ಹಬ್ಬದ ಸಂದರ್ಭ ಎಂದ ಮೇಲೆ ಅದು ಮನೆ, ಅಂಗಡಿ, ಆಫೀಸ್ ಯಾವುದೇ ಇರಲಿ ಅತ್ಯುತ್ತಮ ಇಂಟೀರಿಯರ್ಸ್ ನಿಂದ ಅದರ ಒಳಾಲಂಕಾರ ಪೂರ್ಣಗೊಂಡಾಗ ಅದಕ್ಕೊಂದು ಉತ್ತಮ ಕಳೆ ಬರುತ್ತದೆ. ಹಿಂದೆಲ್ಲ ಎಷ್ಟೋ ಅಂಗಡಿಗಳಲ್ಲಿ ಇಂಟೀರಿಯರ್ಸ್ ಕಡೆ ಗಮನ ಹರಿಸುತ್ತಿರಲಿಲ್ಲ. ಬಟ್ಟೆಗಳ ಅಂಗಡಿಯ ಆಕಾರ ಎಷ್ಟೋ ಬದಲಾಗಿದೆ. ನೆಲ ಅಥವಾ ಮಹಡಿ ಏನೇ ಇರಲಿ, ಈಗ ಎಲ್ಲಾ ಕಡೆ ಇಂಟೀರಿಯರ್ಸ್ ವಿಭಿನ್ನವಾಗಿ ಕಂಡುಬರುತ್ತಿವೆ. ಹಿಂದೆಲ್ಲ ಸೆಲೂನ್ ಎಂದರೆ ಗಂಡಸರು ಗಡ್ಡ ಕೂದಲು ತೆಗೆಸುವ ಕುರ್ಚಿ, ಕನ್ನಡಿಯ ಸಣ್ಣ ಜಾಗ ಅಷ್ಟೆ. ಇದೀಗ ಬ್ಯೂಟಿ ಪಾರ್ಲರ್ ಗಳ ದರ್ಬಾರು ಶುರುವಾದ ನಂತರ ಹೆಣ್ಣುಮಕ್ಕಳ ಅಲಂಕಾರ ಜೋರಾಗಿರುವಂತೆ, ಗಂಡಸರಿಗೂ ಮೆನ್ಸ್ ಪಾರ್ಲರ್ ಆಹಾ ಓಹೋ ಎಂಬಂತೆ ಪಾಪ್ಯುಲರ್ ಆಗುತ್ತಿದೆ. ಇದರ ಇಂಟೀರಿಯರ್ ಡಿಸೈನ್ಸ್ ನೋಡಿಯೇ ತಣಿಯಬೇಕು. ಸೋಶಿಯಲ್ ಮೀಡಿಯಾದ ಈ ಕಾಲದಲ್ಲಿ, ಜನ ಎಲ್ಲಿಗೆ ಹೋದರೂ ಅಲ್ಲೇ ಸೆಲ್ಛಿ ಕ್ಲಿಕ್ಕಿಸಿಕೊಂಡು FBಗೆ ಅಪ್ ಲೋಡ್ ಮಾಡಿಕೊಳ್ಳುವ, ಸ್ಟೇಟಸ್ ಸಿಂಬಲ್ ಪ್ರದರ್ಶಿಸುವ ಧಾವಂತದಲ್ಲಿರುತ್ತಾರೆ. ಈ ರೀತಿ ಉತ್ತಮ ಇಂಟೀರಿಯರ್ಸ್ ಉಚಿತ ಪ್ರಚಾರ ಗಿಟ್ಟಿಸುತ್ತವೆ.
ಈ ಬದಲಾವಣೆಗೆ ಏನು ಕಾರಣ?
ಇದಕ್ಕಾಗಿ ಬೆಂಗಳೂರಿನ ಹಲವಾರು ಇಂಟೀರಿಯರ್ ಡಿಸೈನರ್ ಗಳು ಹೀಗೆ ವಿವರಿಸುತ್ತಾರೆ :
ಶಾಪ್ಸ್ ಮ್ಯಾನೇಜ್ ಮೆಂಟ್ ಸುಂದರ, ಸುವ್ಯವಸ್ಥಿತ ವಾತಾವರಣ ಪ್ರತಿಯೊಬ್ಬರಿಗೂ ಬಲು ಅಚ್ಚುಮೆಚ್ಚು. ಇಂಥ ಜಾಗ ಮನಸ್ಸಿಗೆ ಹಿತಕರ ಎನಿಸುತ್ತವೆ. ಹಿಂದೆಲ್ಲ ಶಾಪ್ಸ್ ನಲ್ಲಿ ಸಾಮಗ್ರಿ ಎಲ್ಲೆಲ್ಲೂ ಹೇಗೋ ಹರಡಿ ಹೋಗಿರುತ್ತಿದ್ದವು. ಆ ಕಾರಣ ಕೊಳಕು ಎನಿಸುತ್ತಿತ್ತು. ಆಗೆಲ್ಲ ಅಂಗಡಿ ಕ್ಲೀನಿಂಗ್ ದೊಡ್ಡ ತಲೆ ನೋವಾಗಿರುತ್ತಿತ್ತು. ಇಲಿ, ಹೆಗ್ಗಣ, ಕ್ರಿಮಿ ಕೀಟಗಳು ಸಾಮಗ್ರಿಗಳನ್ನು ನಾಶ ಮಾಡುತ್ತಿದ್ದವು. ಲೈಟಿಂಗ್ ಗೆ ಸಮರ್ಪಕ ವ್ಯವಸ್ಥೆ ಇರುತ್ತಿರಲಿಲ್ಲ. ವೈರುಗಳು ಹೇಗ್ಹೇಗೋ ತೂಗುತ್ತಾ, ಶಾರ್ಟ್ ಸರ್ಕ್ಯೂಟಿಗೆ ಕಾರಣವಾಗುತ್ತಿದ್ದವು.
