ದೀಪಗಳ ಹಬ್ಬ ದೀಪಾವಳಿ! ಈ ದಿನ ಮನೆ ಮುಂದಿನ ಅಂಗಳ, ಮನೆಯ ಒಳಗೆ, ಪೂಜಾ ಕೋಣೆಯಲ್ಲಿ ರಂಗು ರಂಗಿನ ರಂಗೋಲಿ ಬಿಡಿಸಿದರೆ ಎಂಥ ಚಂದ ಅಲ್ಲವೇ? ಇಡೀ ದ. ಭಾರತದಲ್ಲಿ ರಂಗೋಲಿಯ ಪರಂಪರೆ ಅದ್ಭುತವಾಗಿ ಎದ್ದು ಕಾಣುತ್ತದೆ. ಯಾವುದೇ ಹಬ್ಬವಿರಲಿ, ಮನೆಯ ಮುಂಬಾಗಿಲಿಗೆ ತಳಿರುತೋರಣ, ಹೂವಿನ ಅಲಂಕಾರ, ಬಾಗಿಲ ಮುಂದೆ ಬಣ್ಣದ ರಂಗೋಲಿ ಇದ್ದಾಗಲೇ ಅದು ಹಬ್ಬದ ಪರಿಪೂರ್ಣತೆಗೆ ಒಂದು ಸಂಕೇತ. ದೀಪಾವಳಿಯಂಥ ದೊಡ್ಡ ಹಬ್ಬದಲ್ಲಿ ಇಡೀ ದೇಶಾದ್ಯಂತ ರಂಗೋಲಿಯ ಘಮಲು ಹರಡಿಕೊಳ್ಳುತ್ತದೆ.

ಇಡೀ ಮನೆ ಸುಣ್ಣ ಬಣ್ಣ, ಸಾರಣೆ ಕಂಡು, ಗೃಹಾಲಂಕಾರ ಪೂರ್ತಿ ಆದ ಮೇಲೆ ರಂಗೋಲಿಯದೇ ಮೇಲುಗೈ! ಮನೆಯ ಮುಂಬಾಗಿಲಲ್ಲಿ ದೊಡ್ಡದಾದ ಬಣ್ಣದ ರಂಗೋಲಿ ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳಿಗೆ ಸ್ವಾಗತ ಕೋರುತ್ತದೆ. ಹಬ್ಬದ ದಿನ ಮನೆಯ ಒಳಗೂ ಹೊರಗೂ ಹರಡಿದ ಬಣ್ಣದ ರಂಗೋಲಿ ಮನಸ್ಸಿಗೆ ಅಪೂರ್ವ ಕಾಂತಿ ತುಂಬುತ್ತದೆ. ಮನೆಯಲ್ಲಿ ಏನೋ ಶುಭ ಕಾರ್ಯ ನಡೆಯುತ್ತಿದೆ ಎನ್ನುವುದರ ದ್ಯೋತಕವಾಗಿದೆ. ಇಡೀ ದೇಶದ ವಿಭಿನ್ನ ಪ್ರಾಂತ್ಯಗಳ ರಂಗೋಲಿ ತನ್ನದೇ ಆದ ಪ್ರತ್ಯೇಕ ಮಹತ್ವ ಹೊಂದಿದೆ.

