ದೇವರ ತಲೆಯ ಮೇಲೆ ಹೂ ತಪ್ಪಿದರೂ ನಾವು ಪ್ರತಿ ದಿನ ಮುಂಜಾನೆ ವಾಕ್ ಹೋಗೋದು ತಪ್ಪಲ್ಲ. ಹೋಗುವಾಗ ಉದ್ದಕ್ಕೂ ಕಾಣುವ ಮರಗಳನ್ನು ಕಂಡು ನನ್ನವರು ಯಾವಾಗಲೂ ಉದ್ಗರಿಸುವ ಮಾತು, `ಮರಗಳನ್ನು ನೆಡುವಾಗ ಹಣ್ಣಿನ ಮರಗಳನ್ನು ನೆಡಬಾರದೇ,’ ಎಂದು. ಅದಕ್ಕೆ ನಾನು ಉತ್ತರಿಸುತ್ತಿದ್ದೆ, `ಹಣ್ಣಿನ ಮರಗಳನ್ನು ನೆಟ್ಟರೂ ಹಣ್ಣುಗಳು ಉಳಿಯೋಕೆ ಎಲ್ಲಿ ಬಿಡ್ತಾರೆ, ಯಾರಾದರೂ ತಿಂದು ಬಿಡ್ತಾರೆ,’ ಎನ್ನುತ್ತಿದ್ದೆ.
`ಯಾರಾದರೂ ತಿನ್ನಲಿ ಬಿಡು, ಯಾರು ತಿಂದರೇನು?’ ಎನ್ನುವುದು ಅವರ ಉತ್ತರ. ಹೌದಲ್ಲವೇ ಹಣ್ಣಿನ ಮರಗಳನ್ನು ನೆಟ್ಟರೆ ಯಾರಿಗಾದರೂ ಹಣ್ಣು ಸಿಗುತ್ತೆ ಅಲ್ಲವೇ ಎಂದು ನನಗೆ ಆಗ ಜ್ಞಾನೋದಯವಾಯಿತು.
ಈ ರೀತಿ ಯೋಚಿಸುತ್ತಿರುವಾಗಲೇ ಕಳೆದ ಜೂನ್ ಐದನೇ ತಾರೀಖು ವಿಶ್ವ ಪರಿಸರ ದಿನ ಬಂದಾಗ ಕೆಲವು ಹಣ್ಣಿನ ಮರಗಳನ್ನು ನೆಡುವುದು ಎಂದುಕೊಂಡೆ. ಆಗ ನೆನಪಿಗೆ ಬಂದಿದ್ದು ನಮ್ಮ ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್ ನಲ್ಲಿ ಪರಿಸರವನ್ನು ಶುದ್ಧವಾಗಿಡುವ ಸಲುವಾಗಿ ಸದಾ ದುಡಿಯುವ ಸಿಟಿಜನ್ ಫೋರಂ, ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ನಿರಂತರವಾಗಿ ಶ್ರಮಿಸುತ್ತಿದೆ ಎಂಬುದು.
ಮನೆಯ ತ್ಯಾಜ್ಯವನ್ನು ಬಳಸಿ ಗೊಬ್ಬರ ಮಾಡುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದು, ಕಲಿಕಾ ಕೇಂದ್ರದಲ್ಲಿ ಮಿಕ್ಕವರಿಗೂ ಗೊಬ್ಬರ ತಯಾರು ಮಾಡಲು ತರಬೇತಿ ನೀಡುತ್ತಿದೆ. ಕಸದ ಸಂಸ್ಕರಣೆ ಇತರ ಬೇರೆಲ್ಲಾ ಭಾಗಗಳಿಗಿಂತಾ ಎಚ್.ಎಸ್.ಆರ್. ಬಡಾವಣೆಯಲ್ಲಿ ಸಮರ್ಥವಾಗಿ ನಡೆಯಲು ಮುಖ್ಯ ಕಾರಣ ಸಿಟಿಜನ್ ಫೋರಂ.
