ಚಿತ್ರ: ಇಂಟರ್ವಲ್.
ನಿರ್ಮಾಣ: ಭರತ್ವರ್ಷ್ ಪಿಕ್ಚರ್ಸ್.
ನಿರ್ದೇಶನ: ಭರತ್ವರ್ಷ್.
ತಾರಾಂಗಣ: ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರಾ ರಾವ್, ಸಹನಾ, ಆರಾಧ್ಯಾ, ರಂಗನಾಥ್ ಶಿವಮೊಗ್ಗ, ಧನಂ ಶಿವಮೊಗ್ಗ ಮುಂತಾದವರು.
ರೇಟಿಂಗ್: 3/5

ರಾಘವೇಂದ್ರ ಅಡಿಗ ಎಚ್ಚೆನ್.

ಹದಿಹರೆಯದ ಹುಡುಗರ ತರಲೆ, ತಮಾಷೆ ಒಂದೆರಡಲ್ಲ. ಆದರೆ ಎಲ್ಲದಕ್ಕೂ ಒಂದು ಇತಿ-ಮಿತಿ ಬೇಕಾಗುತ್ತದೆ. ಜವಾಬ್ದಾರಿ ಬೆಳೆಸಿಕೊಳ್ಳಬೇಕಾದ ವಯಸ್ಸಿನಲ್ಲೂ ಅಷ್ಟೇ ತರಲೆ-ತಮಾಷೆ ಮುಂದುವರಿದರೆ ಜೀವನ ಕಷ್ಟ ಆಗುತ್ತದೆ. ಅಂಥ ಹುಡುಗರ ಕಹಾನಿಯನ್ನು ಇಟ್ಟುಕೊಂಡು ‘ಇಂಟರ್ವಲ್’ ಸಿನಿಮಾ ಮಾಡಲಾಗಿದೆ. ಹೊಸ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರನ್ನು ನಗಿಸಬೇಕು ಎಂಬುದೇ ಈ ಸಿನಿಮಾದ ಮುಖ್ಯ ಉದ್ದೇಶ. ಹಾಗಾದ್ರೆ ಆ ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆ ತಿಳಿಯಲು ಈ ವಿಮರ್ಶೆ ಓದಿ..

‘ಇಂಟರ್ವಲ್’ ಸಿನಿಮಾದ ಕಥೆ ಹೀಗಿದೆ.. ಒಂದು ಹಳ್ಳಿಯಲ್ಲಿ ಮೂವರು ಬಾಲ್ಯ ಸ್ನೇಹಿತರು ಇರುತ್ತಾರೆ. ಕಾಕತಾಳೀಯ ಎಂದರೆ ಆ ಮೂವರ ಹೆಸರು ಗಣೇಶ್! ಆದರೆ ಇನಿಷಿಯಲ್ ಮಾತ್ರ ಬೇರೆ. ಶಾಲೆಯಿಂದ ಕಾಲೇಜ್ ಓದುವ ತನಕ, ಕಾಲೇಜಿನಿಂದ ಕೆಲಸ ಹುಡುಕುವ ತನಕ ಈ ಮೂವರೂ ಒಟ್ಟೊಟ್ಟಿಗೆ ಇರುತ್ತಾರೆ. ಜೀವನದಲ್ಲಿ ಅಷ್ಟೇನೂ ಸೀರಿಯಸ್ನೆಸ್ ಇಲ್ಲದ ಈ ಹುಡುಗರು ಹತ್ತಾರು ಕೀಟಲೆ ಮಾಡುತ್ತಾರೆ. ಆ ಕೀಟಲೆಗಳ ಮೂಲಕ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ನೀಡಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಭರತ್ವರ್ಷ್.

ಕಥೆಯ ಆರಂಭದಲ್ಲಿ ಈ ಮೂವರ ಹುಡುಗಾಟ ಇದೆ. ನಂತರ ಕೆಲಸಕ್ಕಾಗಿ ಹುಡುಕಾಟ ಇದೆ. ಇಡೀ ಸಿನಿಮಾವನ್ನು ಈ ಹುಡುಗಾಟ ಮತ್ತು ಹುಡುಕಾಟವೇ ಆವರಿಸಿಕೊಂಡಿದೆ. ಕಾಲೇಜ್ ಕ್ಯಾಂಪಸ್ನಲ್ಲಿ, ಊರಿನ ಎಲೆಕ್ಷನ್ನಲ್ಲಿ, ಅಂಗಡಿ ಕಟ್ಟೆಯಲ್ಲಿ ಹೀಗೆ ಎಲ್ಲಿಯೇ ಹೋದರೂ ಮೂವರು ಗಣೇಶರ ಹಾವಳಿ ಇದ್ದೇ ಇರುತ್ತದೆ. ಅದು ಅತಿರೇಕಕ್ಕೆ ಹೋದ ಮೇಲೆ ಊರು ಬಿಡುವ ಪರಿಸ್ಥಿತಿ ಬರುತ್ತದೆ. ಆಮೇಲಾದರೂ ಈ ಹುಡುಗರ ಬದುಕಿನಲ್ಲಿ ಒಳ್ಳೆಯ ದಿನಗಳು ಬರುತ್ತೋ ಇಲ್ಲವೋ ಎಂಬುದನ್ನು ಪೂರ್ತಿ ಸಿನಿಮಾ ನೋಡಿ ತಿಳಿಯಬೇಕು.

