ಕಡಲೆ ಕ್ಯೂಬ್ಸ್ ಗ್ರೇವಿ
ಮೂಲ ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಇಂಗು, ಅರಿಶಿನ, ಅಮ್ಚೂರ್ ಪುಡಿ, ಹಸಿ ಮೆಣಸಿನ ಪೇಸ್ಟ್,
ಗ್ರೇವಿಯ ಸಾಮಗ್ರಿ : ಕೊತ್ತಂಬರಿ/ಪುದೀನಾ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಹುಳಿ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್, ತುಸು ಹೆಚ್ಚಿದ ಹಸಿ ಮೆಣಸು, ಅರಿಶಿನ, ಜೀರಿಗೆ, ಗರಂಮಸಾಲ, ಇಡಿಯಾದ ಒಣಮೆಣಸಿನಕಾಯಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೂಲ ಸಾಮಗ್ರಿಯಲ್ಲಿ ಎಣ್ಣೆ ಬಿಟ್ಟು ಉಳಿದೆಲ್ಲವನ್ನೂ ನೀರಿನೊಂದಿಗೆ ಗಟ್ಟಿ ಪಕೋಡ ಮಿಶ್ರಣದ ಹದಕ್ಕೆ ಬೆರೆಸಿಕೊಳ್ಳಿ. ಇದರಿಂದ ಕಾದ ಎಣ್ಣೆಯಲ್ಲಿ ಪಕೋಡ ಕರಿಯಿರಿ. ಅದೇ ಬಾಣಲೆಯಲ್ಲಿ 1 ಸೌಟು ಎಣ್ಣೆ ಉಳಿಸಿಕೊಂಡು ಜೀರಿಗೆ, ಒಣ ಮೆಣಸಿನ ಒಗ್ಗರಣೆ ಕೊಡಿ. ನಂತರ ಮಂದ ಉರಿಯಲ್ಲಿ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಕೆದಕಿರಿ. ನಂತರ ಈರುಳ್ಳಿ ಪೇಸ್ಟ್, ಆಮೇಲೆ ಟೊಮೇಟೊ ಪೇಸ್ಟ್, ಹಸಿ ಮೆಣಸಿನ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಬೆರೆಸಿ ಕೈಯಾಡಿಸಿ. ನಂತರ ಮೊಸರು ಬೆರೆಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಅಗತ್ಯ ಎನಿಸಿದರೆ ತುಸು ನೀರು ಬೆರೆಸಿ ಕುದಿಸಿರಿ. ಮಂದ ಉರಿ ಮಾಡಿ ಕರಿದ ಪಕೋಡ ಇದಕ್ಕೆ ಹಾಕಿ, ಮತ್ತಷ್ಟು ಕುದಿಸಿ ಕೆಳಗಿಳಿಸಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಿರಿ.
ಕಾರ್ನ್ ಪನೀರ್ ಕರೀ
ಸಾಮಗ್ರಿ : 200 ಗ್ರಾಂ ಪನೀರ್, 1 ಕಪ್ ಫ್ರೋಝನ್ ಸ್ವೀಟ್ ಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಹಸಿ ಮೆಣಸು, ಜೀರಿಗೆ, ಕಾಳುಮೆಣಸು, ಅರಿಶಿನ, ಗರಂ ಮಸಾಲ, ಸಕ್ಕರೆ, ತುಸು ಎಣ್ಣೆ, ಮೈದಾ, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಪನೀರ್ ನ್ನು ಉದ್ದುದ್ದ ತುಂಡರಿಸಿ. ಕುಕ್ಕರ್ ನಲ್ಲಿ ಜೀರಿಗೆ, ಕಾಳುಮೆಣಸು ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಹಸಿ ಮೆಣಸು, ಕರಿಬೇವು ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಿರಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ಮೈದಾ ಸೇರಿಸಿ ಕೈಯಾಡಿಸಿ. ಆಮೇಲೆ ಪನೀರ್ ಹಾಕಿ ಫ್ರೈ ಮಾಡಿ. ಸ್ವೀಟ್ ಕಾರ್ನ್ ಸೇರಿಸಿ ಕೆದಕಿರಿ. ಅರ್ಧ ಕಪ್ ನೀರು ಬೆರೆಸಿ, ಕುಕ್ಕರ್ ಬಂದ್ ಮಾಡಿ, 1 ಸೀಟ ಕೂಗಿಸಿ. ಕೆಳಗಿಳಿಸಿ ತಣಿದ ನಂತರ ಮುಚ್ಚಳ ತೆರೆದು, ಕೊ.ಸೊಪ್ಪು ಉದುರಿಸಿ, ಚಪಾತಿ-ಪೂರಿ ಜೊತೆ ಸವಿಯಲು ಕೊಡಿ.
ರಸಭರಿತ ಅಪ್ಪಂ
ಮೂಲ ಸಾಮಗ್ರಿ : 1 ದೊಡ್ಡ ಕಂತೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ಹುಳಿ ಮೊಸರು, ಅಕ್ಕಿಹಿಟ್ಟು, ಅರ್ಧ ಕಪ್ ರವೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹೆಚ್ಚಿದ ಶುಂಠಿ, ಹಸಿ ಮೆಣಸು, ಕರಿಬೇವು, ಕೊ.ಸೊಪ್ಪು, ಅಮ್ಚೂರ್ ಪುಡಿ, ಚಿಟಕಿ ಸೋಡ, ದೋಸೆಗೆ ಎಣ್ಣೆ.
ಗ್ರೇವಿಗಾಗಿ ಸಾಮಗ್ರಿ : ಅಗತ್ಯವಿದ್ದಷ್ಟು ಬೆಣ್ಣೆ, ಜೀರಿಗೆ, ಸೋಂಪು, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಕಸೂರಿ ಮೇಥಿ, ಟೊಮೇಟೊ ಪೇಸ್ಟ್, ಉಪ್ಪು, ಖಾರ, ಗರಂ ಮಸಾಲ, ಧನಿಯಾಪುಡಿ, ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಒಂದು ಬೇಸನ್ನಿಗೆ ಮೂಲ ಸಾಮಗ್ರಿ ಎಲ್ಲಾ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ನೆನೆಯಲು ಬಿಡಿ. ಇದರಿಂದ ಅಳ್ಳಕವಾದ ತವಾದಲ್ಲಿ ಎಣ್ಣೆ ಬಿಡುತ್ತಾ ತುಸು ದಪ್ಪಗೆ ಬರುವಂತೆ ದೋಸೆ ತಯಾರಿಸಿ. ಒಂದೇ ಬದಿ ಬೇಯಿಸಿ, ತಿರುವಿ ಹಾಕುವಂತಿಲ್ಲ. ಹೀಗೆ ಎಲ್ಲಾ ಅಪ್ಪಂ ತಯಾರಿಸಿ.
ಅದೇ ಸಮಯಕ್ಕೆ ಪಕ್ಕದ ಒಲೆಯಲ್ಲಿ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಜೀರಿಗೆ, ಸೋಂಪು, ಕರಿಬೇವಿನ ಒಗ್ಗರಣೆ ಕೊಡಿ. ಮಂದ ಉರಿ ಮಾಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಸೂರಿ ಮೇಥಿ ಹಾಕಿ ಕೆದಕಬೇಕು. ನಂತರ ಟೊಮೇಟೊ ಪೇಸ್ಟ್, ಉಳಿದೆಲ್ಲ ಮಸಾಲೆ, ಉಪ್ಪು ಹಾಕಿ ಕೆದಕಬೇಕು. ತುಸು ನೀರು ಬೆರೆಸಿ ಗ್ರೇವಿ ಕುದಿಸಿ ಗಟ್ಟಿ ಆಗಿಸಿ. ಕೆಳಗಿಳಿಸಿ ಕೊ.ಸೊಪ್ಪು, ಪುದೀನಾ ಉದುರಿಸಿ ಬಿಸಿ ಬಿಸಿಯಾಗಿ ಅಪ್ಪಂ ಜೊತೆ ಸರ್ವ್ ಮಾಡಿ.
ಪಾಲಕ್ ಕೋಫ್ತಾ
ಮೂಲ ಸಾಮಗ್ರಿ : 2 ಕಂತೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, 2 ಆಲೂ, ಅರ್ಧ ಕಪ್ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಡ್ರೈ ದಾಳಿಂಬೆ ಬೀಜದ ಪುಡಿ (ರೆಡಿಮೇಡ್ ಲಭ್ಯ), ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಗೋಡಂಬಿ, ದ್ರಾಕ್ಷಿ, 1 ಗಿಟುಕು ತೆಂಗಿನ ತುರಿ, ಕರಿಯಲು ಎಣ್ಣೆ.
ಗ್ರೇವಿಗಾಗಿ ಸಾಮಗ್ರಿ : 2-3 ದೊಡ್ಡ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿಮೊಸರು, ಕಾರ್ನ್ ಫ್ಲೋರ್, 2-3 ಹಸಿ ಮೆಣಸು, ಜೀರಿಗೆ, ಸೋಂಪು, ಅರಿಶಿನ, 1 ಚಮಚ ಕೊ.ಸೊಪ್ಪಿನ ಪೇಸ್ಟ್, ಗರಂಮಸಾಲ.
ವಿಧಾನ : ಮೊದಲು ಆಲೂ ಬೇಯಿಸಿ, ಸಿಪ್ಪೆ ಸುಲಿದು ಮಸೆದಿಡಿ. ಪಾಲಕ್ ಸೊಪ್ಪಿಗೆ ಆಲೂ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾರ್ನ್ ಫ್ಲೋರ್, ಉಪ್ಪು, ದಾಳಿಂಬೆ ಬೀಜದ ಪುಡಿ ಬೆರೆಸಿ ಮಿಶ್ರಣ ಕಲಸಿಡಿ. ಈ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿಡಿ. ಪ್ರತಿ ಉಂಡೆಯಲ್ಲೂ ರಂಧ್ರ ಮಾಡಿ ದ್ರಾಕ್ಷಿ, ತೆಂಗಿನ ತುರಿ ತುಂಬಿಸಿ. ಈ ರೀತಿ ಎಲ್ಲಾ ಕೋಫ್ತಾ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ.
ಈಗ ಗ್ರೇವಿಗಾಗಿ ಮಿಕ್ಸಿಗೆ ಹಸಿ ಮೆಣಸು, ಟೊಮೇಟೊ ಹಾಕಿ ಪೇಸ್ಟ್ ಮಾಡಿ. ಇದನ್ನು ಒಂದು ಬಟ್ಟಲಿಗೆ ಹಾಕಿಕೊಂಡು ತುಸು ಕಾರ್ನ್ ಫ್ಲೋರ್, ಮೊಸರು ಬೆರೆಸಿ ಗೊಟಾಯಿಸಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಬಿಸಿ ಮಾಡಿ. ಒಗ್ಗರಣೆ ನಂತರ ಈ ಮಿಶ್ರಣ ಅದಕ್ಕೆ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ. ಅಗತ್ಯ ಎನಿಸಿದರೆ ಅರ್ಧ ಕಪ್ ನೀರು ಬೆರೆಸಿ ಕುದಿಸಿರಿ. ನಂತರ ಇದಕ್ಕೆ ಕರಿದ ಕೋಫ್ತಾ ಸೇರಿಸಿ, ಮಂದ ಉರಿಯಲ್ಲಿ 5 ನಿಮಿಷ ಕುದಿಸಿ ಕೆಳಗಿಳಿಸಿ. ಬಿಸಿ ಬಿಸಿ ಚಪಾತಿ ಅನ್ನಕ್ಕೆ ತುಪ್ಪ ಹಾಕಿ, ಕೋಫ್ತಾ ಜೊತೆ ಸವಿಯಿರಿ.
ಬಟಾಣಿ ಹೆಸರುಕಾಳಿನ ವಡೆ
ಸಾಮಗ್ರಿ : 100 ಗ್ರಾಂ ಹೆಸರುಕಾಳು, 50 ಗ್ರಾಂ ಹಸಿ ಬಟಾಣಿ ಕಾಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್. ಜೀರಿಗೆ, ಸೋಂಪು, ಧನಿಯಾಪುಡಿ, ಗರಂಮಸಾಲ, ಅರಿಶಿನ, ಹುಳಿ ಮೊಸರು, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಹೆಸರು ಕಾಳು, ಹಸಿ ಬಟಾಣಿಯನ್ನು ಬಿಸಿ ನೀರಲ್ಲಿ ಲಘುವಾಗಿ ಕುದಿಸಿ (ಬ್ಲಾಂಚ್) ಮಾಡಿ. ಆರಿದ ನಂತರ ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ, ಟೊಮೇಟೊ ಪೇಸ್ಟ್ ಜೊತೆ ತರಿ ತರಿಯಾಗಿ ತಿರುವಿಕೊಳ್ಳಿ, ಕೊನೆ ಸುತ್ತಿಗೆ ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಅರಿಶಿನ ಸಹ ಹಾಕಿ ತಿರುವಿಕೊಳ್ಳಿ. ಆದಷ್ಟೂ ನೀರಿನಂಶ ಬೇಡ. ನಂತರ ಇದನ್ನು ವಡೆ ತರಹ ಜಿಡ್ಡು ಸವರಿದ ಅಂಗೈ ಮೇಲೆ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿಯಿರಿ. ಕಡೆದ ಮೊಸರಿಗೆ ಉಪ್ಪು, ಜೀರಿಗೆ, ಸೋಂಪಿನ ಪುಡಿ ಉದುರಿಸಿ, ಅದಕ್ಕೆ ತುಸು ಖಾರ, ಗರಂಮಸಾಲ ಸೇರಿಸಿ ಈ ವಡೆಗಳನ್ನು ನೆನೆ ಹಾಕಿ 2 ಗಂಟೆಗಳ ನಂತರ ಸವಿಯಲು ಕೊಡಿ.
ಕಡಲೆಹಿಟ್ಟಿನ ಸ್ಪೆಷಲ್ ಗ್ರೇವಿ
ಸಾಮಗ್ರಿ : 100 ಗ್ರಾಂ ಕಡಲೆ ಹಿಟ್ಟು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುಸು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, 1 ಕಪ್ ಹುಳಿ ಮೊಸರು, ಅರಿಶಿನ, ಜೀರಿಗೆ, ಸೋಂಪು, ಧನಿಯಾಪುಡಿ, ಗರಂಮಸಾಲ, ಇಂಗು, ಕರಿಯಲು ಎಣ್ಣೆ.
ವಿಧಾನ : ಮೊದಲು ಕಡಲೆಹಿಟ್ಟಿಗೆ ಉಪ್ಪು, ಖಾರ, ಇಂಗು ಸೇರಿಸಿ ಪಕೋಡ ಮಿಶ್ರಣದಂತೆ ಗಟ್ಟಿಯಾಗಿ ಕಲಸಿ, ಚಕ್ಕುಲಿ ಒರಳಿಗೆ ಹಾಕಿ, ದಪ್ಪ ಬಿಲ್ಲೆಯಿಂದ (ಚಿತ್ರದಲ್ಲಿರುವಂತೆ) ನೇರ ಕಾದ ಎಣ್ಣೆಗೆ ಒತ್ತುತ್ತಾ ಓಂಪುಡಿ (ಸೇವ್) ತಯಾರಿಸಿ.
ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಪದಾರ್ಥ, ಕರಿದ ಓಂಪುಡಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಸೇರಿಸಿ ಕೆದಕಬೇಕು. ಮೊಸರು ಬೆರೆಸಿ ಇನ್ನಷ್ಟು ಕೈಯಾಡಿಸಿ. ಗ್ರೇವಿ 5 ನಿಮಿಷ ಕುದ್ದು ಗಟ್ಟಿ ಆದಾಗ ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ, ಅನ್ನ ಚಪಾತಿಯೊಂದಿಗೆ ಸವಿಯಲು ಕೊಡಿ.
