ಡ್ರೈಫ್ರೂಟ್ಕಟ್ಲೆಟ್

ಮೂಲ ಸಾಮಗ್ರಿ : 2 ಮಧ್ಯಮ ಗಾತ್ರದ ಬೀಟ್‌ ರೂಟ್‌, 150 ಗ್ರಾಂ ಬೇಯಿಸ ಮಸೆದ ಆಲೂ, 2-3 ಬ್ರೆಡ್‌ ಸ್ಲೈಸ್‌, 4-4 ಚಮಚ ಆರಾರೂಟ್‌ ಪೌಡರ್‌, ಕಡಲೆಹಿಟ್ಟು, ಕರಿಯಲು ರೀಫೈಂಡ್‌ ಎಣ್ಣೆ, ತುಸು ಉಪ್ಪು, ಎಳ್ಳು.

ಹೂರಣದ ಸಾಮಗ್ರಿ : ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಹಸಿ ಖರ್ಜೂರ, ಅಕ್ರೋಟ್‌, ಹೇಝಲ್ ನಟ್‌ (ಒಟ್ಟಾಗಿ 2 ಕಪ್‌), ತುಸು ತುರಿದ ಪನೀರ್‌, ಚಿಟಕಿ ಮೆಣಸು, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಬೀಟ್‌ ರೂಟ್‌ ಸಿಪ್ಪೆ ಹೆರೆದು, ಅದನ್ನು  ಬಿಸಿ ನೀರಲ್ಲಿ ಬೇಯಿಸಿಕೊಳ್ಳಿ. ಆರಿದ ನಂತರ ಇದನ್ನು ನೀಟಾಗಿ ತುರಿದಿಡಿ. ಇದಕ್ಕೆ ಮಸೆದ ಆಲೂ, ಕಿವುಚಿದ ಬ್ರೆಡ್‌ ಸೇರಿಸಿ. ನಂತರ ಆರಾರೂಟ್‌ ಪೌಡರ್‌, ಕಡಲೆಹಿಟ್ಟು, ಉಪ್ಪು ಸೇರಿಸಿ ಮಿಶ್ರಣ ಕಲಸಿಡಿ. ಡ್ರೈ ಫ್ರೂಟ್ಸ್ ನ್ನು ತುಪ್ಪದಲ್ಲಿ ಹುರಿದು, ತುರಿದ ಪನೀರ್‌, ಮೆಣಸಿಗೆ ಬೆರೆಸಿಕೊಳ್ಳಿ. ಬೀಟ್‌ ರೂಟ್‌ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರ ತೆಗೆದುಕೊಂಡು, ಅದರ ಮಧ್ಯೆ ರಂಧ್ರ ಮಾಡಿ, 1-1 ಚಮಚ ಈ ಹೂರಣ ತುಂಬಿಸಿ. ನಂತರ ಇದಕ್ಕೆ ಕಟ್‌ ಲೆಟ್‌ ಆಕಾರ ನೀಡಿ, ಎಳ್ಳಲ್ಲಿ ಹೊರಳಿಸಿ, ಚಿತ್ರದಲ್ಲಿರುವಂತೆ 1-1 ಇಡಿಯಾದ ಗೋಡಂಬಿ ಹುದುಗಿಸಿ, ಕಾದ ಎಣ್ಣೆಯಲ್ಲಿ ಮಂದ ಉರಿ ಮಾಡಿ ಕರಿಯಿರಿ. ಇದನ್ನು ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಸ್ಪೈಸಿ ಮಿಕ್ಸ್ ಚರ್

ಸಾಮಗ್ರಿ : 3 ಕಪ್‌ ಕಾರ್ನ್‌ ಫ್ಲೇಕ್ಸ್ (ರೆಡಿಮೇಡ್‌ ಲಭ್ಯ), ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು, ಕಡಲೆಬೀಜ, ಕರಿದ ಕಾಬೂಲ್‌ ಕಡಲೆಕಾಳು, (ತಲಾ ಅರ್ಧ ಕಪ್‌, ತುಪ್ಪದಲ್ಲಿ ಹುರಿದಿಡಿ). 4-5 ಎಸಳು ಕರಿಬೇವು, ಕೊಬ್ಬರಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಚಾಟ್‌ ಮಸಾಲ, ಅಮ್ಚೂರ್‌ ಪುಡಿ, ಡೈಮಂಡ್‌ ಸಕ್ಕರೆ, ಬ್ಲ್ಯಾಕ್‌ ಸಾಲ್ಟ್.

