ಸರಸ್ವತಿ ಜಾಗೀರ್ದಾರ್*
ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಇದೀಗ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸುತ್ತಿದ್ದಾರೆ. 'ಸೀತಾ ಪಯಣ' ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಬರೆದು, ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಸೀತಾ ಪಯಣದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸಿದರೆ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ 'ಜೈ ಹಿಂದ್' ಮತ್ತು 'ಅಭಿಮನ್ಯು' ಸಿನಿಮಾಗಳಿಗೆ ನಿರ್ದೇಶನ ಮಾಡಿ, ತಮ್ಮ ಕ್ಯಾಮರಾ ಹಿಂದಿನ ಕೆಲಸ ಹೇಗಿದೆ ಎಂಬುದನ್ನು ಸಾಬೀತುಪಡಿಸಿದ್ದರು ಅರ್ಜುನ್ ಸರ್ಜಾ. ಅದಾದ ಮೇಲೆ ಪ್ರೇಮಬರಹ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಇದೀಗ ಸೀತಾ ಪಯಣ ಮೂಲಕ ಮರಳಿದ್ದಾರೆ.
*ತಾಂತ್ರಿಕ ಬಳಗ ಹೀಗಿದೆ..*
ಶೀರ್ಷಿಕೆ ಸೂಚಿಸುವಂತೆ 'ಸೀತಾ ಪಯಣ', ಪ್ರೀತಿ ಮತ್ತು ಭಾವನಾತ್ಮಕ ಕಥೆಯ ಅಡಿಯಲ್ಲಿ ಸಾಗುವ ಪ್ರಯಾಣ. ಇದೀಗ ಇದೇ ಸಿನಿಮಾದ ತಾಂತ್ರಿಕ ಬಳಗದ ವಿವರವನ್ನು ಚಿತ್ರತಂಡ ರಿವೀಲ್ ಮಾಡಿದೆ. ಸೀತಾ ಪಯಣ ಸಿನಿಮಾಕ್ಕೆ ಬಾಲಮುರುಗನ್ ಛಾಯಾಗ್ರಹಣ ಮಾಡಿದ್ದಾರೆ. ದೃಶ್ಯಂ ಸಿನಿಮಾ ಖ್ಯಾತಿಯ ಸಂಕಲನಕಾರ ಆಯೂಬ್ ಖಾನ್ ಈ ಚಿತ್ರಕ್ಕೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಅನುಪ್ ರುಬೆನ್ಸ್ ಸೀತಾ ಪಯಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದೇ ರೀತಿ ಬರವಣಿಗೆ ಜವಾಬ್ದಾರಿ ಸಾಯಿ ಮಾಧವ್ ಬುರ್ರಾ ಅವರದ್ದು. ಇನ್ನು ಭರತ್ ಜನನಿ ಎಂಬುವವರು ಕನ್ನಡದ ಹಾಡುಗಳಿಗೆ ಅದ್ಭುತವಾದ ಸಾಹಿತ್ಯ ನೀಡಿದ್ದಾರೆ. ನಿರ್ದೇಶನದ ಜತೆಗೆ ಡೈಲಾಗ್ಸ್ ಸಹ ಬರೆದಿದ್ದಾರೆ ಅರ್ಜುನ್ ಸರ್ಜಾ.
ಹೆಸರೇ ಹೇಳುವಂತೆ ಇದೊಂದು ಪಯಣದ ಕುರಿತಾದ ಚಿತ್ರವಾಗಿದ್ದು, ಈ ಪ್ರಯಾಣದಲ್ಲಿ ಅಭಿ ಮತ್ತು ಸೀತಾ ಎಂಬ ಹದಿಹರೆಯದವರ ಭಾವನಾತ್ಮಕ ಪಯಣವನ್ನು ತೋರಿಸಲಾಗುತ್ತಿದೆ. ನಿರಂಜನ್ ಮತ್ತು ಐಶ್ವರ್ಯ ಅರ್ಜುನ್ ಜೊತೆಗೆ ಪ್ರಕಾಶ್ ರೈ, ಸತ್ಯರಾಜ್ ಮುಂತಾದವರು ನಟಿಸಿದ್ದಾರೆ. ಸ್ವತಃ ಅರ್ಜುನ್ ಸರ್ಜಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ಜತೆಗೆ ಕನ್ನಡದ ಹೆಸರಾಂತ ನಟರೊಬ್ಬರು ಈ ಚಿತ್ರದ ಭಾಗವಾಗಲಿದ್ದಾರೆ. ಈಗಾಗಲೇ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.
ಮೂರು ಭಾಷೆಗಳಲ್ಲಿ ಬಿಡುಗಡೆ
ಭಾರತೀಯ ಚಿತ್ರೋದ್ಯಮದಲ್ಲಿ ತಮ್ಮ ನಟನೆಯ ಮೂಲಕವೇ ಅಪಾರ ಜನಮನ್ನಣೆ ಗಳಿಸಿದ್ದಾರೆ ಅರ್ಜುನ್ ಸರ್ಜಾ. ದಕ್ಷಿಣದ ಸಿನಿಮಾಗಳ ಜತೆಗೆ ಬಾಲಿವುಡ್‌ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಸೀತಾ ಪಯಣ ಸಿನಿಮಾ ಮೂಲಕ ಪರಿಪೂರ್ಣ ಫ್ಯಾಮಿಲಿ ಡ್ರಾಮಾ ಜತೆಗೆ ಆಗಮಿಸುತ್ತಿದ್ದಾರೆ. ಸೀತಾ ಪಯಣ ಸಿನಿಮಾ ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಸಿದ್ಧವಾಗಲಿದೆ. ನಟ ಅರ್ಜುನ್ ಸರ್ಜಾ ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಅಡಿಯಲ್ಲಿ ಸೀತಾ ಪಯಣ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.