ಎಂತಹ ವೈಭವದ ಸುಂದರ ದೇಶ ಸುತ್ತಿದರೂ ನಮ್ಮ ದೇಶಕ್ಕೆ ವಾಪಸ್ ಬಂದರೆ ಏನೋ ಒಂದು ರೀತಿಯ ಸಮಾಧಾನ. ಅಂತೆಯೇ ಎಲ್ಲೆಲ್ಲಿಗೆ ಹೋದರೂ ನಮ್ಮ ಮನೆಗೆ ಬಂದರೆ ಏನೋ ಬೆಚ್ಚನೆಯ ಭಾವ. ಮನೆ ಎಂದರೆ ಬರಿಯ ಇಟ್ಟಿಗೆ, ಸಿಮೆಂಟಿನ ಕಟ್ಟಡವಲ್ಲ. ನಮ್ಮೆಲ್ಲರ ಆಶೋತ್ತರಗಳ ಅಡಗುದಾಣವದು. ಅದಕ್ಕೆ ಏನೋ, ಎಲ್ಲಿಗೇ ಹೋದರೂ ಬಂದು ಮನೆ ಸೇರುವ ತವಕ. ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಒಂದು ಮನೆಯನ್ನು ಬಯಸುವುದು ಸಹಜ.
`ದೂರದ ಬೆಟ್ಟದಲ್ಲಿ ಪುಟ್ಟ ಮನೆ ಇರಬೇಕು.... ಮನೆಯ ಸುತ್ತ ಹೂ ರಾಶಿ ಹಾಸಿರಬೇಕು.... ತಂಗಾಳಿ ಜೋಗುಳ ಹಾಡಲೇ ಬೇಕು....,' ಎನ್ನುವುದು ಎಲ್ಲರ ಮನಸ್ಸಿನ ಭಾವ. ಹುಟ್ಟಿದ ಮೇಲೆ ಸ್ವಂತ ಮನೆಯೊಂದನ್ನು ಮಾಡಿಕೊಳ್ಳಬೇಕು. ಇಲ್ಲವಾದರೆ ಜೀವನ ಸಾರ್ಥಕವೆನಿಸದು. ಆದರೆ ಬರಿಯ ಸುಂದರವಾದ ಮನೆ ಸಂತಸ ನೀಡದು. ಮೊದ ಮೊದಲು ಮನೆಯ ಹೊಳೆಯುವ ನೆಲವನ್ನು ಆಕರ್ಷಕವಾಗಿ ಅಲಂಕರಿಸಿರುವ ಪಡಸಾಲೆಯನ್ನು ನೋಡಿ ಸಂತಸವೆನಿಸಿದರೂ ನಂತರ ಅದು ನೀರಸವೆನಿಸುತ್ತದೆ.
ಮನೆಗೆ ಬಂದಾಗ ಮನಸ್ಸು ಹಿಗ್ಗಬೇಕೆಂದರೆ ಮನೆಯಲ್ಲಿ ಇರುವವರೆಲ್ಲರೂ ಕಾರಣರಾಗುತ್ತಾರೆ. ಅದರಲ್ಲೂ ಮನೆಯೊಡತಿ ಮನೆಗೆ ಕಳಸಪ್ರಾಯದಂತೆ ಇರುವಳು. ಮನೆಯ ಸುಖ ಶಾಂತಿಗೆ ಅವಳ ಪಾತ್ರ ಮಹತ್ತರವಾದುದು. ಒಂದು ಮನೆ ಪರಿಪೂರ್ಣ ಎನಿಸಿಕೊಳ್ಳಬೇಕಾದರೆ ಹಿಂದಿನ ಅವಿಭಕ್ತ ಕುಟುಂಬಗಳಂತೆ ಮನೆಯ ತುಂಬಾ ಜನವಿಲ್ಲದೆ ಹೋದರೂ ಗಂಡ, ಹೆಂಡತಿ, ಅತ್ತೆ, ಮಾವ ಮತ್ತು ಮೊಮ್ಮಕ್ಕಳು ಇದ್ದಾಗಲೇ ಅಲ್ಲೊಂದು ಜೀವ ಕಳೆ ಹೊರ ಹೊಮ್ಮುವುದು.
ಮೂರು ವರ್ಷದ ಮೊಮ್ಮಗಳಿಗೆ ಬೇರೆಲ್ಲಾ ಆಟಗಳಿಗಿಂತ ಮನೆಯ ಆಟವೇ ಇಷ್ಟ. ಚಿಕ್ಕಂದಿನಲ್ಲಿ ನಾವಾಡುತ್ತಿದ್ದುದು ಅದೇ ಆಟ ಅಲ್ಲವೇ? ಮನುಷ್ಯ ಎಷ್ಟೇ ಮುಂದುವರಿದರೇನು ಮೂರು ಹೊತ್ತಿನ ಊಟ ಬಿಡಲಾಗುತ್ತದೆಯೇ? ಹೊಟ್ಟೆ ತುಂಬಿದಾಗಲೇ ಮನುಷ್ಯ ಸರಿಯಾಗಿ ಯೋಚಿಸಬಲ್ಲ.