ಅವರು ಪರಿಸರ ಕಾಪಾಡುವ ದೃಷ್ಟಿಯಿಂದ ಮಾಡುತ್ತಿರುವ ಕೆಲಸಗಳು ಅನೇಕ. ಅಂತೆಯೇ ಇದೂ ಒಂದಷ್ಟೇ. ಕಟ್ಟಡ ನಿರ್ಮಾಣದ ತ್ಯಾಜ್ಯಗಳನ್ನು ತುಂಬಿಸುತ್ತಿದ್ದ ಪಾಳು ಬಿದ್ದಿದ್ದ ಒಂದು ಸಣ್ಣ ಬಿ.ಬಿ.ಎಂ.ಪಿ.ಯ ನಿವೇಶನದಲ್ಲಿ ಹರಸಾಹಸ ಮಾಡಿ ಅಗತ್ಯವಿರುವ ಅನುಮತಿ ಪಡೆದು ಮರಗಳನ್ನು ನೆಟ್ಟು ಅದನ್ನು ಬಯೋ ಡೈವರ್ಸಿಟಿ ಪಾರ್ಕ್ ಎಂದು ಹೆಸರಿಸಿ ಸುತ್ತಲಿನ ಪರಿಸರಕ್ಕೆ ಶುದ್ಧ ಗಾಳಿಯನ್ನು ನೀಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಾವು ಅಲ್ಲಿಯೇ ಕೆಲವು ಹಣ್ಣಿನ ಮರಗಳನ್ನು ನೆಡಲು ನಿಶ್ಚಯಿಸಿದೆ.
ಭಾನುವಾರ ಮನೆ ಮಂದಿಯೆಲ್ಲಾ ಹೋಗಿ ಎಚ್.ಎಸ್.ಆರ್‌ನ ಸಿಟಿಜನ್ ಫೋರಂನ ಸಕ್ರಿಯ ಸದಸ್ಯರಾದ ರತ್ನಾಕರ್, ಅಧ್ಯಕ್ಷರಾದ ರಜಿನಿ ಭೋಪಯ್ಯ, ಕಾರ್ಯದರ್ಶಿ ಸುರೇಶ್ ಬಾಲಸುಬ್ರಹ್ಮಣ್ಯಂ ಇವರೆಲ್ಲರ ಸಹಕಾರದಿಂದ ಹಣ್ಣಿನ ಮರಗಳು, ಮಾವು, ನೇರಳೆ ಮತ್ತು ಸಪೋಟಾ ಅಲ್ಲದೆ ಮತ್ತಷ್ಟು ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದ್ದಾಯಿತು.
ವಿಶ್ವ ಪರಿಸರ ದಿನ
ಪ್ರತಿ ವರ್ಷ ಜೂನ್ ಐದರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 1873 ರಿಂದ ನಡೆಸಿಕೊಂಡು ಬಂದ ವಿಶ್ವ ಪರಿಸರ ದಿನದ ಉದ್ದೇಶ, ಜನಸಂಖ್ಯಾ ಸ್ಛೋಟ ಮಿತಿಯಿಲ್ಲದೆ ನೀರನ್ನು ಬಳಸುವುದು, ನೀರನ್ನು ಕಲುಷಿತಗೊಳಿಸುವುದು ಈ ಎಲ್ಲದರಿಂದ ಭೂಮಿತಾಯಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ 143 ದೇಶಗಳಲ್ಲಿ ಆಚರಿಸಲಾಗುತ್ತದೆ. ಭೂಮಿತಾಯಿ ಮೂರು ಕಡೆಗಳಿಂದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಹವಾಮಾನ ಮತ್ತು ಪ್ರಕೃತಿ, ಜನರು ತಡೆಯಲಾಗದಷ್ಟು ವಿಪರೀತವಾಗಿ ಬಿಸಿಯಾಗುತ್ತಿದೆ.
ಕೋಟ್ಯಂತರ ಸಸ್ಯ, ಪ್ರಾಣಿ ಪ್ರಬೇಧಗಳು ಅಳಿವಿನ ಅಂಚಿಗೆ ಧಾವಿಸುತ್ತಿವೆ.
ನೆಲ, ಜಲ ಮತ್ತು ಗಾಳಿ ಕಲುಷಿತವಾಗುತ್ತಿದೆ.
ಇವುಗಳನ್ನು ತಡೆಯುವ ಅಗತ್ಯವಿದೆ. ಕೆಲವು ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ. ಕೈಗೊಳ್ಳುವ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು ಪರಿಸರಕ್ಕೆ ಹಾನಿ ಮಾಡದಂತಿರಬೇಕು. ಈಗಾಗಲೇ ನಾವು ಭೂಮಾತೆಗೆ ಮಾಡಿರುವ ಹಾನಿಯನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. ಮನುಜ ಮನಸ್ಸು ಮಾಡಿದಲ್ಲಿ ಇದಕ್ಕೆ ಪರಿಹಾರ ಖಂಡಿತ ಸಾಧ್ಯವಿದೆ.