Cookry-page-3-4

ವಿಧಾನ : ಡ್ರೈಫ್ರೂಟ್ಸ್ ಹುರಿದ ನಂತರ, ಕಡಲೆಬೀಜ ಹುರಿಯಿರಿ. ಒಂದು ಬೇಸನ್ನಿಗೆ ಕಾರ್ನ್‌ ಫ್ಲೇಕ್ಸ್ ಜೊತೆ ಇವನ್ನೂ ಬೆರೆಸಿಡಿ. ಇದಕ್ಕೆ ಕರಿದ ಕರಿಬೇವು, ದೊಡ್ಡ ಗಾತ್ರದ ತುರಿದ ಕೊಬ್ಬರಿ, 2 ಬಗೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಚೆನ್ನಾಗಿ ಬೆರೆಸಿಕೊಂಡು ಏರ್‌ ಟೈಟ್‌ ಡಬ್ಬಗಳಲ್ಲಿ ತುಂಬಿಸಿಡಿ. ಬೇಕಾದಾಗ ಡ್ರೈ ಫ್ರೂಟ್ಸ್ ಕಟ್‌ ಲೆಟ್‌ ಜೊತೆ ಇದನ್ನು ಸವಿಯಬಹುದು.

ಮ್ಯಾಕ್ರೋನಿ ಸಲಾಡ್

ಮೂಲ ಸಾಮಗ್ರಿ : 2 ಕಪ್‌ ಬೆಂದ ಮ್ಯಾಕ್ರೋನಿ, 1 ಸಣ್ಣ ಸೌತೇಕಾಯಿ, 1 ಈರುಳ್ಳಿ, ತುಸು ಹೆಚ್ಚಿದ ಅನಾನಸ್‌, 1 ಕ್ಯಾರೆಟ್‌, 1-1 ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಂ, 1 ಗಿಟುಕು ತೆಂಗಿನ ತುರಿ.

ಸಲಾಡ್ಡ್ರೆಸ್ಸಿಂಗ್ಸಾಮಗ್ರಿ :  ತುಸು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, 2 ಚಮಚ ವಿನಿಗರ್‌, 1 ಚಮಚ ಆಲಿವ್ ‌ಎಣ್ಣೆ, 2 ಚಮಚ ಪೈನಾಪಲ್ ಸಿರಪ್‌, ರುಚಿಗೆ ತುಸು ಉಪ್ಪು ಚಾಟ್‌ ಮಸಾಲ.

ವಿಧಾನ : ಒಂದು ದೊಡ್ಡ ಬೇಸನ್ನಿಗೆ ಮೊದಲು ಮ್ಯಾಕ್ರೋನಿ ಹರಡಿಕೊಳ್ಳಿ. ಇದರ ಮೇಲೆ ಒಂದೊಂದಾಗಿ ಎಲ್ಲಾ ಹೆಚ್ಚಿದ ಸಾಮಗ್ರಿ, ತೆಂಗು, ಡ್ರೆಸ್ಸಿಂಗ್‌ ಮಿಶ್ರಣ ಸೇರಿಸಿ ಬೆರೆಸಿಕೊಳ್ಳಿ. ಅಗತ್ಯ ಎನಿಸಿದರೆ ಇದನ್ನು ಅರ್ಧ ಗಂಟೆ ಫ್ರಿಜ್‌ ನಲ್ಲಿರಿಸಿ ನಂತರ ಸವಿಯಲು ಕೊಡಿ.

ಸ್ಪೆಷಲ್ ಆಲೂ ಟಿಕ್ಕಿ

ಮೂಲ ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 4 ಚಮಚ ಆರಾರೂಟ್‌, 2 ಚಮಚ ಅಕ್ಕಿಹಿಟ್ಟು, ಅರ್ಧ ಕಪ್‌ ಬ್ರೆಡ್‌ ಕ್ರಂಬ್ಸ್, ಕರಿಯಲು ಎಣ್ಣೆ, ರುಚಿಗೆ ಉಪ್ಪುಖಾರ.

ಹೂರಣದ ಸಾಮಗ್ರಿ : 5-6 ಚಮಚ ಹೆಸರು ಬೇಳೆ, 4 ಚಮಚ ಬಟಾಣಿ, ಬಾದಾಮಿ, ಪಿಸ್ತಾ, ದ್ರಾಕ್ಷಿ, ಗೋಡಂಬಿ ಚೂರು (ಒಟ್ಟಾಗಿ 1 ಕಪ್‌) ರುಚಿಗೆ ತಕ್ಕಷ್ಟು ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು, ಖಾರ, ಚಾಟ್‌ ಮಸಾಲ, ಹೆಚ್ಚಿದ ಹಸಿ ಮೆಣಸು, ಶುಂಠಿ, ಕೊ.ಸೊಪ್ಪು, 4 ಚಮಚ ಕಡಲೆಹಿಟ್ಟು, ಅಲಂಕರಿಸಲು ಓಂಪುಡಿ.

ವಿಧಾನ : ಮೊದಲು ಬಿಸಿ ನೀರಲ್ಲಿ ಹೆಸರು ಬೇಳೆ ಬೇಯಿಸಿ (ಸುಮಾರಾಗಿ), ನೀರು ಬಸಿದಿಡಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಬೇಳೆ ಹಾಕಿ ಹುರಿಯಿರಿ. ನಂತರ ಕಡಲೆಹಿಟ್ಟು ಹಾಕಿ ಕೆದಕಬೇಕು. ನಂತರ ಇದಕ್ಕೆ  ಹಸಿ ಬಟಾಣಿ, ಡ್ರೈ ಫ್ರೂಟ್ಸ್, ಉಪ್ಪು, ಖಾರ ಸೇರಿಸಿ ಚೆನ್ನಾಗಿ ಕೆದಕಿ ಮಿಶ್ರಣ ಕೆಳಗಿಳಿಸಿ. ಒಂದು ಬೇಸನ್ನಿಗೆ ಮಸೆದ ಆಲೂ, ಉಳಿದೆಲ್ಲ ಮೂಲ ಸಾಮಗ್ರಿ ಬೆರೆಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ, ನಡುವೆ ರಂಧ್ರ ಮಾಡಿ, 1-2 ಚಮಚ ಬೇಳೆ ತುಂಬಿಸಿ, ಟಿಕ್ಕಿ ಆಕಾರ ಕೊಡಿ. ಇದನ್ನು ಒಂದೊಂದಾಗಿ ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಶ್ಯಾಲೋ ಫ್ರೈ ಮಾಡಿ. ನಂತರ ಚಿತ್ರದಲ್ಲಿರುವಂತೆ ಹುಳಿಸಿಹಿ ಚಟ್ನಿ, ಮೊಸರು, ಓಂಪುಡಿ ಉದುರಿಸಿ, ನೀಟಾಗಿ ಅಲಂಕರಿಸಿ ಸವಿಯಲು ಕೊಡಿ.

ಮಿಕ್ಸ್ಡ್ ವೆಜ್ಮಂಚೂರಿಯನ್

ಮಂಚೂರಿಯನ್ಬಾಲ್ಸ್ ಗಾಗಿ ಸಾಮಗ್ರಿ : 1 ಸಣ್ಣ ಎಲೆಕೋಸು, 2 ಕ್ಯಾರೆಟ್‌, 1 ಕಾಲಿಫ್ಲವರ್‌, 200 ಗ್ರಾಂ ಪನೀರ್‌ (ಎಲ್ಲವನ್ನೂ ತುರಿದಿಡಿ), ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಹಸಿಶುಂಠಿ, ಈರುಳ್ಳಿ, ಬೆಳ್ಳುಳ್ಳಿ, 1 ಕಪ್‌ ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ.

ಗ್ರೇವಿಗಾಗಿ ಸಾಮಗ್ರಿ : 2-2 ಚಮಚ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಜಿನೋಮೋಟೊ, ಸೋಯಾ ಸಾಸ್‌, ಚಿಲಿ ಸಾಸ್‌, ವಿನಿಗರ್‌, ಟೊಮೇಟೊ ಸಾಸ್‌, ಸಕ್ಕರೆ, ಬಿಸಿ ಹಾಲಲ್ಲಿ ಕದಡಿದ  3 ಚಮಚ ಕಾರ್ನ್‌ ಫ್ಲೋರ್‌.

