ಹಬ್ಬಗಳ ಸಂದರ್ಭದಲ್ಲಿ ನಮ್ಮ ನೆಂಟರಿಷ್ಟರು, ಫ್ರೆಂಡ್ಸ್ ಗೆಲ್ಲ ಗಿಫ್ಟ್ ನೀಡುವುದು ಹಿಂದಿನಿಂದಲೂ ಬಂದ ಪದ್ಧತಿ. ಚಾಕಲೇಟ್, ಸ್ವೀಟ್ ಬಾಕ್ಸ್, ಗ್ಯಾಜೆಟ್ಸ್, ಹೋಂ ಅಪ್ಲೈಯೆನ್ಸೆಸ್..... ಈ ರೀತಿ ಏನಾದರೊಂದನ್ನು ಗಿಫ್ಟ್ ನೀಡುವ ವಾಡಿಕೆ ಇದೆ. ಆದರೆ ಈಗ ಕಾಲ ಬದಲಾಗಿದೆ. ಇದಕ್ಕೆ ತಕ್ಕಂತೆ ನಮ್ಮ ಆಚಾರವಿಚಾರಗಳೂ ಅಷ್ಟಿಷ್ಟು ಬದಲಾವಣೆ ಕಾಣುತ್ತಲೇ ಇರುತ್ತವೆ. ಉಡುಗೊರೆ ಪಡೆದವರು ಅದರಿಂದ ಸುಪ್ರೀತರಾಗಿ ಮುಖದಲ್ಲಿ ಮಂದಹಾಸ ತಂದುಕೊಂಡಾಗ, ಗಿಫ್ಟ್ ಕೊಟ್ಟವರಿಗೂ ಸಾರ್ಥಕ ಎನಿಸುತ್ತದೆ. ಆ ಉಡುಗೊರೆ ಅವರಿಗೆ ಉಪಯೋಗಕ್ಕೆ ಬಂದರೆ ಅದಿನ್ನೂ ಬೆಸ್ಟ್! ಹೀಗಾಗಿ ಎಲ್ಲೆಲ್ಲೂ ಪರಿಸರ ಮಾಲಿನ್ಯ ತಾಂಡವ ಆಡುತ್ತಿರುವ ಈ ಆಧುನಿಕ ಕಾಲದಲ್ಲಿ, ಪರಿಸರಸ್ನೇಹಿ ಸಣ್ಣಪುಟ್ಟ ಗಿಡಗಳನ್ನೇ ಉಡುಗೊರೆಯಾಗಿ ಕೊಟ್ಟರೆ ಎಂಥ ಚಂದ ಅಲ್ಲವೇ? ಇದರಿಂದ ಗ್ರೀನ್ ಫೆಸ್ಟಿವ್ ಸೆಲೆಬ್ರೇಟ್ ಮಾಡಿದಂತೆಯೂ ಆಗುತ್ತದೆ.
ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಪರಿಸರ ಮಾಲಿನ್ಯ ತುಂಬಿ ತುಳುಕಾಡುತ್ತಿದೆ. ಹೀಗಾಗಿ ಸಸ್ಯ ಸಂಕುಲವನ್ನು ಉಡುಗೊರೆಯಾಗಿ ನೀಡುವುದು ಖಂಡಿತಾ ಒಪ್ಪುತ್ತದೆ. `ಸ್ಟೇಟ್ ಆಫ್ ಇಂಡಿಯಾಸ್ ಎನ್ ವಾರ್ಯನ್ ಮೆಂಟ್' ಅಂದ್ರೆ 2019ರ ಜೂನ್ ನಲ್ಲಿ ಜಾರಿಗೊಳಿಸಿದ ಡೇಟಾ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 12.5%ಗೂ ಅಧಿಕ ಜನರು ಕಲುಷಿತ ಗಾಳಿಯ ಸೇವನೆಯಿಂದ ಸಾಯುತ್ತಾರೆ. ಇದು ವಾಯು ಮಾಲಿನ್ಯದ ಪ್ರಕೋಪ ತೋರಿಸುತ್ತದೆ. ಕಳೆದ 5 ವರ್ಷಗಳಿಂದ ಕಡಿಮೆ ವಯಸ್ಸಿನ ಮಕ್ಕಳು ಸರಾಸರಿ 8.5% ಿಕ್ಕದಲ್ಲಿ ವಾಯು ಮಾಲಿನ್ಯದಿಂದಾಗಿ ಸಾವನ್ನಪ್ಪುತ್ತಿದ್ದಾರೆ.
