ಅನಾದಿ ಕಾಲದಿಂದಲೂ ಹೆಣ್ಣು ಗಂಡಿನ ಅಡಿಯಾಳಾಗಿ, ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಹಿಂಸೆ ಅನುಭವಿಸುತ್ತಲೇ ಬಂದಿದ್ದಾಳೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು ಈ ಸ್ಥಿತಿಯಲ್ಲಿ ಬಹಳ ಬದಲಾವಣೆಗಳಾಗಿವೆ, ಸ್ಥಿತಿ ಸುಧಾರಿಸಿದೆ. ಕಾಲಕ್ಕೆ ತಕ್ಕಂತೆ ನಮ್ಮ ದೇಶದಲ್ಲಿ ಕ್ರಮೇಣ ಕೆಲವು ಬದಲಾವಣೆಗಳಾಗಿ ಹೆಣ್ಣು ಗಂಡಿಗೆ ಸರಿಸಮನವಾಗಿ ಹೆಜ್ಜೆ ಹಾಕುವಂತಾಗಿದೆ. ಈ ಕುರಿತು ವಿವರವಾಗಿ ಒಂದು ಕಣ್ಣೋಟ ಹರಿಸೋಣವೇ….?
ಇತ್ತೀಚೆಗೆ ಮೇಕ್ ಇನ್ ಇಂಡಿಯಾದ ಆಧಾರದಿಂದ ತಯಾರಾದ ನೌಕೆ ತಾರಿಣಿಯಲ್ಲಿ ಸವಾರರಾಗಿ ಹೊರಟ ಮಹಿಳಾ ಅಧಿಕಾರಿಗಳು ಹೊಸದೊಂದು ಕ್ರಾಂತಿಕಾರಕ ಸಾಹಸಿ ಅಭಿಯಾನಕ್ಕೆ ಕಾರಣಕರ್ತರಾಗಿದ್ದಾರೆ.
19 ಸೆಪ್ಟೆಂಬರ್ 2017 ರಂದು ಐಶ್ವರ್ಯಾ, ಎಸ್. ವಿಜಯಾ, ವರ್ತಿಕಾ ಜೋಷಿ, ಪ್ರತಿಭಾ ಜಾಮ್ವಲಾ, ಪಿ. ಸ್ವಾತಿ ಮತ್ತು ಪಾಯಲ್ ಗುಪ್ತ ತಾರಿಣಿಯಲ್ಲಿ ತಮ್ಮ ಪ್ರಯಾಣ ಶುರು ಮಾಡಿದ್ದರು. 19 ಮೇ 2018ರಲ್ಲಿ ಅವರು 21,600 ನಾಟಿಕ್ ಮೈಲ್ಸ್ ಅಂದರೆ 216 ಸಾವಿರ ಸಾಗರ ಮೈಲಿಗಳನ್ನು ದಾಟಿ ಸುರಕ್ಷಿತವಾಗಿ ಮರಳಿ ಬಂದಿದ್ದರು. ಈ ಅಭಿಯಾನಕ್ಕಾಗಿ ಸುಮಾರು 254 ದಿನಗಳ ಕಾಲ ತೆಗೆದುಕೊಂಡಿದ್ದರು ಹಾಗೂ ಇದರ ಜೊತೆಗೆ ಈ ಆವರು ನೇವಿ ಮಹಿಳಾ ಅಧಿಕಾರಿಗಳು ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಿಸಿದರು. 21 ಮೇ, 2018 ರಂದು ಅವರು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಪೋಲೆಂಡ್, ದ.ಆಫ್ರಿಕಾಗಳಲ್ಲಿ ಪ್ರಯಾಣ ಹೊರಟು ಗೋವಾ ತಲುಪಿದರು. ಅವರ ಮುಂದೆ ಅನೇಕ ಸವಾಲುಗಳಿದ್ದವು. ಗಂಡಸರಂತೆಯೇ ಇವರು ಯಶಸ್ವಿಯಾಗಿ ಅದನ್ನು ಸಾಧಿಸಿದ್ದರು. ಇವರೇ ಇಂದಿನ ಆಧುನಿಕ ಹೆಂಗಸರು, ತಮ್ಮಲ್ಲಿ ಬದಲಾದ ಛವಿ ತುಂಬಿಕೊಂಡಿದ್ದಾರೆ, ಮುಂದೆ ನುಗ್ಗಿ ಯಾವುದೇ ಅಪಾಯವನ್ನು ಎದುರಿಸುವ ಸಾಮರ್ಥ್ಯ ಉಳ್ಳವರಾಗಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ಸ್ವಾತಂತ್ರ್ಯದ 7 ದಶಕಕ್ಕಿಂತಲೂ ಹೆಚ್ಚಿನ ಈ ಕಾಲದಲ್ಲಿ ನಮ್ಮ ದೇಶದ ಹೆಂಗಸರ ಜೀವನ ಬಹಳಷ್ಟು ಬದಲಾಗಿದೆ. ಅವರ ಸ್ಥಿತಿ ಎಷ್ಟೋ ಸುಧಾರಿಸಿದೆ. ಅವರಿಗೆ ಎಷ್ಟೋ ಹೊಸ ಹಕ್ಕುಗಳು ದೊರಕಿವೆ. ಹಲವಾರು ಬಂಧನಗಳಿಂದ ಮುಕ್ತಿ ದೊರಕಿವೆ. ಎಷ್ಟೋ ಹಕ್ಕುಗಳನ್ನು ಪಡೆಯುವುದಕ್ಕಾಗಿ ನಿರಂತರ ಹೋರಾಟ ನಡೆಸಿದ್ದಾರೆ. ಹಲವಾರು ಕಡೆ ಯಶಸ್ಸಿನ ತುದಿ ತಲುಪಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಗಂಡಸರನ್ನೂ ಮೀರಿಸಿದ್ದಾರೆ. ಆದರೆ ಒಂದು ವಿಷಯವಂತೂ ನಿಜ. ಅವರ ಜೀವನ ಹಿಂದಿನ ಕಾಲದಂತೆಯೇ ಯಾತನಾಮಯವಾಗಿದೆ. ಇಂದಿಗೂ ಸಹ ಅವರಿಗೆ ಸಮಾಜದಲ್ಲಿ ಎರಡನೇ ದರ್ಜೆಯೇ ಖಾಯಂ, ಇಂದಿಗೂ ಅವರ ದೈಹಿಕ ಶೋಷಣೆ ತಪ್ಪಿಲ್ಲ. ಅವರ ಕೈ ಈಗಲೂ ಖಾಲಿ ಖಾಲಿ. ಈ 75 ವರ್ಷಗಳಲ್ಲಿ ಹೆಂಗಸರ ಜೀವನದಲ್ಲಿ ಆದ ಬದಲಾವಣೆಗಳನ್ನು ಗಮನಿಸೋಣವೇ?
ಸಕಾರಾತ್ಮಕ ಬದಲಾವಣೆ : ಸಮಾಜ ಮತ್ತು ಕುಟುಂಬದಲ್ಲಿ ಹೆಂಗಸರ ಸ್ಥಿತಿ ನಿಧಾನವಾಗಿ ಸರಿಹೋಗುತ್ತಿದೆ, ಎಷ್ಟೋ ಸಕಾರಾತ್ಮಕ ಪರಿವರ್ತನೆಗಳು ಕಂಡುಬರುತ್ತಿವೆ. ಇಂದಿನ ಸುಶಿಕ್ಷಿತ ನಾರಿ ತನ್ನ ವ್ಯಕ್ತಿತ್ವದ ಐಡೆಂಟಿಟಿ ನೀಡಲು, ಯೋಗ್ಯತೆಯನ್ನು ಸಮಾಜಕ್ಕೆ ತಿಳಿಸಿಕೊಡಲು ಹೆಣ್ಣು ಸುಶಿಕ್ಷಿತಳಾಗಲೇಬೇಕು. ಆಗ ಮಾತ್ರ ಅವಳು ತನ್ನ ಹಕ್ಕುಗಳನ್ನು ತಿಳಿಯಲು, ಕರ್ತವ್ಯಗಳನ್ನು ಗುರುತಿಸಲು, ಜವಾಬ್ದಾರಿ ನಿಭಾಯಿಸಲು ಸಮರ್ಥಳಾಗುತ್ತಾಳೆ. ಹೆಂಗಸರ ಪ್ರಗತಿಯಲ್ಲಿ ಶಿಕ್ಷಣ ಎಲ್ಲಕ್ಕಿಂತ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಸ್ವಾತಂತ್ರ್ಯದ ನಂತರ ಹೆಂಗಸರಿಗೆ ಸಮಾನ ಹಕ್ಕುಗಳು ಸಿಗತೊಡಗಿವೆ, ಶಿಕ್ಷಣದ ಸೌಲಭ್ಯ ಹೆಚ್ಚಿದೆ. ಇಲ್ಲಿಂದಲೇ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆಯ ಈ ಹೆಂಗಸರ ಪ್ರಪಂಚ ಬದಲಾಗತೊಡಗಿತು. ಶಿಕ್ಷಣದ ಕಾರಣ ಹೆಂಗಸರ ಚೇತನ ಜಾಗೃತಗೊಂಡಿದೆ. ಅವರು ಪರಂಪರಾಗತ, ಪ್ರಾಚೀನ ಕಾಲದ ಯೋಚನಾಧಾಟಿಯಿಂದ ಹೊರಬರಲು ಸಾಧ್ಯವಾಗಿದೆ ಹಾಗೂ ತಮ್ಮ ಹಕ್ಕುಗಳ ಕುರಿತು ಜಾಗರೂಕರಾಗುತ್ತಿದ್ದಾರೆ. ಸುಶಿಕ್ಷಿತರಾದ ಕಾರಣ ನೌಕರಿಗಾಗಿ ಮನೆಯಿಂದ ಹೊರಗೆ ಹೊರಡುತ್ತಿದ್ದಾರೆ. ಗಂಡಸರ ಈ ಸಮಾಜದಲ್ಲಿ ತಮ್ಮ ಸ್ಥಾನವನ್ನು ಸುನಿಶ್ಚಿತಗೊಳಿಸಿ, ಆರ್ಥಿಕ ರೂಪದಲ್ಲಿ ಸ್ವಾವಲಂಬಿಗಳಾಗಿದ್ದಾರೆ.
