಂಪತಿಗಳಿಗೆ ಮನಸಾರೆ ಹರಸಿದರು. ಅವರು ಕೋಮಲಾಳಿಗೆ, “ನಾನು ಇವನನ್ನು ನಿನ್ನ ವಶಕ್ಕೆ ಒಪ್ಪಿಸುತ್ತಿರುವೆ. ಈಗ ನೀನೇ ಇವನಿಗೆ ಎಲ್ಲವೂ ಆಗಿರುವೆ,” ಎಂದು ಹೇಳಿದರು.

ಕೋಮಲಾ ನಗುತ್ತಲೇ ಆ ಜವಾಬ್ದಾರಿಯನ್ನು ಮನಸಾರೆ ನಿಭಾಯಿಸುವುದಾಗಿ ಆಶ್ವಾವಸನೆ ಕೊಟ್ಟಳು.

ಕೋಮಲಾಳ ಸಾಂಗತ್ಯ ಸಿಗುತ್ತಿದ್ದಂತೆ ಅನೂಪ್‌ ನ ಜೀವನಕ್ಕೆ ಹೊಸ ರೆಕ್ಕೆ ಸಿಕ್ಕಂತಾಯಿತು. ಅವನು ಬಹಳ ಖುಷಿಯಿಂದ ಇರುತ್ತಿದ್ದ. ಕೋಮಲಾ ನಿಶ್ಚಿತವಾಗಿಯೂ ಚಿಕ್ಕಮ್ಮ ಹೇಳಿದಂತೆ ಮಾಡುತ್ತಿದ್ದಳು. ಅವಳು ಆಫೀಸಿನ ಕೆಲಸ ಕಾರ್ಯಗಳ ಜೊತೆಗೆ ಅನೂಪ್‌ ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಇಬ್ಬರೂ ಮನೆಗೆ ಬರುವ ಸಮಯ ಒಂದೇ ಆಗಿರುತ್ತಿತ್ತು. ಹೀಗಾಗಿ ಮನೆಗೆಲಸದವಳು ಕೂಡ ಅದೇ ಸಮಯಕ್ಕೆ ಬರುತ್ತಿದ್ದಳು. ರಾತ್ರಿ ಊಟದ ಜವಾಬ್ದಾರಿ ಅಡುಗೆಯವಳದ್ದೇ ಆಗಿತ್ತು. ಮಧ್ಯಾಹ್ನ ಬಾಕ್ಸ್ ಗೆ ಕೋಮಲಾಳೇ ಸ್ವತಃ ತುಂಬಿಸಿಕೊಡುತ್ತಿದ್ದಳು. ಬೆಳಗ್ಗೆ ತಿಂಡಿಯ ಜವಾಬ್ದಾರಿಯನ್ನು ಅನೂಪ್‌ ತೆಗೆದುಕೊಂಡಿದ್ದ.

ಈ ರೀತಿಯಾಗಿ ಜೀವನದ ಚಕ್ರ ಸುಲಲಿತವಾಗಿ ಸಾಗುತ್ತಿತ್ತು. ಅನೂಪ್‌ ಏನಾದರೂ ಟೂರ್‌ ಗೆ ಹೋದರೆ, ಕೋಮಲಾ ತನ್ನ ಅಪ್ಪನ ಮನೆಗೆ ಹೋಗುತ್ತಿದ್ದಳು. ಅದರಿಂದ ಅನೂಪ್‌ ಟೆನ್ಶನ್‌ ಫ್ರೀ ಆಗಿ ಇರುತ್ತಿದ್ದ. ಮನೆಗೆ ವಾಪಸ್ಸಾದಾಗ ಕೋಮಲಾ ಅವನನ್ನು ಹೇಗೆ ಸ್ವಾಗತಿಸುತ್ತಿದ್ದಳೆಂದರೆ, ವರ್ಷಗಳ ಬಳಿಕ ವಾಪಸ್‌ ಬಂದಿದ್ದಾನೆ ಎಂಬಂತೆ.

ಅದೊಂದು ದಿನ ಕೋಮಲಾ ಆಫೀಸಿನಿಂದ ವಾಪಸ್ಸಾಗಿ, ಬಹಳ ಖುಷಿಯಿಂದಲೇ ತನ್ನ ಕಂಪನಿಗೆ ಒಂದು ದೊಡ್ಡ ಪ್ರಾಜೆಕ್ಟ್ ದೊರೆತ ವಿಷಯ ತಿಳಿಸಿದಳು. ಇದೇ ಕೆಲಸಕ್ಕಾಗಿ ಮುಂದಿನವಾರ 1 ತಿಂಗಳ ಕಾಲ ಸಿಂಗಾಪೂರ್‌ ಗೆ ಹೋಗಬೇಕಿದೆ ಎಂದಳು. ಆ ವಿಷಯ ಕೇಳಿ ಅನೂಪ್‌ ನ ಮುಖ ಚಿಕ್ಕದಾಯಿತು.

“ನನ್ನ ಈ ಯಶಸ್ಸಿಗೆ ನಿಮಗೆ ಸ್ವಲ್ಪ ಖುಷಿ ಆಗುತ್ತಿಲ್ಲವೇ?” ಎಂದು ಕೋಮಲಾ ಕೇಳಿದಳು.

“ಇಲ್ಲ…. ಇಲ್ಲ…. ಹಾಗೇನೂ ಇಲ್ಲ. ಕಂಗ್ರಾಟ್ಸ್! ಅಂದಹಾಗೆ ನಮಗೆ ಇತ್ತೀಚೆಗಷ್ಟೆ ಮದುವೆಯಾಗಿದೆ. ನೀನು ಇಷ್ಟು ದಿನಗಳ ಕಾಲ ಹೊರಗೆ ಹೋಗೋದು ನನಗೆ ಹೇಗ್ಹೇಗೋ ಆಗುತ್ತದೆ. ನನಗೆ ನಿನ್ನದೇ ಚಿಂತೆ ಆಗಿದೆ.”