ಪ್ರತಿ ವರ್ಷ ದೀಪಾವಳಿ ಹಬ್ಬದ ಆಚರಣೆ ನಂತರ, ಎಷ್ಟು ವೇಗವಾಗಿ ವಾಯು ಮಾಲಿನ್ಯ ಪಟಾಕಿಗಳ ಕೆಮಿಕಲ್ಸ್ ನಿಂದ ಇನ್ನಷ್ಟು ಮತ್ತಷ್ಟು ಕೆಡುತ್ತಿದೆ ಎಂಬುದು ತಿಳಿದ ಸಂಗತಿ. ವಾರಗಟ್ಟಲೆ ಕಪ್ಪು ಹೊಗೆ ಪ್ರತಿ ಮಹಾನಗರದಲ್ಲೂ ದಟ್ಟವಾಗಿ ಸುತ್ತಾಡುತ್ತಾ ಇರುತ್ತದೆ. ಹೀಗಾಗಿ ನಮ್ಮ ಕೈಲಾದ ಪ್ರಯತ್ನ ನಾವು ಮಾಡುತ್ತಾ, ಈ ವಾಯು ಮಾಲಿನ್ಯ ತಡೆಗಟ್ಟಲು ಹೋರಾಡಬೇಕಿದೆ. ಮುಖ್ಯವಾಗಿ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಮ್ಮೆಲ್ಲ ನೆಂಟರಿಷ್ಟರು, ಬಂಧುಬಳಗ, ಫ್ರೆಂಡ್ಸ್ ಗೆಲ್ಲ ಇಂಥ ಸಣ್ಣಪುಟ್ಟ ಬಗೆಬಗೆಯ ಗಿಡಗಳನ್ನು ಉಡುಗೊರೆಯಾಗಿ ಕೊಡಬಹುದು. ಈ ಸಣ್ಣ ಗಿಡಗಳು ಖಂಡಿತಾ ನಮ್ಮ ಜೇಬಿಗೆ ಹೆಚ್ಚಿನ ಹೊರೆ ಆಗುವುದಿಲ್ಲ. ಇವು ನಮ್ಮ ಪರಿಸರದ ಸಮತೋಲನ ಕಾಯ್ದುಕೊಳ್ಳುವುದರಲ್ಲೂ ಬಲು ಸಹಕಾರಿ.

ಇವನ್ನು ಗಿಫ್ಟ್ ಆಗಿ ಕೊಡಿ
ಗಿಫ್ಟ್ ನೀಡಲು ಸ್ನೇಕ್ ಪ್ಲಾಂಟ್ ಒಂದು ಉತ್ತಮ ವಿಕಲ್ಪವಾಗಿದೆ. ಈ ಗಿಡವನ್ನು ಏರ್ ಪ್ಯೂರಿಫೈರ್ ಎಂದೇ ಗುರುತಿಸಲಾಗುತ್ತದೆ. ಇದು ಕೇವಲ ನೋಡಲು ಸುಂದರವಷ್ಟೇ ಅಲ್ಲ, ಪರಿಸರದ ದೃಷ್ಟಿಯಿಂದ ಬಹಳ ಲಾಭಕಾರಿ. ಇದನ್ನು ನಮ್ಮ ಬೆಡ್ ರೂಮಿನಲ್ಲಿರಿಸುವುದೇ ಬೆಟರ್. ಏಕೆಂದರೆ, ಸೂರ್ಯಾಸ್ತದ ನಂತರ ಈ ಗಿಡ ಆಮ್ಲಜನಕ ನೀಡಲು ಆರಂಭಿಸುತ್ತದೆ, ಅದೇ ಇದರ ವೈಶಿಷ್ಟ್ಯ! ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ, ದಿನ ಬಿಟ್ಟು ದಿನ ರೆಗ್ಯುಲರ್ ಆಗಿ ಇದಕ್ಕೆ ನೀರು ಹನಿಸುತ್ತಿರಬೇಕು ಎಂಬ ಜಂಜಾಟವಿಲ್ಲ. ಇದರ ಕುಂಡದ ಮಣ್ಣು ಪೂರ್ತಿ ಒಣಗಿದಂತಾದಾಗ, ನೀರು ಹನಿಸಿದರೆ ಸಾಕು.





