ಸಿಹಿಗುಂಬಳದ ಬರ್ಫಿ
ಸಾಮಗ್ರಿ : 500 ಗ್ರಾಂ ಸಿಹಿಗುಂಬಳ (ಕೇಸರಿ ಬಣ್ಣದ್ದು), ರುಚಿಗೆ ತಕ್ಕಷ್ಟು ಸಕ್ಕರೆ, ಖೋವಾ, ತುಪ್ಪ, ಕೋಕೋ ಪೌಡರ್, ಫ್ರೆಶ್ ಕ್ರೀಂ, 1-2 ಹನಿ ವೆನಿಲಾ ಎಸೆನ್ಸ್, ಅಲಂಕರಿಸಲು ಬಾದಾಮಿ ಚೂರು.
ವಿಧಾನ : ಕುಂಬಳಕಾಯಿ ಶುಚಿಗೊಳಿಸಿ, ದೊಡ್ಡ ಹೋಳಾಗಿಸಿ ಸಿಪ್ಪೆ ಹೆರೆದಿಡಿ. ನಂತರ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಇದರ ಸಣ್ಣ ಹೋಳುಗಳನ್ನು ಅದರಲ್ಲಿ ಘಮ್ಮೆನ್ನುವಂತೆ ಬಾಡಿಸಿ. 15 ನಿಮಿಷಗಳ ನಂತರ ಇದಕ್ಕೆ ಸಕ್ಕರೆ ಹಾಕಿ, ಪೂರ್ತಿ ತೇಲಾಂಶ ಹಿಂಗಿಸಿ. ನಂತರ ಇದಕ್ಕೆ ತುರಿದ ಖೋವಾ ಬೆರೆಸಿ ಕೆದಕಬೇಕು. 2 ನಿಮಿಷ ಬಿಟ್ಟು ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ ಸಮನಾಗಿಸಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಖೋವಾ ಬಾಡಿಸಿ, ಅದಕ್ಕೆ ತುಸು ಸಕ್ಕರೆ, ಕೋಕೋ ಬೆರೆಸಿ ಕೈಯಾಡಿಸಿ. ಇದಕ್ಕೆ ಕ್ರೀಂ ಬೆರೆಸಿ ಸಕ್ಕರೆ ಕರಗುವಂತೆ ಕೆದಕಿ ಕೆಳಗಿಳಿಸಿ. ಇದನ್ನು ಜಮೆಗೊಂಡ ಬರ್ಫಿ ಮೇಲೆ ಹರಡಿ, ತುಸು ಆರಿದ ನಂತರ ಚಿತ್ರದಲ್ಲಿರುವಂತೆ ಕತ್ತರಿಸಿ, ಬಾದಾಮಿಯಿಂದ ಅಲಂಕರಿಸಿ.
ಮಲಾಯಿ ಲಡ್ಡು
ಸಾಮಗ್ರಿ : ಅರ್ಧ ಲೀ. ಕೆನೆಭರಿತ ಗಟ್ಟಿ ಹಾಲು, 100 ಗ್ರಾಂ ಪನೀರ್, ಅರ್ಧರ್ಧ ಕಪ್ ಕ್ರೀಂ-ಸಕ್ಕರೆ, ತುಸು ಏಲಕ್ಕಿ ಪುಡಿ.