Rangoli-cutout

ಕರ್ನಾಟಕದಲ್ಲಂತೂ `ರಂಗ ನೀ ಒಲಿ’ ಎಂಬುದೇ ರಂಗೋಲಿ, ರಂಗವಲ್ಲಿಯಾಗಿ ರಾರಾಜಿಸುತ್ತಿದೆ. ನಾನಾ ಬಗೆಯ ಚುಕ್ಕಿಯ ರಂಗೋಲಿಗಳು ಶಿವನ ಜಟೆಯಂತೆ ಹರಡಿಕೊಂಡು ಯಾವುದು ಆದಿ, ಯಾವುದು ಅಂತ್ಯ ತಿಳಿಯಾರದೆ ಇಂದಿನ ಆಧುನಿಕ ಹೆಣ್ಣುಮಕ್ಕಳು ಪ್ರಾಚೀನ ಕಾಲದ ಈ ಭವ್ಯ ಸಂಸ್ಕೃತಿಯನ್ನು ತಮ್ಮ ಪುಸ್ತಕಗಳಲ್ಲಿ ಅಚ್ಚಿಳಿಸುತ್ತಾರೆ. ಅಂದರೆ ಮೇಲ್ಭಾಗದ ಒಂದು ಚುಕ್ಕಿಯಿಂದ ಶುರುವಾಗುವ ಒಂದು ರೇಖೆ ನಾನಾ ಮೂಲೆಗಳನ್ನು ಹಾದು ಮತ್ತೆ ಬಂದಲ್ಲಿಗೆ ಸೇರಿಕೊಳ್ಳುತ್ತದೆ. ಈ ಭವ್ಯ ಪರಂಪರೆ ನಮ್ಮ ದ. ಭಾರತದ ಎಲ್ಲಾ ರಾಜ್ಯಗಳಲ್ಲೂ ಸಮಾನವಾಗಿ ಹರಡಿಕೊಂಡಿದೆ.

ನಮ್ಮ ರಂಗೋಲಿ ಅಥವಾ ರಂಗವಲ್ಲಿ ಇತರ ಕಡೆ ಕೋಲಂ, ಮುಗ್ಗುಲು, ಅಲ್ಪನಾ, ಚಿತ್ತಾರ್‌ ಇತ್ಯಾದಿ ನಾನಾ ಹೆಸರುಗಳನ್ನು ಪಡೆದುಕೊಂಡಿದೆ. ಇಂಥ ಚಂದದ ರಂಗೋಲಿ ಬಿಡಿಸಿ, ಅದಕ್ಕೆ ಅಂದದ ಬಣ್ಣ ತುಂಬಿಸಿದರೆ ನೋಡಲಿಕ್ಕೆ ಎರಡು ಕಣ್ಣು ಸಾಲದು! ನಿಮ್ಮ ಕಲ್ಪನೆ, ವಿನ್ಯಾಸ ಹೆಚ್ಚಿದ್ದಷ್ಟೂ ನಿಮ್ಮ ರಂಗೋಲಿ ಬಲು ಸುಂದರವಾಗುತ್ತದೆ.

ವಿವಿಧ ವಿನ್ಯಾಸಗಳು

ಚುಕ್ಕೆ ರಂಗೋಲಿಗಳ ಹೊರತಾಗಿ ದೇಶಾದ್ಯಂತ ಕೋಟ್ಯಂತರ ವಿನ್ಯಾಸಗಳಲ್ಲಿ ರಂಗೋಲಿಯ ಚಿತ್ತಾರವನ್ನು ಕಾಣಬಹುದು. ತಾರೆ, ಮೀನು, ಪಕ್ಷಿ, ಹಾವು…… ವೃತ್ತಾಕಾರದ ವಿವಿಧ ವಿನ್ಯಾಸಗಳ ರಂಗೋಲಿ, ಬಾರ್ಡರ್‌, ತೋರಣಗಳ ಡಿಸೈನಿನ ರಂಗೋಲಿ, ಷಟ್ಕೋನದಿಂದ ದಶುಭುಜಾಕೃತಿಯವರೆಗೂ ವಿವಿಧ ಜ್ಯಾಮಿತೀಯ ವಿನ್ಯಾಸಗಳ ರಂಗೋಲಿಯ ವೈಭವ ವರ್ಣನಾತೀತ! ಮಾನವರ ಕಲ್ಪನೆ ಹಿಗ್ಗಿದಷ್ಟೂ ವಿವಿಧ ಪ್ರಾಣಿ, ಪ್ರಕೃತಿಯ ಸೊಬಗು ಇದರಲ್ಲಿ ಕೂಡಿಕೊಳ್ಳುತ್ತದೆ.