ವಿಧಾನ : ಮೂಲ ಸಾಮಗ್ರಿ ಎಲ್ಲಾ ಸೇರಿಸಿ ಲಘು ಬೇಯಿಸಿ, ಆರಿದ ನಂತರ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದಕ್ಕೆ ಮೈದಾ ಬೆರೆಸಿ, ಸಣ್ಣ ಉಂಡೆಗಳಾಗಿಸಿ, ಮೈದಾದಲ್ಲಿ ಹೊರಳಿಸಿ ಎಣ್ಣೆಯಲ್ಲಿ ಕರಿದಿಡಿ. ಅದೇ ಬಾಣಲೆಯಲ್ಲಿ 1 ಸೌಟು ಎಣ್ಣೆ ಉಳಿಸಿಕೊಂಡು ಗ್ರೇವಿ ಸಾಮಗ್ರಿ ಹಾಕಿ, ತುಸು ನೀರು ಬೆರೆಸಿ ಗಟ್ಟಿ ಗ್ರೇವಿ ಕುದಿಸಿರಿ. ಇದರಲ್ಲಿ ಮಂಚೂರಿಯನ್‌ ತೇಲಿಬಿಟ್ಟು 1-2 ನಿಮಿಷ ಕುದಿಸಿ, ಬಿಸಿಯಾಗಿ ಸವಿಯಲು ಕೊಡಿ.

ಮಖಾನಾ ಗ್ರೇವಿ

ಸಾಮಗ್ರಿ :  2 ಕಪ್‌ ಮಖಾನಾ (ತಾವರೆ ಬೀಜ, ರೆಡಿಮೇಡ್‌ ಲಭ್ಯ), 1 ಕಪ್‌ ಹಸಿ ಬಟಾಣಿ, 1 ತುಂಡು ಶುಂಠಿ. ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಏಲಕ್ಕಿ, ಲವಂಗ, ಮೊಗ್ಗು, ಚಕ್ಕೆ, ಅರಿಶಿನ, ಧನಿಯಾಪುಡಿ, ಗೋಡಂಬಿ ಪೌಡರ್‌, ಹುಳಿ ಮೊಸರು, ಟೊಮೇಟೊ ಪೇಸ್ಟ್, ಅರ್ಧರ್ಧ ಸೌಟು ಬೆಣ್ಣೆ ರೀಫೈಂಡ್‌ ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು.

ವಿಧಾನ : ಮೊದಲು ತುಸು ಬೆಣ್ಣೆಯಲ್ಲಿ ಮಖಾನಾ ಹಾಕಿ ಹುರಿದಿಡಿ. ಅಗತ್ಯ ಸಾಮಗ್ರಿಗಳನ್ನು ಸಣ್ಣಗೆ ಹೆಚ್ಚಿಡಿ. ಅದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಕೆಳಗಿಳಿಸಿ ಆರಿದ ಮೇಲೆ ಮೊಸರು, ಗೋಡಂಬಿ ಪುಡಿ ಜೊತೆ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿ. ಅದೇ ಬಾಣಲೆಯಲ್ಲಿ ಉಳಿದ ಬೆಣ್ಣೆ, ಎಣ್ಣೆ ಬಿಸಿ ಮಾಡಿ ಚಕ್ಕೆ, ಲವಂಗ ಇತ್ಯಾದಿ ಹಾಕಿ ಚಟಪಟಾಯಿಸಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ಇದಕ್ಕೆ ರುಬ್ಬಿದ ಈರುಳ್ಳಿ ಮಿಶ್ರಣ ಹಾಕಿ ಬಾಡಿಸಿ. ಕೊನೆಯಲ್ಲಿ ಹಸಿ ಬಟಾಣಿ, ತುಪ್ಪದಲ್ಲಿ ಹುರಿದ ಪನೀರ್‌, ಆಮೇಲೆ ಮಖಾನಾ ಹಾಕಿ ಕೆದಕಬೇಕು. ನಂತರ 1 ಕಪ್‌ ನೀರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕುದಿಸಿರಿ. ಕೆಳಗಿಳಿಸಿ, ಹೆಚ್ಚಿದ ಕೊ.ಸೊಪ್ಪು ಇತ್ಯಾದಿ ಉದುರಿಸಿ ಬಿಸಿ ಬಿಸಿಯಾಗಿ ಚಪಾತಿ ಜೊತೆ ಸವಿಯಿರಿ.

