ನಮ್ಮ ಮಲೆನಾಡಿನಲ್ಲಿ ಸ್ವಲ್ಪ ನವೆ, ಕೆರೆತ ಅಥವಾ ಪಿತ್ತವೆನಿಸಿದರೆ ಅಪ್ಪ `ದೊಡ್ಡಪತ್ರೆ ಚಟ್ನಿ ಮಾಡು,’ ಎಂದು ಅಮ್ಮನಿಗೆ ಹೇಳುತ್ತಿದ್ದುದು ಉಂಟು. ಆಗ ಸೊಪ್ಪನ್ನು ಕುಯ್ಯಲು ಅಮ್ಮ ನನಗೆ ಹೇಳುತ್ತಿದ್ದರು. ಬಹಳ ಸೂಕ್ಷ್ಮವಾದ ಎಲೆಗಳ, ಬಹಳ ನಾಜೂಕಾಗಿ ಗಿಡಕ್ಕೆ ಘಾಸಿ ಆಗದಂತೆ ಆ ಎಲೆಗಳನ್ನು ಕೊಯ್ಯುವುದೇ ಒಂದು ಕಲೆ ಎನಿಸುತ್ತಿತ್ತು. ಗುಂಡಾದ, ಸ್ವಲ್ಪ ದಪ್ಪನೆಯ, ಮೃದುವಾದ ಆದರೆ ಮುಟ್ಟಿದರೆ ನಲುಗಿ ಹೋಗುವಂತಹ ದೊಡ್ಡಪತ್ರೆ ಎಲೆಗಳ ಘಮಲೇ ಚಂದ. ಕೊಯ್ಯುವಾಗ ನಾವು ಅದನ್ನು ಚಂದವಾಗಿ ಮೂಸಿ ನೋಡುತ್ತಿದ್ದುದು ಉಂಟು. ಅನೇಕ ಬಾರಿ ಅಮ್ಮ ಎಂಜಲು ಮಾಡಬೇಡಿ ಎಂದು ಗದರುತ್ತಿದ್ದುದೂ ಉಂಟು.
ಈ ಔಷಧೀಯ ಸಸ್ಯ ನಮ್ಮೂರ ಮನೆಯ ಹಿತ್ತಲುಗಳಲ್ಲಿ ಹುಲುಸಾಗಿ ಹರಡಿ ಬೆಳೆಯುತ್ತಿದ್ದ. ತಾಜಾ ಎಲೆಗಳಿರುವ ಒಂದು ಕೊಂಬೆಯನ್ನು ನೆಟ್ಟರೂ ಸಾಕು, ಚೆನ್ನಾಗಿ ಬೆಳೆಯುತ್ತಿತ್ತು. ಬಹಳ ಸೂಕ್ಷ್ಮವಾದುದರಿಂದಲೋ ಏನೋ ಮಾರುಕಟ್ಟೆಯಲ್ಲಿ ಅಥವಾ ಸೊಪ್ಪಿನ ಅಂಗಡಿಯಲ್ಲಿ ಇದು ಮಾರಲು ಸಿಗದು. ಆದರೂ ಬಹಳಷ್ಟು ಜನರು ನಗರಗಳಲ್ಲೂ ತಮ್ಮ ಮನೆಯ ಮುಂದಿನ ಕುಂಡಗಳಲ್ಲೇ ಇದನ್ನು ಹುಲುಸಾಗಿ ಬೆಳೆಸುವುದುಂಟು. ಇದರ ಬೀಜವೇ ಓಮ ಕಾಳು ಇದು ಅಜವಾನ ಎಂತಲೂ ಪ್ರಸಿದ್ಧ. ಇದು ಬೇಕಿಂಗ್ ಪದಾರ್ಥಗಳಿಗೆ ಮಾತ್ರವಲ್ಲದೆ, ದೈನಂದಿನ ಅಡುಗೆಗೂ ಬೇಕೇ ಬೇಕು.
ದೊಡ್ಡಪತ್ರೆ ಮತ್ತು ಆರೋಗ್ಯ
ಪ್ಲೆಕಾಲ್ ತ್ರಂತಸ್ ಆ್ಯಂಬಾಯ್ನಿಕಸ್ ಎನ್ನುವ ಕಷ್ಟದ ಹೆಸರನ್ನು ಹೊಂದಿರುವ ನಮ್ಮ ದೊಡ್ಡಪತ್ರೆ ಆರೋಗ್ಯಕ್ಕೆ ಬಲು ಉಪಕಾರಿ. ಸವಿಯರ ಸಾಂಬಾರ ಮತ್ತು ಸಾಂಬ್ರಾಣಿ ಸೊಪ್ಪು ಎಂತಲೂ ಇದನ್ನು ಕರೆಯುತ್ತಾರೆ.