ಇದರಿಂದ ಅಂಗಡಿಗಳಲ್ಲಿ ಬೆಂಕಿ ಅಪಘಾತ ಮಾಮೂಲಿ ಆಗಿಬಿಡುತ್ತಿತ್ತು. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾಗಿ ಕೂರುವ, ನಿಲ್ಲಲಿಕ್ಕೂ ವ್ಯವಸ್ಥೆ ಇರುತ್ತಿರಲಿಲ್ಲ. ಗಾಳಿ ಬೆಳಕು ಸರಿಯಾಗಿ ಲಭ್ಯವಿರಲಿಲ್ಲ. ಇದೀಗ ಎಲ್ಲೆಲ್ಲೂ ಇಂಟೀರಿಯರ್ಸ್ ಪ್ರವೇಶಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳೂ ಲಕಲಕ ಪ್ರಕಾಶಿಸುತ್ತಿವೆ. ಅಂಗಡಿಗೆ ಬರುವ ಗ್ರಾಹಕರಿಗೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದಾಗಿ ಶಾಪ್ಸ್ ಡಿಸೈನಿಂಗ್ ಬಹಳ ಸುಧಾರಿಸಿವೆ. ಕೆಲಸದ ಸಿಬ್ಬಂದಿ ಹಾಗೂ ಬರುವ ಗ್ರಾಹಕರ ಸೇವೆಗೆ ಎಲ್ಲಾ ತಯಾರಿಗಳೂ ಸುಸಜ್ಜಿತಗೊಂಡಿರುತ್ತವೆ.
ಎಲೆಕ್ಟ್ರಿಕ್ ಡಿಸೈನಿಂಗ್
ಹಿಂದೆಲ್ಲ ಇಂಟೀರಿಯರ್ಸ್ ನಲ್ಲೂ ಎಲೆಕ್ಟ್ರಿಕ್ ಡಿಸೈನಿಂಗ್ ಕೇವಲ ನಾಮಮಾತ್ರವಾಗಿತ್ತು, ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟಿರುತ್ತಿತ್ತು. ಇತ್ತೀಚಿನ ದಿನಗಳಲ್ಲಂತೂ ಎಲೆಕ್ಟ್ರಿಕ್ ಡಿಸೈನಿಂಗ್ ಫಿಟ್ಟಿಂಗ್ ದೇ ಮೇಲುಗೈ, ಅಷ್ಟು ಚೆನ್ನಾಗಿ ಅಲಂಕರಿಸಿರುತ್ತಾರೆ. ಅಲ್ಲಿ ಗಾಳಿ, ಬೆಳಕಿನ ವಾತಾವರಣ ಅನುಕೂಲಕ್ಕೆ ತಕ್ಕಂತೆ ಬದಲಾಗಿದೆ. ಅನೇಕ ವಿದ್ಯುತ್ ಉಪಕರಣಗಳು ಇದೀಗ ಲೋ ವೊಲ್ಟೇಜ್ ನಲ್ಲೂ ಕೆಲಸ ನಿರ್ವಹಿಸುತ್ತವೆ. ಇದರಿಂದ ವಿದ್ಯುತ್ ಉಳಿತಾಯ ಆಗುತ್ತದೆ. ಗಾಳಿಗೋಸ್ಕರ ಫ್ಯಾನ್ ಹಳೆಯ ಮಾತಾಗಿ, ಇದೀಗ AC ರಾರಾಜಿಸುತ್ತಿದೆ! ಕುಡಿಯುವ ನೀರಿಗೂ ಡಬಲ್ ಆಸ್ಮಾಸಿಸ್ ಪ್ರಕ್ರಿಯೆ ಮೂಲಕ ಶುದ್ಧ ಸ್ವಚ್ಛ ಕುಡಿಯುವ ಜಲ ಲಭಿಸುತ್ತಿದೆ.