ಹೆಂಗಸರು ಈಗ ಕೇವಲ ಹೌಸ್ ವೈಫ್ ಪಾತ್ರವನ್ನು ಮಾತ್ರ ನಿಭಾಯಿಸುತ್ತಿಲ್ಲ, ಬದಲಿಗೆ ಹೋಂಮೇಕರ್ ಆಗಿದ್ದಾರೆ. ಮನೆವಾರ್ತೆ ನಡೆಸಲು ಆರ್ಥಿಕ ಸಹಯೋಗ ನೀಡುತ್ತಿದ್ದಾರೆ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತಿದೆ. ಇಂಥ ಹೆಂಗಸರು ಯಾರನ್ನೂ ಅವಲಂಬಿಸದೆ ಮನೆ, ತಾಯಿ ತಂದೆ ಹಾಗೂ ಗಂಡನಿಗೆ ಹಣಕಾಸಿನ ಸಹಕಾರ ನೀಡುತ್ತಾ, ದುಡಿಯುತ್ತಿದ್ದಾರೆ. ಯಾವ ಹೆಂಗಸರು ಹೆಚ್ಚು ಓದಿಲ್ಲವೋ ಅವರೂ ಸಹ ತಮ್ಮ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಾ ಮುಂದೆ ಅವರ ಹೆಚ್ಚಿನ ಪ್ರಗತಿ ಬಯಸುತ್ತಾರೆ, ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುತ್ತಾರೆ. ಇದು ಖಂಡಿತಾ ಸಕಾರಾತ್ಮಕ ರೂಪವಾಗಿದೆ.
ಕಳೆದ 7 ದಶಕಗಳಲ್ಲಿ ಹೆಂಗಸರು ನೌಕರಿ ಮಾಡುವ ದರದಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಇಂದು ಸಾಕಷ್ಟು ಹೆಂಗಸರು ಅತಿ ಉನ್ನತ ಹುದ್ದೆಗಳಲ್ಲಿ ದುಡಿಯುತ್ತಿದ್ದಾರೆ. ಅವರು ಗಂಡಸರಿಗೆ ಸರಿಸಮಾನರಾಗಿ ಹೆಗಲು ಕೊಡುತ್ತಿದ್ದಾರೆ, ಜೊತೆಗೆ ಈ ಎಲ್ಲಾ ಕಾರಣಗಳಿಂದಾಗಿ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಂದು ಅವರು ತಮ್ಮ ಅಭಿಪ್ರಾಯವನ್ನು ಎಲ್ಲರ ಮುಂದೆ ಚರ್ಚಿಸುತ್ತಿದ್ದಾರೆ. ತಮ್ಮ ಹಕ್ಕುಗಳನ್ನು ಪಡೆಯಲು ತತ್ಪರರಾಗಿದ್ದಾರೆ. ಅವರು ಈಗ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೆಂಗಸರಿಗೆ ಸಂಬಂಧಿಸಿದ ಹಲವು ಕ್ಯಾಂಪೇನ್ ಗಳು ಈ ಮಾಧ್ಯಮಗಳ ಮೂಲಕ ಅವರಿಗೆ ಸಕಾರಾತ್ಮಕ ಪರಿಣಾಮ ದೊರಕಿಸಿ ಕೊಡುತ್ತಿವೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ತಾಜಾ ವರದಿ ಪ್ರಕಾರ ಶಿಕ್ಷಣದಲ್ಲಿ ಹೆಂಗಸರ ಭಾಗವಹಿಸುವಿಕೆ ಹೆಚ್ಚುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಸೇರ್ಪಡೆ ಸತತ ಹೆಚ್ಚುತ್ತಿದೆ. ಒಂದು ದಶಕದ ಹಿಂದೆ ನಡೆದ ಸಮೀಕ್ಷೆ ಪ್ರಕಾರ ಶಿಕ್ಷಣದಲ್ಲಿ ಹೆಂಗಸರ ಪಾಲುದಾರಿಕೆ 55.1% ಇದ್ದದ್ದು ಈಗ ಹೆಚ್ಚಿ 68.4% ತಲುಪಿದೆ. ಅಂದರೆ ಈ ಕ್ಷೇತ್ರದಲ್ಲಿ ಸರಾಸರಿ 13%ಗೂ ಹೆಚ್ಚಳವಾಗಿದೆ. ಆಧುನಿಕ ಟೆಕ್ನಾಲಜಿ ಸಹ ಹೆಂಗಸರ ಜೀವನದಲ್ಲಿ ಶಿಕ್ಷಣದ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಹೆಣ್ಣುಮಕ್ಕಳು ದೊಡ್ಡ ದೊಡ್ಡ ಶಾಲಾ ಕಾಲೇಜುಗಳನ್ನು ಸೇರಿ ತಮ್ಮ ಕಲಿಕೆ ಮುಂದುವರಿಸಲು ನೆರವಾಗಿದೆ. ಆನ್ ಲೈನ್ ಕಂಪನಿಗಳ ಮೂಲಕ ಸಂಪರ್ಕ ಹೊಂದಿ ತಮ್ಮ ಉತ್ಪನ್ನಗಳನ್ನು ಮನೆಯಲ್ಲೇ ಕುಳಿತು ಮಾರಾಟ ಮಾಡುವಂತಾಗಿದೆ.
ಮನದಿಂದಲೂ ಸ್ವತಂತ್ರರು
ಹೆಂಗಸರು ಈಗ ತಮ್ಮ ಮನಸ್ಸಿನ ಲಹರಿಯಂತೆ ನಡೆಯುತ್ತಿದ್ದಾರೆ ಹಾಗೂ ಅನೇಕ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಮರ್ಪಕ ನಿರ್ಣಯ ಕೈಗೊಳ್ಳುವಲ್ಲಿ ಹಿಂಜರಿಯುತ್ತಿಲ್ಲ. ಅಂದರೆ ಅವರು ಈಗ ಮನದಿಂದಲೂ ಸ್ವತಂತ್ರರು. ಅವರು ಒಂದು ಕಾರ್ಯ ಕೈಗೊಳ್ಳಲು ನಿರ್ಧರಿಸಿದರೆ, ಅದನ್ನು ಮಾಡದೆ ಬಿಡರು.