ನೀರು ಅಮೂಲ್ಯವಾದುದು
ಪ್ರತಿಯೊಂದಕ್ಕೂ ಸರ್ಕಾರವನ್ನೇ ಕಾಯುವ ಅಗತ್ಯವಿಲ್ಲ. ನಾಗರಿಕರೂ ಸಹ ಸಹಕರಿಸಬೇಕು. ಕಾವೇರಿ ನೀರನ್ನು ಬಳಸಿ ಧಾರಾಳವಾಗಿ ಕಾರನ್ನು ತೊಳೆಯುವುದನ್ನು ನೋಡಿದಾಗ ಬಹಳ ಬೇಸರವೆನಿಸುತ್ತದೆ. ಆದರೆ ಹೇಳಿದರೆ ಯಾರಿಗೂ ಕೇಳುವ ವ್ಯವಧಾನವಿರುವುದಿಲ್ಲ. ಅವರೇ ಅದನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ. ಪ್ರತಿಯೊಂದು ಹನಿ ನೀರಿನ ಬೆಲೆಯನ್ನು ಅರಿತುಕೊಂಡು ಮಕ್ಕಳಿಗೂ ಅದರ ಅರಿವು ಮೂಡಿಸಬೇಕು. ನಮ್ಮ ಮುಂದಿನ ಜನಾಂಗಕ್ಕೆ ನಾವು ಶುದ್ಧ ನೀರು, ಗಾಳಿಯನ್ನಾದರೂ ಉಳಿಸಬೇಕು. ಗಿಡ ಮರಗಳನ್ನು ಉಳಿಸಬೇಕು, ಬೆಳೆಸಬೇಕು. ಇರುವುದು ಒಂದು ಭೂಮಿ. ಆ ಭೂಮಿ ತಾಯಿಯನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ವಿಷಯ ಎಲ್ಲರಿಗೂ ಮನದಟ್ಟಾಗಬೇಕು. ಆಗಲೇ ಸ್ವಲ್ಪವಾದರೂ ಬದಲಾವಣೆ ಸಾಧ್ಯ. ಒಂದೆಡೆ ಪರಿಸರ ಉಳಿಸುವ ಬಗ್ಗೆ ಘೋಷಣೆಗಳು ಮೊಳಗುತ್ತಿದ್ದರೆ ಮತ್ತೊಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಕಾಡುಗಳಿಗೆ ಲಗ್ಗೆ ಹಾಕುವ ಪ್ರಯತ್ನ ನಡೆಯುತ್ತಿದೆ. ಆಳುವವರು ಮತ್ತು ಜನರು ಎಲ್ಲರೂ ಭೂಮಿತಾಯಿಯ ಬಗ್ಗೆ ಕಾಳಜಿ ವಹಿಸಿದಾಗ ಪರಿಸರದ ರಕ್ಷಣೆಯಾಗಿ ನಾವೆಲ್ಲರೂ ಆಹ್ಲಾದಕರ ತಂಪು ಹವೆಯನ್ನು ಅನುಭವಿಸಲು ಸಾಧ್ಯ.
ಪರಸ್ಪರ ಪ್ರೇರಣೆ
ಒಬ್ಬರನ್ನು ನೋಡಿ ಮತ್ತೊಬ್ಬರು ಎನ್ನುವಂತೆ ಆ ದಿನ ಮಲಬಾರ್ ಜ್ಯೂವೆಲ್ಸ್ ಮತ್ತು ಪರಿಸರ ಸ್ನೇಹಿ ಕರುಣಾ ಪ್ರಸಾದ್ ಕಣವಿ ಅವರು ಹಲವು ಸಸಿಗಳನ್ನು ತಂದು ಅಲ್ಲಿ ಎಲ್ಲರಿಗೂ ಹಂಚಿದರು. ಯಾವುದನ್ನೂ ಬಿಸಾಡಬಾರದು, ಬಳಸಬೇಕು ಎನ್ನುವ ಪರಿಕಲ್ಪನೆಯ ಆ ಮಹನೀಯರು ತೆಂಗಿನ ಚಿಪ್ಪಿನಲ್ಲಿ, ಎಳನೀರಿನ ಅರ್ಧ ಭಾಗದಲ್ಲಿ, ಬಳಸಿ ಬಿಸಾಡುವ ಪುಟ್ಟ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಸಹ ಸಸಿಗಳನ್ನು ತಂದಿದ್ದರು.