ಬಗೆ ಬಗೆಯ ರಂಗೋಲಿಯ ವಿನ್ಯಾಸಗಳು ಎಷ್ಟು ಸುರಸುಂದರವಾಗಿ ಇರುತ್ತವೆಂದರೆ, ಅವನ್ನು ನೋಡುತ್ತಾ ನಿಂತುಬಿಟ್ಟರೆ, ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ದ. ಭಾರತದ ಬೀದಿ ಬೀದಿಗಳಲ್ಲೂ ಎಲ್ಲರ ಮನೆ ಮುಂದೆ ಬೆಳಗುವ ಈ ರಂಗೋಲಿ, ಇಡೀ ಊರಿಗೆ ಊರೇ ಸಂಭ್ರಮದಿಂದ ಆಚರಿಸುತ್ತಿದೆ ಹಬ್ಬ ಎಂದು ಸಾರುತ್ತದೆ. ಅದು ಯಾವ ಬಗೆಯ ಹಬ್ಬ ಎಂದೂ ಗೊತ್ತಾಗಿಹೋಗುತ್ತದೆ. ಇಂಥ ಅದ್ಭುತ ಕಲ್ಪನೆಯ ರಂಗೋಲಿಗಳ ಚಿತ್ತಾರವನ್ನು ಎಷ್ಟು ನೋಡಿದರೂ ಸಾಲದು ಎನಿಸುತ್ತದೆ.

ಇತರ ಚಿತ್ತಾರಗಳು

ಈ ರಂಗೋಲಿಗಳಲ್ಲಿ ಬಗೆಬಗೆಯ ಬಣ್ಣ ಬಳಸುವುದು ಒಂದು ಕ್ರಮವಾದರೆ, ಸುದ್ದೆ ಕೆಮ್ಮಣ್ಣು ಬಳಸಿ ಅಂಲಕರಿಸುವುದು ಇನ್ನೊಂದು ವಿಧ. ಬರಿಯ ರಂಗೋಲಿ ಪುಡಿ ಬಳಸಿ ಮನೆ ಮುಂದಿನ ನೆಲದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿದರೆ, ಒರಟಾದ ಗಾರೆ ನೆಲ, ಮೊಸಾಯಿಕ್‌ ಟೈಸ್, ರೆಡ್‌ ಆಕ್ಸೈಡ್‌ ನೆಲದ ಮೇಲೆ, ಕಲ್ಲು ಹಾಸಿನ ಮೇಲೆ ನೆನೆಸಿದ ರಂಗೋಲಿಯಲ್ಲಿ ಬಟ್ಟೆ ಅದ್ದಿ ವಿನ್ಯಾಸ ಮಾಡಿ ರಂಗೋಲಿ ಬಿಡಿಸುವುದು, ಇದಕ್ಕೆ ಕೆಮ್ಮಣ್ಣಿನ ಚಿತ್ತಾರದ ಚೌಕಟ್ಟು ಅದ್ಭುತ ಎನಿಸುತ್ತದೆ.

ಇಂದಿನ ಆಧುನಿಕ ತರುಣಿಯರಿಗೆ ಹೆಚ್ಚಿನ ಕಷ್ಟ ಬೇಡವೆನಿಸಿದರೆ, ಸಿಂಪ್‌ ಆಗಿ ಚಾಕ್‌ ಪೀಸಿನಲ್ಲಿ ಮನೆಯ ಮುಂದಿನ ಸಿಮೆಂಟ್ ನೆಲದಲ್ಲಿ ರಂಗೋಲಿ ಬಿಡಿಸಿದರೂ ಆಯಿತು. ಇದಕ್ಕೆ ಬೇಕಾದಂತೆ ಬಣ್ಣ ತುಂಬಬಹುದು ಅಥವಾ ಬಣ್ಣ ಬಣ್ಣದ ಚಾಕ್‌ ಪೀಸ್ ಬಳಸಬಹುದು.