ಮನಸ್ಸಿನಲ್ಲಿ ಏನಾದರೂ ಕಷ್ಟಕರ ಸಾಹಸಿ ಕೆಲಸ ಕೈಗೊಳ್ಳಲು ನಿರ್ಧರಿಸಿದರೆ, ಅದನ್ನು ಯಶಸ್ವಿಯಾಗಿ ಸಾಧಿಸಿಯೇ ತೋರಿಸುತ್ತಾರೆ. ಇದನ್ನು ಚೆನ್ನಾಗಿ ರೂಢಿಸಿಕೊಂಡಿದ್ದಾರೆ. 10-20 ವರ್ಷಗಳ ಹಿಂದೆ ಯಾವುದನ್ನು ಯೋಚಿಸಲು ಹಿಂಜರಿಯುತ್ತಿದ್ದರೋ ಅದನ್ನೇ ಈಗ ಮಾಡಿ ತೋರಿಸುತ್ತಿದ್ದಾರೆ. ಅವರ ಬಳಿ ಈಗ ಅನೇಕ ಮಾರ್ಗಗಳಿವೆ, ಹುಮ್ಮಸ್ಸು ತುಂಬಿದೆ. ಹೆಂಗಸರು ಪರಸ್ಪರರಿಗೆ ಪ್ರೇರಣಾ ಶಕ್ತಿ ಆಗಿದ್ದಾರೆ. ಇದು ಸ್ವತಂತ್ರ ಭಾರತದ ಹೆಂಗಸರಲ್ಲಿನ ಹೊಸ ಛವಿ ಆಗಿದೆ ಅಂದುಕೊಂಡದ್ದನ್ನು ಸಾಧಿಸುವುದು ಯಾವುದೇ ದೇಶದ ಪ್ರಗತಿ ಅದರ ಮಾನವ ಸಂಪನ್ಮೂಲವನ್ನು ಅವಲಂಬಿಸಿದೆ. ಇದರಲ್ಲಿ ಗಂಡಸು ಹೆಂಗಸರ ಪಾತ್ರ ಸಮಾನವಾಗಿದೆ. ಸ್ವಾತಂತ್ರ್ಯ ದೊರೆತ ನಂತರ ನಮ್ಮ ದೇಶದಲ್ಲಿ ಎಲ್ಲಾ ನಾಗರಿಕರಿಗೂ ಸಮಾನ ಹಕ್ಕು ಸಿಕ್ಕಿದೆ. ಇದರಿಂದ ಅವರ ಪ್ರಗತಿ ಮೇಲೇರುತ್ತಿದೆ. ಹೆಂಗಸರು ಪ್ರತಿ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯ, ಪ್ರತಿಭೆ ನಿರೂಪಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರ, ವಿಜ್ಞಾನ, ರಾಜಕೀಯ, ಕಾರ್ಪೊರೇಟ್ ಜಗತ್ತು, ಕಲೆ, ಸೈನ್ಯ, ಮೆಡಿಕಲ್, ಎಂಜಿನಿಯರಿಂಗ್…… ಇತ್ಯಾದಿ ಎಲ್ಲದರಲ್ಲೂ ತಮ್ಮ ಯೋಗ್ಯತೆ ತೋರ್ಪಡಿಸುತ್ತಿದ್ದಾರೆ. ಇಂದು ವಿದೇಶ ಮತ್ತು ಗೃಹ ರಕ್ಷಣೆಯಂಥ ಮಹತ್ವಪೂರ್ಣ ಸಚಿವಾಲಯಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ವಹಿಸಿ ಹೆಂಗಸರು ಯಶಸ್ವಿಯಾಗಿದ್ದಾರೆ. ದೇಶದ ಸರ್ವೋಚ್ಚ ಪದವಿಗಳನ್ನು ತಲುಪಿದ್ದಾರೆ. ಫೈಟರ್ ಪೈಲಟ್ ಗಳಾಗಿ ದೇಶದ ರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಈ ಎಲ್ಲಾ ಬದಲಾವಣೆಗಳೂ ಬಹಳ ಸಕಾರಾತ್ಮಕವಾದವು. ಈಗ ಮನೆಯಲ್ಲಿನ ಗಂಡಸರು ತಂದೆ, ಅಣ್ಣ ತಮ್ಮ, ಗಂಡ ಯಾರೇ ಆಗಿರಲಿ ಹೆಂಗಸರಿಗೆ ಹೆಚ್ಚಿನ ಮಹತ್ವ ನೀಡುತ್ತಾ ಸಹಕರಿಸುತ್ತಿದ್ದಾರೆ.
ತಮ್ಮ ಇಷ್ಟದಂತೆ ಬದುಕು
ವಿಶೇಷವಾಗಿ ನಮ್ಮ ಮಹಾ ನಗರಗಳ ಹೆಣ್ಣುಮಕ್ಕಳ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಂದು ಅವರಿಗೆ ದೈಹಿಕ ಪೋಷಣೆ ಮತ್ತು ಮಾನಸಿಕ ವಿಕಾಸಕ್ಕಾಗಿ ಸಮಾನ ಅವಕಾಶಗಳು ಸಿಗುತ್ತಿವೆ. ಮನೆಯಿಂದ ಹೊರಬಂದು ಅಗತ್ಯದ ಕೆಲಸಗಳಿಗಾಗಿ ತಡರಾತ್ರಿಯಾದರೂ ಅದನ್ನು ಪೂರೈಸಿಕೊಂಡು ಹೊರಡುತ್ತಿದ್ದಾರೆ, ಯಾವುದೇ ಭಯವಿಲ್ಲದೆ ರಾತ್ರಿ ಪಾಳಿಯ ಡ್ಯೂಟಿ ನಿಭಾಯಿಸುತ್ತಾ ತಮ್ಮಿಷ್ಟದ ಉಡುಗೆ ತೊಡುವಲ್ಲೂ ಮುಂದಾಗಿದ್ದಾರೆ. ಸಮಾಜದ ಮರ್ಜಿ ಕಾಯಲೇಬೇಕು ಎಂಬ ಹಂಗಿಲ್ಲ. ತಮ್ಮಿಷ್ಟದಂತೆ ಸಂಗಾತಿ ಆರಿಸಿಕೊಳ್ಳಲು ಸಶಕ್ತರಾಗಿದ್ದಾರೆ. ಮನ ಬಯಸಿದರೆ ಬುರ್ಖಾ ಧರಿಸುತ್ತಾರೆ ಅಥವಾ ಬಿಕಿನಿ ತೊಡುತ್ತಾರೆ. ಇಷ್ಟ ಬಂದಂತೆ ಮೇಕಪ್ ತಿದ್ದಿ ತೀಡಿ, ಫ್ಯಾಷನೆಬಲ್ ಆಗಿ ಪಾರ್ಟಿ ಎಂಜಾಯ್ ಮಾಡುತ್ತಾರೆ. ಮದುವೆ ಅನಿವಾರ್ಯ ಎನ್ನುವ ಹಾಗಿಲ್ಲ. ಅವಳು ತನ್ನಿಷ್ಟದಂತೆ ಒಬ್ಬಂಟಿಯಾಗಿಯೂ ಇರಬಲ್ಲಳು, ವ್ಯಂಗ್ಯವಾಡುವಂತಿಲ್ಲ. ತನ್ನಿಷ್ಟದ ನೌಕರಿ ನಿಭಾಯಿಸುತ್ತಾ ಸ್ವಾವಲಂಬಿಯಾಗಿ ಬದುಕು ನಡೆಸುತ್ತಿದ್ದಾರೆ.
ಮನೆಯಲ್ಲಿ ಗೌರವಾದರ
ಶಿಕ್ಷಣ ಮತ್ತು ಜಾಗರೂಕತೆಯ ಪರಿಣಾಮ ಮನೆಯ ಹಿಂಸೆ ದೌರ್ಜನ್ಯಗಳನ್ನು ಹಿಂದಿಕ್ಕಿದೆ. ಇಂತಹ ಪ್ರಕರಣಗಳು ಮೊದಲಿಗಿಂತ ಎಷ್ಟೋ ಕಡಿಮೆ ಆಗಿವೆ. ಒಂದು ವರದಿಯ ಪ್ರಕಾರ ವೈವಾಹಿಕ ಜೀವನದಲ್ಲಿ ಹಿಂಸೆ ಅನುಭವಿಸುತ್ತಿರುವ ಹೆಂಗಸರ ಸಂಖ್ಯೆ 37.2% ಗಿಂತ ತಗ್ಗಿ 28.8% ಆಗಿದೆ. ಸಮೀಕ್ಷೆಯಲ್ಲಿ ತಿಳಿದ ಮತ್ತೊಂದು ವಿಷಯವೆಂದರೆ, ಗರ್ಭ ಧರಿಸಿದ್ದಾಗ ಕೇವಲ 3.3% ಹೆಂಗಸರು ಮಾತ್ರ ಹಿಂಸೆ ಎದುರಿಸಿದ್ದಾರೆ.
ಮತ್ತೊಂದು ಸಮೀಕ್ಷೆ ಪ್ರಕಾರ 15-49 ವರ್ಷದ ಹೆಂಗಸರಲ್ಲಿ 84% ವಿವಾಹಿತೆಯರು ಮನೆಯಲ್ಲಿನ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಮುಂದಾಗಿದ್ದಾರೆ. ಇದಕ್ಕೆ ಮೊದಲು 2005-06 ರಲ್ಲಿ ಈ ಅಂಕಿಅಂಶ ಕೇವಲ 76% ಇತ್ತು. ಹೊಸ ಅಂಕಿಅಂಶಗಳ ಪ್ರಕಾರ ಸುಮಾರು 38% ಹೆಂಗಸರು ಒಬ್ಬಂಟಿಯಾಗಿ ಅಥವಾ ಜಂಟಿಯಾಗಿ ಜಮೀನು ಆಸ್ತಿಗಳ ಒಡತಿಯರಾಗುತ್ತಿದ್ದಾರೆ. ಇಂದಿನ ಬದಲಾಗುತ್ತಿರುವ ಸನ್ನಿವೇಶದಲ್ಲಿ ಯಾವ ರೀತಿ ಹೆಣ್ಣು ಗಂಡಿಗೆ ಸರಿಸಮಾನಳಾಗಿ ಹೆಜ್ಜೆ ಹಾಕುತ್ತಿದ್ದಾಳೆಂದರೆ, ಸದಾ ಪ್ರಗತಿಯ ಪಥದಲ್ಲಿದ್ದಾಳೆ ಎಂದೇ ಹೇಳಬಹುದು. ಅವಳು ಇಂದಿನ ಸಮಾಜದ ಹೆಮ್ಮೆ ಹಾಗೂ ಯಶಸ್ಸಿನ ಪ್ರತೀಕವಾಗಿದ್ದಾಳೆ. ಇಂದು ರಾಜಕೀಯ, ಟೆಕ್ನಾಲಜಿ, ಸುರಕ್ಷತೆಯ ಸಮೇತ ಪ್ರತಿ ಕ್ಷೇತ್ರದಲ್ಲೂ ಗಂಡಿನ ಸರಿಸಮಾನವಾಗಿ ದುಡಿದು ಯಶಸ್ವಿಯಾಗುತ್ತಿದ್ದಾಳೆ. ಇಂದು ಹೆಣ್ಣು ದುಡಿಯಲಾರಳು ಎಂಬ ಕ್ಷೇತ್ರವೇ ಇಲ್ಲ. ಇಷ್ಟೆಲ್ಲಾ ಆದ ನಂತರ ಅವಳು ಒಬ್ಬ ಹೋಮ್ ಮೇಕರ್ ರೂಪದಲ್ಲಿ ತನ್ನ ಸ್ಥಾನ ಪಡೆದಿದ್ದಾಳೆ. ಇತ್ತೀಚೆಗೆ ಭಾರತದಲ್ಲಿ ಮಹಿಳಾ ಸಶಕ್ತೀಕರಣದ ನಿಟ್ಟಿನಲ್ಲಿ ಅಭೂತಪೂರ್ವ ಹೆಜ್ಜೆಗಳನ್ನಿರಿಸುತ್ತಾ, ದೇಶದ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ 3ನೇ ಒಂದು ಭಾಗದಷ್ಟು ಪಾಲುದಾರಿಕೆ ದೃಢಪಟ್ಟಿದೆ. ಜೊತೆಗೆ ಮತ್ತೊಂದು ಸತ್ಯವೆಂದರೆ ಮಹಿಳಾ ಮೀಸಲಾತಿಯ ಲಾಭವನ್ನು ಕೇವಲ ಸುಶಿಕ್ಷಿತ ಮತ್ತು ಯೋಗ್ಯ ಹೆಂಗಸರು ಮಾತ್ರ ಪಡೆಯಬಹುದಾಗಿದೆ. ಇಂದೂ ಸಹ ಯಾವ ಹೆಂಗಸರು ಪರದೆಯ ಹಿಂದೆ ಉಳಿಯಬಯಸುತ್ತಾರೋ ಅವರ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ.
