ಭಾರತೀಯ ಮಂಗಳಕರ ಸಂಸ್ಕೃತಿಯ ಆಚರಣೆಗಳಲ್ಲಿ ಮೆಹೆಂದಿಯೂ ಒಂದು. ಮೆಹೆಂದಿ ಒಂದು ದೃಶ್ಯ ಕಲೆ. ವಯೋಭೇದವಿಲ್ಲದೆ ಪ್ರತಿಯೊಬ್ಬ ಹೆಣ್ಣುಮಕ್ಕಳೂ ಹಾಕಿಕೊಳ್ಳಲು ಇಷ್ಟಪಡುವ ಕಲೆ. ಹಳೆಯ ಸಂಪ್ರದಾಯ ಎಂದು ಮೂಗು ಮುರಿಯುವ ಈ ಕಾಲದಲ್ಲೂ ಮೆಹೆಂದಿ ಹಿಂದೆಂದಿಗಿಂತಲೂ ತನ್ನ ಪ್ರಾಮುಖ್ಯತೆಯನ್ನು ಹಾಗೆ ಉಳಿಸಿಕೊಂಡಿದೆ. ಸಾಂಪ್ರದಾಯಿಕ, ಆರೋಗ್ಯ ಹಾಗೂ ಅಲಂಕಾರದ ಹಿನ್ನೆಲೆಯಿಂದ ಇದು ಭಾರತೀಯರ ಕಲೆಗಳ ಒಂದು ಭಾಗವಾಗಿದೆ.

ದಂತಕಥೆ ಇದರ ಹಿನ್ನಲೆಯ ಕಥೆಯೊಂದು ನಮ್ಮ ನಡುವಿದೆ. ಅದೇನೆಂದರೆ, ಯುಗಗಳ ಹಿಂದೆ ಸತ್ಯೇಶ್ವರಿ ಹಾಗೂ ಸತ್ಯೇಶ್ವರ ಎಂಬ ಸಹೋದರ ಸಹೋದರಿಯರು ಇರುತ್ತಾರೆ. ನಾಗರ ಪಂಚಮಿಯ ಹಿಂದಿನ ದಿನ ಸತ್ಯೇಶ್ವರ ಅಕಾಲ ಮೃತ್ಯುವಿಗೀಡಾಗುತ್ತಾನೆ. ದುಃಖಿತಳಾದ ಸಹೋದರಿ ಎದುರಿನಲ್ಲಿ ಮತ್ತೆ ಸತ್ಯೇಶ್ವರ ನಾಗರಾಜನ ರೂಪದಲ್ಲಿ ಬಂದು ನಿಲ್ಲುತ್ತಾನೆ. ಸಂತೋಷದಿಂದ ಉಭಯ ಕುಶೋಪರಿ ನಡೆದ ಬಳಿಕ ಸತ್ಯೇಶ್ವರ ಹೊರಡುವ ಸಂದರ್ಭದಲ್ಲಿ ಸತ್ಯೇಶ್ವರಿ, `ನೀನು ಮತ್ತೆ ಬಂದೇ ಬರುವೆ ಎಂದು ಭಾಷೆ ನೀಡು,’ ಎಂದಾಗ ಅವನು `ಭರವಸೆಯಿರಲಿ ಬಂದೇ ಬರುವೆ,’ ಎಂದು ಭಾಷೆ ನೀಡುತ್ತಾನೆ. ಆ ಭಾಷೆಯೇ ಚಿಹ್ನೆಯ ರೂಪದಲ್ಲಿ ಸತ್ಯೇಶ್ವರಿಯ ಕೈಯಲ್ಲಿ ಹಾಗೆ ಉಳಿದುಬಿಡುತ್ತದೆ. ಅಂದಿನಿಂದ ಮೆಹೆಂದಿ ಬಿಡಿಸಿಕೊಳ್ಳುವ ಪರಿಪಾಠ ಬಂದಿತು ಎನ್ನುತ್ತಾರೆ.