ಆಧುನಿಕ ವಿನ್ಯಾಸಗಳು

ಇಂದಿನ ಉದ್ಯೋಗಸ್ಥ ವನಿತೆಯರಿಗೆ ನೆರವಾಗಲೆಂದೇ ಈಗೆಲ್ಲ ರೆಡಿಮೇಡ್‌ ಸ್ಟಿಕರ್‌ ರಂಗೋಲಿಗಳು ಲಭ್ಯ. ನೀವು ಬಯಸುವ ಚಿತ್ರವಿಚಿತ್ರ ವಿನ್ಯಾಸದ ಯಾವ ದೊಡ್ಡ ಅಥವಾ ಚಿಕ್ಕ ಗಾತ್ರದ ಚಿತ್ತಾಕರ್ಷಕ ವಿನ್ಯಾಸಗಳ ಸ್ಟಿಕರ್‌ರಂಗೋಲಿ ಲಭ್ಯ. ನೀವು ಇದನ್ನು ಕೊಂಡುತಂದು ನಿಮ್ಮ ಪೂಜಾಗೃಹದ ಮುಂದೆ, ಮನೆಯ ಮುಂಬಾಗಿಲಿನ ಮುಂದೆ ಸಿಮೆಂಟ್‌ ನೆಲದ ಮೇಲೆ ನೀಟಾಗಿ ಅಂಟಿಸಿದರಾಯಿತು, ರಂಗೋಲಿ ರೆಡಿ! ಹೀಗೆ ಹಸಿರು ಪ್ಲಾಸ್ಟಿಕ್‌ ತಳಿರುತೋರಣಗಳೂ ಲಭ್ಯ.

ಉ.ಭಾರತೀಯ ರಂಗೋಲಿಗಳಲ್ಲಿ ತ್ರಿಕೋನಗಳ ವಿನ್ಯಾಸವೇ ಪ್ರಧಾನ. ಇದರ ನಾಲ್ಕೂ ಬದಿ 24 ಡಿಸೈನ್ಸ್ ಬರುವಂತೆ ರಚಿಸಿ, ಹೊರಗೆ ಒಂದು ದೊಡ್ಡ ವೃತ್ತಾಕಾರದಿಂದ ಫಿನಿಶಿಂಗ್‌ ಟಚ್‌ ನೀಡುತ್ತಾರೆ. ಎಷ್ಟೋ ಸಲ ತಾರೆಯ ದಳಗಳನ್ನೇ ಈ ತ್ರಿಕೋನಕ್ಕೆ ತಗುಲುವಂತೆ ಮಾಡಿ ವಿನ್ಯಾಸ ಹಿಗ್ಗಿಸುತ್ತಾರೆ. ಬಿಹಾರ್‌ ರಾಜ್ಯದಲ್ಲಿ ಪ್ರತಿ ರಂಗೋಲಿಗೂ 1-1 ಪೀಠ ಇರುವುದೊಂದು ವಿಶೇಷ. ಇದರ ಮೇಲ್ಭಾಗ ಮನೆಯ ಹೊಸ್ತಿಲ ಕಡೆ ತಿರುಗಿರಬೇಕು.