ಹೆಚ್ಚಿನ ಪ್ರಯಾಸದ ಅಗತ್ಯ
ಒಂದು ನಾಣ್ಯದ ಎರಡೂ ಭಾಗಗಳನ್ನು ಗಮನಿಸಲೇಬೇಕಾಗುತ್ತದೆ. ಒಂದು ಕಡೆ ಹೆಂಗಸರು ಮನೆಯಿಂದ ಹೊರಗೆ ಹೋಗಬಾರದು ಎಂದು ಹೇಳಲಾಗುತ್ತದೆ. ರೇಪ್ ನಂಥ ಕರ್ಮಕಾಂಡಗಳು ನಡೆದಾಗ ನಮ್ಮ ಸಮಾಜ, ಆ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರ ತಳೆಯಲು ಕಾರಣವಾಗುತ್ತದೆ. ಜೊತೆಗೆ ಹೆಣ್ಣು ಭ್ರೂಣಹತ್ಯೆಯಂತಹ ಹೀನ ಕೃತ್ಯಗಳು ಸಮಾಜದ ಒಪ್ಪಿಗೆಯಿಂದಲೇ ನಡೆದಿದ್ದು ಹೆಣ್ಣಿನ ಪ್ರಗತಿಯಲ್ಲಿ ದೊಡ್ಡ ಅಡ್ಡಗೋಡೆಯಾಗಿದೆ. ಇಂದಿಗೂ ಸಹ ಹೆಣ್ಣನ್ನು ಎಷ್ಟು ಅಗತ್ಯಿವೋ ಅಷ್ಟು ಪ್ರಗತಿ ಹೊಂದಲು ಬಿಡುತ್ತಿಲ್ಲ ಎಂಬುದು ನಿಜ. ಇದಕ್ಕೆ ನಾನಾ ಕಾರಣಗಳಿವೆ. ಮುಖ್ಯವಾಗಿ ನಮ್ಮ ಸಮಾಜ ಪುರುಷ ಪ್ರಧಾನವಾಗಿದೆ. ಪರಿಸ್ಥಿತಿ ಹೇಗಿದೆ ಎಂದರೆ ಹೆಣ್ಣು ಇಂದಿಗೂ ಗಂಡಸಿನ ಭೋಗವಸ್ತುವೇ ಆಗಿದ್ದಾಳೆ. ಜಾಹೀರಾತು, ಸಿನಿಮಾದಂಥ ಕ್ಷೇತ್ರಗಳಲ್ಲಿ ಅವಳನ್ನು ಅಶ್ಲೀಲ ರೂಪದಲ್ಲಿ ಪ್ರದರ್ಶಿಸಲಾಗುತ್ತಿದೆ.
ನಾವು ಒಟ್ಟಾರೆ ಭಾರತದ ನಿಟ್ಟಿನಲ್ಲಿ ವಿಮರ್ಶಿಸುವುದಾದರೆ, ಈಗಲೂ ನಮ್ಮ ದೇಶದಲ್ಲಿ ಹೆಂಗಸರ ಸ್ಥಿತಿಯ ಸುಧಾರಣೆಯ ಅಗತ್ಯವಿದೆ. ಶಿಕ್ಷಣವನ್ನು ಕೆಳ ಹಂತದವರೆಗೂ ಕೊಂಡೊಯ್ದು ನಾವು ಹೆಂಗಸರನ್ನು ಇನ್ನಷ್ಟು ಸಶಕ್ತಗೊಳಿಸುವ ಪ್ರಯಾಸ ನಡೆಸಬೇಕಿದೆ.
ಮಹಿಳಾ ಸಶಕ್ತೀಕರಣದ ನಿಟ್ಟಿನಲ್ಲಿ ದೇಶದಲ್ಲಿ ಪ್ರಗತಿ ನಡೆಯುತ್ತಿದೆ, ಆದರೆ ಎಷ್ಟೋ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಪ್ರಯಾಸಗಳು ಆಗಬೇಕಿವೆ. ಲಿಂಗಾನುಪಾತದ ನಿಟ್ಟಿನಲ್ಲಿ ದೇಶ ಇನ್ನೂ ಹೆಚ್ಚಿನ ಪ್ರಗತಿ ಕಂಡಿಲ್ಲ. ನಗರ ಕ್ಷೇತ್ರಗಳಲ್ಲಿ ಆರೋಗ್ಯ ಸೇವೆ ವಿಸ್ತೃತಗೊಳ್ಳುತ್ತಿದೆ. ಹೀಗಾಗಿ ಹೆರಿಗೆಯಲ್ಲಿ ಸಾವು ಎಷ್ಟೋ ಕಡಿಮೆಯಾಗಿದೆ. ಆದರೆ ಹಳ್ಳಿಗಳ ಸ್ಥಿತಿ ಇನ್ನೂ ಹಾಗೆಯೇ ಇದೆ. ವಿಶ್ವಸಂಸ್ಥೆಯ ಪ್ರಕಾರ ಭಾರತದಲ್ಲಿ ಹೆರಿಗೆಯ ಸಾವು ಮೊದಲಿಗಿಂತ ತಗ್ಗಿದೆ. ಆದರೆ ಸಂಪೂರ್ಣವಾಗಿ ಅಲ್ಲ. ದೇಶದಲ್ಲಿ ಪ್ರತಿ ವರ್ಷ ಹೆಚ್ಚು ಕಡಿಮೆ 4-5 ಸಾವಿರ ಮಹಿಳೆಯರು ಪ್ರಸವದಲ್ಲಿ ಸಾಯುತ್ತಿದ್ದಾರೆ.
ಸಂಬಳದಲ್ಲಿನ ಅಸಮಾನತೆ
ಚ್ಯಾರಿಟಿ ಸಂಘಟನೆಗಳ ಒಂದು ಅಂತಾರಾಷ್ಟ್ರೀಯ ಆಕ್ಸ್ ಫೇಮ್ ಸಂಸ್ಥೆ ಪ್ರಕಾರ, ಭಾರತದಲ್ಲಿ ಗಂಡಸರು ಹೆಂಗಸರ ನಡುವೆ ಸಂಬಳದ ಅಸಮಾನತೆ ವಿಶ್ವದಲ್ಲೇ ಅತಿ ಹೆಚ್ಚು ಕೆಟ್ಟದಾಗಿದೆ. ಮಾನ್ಸಟರ್ ಸ್ಯಾಲರಿ ಇಂಡೆಕ್ಸ್ನ ಅನುಸಾರ ಗಂಡಸರು ಮತ್ತು ಹೆಂಗಸರು ಇಬ್ಬರಿಂದಲೂ ಒಂದೇ ಬಗೆಯ ಕೆಲಸ ಮಾಡಿಸಿದ ಮೇಲೆ ಭಾರತೀಯ ಗಂಡಸರು ಹೆಂಗಸರಿಗಿಂತ 25% ಅಧಿಕ ಗಳಿಸುತ್ತಿದ್ದಾರೆ. ಭಾರತೀಯ ಸಮಾಜದಲ್ಲಿ ಹೆಂಗಸರ ಮೇಲಾಗುತ್ತಿರುವ ಹಿಂಸೆ ಮತ್ತೊಂದು ಘೋರ ವಿಷಯ. ಹೆಂಗಸರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ `ಸರಿಯಾದ ರೀತಿಯಲ್ಲಿ ವ್ಯವಹರಿಸಬೇಕು’ ಎಂಬುದನ್ನು ಕಲಿಸಲಾಗುತ್ತದೆ. ಆದರೆ ಗಂಡಸರಿಗೆ `ಎಲ್ಲಾ ಹೆಂಗಸರನ್ನೂ ಆದರಿಸು’ ಎಂಬುದನ್ನು ಕಲಿಸುತ್ತಿಲ್ಲ. ಇದು ಅಗತ್ಯ ಆಗಬೇಕಿದೆ. ದೇಶದ ಪುರುಷಪ್ರಧಾನ ಸಮಾಜದ ಕಾರಣ, ಭಾರತದಲ್ಲಿ ಮನೆಯ ಆಡಳಿತದ ವಿಷಯದಲ್ಲಿ ಈಗಲೂ ಗಂಡಸರೇ ಎಷ್ಟೋ ನಿರ್ಧಾರಗಳನ್ನು ತಳೆಯುತ್ತಾರೆ. ಮನೆಯ ಕೌಟುಂಬಿಕ ದೌರ್ಜನ್ಯಗಳು ಈಗಲೂ ಸಮಾಜದಲ್ಲಿ ಸ್ವೀಕೃತ ಎನಿಸಿದೆ. ಭಾರತದಲ್ಲಿ ಯುವಜನತೆಯೊಂದಿಗೆ ನಡೆಸಿದ ಸಮೀಕ್ಷೆ ಪ್ರಕಾರ, 57% ಹುಡುಗರು ಮತ್ತು 53% ಹುಡುಗಿಯರು ಭಾವಿಸುವುದೆಂದರೆ, ಹೆಂಗಸರನ್ನು ಗಂಡಸರು ಹೊಡೆದು ಬಡಿದು ಮಾಡುವುದು ಸರಿ ಅಂತೆ.