“ಇದರಲ್ಲಿ ಚಿಂತೆಯ ಮಾತೇನಿದೆ? ನಾನೇನೂ ಮಗೂನಾ? ನಾನು ನನ್ನ ಬಗ್ಗೆ ಸಂಪೂರ್ಣ ಕಾಳಜಿ ವಹಿಸ್ತೀನಿ. ನಾನು ಈ ಬಗ್ಗೆ ಅಮ್ಮನ ಜೊತೆಗೆ ಮಾತಾಡಿದೆ. ಅವರು ಇದೇ ನೆಪದಲ್ಲಿ  ಕೆಲವು ದಿನಗಳ ಕಾಲ ನೀವು ಅಮ್ಮ ಅಪ್ಪನ ಜೊತೆಗೆ ಇರಬಹುದು. ಅವರಿಗೂ ಖುಷಿ ನಿಮಗೂ ಊಟದ ಚಿಂತೆ ಇರುವುದಿಲ್ಲ.”

“ಕೋಮಲಾ, ನನಗೆ ಇಲ್ಲಿ ಏನೂ ಸಮಸ್ಯೆ ಇಲ್ಲ. ಅಂದಹಾಗೆ ನಾನು ಆಗಾಗ ಅಲ್ಲಿಗೆ ಹೋಗಿ ಬರ್ತೀನಿ. ನೋ ಟೆನ್ಶನ್‌, ನೀನು ಅವಶ್ಯವಾಗಿ ಹೋಗಿ ಬಾ.”

“ಥ್ಯಾಂಕ್ಸ್ ಡಿಯರ್‌. ನೀವು ನನ್ನ ಟೆನ್ಶನ್‌ ಕಡಿಮೆ ಮಾಡಿದಿರಿ. ನಾನು ನಿಮ್ಮ ಬಗ್ಗೆ ಬಹಳ ಚಿಂತೆಗೊಳಗಾಗಿದ್ದೆ,” ಎಂದು ಕೋಮಲಾ ನಗುತ್ತಲೇ ಹೇಳಿದಳು.

“ಇವತ್ತು ಡಿನ್ನರ್‌ ಗೆ ಹೊರಗೆ ಹೋಗೋಣ,” ಎಂದು ಅನೂಪ್‌ ಕೋಮಲಾಳನ್ನು ಕರೆದನಾದರೂ ಅವನು ಒಳಗೊಳಗೆ ಬಹಳ ದುಃಖಿತನಾಗಿದ್ದ. ತನ್ನನ್ನು ಕೇಳದೆಯೇ ಅವಳು ಇಷ್ಟೊಂದು ದೊಡ್ಡ ನಿರ್ಣಯ ಹೇಗೆ ಕೈಗೊಂಡಳು ಎಂದು ಅವನಿಗೆ ಹಿಂಸೆಯಾಗುತ್ತಿತ್ತು.  ಕೋಮಲಾಳಿಗೆ ತನ್ನ ಬಗ್ಗೆ ಯಾವುದೇ ಮಹತ್ವ ಇಲ್ಲವೇ, ಪ್ರತಿಸಲ ಹೀಗೆಯೇ ಆದರೆ ಜೀವನ ಎಂಬ ಬಂಡಿ ಸುಲಲಿತವಾಗಿ ಹೇಗೆ ಸಾಗೀತು? ಇಂತಹ ಹಲವು ಪ್ರಶ್ನೆಗಳು ಅವನನ್ನು ಮತ್ತೆ ಮತ್ತೆ ಗೊಂದಲಕ್ಕೀಡು ಮಾಡುತ್ತಿದ್ದವು. ಅವನು ಮೇಲ್ನೋಟಕ್ಕೆ ಬಹಳ ಖುಷಿಯಿಂದಿರುವಂತೆ ತೋರಿಸಿಕೊಳ್ಳುತ್ತಿದ್ದ.

ಒಂದು ವಾರ ಅದ್ಹೇಗೆ ಕಳೆದುಹೋಯಿತೋ ಗೊತ್ತೇ ಆಗಲಿಲ್ಲ. ಭಾನುವಾರ ಬೆಳಗಿನ ಜಾವ ಫ್ಲೈಟ್‌ ಇತ್ತು. ಅವಳಿಗೆ ಟಿಕೆಟ್‌ ನ್ನು ಕ್ಲೈಂಟ್‌ ಬಿಸ್‌ ನೆಸ್‌ ಕ್ಲಾಸ್‌ ನಲ್ಲಿ ಬುಕ್‌ ಮಾಡಿದ್ದರು. ಆ ಕಾರಣದಿಂದಾಗಿ ಕೋಮಲಾ ಬಹಳ ಖುಷಿಗೊಂಡಿದ್ದಳು. ಅನೂಪ್ ಸೇರಿದಂತೆ ಎಲ್ಲರೂ ಅವಳನ್ನು ಕಳಿಸಲೆಂದು ಏರ್‌ ಪೋರ್ಟ್‌ ಗೆ ಹೋಗಿದ್ದರು.

ಚೆಕ್‌ ಇನ್‌ ಗಾಗಿ ಒಳಗೆ ಹೋಗುವಾಗ ಕೋಮಲಾಳ ಕಣ್ಣುಗಳು ತೇವಗೊಂಡಿದ್ದವು ಅವಳು ಮತ್ತೆ ಮತ್ತೆ ಹೇಳುತ್ತಿದ್ದಳು, “ಅನೂಪ್‌, ನೀವು ಒಬ್ಬರೇ ಇರುವುದು ಏಕೆ? ಅಮ್ಮನ ಮನೆಗೆ ಹೋಗಿರಿ. ನೀವು ಟೆನ್ಶನ್‌ ಫ್ರೀ ಆಗಿರುತ್ತೀರಿ.”

ಏರ್‌ ಪೋರ್ಟ್‌ ನಿಂದ ವಾಪಸ್ಸಾಗುವಾಗ ಸಹ ಕೋಮಲಾಳ ತಾಯಿ ತಮ್ಮೊಂದಿಗೆ ಮನೆಗೆ ಬರಲು ಅನೂಪ್‌ ಗೆ ಹೇಳಿದರು. ಆದರೆ ಅನೂಪ್‌ ತಾನು ರಜೆ ದಿನದಂದು ಬರುವುದಾಗಿ ಹೇಳಿ ಅವರನ್ನು ಕಳುಹಿಸಿಕೊಟ್ಟ.

