- ರಾಘವೇಂದ್ರ ಅಡಿಗ ಎಚ್ಚೆನ್.
ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶಕ್ತಿಸೌಧದಲ್ಲಿ ಸಾಹಿತ್ಯ ಜಾತ್ರೆ ಆಯೋಜನೆ ಮಾಡಲಾಗಿದ್ದು, ಇಂದಿನಿಂದ 5 ದಿನ ನಡೆಯಲಿರುವ ಪುಸ್ತಕ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ವೇಳೆ ಶಕ್ತಿ ಸೌಧದ ಮುಂದೆ ಸ್ಪೀಕರ್ ಯು ಟಿ ಖಾದರ್ ಸಾಹಿತ್ಯದ ತೇರು ಎಳೆದಿದ್ದಾರೆ.
ಕರ್ನಾಟಕ ವಿಧಾನಸಭಾ ಸಚಿವಾಲಯ, ದೇಶದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿದೆ. ಅಧಿಕೃತವಾಗಿ ಇಂದು ಸಂಜೆಯಿಂದಲೇ ಐದು ದಿನಗಳ ಕಾಲ ಈ ಪುಸ್ತಕ ಮೇಳ ಶುರುವಾಗಿದೆ. ಪುಸ್ತಕ ಮೇಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದರು, ಯುಟಿ ಖಾದರ್, ಬಸವರಾಜ್ ಹೊರಟ್ಟಿ ಸಹ ಭಾಗಿಯಾಗಿದ್ದರು.
ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ. ಆದ್ದರಿಂದ ಎಲ್ಲರೂ ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಬೇಕು.
ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ ಆಯೋಜಿಸಲಾಗಿದೆ. ಇದನ್ನು ಸಾಹಿತ್ಯಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕು.
ಇನ್ನು ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು.
ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ.
ಪುಸ್ತಕಗಳನ್ನು ಖರೀದಿಸಿ, ಮನೆ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಬೇಕು.
ಮಕ್ಕಳು ಮೊಬೈಲ್ ಮತ್ತು ಇಂಟರ್ನೆಟ್ ಚಟದಿಂದ ಹೊರಗೆ ಬಂದು ಪುಸ್ತಕಗಳನ್ನು ಓದುವ ಹವ್ಯಾಸ, ಅಭ್ಯಾಸ ಬೆಳೆಸಿಕೊಳ್ಳಬೇಕು.
- ವಿಧಾನಸೌಧದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಕ್ತಿಸೌಧದಲ್ಲಿ ಪುಸ್ತಕ ಮೇಳ
ಇನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಪ್ರಸಕ್ತ ಸಾಲಿನ ಅನುದಾನದಲ್ಲಿ 2 ಲಕ್ಷ ರೂ. ಗಳ ಮಿತಿಯೊಳಗೆ ಶಾಸಕರು ಪುಸ್ತಕ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಶಾಸಕರು ಪುಸ್ತಕಗಳನ್ನು ಖರೀದಿಸಿ ಆಯಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
150 ಮಳಿಗೆ ತೆರೆಯಲು ಮಾತ್ರ ಅವಕಾಶವಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ. ಇನ್ನು, ಪುಸ್ತಕ ಮೇಳದ ಮೂಲಕ ಶಾಸಕಾಂಗವನ್ನು ಸಾಹಿತ್ಯ ಕ್ಷೇತ್ರದ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಹಾಗೂ ಪುಸ್ತಕ ಮೇಳದ ನೆಪದಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತರನ್ನು ವಿಧಾನಸೌಧಕ್ಕೆ ಹತ್ತಿರವಾಗಿಸುವ ಪ್ರಯತ್ನವನ್ನ ಯುಟಿ ಖಾದರ್ ಮಾಡಿದ್ದಾರೆ. ಅವರ ಈ ನಡೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಾಳೆ ದುಡ್ಡು ತಂದು ಪುಸ್ತಕ ಖರೀದಿಸುವೆ ಎಂದ ಸಿದ್ದರಾಮಯ್ಯ
ಪುಸ್ತಕ ಮೇಳಕ್ಕೆ ಚಾಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. 150 ಪುಸ್ತಕ ಮಳಿಗೆಗಳು ಇವೆ. ಪುಸ್ತಕ ಪ್ರಿಯರಿಗೆ ಇದೊಂದು ಹಬ್ಬ. ಬೇರೆ ಭಾಷೆಯಿಂದ ಭಾಷಾಂತರ ಆಗಿರುವ ಪುಸ್ತಕ ಸಹ ಇಲ್ಲಿ ಸಿಗುತ್ತೆ. ದೇಶ ಸುತ್ತು, ಕೋಶ ಓದು ಅಂತ ಗಾದೆ ಇದೆ. ಜ್ಞಾನ ವಿಕಾಸ ಮಾಡಬೇಕು. ಓದುವಿಕೆಯಿಂದ ಜ್ಞಾನ ವಿಕಾಸ ಆಗುತ್ತದೆ. ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಾನು ಇಂದು ದುಡ್ಡು ತಂದಿಲ್ಲ. ನಾಳೆ ದುಡ್ಡು ತಂದು ಪುಸ್ತಕ ತೆಗೆದುಕೊಳ್ಳುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು. ನನಗೆ ಬೇಕಾದ ಪುಸ್ತಕ ಖರೀದಿ ಮಾಡುತ್ತೇನೆ. ಬೇರೆಯವರು ಖರೀದಿ ಮಾಡಿರೋ ಪುಸ್ತಕ ಓದಬಾರದು. ನೀವೇ ಖರೀದಿ ಮಾಡಿ ಪುಸ್ತಕ ಓದಬೇಕು ಎಂದಿದ್ದಾರೆ.