2015-16ರ ನಡುವೆ ನಡೆದ ಒಂದು ಸಮೀಕ್ಷೆ ಪ್ರಕಾರ, 80% ಉದೋಗಸ್ಥ ವನಿತೆಯರು ತಮ್ಮ ಸಂಗಾತಿಯಿಂದ ಈಗಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಸೈನ್ಯದಲ್ಲಿ ಭಾರತೀಯ ಹೆಣ್ಣಿನ ಪಾಲುದಾರಿಕೆ ಬಹಳ ಕಡಿಮೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ಇದು ಇನ್ನಷ್ಟು ಕಡಿಮೆಯಾಗುತ್ತಿದೆ. ಗಂಡಸರು ಹೆಂಗಸರ ಅನುಪಾತ ಕೇವಲ 0.36. 75 ವರ್ಷಗಳ ನಂತರ ಸ್ವಾತಂತ್ರ್ಯವಿಲ್ಲ ಸ್ವಾತಂತ್ರ್ಯ ದಿನಾಚರಣೆ ಪ್ರತಿ ಭಾರತೀಯರಿಗೂ ವಿಶಿಷ್ಟ ಎನಿಸುತ್ತದೆ. ಏಕೆಂದರೆ ಇದೇ ದಿನ ನಾವು ಆಂಗ್ಲರ ಗುಲಾಮಗಿರಿಯಿಂದ ಬಿಡುಗಡೆ ಕಂಡಿದ್ದು. ಆದರೆ ಹೆಂಗಸರ ಸ್ಥಿತಿಯ ಕುರಿತು ಹೇಳುವುದಾದರೆ, ಇಂದಿಗೂ ಸಹ ಎಷ್ಟೋ ವಿಷಯಗಳಲ್ಲಿ ಅವರಿಗೆ ಸ್ವಾತಂತ್ರ್ಯವಿಲ್ಲ. ಇಡೀ ದೇಶದ ಜನಸಂಖ್ಯೆಯಲ್ಲಿ 49% ಆಗಿರುವ ಹೆಂಗಸರು ಇಂದಿಗೂ ಸಹ ಸುರಕ್ಷತೆ, ಹೊರಗಿನ ಓಡಾಟ, ಆರ್ಥಿಕ ಸ್ವಾತಂತ್ರ್ಯ, ಪೂರ್ವಾಗ್ರಹ ವಿಚಾರ, ಪಿತೃ ಪ್ರಧಾನ ಆಸ್ತಿ ವಶ ಮುಂತಾದ ವಿಷಯಗಳಿಗೆ ಪರಿಹಾರ ಸಿಗುತ್ತಿಲ್ಲ.
ನಿರ್ಣಯದ ಹಕ್ಕಿಲ್ಲ
ನಮ್ಮಲ್ಲಿನ ಪುರುಷಪ್ರಧಾನ ಸಮಾಜ ಗಂಡಸರಿಗೆ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಕೊಟ್ಟಷ್ಟು ಹೆಂಗಸರಿಗೆ ಕೊಡುತ್ತಿಲ್ಲ. ಎಷ್ಟೋ ಹೆಣ್ಣುಮಕ್ಕಳು ತಮ್ಮ ಇಚ್ಛೆಯಂತೆ ಓದು ಮುಂದುವರಿಸಲು ಆಗುತ್ತಿಲ್ಲ. ಆಟೋಟಗಳಲ್ಲಿ ಭಾಗವಹಿಸುವಂತಿಲ್ಲ. ಕೆರಿಯರ್‌ನಿರ್ಧರಿಸುವಂತಿಲ್ಲ, ಎಷ್ಟೋ ಕಡೆ ಸಂಗಾತಿಯ ಆಯ್ಕೆಯ ಹಕ್ಕೂ ಇಲ್ಲ. ಓದು ಅಥವಾ ಕೆಲಸ ಮಾಡುವ ಅವಕಾಶಗಳು, ಆರ್ಥಿಕ ನಿರ್ಧಾರಗಳು, ಗಳಿಕೆಯ ಬಳಕೆ ಮುಂತಾದ ಎಷ್ಟೋ ವಿಷಯಗಳಲ್ಲಿ ಹೆಂಗಸರು ಗಂಡಸರ ಮಾತನ್ನು ಒಪ್ಪಲೇ ಬೇಕಾಗುತ್ತದೆ. ಈ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣು ಭ್ರೂಣಹತ್ಯೆಯಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗಲೂ ವರದಕ್ಷಿಣೆಗಾಗಿ ಹೆಣ್ಣನ್ನು ಸುಡುವುದು, ಅವಳ ಜೀವನವನ್ನು ಅಡುಗೆಮನೆಗಷ್ಟೇ ಸೀಮಿತಗೊಳಿಸುವುದು ನಡೆಯುತ್ತಲೇ ಇದೆ.
ಹಿಂಸೆ, ದುರ್ವ್ಯವಹಾರ, ಶೋಷಣೆ ಭಾರತದಲ್ಲಿ ಇಂದಿಗೂ ಸಹ ಪ್ರತಿ ದಿನ ಹೆಣ್ಣಿಗೆ ಅವಳ ಮನೆ, ಆಫೀಸ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಸುರಕ್ಷತೆಯ ಭೀತಿ ತಪ್ಪಿಲ್ಲ. ಮನೆಯಲ್ಲಿ ದುರ್ವ್ಯವಹಾರ, ಗಂಡನ ಹೊಡೆತ ಬಡಿತ, ಅತ್ತೆ ಮನೆಯವರ ಹಿಂಸೆ, ಆಫೀಸ್ ನಲ್ಲಿ ಲೈಂಗಿಕ ಶೋಷಣೆ ಅಥವಾ ಮಾನಸಿಕ ಒತ್ತಡ, ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ಸ್, ಬೀದಿಯಲ್ಲಿ ಚುಡಾಯಿಸುವಿಕೆ, ರೇಪ್, ಮೊಬೈಲ್ ನಲ್ಲಿ ಬ್ಲಾಂಕ್ ಕಾಲ್ಸ್ ಇತ್ಯಾದಿ ಘಟನೆಗಳು ನಿತ್ಯ ನಿರಂತರ. ಗಂಡನಿಗಿಂತ ಹೆಚ್ಚು ಗಳಿಸುವ 27% ಹೆಂಗಸರು ದೈಹಿಕವಾಗಿ ಹಿಂಸೆಗೆ ಗುರಿಯಾದರೆ, 11% ಮಾನಸಿಕ ಹಿಂಸೆಗೆ ಗುರಿಯಾಗುತ್ತಾರೆ.
ಮದುವೆಯ ನಂತರ ಕೆಲಸ
ಭಾರತದಲ್ಲಿ ಬಹಳಷ್ಟು ಹೆಂಗಸರು ಇಂದಿಗೂ ಸಹ ಹೌಸ್ ವೈಫ್ ಆಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಹೆಂಗಸರು ಮನೆಗೆಲಸಗಳಿಂದ ಖುಷಿಯಾಗಿದ್ದಾರೆ. ಆದರೆ ಕೆಲ ಅನಿಾರ್ಯ ಕಾರಣಗಳಿಂದ ಹೊರಗೆ ಕೆಲಸ ಮಾಡುತ್ತಿಲ್ಲ. ಇಂದು ಎಷ್ಟೋ ಜಾಗಗಳಲ್ಲಿ ಹೆಂಗಸರಿಗೆ ಮದುವೆಯ ನಂತರ ಕೆಲಸ ಮಾಡುವ ಅವಕಾಶ ಇಲ್ಲ. ಕೆಲವು ಗಂಡಸರು ಇಂದಿಗೂ ಸಹ ಪತ್ನಿ ಕೆಲಸ ಮಾಡುವುದನ್ನು ಅಪಮಾನ ಎಂದೇ ಭಾವಿಸುತ್ತಾರೆ.