ಕೋಮಲಾ ಸಿಂಗಾಪೂರ್‌ ತಲುಪುತ್ತಿದ್ದಂತೆ ಅವನಿಗೆ ಮೆಸೇಜ್‌ ಕಳಿಸಿದಳು. ಭಾನುವಾರ ಅದ್ಹೇಗೊ ಕಳೆಯಿತು. ಆದರೆ ಸೋಮವಾರ ಅವನು ಆಫೀಸ್‌ ಗೆ ಹೋದಾಗ ಅವನ ಮೂಡ್‌ ಕೆಟ್ಟು ಹೋಗಿತ್ತು. ಇಡೀ ದಿನ ಅವನಿಗೆ ಕೆಲಸದಲ್ಲಿ ಮನಸ್ಸು ನಿಲ್ಲಲಿಲ್ಲ. ಕೋಮಲಾ ಅವನಿಗೆ ಬೆಳಗ್ಗೆಯೇ ತನಗೆಲ್ಲ ಒಳ್ಳೆಯ ವ್ಯಸ್ಥೆ ಮಾಡಿದ್ದರೆ. ಅದು ತನಗೆ ಖುಷಿ ತಂದಿದೆ. ತಾನು ಅದಕ್ಕೆ ತಕ್ಕಂತೆ ಒಳ್ಳೆಯ ಪರ್ಫಾರ್ಮೆನ್ಸ್ ಕೊಡುವುದಾಗಿ ಮೆಸೇಜ್‌ ಕಳಿಸಿದ್ದಳು. ಅದರ ಜೊತೆಗೆ ತಾನು ಅನೂಪ್‌ ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಅವಳು ಅದರಲ್ಲಿ ಉಲ್ಲೇಖಿಸಿದ್ದಳು.

ಅವನಿಗೆ ಒಂದು ವಿಷಯ ಮಾತ್ರ ತಲೆ ಕೆಡಿಸುತ್ತಿತ್ತು. ಕೋಮಲಾ ಅಷ್ಟು ಕೆರಿಯರ್‌ ಮೈಂಡೆಡ್‌ ಆಗಿದ್ದರೆ ಮುಂದೆ ಇದೆಲ್ಲ ಹೇಗೆ ನಡೆಯುತ್ತೆ? ಅವಳು ಆ ವಿಷಯವನ್ನು ಮೊದಲೇ ಸ್ಪಷ್ಟಪಡಿಸಿದ್ದಳು. ಸಾಮಾನ್ಯವಾಗಿ ಹುಡುಗಿಯರು ಮದುವೆಗೂ ಮುಂಚೆ ತಮ್ಮ ಕೆರಿಯರ್‌ಕುರಿತಂತೆ ಬಹಳ ಸೀರಿಯಸ್‌ ಆಗಿರುತ್ತಾರೆ. ಆದರೆ ಮದುವೆಯ ಬಳಿಕ ಇಷ್ಟೊಂದು ಸೀರಿಯಸ್‌ ನೆಸ್‌……

ಕೋಮಲಾ ಸಿಂಗಾಪೂರಕ್ಕೆ ಹೋಗಿ 15 ದಿನಗಳು ಕಳೆದು ಹೋಗಿತ್ತು. ಅವಳು ಒಂದು ದಿನ ಕೂಡ ನಾನು ನೀನಿಲ್ಲದೆ ಇರುವುದು ಕಷ್ಟವಾಗುತ್ತದೆ ಎಂದು ಹೇಳದೇ ಇರುತ್ತಿರಲಿಲ್ಲ. ಆದರೆ ಹೋಗುವ ಮುನ್ನ ತನಗೆ ಆಫೀಸ್‌ ಕೆಲಸದ ನಿಮಿತ್ತ ಸಿಂಗಾಪೂರ್‌ ಗೆ ಹೋಗಬೇಕಿದೆ ಎಂದು ಏಕೆ ಹೇಳಲಿಲ್ಲ? ಹಾಗೊಂದು ವೇಳೆ ಅವಳು ಹೇಳಿದ್ದರೆ ತಾನು ಅವಳಿಗೆ ಬೇಡ ಎಂದು ಹೇಳುತ್ತಿರಲಿಲ್ಲ. ಅವನಿಗೆ ಇದೇ ಯೋಚನೆ ಮೇಲಿಂದ ಮೇಲೆ ಹಿಂಸೆಯನ್ನು ಉಂಟು ಮಾಡುತ್ತಿತ್ತು. ಅವಳು ಬೆಂಗಳೂರಿಗೆ ವಾಪಸ್‌ ಬರುವ ದಿನ ಕೂಡ ಬಂದೇ ಬಿಟ್ಟಿತು.

ಕೋಮಲಾಳ ತಾಯಿ, ತಂದೆ ಕಾರು ತಂದಿದ್ದರು. ಅವರು ಅನೂಪ್‌ ನನ್ನು ಕರೆದುಕೊಂಡು ಏರ್‌ ಪೋರ್ಟ್‌ ಗೆ ಹೋದರು. ನಿಗದಿತ ಸಮಯಕ್ಕೆ ಕೋಮಲಾಳ ಫ್ಲೈಟ್‌ ಬಂದಿತು. ಕೆಲವೇ ನಿಮಿಷಗಳಲ್ಲಿ ಹೊರಬಂದ ಅವಳು ದೂರದಿಂದಲೇ ಕೈ ಮೇಲೆತ್ತಿ ಎಲ್ಲರಿಗೂ ತನ್ನ ಖುಷಿಯನ್ನು ವ್ಯಕ್ತಪಡಿಸಿದಳು. ಹತ್ತಿರ ಬಂದವಳೇ ಮೊದಲು ಅನೂಪ್‌ ಬಳಿ ಬಂದು, “ಅನೂಪ್‌, ನಾನು ನಿಮ್ಮನ್ನು ಬಹಳ ಮಿಸ್‌ ಮಾಡಿಕೊಂಡೆ,” ಎಂದಳು.