ಕಳೆದ ಒಂಬತ್ತು ವರ್ಷಗಳಿಂದ ಬಡ ಮತ್ತು ದುರ್ಬುಲ ವರ್ಗದ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಉಚಿತವಾಗಿ ಹೇಳಿಕೊಡುತ್ತಿರುವ ಆಶಾ ಇನ್ಫಿನೈಟ್ ಸಂಸ್ಥೆಯ ಮುಖ್ಯಸ್ಥೆ ಮೀರಾ ರಮಣ್ ರವರು ತಮ್ಮ ಆಶಾ ಸಂಸ್ಥೆಯಲ್ಲಿ ಪರಿಸರವನ್ನು ಉಳಿಸುವ ದೃಷ್ಟಿಯಿಂದ ಪರಿಸರ ಪ್ರೇಮಿ ಮತ್ತು ಸ್ವಚ್ಛತೆಗೆ ಆದ್ಯತೆಯನ್ನು ನೀಡುವ ವ್ಯಕ್ತಿಯಾದ ಅವರ ತಂದೆ ಡಾ. ಎ.ಆರ್. ಗೋವಿಂದರಾಜು ಹೆಸರಿನಲ್ಲಿ ತಮ್ಮ ಸಂಸ್ಥೆಯಲ್ಲಿ ಪರಿಸರವನ್ನು ಕಾಪಾಡುವ ಸಲುವಾಗಿ ಹೊಸದೊಂದು ವಿಭಾಗವನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಈವರೆಗೆ ಶಿಕ್ಷಣ ವಿಭಾಗದಲ್ಲಿ ಸ್ಥಳೀಯರ ಸೇವೆ ಮಾಡುತ್ತಿದ್ದು ಈಗ ವಿಶ್ವದ ಎಲ್ಲರಿಗೂ ಮುಖ್ಯವಾದ ಪರಿಸರದ ಬಗ್ಗೆ ಕಾಳಜಿ ವಹಿಸುವ ಕಾರ್ಯ ನಡೆಸಲು ಸಂತಸವೆನಿಸುತ್ತದೆ ಎಂದು ನುಡಿದರು. ಒಬ್ಬರಿಂದ ಮತ್ತೊಬ್ಬರು ಪ್ರೇರಣೆ ಪಡೆದಾಗ ನಿಜಕ್ಕೂ ಸಂತಸವೆನಿಸುತ್ತದೆ. ಒಟ್ಟಾರೆ ಎಲ್ಲರೂ ಮನಸ್ಸು ಮಾಡಿದಾಗಲೇ ನಮಗೆ ಉಳಿದಿರುವ ಒಂದೇ ಒಂದು ಭೂಮಿಯನ್ನು ಕಾಪಾಡಲು ಸಾಧ್ಯ.
`ಒಂದೇ ಒಂದು ಭೂಮಿ’ ಈ ವರ್ಷದ ಪರಿಸರ ದಿನಾಚರಣೆಯ ಘೋಷಣೆಯಾಗಿದೆ. ಒಟ್ಟಾರೆ ವಿಶ್ವದ ಎಲ್ಲರೂ ಒಟ್ಟುಗೂಡಿ ನಮ್ಮ ಭೂಮಿಯನ್ನು ಕಾಪಾಡಿ, ಸಂಭ್ರಮಿಸುವ ಕಾರ್ಯಕ್ಕೆ ಸನ್ನದ್ಧರಾಗಬೇಕು. ಪರಿಸರ ದಿನಾಚರಣೆ ಎನ್ನುವುದು ವರ್ಷದಲ್ಲಿ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿಯೊಂದು ದಿನ ಪರಿಸರದ ರಕ್ಷಣೆ ತಮ್ಮ ಆದ್ಯ ಕರ್ತವ್ಯ ಎಂದು ಎಲ್ಲರೂ ಭಾವಿಸಿದಾಗ ಭೂಮಿಯ ಉಳಿವು ಸಾಧ್ಯ!
– ಮಂಜುಳಾ ರಾಜ್