ಹೆಸರಿನ ವೈವಿಧ್ಯತೆ

ಗೋರಂಟಿ, ಮದರಂಗಿ, ಹೆನ್ನಾ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಮೆಹೆಂದಿ ಮೂಲತಃ `ಮೆಂಧಿಕಾ’ ಶಬ್ದದ ಮೂಲದಿಂದ ಬಂದಿದೆ. ಮೆಹೆಂದಿ ಪುಡಿ ಹಾಗೂ ಅರಿಶಿನವನ್ನು ಮಿಶ್ರ ಮಾಡಿ ಬಳಸುವ ಬಗ್ಗೆ ಪುರಾತನ ಕಾಲದ ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಮೆಹೆಂದಿಯ ತವರು ಅರಬ್‌ ಮತ್ತು ಪರ್ಶಿಯಾ, ಮೆಹಿಂದಿ ಲೈಥ್ರೇಸಿ ಕುಟುಂಬಕ್ಕೆ ಸೇರಿದೆ. ಮದರಂಗಿ ತಳಿಗಳಲ್ಲಿ ಬಿಳಿ, ಕೆಂಪು, ನೀಲಿ ಹೂ ಬಿಡುವ ಮಾದರಿಗಳಿವೆ. ಇದರ  ಎಲೆ, ಹೂ, ತೊಗಟೆ, ಬೇರು, ಬೀಜಗಳು ಔಷಧಯುಕ್ತವಾಗಿವೆ.

ಇದರ ಬಿಳಿ ಹಾಗೂ ತಿಳಿ ಗುಲಾಬಿ ಹೂಗಳಿಗೆ ಸುವಾಸನೆಯೂ ಇರುತ್ತದೆ. ಭಾರತದಲ್ಲಿ ಗುಜರಾತ್‌, ರಾಜಾಸ್ಥಾನ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಇದಕ್ಕೆ ಪ್ರಾಶಸ್ತ್ಯವಿದೆ. ಮೆಹೆಂದಿ ಸೊಪ್ಪನ್ನು ನಿಂಬೆರಸ, ಕಾಚು, ಎಲೆ, ಸುಣ್ಣದೊಂದಿಗೆ ಒರಳಲ್ಲಿ ರುಬ್ಬಿ, ಕಲ್ಲಲ್ಲಿ ಅರೆದು ಹಚ್ಚಿಕೊಳ್ಳುವ ಕಾಲವಿತ್ತು. ಆದರೆ ಈಗ ಮೆಹೆಂದಿ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ನಿಂಬೆರಸ ಸೇರಿಸಿ ಚಿತ್ರ ಚಿತ್ತಾರ ಬಿಡಿಸಿಕೊಳ್ಳುತ್ತಾರೆ.

ಮೆಹೆಂದಿಯ ಮಹತ್ವ

ಮದುವೆ, ಹಬ್ಬ ಇತ್ಯಾದಿ ಶುಭ ಸಮಾರಂಭಗಳಲ್ಲಿ ಬ್ರೈಡಲ್, ಇಂಡಿಯನ್‌, ಅರೆಬಿಕ್‌, ಮೊಘಲ್, ಮಲ್ಟಿಕಲರ್‌ ಗಳಲ್ಲಿ ಇದನ್ನು ಬಳಸುತ್ತಾರೆ. ಮೆಹೆಂದಿ ಹಾಕಲು ಹಿಂದೆ ಕಡ್ಡಿಗಳನ್ನು ಬಳಸುತ್ತಿದ್ದರು. ಈಗ ಕೋನ್‌ ಗಳು ಬಂದಿವೆ. ಮತ್ತೂ ಮುಂದುವರಿದಂತೆ ಸ್ಟೋನ್‌, ಚಮಕಿ ವರ್ಕ್‌ ಸೇರಿಸಿಕೊಂಡು ಮೆಹೆಂದಿ ಆರ್ಟ್‌ ಕೂಡ ಮಾಡುತ್ತಾರೆ. ದಪ್ಪ ಎಳೆಯ ಮೆಹೆಂದಿ ಬಣ್ಣ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಈಗ ತೆಳು ಎಳೆಯ ಮೆಹೆಂದಿಯೇ ಇರುವುದು.

ಬಳಕೆ ಹೇಗೆ?

ಮೆಹೆಂದಿ ಒಣಗುವ ಹಂತಕ್ಕೆ ಬಂದಾಗ ಸಕ್ಕರೆ ಮತ್ತು ನಿಂಬೆಹಣ್ಣಿನ ರಸ ಹಾಕಿದರೆ ಬಣ್ಣ ಗಾಢವಾಗುತ್ತದೆ. ಕೈಗೆ ಹಾಕುವ ಮೆಹೆಂದಿ ಪುಡಿ ಉದುರಿದ ಬಳಿಕ ತೆಂಗಿನ ಎಣ್ಣೆ, ನೀಲಗಿರಿ ಮಿಕ್ಸ್ ಹಾಕುವುದರಿಂದ ಬಣ್ಣ ಮತ್ತಷ್ಟು ಗಾಢವಾಗುತ್ತದೆ. ಅಲ್ಲದೆ, ಮೆಹೆಂದಿ ಹಾಕಿ ಒಂದು ಇಡೀ ದಿನ ಸಾಬೂನು ಬಳಸದೆ ಹೋದಲ್ಲಿ ಹಾಕಿದ ಕೆಲವು ದಿನಗಳವರೆಗೆ ಮಾಗುವುದಿಲ್ಲ. ಯೂಟ್ಯೂಬ್‌, ಮೊಬೈಲ್ ‌ಆ್ಯಪ್‌ ಗಳನ್ನು ನೋಡಿ ಮೆಹೆಂದಿ ಹಾಕಿಕೊಳ್ಳುವುದಿದೆ.

ಆಧುನಿಕ ಪರ್ಯಾಯಗಳು

ಇತ್ತೀಚಿನ ದಿನಗಳಲ್ಲಿ ಮೆಹೆಂದಿಗೆ ಪರ್ಯಾಯವಾಗಿ ಬಾಡಿ ಪೇಂಟಿಂಗ್‌, ತಾತ್ಕಾಲಿಕ ಟ್ಯಾಟುಗಳನ್ನು ಹಾಕಿಸಿಕೊಳ್ಳುವುದಿದೆ. ಜಾತ್ರೆ, ಪುಣ್ಯಕ್ಷೇತ್ರ  ಮುಂತಾದ ಕಡೆಗಳಲ್ಲಿ ಮೆಹೆಂದಿಯನ್ನು ಅಚ್ಚಿನ ಮೂಲಕ ಹಾಕುವುದಿದೆ. ಮೆಹೆಂದಿ ಎಂದರೆ ಬರೆ ಕಂದು ಇಲ್ಲಿ ಗಾಢ ಕೇಸರಿ ಬಣ್ಣದ್ದಲ್ಲಿಲ್ಲ. ಈಗ ಹಸಿರು, ಕೆಂಪು, ನೀಲಿ, ಮೆಜೆಂತ, ಕಪ್ಪು ಮುಂತಾದ ಬಣ್ಣಗಳಲ್ಲೂ ಬಂದಿವೆ. ಪಾರ್ಟಿಗಳಿಗೆ ಗ್ಲಿಟರ್ ಮೆಹೆಂದಿ ಕೂಡ ಬಂದಿದೆ. ಗ್ಲಿಟರ್‌, ಗಮ್, ಜೆಲ್ ಇತ್ಯಾದಿಗಳನ್ನು ಬಳಸಿ ಇದನ್ನು ಮಾಡಿರುತ್ತಾರೆ. ಅಡುಗೆಮನೆಯ ಪರಿಕರಗಳನ್ನು ಜಾಲರಿ, ಸ್ಪೂನ್‌, ಪೇಕ್ಸ್, ಟೂತ್‌ ಪಿಕ್ಸ್, ಇಯರ್‌ ಬಡ್ಸ್ ಗಳನ್ನು ಉಪಯೋಗಿಸಿಕೊಂಡು ಸರಳವಾಗಿ ಸೃಜನಾತ್ಮಕವಾಗಿ ಮೆಹೆಂದಿ ಬಿಡಿಸಿಕೊಳ್ಳುವ ಟ್ರೆಂಡ್‌ ಇದೆ.

ಕಾಲೇಜು ಹುಡುಗಿಯರು, ಉದ್ಯೋಗಸ್ಥ ಮಹಿಳೆಯರು ಕೈ ತುಂಬಾ ಮೆಹೆಂದಿ ಹಾಕಿಕೊಳ್ಳುವುದು ಇಷ್ಟವಾಗಿಲ್ಲ ಎಂದರೆ ಟ್ಯಾಟೂ ಮಾದರಿಯ ಮೆಹೆಂದಿಯನ್ನು ಹಾಕಿಕೊಳ್ಳುತ್ತಾರೆ. ಕಾಲಿಗೆ ಕಾಲು ಚೈನಿನ ಮಾದರಿಯಲ್ಲಿ, ಕೈಗೆ ಬ್ರೇಸ್ಲೆಟ್‌, ಉಂಗುರ, ಬೆನ್ನು, ಕುತ್ತಿಗೆಯ ಸುತ್ತ ನೆಕ್ಲೇಸ್‌ ಮಾದರಿಯಲ್ಲಿ ಇತ್ಯಾದಿ ಹಾಕುವುದಿದೆ. ಇದು ಅವರ ಸೃಜನಶೀಲತೆ ಹಾಗೂ ಅಲಂಕಾರಕ್ಕೆ ಆಸಕ್ತಿಗೆ ಅನುಗುಣವಾಗಿರುತ್ತದೆ. ಇಲ್ಲಿ ಹಸಿರು ಮೆಹೆಂದಿಯೇ ಆಗಬೇಕು ಎಂಬುದಿಲ್ಲ. ಬಿಳಿಯ ಬಣ್ಣದಲ್ಲಿಯೂ ಹಾಕಿಕೊಳ್ಳುತ್ತಾರೆ. ಇದು ಮುತ್ತಿನ ಆಭರಣಗಳನ್ನು ತೊಟ್ಟಂತೆ ಕಾಣಿಸುತ್ತದೆ. ಕಪ್ಪು, ಗಾಢ ಕೇಸರಿ, ಬೀಟ್‌ ರೂಟ್‌, ಕೆಂಪು ಬಣ್ಣದಲ್ಲಿಯೂ ಹಾಕುವುದಿದೆ.

ಸಾಂಪ್ರದಾಯಿಕ ವಿನ್ಯಾಸಗಳು

ಭಾರತೀಯ ಪದ್ಧತಿಯ ಮೆಹೆಂದಿಯಲ್ಲಿ ಹಲವಾರು ವಿನ್ಯಾಸಗಳನ್ನು ಕಾಣಬಹುದು. ಮೊದಲಿಗೆ ವೃತ್ತಾಕಾರ ಚಿಹ್ನೆ ಬಿಡಿಸಿಕೊಂಡು ನಂತರ ಚುಕ್ಕಿಗಳಿಂದ ಅಂಲಕರಿಸುವುದು, ಕಡೆಯದಾಗಿ ಮೆಹೆಂದಿಯನ್ನು ಉಂಡೆ ಮಾಡಿ ಉಗುರಿಗೆ ಮೆತ್ತಿಕೊಳ್ಳುವುದು. ನಂತರ ಫ್ರೀಹ್ಯಾಂಡ್‌ ಆಗಿಯೂ ಚಿತ್ರ ಬಿಡಿಸಿಕೊಂಡು ಅದಕ್ಕೆ ಹೊಂದುವ ಕಲರ್‌ ಹಾಕಿಕೊಳ್ಳುವುದಿದೆ. ಮೆಹೆಂದಿ ಹಾಕಲು ಕಲಿಯಬೇಕೆಂದವರಿಗೆ ಆರ್ಸೆಲಿಕ್‌ ಕೈಗಳು ಬಂದಿವೆ. ಅವುಗಳ ಮೇಲೆ ಮೊದಲು ಬಿಡಿಸಿ ಅಭ್ಯಾಸ ಮಾಡಿಕೊಳ್ಳಬಹುದು. ಕಾಲೇಜು, ಮಹಿಳಾಸಂಘ, ಇನ್ನಿತರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮೆಹೆಂದಿ ಬಿಡಿಸುವ ಸ್ಪರ್ಧೆಯೂ ಇರುತ್ತದೆ.

ಮದುವೆಯ ಸಂದರ್ಭದಲ್ಲಿ ಮದುಮಕ್ಕಳಿಗೆ ಹಾಕುವ ಪ್ರಾಕೃತಿಕ ಬಣ್ಣ ಇದು. ಮುತ್ತೈದೆ ಸಂಕೇತವಾಗಿರುವ ಮೆಹೆಂದಿ ಸಂಕೀರ್ಣ ಹಾಗೂ ಸರಳ ರೇಖಾ ಚಿತ್ರಗಳಿಂದ ಕೂಡಿದ ಚಿತ್ರ ಚಿತ್ತಾರವಾಗಿದೆ. ಹಾಗಾಗಿ `ಮೆಹೆಂದಿ ಶಾಸ್ತ್ರ’ ಎಂದು ಮದುವೆಗೆ ಮುನ್ನ ಸಂತೋಷಕೂಟದ ಇನ್ನೊಂದು ಭಾಗವಾಗಿ ಆಚರಿಸುವುದಿದೆ. ಮದುಮಗಳಿಗೆ ಬಂಧುಗಳೆಲ್ಲಾ ಸೇರಿ ಒಂದಾದರೂ ಚುಕ್ಕಿ ಇಟ್ಟು ಮೆಹೆಂದಿ ಶಾಸ್ತ್ರವನ್ನು ಆರಂಭಿಸುತ್ತಾರೆ. ವಧುವಿನ ಕೈಯಲ್ಲಿ ಮೆಹೆಂದಿ ಬಿಡಿಸುವಾಗ ವರನ ಹೆಸರನ್ನು ಗೊತ್ತಾಗದಂತೆ ಬಿಡಿಸಿ ಮತ್ತೆ ಹುಡುಕಿಸುವುದಿದೆ.

ಮೆಹೆಂದಿಯಿಂದ ಬಾಂಧವ್ಯ

ಮೆಹೆಂದಿಯ ಗಾಢತೆ ಸಂತಾನೋತ್ಪತ್ತಿಯ ಶಕ್ತಿಯ ಸಂಕೇತವಾಗಿಯೂ, ವಿವಾಹ ಬಾಂಧವ್ಯ ಹಾಗೂ ಶುಭ ಶಕುನ ಹಾಗೂ ಅನ್ಯೋನ್ಯತೆಯ ಸಂಕೇತವಾಗಿಯೂ ಮೆಹೆಂದಿ ಇದೆ. ಮೆಹೆಂದಿ ಗಾಢವಾಗಿ ಇದ್ದರೆ ಪ್ರೀತಿಯ ಬಣ್ಣ ಎಂದೂ, ಒಂದು ವೇಳೆ ಹಾಕಿದ ಮೆಹೆಂದಿ ಕಪ್ಪು ಬಣ್ಣಕ್ಕೆ ತಿರುಗಿದರೆ ಅತ್ತೆಯ ಜೊತೆಗೆ ವಿರಸ ಎಂಬ ನಂಬಿಕೆ ಇವೆ. ಆದರೆ ಇದೆಲ್ಲ ಮೂಢನಂಬಿಕೆ ಇರಬಹುದು. ಇಲ್ಲಿ ಅವರವರ ಗ್ರಹಿಕೆಗೆ ಬಿಟ್ಟಿದ್ದು. ಒಟ್ಟಾರೆ ಉಷ್ಣ ಶರೀರ ಹೊಂದಿರುವವರಿಗೆ ಮೆಹೆಂದಿ ಕಲರ್‌ ಚೆನ್ನಾಗಿ ಬರುತ್ತದೆ.

ಮೆಹೆಂದಿ ಹಾಕುವಾಗ ಬಿಡಿಸುವ ಚಿತ್ತಾರಗಳು ಸೂರ್ಯನ ಒಳಮೈ ಹಾಗೂ ಹೊರಮೈಯ ಸಂಕೇತ ಎಂದು ಭಾವಿಸಲಾಗುತ್ತದೆ. ಇದು ಧನಾತ್ಮಕತೆಯ ಸಂಕೇತ. ಇಂದಿಗೂ ಕೆಲವರು ಏನಿಲ್ಲದಿದ್ದರೂ ಒಂದು ವೃತ್ತಾಕಾರದ ಚಿಹ್ನೆಯನ್ನಾದರೂ ಬಿಡಿಸಿಕೊಳ್ಳುತ್ತಾರೆ. ಮದುಮಗಳಿಗೆ ಮೆಹೆಂದಿ ಹಾಕಿಸುವ ಮುಖ್ಯ ಉದ್ದೇಶವೇನೆಂದರೆ ತವರು ಬಿಡುತ್ತಿರುವ ನೋವನ್ನು ಮರೆಯಲಿ, ಕ್ಷಣಕಾಲವಾದರೂ ದುಗುಡ ಅಧೈರ್ಯದಿಂದ ಮಾನಸಿಕ ಒತ್ತಡದಿಂದ ದೂರವಿರಲಿ ಎಂದು.

ದಕ್ಷಿಣದಲ್ಲೂ ಪ್ರಸಿದ್ಧಿ

ಮಲೆನಾಡಿನಲ್ಲಿ ನಾಗರಪಂಚಮಿ ಮುಂತಾದ ಹಬ್ಬಗಳಲ್ಲಿ ವೀಳ್ಯದೆಲೆ, ಸುಣ್ಣ ಇತ್ಯಾದಿಗಳ ಜೊತೆ ಸೇರಿ ಇದನ್ನು ಹಾಕಿಕೊಳ್ಳುವುದಿದೆ. ಉತ್ತರ ಭಾರತದಲ್ಲಿ ಕರ್ವಾಚೌತ್‌ ನಲ್ಲಿ ಮೆಹೆಂದಿಗೆ ಅಗ್ರಸ್ಥಾನ, ಮದುವೆಯ ಸಂದರ್ಭದಲ್ಲಿ ವಧುವಿನ ಸಹೋದರನ ಕೈಗೂ ಸ್ವಲ್ಪ ಮೆಹೆಂದಿಯನ್ನು ಅಣ್ಣ ತಂಗಿ ಸಂಬಂಧ ಚೆನ್ನಾಗಿರಲಿ ಎಂಬ ಕಾರಣಕ್ಕೆ ಹಾಕುವುದಿದೆ. ಔಷಧೀಯ ಉಪಯೋಗಗಳ ಬಗ್ಗೆ ಹೇಳುವುದಾದರೆ, ಮೆಹೆಂದಿಗೆ ತಂಪಿನ ಗುಣವಿದೆ. ಮೆಹೆಂದಿಯನ್ನು ನಿಂಬೆರಸದಲ್ಲಿ ಮಿಶ್ರ ಮಾಡಿ ಅಂಗೈ, ಅಂಗಾಲುಗಳಿಗೆ ಲೇಪನ ಮಾಡಿಕೊಂಡರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಮೆಹೆಂದಿಯಿಂದ ಆರೋಗ್ಯ

ಮದರಂಗಿ ಎಲೆಗಳ ರಸಕ್ಕೆ ಒಂದಿಷ್ಟು ಅರಶಿನಪುಡಿ, ನಿಂಬೆರಸ ಸೇರಿಸಿ ಮಿಶ್ರ ಮಾಡಿ ಲೇಪಿಸಿದರೆ ಚಿಬ್ಬು, ಭಂಗು ಇತ್ಯಾದಿ ಕಲೆಗಳು, ಇಸುಬು, ಹುಳುಕಡ್ಡಿ ಗುಣವಾಗುತ್ತದೆ. ಮೆಹೆಂದಿ ಪುಡಿಗೆ ಒಂದು ಚಮಚ ಬೆಲ್ಲದಪುಡಿ ಇಲ್ಲವೇ ಜೇನು ಸೇರಿಸಿ ಕಣ್ಣಿನ ರೆಪ್ಪೆಯ ಮೇಲಿಟ್ಟು ಮಲಗಿದರೆ ತಲೆ ನೋವು ಹೋಗುತ್ತದೆ. ಮೆಹಂದಿ ಪುಡಿಯ ಜೊತೆಗೆ ಬೆಳ್ಳುಳ್ಳಿ, ಮೆಣಸು, ನಿಂಬೆರಸ ಸೇರಿಸಿ ಅರೆದು ಮುಲಾಮಿನ ರೀತಿ ಹಚ್ಚಿಕೊಂಡರೆ ಉಗುರುಸುತ್ತು ಗುಣವಾಗುತ್ತದೆ.

ಮದರಂಗಿಯ ಎಲೆಯ ಕಷಾಯಕ್ಕೆ ಹಾಲು, ಸಕ್ಕರೆ ಸೇರಿಸಿ ಒಂದು ತಿಂಗಳು ನಿರಂತರವಾಗಿ ಸೇವಿಸುವುದರಿಂದ ದೇಹದಲ್ಲಿ ಬಲವುಂಟಾಗಿ ರಕ್ತ ಶುದ್ಧಿಯಾಗಿ, ಪಿತ್ತದ ತಲೆನೋವು ಗುಣವಾಗುತ್ತದೆ. ಜೊತೆಗೆ ದೇಹಕ್ಕೆ ಇದರ ಸೇವನೆಯಾಗುವುದರಿಂದ ತಲೆಹೊಟ್ಟು, ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಮಾಡುವಿಕೆ ಹಾಗೂ ಕೊಬ್ಬನ್ನು ಹತೋಟಿಯಲ್ಲಿ ಇಡುವುದಕ್ಕೆ ಇದು ಸಹಕಾರಿ. ಕಾಮಾಲೆ, ಮೂಲವ್ಯಾಧಿ ನಿವಾರಣೆಗೂ ಇದನ್ನು ಬಳಸುವುದಿದೆ.

ಸೌಂದರ್ಯಕ್ಕೂ ಸಹಕಾರಿ

ಇದನ್ನು ಟೀ ಡಿಕಾಕ್ಷನ್‌, ಮೊಸರು, ನಿಂಬೆಹಣ್ಣಿನ ಜೊತೆ ಬೆರೆಸಿ ತಲೆಗೆ ಹಚ್ಚುವುದರಿಂದ ಬಾಲನೆರೆ, ಜೊತೆಗೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಮದರಂಗಿ ಪುಡಿಗೆ ಕರ್ಪೂರ, ಆಲಿವ್ ‌ಆಯಿಲ್ ‌ಇತ್ಯಾದಿ ಸೇರಿಸಿ ತಲೆಗೆ ಹಚ್ಚಿದರೆ ಹೇನು, ಸೀರುಗಳು ಕಡಿಮೆಯಾಗುತ್ತವೆ. ಮಿಗಿಲಾಗಿ ಒಂದೊಳ್ಳೆ ಹೇರ್‌ ಕಂಡೀಶನರ್‌ ಆಗಿ ಕೆಲಸ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ಪಿತ್ತಶಾಮಕವಾಗಿ, ಶೀತಹರವಾಗಿ, ಕಫಹರವಾಗಿ ಕೆಲಸ ಮಾಡುತ್ತದೆ. ಬಿಳಿ ಕೂದಲನ್ನು ತೋರ್ಪಡಿಸಬಾರದೆಂದು ಈಗ ಹೆಣ್ಣುಮಕ್ಕಳು, ಗಂಡು ಮಕ್ಕಳು, ವಯಸ್ಸಾದರು ಎಲ್ಲರೂ ಮೆಹೆಂದಿ ಹಚ್ಚಿಕೊಳ್ಳುತ್ತಾರೆ.

ವಾರಾಂತ್ಯದ ಯೋಜನೆಗಳಲ್ಲಿ ಮೆಹೆಂದಿ ಹಾಕಿಕೊಳ್ಳುವುದೂ ಒಂದಾಗಿದೆ. ಕೂದಲು ಕಪ್ಪಾಗಲೆಂದೇ ಕಾಲಾ ಮೆಹೆಂದಿಯೂ ಇದೆ. ಧೂಳು, ನೀರಿನ ವ್ಯತ್ಯಾಸದಿಂದ ಆಗುವ ಕೂದಲು ಉದುರುವಿಕೆಯನ್ನು ನಿಯಂತ್ರಣದಲ್ಲಿರುತ್ತದೆ. ಇದನ್ನು ರೈತರು ಒಂದು ವಾಣಿಜ್ಯ ಬೆಳೆಯಾಗಿಯೂ ಬೆಳೆಯಬಹುದು. ಉಷ್ಣ ಹಾಗೂ ಸಮಶೀತೋಷ್ಣ ವಲಯಗಳ ಈಜಿಪ್ಟ್, ಪರ್ಷಿಯಾ, ಪಾಕಿಸ್ತಾನ, ಸೂಡಾನ್‌ ನ ಅನೇಕ ಪ್ರದೇಶಗಳಲ್ಲಿ, ಭಾರತದ ಗುಜರಾತ್‌, ಮಧ್ಯಪ್ರದೇಶ, ರಾಜಾಸ್ಥಾನ ಮುಂತಾದೆಡೆ ಎಲೆಗಳಿಂದ ದೊರೆಯುವ ಬಣ್ಣಕ್ಕಾಗಿ ಬೆಳೆಸುತ್ತಾರೆ.

ಕೃಷಿಯಲ್ಲಿ ಮೆಹೆಂದಿ

ಹಿಂದೆ ಉಣ್ಣೆ ಹಾಗೂ ರೇಷ್ಮೆ ಬಟ್ಟೆಗೆ ಬಣ್ಣ ಹಾಕಲು ಮೆಹೆಂದಿಯನ್ನು ಬಳಸುತ್ತಿದ್ದರಂತೆ. ಜೌಗು ನೆಲ ಈ ಬೆಳೆಗೆ ಪ್ರಶಸ್ತವಲ್ಲ. ಉಳಿದ ಭೂಮಿಯಲ್ಲಿ ಬೆಳೆಯಬಹುದು. ವರ್ಷಕ್ಕೆ ಎರಡು ಬಾರಿ ಅಂದರೆ ಏಪ್ರಿಲ್ ಮತ್ತು ಮೇ, ಅಕ್ಟೋಬರ್‌ ಮತ್ತು ನವೆಂಬರ್ ತಿಂಗಳಲ್ಲಿ ಇದು ಕೊಯ್ಲಿಗೆ ಬರುತ್ತದೆ. ಸರಿ ಸುಮಾರು ಒಂದು ಎಕರೆಗೆ 350-750 ಕೆ.ಜಿ.ಯವರೆಗೆ ಇಳುವರಿ ಪಡೆಯಬಹುದು.

ಜೀವನೋಪಾಯಕ್ಕೆ ದಾರಿ

ಸಂತೋಷ ಹಾಗೂ ಸಮೃದ್ಧಿಯನ್ನು ಬಿಂಬಿಸುವ ಮೆಹೆಂದಿ ಜೀವನೋಪಾಯಕ್ಕೂ ದಾರಿ ಮಾಡಿಕೊಡುತ್ತದೆ. ಮದುವೆ ಶುಭ ಸಮಾರಂಭಗಳಿಗೆ ಮೆಹೆಂದಿ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಬ್ಯೂಟಿ ಪಾರ್ಲರ್‌ ನವರು, ಜೊತೆಗೆ ಬರೆಯುವ ಮೆಹೆಂದಿ ಬಿಡಿಸುವವರು ಉಪ ಸಂಪಾದನೆಯ ದಾರಿಯಾಗಿ ಇದನ್ನು ಕಂಡುಕೊಂಡಿದ್ದಾರೆ. ಶಾಪಿಂಗ್‌ ಮಾಲ್ ‌ಗಳಲ್ಲಿ ಮೆಹೆಂದಿ ಹಾಕಲೆಂದೇ ಮೆಹೆಂದಿ ಡಿಸೈನ್‌ ಇರುವ ಕ್ಯಾಟ್‌ ಲಾಗ್‌, ಮೆಹೆಂದಿ ಕೋನ್‌ ಹಿಡಿದಿರುತ್ತಾರೆ.

ಎಚ್ಚರಿಕೆ ವಹಿಸಿ

ಹೆಣ್ಣುಮಕ್ಕಳು ಮೆಹೆಂದಿ ಹಾಕಿಕೊಳ್ಳುವಾಗ ತಮ್ಮ ಚರ್ಮಕ್ಕೆ ಅದು ಒಗ್ಗುತ್ತದೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬೇಕು. ಕಾರಣ ಕೆಲವರಿಗೆ ಮೆಹೆಂದಿ ಸೊಪ್ಪಿನ ಅಲರ್ಜಿ ಇರುತ್ತದೆ. ಅಂಗೈ, ಅಂಗಾಲುಗಳಿಗೆ ಹಾಕಿಕೊಂಡರೆ ಏನಾಗುವುದಿಲ್ಲ. ಚರ್ಮಕ್ಕೆ ಹಾಕಿಕೊಂಡರೆ ಮೆಹೆಂದಿ ಚಿತ್ರದ ಸಾಲು ಹೋದಲ್ಲೆಲ್ಲಾ ತುರಿಕೆ, ಕಜ್ಜಿಗಳಾಗುತ್ತವೆ. ಆದಷ್ಟೂ ಮನೆಯಲ್ಲಿಯೇ ಮಿಶ್ರಣ ಮಾಡಿದ ಮೆಹೆಂದಿ ಹಾಕಿಕೊಳ್ಳಬೇಕು. ಮಾರುಕಟ್ಟೆಯ ಕೋನುಗಳಲ್ಲಿ ರಾಸಾಯನಿಕಗಳಿದ್ದು, ಶಾಶ್ವತ ಸಮಸ್ಯೆ ತಂದೊಡ್ಡಬಲ್ಲದು. ಮೆಹೆಂದಿ ಹಾಕುವುದೂ ಒಂದು ಕಲೆ. ಇದು ಹೆಣ್ಣುಮಕ್ಕಳ ಕ್ರಿಯಾಶೀಲತೆಯ ಸಂಕೇತ. ಇದು ಹಾಕುವವರ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಾಕಿಸಿಕೊಳ್ಳುವವರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಆಧುನಿಕ ಸ್ಪರ್ಶ ಹೊಂದಿರುವ, ಸೌಂದರ್ಯ ವೃದ್ಧಿಸುವ ಈ ಮೆಹೆಂದಿ ಕಲೆ ಹೆಣ್ಣುಮಕ್ಕಳ ಅಲಂಕಾರದ ಅವಿಭಾಜ್ಯ ಅಂಗ, ಮನೋಲ್ಲಾಸವನ್ನು ಹಿಗ್ಗಿಸುವ ಮೋಹಕ ಕಲೆ.

ಸುಮಾ ವೀಣಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