ಅದಕ್ಕೆ ಅವಳ ತಂದೆ ನಗುತ್ತಲೇ, “ನಾನಂತೂ ಸುಮ್ಮನೆ ಟೆನ್ಶನ್‌ ಮಾಡಿಕೊಂಡಿದ್ದೆ,” ಎಂದರು. ಏರ್‌ ಪೋರ್ಟ್‌ ನಿಂದ ಮನೆಗೆ ಬರುವವರೆಗೂ ಅವಳು ತನ್ನ ಒಂದು ತಿಂಗಳ ಆಗುಹೋಗುಗಳನ್ನೆಲ್ಲ ಹೇಳಿಬಿಟ್ಟಳು. ಅವಳ ತಂದೆ ಮೊದಲು ನಮ್ಮ ಮನೆಗೆ ಹೋಗೋಣ ಎಂದು ಹೇಳಿದರೆ ಕೋಮಲಾ, “ಬೇಡ, ಮೊದಲು ನಾನು ನನ್ನ ಮನೆಗೆ ಹೋಗ್ತೀನಿ,” ಎಂದಳು.

ಮನೆಗೆ ಹೋಗುತ್ತಿದ್ದಂತೆ ಕೋಮಲಾ ಹೊರಗಿನಿಂದ ಊಟಕ್ಕೆ ಆರ್ಡರ್‌ ಮಾಡಿದಳು. ಬಳಿಕ ಅಸ್ತವ್ಯಸ್ತಗೊಂಡಿದ್ದ ಮನೆಯನ್ನು ಸರಿಪಡಿಸುವುದರಲ್ಲಿ ಮಗ್ನಳಾದಳು. ಊಟದ ಪಾರ್ಸಲ್ ಬರುತ್ತಿದ್ದಂತೇ ಇಬ್ಬರೂ ಕುಳಿತು ಊಟ ಮಾಡಿದರು. ಬಳಿಕ ಕೋಮಲಾ ಅವನಿಗಾಗಿ ತಂದಿದ್ದ ಗಿಫ್ಟ್ ಗಳನ್ನು ಅಂದರೆ ಶರ್ಟ್‌, ಜೀನ್ಸ್, ಪರ್ಫ್ಯೂಮ್ ಪ್ಯಾಕೆಟ್‌ ಗಳನ್ನು ಕೊಡುತ್ತಾ, “ಇವೆಲ್ಲವನ್ನು ನಾನು ನನ್ನ ಇಷ್ಟದಂತೆ ಖರೀದಿಸಿದ್ದೇನೆ. ಇವು ನಿಮಗೂ ಇಷ್ಟವಾಗಬಹುದು ಎಂದುಕೊಂಡಿರುವೆ. ನಾನು ಇಲ್ಲಿ ಇರದೆ ನಿಮಗೆ ಬಹಳ ತೊಂದರೆಯಾಗಿದೆ ಎನ್ನುವುದು ನನಗೆ ಗೊತ್ತು. ಆದರೆ ಇಂತಹ ಅವಕಾಶಗಳು ಸಿಗುದೇ ಅಪರೂಪ. ನನ್ನ ಸಿಂಗಾಪೂರ್‌ ಪ್ರಾಜೆಕ್ಟ್ ಮುಗಿಯಲು ಇನ್ನೂ 2 ವಾರಗಳಾದರೂ ಬೇಕು. ಅಲ್ಲಿಯವರೆಗೆ ಒಂದಿಷ್ಟು ಸಹಕರಿಸಿ ಆ ಬಳಿಕ ನನ್ನ ಎಲ್ಲಾ ಸಮಯ ನಿಮಗೇ ಮೀಸಲಿರುತ್ತೆ,” ಎಂದಳು.

“ಇಟ್ಸ್ ಓ.ಕೆ. ಕೋಮಲಾ, ಬಿ ಹ್ಯಾಪಿ,” ಎಂದ.

ಆ ಬಳಿಕ 3 ವಾರಗಳ ತನಕ ಕೋಮಲಾ ಮನೆಗೆ ತಡವಾಗಿಯೇ ಬರುತ್ತಿದ್ದಳು. ಅವನು ಮಾತ್ರ ದಿನ ನಿಗದಿತ ಸಮಯಕ್ಕೆ ಬರುತ್ತಿದ್ದ. ಅನೂಪ್‌ ತನ್ನೊಂದಿಗೆ ಅಷ್ಟಿಷ್ಟು ದೂರ ದೂರವೇ ಉಳಿಯುತ್ತಿದ್ದಾನೆ ಎನ್ನುವುದು ಕೋಮಲಾಳ ಗಮನಕ್ಕೆ ಬಂದಿತ್ತು. ಆದರೆ ಅವಳು ಸಾಮಾನ್ಯವಾಗಿರಲು ಪ್ರಯತ್ನಿಸಿದಳು.

ಕೋಮಲಾಳಿಗೆ ಮುಂದಿನ ಭಾನುವಾರವೇ ಪ್ರಾಜೆಕ್ಟ್ ಫೈನಲ್ ಮಾಡಬೇಕಿತ್ತು. ಹೀಗಾಗಿ ಅವಳು ಭಾನುವಾರ ಕೂಡ ಆಫೀಸಿಗೆ ಹೋಗಬೇಕಿತ್ತು. ಅನೂಪ್‌ ಅಂದು ಸಿನಿಮಾ ನೋಡಲು ಹೋಗಬೇಕೆಂದುಕೊಂಡಿದ್ದ. ಆದರೆ ಕೋಮಲಾ ತನಗೆ ಕೆರಿಯರ್‌ ಮುಖ್ಯ ಇದೊಂದು ಭಾನುವಾರ ನಾನು ಬಿಜಿಯಾಗಿದ್ದೇನೆ. ಆ ಬಳಿಕ ತಾನು ಯಾವುದೇ ಹೊಸ ಪ್ರಾಜೆಕ್ಟ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದಳು.

ನಿಗದಿತ ಸಮಯಕ್ಕೆ ಕೋಮಲಾಳ ಪ್ರಾಜೆಕ್ಟ್ ಸಬ್‌ ಮಿಟ್‌ ಆಯ್ತು. ಅವಳ ಕೆಲಸವನ್ನು ಎಲ್ಲರೂ ಮುಕ್ತಕಂಠದಿಂದ ಹೊಗಳಿದರು. ಅವಳಿಗೆ ಪ್ರಮೋಶನ್‌ ಕೂಡ ದೊರಕಿತು. ಕೋಮಲಾ ಅನೂಪ್‌ ಗೆ, “ತಾವು ಒಂದು ದಿನ ರಜೆ ತೆಗೆದುಕೊಳ್ಳೋಣ ಮತ್ತು ಆ ಇಡೀ ದಿನ ಹೊರಗಡೆ ಸುತ್ತಾಡೋಣ,” ಎಂದಳು. ಆದರೆ ಅನೂಪ್‌ ಅದಕ್ಕೆ ಒಪ್ಪಲಿಲ್ಲ.

ಆ ರಾತ್ರಿ ಡಿನ್ನರ್‌ ಬಳಿಕ ಕೋಮಲಾ ಕೇಳಿಯೇ ಬಿಟ್ಟಳು, “ಅನೂಪ್‌, ನೀವು ನನ್ನ ಮೇಲೆ ಬೇಜಾರಾಗಿರುವಿರಿ ಅನಿಸುತ್ತೆ. ನಿಮ್ಮ ಸಮಸ್ಯೆ ನನಗೆ ಅರ್ಥ ಆಗುತ್ತೆ. ಆದರೆ ಏನು ಮಾಡಲಿ? ನಾನು ಆ ಆಫರ್‌ ಬಿಡುವ ಹಾಗಿರಲಿಲ್ಲ.”

“ಇಲ್ಲ ನಾನು ಬೇಸರಗೊಂಡಿಲ್ಲ.”

“ನೀವು ಸುಳ್ಳು ಹೇಳುತ್ತಿರುವಿರಿ ಎಂದು ನನಗೆ ಗೊತ್ತು.”

“ಹಾಗಾದರೆ ಅದರ ಬಗ್ಗೆ ಏಕೆ ಕೇಳುತ್ತಿರುವೆ?”

“ನಾನು ನಿಮಗೆ ಅದೆಷ್ಟು ಸಲ ಸತ್ಯ ಹೇಳಿರುವೆ. ಆ ಒಂದು ತಿಂಗಳಲ್ಲಿ ನಾನು ನಿಮಗೆ ಒಂದು ದಿನ ಕೂಡ ಮೆಸೇಜ್‌ ಮಾಡದೆ ಇರಲಿಲ್ಲ.”

“ಹಾಗಿದ್ದರೆ ನೀನು ಅಲ್ಲಿಗೆ ಹೋಗಿದ್ದಾದರೂ ಏಕೆ? ನಿನಗೆ ಅಷ್ಟು ಪ್ರೀತಿಯಿದ್ದರೆ ನೀನು ಹೋಗಲೇಬಾರದಿತ್ತು.”

“ಅನೂಪ್‌, ನನ್ನ ಆಫೀಸಿನಲ್ಲಿ ಆ ಕೆಲಸವನ್ನು ಬೇರೆ ಯಾರೂ ಮಾಡಲು ಸಾಧ್ಯವಿರಲಿಲ್ಲ. ಆ ಪ್ರಾಜೆಕ್ಟ್ ನಮ್ಮ ಕಂಪನಿಗೆ ಅತ್ಯಂತ ಪ್ರತಿಷ್ಠಿತವಾಗಿತ್ತು.”

“ನನಗಿಂತಲೂ ಹೆಚ್ಚು ಮಹತ್ವದ್ದಾಗಿತ್ತಾ…..?”

“ಅನೂಪ್‌, ನೀವು ತಪ್ಪು ತಿಳಿಯುತ್ತಿರುವಿರಿ. ನೀವು ಅದರ ಹೋಲಿಕೆಯನ್ನು ನಿಮ್ಮೊಂದಿಗೆ ಏಕೆ ಮಾಡುತ್ತಿರುವಿರಿ? ನೀವು ಏನು ಅಂತಾ ನನಗೆ ಅದನ್ನು ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ.”

“ಹಾಗೆಯೇ ನಿನಗೆ ಸಿಂಗಾಪೂರ್‌ ಗೆ ಹೋಗಬೇಕೊ ಬೇಡವೋ ಎಂದು ನನ್ನನ್ನು ಕೇಳುವ ಅಗತ್ಯ ಇರಲಿಲ್ಲ ಅನಿಸುತ್ತೆ.”

“ಅನೂಪ್‌, ವಾಟ್‌ ಡೂ ಯೂ ಮೀನ್‌ ಬೈ ಕೇಳುವ ಅಗತ್ಯ? ಆಫೀಸಿನ ಅವಶ್ಯಕತೆ ಇತ್ತು. ಹೀಗಾಗಿ ನಾನು ಹೋಗಲು ಒಪ್ಪಿಕೊಂಡೆ. ನಾನು ನಿಮಗೆ ತಕ್ಷಣವೇ ಏಕೆ ಫೋನ್‌ ಮಾಡಲಿಲ್ಲವೆಂದರೆ, ನಾನು ನಿಮಗೆ ಸರ್‌ ಪ್ರೈಸ್‌ ಕೊಡಲು ಬಯಸಿದ್ದೆ.”

“ನನ್ನನ್ನು ಕೇಳಿದ್ದರೆ ನಿನ್ನ ಪ್ರತಿಷ್ಠೆ ಕಡಿಮೆಯಾಗುತ್ತಿತ್ತಾ…..?”

“ನೀವು ಕಾರಣವಿಲ್ಲದೆ ವಿಷಯವನ್ನು ದೊಡ್ಡದು ಮಾಡುತ್ತಿರುವಿರಿ. ಪ್ಲೀಸ್‌ ಮಲಕ್ಕೊಳಿ.”

“ವಿಷಯ ಆರಂಭಿಸಿದ್ದು ನಾನಾ…. ನೀನಾ?”

“ಖಂಡಿತವಾಗಿಯೂ ನಾನೇ ಆರಂಭಿಸಿದೆ. ಆದರೆ ನೀವು ಇಷ್ಟೊಂದು ಕೋಪಗೊಂಡಿರುವಿರಿ ಎಂದು ನನಗೆ ಗೊತ್ತಿರಲಿಲ್ಲ. ಒಂದು ಸಣ್ಣ ವಿಷಯವನ್ನು ಇಷ್ಟು ದೊಡ್ಡದೇಕೆ ಮಾಡುತ್ತಿರುವಿರಿ? ನಾವು ಗಂಡ ಹೆಂಡತಿಯೇ ಹೊರತು ಬಾಯ್‌ ಫ್ರೆಂಡ್‌ ಗರ್ಲ್ ಫ್ರೆಂಡ್ ಅಲ್ಲ. ನೀವು ಅಷ್ಟೊಂದು ಓದಿದವರು, ತಿಳಿವಳಿಕೆಯುಳ್ಳವರು. ಆದರೆ ಟಿಪಿಕಲ್ ಹಸ್ಬೆಂಡ್‌ ತರಹ ಏಕೆ ಮಾತನಾಡುತ್ತಿರುವಿರಿ?”

