– ರಾಘವೇಂದ್ರ ಅಡಿಗ ಎಚ್ಚೆನ್.
“ಸಿನಿಮಾ ಒಂದು ನೋಡುವ ಪುಸ್ತಕ. ಈ ಪುಸ್ತಕವನ್ನು ಆತ ಒಬ್ಬನೇ ನೋಡಲ್ಲ. ಬದಲಾಗಿ ಆತನ ಬೆಂಬಲಿಗರು ಕೂಡ ನೋಡುತ್ತಾರೆ. ಹೀಗಾಗಿ ಸಿನಿಮಾದ ಸೋಲು ಗೆಲುವು ಎಲ್ಲರನ್ನೂ ಒಳಗೊಂಡಿರುತ್ತದೆ,” ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ಹೇಳಿದರು.
ಸ್ನೇಹ ಬುಕ್ ಹೌಸ್ ವತಿಯಿಂದ 2025 ಮಾರ್ಚ್ 02 ಭಾನುವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಲೇಖಕ ವಿರಾಟ್ ಪದ್ಮನಾಭ ಅವರ “ಬೆಟ್ಟದ ಹೂವು” ಆಧುನಿಕ ಭಾರತದ ಸಾಮಾಜಿಕ ರಾಮಾಯಣ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ಇಂದಿಗೂ ನಾವು ಸಿನಿಮಾದ ಕಲಾಕೃತಿಗಳನ್ನು ಕಟ್ಟಿಕೊಟ್ಟಂತಹ ಅದೆಷ್ಟೋ ಜನರನ್ನ ನಾವು ನೆನಪುಮಾಡಿಕೊಳ್ಳುತ್ತೇವೆ. ಅದಕ್ಕೆ ಮುಖ್ಯ ಕಾರಣ ಅಂದಿನ ಸಿನಿಮಾದ ಜೀವಂತ ವಸ್ತು. ಸಮಾಜ ಸುಧಾರಣೆಯಾಗುವುದು ಎಡ ಬಲದಿಂದವಲ್ಲ. ಮಧ್ಯವ ವರ್ಗದಿಂದ ಎನ್ನುವ ಮಾತುಗಳು ಈ ಕೃತಿಯಲ್ಲಿಯೂ ನೋಡಬಹುದು. ಅದು ಇಂದಿನ ಕಾಲಕ್ಕೆ ನಿಜವೆಂಬುವುದು ಕೂಡ ಭಾಸವಾಗುತ್ತದೆ. ಸರಕಾರಿ ಶಾಲೆಗಳ ಉಳಿವಿಕೆಯ ಹೋರಾಟ ಒಂದು ರೀತಿಯ ಸ್ಥಾಯಿಕ ಭಾವವಾಗಿ ಇಲ್ಲಿ ಕಾಣಬಹುದು. ಸಿನಿಮಾ ಅನ್ನುವುದು ಓದು. ವಿಮರ್ಶಕ ಅನ್ನುವವ ಇದನ್ನು ಮನದಲ್ಲಿಟ್ಟುಕೊಂಡು ಸಿನಿಮಾ ವಿಮರ್ಶೆಯನ್ನು ಸಾಹಿತ್ಯ ಲೋಕಕ್ಕೆ ನೀಡಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಇಂತಹದ ಅವಶ್ಯಕತೆಯಿದೆ ಬಹಳಷ್ಟಿದೆ,” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕೃತಿಯನ್ನು ವಿಶ್ಲೇಷಿಸಿದ ವಕೀಲ, ಪತ್ರಕರ್ತ ವೀರೇಂದ್ರ ಪಿ.ಎಂ. ಮಾತನಾಡಿ, “ಒಬ್ಬ ಕವಿ, ನಾಟಕಕಾರ ಕೃತಿಕಾರನ ಬಗ್ಗೆ ಕೃತಿ ಪ್ರಕಟವಾಗಲ್ಲವೋ, ಹಾಗೆಯೇ ಸಿನಿಮಾ ಕ್ಷೇತ್ರದಲ್ಲಿಯೂ ವ್ಯಕ್ತಿಯ ಬಗ್ಗೆ ಇರುವಂತಹ ಕೃತಿಗಳು ಬಹಳಷ್ಟು ಕಡಿಮೆ. ಆದರೆ ನಾಗಭರಣ ಅವರ ಬಗ್ಗೆ ಪದ್ಮನಾಭ ಅವರು ಬಹಳಷ್ಟು ಅಧ್ಯಯನ ಮಾಡಿ ಕೃತಿಯನ್ನು ಬರೆದಿದ್ದಾರೆ. ಇಂತಹ ಅಧ್ಯನಶೀಲ, ವ್ಯಕ್ತಿ ವಿಮರ್ಶೆಯ ಕೃತಿಗಳ ಕನ್ನಡ ಸಾಹಿತ್ಯಕ್ಕೆ ಅವಶ್ಯಕ. ಇನ್ನು ಬೆಟ್ಟದ ಜೀವ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಪದ್ಮನಾಭ ಅವರು ನುಡಿಗಟ್ಟುಗಳನ್ನು ಕೊಟ್ಟಿದ್ದಾರೆ. ಮುಖ್ಯವಾಗಿ ನಾವು ಕೃತಿಯಲ್ಲಿ ಗಮನಿಸಬೇಕಾದ ಅಂಶ ಸರಕಾರಿ ಶಾಲೆಗಳ ಬಗೆಗೆ ಕಟ್ಟಿಕೊಟ್ಟಿರುವ ವಿಚಾರ ವಸ್ತುಗಳು. ಈ ನಿಟ್ಟಿನಲ್ಲಿ ಬದುಕಿನ ವಿವಿಧ ಮಜಲುಗಳನ್ನು ತಿಳಿಸಿಕೊಟ್ಟಿದ್ದಾರೆ. ಕಲಾತ್ಮಕ ಸಿನಿಮಾಗಳ ಬಗ್ಗೆ ಬಹಳ ವಿಸ್ತಾರವಾಗಿ ಚರ್ಚಿಸಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಮತ್ತು ಕನ್ನಡ ಸಿನಿಮಾ ಪರಂಪರೆಯ ಬಗ್ಗೆ ಬಹಳ ಸ್ಥೂಲವಾಗಿ ವಿವರಿಸಲಾಗಿದೆ,” ಎಂದು ತಿಳಿಸಿದರು.
ಕೃತಿಯ ಲೇಖಕ ವಿರಾಟ್ ಪದ್ಮನಾಭ ಮಾತನಾಡಿ, “ಬೆಟ್ಟದ ಜೀವ ಧರ್ಮ, ನೆಲೆಯನ್ನು ನೋಡುವ ರೀತಿ ಬಹಳ ಭಿನ್ನವಾಗಿ ವ್ಯಕ್ತವಾಗುತ್ತದೆ. ಪುನೀತ್ ರಾಜಕುಮಾರ್ ಅವರ ಸಿನಿಮಾವನ್ನು ಒಳಗೊಂಡ ವಿಚಾರ ವಸ್ತುಗಳಿವೆ. ಈ ಕೃತಿ ಹೊರಬರಲು ನನ್ನ ವಿದ್ಯಾರ್ಥಿ ವೃಂದವೇ ಮುಖ್ಯ. ಸದಾ ಅವರು ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ,” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ ಸುಮತಿ ಅವರು ಸ್ಪೂರ್ತಿಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ತ್ರಿವೇಣಿ ಹರ್ಷಿತಾ ಅವರು ಉಪಸ್ಥಿತರಿದ್ದರು.