ವಿವಿಧೆಡೆಯ ರಂಗೋಲಿಗಳು

ನಮ್ಮ ಭಾರತ ದೇಶವಂತೂ ವೈವಿಧ್ಯಗಳ ತವರು. ವಿಭಿನ್ನತೆಯಲ್ಲಿ ಏಕತೆಯೇ ನಮ್ಮ ದೇಶದ ವೈಶಿಷ್ಟ್ಯ. ಹೀಗಾಗಿ ಪ್ರತಿ ರಾಜ್ಯದಲ್ಲೂ ರಂಗೋಲಿ ಬಿಡಿಸುವ ವಿಧಾನ ವಿಭಿನ್ನವಾಗಿಯೇ ಇರುತ್ತದೆ. ನೆರೆಯ ಆಂಧ್ರ ಪ್ರದೇಶದಲ್ಲಿ ಅಷ್ಟದಳ ಕಮಲದ ರೂಪದಲ್ಲಿ ರಂಗೋಲಿ ಜನಪ್ರಿಯ. ಇದರಲ್ಲಿ ಸಾವಿರದೆಂಟು ವಿನ್ಯಾಸಗಳು ಲಭ್ಯ. ನಮ್ಮಲ್ಲಿರುವಂತೆ ತಮಿಳುನಾಡಿನಲ್ಲೂ ಚುಕ್ಕೆ ರಂಗೋಲಿಗಳದೇ ಮೇಲುಗೈ. ಜೊತೆಗೆ ಹೃದಯದ ಆಕಾರದ ಕಮಲದ ವಿನ್ಯಾಸ ಬಲು ಫೇಮಸ್‌ ಇಲ್ಲಿ 8 ತಾರೆಗಳ ಚಿತ್ತಾರದ್ದೇ ವೈಶಿಷ್ಟ್ಯ. ಅದೇ ಮಹಾರಾಷ್ಟ್ರದಲ್ಲಿ ಕಮಲನ್ನು ವಿವಿಧ ಆಕಾರಗಳಲ್ಲಿ ಚಿತ್ರಿಸಿ, ರಂಗೋಲಿ ಬಿಡಿಸಿ ಬಣ್ಣ ತುಂಬಿಸುತ್ತಾರೆ. ಶಂಖ ಕಮಲ, ಶೇಲ ಕಮಲ, ತಬಕ ಕಮಲ….. ಇದರರ್ಥ ಒಂದು ತಟ್ಟೆಯಲ್ಲಿ ಅರಳಿದ ಕಮಲದ ಅಷ್ಟದಳಗಳು ಉತ್ತಮಿಕೆಯ ಪ್ರತೀಕಗಳಾಗಿವೆ.

ಗುಜರಾತ್‌ರಾಜ್ಯದಲ್ಲಂತೂ ರಂಗೋಲಿಯ 1001 ವಿಭಿನ್ನ ವಿನ್ಯಾಸ ಗಮನಿಸಬಹುದು. ಇದರ ಹೊರತಾಗಿ ಸ್ವಸ್ತಿಕ್‌, ಶಂಖಗಳ ಚಿತ್ತಾರ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆ ಬಗ್ಗೆ ಹೇಳುತ್ತದೆ.

ದೇಶಾದ್ಯಂತ ದೀಪಾವಳಿ ಇಡೀ ವರ್ಷದ ಅತಿ ದೊಡ್ಡ ಹಬ್ಬವಾಗಿ ಸಡಗರ, ಸಂಭ್ರಮ, ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಈ ದಿನಗಳಲ್ಲಿ ಬಿಡಿಸುವ ರಂಗೋಲಿ ಖುಷಿಯ ಪ್ರತೀಕ ಎನಿಸಿದೆ. ಉಲ್ಲಾಸ, ಉತ್ಸಾಹ, ಸಂತಸದ ಭಂಡಾರ ಆಗಿರುವ ಈ ಸೊಬಗಿನ ರಂಗೋಲಿಗಳು ಮನೆಗೆ ಬಂದ ಅತಿಥಿಗಳಿಗೆ ಅಪೂರ್ವ ಶುಭಾಶಯ ಕೋರುತ್ತವೆ. ಎಷ್ಟೋ ರಂಗೋಲಿಗಳು ಜ್ಯಾಮಿತೀಯ ಆಕಾರ ಹೊಂದಿವೆ. ತ್ರಿಕೋನ, ಚೌಕ, ವರ್ಗ, ವೃತ್ತ, ಷಟ್ಕೋನ ನಕ್ಷತ್ರ….. ಇತ್ಯಾದಿ. ಇವಕ್ಕೆ ಬೇರೆ ಬೇರೆ ಆಕಾರಗಳ ಸಂಯೋಜನೆ ದೊರೆತು ಬಲು ಸೊಗಸಾದ ರೂಪ ಪಡೆಯುತ್ತವೆ.