“ನಾನು ಟಿಪಿಕಲ್ ಹಸ್ಬೆಂಡ್‌ ರೀತಿ ಆಗಿದ್ದರೆ ನೀನು ಮದುವೆಯಾದರೂ ಏಕೆ ಆದೆ?”

“ಅನೂಪ್‌, ಐ ಆ್ಯಮ್ ರಿಯಲಿ ಸಾರಿ. ಪ್ಲೀಸ್‌ ಮಲಕ್ಕೊಳಿ.”

“ನೀನು ಮಲಗು ನನಗೆ ನಿದ್ರೆ ಬರುತ್ತಿಲ್ಲ,” ಎಂದು ಹೇಳಿ ಅನೂಪ್‌ ಕೋಣೆಯ ಹೊರಗೆ ಬಂದು ಡ್ರಾಯಿಂಗ್‌ ರೂಮ್ ನಲ್ಲಿ ಟಿ.ವಿ ಆನ್‌ ಮಾಡಿದ.

2-3 ದಿನ ಹೀಗೆಯೇ ಯಾವುದೇ ಮಾತುಕತೆ ಇಲ್ಲದೆ ಕಳೆಯಿತು. ಕೋಮಲಾ ಮಾತಾಡಲು ಪ್ರಯತ್ನಿಸುತ್ತಿದ್ದಳು ಹಾಗೂ ತನ್ನೆಲ್ಲ ಜವಾಬ್ದಾರಿ ನಿರ್ವಹಿಸುತ್ತಿದ್ದಳು. ಅದೊಂದು ದಿನ ಅವಳು ಆಫೀಸಿನಿಂದಲೇ ಫೋನ್‌ ಮಾಡಿ, “ಅನೂಪ್‌ ಇವತ್ತು ಅಮ್ಮ ಡಿನ್ನರ್‌ಗೆ ಕರೆದಿದ್ದಾರೆ. ನಾನು ಅವರಿಗೆ ಹೆಲ್ಪ್ ಮಾಡಬೇಕು. ನಾನು ಮೊದಲೇ ಅಲ್ಲಿಗೆ ಹೋಗಿರ್ತೀನಿ, ನೀವು ನೇರವಾಗಿ ಆಫೀಸಿನಿಂದ ಅಲ್ಲಿಗೆ ಬಂದುಬಿಡಿ,” ಎಂದು ಹೇಳಿದಳು.

ಆದರೆ ಅನೂಪ್‌, “ಇವತ್ತು ವರ್ಕ್‌ ಲೋಡ್‌ ಜಾಸ್ತಿ ಇದೆ. ನನಗೆ ತಡವಾಗುತ್ತದೆ. ಬಹಳ ಹೊತ್ತಾದರೆ ನಾನು ಬರುವುದಿಲ್ಲ,” ಎಂದು ಹೇಳಿದ.

ಅದಕ್ಕೆ ಕೋಮಲಾ, “ನಾನು ನಿಮಗಾಗಿ ವೇಟ್‌ ಮಾಡ್ತೀನಿ. ನೀವು ತಡವಾದರೂ ಬರಲೇಬೇಕು,” ಎಂದಳು.

ಅಂದಹಾಗೆ ಅನೂಪ್‌ ಗೆ ಅಲ್ಲಿಗೆ ಹೋಗುವುದು ಇಷ್ಟವಿರಲಿಲ್ಲ. ಹೀಗಾಗಿ ಅವನು ವರ್ಕ್‌ ಲೋಡ್‌ ನೆಪ ಹೇಳಿ ನೇರವಾಗಿ ಹೋಟೆಲ್ ‌ನಿಂದ ಊಟ ತೆಗೆದುಕೊಂಡು ಮನೆಗೆ ಹೋದ. ಈ ಮಧ್ಯೆ ಕೋಮಲಾಳಿಂದ ಅವನಿಗೆ ಹಲವು ಫೋನ್‌ ಕಾಲ್ಸ್ ಬಂದಿದ್ದವು. ಆದರೆ ಅವನು ಕಾಲ್ ‌ರಿಸೀವ್ ‌ಮಾಡದೆ ಮೆಸೇಜ್‌ ಹಾಕಿಬಿಡುತ್ತಿದ್ದ.

ಸುಮಾರು ರಾತ್ರಿ 11 ಗಂಟೆಗೆ ಕೋಮಲಾಳ ಮೆಸೇಜ್‌ ಬಂತು. `ನಾವು ನಿಮಗಾಗಿ ಇಷ್ಟು ಹೊತ್ತು ಕಾದೆ. ಈಗ ರಾತ್ರಿ ಬಹಳ ಹೊತ್ತಾಗಿದೆ. ನಾನು ರಾತ್ರಿ ಇಲ್ಲಿಯೇ ಉಳಿದುಕೊಂಡು ನಾಳೆ ಆಫೀಸ್‌ ಮುಗಿಸಿಕೊಂಡು ನೇರವಾಗಿ ಮನೆಗೆ ಬರ್ತೀನಿ,’ ಎಂದಾಗಿತ್ತು.  ಅದಕ್ಕೆ ಅನೂಪ್‌ ಯಾವುದೇ ಉತ್ತರ ಕೊಡಲಿಲ್ಲ.

ಮಾರನೇ ಸಂಜೆ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಮನೆಗೆ ಬಂದರು. ಎಂದಿನಂತೆ ಕೋಮಲಾ 2 ಕಪ್‌ ಕಾಫಿ ಮಾಡಿಕೊಂಡು ಬಂದು ಸೋಫಾದಲ್ಲಿ ಕುಳಿತಳು.

ನಂತರ, “ಅನೂಪ್‌, ಕಾಫಿ ಜೊತೆಗೆ ಏನಾದರೂ ತಿಂತೀರಾ…..?” ಎಂದು ಕೇಳಿದಳು.

“ಇಲ್ಲ ನನಗೆ ಕಾಫಿ ಕುಡಿಯುವ ಮೂಡ್‌ ಇಲ್ಲ.”

