ಭಾರತ ಕ್ರಿಕೆಟ್ ತಂಡವೀಗ ಚಾಂಪಿಯನ್ನರ ಚಾಂಪಿಯನ್ ಆಗಿದೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಿಕ್ಕಿರಿದು ತುಂಬಿದ್ದ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಿಟ್ ಮ್ಯಾನ್ ಆಟದ ಮುಂದೆ ಮಂಕಾದ ಕಿವೀಸ್ ತಂಡ ಬ್ಲೂ ಬಾಯ್ಸ್ಗೆ ಸಂಪೂರ್ಣವಾಗಿ ಶರಣಾಗಿಬಿಟ್ಟಿದೆ. ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಮೂರನೇ ಬಾರಿಗೆ ಗೆದ್ದ ಭಾರತ ದಾಖಲೆ ಬರೆದಿದೆ.. ಟೂರ್ನಿಯುದ್ದಕ್ಕೂ ಅಜೇಯವಾಗಿ ಓಟ ಮುಂದುವರಿಸಿದ್ದ ಭಾರತ ಸಮಯೋಚಿತವಾಗಿ ಎಚ್ಚರಿಕೆಯಿಂದ ಕಿವೀಸ್ ತಂಡವನ್ನ ಕಟ್ಟಿ ಹಾಕಿ ಸೋಲಿಸುವ ಮೂಲಕ ತವರಿಗೆ ಗಂಟುಮೂಟೆ ಕಟ್ಟಿ ಕಳುಹಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಮೊದಲ ಹತ್ತು ಓವರ್ ಗಳಲ್ಲಿ 69 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ರಾಚಿನ್ ರವೀಂದ್ರ (37) ವಿಕೆಟ್ ಕಳೆದುಕೊಂಡ ಬಳಿಕ, ಕೇನ್ ವಿಲಿಯಮ್ಸನ್ ಇದ್ದಾಗ ಗೆಲ್ಲುವ ನಂಬಿಕೆ ಜೊತೆಗಿತ್ತು. ಆದರೆ, ತಂಡದ ಮೊತ್ತ 75 ರನ್ ಇದ್ದಾಗ ಕೇನ್ ವಿಲಿಯಮ್ಸನ್ (11) ಔಟಾದಾಗ ಭಾರತಕ್ಕೆ ನಂಬಿಕೆ ಬಂತು. ಇದಾದ ಬಳಿಕ ಡ್ಯಾರಿಲ್ ಮಿಚೆಲ್, ಟಾಮ್ ಲಾಥಮ್ ಜೊತೆಯಾದ್ರೂ, 108 ರನ್ ಗೆ ರಿವರ್ಸ್ ಸ್ವೀಪ್ ಮಾಡಲು ಹೋಗಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಜೊತೆಯಾದ ಮಿಚೆಲ್ ಮತ್ತು ಗ್ಲೆನ್ ಫಿಲಿಫ್ಸ್ ಅರ್ಧ ಶತಕದ ಜೊತೆಯಾಟವಾಡಿದ್ರು. ಆದ್ರೆ, ಭಾರತದ ಸ್ಪಿನ್ ದಾಳಿ ಎದುರು ತಡಕಾಡಿದ್ರು. ಕೊನೆಗೆ ಗ್ಲೆನ್ ಫಿಲಿಪ್ಸ್ ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಗೂಗ್ಲಿಗೆ ಉತ್ತರಿಸಲಾಗದೇ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ಕ್ರೀಸ್ ಗೆ ಬಂದ ಮೈಕ್ ಬ್ರಾಸ್ ವೆಲ್ ರನೌಟ್ ಅವಕಾಶ ತಪ್ಪಿಸಿಕೊಂಡು ಭಾರತಕ್ಕೆ ಕಂಟಕವಾದ್ರು.
ಮೈಕಲ್ ಬ್ರಾಸ್ ವೆಲ್ ಜೊತೆಗೆ ಒಂದಾದ ಡ್ಯಾರಿಲ್ ಮಿಚೆಲ್ ತಂಡದ ಮೊತ್ತವನ್ನ ಹೆಚ್ಚಿಸಲು ಸಿದ್ಧವಾಗಿದ್ರು. ಆದ್ರೆ, ನಾಯಕ ರೋಹಿತ್ ಶರ್ಮಾ ಮಾಡಿದ ಬೌಲಿಂಗ್ ಚೇಂಜ್ ನಲ್ಲಿ ಡ್ಯಾಲಿಲ್ ಮಿಚೆಲ್ (63) ವಿಕೆಟ್ ಒಪ್ಪಿಸಿದ್ರು. ಬಳಿಕ ಗೇರ್ ಬದಲಿಸಿದ ಬ್ರಾಸ್ ವೆಲ್ ಔಟಾಗದೇ (53) ತಂಡದ ಮೊತ್ತವನ್ನ 251 ರನ್ ತಲುಪಿಸೋ ನಿಟ್ಟಿನಲ್ಲಿ ಅರ್ಧ ಶತಕ ಗಳಿಸಿದ್ರು..