ವಿಧಾನ : ಬಾಣಲೆಯಲ್ಲಿ ಹಾಲು ಕಾಯಿಸಿ, ಅರ್ಧ ಹಿಂಗುವವರೆಗೆ ಮಂದ ಉರಿಯಲ್ಲಿ ಕುದಿಸಬೇಕು. ಇದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಕರಗುವಂತೆ ಕದಡಿಕೊಳ್ಳಿ. ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ಪನೀರ್ ಚೂರು, ಫ್ರೆಶ್ ಕ್ರೀಂ, ಏಲಕ್ಕಿ ಪುಡಿ ಸೇರಿಸಿ ಮತ್ತಷ್ಟು ಕೆದಕಬೇಕು. ಇದು ಸಾಕಷ್ಟು ಗಟ್ಟಿ ಆಗುವವರೆಗೂ ಮಂದ ಉರಿಯಲ್ಲಿ ಹೀಗೇ ಕೈಯಾಡಿಸುತ್ತಿರಿ. ಕೆಳಗಿಳಿಸಿದ ನಂತರ ಚೆನ್ನಾಗಿ ಆರಿದ ಮೇಲೆ, ಲಡ್ಡು ಉಂಡೆ ಕಟ್ಟಬೇಕು. ಚಿತ್ರದಲ್ಲಿರುವಂತೆ ಅಲಂಕರಿಸಿ, ಅತಿಥಿಗಳು ಬಂದಾಗ ಸವಿಯಲು ಕೊಡಿ.
ಬನಾನಾ ಸ್ಲೈಸ್
ಸಾಮಗ್ರಿ : ಚೆನ್ನಾಗಿ ಮಾಗಿದ 2 ಚುಕ್ಕೆ ಬಾಳೆಹಣ್ಣು, 9-10 ಗ್ಲೂಕೋಸ್ ಬಿಸ್ಕತ್ತು, 2-2 ಚಮಚ ಫ್ರೆಶ್ ಕ್ರೀಂ, ಹಾಲಿನ ಗಟ್ಟಿ ಕೆನೆ, ಕಾಲು ಲೀ. ಗಟ್ಟಿ ಕೆನೆಭರಿತ ಹಾಲು, 1 ಚಮಚ ಕಾರ್ನ್ ಪೌಡರ್, 4-5 ಚಮಚ ಪುಡಿಸಕ್ಕರೆ, ಕಾಯಿತುರಿ, ತುಸು ಏಲಕ್ಕಿ ಪುಡಿ.
ವಿಧಾನ : ಮೊದಲು ಬಿಸ್ಕತ್ತನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಇದಕ್ಕೆ ಹಾಲಿನ ಕೆನೆ ಬೆರೆಸಿ ಮತ್ತೆ ಚಲಾಯಿಸಿ. ಮೋಲ್ಡ್ ಗೆ ಇದರ ಒಂದು ಪದರ ಬರಲಿ. ಬಾಣಲೆಯಲ್ಲಿ ಮೊದಲು ಹಾಲು ಕಾಯಿಸಿ ಅದು ಕಾದಾಗ, ಮಂದ ಉರಿಯಲ್ಲಿ ಅರ್ಧದಷ್ಟು ಹಿಂಗುವವರೆಗೂ ಕುದಿಸಬೇಕು. ನಂತರ ಇದಕ್ಕೆ ಫ್ರೆಶ್ ಕ್ರೀಂ, ಕಾಯಿತುರಿ, ಕಾರ್ನ್ ಪೌಡರ್ ಹಾಕಿ ಕೆದಕಬೇಕು. ಇದು ಸಾಕಷ್ಟು ಗಟ್ಟಿಯಾದಾಗ ಕೆಳಗೆ ಇಳಿಸಿ. ಒಂದು ತಟ್ಟೆಯಲ್ಲಿ ಬಿಸ್ಕತ್ತಿನ ಪುಡಿ ಹರಡಿ, ಅದರ ಮೇಲೆ ಈ ಮಿಶ್ರಣದ ಪದರ ಬರುವಂತೆ ಮಾಡಿ. ಇದನ್ನು ಫ್ರಿಜ್ ನಲ್ಲಿರಿಸಿ ಸೆಟ್ ಮಾಡಿ. ಫ್ರಿಜ್ ನಿಂದ ಹೊರತೆಗೆದ ನಂತರ, ಚಿತ್ರದಲ್ಲಿರುವೆತೆ ಬಾಳೆ ಬಿಲ್ಲೆಗಳಿಂದ ಅಲಂಕರಿಸಿ, ಏಲಕ್ಕಿ ಉದುರಿಸಿ, ಕೂಲ್ ಮಾಡಿ, ಸವಿಯಲು ಕೊಡಿ.