ಮಲೆನಾಡಿನ ಸಸ್ಯಹಾರಿಗಳೇ ಅಲ್ಲದೆ ವಿದೇಶದ ಮಾಂಸಾಹಾರಿಗಳೂ ಸಹ ತಮ್ಮ ಮಾಂಸಾಹಾರಿ ಖಾದ್ಯಗಳಲ್ಲಿ ಒಳಗೆ ತುಂಬಲು (ಸ್ಟಫಿಂಗ್) ಬಳಸುತ್ತಾರೆ.
ಇದರ ಸುವಾಸನೆಗಾಗಿಯೇ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ (ಓರಿಗ್ಯಾನೋ ಫ್ಲೇವರ್).
ಆರೋಗ್ಯಕರ ಗುಣಗಳನ್ನು ಹೊಂದಿರುವ ದೊಡ್ಡಪತ್ರೆ ಕೆಮ್ಮು, ಮೂಗು ಕಟ್ಟಿದಾಗ ಮತ್ತು ಗಂಟಲು ಕಟ್ಟಿದಾಗ ಬಹಳ ಉಪಯೋಗಕ್ಕೆ ಬರುತ್ತದೆ.
ವಾಯು ನೋವು ಮತ್ತು ವಾಯು ತುಂಬಿಕೊಂಡಾಗ ಹೊಟ್ಟೆ ಹಗುರವಾಗಿರಿಸಲು ಸಹಾಯಕ.
ಮಲೇರಿಯಾ ಜ್ವರಕ್ಕೂ ಇದು ರಾಮಬಾಣ.
ಆಸ್ತಮಾ, ಬ್ರಾಂಕೈಟಿಸ್ ನ್ನು ದೂರ ಮಾಡುತ್ತದೆ.
ಚರ್ಮದಲ್ಲಿನ ಹುಣ್ಣು, ಕೆರೆತ, ಚೇಳು ಕಡಿತ, ಗಾಯಗಳು, ನೀರು ಬೇಧಿ ಮತ್ತು ಲಿವರ್ ಅರ್ಥಾತ್ ಯಕೃತ್ ನ್ನು ಆರೋಗ್ಯವಾಗಿಡಲು ಸಹಾಯಕ.
ಮಧುಮೇಹಿಗಳು ಪ್ರತಿ ದಿನ ಬೆಳಗ್ಗೆ ಒಂದರೆರಡು ಎಲೆಗಳನ್ನು ಚೆನ್ನಾಗಿ ಅಗಿದು ನುಂಗಿದರೆ, ರಕ್ತದಲ್ಲಿನ ಸಕ್ಕರೆಯ ಅಂಶದ ನಿಯಂತ್ರಣಕ್ಕೆ ಸಹಕರಿಸುತ್ತದೆ.
ಬಾಯಿಯ ವಾಸನೆ ಇದ್ದವರು ಒಂದು ಎಲೆಯನ್ನು ಬಾಯಿಗೆ ಹಾಕಿಕೊಂಡು ಜಗಿದರೆ ವಾಸನೆ ದೂರವಾಗುತ್ತದೆ.
ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮಿದ್ದರೆ, ಒಂದೆರಡು ದೊಡ್ಡಪತ್ರೆ ಎಲೆ, ಒಂದು ವೀಳ್ಯದೆಲೆಯ ರಸ ಮತ್ತು ಕಲ್ಲುಸಕ್ಕರೆಯನ್ನು ಚೆನ್ನಾಗಿ ಅರೆದು ಕುಡಿಸಿದರೆ ಶೀತ ದೂರಾಗುತ್ತದೆ. ಓಮ ವಾಟರ್ ರೆಡಿಮೇಡ್ ಆಗಿ ಸಿಗುತ್ತದೆ. ಇದು ಮಕ್ಕಳ ಹೊಟ್ಟೆ ನೋವಿಗೆ, ಜೀರ್ಣಕ್ಕೆ ಸಹಕಾರಿ.
ಪಿತ್ತಕ್ಕೆ ಮೈ ನವೆಯಾದರೆ ದೊಡ್ಡಪತ್ರೆ ಚಟ್ನಿ ಅಥವಾ ತಂಬುಳಿ ಮಾಡಿ ತಿಂದರೆ ನವೆ ದೂರಾಗುತ್ತದೆ. ಎಲೆಯನ್ನು ಹಾಗೆಯೇ ತಿನ್ನಲೂಬಹುದು. ಬಜ್ಜಿ ಮಾಡಿ ಸವಿಯಲಿಕ್ಕೂ ಸೊಗಸು.
ದೊಡ್ಡಪತ್ರೆಯನ್ನು ಉಪಯೋಗಿಸುವ ರೀತಿ.