ನ್ಯೂಜಿಲೆಂಡ್ 300 ರನ್ ಮುಟ್ಟದಂತೆ ಕಡಿವಾಣ ಹಾಕಿದ ಭಾರತದ ಸ್ಪಿನ್ನರ್ಸ್ ವರುಣ್ ಚಕ್ರವರ್ತಿ 2 ವಿಕೆಟ್, ಕುಲ್ದೀಪ್ ಯಾದವ್ 2 ವಿಕೆಟ್, ರವೀಂದ್ರ ಜಡೇಜಾ 1 ವಿಕೆಟ್ ಪಡೆದ್ರೆ, ಅಕ್ಷರ್ ಪಟೇಲ್ ರನ್ ಕಂಟ್ರೋಲ್ ಮಾಡಿದ್ರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ಹಿಂತಿರುಗಿಯೂ ನೋಡಲಿಲ್ಲ. ನಾಯಕ ರೋಹಿತ್ ಶರ್ಮಾ ತಾನೇಕೆ ಹಿಟ್ ಮ್ಯಾನ್ ಅನ್ನೋದನ್ನ ತೋರಿಸಿದ್ರು. ರೋಹಿತ್ ಬಗ್ಗೆ ಅನುಮಾನ ಇದ್ದೋರಿಗೆಲ್ಲಾ.. ತಾನೇಕೆ ಆಕ್ರಮಣಕಾರಿ ಆಟ ಆಡ್ತೀನಿ ಅಂತ ಸಾಬೀತುಪಡಿಸಿದರು. ಟೂರ್ನಿಯಲ್ಲಿ ಒಂದೂ ಅರ್ಧ ಶತಕ ಬಾರಿಸದ ರೋಹಿತ್ ಶರ್ಮಾ ಫೈನಲ್ ವಾರ್ನಲ್ಲಿ 76 ರನ್ ಗಳಿಸುವ ಮೂಲಕ ಮಿಂಚಿನ ಆಟವಾಡಿದ್ರು. ನಾಯಕನಿಗೆ ಉತ್ತಮ ಬೆಂಬಲ ನೀಡಿದ ಶುಭಮನ್ ಗಿಲ್ 31 ರನ್ ಗಳಿಸಿ, ಭಾರತ ಚೇಸಿಂಗ್ ನಲ್ಲಿ ನರ್ವಸ್ ಆಗಲ್ಲ ಅಂತಾ ತೋರಿಸಿದ್ರು. ಇಬ್ಬರೂ ಆರಂಭಿಕರು ಶತಕದ ಜೊತೆಯಾಟ ಆಡಿ ಭಾರತದ ಗೆಲುವನ್ನ ಖಚಿತಪಡಿಸಿದ್ರು.
ಈ ವೇಳೆ ಮಿಚೆಲ್ ಸ್ಯಾಂಟ್ನರ್ ಗಿಲ್ ವಿಕೆಟ್ ತೆಗೆದ್ರು. ಬಳಿಕ ಬಂದ ಚೇಸ್ ಮಾಸ್ಟರ್ ಕಿಂಗ್ ಕೊಹ್ಲಿ ಒಂದು ರನ್ ಗಳಿಸಿ ಬ್ರಾಸ್ ವೆಲ್ ಗೆ ವಿಕೆಟ್ ಒಪ್ಪಿಸಿದ್ರು. ಆಗ ಬಹುತೇಕ ಜನ ಭಾರತ ಗೆಲ್ಲಲ್ಲ ಅಂದುಕೊಂಡಿದ್ರು. ಇದರ ಜೊತೆಗೆ ತಂಡದ ಮೊತ್ತ 122 ರನ್ ಇದ್ದಾಗ ರೋಹಿತ್ ವಿಕೆಟ್ ಒಪ್ಪಿಸಿದ ಬಳಿಕ ಭಾರತ ಗೆಲ್ಲಲ್ಲ ಅಂದುಕೊಂಡಿದ್ರು. ಆಗ ಜೊತೆಯಾದ ಶ್ರೇಯಸ್ ಅಯ್ಯರ್ (48), ಅಕ್ಷರ್ ಪಟೇಲ್ (29) ಭಾರತ ಗೆಲ್ಲಲು ನೆರವಾದ್ರು.
ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಚೆನ್ನಾಗಿ ಆಡಿ ವಿಕೆಟ್ ಕೈ ಚೆಲ್ಲಿದರೂ, ಕೆ.ಎಲ್.ರಾಹುಲ್ (ಔಟಾಗದೇ 34), ಹಾರ್ದಿಕ್ ಪಾಂಡ್ಯ (18), ಭಾರತದ ಗೆಲುವನ್ನು ಖಚಿತಪಡಿಸಿದ್ರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿದ್ರೂ.. ರಾಹುಲ್ ಮತ್ತು ರವೀಂದ್ರ ಜಡೇಜಾ (ಔಟಾಗದೇ 9) ಭಾರತೀಯರಿಗೆ ಹಾರ್ಟ್ ಬ್ರೇಕ್ ಮಾಡಲಿಲ್ಲ. ಒಟ್ಟಾರೆಯಾಗಿ ಭಾನುವಾರದ ಬ್ಯಾಡ್ ಲಕ್ ಅನ್ನೋ ಟೀಂ ಇಂಡಿಯಾ ಫ್ಯಾನ್ಸ್ ನಂಬಿಕೆ ಸುಳ್ಳಾಗಿಸಿದೆ.