ನಾನು ನನ್ನ ಕೆಲಸ ಬೇಗ ಮುಗಿದಿದ್ದರಿಂದ, ನನ್ನ ಪ್ರಾಣ ಸ್ನೇಹಿತನಾದ ಡಾ.ಮಹೇಶ್ ನನ್ನು ನೋಡಲು ಅವನ ಕ್ಲಿನಿಕ್ ಗೆ ಹೋದೆ. ಅವನು ಒಬ್ಬ ಮನೋವೈದ್ಯ, ಅವನ ಸಲಹೆ ಪಡೆಯಲು ಯಾವಾಗಲೂ ಅವನ ಕ್ಲಿನಿಕ್ಕಿನಲ್ಲಿ ಜನಜಂಗುಳಿ ಸದಾ ಇರುವುದು. ಇವತ್ತು ಅಪರೂಪಕ್ಕೆ ಅವನೊಬ್ಬನೇ ಕುಳಿತು ಯಾವುದೋ ಮೆಡಿಕಲ್ ಜರ್ನಲ್ ನೋಡುತ್ತಿದ್ದಾಗ ನನ್ನನ್ನು ನೋಡಿ - ಏಯ್ ಸುರೇಶ, ಎಷ್ಟು ದಿನವಾಯ್ತೋ ನಿನ್ನ ನೋಡಿ, ಬಾರೋ ಕೂತ್ಕೋ ಎಂದನು. ನಾವು ಅದು ಇದು ಅಂತ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ.....
ಒಬ್ಬ ಒಂಬತ್ತು ಹತ್ತು ವರ್ಷದ ಗಂಡು ಹುಡುಗ, ಅವನ ಜೊತೆಗೆ ಅವನ ಅಪ್ಪ ಅಮ್ಮ, ಅವನ ಎರಡು ಕಡೆಯ ಅಜ್ಜ, ಅಜ್ಜಿಯರು ಸೇರಿ, ಒಟ್ಟು ಏಳು ಜನ ಒಳಗೆ ಬಂದದ್ದನ್ನು ನೋಡಿ, ನಾನು ಹೊರಡಲು ಅನುವಾದಾಗ, ಡಾ.ಮಹೇಶ್ - ಏಯ್ ನೀನು ಇಲ್ಲೇ ಇರು ಪರವಾಗಿಲ್ಲ, ಅವರೇನಾದರೂ ನಿನ್ನ ಇರುವಿಕೆಗೆ ಪ್ರತಿರೋಧ ತೋರಿಸಿದರೆ, ನೀನು ನನ್ನ ಅಸಿಸ್ಟೆಂಟ್ ಅಂತ ಹೇಳುತ್ತೇನೆಂದು ನನ್ನನ್ನು ಅಲ್ಲೇ ಇರಿಸಿಕೊಂಡನು.
ಹೇಳಿ, ನನ್ನಿಂದ ಏನಾಗಬೇಕು ? ಎಂದು ಡಾ.ಮಹೇಶ್ ಕೇಳಲು, ಆ ಹುಡುಗನ ತಾಯಿಯು - ತನ್ನ ಗಂಡನನ್ನು ತೋರಿಸುತ್ತಾ, ಇವರು ಯಾವಾಗ ನೋಡಿದರೂ ತಮ್ಮ ಮೊಬೈಲ್ ಫೋನಿನಲ್ಲಿ ಮುಳುಗಿರುತ್ತಾರೆ, ಸಾಮಾಜಿಕ ಜಾಲತಾಣವೇ ಈಗ ಇವರ ಪ್ರಪಂಚವಾಗಿದೆ. ಈಗೀಗಂತೂ ನನ್ನನ್ನು ನೋಡಿ ಮಾತನಾಡಿಸುವುದಿಲ್ಲ, ನನಗೆ ಒಂದು ಸ್ಮೈಲ್ ಮಾಡಿ ವರ್ಷಗಳೇ ಆಗಿದೆ....ಇತ್ಯಾದಿ ಆಕೆ ದೂರುತ್ತಿದ್ದಾಗಲೇ....
ಅವಳ ಗಂಡ - ಯಾರು ಜಾಸ್ತಿ ಮೊಬೈಲ್ ನೋಡ್ತಾರೆ ಅಂತ ಅವರವರ ಸ್ಕ್ರೀನ್ ಟೈಮ್ ನೋಡಿದರೆ ತಿಳಿಯುತ್ತೆ ಎಂದನು. ಆಗ ಅವನ ಅತ್ತೆಯು - ಈಗಿನ ಎಲ್ಲಾ ಪ್ರಶ್ನೆಗಳಿಗೂ ಮೂಲ ಕಾರಣ ಅವರುಗಳ ಮೊಬೈಲ್ ಫೋನ್ ಆಗಿರುತ್ತೆ ಎಂದು ಹೇಳುತ್ತಾ ನೊಂದುಕೊಂಡರು.
