ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಮಹಾಕುಂಭಮೇಳದ ದರ್ಶನವಾಗಲಿದೆ. ಭಾರತ ಹಿಂದೆಂದೂ ಕಾಣದ ಮಹಾಭಕುತಿಯ ಮಹಾಮಜ್ಜನವಾದ ಕುಂಭಮೇಳವನ್ನ ಕರುನಾಡಿನ ಕನ್ನಡಿಗರು ಟಿವಿಯಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ. ಬರೋಬ್ಬರಿ 45 ದಿನಗಳ ಕಾಲ ನಡೆದ ಈ ಮಹಾಕುಂಭಮೇಳ ಫೆಬ್ರವರಿ 26ಕ್ಕೆ ಮುಗಿದಿದ್ರೂ ಕೂಡ ಕನ್ನಡ ಧಾರಾವಾಹಿ ತಂಡವೊಂದು ಆ ಮಹಾಕುಂಭಮೇಳವನ್ನು ಆ ಧಾರಾವಾಹಿಯ ಒಂದು ಭಾಗವನ್ನಾಗಿ ನೋಡುಗರಿಗೆ ಉಣಬಡಿಸುತ್ತಿದೆ. ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ, 144 ವರ್ಷಗಳ ಬಳಿಕ ಆಚರಣೆಗೊಂಡ ಉತ್ತರಪ್ರದೇಶದ ಪ್ರಯಾಗ್ರಾಜ್ ಮಹಾಕುಂಭ ಮೇಳಕ್ಕೆ ತೆರೆಬಿದ್ರೂ ಕೂಡ ಕನ್ನಡಿಗರೆಲ್ಲರೂ ಸೀತಾರಾಮ ಅನ್ನೋ ಸೀರಿಯಲ್ನಲ್ಲಿ ಮತ್ತೆ ವೀಕ್ಷಿಸಬಹುದಾಗಿದೆ. ಅಂಥದ್ದೊಂದು ಪ್ರಯೋಗವನ್ನು ಮೊಟ್ಟ ಮೊದಲ ಬಾರಿಗೆ ಸೀತರಾಮ ಸೀರಿಯಲ್ ತಂಡವು ಮಾಡಿದೆ.
ಸರಿ ಸುಮಾರು 67 ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿರುವ ಐತಿಹಾಸಿಕ ಧಾರ್ಮಿಕತೆಯ ಮಹಾಸಂಗಮವು ಅವಿಸ್ಮರಣೀಯವಾಗಿದೆ. ಅದೆಷ್ಟೋ ಜನ ಈಗಲೂ ಕೂಡ ಮತ್ತೆ ಮಹಾಕುಂಭದಲ್ಲಿ ಭಾಗಿಯಾಗಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆ. ಅಂತಹವರು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಸೀರಿಯಲ್ ನೋಡಿದ್ರೆ ಸಾಕು. ಯಾಕಂದ್ರೆ, ಸೀತಾರಾಮ ತಂಡ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದೆ.
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇದ್ರೂ ಕೂಡ ಪ್ರಪ್ರಥಮ ಬಾರಿಗೆ ಸೀತರಾಮ ಸೀರಿಯಲ್ ತಂಡ ಹೊಸ ಸಾಹಸ ಮಾಡಿದೆ. ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕನ್ನಡದ ಸೀತಾರಾಮ ಸೀರಿಯಲ್ ತಂಡ ಭಾಗಿಯಾಗಿದೆ. ಸೀತಾ ರಾಮ ಹಾಗೂ ಮುದ್ದಾದ ಪುಟಾಣಿ ಸುಬ್ಬಿ ಪ್ರಯಾಗದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ತ್ರಿವೇಣಿ ಸಂಗಮದಲ್ಲಿ ಮೂರು ಜನ ಪುಣ್ಯ ಸ್ನಾನ ಮಾಡಿದ್ದಾರೆ. ಸದ್ಯ ಸೀತಾರಾಮ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕುಂಭಮೇಳದಲ್ಲಿ ಸೀತಾ, ರಾಮ, ಸುಬ್ಬಿ ಭಾಗಿಯಾಗಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಶೂಟಿಂಗ್ ಮುಗಿಸಿರುವ ಸೀರಿಯಲ್ ತಂಡ, ‘ಕುಂಭಮೇಳದ ಆಧ್ಯಾತ್ಮಿಕ ವೈಭವ ಕಣ್ತುಂಬಿಕೊಳ್ಳೋ ಹಂಬಲ ನಿಮಗಿದ್ಯಾ?.. ಹಾಗಿದ್ರೆ ‘ಹರ ಹರ ಮಹಾದೇವ’ ಅಂತ Comment ಹಾಕಿ..!’.. ಮೊಟ್ಟ ಮೊದಲ ಬಾರಿಗೆ ಮಹಾಪ್ರಯೋಗ.. ಮಹಾಕುಂಭ ವಿಶೇಷ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದೆ.
ವಿಶೇಷವಾದ ಪ್ರೋಮೋ ಬಿಟ್ಟಿರುವ ಸೀರಿಯಲ್ ತಂಡ ಅದರಲ್ಲಿ ರಾಮ ಮತ್ತು ಸೀತಾ ಮಾತನಾಡಿರುವ ಸಂಭಾಷಣೆಯ ತುಣುಕುಗಳನ್ನ ಹಾಕಲಾಗಿದೆ. ‘ಜಗತ್ತು ಎಷ್ಟೇ ಮುಂದುವರೆದ್ರೂ ಧಾರ್ಮಿಕ ಆಚರಣೆ ಹಾಗೆ ಉಳಿದಿರೋದು ಎಷ್ಟು ಖುಷಿ ಅಲ್ವಾ ಅಂತಾ ಸೀತಾ ರಾಮ್ನನ್ನು ಕೇಳುವ ಪರಿ.. ಅದಕ್ಕೆ ನಿಜ ಅಲ್ವಾ ಅಂತೇಳಿ ತುಂಬಾ ಖುಷಿಯಾಗ್ತಿದೆ’ ಅಂತಾ ರಾಮ ಹೇಳುತ್ತಾನೆ.
ಇನ್ನು ರಾಮನ ಕೈ ಹಿಡಿದು ನಡೆಯುತ್ತಿದ್ದ ಸುಬ್ಬಿ ಕೋಪಗೊಂಡು ಸೀತಾ ಕೈ ಹಿಡಿದುಕೊಳ್ಳೋದು.. ಅದರ ಜೊತೆಗೆ ‘ರಾಮ – ಸುಬ್ಬಿ ನಡುವೆ ಸೇತುವೆಯಾಗುತ್ತಾ ಮಹಾಕುಂಭಮೇಳ’ ಅನ್ನೋ ಟೆಕ್ಸ್ಟ್ ಹಾಕಿರೋದ್ರಿಂದ ವೀಕ್ಷಕರಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಮೂಲಕ ಝೀ ಕನ್ನಡದಲ್ಲಿ ಪ್ರತಿ ದಿನ ಸಂಜೆ 5:30ಕ್ಕೆ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು, ಕನ್ನಡ ಕಿರುತೆರೆಲೋಕದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ.