ಸಾಲ್ಸಾ ಬೀನ್ಸ್ ರೈಸ್
ಮೂಲ ಸಾಮಗ್ರಿ : 2 ಕಪ್ ಉದುರುದುರಾದ ಅನ್ನ. 1-1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2 ಈರುಳ್ಳಿ, ಹೆಚ್ಚಿದ ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ ಹೋಳು (ಒಟ್ಟಾರೆ 1-2 ಕಪ್), ಅರ್ಧ ಕಪ್ ಬೆಂದ ಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು, ಟೊಮೇಟೊ ಸಾಸ್, ಅರ್ಧ ಸೌಟು ರೀಫೈಂಡ್ ಎಣ್ಣೆ.
ಸಾಲ್ಸಾ ಸಾಮಗ್ರಿ : 2 ಟೊಮೇಟೊ, 2 ಈರುಳ್ಳಿ, ಒಂದಿಷ್ಟು ಹೆಚ್ಚಿದ ಈರುಳ್ಳಿ ತೆನೆ, ರುಚಿಗೆ ತಕ್ಕಷ್ಟು ಉಪ್ಪು, ಅಚ್ಚ ಖಾರದ ಪುಡಿ, ಮಿಕ್ಸ್ಡ್ ಹರ್ಬ್ಸ್.
ಕ್ರೀಂಗಾಗಿ ಸಾಮಗ್ರಿ : 1 ಕಪ್ ಗಟ್ಟಿ ಕೆನೆ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ.
ಬೀನ್ಸ್ ಗಾಗಿ ಸಾಮಗ್ರಿ : 1 ಕಪ್ (ಇಡೀ ರಾತ್ರಿ ನೆನೆಸಿ ಮರುದಿನ ಬೇಯಿಸಿದ) ರಾಜ್ಮಾ , 1-1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2 ಈರುಳ್ಳಿ, 1-2 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಕೆಚಪ್, ತುರಿದ ಚೀಸ್, ಕೊ.ಸೊಪ್ಪು, ಖಾರದ ಆಲೂ ಚಿಪ್ಸ್.
ವಿಧಾನ : ಒಂದು ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಹೆಚ್ಚಿದ ಈರುಳ್ಳಿ, 3 ಬಗೆಯ ಕ್ಯಾಪ್ಸಿಕಂ, ಬೆಂದ ಕಾರ್ನ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಟೊಮೇಟೊ ಸಾಸ್ ಬೆರೆಸಿ ಕೆದಕಬೇಕು. ನಂತರ ಅನ್ನ ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಕೈಯಾಡಿಸಿ, ಕೆಳಗಿಳಿಸಿ. ಅದನ್ನು ಬೇಸನ್ನಿಗೆ ರವಾನಿಸಿ. ಅದೇ ಬಾಣಲೆಯಲ್ಲಿ ಮತ್ತಷ್ಟು ಎಣ್ಣೆ ಬಿಸಿ ಮಾಡಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ತೆನೆ, ಟೊಮೇಟೊ, ತುಸು ನೀರು ಬೆರೆಸಿ ಕೆದಕಬೇಕು. ಆಮೇಲೆ ಇದಕ್ಕೆ ಬೆಂದ ರಾಜ್ಮಾ (ತುಸು ಮಸೆದಿಡಿ), ಉಪ್ಪು, ಖಾರ, ಕೆಚಪ್, ತುರಿದ ಚೀಸ್, ಕೊ.ಸೊಪ್ಪು ಉದುರಿಸಿ ಚೆನ್ನಾಗಿ ಕೆದಕಿ ಬೇರೆಯಾಗಿಡಿ.
ಸಾಲ್ಸಾ ವಿಧಾನ : ಮೊದಲು ಒಂದು ಬಟ್ಟಲಿಗೆ ಸಾಲ್ಸಾದ ಎಲ್ಲಾ ಸಾಮಗ್ರಿ (ಹೆಚ್ಚಿಕೊಂಡು) ಬೆರೆಸಿಕೊಳ್ಳಿ. ಮೊಸರಿಗೆ ಉಳಿದ ಕ್ರೀಂ ಸಾಮಗ್ರಿ ಬೆರೆಸಿ ಗೊಟಾಯಿಸಿ. ನಂತರ ಒಂದು ಟ್ರೇನಲ್ಲಿ ಅನ್ನದ ಮಿಶ್ರಣ ಹರಡಿರಿ. ಇದರ ಮೇಲೆ 1 ಪದರ ರಾಜ್ಮಾ ಮಿಶ್ರಣ ಬರಲಿ. ಇದರ ಮೇಲೆ ಮೊಸರಿನ ಮಿಶ್ರಣ ಬರಲಿ. ಎಲ್ಲಕ್ಕೂ ಮೇಲೆ ಸಾಲ್ಸಾ ಮಿಶ್ರಣ ಹರಡಿರಿ. ಇದರ ಮೇಲೆ ಚಿಪ್ಸ್ ಹರಡಿ ಚಿತ್ರದಲ್ಲಿರುವಂತೆ ಅಲಂಕರಿಸಿ, ಸವಿಯಲು ಸರ್ವ್ ಮಾಡಿ.
ಟೋಫು ರೈಸ್ ಬೌಲ್
ಸಾಮಗ್ರಿ : 250 ಗ್ರಾಂ ಟೋಫು (ರೆಡಿಮೇಡ್ ಲಭ್ಯ), 1-1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಅಮ್ಚೂರ್ ಪುಡಿ, ಸೋಯಾ ಸಾಸ್, ರೆಡ್‌ಗ್ರೀನ್ ಚಿಲೀ ಸಾಸ್, ಟೊಮೇಟೊ ಕೆಚಪ್, ಟೊಮೇಟೊ ಪೇಸ್ಟ್, ಹುರಿದ ಫ್ಲಾಕ್ಸ್ ಸೀಡ್ಸ್, ವಿನಿಗರ್, ಕಾರ್ನ್ ಫ್ಲೋರ್, ಅರ್ಧ ಕಂತೆ ಹೆಚ್ಚಿದ ಈರುಳ್ಳಿ ತೆನೆ, 2 ಈರುಳ್ಳಿ, 2 ಕಪ್ ಉದುರುದುರಾದ ಬಿಸಿ ಅನ್ನ, ಅರ್ಧ ಸೌಟು ಎಣ್ಣೆ.
ವಿಧಾನ : ಟೋಫು (ಸಿಗದಿದ್ದರೆ ಪನೀರ್) ನ್ನು ಸಣ್ಣ ಕ್ಯೂಬ್ಸ್ ಆಗಿ ಕತ್ತರಿಸಿ. ಇದಕ್ಕೆ ತುಸು ರೆಡ್‌ಗ್ರೀನ್ ಚಿಲೀ ಸಾಸ್, ಸೋಯಾ ಸಾಸ್, ವಿನಿಗರ್, ಹುಳಿ ಮೊಸರಿನಲ್ಲಿ ಕದಡಿದ ಕಾರ್ನ್ ಫ್ಲೋರ್ ಬೆರೆಸಿ ಅರ್ಧ ಭಾಗ ಒಂದು ಕಡೆ ಇಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಈರುಳ್ಳಿ ತೆನೆ ಹಾಕಿ ಬಾಡಿಸಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ಉಳಿದ ಕಾರ್ನ್ ಫ್ಲೋರ್ ಮಿಶ್ರಣ ಇದಕ್ಕೆ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಉಳಿದ ಎಲ್ಲಾ ಸಾಸ್ ಗಳನ್ನೂ ಈಗ ಬೆರೆಸಿ ಕೆದಕಬೇಕು. ನಂತರ ಉಪ್ಪು, ಖಾರ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಗ್ರೇವಿ ಕೆದಕಬೇಕು. ಇದೇ ಸಮಯದಲ್ಲಿ ಪಕ್ಕದ ಒಲೆಯಲ್ಲಿ ತುಸು ಎಣ್ಣೆಯಲ್ಲಿ ನೆನೆದ ಟೋಫು/ ಪನೀರ್ ಕರಿದು, ಅದನ್ನು ಇದಕ್ಕೆ ಬೆರೆಸಿ ಕೈಯಾಡಿಸಿ. ನಂತರ ಹುರಿದ ಫ್ಲಾಕ್ಸ್ ಸೀಡ್ಸ್ ಬೆರೆಸಿ. ಒಂದು ಬೇಸನ್ನಿಗೆ ಮೊದಲು ಬಿಸಿ ಅನ್ನ ಹರಡಿ, ಅದರ ಮೇಲೆ ಈ ಟೋಫು/ಪನೀರ್ ಮಿಶ್ರಣ ಬರಲಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ ಬಿಸಿಬಿಸಿಯಾಗಿ ಸವಿಯಲು ಕೊಡಿ.
ಪಾವ್ ಭಾಜಿ
ಸಾಮಗ್ರಿ : 1-2 ಕ್ಯಾರೆಟ್ (ಸಣ್ಣ ಹೋಳಾಗಿಸಿ), 1 ಚಿಕ್ಕ ಹೂಕೋಸು ( ಸಣ್ಣ ತುಂಡುಗಳಾಗಿಸಿ), ಬೀನ್ಸ್, ಬೀಟ್ ರೂಟ್, ಆಲೂ, ಬಟಾಣಿ, ಟೊಮೇಟೊ, ಕ್ಯಾಪ್ಸಿಕಂ (ತಲಾ ಅರ್ಧರ್ಧ ಕಪ್ ಹೋಳು), 1 ಕಪ್ ಟೊಮೇಟೊ ಪೇಸ್ಟ್, ಹೆಚ್ಚಿದ 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪಾವ್ ಭಾಜಿ ಮಸಾಲೆ, ಗರಂ ಮಸಾಲೆ, ಶೇರ್ವನ್ ಸಾಸ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಬೆಣ್ಣೆ, ತುಪ್ಪ, ಅಗತ್ಯವಿದ್ದಷ್ಟು ಪಾವ್ (ಬನ್ನು).
ವಿಧಾನ : ಕ್ಯಾಪ್ಸಿಕಂ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹೊರತುಪಡಿಸಿ ಉಳಿದೆಲ್ಲ ಹೆಚ್ಚಿದ ತರಕಾರಿಯನ್ನು ಚಿಕ್ಕ ಕುಕ್ಕರ್ ನಲ್ಲಿ 1 ಕಪ್ ನೀರಿನೊಂದಿಗೆ ಬೇಯಿಸಿ ಕೆಳಗಿಳಿಸಿ. ಆರಿದ ನಂತರ ಮ್ಯಾಶರ್ ನಿಂದ ಮಸೆಯಿರಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಜೊತೆಗೆ 4 ಚಮಚ ಬೆಣ್ಣೆ ಸಹ ಬೆರೆಸಿರಿ. ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಹೆಚ್ಚಿದ ಟೊಮೇಟೊ ಆಮೇಲೆ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ, ಹಾಕಿ ಕೆದಕಬೇಕು. ಆಮೇಲೆ ಮಸೆದ ತರಕಾರಿ ಬೆರೆಸಿರಿ. ಇದನ್ನು ಮಂದ ಉರಿಯಲ್ಲಿ 7-8 ನಿಮಿಷ ಕೆದಕಬೇಕು. ಎಲ್ಲಾ ಬನ್ನುಗಳ್ನೂ ಗುಂಡಗೆ ಕತ್ತರಿಸಿ, ಒಳಭಾಗಕ್ಕೆ ಬೆಣ್ಣೆ ಸವರಿ, ಲಘುವಾಗಿ ತವಾ ಮೇಲೆ ಬಿಸಿ ಮಾಡಿ. ತರಕಾರಿ ಮಸಾಲೆ : (ಭಾಜಿ)ಗೆ ಕೊ.ಸೊಪ್ಪು, ಬೆಣ್ಣೆ ಬೆರೆಸಿ, ಬನ್ನು (ಪಾವ್)ಗಳ ಮಧ್ಯೆ 3-4 ಚಮಚ ಹರಡಿ ಸವಿಯಲು ಕೊಡಿ.
ಮೂಲ ಸಾಮಗ್ರಿ : 1 ಕಪ್ ಅಕ್ಕಿ, ತೊಗರಿಬೇಳೆ, ಹೆಸರುಬೇಳೆ, ಕಡಲೆಬೇಳೆ, ಮಸೂರ್ ಬೇಳೆ (ಒಟ್ಟಾಗಿ 1 ಕಪ್), ಅರ್ಧ ಸೌಟು ತುಪ್ಪ, 1 ಕಪ್ ಹೆಚ್ಚಿದ ಪಾಲಕ್ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಉದ್ದಕ್ಕೆ ಸೀಳಿದ ಹಸಿ ಮೆಣಸು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಬೆಲ್ಲ, ನಿಂಬೆರಸ, ಲವಂಗದೆಲೆ, ಚಕ್ಕೆ, ಲವಂಗ, ಮೊಗ್ಗು, ಜೀರಿಗೆ, ಸೋಂಪು, ಅರಿಶಿನ, ಗರಂ ಮಸಾಲ, ಚಾಟ್ ಮಸಾಲ.
ಓಟ್ಸ್ ಸಾಮಗ್ರಿ : ಅರ್ಧರ್ಧ ಕಪ್ ಓಟ್ಸ್ ಪೌಡರ್, ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ.
ಒಗ್ಗರಣೆಗೆ ಸಾಮಗ್ರಿ : ತುಸು ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ನೈಲಾನ್ ಎಳ್ಳು, ಕರಿಬೇವು, ಇಂಗು, ಒಣಮೆಣಸಿನಕಾಯಿ.
ವಿಧಾನ : ಮೊದಲು ಕುಕ್ಕರ್ ಗೆ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಸೋಂಪು, ಚಕ್ಕೆ ಲವಂಗ, ಮೊಗ್ಗು, ಲವಂಗದೆಲೆ, ಹಸಿ ಮೆಣಸು ಹಾಕಿ ಚಟಪಟಾಯಿಸಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಅರಿಶಿನ, ಉಳಿದ ಮಸಾಲೆ, ಉಪ್ಪು ಹಾಕಿ ಕೆದಕಬೇಕು. ಆಮೇಲೆ ಪಾಲಕ್ ಹಾಕಿ ಬಾಡಿಸಿ. ಆಮೇಲೆ ತೊಳೆದ ಅಕ್ಕಿ, ಬೇಳೆಗಳನ್ನು ಸೇರಿಸಿ. 4 ಕಪ್ ನೀರು ಬೆರೆಸಿ, 2 ಸೀಟಿ ಬರುವಂತೆ ಕೂಗಿಸಿ. ತಣಿದ ನಂತರ ಮತ್ತೆ ಕುಕ್ಕರ್ ನ್ನು ಒಲೆ ಮೇಲಿರಿಸಿ, ತುಪ್ಪ ಬೆರೆಸಿ ಕೆದಕಬೇಕು. ಇದಕ್ಕೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಳ್ಳಿ.
ಈಗ ರೋಲ್ ಗೆ ಬೇಕಾದ ಎಲ್ಲಾ ಸಾಮಗ್ರಿ ಬೆರೆಸಿಕೊಳ್ಳಿ. ಇದರಿಂದ ಮೃದು ಹಿಟ್ಟು ಕಲಸಿಡಿ. ತುಪ್ಪ ಸವರಿ ನಾದಿ 10 ನಿಮಿಷ ನೆನೆಯಲು ಬಿಡಿ. ಸ್ಟೀಮರ್ ಗೆ ನೀರು ಬೆರೆಸಿ ಒಲೆಯ ಮೇಲಿಡಿ. ಮಿಶ್ರಣದಿಂದ 3-4 ಉದ್ದ ರೋಲ್ ಕಟ್ ಮಾಡಿ, ಸ್ಟೀಮ್ ಮಾಡಬೇಕು. ಕೆಳಗಿಳಿಸಿ ರೋಲ್ಸ್ ತಣ್ಣಗಾದಾಗ, ಇದರಿಂದ ಸಣ್ಣ ಸಣ್ಣದಾಗಿ ಕತ್ತರಿಸಿ.
ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಕತ್ತರಿಸಿದ ಓಟ್ಸ್, ಕಡಲೆ ಮಿಶ್ರಣ ಹಾಕಿ ಬಾಡಿಸಿ. ಚಿತ್ರದಲ್ಲಿರುವಂತೆ ಇದನ್ನು ಖಿಚಡಿ ಜೊತೆ ಅಲಂಕರಿಸಿ, ಸವಿಯಲು ಕೊಡಿ.
ಈರುಳ್ಳಿ ತೆನೆಯ ಹೆಲ್ದಿ ಪರೋಟ
ಮೂಲ ಸಾಮಗ್ರಿ : 2 ಕಂತೆ ಹೆಚ್ಚಿದ ಈರುಳ್ಳಿ ತೆನೆ, ತುಸು ಹಸಿ ಮೆಣಸು, ಶುಂಠಿ, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, 1 ಕಪ್ ಗೋಧಿಹಿಟ್ಟು.
ಇತರೆ ಸಾಮಗ್ರಿ : 100 ಗ್ರಾಂ ತುರಿದ ಪನೀರ್, ರುಚಿಗೆ ತಕ್ಕಷ್ಟು ಅಮೂಲ್ ಚೀಸ್, ಪುಡಿ ಮೆಣಸು, ಪರೋಟಾಗಾಗಿ ತುಪ್ಪ.
ವಿಧಾನ : ಹೆಚ್ಚಿದ ಪದಾರ್ಥ ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ತಿರುವಿಕೊಳ್ಳಿ. ನಂತರ ಹಿಟ್ಟಿಗೆ ಉಪ್ಪು, ರುಬ್ಬಿದ ಮಿಶ್ರಣ, ತುಸು ಎಣ್ಣೆ ಬೆರೆಸಿ ಮೃದುವಾದ ಚಪಾತಿ ಹಿಟ್ಟು ಕಲಸಿಡಿ. ಅರ್ಧ ಗಂಟೆ ನೆನೆಯಲು ಬಿಟ್ಟು, ತುಪ್ಪ ಬೆರೆಸಿ ನಾದಿಕೊಳ್ಳಿ. ನಂತರ ಇತರೆ ಸಾಮಗ್ರಿಗಳನ್ನು ಬೆರೆಸಿಕೊಳ್ಳಿ. ಮೊದಲು ನಾದಿದ ಹಿಟ್ಟಿನಿಂದ ಸಣ್ಣ ನಿಂಬೆ ಗಾತ್ರ ಉಂಡೆ ಮಾಡಿ, ಲಟ್ಟಿಸಿ 2-3 ಚಮಚ ಪನೀರ್ ಮಿಶ್ರಣ ತುಂಬಿಸಿ ಮತ್ತೆ ಲಟ್ಟಿಸಿ. ಇದರಿಂದ ಕಾವಲಿ ಮೇಲೆ ತುಪ್ಪ ಬಳಸಿ, ಎರಡೂ ಬದಿ ಪರೋಟ ಬೇಯಿಸಿ. ಬಿಸಿ ಬಿಸಿಯಾಗಿ ಸಾಸ್ ಚಟ್ನಿ ಜೊತೆ ಸವಿಯಲು ಕೊಡಿ.
ತ್ರಿಕೋನಾಕಾರದ ಪಿಜ್ಜಾ
ಸಾಮಗ್ರಿ : 2 (ರೆಡಿಮೇಡ್) ವೀಟ್ ಪಿಜ್ಜಾ ಬೇಸ್, ಅರ್ಧರ್ಧ ಕಪ್ ಅಕ್ಕಿ ಹಿಟ್ಟು ಹೆಸರು ಬೇಳೆಯ (ಹುರಿದು) ಹಿಟ್ಟು, 3 ಬಗೆ ಹೆಚ್ಚಿದ ಕ್ಯಾಪ್ಸಿಕಂ, ತುಸು ತುರಿದ ಅಮೂಲ್ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗ್ಯಾನೋ, ತುಸು ಎಣ್ಣೆ.
ವಿಧಾನ : 2 ಬಗೆ ಹಿಟ್ಟು, ಉಪ್ಪು, ಮೆಣಸು, ತುಸು ನೀರು ಬೆರೆಸಿ ಇಡ್ಲಿ ಹಿಟ್ಟಿನಂತೆ ಕಲಸಿಡಿ. ತುಸು ಬಿಸಿ ಮಾಡಿದ ಎಣ್ಣೆಗೆ 3 ಬಗೆ ಕ್ಯಾಪ್ಸಿಕಂ ಹೋಳು, ಉಪ್ಪು, ಮೆಣಸು ಹಾಕಿ ಬಾಡಿಸಿ. ಇಡ್ಲಿ ಹಿಟ್ಟಿನಿಂದ ದೋಸೆ ತಯಾರಿಸಿ. ಇದರ ಮೇಲೆ ಬೆಂದ ಕ್ಯಾಪ್ಸಿಕಂ, ತುರಿದ ಚೀಸ್, ಉಪ್ಪು, ಮೆಣಸು, ಓರಿಗ್ಯಾನೋ ಉದುರಿಸಿ, ಎರಡೂ ಬದಿ ಬೇಯಿಸಿ. ಈಗ ಪಿಜ್ಜಾ ಬೇಸನ್ನೂ ಹೀಗೆ ಎರಡೂ ಬದಿ ಬೇಯಿಸಿ, ದೋಸೆ ಅದರ ಮೇಲೆ ಹರಡಿರಿ. ಇನ್ನಷ್ಟು ಚೀಸ್ ಉದುರಿಸಿ, ಕರಗಿದ ನಂತರ ಕೆಳಗಿಳಿಸಿ. ಇದರಿಂದ ತ್ರಿಕೋನಾಕಾರದ ತುಂಡು ಕತ್ತರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಸಾಸ್ ಜೊತೆ ಸವಿಯಿರಿ.
ಬಿಸಿ ಚೀಸ್ ಸಲಾಡ್ ಮತ್ತು ರುಮಾಲೀ ರೋಲ್
ಮೂಲ ಸಾಮಗ್ರಿ : ಅರ್ಧ ಬಟ್ಟಲು ಬೇಯಿಸಿ ಮಸೆದ ಆಲೂ, ಒಂದಿಷ್ಟು ಹೆಚ್ಚಿದ ಕ್ಯಾರೆಟ್, ಬೀನ್ಸ್, 3 ಬಗೆ ಕ್ಯಾಪ್ಸಿಕಂ, ಅನಾನಸ್, ಸೇಬು, ಸಪೋಟ, ದ್ರಾಕ್ಷಿ, ಅರ್ಧ ಕಪ್ ಹಸಿ ಬಟಾಣಿ, ಮೈದಾ, ತುರಿದ ಚೀಸ್, ಹಾಲು, 1 ಚಮಚ ಮಿಕ್ಸ್ಡ್ ಹರ್ಬ್ಸ್, ಉಪ್ಪು, ಮೆಣಸು.
ರೋಲ್ ಸಾಮಗ್ರಿ : 2-3 ರುಮಾಲೀ ರೋಟಿ (ರೆಡಿಮೇಡ್ ಲಭ್ಯ), ಒಂದಿಷ್ಟು ತುರಿದ ಕ್ಯಾರೆಟ್, ನವಿಲುಕೋಸು, ಎಲೆಕೋಸು, ಕ್ಯಾಪ್ಸಿಕಂ, ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಶೇರ್ವನ್ ಸಾಸ್, ಮೆಯೋನೀಸ್, ಹೆಚ್ಚಿದ ಈರುಳ್ಳಿ ತೆನೆ, ಬೆಣ್ಣೆ, ತುಪ್ಪ.
ವಿಧಾನ : ಬಟಾಣಿ, ಕ್ಯಾರೆಟ್ ಬೀನ್ಸ್ ನ್ನು ಅರೆಬೆರೆ ಬೇಯಿಸಿ. ಒಂದು ದೊಡ್ಡ ಬೇಸನ್ನಿಗೆ ಮಸೆದ ಆಲೂ, ಉಳಿದೆಲ್ಲ ತರಕಾರಿ, ಹಣ್ಣು ಸೇರಿಸಿ. ಒಂದು ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ. ಅದಕ್ಕೆ ಮೈದಾ ಹಾಕಿ ಗುಲಾಬಿ ಬಣ್ಣ ಘಮ್ಮೆಂದು ಬರುವಂತೆ ಹುರಿಯಿರಿ. ಇದಕ್ಕೆ ಉಪ್ಪು, ಹರ್ಬ್ಸ್ ಸೇರಿಸಿ. ಇದಕ್ಕೆ ಹಾಲು ಬೆರೆಸಿ, ಬೇಗ ಬೇಗ ಕೈಯಾಡಿಸುತ್ತಾ ಪೇಸ್ಟ್ ತರಹ ಮಾಡಿಕೊಳ್ಳಿ. ಇದು ತುಂಬಾ ಗಟ್ಟಿ ಅನಿಸಿದರೆ ಇನ್ನಷ್ಟು ಹಾಲು ಬೆರೆಸಿ ದೋಸೆ ಹಿಟ್ಟಿನಷ್ಟು ತೆಳು ಮಾಡಿ. ಇದಕ್ಕೆ ತುರಿದ ಚೀಸ್ ಬೆರೆಸಿ. ನಂತರ ಹಣ್ಣು ತರಕಾರಿ ಹೋಳು ಹಾಕಿ ಎಲ್ಲಾ ಬೆರೆತುಕೊಳ್ಳುವಂತೆ ಕೆದಕಬೇಕು. ಕೆಳಗಿಳಿಸಿದ ಮೇಲೆ ಉಳಿದ ಚೀಸ್ ಉದುರಿಸಿ.
ರೋಲ್ ಗಾಗಿ ವಿಧಾನ : ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ರೋಲ್ ಗೆ ಬೇಕಾದ ಎಲ್ಲಾ ತರಕಾರಿ ಇದಕ್ಕೆ ಹಾಕಿ ಬಾಡಿಸಿ. ಉಪ್ಪು, ಮೆಣಸು, ಹರ್ಬ್ಸ್ ಸಹ ಬೆರೆಸಿರಿ. ಪನೀರ್ ಗೆ ತುಸು ಶೇರ್ವನ್ ಸಾಸ್, ಉಪ್ಪು, ಮೆಣಸು ಹಾಕಿ ನಾನ್ ಸ್ಟಿಕ್ ಪ್ಯಾನಿನಲ್ಲಿ ಹೊಂಬಣ್ಣಕ್ಕೆ ಬಾಡಿಸಿ. ಮೊದಲು ರುಮಾಲೀ ರೋಟಿಗಳಿಗೆ ತುಪ್ಪ ಸವರಿಡಿ. ನಂತರ ಇದರ ಮೇಲೆ ಶೇರ್ವನ್ ಸಾಸ್, ಮೆಯೋನೀಸ್, ಬಾಡಿಸಿದ ತರಕಾರಿ ಮಿಶ್ರಣ, ಪನೀರ್ ಬೆರೆಸಿ, ಟೈಟ್ ರೋಲ್ಸ್ ಮಾಡಿಕೊಳ್ಳಿ. ಇದರ ಮೇಲೂ ತುಸು ತುಪ್ಪ ಸವರಿಕೊಳ್ಳಿ. ಪ್ರೀಹೀಟ್ ಓವನ್ ನಲ್ಲಿ ಸಲಾಡ್ ಬೌಲ್ ಹಾಗೂ ರೋಲ್ಸ್ ಇರಿಸಿ, ಚೀಸ್ ಕರಗುವವರೆಗೂ ಬೇಕ್ ಮಾಡಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ವೆಜ್ ಕಟ್ ಲೆಟ್
ಸಾಮಗ್ರಿ : 1 ಕಂತೆ ಪಾಲಕ್ ಸೊಪ್ಪು, ಒಂದಿಷ್ಟು ಹೆಚ್ಚಿದ ಬೀನ್ಸ್, ಕ್ಯಾರೆಟ್, ಎಲೆಕೋಸು, ಕಾರ್ನ್, ಬಟಾಣಿ, 3 ಬಗೆಯ ಕ್ಯಾಪ್ಸಿಕಂ ತುಂಡುಗಳು, ತುರಿದ ಪನೀರ್, ಬ್ರೆಡ್ ಕ್ರಂಬ್ಸ್, ಕಡಲೆಹಿಟ್ಟು, ಹೆಚ್ಚಿದ ಹಸಿ ಮೆಣಸು, ಕರಿಬೇವು, ಪುದೀನಾ, ಹಸಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಚಾಟ್ ಮಸಾಲೆ, ಅಮ್ಚೂರ್ ಪುಡಿ, ತುಸು ಎಣ್ಣೆ.
ವಿಧಾನ : ಒಂದು ನಾನ್ ಸ್ಟಿಕ್ ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಹೆಚ್ಚಿದ ತರಕಾರಿ, ಬಟಾಣಿ, ಪಾಲಕ್ ಸೊಪ್ಪು, ಎಲ್ಲಾ ಹಾಕಿ ಬಾಡಿಸಿ. ತೇವಾಂಶ ಇಲ್ಲದಂತೆ ಹಿಂಗಿಸಿ ಕೆಳಗಿಳಿಸಿ. ನಂತರ ಇದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ಮಿಶ್ರಣ ಕಲಸಿಡಿ. ನಿಂಬೆ ಗಾತ್ರದ ಉಂಡೆ ಹಿಡಿದು, ಚಿತ್ರದಲ್ಲಿರುವಂತೆ ಕಟ್ ಲೆಟ್ ತಟ್ಟಿಕೊಂಡು, ತವಾ ಮೇಲೆ ಶ್ಯಾಲೋ ಫ್ರೈ ಮಾಡಿ, ಬಿಸಿ ಬಿಸಿಯಾಗಿ ಸಾಸ್ ಜೊತೆ ಸವಿಯಿರಿ.
ಹೆಲ್ದಿ ಪಟ್ ಲಾಂಗ್
ಸಾಮಗ್ರಿ : 1 ಪಟ್ ಲಾಂಗ್ ಬ್ರೆಡ್, 1 ಕಪ್ ಹೆಚ್ಚಿದ ಮಿಶ್ರ ತರಕಾರಿ, ಬೆಂದ ರಾಜ್ಮಾ, ಕಡಲೆಕಾಳು, ಹಸಿ ಬಟಾಣಿ (ಒಟ್ಟಾಗಿ 1 ಕಪ್), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಾಸ್, ಅರ್ಧ ಕಪ್ ತುರಿದ ಚೀಸ್, ತುಸು ಮಿಕ್ಸ್ಡ್ ಹರ್ಬ್ಸ್.
ವಿಧಾನ : ಹೆಚ್ಚಿದ ತರಕಾರಿ, ಬೆಂದ ಕಾಳುಗಳನ್ನು ಒಂದು ಬೇಸನ್ನಿಗೆ ಬೆರೆಸಿಕೊಳ್ಳಿ. ಇದಕ್ಕೆ ಮಿಕ್ಸ್ಡ್ ಹರ್ಬ್ಸ್, ಉಪ್ಪು ಅರ್ಧ ಭಾಗ ಬೆಣ್ಣೆ, ಟೊಮೇಟೊ ಸಾಸ್, ಮೆಣಸು ಎಲ್ಲಾ ಸೇರಿಸಿ. ಪಟ್ ಲಾಂಗ್ ಬ್ರೆಡ್ ನ್ನು ಚಿತ್ರದಲ್ಲಿರುವಂತೆ ಉದ್ದಕ್ಕೆ 2 ಭಾಗ ಮಾಡಿ. ಇದರ ನಡುವೆ ಕರಗಿದ ಬೆಣ್ಣೆ ಸವರಬೇಕು. ಇದರ ಮೇಲೆ ತರಕಾರಿ ಮಿಶ್ರಣದ ಒಂದು ಪದರ ಬರಲಿ. ಇದರ ಮೇಲೆ ತುರಿದ ಚೀಸ್ ಉದುರಿಸಿ, ತವಾಗೆ ಎಣ್ಣೆ ಬಿಟ್ಟು, ಅದರಲ್ಲಿ ಇವನ್ನು ಗರಿಗರಿ ಆಗುವಂತೆ ಬಿಸಿ ಮಾಡಿ. ಅಗತ್ಯ ಎನಿಸಿದರೆ ಓವನ್ ನಲ್ಲಿರಿಸಿ. ಚೀಸ್ ಕರಗುವವರೆಗೂ ಬೇಕ್ ಮಾಡಬಹುದು. ನಂತರ ಬಿಸಿ ಬಿಸಿಯಾಗಿ ಸಾಸ್, ಕಾಫಿ, ಟೀ ಜೊತೆ ಸಂಜೆ ಸವಿಯಲು ಕೊಡಿ.