ಮೆಚ್ಚಿದ ಉಡುಗೆ ಧರಿಸುವಂತಿಲ್ಲ
ಕೆಲವು ದಿನಗಳ ಹಿಂದೆ ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೆಂಗಸರ ಕಟ್ ಜೀನ್ಸ್ ನ್ನು ಖಂಡಿಸುತ್ತಾ, ಇದೆಂಥ ಉಡುಗೆ ಎಂದು ವ್ಯಂಗ್ಯವಾಡಿದ್ದರು. ಮಂಡಿ ತೋರಿಸುವ ಈ ಹೆಂಗಸರದು ಇದೆಂಥ ಸಂಸ್ಕಾರ ಎಂದಿದ್ದರು.
ಇದರಿಂದ ಮುಂದಿನ ಪೀಳಿಗೆ ಏನು ಕಲಿಯುತ್ತದೆ? ಈ ಮಹಿಳೆಯರು ಈ ಮೂಲಕ ಎಂಥ ಸಂದೇಶ ನೀಡುತ್ತಿದ್ದಾರೆ ಎಂದೆಲ್ಲ ಅಂದಿದ್ದರು. ಇದನ್ನು ಅವರೊಬ್ಬರೆ ಅಲ್ಲ, ಇಂಥ ಕಟಕಿಗಳನ್ನು ರಾಜಕೀಯ ಧುರೀಣರು, ಅಥವಾ ದೇಶದ ಹಿತೈಷಿ(?)ಗಳೆಂದು ಹೇಳಿಕೊಳ್ಳುವವರು ಹೇಳುತ್ತಿರುತ್ತಾರೆ. ರಾಜ್ಯ ಆಳುವವರ ಯೋಚನಾಧಾಟಿಯೇ ಹೀಗಿದ್ದರೆ, ಮಾಮೂಲಿ ಜನ ಬಾಯಿ ತೀಟೆಗೆ ಏನೆಲ್ಲ ಹೇಳಬಹುದು? ಹೀಗಿರುವಾಗ ನಮ್ಮ ದೇಶದ ಹೆಂಗಸರಿಗೆ ತಾವು ಬಯಸಿದ ಡ್ರೆಸ್ ಧರಿಸುವ ಸ್ವಾತಂತ್ರ್ಯ ಇಲ್ಲವೇ?
ಹೆಣ್ಣು ಪ್ರದರ್ಶನದ ಬೊಂಬೆ
ಒಂದು ವಿಷಯ ಗಮನಿಸಿದರೆ, ಹೆಂಗಸರು ಇದುವರೆಗೂ ಏನನ್ನೇ ಸಾಧಿಸಿದ್ದರೂ ಅದು ಅವರ ಸ್ವಾವನುಭವ, ಆತ್ಮವಿಶ್ವಾಸ, ಪರಿಶ್ರಮದ ಆಧಾರದಿಂದ ಮಾತ್ರ ಎನ್ನಬಹುದು. ಆದರೆ ಈ ಪುರುಷಪ್ರಧಾನ ಸಮಾಜ ಲೈಂಗಿಕ ಯೋಚನೆಗಳನ್ನು ಹೊರತುಪಡಿಸಿ ಹೊರಗೆ ಬಂದೇ ಇಲ್ಲ. ಹೆಣ್ಣು ಅಂದ್ರೆ ಕೇವಲ ಥಳುಕು ಬಳುಕಿನ, ಮೈ ಪ್ರದರ್ಶಿಸುವ ಬೊಂಬೆ ಎಂದೇ ಇವರು ಭಾವಿಸುತ್ತಾರೆ.
ಖಾಪ್ ಪಂಚಾಯತ್ ನ ಹೆಂಗಸರ ಕುರಿತಾಗಿ ಹೊರಡಿಸಲಾದ ತುಘಲಕ್ ಫರ್ಮಾನ್ ಯಾರಿಗೂ ತಿಳಿಯದ್ದೇನಲ್ಲ. ಇದೇ ಸಮಾಜದಲ್ಲಿ ಪ್ರತಿದಿನ ಬುಲಂದ್ ಶಹರ್ ನಂಥ ಘಟನೆಗಳು ನಮ್ಮ ಪ್ರಗತಿಶೀಲ ಸಮಾಜದ ಮುಖಕ್ಕೆ ಮಸಿ ಬಳಿದಂತಿದೆ. ದಲಿತರು, ನಿರ್ಧನರು, ಅಶಿಕ್ಷಿತ ಹೆಂಗಸರ ಏಳಿಗೆಯ ಕುರಿತಾದ ಮಾತುಗಳು ಎಲ್ಲೋ ಉಳಿದವು. ನಗರದ ಕಲಿತ, ಆಂಗ್ಲ ಪಲುಕು ಜನರೇ ಸಾಮಾಜಿಕ ಸಂಪ್ರದಾಯಗಳಲ್ಲಿ ಬಂಧಿಸಲ್ಪಟ್ಟಿರುವಾಗ ಪ್ರಗತಿ ಎಲ್ಲಿಂದ ಸಾಧ್ಯ?
ಇಡೀ ವಿಶ್ವದ ಸಂಸತ್ತನ್ನು ಗಮನಿಸಿದಾಗ, ಅದರಲ್ಲಿನ ಹೆಂಗಸರ ಸಂಖ್ಯೆ ನೋಡಿದರೆ, ಭಾರತ ಈಗಲೂ 103ನೇ ಸ್ಥಾನದಲ್ಲಿದೆ! ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನದ ಸಂಸತ್ತುಗಳಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಎಷ್ಟೋ ಹೆಚ್ಚಿದೆ. ಇವರನ್ನು ನಮಗಿಂತ ಹಿಂದುಳಿದವರು ಎಂದೇ ಭಾವಿಸುತ್ತೇವೆ.
ಭಾರತದಲ್ಲಿ ಹೆಂಗಸರ ಸ್ಥಿತಿಗತಿ
ಒಟ್ಟಾರೆ ಸ್ವಾತಂತ್ರ್ಯದ 75 ವರ್ಷ ಕಳೆದ ನಂತರ, ಭಾರತದಲ್ಲಿ ಹೆಂಗಸರ ಸ್ಥಿತಿಗತಿ ತೃಪ್ತಿದಾಯಕ ಎನ್ನುವಂತಿಲ್ಲ. ಆಧುನಿಕತೆಯ ಗಾಳಿ ಏನೋ ಢಾಳಾಗಿ ಬೀಸುತ್ತಿದೆ, ಆದರೆ ಹೆಂಗಸರ ಮೇಲೆ ದಿನೇದಿನೇ ನಡೆಯುತ್ತಿರುವ ಅಪರಾಧ ಪ್ರಕರಣಗಳ ಅಂಕಿ ಅಂಶ ಬೆಚ್ಚಿ ಬೀಳಿಸುತ್ತವೆ. ಇಂದಿಗೂ ಸಹ ಅವರನ್ನು ಹಲವಾರು ಧಾರ್ಮಿಕ ಕಟ್ಟಳೆಗಳು, ಕುತ್ಸಿತ ಕಂದಾಚಾರಗಳು, ಲೈಂಗಿಕ ಶೋಷಣೆ, ಲಿಂಗ ತಾರತಮ್ಯ, ಡೊಮೆಸ್ಟಿಕ್ ವಾಯ್ಲೆನ್ಸ್, ಕೆಳಮಟ್ಟದ ಜೀವನಶೈಲಿ, ಅಶಿಕ್ಷಣ, ಅಪೌಷ್ಟಿಕತೆ, ವರದಕ್ಷಿಣೆ ಪಿಡುಗು, ಹೆಣ್ಣು ಭ್ರೂಣಹತ್ಯೆ, ಸಾಮಾಜಿಕ ಅಸುರಕ್ಷತೆ, ನಿರ್ಲಕ್ಷ್ಯದ ಪರಮಾವಧಿ…. ಇತ್ಯಾದಿ ಸಹಿಸಬೇಕಾಗಿದೆ.
ಆದರೂ ಕೆಲವು ಹೆಂಗಸರು ಇಷ್ಟೆಲ್ಲ ಘನಘೋರ ಅಡಚಣೆ ಅಡ್ಡಿ ಆತಂಕ ಎದುರಿಸಿ, ವಿಭಿನ್ನ ಕ್ಷೇತ್ರಗಳಲ್ಲಿ ದೇಶದ ಅತ್ಯುನ್ನತ ಸ್ಥಾನಮಾನಕ್ಕೇರಿದರೂ ಅವರನ್ನು ಟೀಕಿಸದೆ ಬಿಡದು ಈ ಸಮಾಜ.
ಇಂದಿರಾ ಗಾಂಧಿ, ಪ್ರತಿಭಾ ಪಾಟೀಲ್, ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್, ಮಹಾದೇವಿ ವರ್ಮಾ, ಸುಭದ್ರಾ ಕುಮಾರಿ ಚೌಹಾನ್, ಅಮೃತಾ ಪ್ರೀತಂ, ಮಹಾಶ್ವೇತಾ ದೇವಿ, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಶ್ರೇಯಾ ಘೋಷಾಲ್, ಸುನಿಧಿ ಚೌಹಾನ್, ಅಲ್ಕಾ ಯಾಜ್ಞಕ್, ಮಾಯಾವತಿ, ಜಯಲಲಿತಾ, ಮಮತಾ ಬ್ಯಾನರ್ಜಿ, ಮೇಘಾ ಪಾಟ್ಕರ್, ಅರುಂಧತಿ ರಾಯ್, ಚಂದಾ ಕೋಚರ್, ಪಿ.ಟಿ. ಉಷಾ, ಸೈನಾ ನೇಹ್ವಾಲ್, ಸಾನಿಯಾ ಮಿರ್ಜಾ, ಸಾಕ್ಷಿ ಮಲಿಕ್, ಶಾಂತಾ ರಂಗಸ್ವಾಮಿ, ಪಿ.ವಿ. ಸಿಂಧು, ಹಿಮಾದಾಸ್, ವರಲನ್ ಗೋಸ್ವಾಮಿ, ಸ್ಮೃತಿ ಮಂಧಾನಾ, ಮಿತಾಲಿರಾಜ್, ಹರ್ಮನ್ ಪ್ರೀತ್ ಕೌರ್, ಗೀತಾ ಪೋಗಟ್, ಮೇರಿ ಕೋಮ್ ಮುಂತಾದವರು ಈ ನಿಟ್ಟಿನಲ್ಲಿ ಅಗ್ರಗಣ್ಯರು.
ಭಾರತದಂಥ ಪುರುಷ ಪ್ರಧಾನ ದೇಶದಲ್ಲಿ 70ರ ದಶಕದಿಂದ ಮಹಿಳಾ ಸಶಕ್ತೀಕರಣ, ಫೆಮಿನಿಸಂನಂಥ ಶಬ್ದಗಳು ಹೊರಬಂದಿವೆ. ಸರ್ಕಾರೇತರ ಸಂಸ್ಥೆಗಳು ಸಹ ಮಹಿಳೆಯರನ್ನು ಜಾಗೃತಗೊಳಿಸಿ, ಅವರಲ್ಲಿ ತಮ್ಮ ಹಕ್ಕುಗಳನ್ನು ಗುರುತಿಸುವ, ಚೈತನ್ಯ ಪುಟಿದೇಳಿಸುವ, ಸಾಮಾಜಿಕ ಆರ್ಥಿಕ ರೂಪದಲ್ಲಿ ಸಶಕ್ತರನ್ನಾಗಿಸುವ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತಿವೆ. ಹರಿಯಾಣಾ, ರಾಜಾಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಣ್ಣು ಭ್ರೂಣಹತ್ಯೆಯನ್ನು ನಿಲ್ಲಿಸಿ, ದಿನೇ ದಿನೇ ಕುಸಿಯುತ್ತಿರುವ ಲಿಂಗಾನುಪಾತದ ಮಟ್ಟವನ್ನು ಬ್ಯಾಲೆನ್ಸ್ ಮಾಡಲು ಶಿಕ್ಷಣದ ಕ್ಷೇತ್ರದಲ್ಲಿ ಹೆಣ್ಣಿನ ಸ್ಥಿತಿ ಸುಧಾರಿಸಲು `ಬೇಟಿ ಬಚಾವೋ ಬೇಟಿ ಪಡಾವೋ’ (ಹೆಣ್ಣುಮಕ್ಕಳನ್ನು ಉಳಿಸಿ ಶಿಕ್ಷಣ ಕೊಡಿಸಿ) ಯೋಜನೆ ಜಾರಿಗೆ ಬಂದಿದೆ.
ಸ್ವಾತಂತ್ರ್ಯದ ಎಷ್ಟೋ ವರ್ಷಗಳ ನಂತರ ಹೆಂಗಸರಿಗೆ ಸಮಾನ ಹಕ್ಕು, ಸಮಾನ ಅವಕಾಶ, ಸಮಾನ ಸಂಬಳ, ಅಪಮಾನದ ಘಟನೆಗಳ ತಡೆ….. ಇತ್ಯಾದಿಗಳಿಗಾಗಿ ಎಷ್ಟೋ ಸುಧಾರಣೆಗಳನ್ನು ಭಾರತೀಯ ಸಂವಿಧಾನದಲ್ಲಿ ಮಾಡಲಾಗಿದೆ. ಇದರ ಹೊರತಾಗಿ ವರದಕ್ಷಿಣೆ ವಿರೋಧಿ ಕಾನೂನು 1961, ಕುಟುಂಬ ನ್ಯಾಯಾಲಯ ಅಧಿನಿಯಮ 1984, ಸತಿ ನಿಷೇಧ ಅಧಿನಿಯಮ 1987, ರಾಷ್ಟ್ರೀಯ ಮಹಿಳಾ ಆಯೋಗ ಅಧಿನಿಯಮ 1990, ಕೌಟುಂಬಿಕ ದೌರ್ಜನ್ಯ ವಿರೋಧಿ ಅಧಿನಿಯಮ 2005, ಬಾಲ್ಯ ವಿವಾಹ ನಿಷೇಧ ಅಧಿನಿಯಮ 2006, ಕಾರ್ಯಕ್ಷೇತ್ರದಲ್ಲಿ ಹೆಂಗಸರ ಮೇಲೆ ಲೈಂಗಿಕ ಶೋಷಣೆಯ ನಿಷೇಧದ ಅಧಿನಿಯಮ 2013, ಇತ್ಯಾದಿಗಳು ಭಾರತೀಯ ಹೆಂಗಸರಿಗೆ ಅಪರಾಧಗಳ ವಿರುದ್ಧ ಸುರಕ್ಷತೆ ಒದಗಿಸಲು ಹಾಗೂ ಅವರ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಸುಧಾರಿಸಲು ಮಾಡಲಾದ ಪ್ರಮುಖ ಕಾನೂನು ನಿಯಮಗಳಾಗಿವೆ. ಎಷ್ಟೋ ರಾಜ್ಯಗಳ ಗ್ರಾಮನಗರ ಪಂಚಾಯಿತಿಗಳಲ್ಲಿ ಹೆಂಗಸರಿಗಾಗಿ ಸೀಟ್ಸ್ ರಿಸರ್ವ್ಸ್ ಆಗಿವೆ.
ಸ್ತ್ರೀ ಸುರಕ್ಷೆ ಹಾಗೂ ಸಮಾನತೆಗಾಗಿ ಕೈಗೊಳ್ಳಲಾದ ನಮ್ಮ ಪ್ರತಿಯೊಂದು ಹೆಜ್ಜೆಯೂ, ಹೆಣ್ಣಿನ ಸುಧಾರಣೆಯಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತಿವೆ. ಆದರೆ ಸಾಮಾಜಿಕ ಸುಧಾರಣೆಯ ವೇಗವಂತೂ ಆಮೆ ಗತಿಯೇ ಸರಿ, ಇದರ ಸೂಕ್ತ ಪರಿಣಾಮ ಸ್ಪಷ್ಟ ರೂಪದಲ್ಲಿ ಕಂಡುಬರುವುದೇ ಇಲ್ಲ. ನಾವು ಇನ್ನಷ್ಟು ವೇಗವಾಗಿ ಈ ಕ್ಷೇತ್ರಗಳಲ್ಲಿ ಜನಜಾಗೃತಿ, ಶಿಕ್ಷಣ ತಲುಪಿಸುವ ಅಗತ್ಯವಿದೆ.
ಜನ ತಿಳಿಯಬೇಕಾದ ಮುಖ್ಯ ವಿಷಯ ಅಂದರೆ, ದೇಶದ ಪ್ರಗತಿ ಮತ್ತು ಮಹಿಳಾ ವಿಕಾಸ ವಿಭಿನ್ನವಲ್ಲ ಎಂಬುದು. ಇದನ್ನು 2 ವಿಭಿನ್ನ ದೃಷ್ಟಿಗಳಿಂದ ನೋಡುವುದರಿಂದ ಕೇವಲ ವೈಫಲ್ಯ ಕಟ್ಟಿಟ್ಟ ಬುತ್ತಿ. ಹೆಂಗಸರನ್ನು ಪ್ರಗತಿ ಪಥಕ್ಕೆ ತರಲು ಹಲವು ಪ್ರಯಾಸ ಕೈಗೊಳ್ಳಬೇಕು, ಇದರಿಂದ ಅವರು ಸ್ವಾವಲಂಬಿ ಮತ್ತು ಜಾಗೃತರಾಗುತ್ತಾರೆ.
ಇಂದಿಗೂ ಸಹ ರಾತ್ರಿ 10 ಗಂಟೆ ಆಗಿಹೋದರೆ, ಹೆಣ್ಣುಮಕ್ಕಳನ್ನು ಹೊರ ಬಿಡುವುದಿಲ್ಲ, ಏಕೆಂದರೆ ಅಸುರಕ್ಷತೆ ಕಾಡುತ್ತದೆ. ನಿರ್ಭಯಾ ಕರ್ಮಕಾಂಡ ತಮ್ಮ ಮಕ್ಕಳಿಗೆ ಬರಬಾರದೆಂಬುದೇ ಹೆತ್ತವರ ಆಶಯ. ಸಮಾಜದಲ್ಲಿ ಅಖಂಡ ಸುರಕ್ಷತೆಯ ಗ್ಯಾರಂಟಿಯನ್ನು ಸರ್ಕಾರ ರೂಪಿಸುವುದಾದರೆ, ಬೇರೆ ಪ್ರಯಾಸಗಳೇನೂ ಬೇಡ. ಸರ್ಕಾರ ಸುರಕ್ಷತೆ ಒದಗಿಸಬೇಕು, ಕುಟುಂಬಗಳು ಲಿಂಗ ಭೇದ ಮಾಡಬಾರದು. ಇಂಥ ಪ್ರಯತ್ನಗಳು ಆಗಬೇಕಿವೆ.