ಮಲಾಯಿ ಲಡ್ಡು

ಸಾಮಗ್ರಿ : ಅರ್ಧ ಲೀ. ಕೆನೆಭರಿತ ಗಟ್ಟಿ ಹಾಲು, 100 ಗ್ರಾಂ ಪನೀರ್‌, ಅರ್ಧರ್ಧ ಕಪ್‌ ಕ್ರೀಂ ಸಕ್ಕರೆ, ತುಸು ಏಲಕ್ಕಿ ಪುಡಿ.

Anik-Ghee-5

ವಿಧಾನ : ಬಾಣಲೆಯಲ್ಲಿ ಹಾಲು ಕಾಯಿಸಿ, ಅರ್ಧ ಹಿಂಗುವವರೆಗೆ ಮಂದ ಉರಿಯಲ್ಲಿ ಕುದಿಸಬೇಕು. ಇದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಕರಗುವಂತೆ ಕದಡಿಕೊಳ್ಳಿ. ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ಪನೀರ್‌ ಚೂರು, ಫ್ರೆಶ್‌ ಕ್ರೀಂ, ಏಲಕ್ಕಿ ಪುಡಿ ಸೇರಿಸಿ ಮತ್ತಷ್ಟು ಕೆದಕಬೇಕು. ಇದು ಸಾಕಷ್ಟು ಗಟ್ಟಿ ಆಗುವವರೆಗೂ ಮಂದ ಉರಿಯಲ್ಲಿ ಹೀಗೇ ಕೈಯಾಡಿಸುತ್ತಿರಿ. ಕೆಳಗಿಳಿಸಿದ ನಂತರ ಚೆನ್ನಾಗಿ ಆರಿದ ಮೇಲೆ, ಲಡ್ಡು ಉಂಡೆ ಕಟ್ಟಬೇಕು. ಚಿತ್ರದಲ್ಲಿರುವಂತೆ ಅಲಂಕರಿಸಿ, ಅತಿಥಿಗಳು ಬಂದಾಗ ಸವಿಯಲು ಕೊಡಿ.

ಟೊಮೇಟೊ ಬರ್ಫಿ

ಸಾಮಗ್ರಿ : 2-3 ಚಮಚ ತುಪ್ಪ, 3-4 ಮಾಗಿದ ಸಿಹಿ ಟೊಮೇಟೊ, ಅರ್ಧ ಕಪ್‌ ಸಿಹಿ ಖೋವಾ, ಅರ್ಧ ಕಪ್‌ ಕೆನೆಭರಿತ ಗಟ್ಟಿ ಹಾಲು, 3 ಸಣ್ಣ ಚಮಚ ಕಾರ್ನ್‌ ಪೌಡರ್‌, ಅರ್ಧ ಕಪ್‌ ಪುಡಿಸಕ್ಕರೆ, ಅಲಂಕರಿಸಲು ಒಂದಿಷ್ಟು ಡ್ರೈ ಫ್ರೂಟ್ಸ್.

Anik-Ghee-6

ವಿಧಾನ : ಟೊಮೇಟೊ ಶುಚಿಗೊಳಿಸಿ, ಹೆಚ್ಚಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಟೊಮೇಟೊ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಕಾದಾರಿದ ಹಾಲಿಗೆ ಕಾರ್ನ್‌ ಪೌಡರ್‌ ಹಾಕಿ ಕದಡಿ, ಅದನ್ನು ಈ ಮಿಶ್ರಣಕ್ಕೆ ಬೆರೆಸಿ, ಸಕ್ಕರೆ, ಖೋವಾ ಹಾಕಿ ಕೆದಕಬೇಕು. ಕೆಳಗಿಳಿಸಿದ ನಂತರ ಸಿಲಿಕಾನ್‌ ಮೋಲ್ಡ್ ‌ಗಳಲ್ಲಿ ತುಂಬಿಸಿ, ಫ್ರಿಜ್‌ ನಲ್ಲಿಟ್ಟು ಸೆಟ್‌ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