ಭಾರತೀಯ ಮಂಗಳಕರ ಸಂಸ್ಕೃತಿಯ ಆಚರಣೆಗಳಲ್ಲಿ ಮೆಹೆಂದಿಯೂ ಒಂದು. ಮೆಹೆಂದಿ ಒಂದು ದೃಶ್ಯ ಕಲೆ. ವಯೋಭೇದವಿಲ್ಲದೆ ಪ್ರತಿಯೊಬ್ಬ ಹೆಣ್ಣುಮಕ್ಕಳೂ ಹಾಕಿಕೊಳ್ಳಲು ಇಷ್ಟಪಡುವ ಕಲೆ. ಹಳೆಯ ಸಂಪ್ರದಾಯ ಎಂದು ಮೂಗು ಮುರಿಯುವ ಈ ಕಾಲದಲ್ಲೂ ಮೆಹೆಂದಿ ಹಿಂದೆಂದಿಗಿಂತಲೂ ತನ್ನ ಪ್ರಾಮುಖ್ಯತೆಯನ್ನು ಹಾಗೆ ಉಳಿಸಿಕೊಂಡಿದೆ. ಸಾಂಪ್ರದಾಯಿಕ, ಆರೋಗ್ಯ ಹಾಗೂ ಅಲಂಕಾರದ ಹಿನ್ನೆಲೆಯಿಂದ ಇದು ಭಾರತೀಯರ ಕಲೆಗಳ ಒಂದು ಭಾಗವಾಗಿದೆ.
ದಂತಕಥೆ ಇದರ ಹಿನ್ನಲೆಯ ಕಥೆಯೊಂದು ನಮ್ಮ ನಡುವಿದೆ. ಅದೇನೆಂದರೆ, ಯುಗಗಳ ಹಿಂದೆ ಸತ್ಯೇಶ್ವರಿ ಹಾಗೂ ಸತ್ಯೇಶ್ವರ ಎಂಬ ಸಹೋದರ ಸಹೋದರಿಯರು ಇರುತ್ತಾರೆ. ನಾಗರ ಪಂಚಮಿಯ ಹಿಂದಿನ ದಿನ ಸತ್ಯೇಶ್ವರ ಅಕಾಲ ಮೃತ್ಯುವಿಗೀಡಾಗುತ್ತಾನೆ. ದುಃಖಿತಳಾದ ಸಹೋದರಿ ಎದುರಿನಲ್ಲಿ ಮತ್ತೆ ಸತ್ಯೇಶ್ವರ ನಾಗರಾಜನ ರೂಪದಲ್ಲಿ ಬಂದು ನಿಲ್ಲುತ್ತಾನೆ. ಸಂತೋಷದಿಂದ ಉಭಯ ಕುಶೋಪರಿ ನಡೆದ ಬಳಿಕ ಸತ್ಯೇಶ್ವರ ಹೊರಡುವ ಸಂದರ್ಭದಲ್ಲಿ ಸತ್ಯೇಶ್ವರಿ, `ನೀನು ಮತ್ತೆ ಬಂದೇ ಬರುವೆ ಎಂದು ಭಾಷೆ ನೀಡು,' ಎಂದಾಗ ಅವನು `ಭರವಸೆಯಿರಲಿ ಬಂದೇ ಬರುವೆ,' ಎಂದು ಭಾಷೆ ನೀಡುತ್ತಾನೆ. ಆ ಭಾಷೆಯೇ ಚಿಹ್ನೆಯ ರೂಪದಲ್ಲಿ ಸತ್ಯೇಶ್ವರಿಯ ಕೈಯಲ್ಲಿ ಹಾಗೆ ಉಳಿದುಬಿಡುತ್ತದೆ. ಅಂದಿನಿಂದ ಮೆಹೆಂದಿ ಬಿಡಿಸಿಕೊಳ್ಳುವ ಪರಿಪಾಠ ಬಂದಿತು ಎನ್ನುತ್ತಾರೆ.
ಹೆಸರಿನ ವೈವಿಧ್ಯತೆ
ಗೋರಂಟಿ, ಮದರಂಗಿ, ಹೆನ್ನಾ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಮೆಹೆಂದಿ ಮೂಲತಃ `ಮೆಂಧಿಕಾ' ಶಬ್ದದ ಮೂಲದಿಂದ ಬಂದಿದೆ. ಮೆಹೆಂದಿ ಪುಡಿ ಹಾಗೂ ಅರಿಶಿನವನ್ನು ಮಿಶ್ರ ಮಾಡಿ ಬಳಸುವ ಬಗ್ಗೆ ಪುರಾತನ ಕಾಲದ ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಮೆಹೆಂದಿಯ ತವರು ಅರಬ್ ಮತ್ತು ಪರ್ಶಿಯಾ, ಮೆಹಿಂದಿ ಲೈಥ್ರೇಸಿ ಕುಟುಂಬಕ್ಕೆ ಸೇರಿದೆ. ಮದರಂಗಿ ತಳಿಗಳಲ್ಲಿ ಬಿಳಿ, ಕೆಂಪು, ನೀಲಿ ಹೂ ಬಿಡುವ ಮಾದರಿಗಳಿವೆ. ಇದರ ಎಲೆ, ಹೂ, ತೊಗಟೆ, ಬೇರು, ಬೀಜಗಳು ಔಷಧಯುಕ್ತವಾಗಿವೆ.