“ನೀವು ಮೊದಲೇ ಹೇಳಿದ್ದರೆ ನಾನು ಮಾಡ್ತಾನೇ ಇರಲಿಲ್ಲ. ಚಹಾ ಕುಡಿತೀರಾ….?”

“ಇಲ್ಲ ನನಗೆ ಮೂಡ್‌ ಸರಿ ಇಲ್ಲ.”

“ನಿಮ್ಮ ಮೂಡ್‌ ಗೆ ಆಕಸ್ಮಿಕವಾಗಿ ಏನಾಯ್ತು? ಆಫೀಸ್‌ ನಲ್ಲಿ ಏನಾದ್ರೂ ಆಯ್ತಾ?”

“ಇಲ್ಲ, ಅಲ್ಲಿ ಎಲ್ಲವೂ ಸರಿ ಇದೆ.”

“ಮತ್ತೆ ಏನೂ ಕಾರಣವಿಲ್ಲದೆ ಮೂಡ್‌ ಹೇಗೆ ಹಾಳಾಯ್ತು? ಇಲ್ಲ, ಏನೋ ಕಾರಣವಿದೆ.”

“ನಿನಗೆ ಎಲ್ಲವನ್ನೂ ಹೇಳುವ ಅಗತ್ಯವಿದೆಯಾ?”

“ಯಾಕೆ ಹೇಳಬಾರದು? ನಾನು ನಿಮ್ಮ ಹೆಂಡತಿ ಅಲ್ವಾ?”

“ಪ್ಲೀಸ್‌ ವಾದ ಮಾಡಬೇಡ. ನೆಮ್ಮದಿಯಾಗಿರಲು ಬಿಡು.”

“ಇಷ್ಟೊಂದು ಕಠೋರವಾಗಿ ಏಕೆ ಮಾತನಾಡುತ್ತಿರುವಿರಿ?”

“ನಾನು ಇರುವುದೇ ಹೀಗೆ.”

“ಹೀಗಿರಲಿಲ್ಲ. ಈಗ ಹೀಗಾಗಿದ್ದೀರಿ.”

“ಹೌದು, ಹೀಗಿರಲಿಲ್ಲ. ಈಗ ಹೀಗಾಗಿದ್ದೇನೆ. ಇನ್ನು ಸ್ವಲ್ಪ ದಿನ ಹೀಗೆಯೇ ಇದ್ದರೆ, ನಾನು ಹುಚ್ಚನಂತಾಗಿ ಬಿಡ್ತೀನಿ.”

“ನಾನು ಅಷ್ಟೊಂದು ಕೆಟ್ಟವಳಾ ಅನೂಪ್‌? ಹಾಗಿದ್ದರೆ ಜೊತೆಗಿರುವುದರಿಂದ ಲಾಭವಾದರೂ ಏನು? ನಾನು ನನ್ನ ಅಪ್ಪನ ಮನೆಗೆ ಹೋಗ್ತೀನಿ. ಅಂದಹಾಗೆ ನನ್ನಂತಹ ಹುಡುಗಿಯರಿಗೆ ಯಾವುದೇ ಮನೆ ಎನ್ನುವುದು ಇರುವುದೇ ಇಲ್ಲವಲ್ಲ.”

“ಆ್ಯಸ್‌ ಯು ವಿಶ್‌,” ಎಂದು ಹೇಳಿ ಅನೂಪ್‌ ಅಲ್ಲಿಂದ ಹೊರಗೆದ್ದು ಹೋದ.

ಮರುದಿನ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ. ಆಫೀಸಿಗೆ ಹೋಗುವಾಗ ಅನೂಪ್‌ ಲಂಚ್‌ ಬಾಕ್ಸ್ ಸಹ ತೆಗೆದುಕೊಂಡು ಹೋಗಲಿಲ್ಲ. ಹೋಗುವಾಗ ಹೇಳಲೂ ಇಲ್ಲ. ಆಫೀಸ್‌ ಗೆ ಹೋದ ಬಳಿಕ ಕೋಮಲಾ ಅವನಿಗೆ ಕಾಲ್ ಮಾಡಿದಳಾದರೂ ಅವನು ರಿಸೀವ್ ‌ಮಾಡಲಿಲ್ಲ ಜೊತೆಗೆ ಮೆಸೇಜ್‌ ಕೂಡ ಮಾಡಲಿಲ್ಲ. ಸಂಜೆ ಕೂಡ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ. ಆದರೆ ಅವನು ಅವಳಿಗೆ, `ತಾನು ದೆಹಲಿಗೆ ಹೋಗುತ್ತಿದ್ದು, ವಾಪಸ್‌ ಬರಲು 1 ವಾರ ಆಗುತ್ತದೆ,’ ಎಂದು ಮೆಸೇಜ್‌ ಮಾಡಿದ.

ಆ ದಿನ ಕೋಮಲಾ ಅಮ್ಮವ ಬಳಿ ಹೋದಳು. ಅವಳ ಮೂಡ್‌ ನೋಡಿ ಅಮ್ಮನಿಗೆ ಸಂದೇಹ ಬಂತಾದರೂ ಅವರು ಆ ಬಗ್ಗೆ ಏನೂ ಕೇಳಲಿಲ್ಲ. 1 ವಾರದಲ್ಲಿ ಅನೂಪ್‌ ನಿಂದ ಯಾವುದೇ ಸಂದೇಶ ಬರಲಿಲ್ಲ. ಆದರೆ 1-2 ಸಲ ಮೆಸೇಜ್‌ ಗೆ ಉತ್ತರಿಸಿದ. ಅನೂಪ್ ದೆಹಲಿಯಿಂದ ವಾಪಸ್ಸಾಗುವ ಯಾವುದೇ ಮಾಹಿತಿ ಕೊಡಲಿಲ್ಲ. ಕೋಮಲಾ ಕೂಡ ಏನನ್ನೂ ಕೇಳಲಿಲ್ಲ. ಕೋಮಲಾಳ ಅಮ್ಮ ಅನೂಪ್‌ ಜೊತೆಗೆ ಮಾತುಕತೆ ನಡೆಸಿದರು. ಆದರೆ ಅವನ ಉತ್ತರ ಔಪಚಾರಿಕವಾಗಿತ್ತು.