ರಂಗೋಲಿ ಸಾಮಗ್ರಿ

ರಂಗೋಲಿ ಬಿಡಿಸಲು ಅನೇಕ ಬಗೆಯ ಸಾಮಗ್ರಿ ಬಳಸಲಾಗುತ್ತದೆ. ರಂಗೋಲಿ ಪುಡಿ ಮೂಲವಾದರೆ ಅಕ್ಕಿ ಹಿಟ್ಟು, ಮರದ ಹೊಟ್ಟು. ಹೂವು, ಎಲೆ, ಬಣ್ಣದ ಅಕ್ಕಿ, ಬೇಳೆ ಇತ್ಯಾದಿ. ಇಡೀ ಭಾರತದಲ್ಲಿ ಅಚ್ಚ ಬಿಳುಪಿನ ರಂಗೋಲಿ  ಶ್ರೇಷ್ಠ ಎಂಬ ಮಾನ್ಯತೆ ಹೊಂದಿದೆ. ಶ್ವೇತ ವರ್ಣ ಶಾಂತಿಯ ಸಂಕೇತ. ದ. ಭಾರತದಲ್ಲಂತೂ ಅಕ್ಕಿ ಹಿಟ್ಟು ಅಥವಾ ಅದರ ರುಬ್ಬಿದ ಮಿಶ್ರಣದಿಂದ ಅತಿ ದಟ್ಟವಾದ ರಂಗೋಲಿಯ ಆಕಾರ ಪಡೆದು ಕಣ್ಮನ ತಣಿಸುತ್ತವೆ. ಭಾರತದಲ್ಲಿ `ಅಕ್ಕಿ’ ಉನ್ನತಿ, ಸಮೃದ್ಧಿಯ ಸಂಕೇತ ಹೌದು.

ಇದರ ನಂತರದ ಬಣ್ಣ ಹಳದಿಯದು. ರಂಗೋಲಿಯ ಹೊರಭಾಗಕ್ಕೆ ಹಳದಿಯ (ಅರಿಶಿನದಿಂದ) ಟಚ್‌ ನೀಡಾಗುತ್ತದೆ, ಇದು ಮಂಗಳಕರ ಸೌಭಾಗ್ಯದ ಶುಭ ಸಂಕೇತ. ಕೇಸರಿ, ಹಸಿರು ಬಣ್ಣಗಳು ಉತ್ತಮ ಬಣ್ಣಗಳ ಸ್ಥಾನದಲ್ಲಿ ಬರುತ್ತವೆ.

ಆಧುನಿಕ ಬೆಡಗು

ಇತ್ತೀಚಿನ ಮಾರುಕಟ್ಟೆಯಲ್ಲಿ ರಂಗೋಲಿಯ ಆಧುನಿಕ ಸ್ಟಿಕರ್‌ರೂಪ ಪ್ರಧಾನವಾಗಿದೆ. ಇದು ವರದಾನವೇ ಸರಿ. ವಿವಿಧ ಆಕಾರ, ಗಾತ್ರಗಳಲ್ಲಿ ಲಭ್ಯವಿರುವ ಇದನ್ನು ಎಲ್ಲಿ ಬೇಕಾದರೂ ಅಂಟಿಸಬಹುದಾಗಿದೆ. ಮತ್ತೊಂದು ಸರಳ ವಿಧಾನವೆಂದರೆ, ಬೇಕಾದ ರಂಗೋಲಿ ಬಿಡಿಸಿ, ಅದಕ್ಕೆ ಕೆಂಪು, ಹಸಿರು, ಬಿಳಿ, ನೀಲಿ, ಹಳದಿ….. ಹೀಗೆ ಬಣ್ಣಗೊಂಡ ಅಕ್ಕಿಯಿಂದ ಅಲಂಕರಿಸುವುದು. ಇದು ಹಬ್ಬದ ಕಳೆಯನ್ನು ದ್ವಿಗುಣಿಸುತ್ತದೆ. ಈ ಸಲದ ನಿಮ್ಮ ದೀಪಾವಳಿಯ ರಂಗೋಲಿ ಹೇಗಿತ್ತು ಎಂದು ಸೆಲ್ಛಿ ತೆಗೆದು ಗೃಹಶೋಭಾ ಜೊತೆ ಹಂಚಿಕೊಳ್ಳುವಿರಾ? ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು!

ಡಾ. ಅನೀತಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