ಎಂದಿನಂತೆ ಇಂದೂ ಕೂಡ ಶೈಲಾ ಬೆಳಬೆಳಗ್ಗೆ ಅಪಾರ್ಟ್ ಮೆಂಟ್ ನ ಪಾರ್ಕ್ ನಲ್ಲಿ ಸುತ್ತಾಡಲೆಂದು ಬಂದಳು. 32 ವರ್ಷದ ಶೈಲಾ ಮುಕ್ತವಾಗಿ ಹರಡಿಕೊಂಡಿದ್ದ ಕೂದಲಿನಲ್ಲೂ ಬಹಳ ಸುಂದರವಾಗಿ ಕಾಣುತ್ತಿದ್ದಳು. ಅವಳು ಗೋದಿ ಮೈಬಣ್ಣದವಳಾಗಿದ್ದರೂ ಅವಳ ಮುಖದ ಮೇಲಿನ ಆತ್ಮವಿಶ್ವಾಸ ಹಾಗೂ ಹೊಳಪು ಅವಳ ವ್ಯಕ್ತಿತ್ವವನ್ನು ಇನ್ನಷ್ಟು ಆಕರ್ಷಕಗೊಳಿಸಿತ್ತು. ಅವಳು ಸಿಂಗಲ್ ಸ್ಮಾರ್ಟ್ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಅವಳಿಗೆ ತನ್ನ ಕನಸಿನ ಬಗ್ಗೆ ಪ್ರೀತಿಯಿತ್ತು. 3 ತಿಂಗಳ ಹಿಂದಷ್ಟೇ ಅವಳು ಆ ಅಪಾರ್ಟ್ ಮೆಂಟ್ ಗೆ ಬಂದಿದ್ದಳು.
ತನ್ನನ್ನು ತಾನು ಫಿಟ್ ಹಾಗೂ ಹೆಲ್ದೀ ಆಗಿಟ್ಟುಕೊಳ್ಳಲು ಶೈಲಾ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಿದ್ದಳು. ಹೆಲ್ದೀ ಆಹಾರ ಮತ್ತು ಹೆಲ್ದೀ ಲೈಫ್ ಸ್ಟೈಲ್ ಅನುಸರಿಸುತ್ತಿದ್ದಳು. ಪ್ರತಿ ಮುಂಜಾನೆ ಲಾಕ್ ಗೆ ಹೋಗುತ್ತಿದ್ದಳಾದರೆ, ಸಂಜೆ ಡ್ಯಾನ್ಸ್ ಕ್ಲಾಸ್ ಗೆ ಹೋಗುತ್ತಿದ್ದಳು. ಇವತ್ತು ಚಳಿ ಹೆಚ್ಚಿಗೆ ಇದ್ದುದರಿಂದ ಅವಳು ವಾರ್ಮರ್ ನ ಮೇಲ್ಭಾಗದಲ್ಲಿ ಒಂದು ಸ್ವೆಟರ್ ಕೂಡ ಧರಿಸಿದ್ದಳು. ಲಾಕ್ ಮಾಡುತ್ತಲೇ ಅವಳ ದೃಷ್ಟಿ ಯಾರನ್ನೋ ಹುಡುಕುತ್ತಿತ್ತು.
ಪ್ರತಿದಿನದಂತೆ ಇಂದೂ ಆ ಯುವಕ ಎಲ್ಲೂ ಕಾಣಲಿಲ್ಲ. ಅವನು ವಾಸಿಸುತ್ತಿದ್ದುದು ಎದುರುಗಿನ ಫ್ಲಾಟ್ ನಲ್ಲಿ. ಪ್ರತಿದಿನ ಇದೇ ಸಮಯಕ್ಕೆ ವಾಕಿಂಗ್ ಗೆ ಬರುತ್ತಿದ್ದ. ಟೀ ಶರ್ಟ್ ನ ಮೇಲ್ಭಾಗಕ್ಕೆ ತೆಳ್ಳನೆಯ ಜಾಕೆಟ್ ಹಾಗೂ ಚಳಿ ಸೀಸನ್ ನಲ್ಲೂ ಕೂಡ ಅವನು ಶೈಲಾಗೆ ಬಹಳ ಸ್ಮಾರ್ಟ್ ಆಗಿ ಕಂಡುಬರುತ್ತಿದ್ದ.