ದೊಡ್ಡಪತ್ರೆ ಚಟ್ನಿ
ಸಾಮಗ್ರಿ : ಹತ್ತರಿಂದ ಹನ್ನೆರಡು ದೊಡ್ಡಪತ್ರೆ ಎಲೆ, ಕಾಲು ಚಮಚ ಜೀರಿಗೆ, ನಾಲ್ಕು ಕಾಳು ಮೆಣಸು, 2 ಚಮಚ ಹುರಿಗಡಲೆ, 1 ಕಪ್ ತೆಂಗಿನ ತುರಿ, ತುಸು ಎಸಳು ಹುಣಿಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು.
ವಿಧಾನ : ದೊಡ್ಡಪತ್ರೆ ಎಲೆಗಳನ್ನು ಜೀರಿಗೆ ಮತ್ತು ಮೆಣಸಿನೊಂದಿಗೆ ಬಾಣಲೆಗೆ ಹಾಕಿ ಚೆನ್ನಾಗಿ ಎಲೆಗಳು ಬಾಡುವಂತೆ ಹುರಿದುಕೊಳ್ಳಿ. ತಣ್ಣಗಾದ ನಂತರ ಮೇಲೆ ಹೇಳಿದ ಇತರೆ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ತುಂಬಾ ನುಣ್ಣಗೆ ಪೇಸ್ಟ್ ನಂತೆ ಮಾಡಬಾರದು. ಸ್ವಲ್ಪ ತರಿಯಾಗಿರಬೇಕು. ಬಿಸಿಯಾದ ಅನ್ನಕ್ಕೆ ತುಪ್ಪ ಹಾಕಿಕೊಂಡು ಚಟ್ನಿಯನ್ನು ಹಾಕಿ ಕಲೆಸಿಕೊಂಡರೆ ರುಚಿಯಾಗಿಯೂ ಇರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಚಪಾತಿ ಮತ್ತು ರೊಟ್ಟಿಗೂ ನೆಂಚಿಕೊಂಡು ತಿನ್ನಬಹುದು. ಅಕ್ಕಿ ಅಥವಾ ರಾಗಿ ಹಿಟ್ಟಿಗೆ ಈ ಚಟ್ನಿಯನ್ನು ಹಾಕಿ ಸ್ವಲ್ಪ ಉಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಲೆಸಿ ಹೆಂಚಿನ ಮೇಲೆ ಗರಿ ಗರಿ ರೊಟ್ಟಿಯನ್ನು ಮಾಡಿಕೊಂಡು ತಿನ್ನಬಹುದು.
ದೊಡ್ಡಪತ್ರೆ ತಂಬುಳಿ
ಸಾಮಗ್ರಿ : ಹತ್ತು ದೊಡ್ಡಪತ್ರೆ ಎಲೆಗಳು, ಜೀರಿಗೆ, ಮೆಣಸು ಮತ್ತು ಅರ್ಧ ಚಮಚ ಉದ್ದಿನ ಬೇಳೆ.
ವಿಧಾನ : ಎಲ್ಲವನ್ನೂ ಘಮ್ಮೆನ್ನುವಂತೆ ಹುರಿದು ತಣ್ಣಗಾದ ಮೇಲೆ ಸ್ವಲ್ಪ ತೆಂಗಿನ ತುರಿ ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳುವುದು. ನಂತರ ಗಟ್ಟಿ ಸಿಹಿ ಮೊಸರು ಹಾಕಿ ಕಲೆಸಿಕೊಂಡರೆ ತಂಬುಳಿ ಸಿದ್ಧ. ಇದನ್ನೂ ಅನ್ನದ ಜೊತೆ ಅಥವಾ ರೊಟ್ಟಿ ಚಪಾತಿಯ ಜೊತೆ ತಿನ್ನಬಹುದು.
ದೊಡ್ಡಪತ್ರೆಯನ್ನು ಬೆಳೆಸಲೂ ಅಂತಹ ಕಷ್ಟವೇನಿಲ್ಲ. ನಮ್ಮ ಮಲೆನಾಡಿನಲ್ಲಿ ತುಳಸಿಯ ಜೊತೆ ಒಂದು ದೊಡ್ಡಪತ್ರೆಯ ಗಿಡ ಇದ್ದೇ ಇರುತ್ತದೆ. ಇದನ್ನು ಮನೆ ಮನೆಗಳಲ್ಲೂ ಕುಂಡಗಳಲ್ಲಿ ಬೆಳೆಸಿ ಮತ್ತು ತಿನ್ನಿ, ಆರೋಗ್ಯವಾಗಿರಿ.
– ಮಂಜುಳಾ ರಾಜ್