ಕ್ಯಾರೆಟ್ ಮಲಾಯಿ ಕೋಫ್ತಾ
ಕೋಫ್ತಾ ಸಾಮಗ್ರಿ : 250 ಗ್ರಾಂ ಕ್ಯಾರೆಟ್, 50 ಗ್ರಾಂ ಪನೀರ್, 7-8 ಚಮಚ ಕಾರ್ನ್ ಫ್ಲೋರ್, ಅರ್ಧ ಕಪ್ ಕೋಕೋನಟ್ ಪೌಡರ್, ಒಂದಿಷ್ಟು ಸಣ್ಣಗೆ ಹೆಚ್ಚಿದ ಆಲೂ, ತುಸು ಗೋಡಂಬಿ, ದ್ರಾಕ್ಷಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕಾಳು ಮೆಣಸು, ತುಸು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಕ್ಯಾರೆಟ್ ಶುಚಿಗೊಳಿಸಿ ತುರಿದಿಡಿ. ಪನೀರ್ ಸಹ ತುರಿದಿಡಿ. ಕಾರ್ನ್ ಫ್ಲೋರ್ ಗೆ ತುಸು ಉಪ್ಪು, ಖಾರ ಸೇರಿಸಿ ಬೋಂಡ ಮಿಶ್ರಣದಂತೆ ಕಲಸಿಡಿ. ಕ್ಯಾರೆಟ್ ತುರಿಗೆ ಪನೀರ್, ಹಸಿಮೆಣಸಿನ ಪೇಸ್ಟ್. ತುಸು ಕಾರ್ನ್ ಫ್ಲೋರ್, ಉಪ್ಪು, ಖಾರ ಸೇರಿಸಿ ಮಿಶ್ರಣ ಕಲಸಿ ಸಣ್ಣ ಉಂಡೆಗಳಾಗಿಸಿ. ಇದರ ಮಧ್ಯೆ ರಂಧ್ರ ಮಾಡಿ ಕೋಕೋನಟ್ ಪುಡಿ, ಗೋಡಂಬಿ, ದ್ರಾಕ್ಷಿ, ಆಲೂ ಬೆರೆಸಿ ಉಂಡೆ ಪೂರ್ತಿ ಮಾಡಿ. ಇದನ್ನು ಕಾರ್ನ್ ಫ್ಲೋರ್ ಮಿಶ್ರಣದಲ್ಲಿ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಗರಿ ಗರಿ ಕೋಫ್ತಾ ಕರಿಯಿರಿ.
ಗ್ರೇವಿಗಾಗಿ ಮೊದಲು ಟೊಮೇಟೊ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್ ಹಾಕಿ ನುಣ್ಣಗೆ ತಿರುವಿಕೊಳ್ಳಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಜೀರಿಗೆ, ಸೋಂಪು ಹಾಕಿ ಒಗ್ಗರಣೆ ಕೊಡಿ. ಟೊಮೇಟೊ ಮಿಶ್ರಣ ಹಾಕಿ ಕೆದಕಿರಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಗ್ರೇವಿ ಗಟ್ಟಿಯಾದಂತೆ ಮೊಸರು, ಅರ್ಧ ಭಾಗ ಮಲಾಯಿ ಬೆರೆಸಿ ಮಂದ ಉರಿಯಲ್ಲಿ 5 ನಿಮಿಷ ಕೆದಕಬೇಕು. ಅಗತ್ಯ ಎನಿಸಿದರೆ ಅರ್ಧ ಕಪ್ ನೀರು ಬೆರೆಸಿ, ಕುದಿಸಿ. ಕೊನೆಯಲ್ಲಿ ಕೋಫ್ತಾ ತೇಲಿಬಿಟ್ಟು, ಉಳಿದೆಲ್ಲ ಮಲಾಯಿ ಬೆರೆಸಿ 2 ನಿಮಿಷ ಕುದಿಸಿ ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ ಚಪಾತಿ, ಪೂರಿ ಜೊತೆ ಸವಿಯಿರಿ.
ಉದ್ದಿನ ಆಲೂ ಸ್ಪೆಷಲ್
ಸಾಮಗ್ರಿ : 1 ಕಪ್ ಉದ್ದಿನಬೇಳೆ, 250 ಗ್ರಾಂ ಬೇಯಿಸಿ ಮಸೆದ ಆಲೂ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸು, ಇಂಗು, ಹೆಚ್ಚಿದ ಹಸಿ ಮೆಣಸು, ಶುಂಠಿ, ಕೊ.ಸೊಪ್ಪು, ತರಿ ತರಿ ಕುಟ್ಟಿದ ಧನಿಯಾಪುಡಿ, ಸೋಂಪು, ಜೀರಿಗೆ, ಮೊಸರು, ಗರಂ ಮಸಾಲ.
ವಿಧಾನ : 3-4 ಗಂಟೆ ಕಾಲ ಉದ್ದು ನೆನೆಸಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಉಪ್ಪು, ಖಾರ, ಉಳಿದೆಲ್ಲ ಸಾಮಗ್ರಿ ಬೆರೆಸಿ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಪಕೋಡ ತರಹ ಕರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಜೀರಿಗೆ, ಸೋಂಪು, ಧನಿಯಾ ಹಾಕಿ ಚಟಪಟಾಯಿಸಿ. ಇದಕ್ಕೆ ಬೆಂದ ಆಲೂ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಮೊಸರು ಬೆರೆಸಿ ಕೆದಕಬೇಕು, ಬೇಕಾದರೆ ತುಸು ನೀರು ಬೆರೆಸಿಕೊಳ್ಳಿ. ಇದಕ್ಕೆ ಕರಿದ ಉದ್ದಿನ ಪಕೋಡ ಬೆರೆಸಿ ಎಲ್ಲ ಬೆರೆತುಕೊಳ್ಳುವಂತೆ ಕೈಯಾಡಿಸಿ ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಿರಿ.
ಸ್ವೀಟ್ ಸೋರ್ ಟೊಮೇಟೊ
ಸಾಮಗ್ರಿ : 7-8 ಹುಳಿ ಟೊಮೇಟೊ, ಒಂದಿಷ್ಟು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಕೊ.ಸೊಪ್ಪು, ಕರಿಬೇವು, ಹಸಿ ಮೆಣಸು, ತರಿ ತರಿಯಾದ ಜೀರಿಗೆ, ಸೋಂಪು, ಧನಿಯಾ, ಮೆಂತ್ಯ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ತುಸು ಹಿಪ್ಪೆ ಎಣ್ಣೆ (ಆಲಿವ್ ಆಯಿಲ್), ತುಪ್ಪ, ಚೆರ್ರಿ ಹಣ್ಣು.
ವಿಧಾನ : ಮೊದಲು ಟೊಮೇಟೊವನ್ನು ಉದ್ದುದ್ದಕ್ಕೆ ಹೆಚ್ಚಿಡಿ. ಬಾಣಲೆಯಲ್ಲಿ ಹಿಪ್ಪೆ ಎಣ್ಣೆ, ತುಪ್ಪ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಕೊಟ್ಟ ನಂತರ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಉಳಿದ ಸಾಮಗ್ರಿ ಹಾಕಿ ಬಾಡಿಸಿ. ಆಮೇಲೆ ಟೊಮೇಟೊ ಸೇರಿಸಿ ಬಾಡಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಕೊನೆಯಲ್ಲಿ ಸಕ್ಕರೆ, ಗೋಡಂಬಿ, ದ್ರಾಕ್ಷಿ ಎಲ್ಲಾ ಸೇರಿಸಿ ಕೆದಕಿ ಕೆಳಗಿಳಿಸಿ. ಇದಕ್ಕೆ ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಅನ್ನ, ಇಡ್ಲಿ, ದೋಸೆ ಜೊತೆ ಸವಿಯಿರಿ.
ಪಕೋಡ ಬೀಟ್ ರೂಟ್ ಗ್ರೇವಿ
ಮೂಲ ಸಾಮಗ್ರಿ : 1 ದೊಡ್ಡ ಬೀಟ್ ರೂಟ್ ತುರಿ, 1 ಕಪ್ ಕಡಲೆಹಿಟ್ಟು, ತುಸು ಬೇಕಿಂಗ್ ಪೌಡರ್, ಹೆಚ್ಚಿದ ಹಸಿ ಮೆಣಸು, ಕರಿಯಲು ಎಣ್ಣೆ.
ಗ್ರೇವಿಗಾಗಿ ಸಾಮಗ್ರಿ : ಅರ್ಧರ್ಧ ಕಪ್ ಕಡಲೆಹಿಟ್ಟು, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಹೆಚ್ಚಿದ ಹಸಿ ಮೆಣಸು, ಮೆಂತ್ಯ, ಜೀರಿಗೆ, ಎಣ್ಣೆ, ತುಪ್ಪ, ಹುಳಿ ಮೊಸರು.
ವಿಧಾನ : ಮೂಲ ಸಾಮಗ್ರಿ ಎಲ್ಲಾ ಬೆರೆಸಿ ಪಕೋಡ ಮಿಶ್ರಣಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇದರಿಂದ ಬೀಟ್ ರೂಟ್ ಪಕೋಡ ತಯಾರಿಸಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಒಗ್ಗರಣೆ ಕೊಡಿ. ಹೆಚ್ಚಿದ ಪದಾರ್ಥ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್. ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಿರಿ. ಒಂದು ಬಟ್ಟಲಲ್ಲಿ ಕಡಲೆಹಿಟ್ಟು, ಕಾರ್ನ್ ಫ್ಲೋರ್ ಗೆ ತುಸು ಉಪ್ಪು, ಖಾರ ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿ. ಅದನ್ನು ಬಾಣಲೆಗೆ ಬೆರೆಸಿ ಕೆದಕಬೇಕು. ಅಗತ್ಯವೆನಿಸಿದರೆ ಅರ್ಧ ಕಪ್ ನೀರು ಬೆರೆಸಿ ಚೆನ್ನಾಗಿ ಕುದಿಸಿರಿ. ಇದಕ್ಕೆ ಬೀಟ್ ರೂಟ್ ಪಕೋಡ ಬೆರೆಸಿ, 2 ನಿಮಿಷ ಕೈಯಾಡಿಸಿ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ, ರೊಟ್ಟಿ, ದೋಸೆ ಜೊತೆ ಸವಿಯಲು ಕೊಡಿ.
ಹೆಸರುಕಾಳಿನ ಸ್ಪೆಷಲ್ ಗ್ರೇವಿ
ಮೂಲ ಸಾಮಗ್ರಿ : 2 ಕಪ್ ಹೆಸರುಕಾಳಿನ ಪೇಸ್ಟ್, ಹೆಚ್ಚಿದ 2 ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ, ಕರಿಬೇವು, ಕೊ.ಸೊಪ್ಪು, ಸೋಡ, ಕರಿಯಲು ಎಣ್ಣೆ.
ಗ್ರೇವಿಗಾಗಿ ಸಾಮಗ್ರಿ : ತುಸು ಎಣ್ಣೆ, ಜೀರಿಗೆ ಇಂಗು, ಇಡಿಯಾದ ಒಣ ಮೆಣಸಿನಕಾಯಿ, ಅರಿಶಿನ, ಧನಿಯಾಪುಡಿ, ಉಪ್ಪು, ಖಾರ, ಗರಂಮಸಾಲ, ಹುಳಿ ಮೊಸರು, ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಮೂಲ ಸಾಮಗ್ರಿಯ ಎಲ್ಲಾ ಪದಾರ್ಥ ಬೆರೆಸಿ, ಕಾದ ಎಣ್ಣೆಯಲ್ಲಿ ಪಕೋಡ ಕರಿಯಿರಿ. ಗ್ರೇವಿಗಾಗಿ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇಡೀ ಒಣ ಮೆಣಸಿನಕಾಯಿ ಹಾಕಿ ಚಟಪಟಾಯಿಸಿ. ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಹಾಕಿ ಕೆದಕಬೇಕು. ಮೊಸರು ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ತುಸು ನೀರು ಬೆರೆಸಿ ಕುದಿಸಿರಿ. ಕೊನೆಯಲ್ಲಿ ಹೆಸರುಕಾಳು ಪಕೋಡ ಬೆರೆಸಿ, 2 ನಿಮಿಷ ಕುದಿಸಿ ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ, ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.