– ಗಿರಿಜಾ ಶಂಕರ್
ಅಂಕಿಅಂಶಗಳ ಸತ್ಯಾಂಶ
ಅಂಕಿಅಂಶಗಳ ಅನುಸಾರ ಭಾರತದಲ್ಲಿ ಪ್ರತಿ ದಿನ 106 ಹೆಂಗಸರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಇವರಲ್ಲಿ 40% ಅಪ್ರಾಪ್ತ ಮುಗ್ಧ ಬಾಲಕಿಯರು. ಆದರೆ ತೆರೆಮರೆಯಲ್ಲಿ ನಡೆಯುವ, ಸಾರ್ವಜನಿಕರಿಗೆ ತಿಳಿಯದಂಥ 99% ಪ್ರಕರಣಗಳು ಪೊಲೀಸ್ ಸ್ಟೇಷನ್ ತಲುಪುವುದೇ ಇಲ್ಲ ಎಂಬುದೇ ವಾಸ್ತವ.
ಒಂದು ಕಡೆ ಹೆಣ್ಣಿನ ಮೀಸಲಾತಿಯ ಮಸೂದೆ ದಶಕಗಳಿಂದ ಇನ್ನೂ ತ್ರಿಶಂಕು ಸ್ಥಿತಿಯಲ್ಲೇ ಇದೆ, ಅದೇ ಇನ್ನೊಂದು ಕಡೆ 2018ರ ಆರ್ಥಿಕ ಸಮೀಕ್ಷೆಯಿಂದ ತಿಳಿಯುವುದೆಂದರೆ, ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ 49% ಅಂದ್ರೆ ಭಾರತೀಯ ಹೆಂಗಸರ ಪ್ರಾತಿನಿಧ್ಯ, ಸಂಸತ್ತು ಹಾಗೂ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಬಹಳ ಕಡಿಮೆ.
ಇಂದು ದೇಶದ ಬಹುತೇಕ 85% ಗಂಡಸರು ಸುಶಿಕ್ಷಿತರು, ಆದರೆ 65% ಹೆಂಗಸರು ಮಾತ್ರವೇ ಸಾಕ್ಷರರಾಗಿದ್ದಾರೆ. ಆದರೆ ಎಲ್ಲಾ ಪ್ರಮುಖ ಪರೀಕ್ಷೆಗಳಲ್ಲೂ ಹೆಣ್ಣುಮಕ್ಕಳೇ ರಾಷ್ಟ್ರೀಯ ಮಟ್ಟದಲ್ಲಿ ಅತಿ ಮುಂದಿದ್ದಾರೆ ಎಂಬುದು ತಿಳಿದ ವಿಚಾರ! ಆದರೆ ಶಿಕ್ಷಣದಂಥ ಮೂಲಭೂತ ಅಗತ್ಯದಿಂದ ವಂಚಿತ ದೇಶದ ಸಾವಿರಾರು ಹುಡುಗಿಯರು, ಆರಂಭಿಕ ಮಟ್ಟದಲ್ಲೇ ಅಕ್ಷರ ಕಲಿಯದಂತೆ ಆಗುತ್ತಿರುವುದು ವಿಷಾದಕರ. ಅವರು ಮಕ್ಕಳು ಹೆರುವ ಯಂತ್ರಗಳಾಗಿ, ಮನೆಗೆಲಸಕ್ಕೆ ಸೀಮಿತರಾಗುತ್ತಿದ್ದಾರಷ್ಟೆ.
ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ ಹೆಂಗಸರಿಗೆ ಕೇವಲ 25% ಪಾಲು ಸಹ ಇಲ್ಲ. ಒಂದು ವರದಿ ಪ್ರಕಾರ, ಇದರಲ್ಲಿ ಹೆಂಗಸರ ಪಾಲುದಾರಿಕೆ ಕೇವಲ 10% ಹೆಚ್ಚಿಸುವುದರಿಂದ ಭಾರತದ ಸಕಲ ಗೃಹ ಉತ್ಪಾದನೆಯಲ್ಲಿ 70% ಹೆಚ್ಚಳ ಸಾಧ್ಯವಿದೆ.
ದೇಶದಲ್ಲಿ 82% ವಿವಾಹಿತೆಯರು ಗಂಡನಿಂದ ಲೈಂಗಿಕ ಹಿಂಸೆಗೆ ಒಳಗಾಗುತ್ತಾರೆ. ದೇಶದ 6% ವಿವಾಹಿತೆಯರು ಜೀವನದಲ್ಲಿ ಒಮ್ಮೆಯಾದರೂ ಲೈಂಗಿಕ ಹಿಂಸೆಗೆ ಖಂಡಿತಾ ಗುರಿಯಾಗಿರುತ್ತಾರೆ.
ಇಡೀ ದೇಶದಲ್ಲಿ 2020ರಲ್ಲಿ ಸರಾಸರಿ ಅತ್ಯಾಚಾರದ ಪ್ರಕರಣಗಳು ಕನಿಷ್ಠ 77 ಇದ್ದೀತೆಂದು ಅಂದಾಜಿಸಲಾಗಿದೆ, ಒಟ್ಟಾರೆ 28,046 ಪ್ರಕರಣಗಳು ದಾಖಲಾಗಿವೆ. ಇಂಥ ಪ್ರಕರಣಗಳು ರಾಜಾಸ್ಥಾನದಲ್ಲೇ ಹೆಚ್ಚು. ನಂತರದ ಸ್ಥಾನ ಉ.ಪ್ರದೇಶದ್ದು. 2020ರಲ್ಲಿ ಇಡೀ ದೇಶದಲ್ಲಿ ಹೆಂಗಸರ ವಿರುದ್ಧ 3,71,503 ಪ್ರಕರಣಗಳು ದಾಖಲಾಗಿವೆ. ಇದು 2019ರಲ್ಲಿ 4,05,326 ಮತ್ತು 2018ರಲ್ಲಿ 3,78,236 ದಾಖಲಾಗಿತ್ತು.
17ನೇ ಲೋಕಸಭೆಯಲ್ಲಿ ಒಟ್ಟು 14.92% ಹೆಂಗಸರು (81) ಮಾತ್ರ ಇದ್ದರು. ರಾಜ್ಯಸಭೆಯಲ್ಲಿ ಈ ಅಂಕಿಅಂಶ ಮತ್ತಷ್ಟು ಕಡಿಮೆಯಾಗಿ ಕೇವಲ 11.84% ಇತ್ತು. ವಿಶ್ವ ಬ್ಯಾಂಕಿನ ಡೇಟಾ ಪ್ರಕಾರ, ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಕೇವಲ 17% ಮಾತ್ರ! ಈ ಅಂಕಿಅಂಶ ವಿಶ್ವದ ಸರಾಸರಿಯಲ್ಲಿ ಕೇವಲ ಅರ್ಧ ಅಷ್ಟೆ. ಅದೇ ನೆರೆ ರಾಷ್ಟ್ರ ಚೀನಾವನ್ನು ಗಮನಿಸಿದರೆ, ಅಲ್ಲಿನ ಹೆಂಗಸರ ಪಾತ್ರ 40%ಗೂ ಹೆಚ್ಚು!
ಇದರ ಹೊರತಾಗಿ ಲೇಬರ್ ಪೇರ್ಸ್ ನಲ್ಲಿ ಹೆಂಗಸರ ಪಾಲುದಾರಿಕೆ ಗಮನಿಸಿದರೆ, 131 ದೇಶಗಳಲ್ಲಿ ಭಾರತ 120ನೇ ಸ್ಥಾನದಲ್ಲಿದೆ. ಇಂಥದ್ದರಲ್ಲಿ ದೇಶವಿಡೀ ಹೆಂಗಸರ ಸಚಿವಾಲಯದಲ್ಲಿ ಅಡ್ವೈಸರಿ ಜಾರಿಗೊಳಿಸಲಾಗಿದ್ದು, ಒಟ್ಟು ಪೊಲೀಸ್ ಪಡೆಯಲ್ಲಿ ಹೆಂಗಸರ ಸಂಖ್ಯೆ ಕೇವಲ 33% ಇರಬೇಕು. ಆದರೆ 2020ರಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್‌ಡೆವಲಪ್ ಮೆಂಟ್ ನ ಅಂಕಿಅಂಶಗಳ ಪ್ರಕಾರ ದೇಶವಿಡೀ ಪೊಲೀಸರ ಒಟ್ಟು ಸಂಖ್ಯೆಯಲ್ಲಿ (20,91,488) ಮಹಿಳಾ ಪೊಲೀಸರ ಸಂಖ್ಯೆ 2,15,504 ಮಾತ್ರವಿದ್ದು, ಒಟ್ಟು ಸಂಖ್ಯೆಯ 10.30% ಆಗಿದೆ.