ಆದರೆ, ಇವರು ಸಹ ಟಿವಿ ವಾಹಿನಿಗಳಲ್ಲಿ ಬರುವ ಧಾರಾವಾಹಿಗಳನ್ನು ತಮ್ಮ ಮೊಬೈಲ್ ನೋಡುತ್ತಾ ಇರುವುದನ್ನು ನಾನು ಅನೇಕ ಬಾರಿ ನೋಡಿ ಖಂಡಿಸಿದ್ದೀನಿ ಎಂದರು ಅವರ ಸಂಬಂಧಿಯಾದ ಹುಡುಗನ ತಾಯಿ. ಇವರಿಬ್ಬರ ದೂಷಣೆಯ ನಂತರ ಮತ್ತಷ್ಟು ಪರಿಸ್ಥಿತಿ ಬಿಗಾಡಾಯಿಸುವ ಲಕ್ಷಣಗಳು ಕಂಡು ಬಂದಾಗ, ಆ ಗಂಡನ ತಂದೆಯು - ಈ ಮೊಬೈಲ್ ಗೀಳಿನಿಂದ ಹೇಗೆ ತಪ್ಪಿಸಿಕೊಳ್ಳುವುದು ಅಂತ ಹೇಳಿ ಡಾಕ್ಟರ್ ಎಂದರು.
ಅಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೆ ಗೊಂದಲದ ಗೂಡಾಗಿದ್ದ ಆ ಹುಡುಗನನ್ನು ನೋಡಿ ಡಾಕ್ಟರ್ ಕೇಳಿದರು - ನೀನು ಏನಾದರೂ ಹೇಳುವುದು ಇದೆಯಾ ಮಗು ಎಂದು ಕೇಳಿದಾಗ, ಇಷ್ಟು ಹೊತ್ತು ಇವರುಗಳು ಹೇಳಿದ್ದನ್ನು ಕೇಳಿದಿರಿ, ಅಬ್ಬಾ, ಈಗಲಾದರೂ ತನ್ನ ಕಡೆ ಗಮನ ಹರಿಸಿದ್ದಕ್ಕೆ ಕಣ್ಣಲ್ಲೇ ಆನಂದ ಸೂಚಿಸುತ್ತಾ - ಈ ಮೊಬೈಲ್ ನಲ್ಲಿ ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಗಳು ಇರುವತನಕ ನಮ್ಮ ಮನೆಯಲ್ಲಿ ಈ ತರಹದ ಜಗಳ ದಿನಾಲೂ ನಡೆಯುತ್ತಲೇ ಇರುವುದು. ಮನೆಯಲ್ಲಿ ಶಾಂತಿಯ ವಾತಾವರಣವೇ ಇರಲ್ಲ. ನನ್ನ ತಂದೆ ತಾಯಿ, ನಾನು ಏನು ಮಾಡುತ್ತೀನಿ, ಏನು ತಿನ್ನುತ್ತೀನಿ ಎನ್ನುವ ಗಮನವೇ ಇಲ್ಲ, ನನ್ನ ಹತ್ತಿರ ಮಾತನಾಡುವುದು ಅಂದರೆ, ಊಟಕ್ಕೆ ಬಾ ಅನ್ನುವುದಷ್ಟೇ, ಅಲ್ಲಿ ಸಹ ನಾನೇ ಬಡಿಸಿಕೊಳ್ಳಬೇಕು. ಅವರುಗಳು ಮೊಬೈಲ್ ನೋಡಿಕೊಂಡೇ ಊಟ ಮಾಡ್ತಾರೆ, ಅವರಿಗೆ ಯಾವುದರ ಪರಿವೆಯೂ ಇರುವುದಿಲ್ಲ. ನನ್ನಪ್ಪ ಅಮ್ಮ ನನ್ನನ್ನು ತಬ್ಬಿ ಮುದ್ದಾಡಿ, ಮುತ್ತಿಟ್ಟು ಹಲವಾರು ವರ್ಷಗಳೇ ಆಯಿತು. ಮುಂಚೆ ಬರೀ ಬೇಸಿಕ್ ಫೋನ್ ಇದ್ದಾಗ, ಅದನ್ನು ಬರೀ ಮಾತನಾಡಲು ಉಪಯೋಗಿಸುತ್ತಿದ್ದರು, ಆಗ ಎಲ್ಲಾ ಸರಿಯಿತ್ತು. ಈಗ ಸುಮಾರು ಮೂರು ವರ್ಷದ ಮುಂಚೆ ಯಾವಾಗ ಎಲ್ಲರ ಬಳಿ ಒಂದೊಂದು ಆಂಡ್ರಾಯ್ಡ್ ಫೋನ್ ಬಂತೋ ಆಗಲಿಂದ ಇವರ ಜೀವನ ಶೈಲಿಯೇ ಬದಲಾಗಿಹೋಯಿತು...! ಎಂದನು ಆ ಮನನೊಂದ ಹುಡುಗ.