ಕೋಮಾ ಕೂಡ ತನ್ನ ತಾಯಿಗೆ ಎಲ್ಲ ವಿಷಯ ತಿಳಿಸಿದಳು. ಅನೂಪ್‌ ಎಲ್ಲಿಯವರೆಗೆ ಬಂದು ಕರೆದುಕೊಂಡು ಹೋಗುವುದಿಲ್ಲವೋ ಅಲ್ಲಿಯವರೆಗೆ ತಾನೂ ಹೋಗುದಿಲ್ಲವೆಂದು ಕೋಮಲಾ ಸ್ಪಷ್ಟಪಡಿಸಿದಳು.

ಕೋಮಲಾಳ ಅಮ್ಮ ಅನೂಪ್‌ ನ ಚಿಕ್ಕಮ್ಮನಿಗೆ ಫೋನ್‌ ಮಾಡಿದಾಗ, ಅವರ ಮಾತಿನಿಂದ ಅವರಿಗೆ ಯಾವುದೇ ವಿಷಯ ತಿಳಿದಿಲ್ಲ ಎನ್ನುವುದು ಗೊತ್ತಾಯಿತು. ಆದರೆ ಅವರಿಗೆ ಎಲ್ಲಾ ವಿಷಯ ತಿಳಿಸುವುದು ಸಮಂಜಸ ಎನಿಸಲಿಲ್ಲ. ಇಬ್ಬರ ಕೋಪ ಕಡಿಮೆಯಾಗಿ ಎಲ್ಲವೂ ಸರಿಹೋಗುತ್ತದೆ ಎಂದು ಅವರು ಭಾವಿಸಿದರು.

ಇದೇ ತಾಕಲಾಟದಲ್ಲಿ ಸುಮಾರು 5 ತಿಂಗಳು ಕಳೆದುಹೋದವು. ಇಂದು ಅವನಿಗೆ ಏನು ಅನಿಸಿತೋ ಏನೋ ತನ್ನಿಂದ ದೊಡ್ಡ ತಪ್ಪಾಗಿದೆ ಎನಿಸತೊಡಗಿತು.

ಅವಳು ಸಿಂಗಾಪೂರ್‌ ಗೆ ಹೋಗುವ ಮೊದಲು ತನಗೆ ಹೇಳದಿದ್ದರೆ ಏನಾಯ್ತು? ತಾನು ಆ ರೀತಿ ಅದೆಷ್ಟೋ ಸಲ ಮಾಡಿದ್ದೇನೆ. ರಾತ್ರಿ 10 ಗಂಟೆಗೆ ಮನೆಗೆ ಬಂದು, ಮಧ್ಯರಾತ್ರಿ 12ರ ಹೊತ್ತಿಗೆ ಚೆನ್ನೈಗೆ ಹೊರಟಿದ್ದೇನೆ, ಎಂದು ಎಷ್ಟು ಸಲ ಅವಳಿಗೆ ಹೇಳಿರಲಿಲ್ಲ? ಕೋಮಲಾ ಈ ಬಗ್ಗೆ ಯಾವುದೇ ತಕರಾರು ಮಾಡದೇ ಅರ್ಧ ಗಂಟೆಯಲ್ಲಿಯೇ ತನ್ನ ಸಿದ್ಧತೆಯನ್ನೆಲ್ಲಾ ಮಾಡಿ ಮುಗಿಸುತ್ತಿದ್ದಳು. ತಾನು ಅವಳ ಜೊತೆ ಅಷ್ಟು ನಿಷ್ಠೂರವಾಗಿ ನಡೆದುಕೊಂಡದ್ದೇಕೆ? ಅವಳು ಅಲ್ಲಿದ್ದೂ ಕೂಡ ತನ್ನ ಬಗ್ಗೆ ಅದೆಷ್ಟು ಕಾಳಜಿ ವಹಿಸುತ್ತಿದ್ದಳು? ಅವಳು ತನ್ನ ಕೆರಿಯರ್‌ ಬಗ್ಗೆ ಸೀರಿಯಸ್‌ ಆಗಿದ್ದರಲ್ಲಿ ತಪ್ಪೇನಿದೆ? ತಾನೂ ಕೆರಿಯರ್‌ ಬಗ್ಗೆ ಸೀರಿಯಸ್ ಆಗಿರಲಿಲ್ಲವೇನು? ನಾನು ನನ್ನ `ಸೂಡೊ ಮೇಲ್ ‌ಈಗೋ’ ವನ್ನು ಸಂತೃಪ್ತಿಗೊಳಿಸಲು ಕೋಮಲಾಳಂತಹ ಹುಡುಗಿಯ ಜೊತೆ ಅಮಾನವೀಯ ವರ್ತನೆ ತೋರುವುದು ನ್ಯಾಯವೇ? ಅವನಿಗೆ ಇವತ್ತು ಹೇಗೆ ಅನಿಸುತ್ತಿತ್ತೆಂದರೆ ತನ್ನಿಂದ ಭಾರಿ ದೊಡ್ಡ ತಪ್ಪು ನಡೆದಿದೆ ಎಂದು. ಅದಕ್ಕಾಗಿ ಅವನು ತನ್ನನ್ನು ತಾನು ಕ್ಷಮಿಸಲು ಸಾಧ್ಯವೇ ಇಲ್ಲ ಎನಿಸುತ್ತಿತ್ತು.

ಅವನು ಸ್ವಲ್ಪ ತಡ ಮಾಡದೆ ವಾಟ್ಸ್ ಆ್ಯಪ್‌ ನಲ್ಲಿ ಒಂದು ಮಸೇಜ್‌ ಹಾಕಿದ, `ಕೋಮಲಾ, ಕಮಿಂಗ್‌ ಬ್ಯಾಕ್‌. ಐ ಪ್ರಾಮಿಸ್‌ ಯೂ. ಐ ವಿಲ್ ‌ಚೇಂಜ್‌ ಮೈಸೆಲ್ಫ್’ ಮತ್ತು ಮೆಸೇಜ್‌ ಗಾಗಿ ಸ್ವಲ್ಪ ಕಾಯದೆ ಕೋಮಲಾಳ ಆಫೀಸಿನತ್ತ ಹೆಜ್ಜೆ ಹಾಕಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