ಇಬ್ಬರೂ ಅಪರಿಚಿತರಾಗಿದ್ದರು. ಹೀಗಾಗಿ ಇಬ್ಬರೂ ಪರಸ್ಪರರನ್ನು ಕಣ್ಣಂಚಿನಿಂದ ನೋಡುತ್ತಿದ್ದರು ಹಾಗೂ ಮುಂದೆ ಸಾಗುತ್ತಿದ್ದರು. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಮುಗುಳ್ನಗೆಯ ವಿನಿಮಯವಾಗುತ್ತಿತ್ತು. ಇಂದು ಆ ಯುವಕ ಬರದಿರುವುದನ್ನು ಕಂಡು ಶೈಲಾ ಒಂದಷ್ಟು ವಿಚಲಿತಳಾಗಿದ್ದಳು. ಏಕೆಂದರೆ ಹವಾಮಾನ ಎಂಥದ್ದೇ ಇರಲಿ, ಅಂದರೆ ಭೀಕರ ಚಳಿ ಇರಲಿ, ಮಳೆ ಗಾಳಿ ಇರಲಿ ಆ ಯುವಕ ವಾಕಿಂಗ್ ತಪ್ಪಿಸುತ್ತಿರಲಿಲ್ಲ.
ಮುಂದಿನ 2 ದಿನಗಳ ಕಾಲ ಆ ಯುವಕ ಕಣ್ಣಿಗೆ ಬೀಳಲಿಲ್ಲ. ಹೀಗಾಗಿ ಅವಳಿಗೆ ಒಂದಿಷ್ಟು ಚಿಂತೆಯಾಯಿತು. ಯಾವುದೇ ಸಂಬಂಧ ಇರದೇ ಇದ್ದರೂ ಕೂಡ ಆ ಯುವಕನಿಗಾಗಿ ಅವಳ ಹೃದಯ ಮಿಡಿಯುತ್ತಿತ್ತು. ಅವನ ಮನೆಯಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾಗಿರಬಹುದು ಅಥವಾ ಅವನು ಎಲ್ಲಿಯಾದರೂ ಹೋಗಿರಬಹುದು ಎಂದುಕೊಂಡಳು.
ಮಾರನೇ ದಿನ ಅವನು ಕಂಡುಬಂದಾಗ, ಶೈಲಾ ಒಮ್ಮೆಲೆ ಅವನ ಬಳಿ ಹೋಗಿ, ``ನೀವು ಬಹಳ ದಿನಗಳಿಂದ ಕಾಣಲೇ ಇಲ್ಲ.... ಎಲ್ಲ ಸರಿ ಇದೆ ತಾನೇ?'' ಎಂದು ಕೇಳಿದಳು.
``ಬಹಳ ದಿನಗಳಿಂದ ಅಲ್ಲ. ಕೇವಲ 2 ದಿನಗಳಿಂದ.''
``ಹ್ಞಾಂ... ಅದನ್ನೇ ಹೇಳುತ್ತಿದ್ದೆ. ಎಲ್ಲವೂ ಸರಿ ಇದೆ ಅಲ್ವಾ?''
``ಎಸ್ ಎವೆರಿಥಿಂಗ್ ಈಸ್ ಫೈನ್..... ಥ್ಯಾಂಕ್ಯೂ. ಅಂದಹಾಗೆ ನೀವು ನನ್ನನ್ನು ಅಬ್ಸರ್ವ್ ಮಾಡುತ್ತೀರೆಂದು ನನಗೆ ಇವತ್ತೇ ಗೊತ್ತಾಯ್ತು,'' ಎಂದು ತನ್ನ ಹೊಳೆಯುವ ಕಣ್ಣುಗಳಿಂದ ಅವಳನ್ನು ನೋಡುತ್ತಾ ಹೇಳಿದ.