ಅಂತಹ ವೈಭವಯುತ ಬಿಗ್ ಬಾಸ್ ಮನೆಯಲ್ಲಿಯೂ ಅಡುಗೆಮನೆಯಲ್ಲಿ ಹೆಣ್ಣುಮಕ್ಕಳದೇ ಮುಖ್ಯ ಪಾತ್ರ. ಅದರಲ್ಲೂ ಅವರೆಲ್ಲರೂ ಗ್ಲಾಮರ್ ಲೋಕದಲ್ಲಿ ಹೆಸರು ಗಳಿಸಿದರು. ಆದರೂ ಅಚ್ಚುಕಟ್ಟಾಗಿ ಅಡುಗೆ ಮಾಡಿ ಅದರಲ್ಲೂ ಇರು ಕನಿಷ್ಠ ಪದಾರ್ಥಗಳಲ್ಲೇ ರುಚಿ ರುಚಿಯಾದ ಅಡುಗೆ ಮಾಡಬಲ್ಲ ಜಾಣೆಯರಾಗಿದ್ದರು. ಮನೆ ಎಂದಾಗ ಅಡುಗೆಮನೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಜೀವನದ ಮಹಾ ನಿರ್ಣಯಗಳಾಗುವುದೇ ಅಡುಗೆಮನೆಯಲ್ಲಿ. ಅಂತೆಯೇ ಮಹಾ ಯುದ್ಧಗಳಾಗುವುದೂ ಅಲ್ಲಿಯೇ.
ಆದ್ದರಿಂದ ಅಲ್ಲಿರುವವರು ಬಹಳ ಮುಖ್ಯರಾಗಿರುತ್ತಾರೆ. ಅವರು ಮನೆಯ ಕೇಂದ್ರಬಿಂದು ಹೌದು ಮತ್ತು ಕಾಂತಿಯ ಕೇಂದ್ರ ಹೌದು. ಮನೆಯೆಂದಾಗ ಅಲ್ಲಿ ಜೀವ ತುಂಬುವ ಮಡದಿ ಬೇಕು. ಅಕ್ಕರೆಯನ್ನು ಸೂಸುವ ತಾಯಿ ತಂದೆಯರು ಬೇಕು. ತುಂಟತನ ಮಾಡುವ ಮಕ್ಕಳು ಬೇಕು. ಆಗಲೇ ಮನೆಗೆ ಒಂದು ಅರ್ಥ ಬರುವುದು. ಈ ಮೂರು ತಲೆಮಾರಿನವರು ಒಂದೇ ಸೂರಿನಡಿ ಇರಲು ಸಾಧ್ಯವಿಲ್ಲವೇ? ಅದನ್ನು ನಮ್ಮ ಯುವ ಜನಾಂಗ ಯೋಚಿಸಬೇಕು. ಖಂಡಿತಾ ಅದು ಹೊರೆಯಲ್ಲ ಅನೇಕ ಬಾರಿ ಪರಸ್ಪರ ಸಹಾಯವಾಗುತ್ತದೆ.
ಹಿರಿಯರ ಅನುಭವ ಕಿರಿಯರಿಗೆ ಮಾರ್ಗದರ್ಶನವಾಗಬಲ್ಲದು. ಅವರು ಮೊಮ್ಮಕ್ಕಳಿಗೆ ಸಂಸ್ಕೃತಿಯನ್ನು ಪರಿಚಯಿಸುವ ದಿಕ್ಸೂಚಿಯಾಗಬಲ್ಲರು. ಇವೆಲ್ಲವನ್ನೂ ತೂಗಿಸುವ ಹೆಣ್ಣೊಬ್ಬಳು ಮನೆಯೊಳಗಿದ್ದಾಗ ಅದು ನಿಜಕ್ಕೂ ಕೋಟಿ ರೂಪಾಯಿಗಳಿಗೆ ಸಮಾನ. ಮನೆ ಗುಡಿಗಿಂತಾ ಪವಿತ್ರ ಹೌದು. ವ್ಯಾಟ್ಸ್ ಆ್ಯಪ್, ಫೇಸ್ ಬುಕ್ ಈ ರೀತಿ ಇಡೀ ಪ್ರಪಂಚದೊಂದಿಗೆ ನಂಟನ್ನು ಇಟ್ಟುಕೊಳ್ಳಬಲ್ಲವರು ಮನಸ್ಸು ಮಾಡಿದರೆ ಮನೆಯಲ್ಲಿರುವ ನಾಲ್ಕು ಮಂದಿಯೊಂದಿಗೆ ಸೌಹಾರ್ದಯುತ ಜೀವನ ಸಾಧ್ಯವಿದೆ. ಅಂತಹ ಮನ, ಮನೆಗಳ ಅಗತ್ಯ ನಮ್ಮ ಆರೋಗ್ಯಕರ ಸಮಾಜಕ್ಕೆ ಬೇಕಿದೆ. ಆಗ ಮಾತ್ರ ನಿಜವಾದ ಅರ್ಥದಲ್ಲಿ ಅದು ಮನೆ ಎನಿಸಿಕೊಳ್ಳುತ್ತದೆ.