ಇದರ ಬಿಳಿ ಹಾಗೂ ತಿಳಿ ಗುಲಾಬಿ ಹೂಗಳಿಗೆ ಸುವಾಸನೆಯೂ ಇರುತ್ತದೆ. ಭಾರತದಲ್ಲಿ ಗುಜರಾತ್, ರಾಜಾಸ್ಥಾನ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಇದಕ್ಕೆ ಪ್ರಾಶಸ್ತ್ಯವಿದೆ. ಮೆಹೆಂದಿ ಸೊಪ್ಪನ್ನು ನಿಂಬೆರಸ, ಕಾಚು, ಎಲೆ, ಸುಣ್ಣದೊಂದಿಗೆ ಒರಳಲ್ಲಿ ರುಬ್ಬಿ, ಕಲ್ಲಲ್ಲಿ ಅರೆದು ಹಚ್ಚಿಕೊಳ್ಳುವ ಕಾಲವಿತ್ತು. ಆದರೆ ಈಗ ಮೆಹೆಂದಿ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ನಿಂಬೆರಸ ಸೇರಿಸಿ ಚಿತ್ರ ಚಿತ್ತಾರ ಬಿಡಿಸಿಕೊಳ್ಳುತ್ತಾರೆ.
ಮೆಹೆಂದಿಯ ಮಹತ್ವ
ಮದುವೆ, ಹಬ್ಬ ಇತ್ಯಾದಿ ಶುಭ ಸಮಾರಂಭಗಳಲ್ಲಿ ಬ್ರೈಡಲ್, ಇಂಡಿಯನ್, ಅರೆಬಿಕ್, ಮೊಘಲ್, ಮಲ್ಟಿಕಲರ್ ಗಳಲ್ಲಿ ಇದನ್ನು ಬಳಸುತ್ತಾರೆ. ಮೆಹೆಂದಿ ಹಾಕಲು ಹಿಂದೆ ಕಡ್ಡಿಗಳನ್ನು ಬಳಸುತ್ತಿದ್ದರು. ಈಗ ಕೋನ್ ಗಳು ಬಂದಿವೆ. ಮತ್ತೂ ಮುಂದುವರಿದಂತೆ ಸ್ಟೋನ್, ಚಮಕಿ ವರ್ಕ್ ಸೇರಿಸಿಕೊಂಡು ಮೆಹೆಂದಿ ಆರ್ಟ್ ಕೂಡ ಮಾಡುತ್ತಾರೆ. ದಪ್ಪ ಎಳೆಯ ಮೆಹೆಂದಿ ಬಣ್ಣ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಈಗ ತೆಳು ಎಳೆಯ ಮೆಹೆಂದಿಯೇ ಇರುವುದು.
ಬಳಕೆ ಹೇಗೆ?
ಮೆಹೆಂದಿ ಒಣಗುವ ಹಂತಕ್ಕೆ ಬಂದಾಗ ಸಕ್ಕರೆ ಮತ್ತು ನಿಂಬೆಹಣ್ಣಿನ ರಸ ಹಾಕಿದರೆ ಬಣ್ಣ ಗಾಢವಾಗುತ್ತದೆ. ಕೈಗೆ ಹಾಕುವ ಮೆಹೆಂದಿ ಪುಡಿ ಉದುರಿದ ಬಳಿಕ ತೆಂಗಿನ ಎಣ್ಣೆ, ನೀಲಗಿರಿ ಮಿಕ್ಸ್ ಹಾಕುವುದರಿಂದ ಬಣ್ಣ ಮತ್ತಷ್ಟು ಗಾಢವಾಗುತ್ತದೆ. ಅಲ್ಲದೆ, ಮೆಹೆಂದಿ ಹಾಕಿ ಒಂದು ಇಡೀ ದಿನ ಸಾಬೂನು ಬಳಸದೆ ಹೋದಲ್ಲಿ ಹಾಕಿದ ಕೆಲವು ದಿನಗಳವರೆಗೆ ಮಾಗುವುದಿಲ್ಲ. ಯೂಟ್ಯೂಬ್, ಮೊಬೈಲ್ ಆ್ಯಪ್ ಗಳನ್ನು ನೋಡಿ ಮೆಹೆಂದಿ ಹಾಕಿಕೊಳ್ಳುವುದಿದೆ.