ಏನೂ ಇಲ್ಲದಿದ್ದರೂ ಹಳ್ಳಿಯಲ್ಲಿ ಸಿಗಬಹುದು ನೆಮ್ಮದಿ. ನಗರದಲ್ಲಿ ಎಲ್ಲವೂ ಇದ್ದರೂ ಏನೂ ಇಲ್ಲ ಎಂಬಂತಹ ಪರಿಸ್ಥಿತಿ. ಈ ಥೀಮ್ನಲ್ಲಿ ‘ಇಂಟರ್ವಲ್’ ಸಿನಿಮಾದ ಕಥೆಯನ್ನು ಕಟ್ಟಿಕೊಡಲಾಗಿದೆ. ಹುಟ್ಟೂರಿನಲ್ಲಿ ಇರುವ ಖುಷಿಗೆ ಬೆಲೆ ಕೊಡದೇ ಪರ ಊರಿನಲ್ಲಿ ಖುಷಿ ಹುಡುಕುವವರಿಗೆ ಈ ಸಿನಿಮಾದಲ್ಲಿ ಮೆಸೇಜ್ ಕೂಡ ಇದೆ. ತಂದೆ-ತಾಯಿ ಪ್ರೀತಿಯನ್ನು ಕಡೆಗಣಿಸಬಾರದು ಎಂಬ ಪಾಠವನ್ನೂ ಮಾಡಲಾಗಿದೆ. ಕೈತಪ್ಪಿದ ಒಂದು ಲವ್ ಸ್ಟೋರಿಯೂ ಈ ಸಿನಿಮಾದಲ್ಲಿದೆ.

ಸುಕಿ ಅವರು ಒಂದು ಪಾತ್ರ ಮಾಡುವುದರ ಜೊತೆಗೆ ಕಥೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇಡೀ ಕಥೆಯಲ್ಲಿ ತುಂಬ ಹೊಸದಾಗಿ ಏನನ್ನೋ ನಿರೀಕ್ಷಿಸಿದರೆ ಸಿಗದೇ ಇರಬಹುದು. ಆದರೆ ಡೈಲಾಗ್ಗಳ ಮೂಲಕ ಹಿಡಿದಿಡಲು ಅವರು ಪ್ರಯತ್ನಿಸಿದ್ದಾರೆ. ಇಂಟರ್ವಲ್ ಎಂಬ ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದ ಕ್ಲೈಮ್ಯಾಕ್ಸ್ ಬಂದರೂ ಬರೀ ಇಂಟರ್ವಲ್ ತನಕ ಕಥೆ ಸಾಗಿದೆ ಎನಿಸುತ್ತದೆ. ಮುಂದೇನಾಯ್ತು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಶುರುವಿನಿಂದ ಕೊನೆತನಕ ಹಲವಾರು ವಿಷಯಗಳನ್ನು ನಿರ್ದೇಶಕರು ಪ್ರೇಕ್ಷಕರ ಮುಂದೆ ಇರಿಸಿದ್ದಾರೆ. ಆದರೆ ಆ ಎಲ್ಲ ವಿಷಯಗಳನ್ನು ಒಂದು ಸರಿಯಾದ ಚೌಕಟ್ಟಿನಲ್ಲಿ ಕೂರಿಸಲು ಸ್ವಲ್ಪ ಎಡವಿದಂತಿದೆ. ದೊಡ್ಡ ಏರಿಳಿತ ಏನೂ ಇಲ್ಲದೇ ಮೂವರು ಗಣೇಶರ ಹುಡುಗಾಟವೇ ಕೊನೆತನಕ ಮುಂದುವರಿದಿದ್ದರಿಂದ ನೋಡುಗರಿಗೆ ಏಕತಾನತೆ ಕಾಡುತ್ತದೆ. ಇದರಿಂದ ಚಿತ್ರದ ಅವಧಿ ಕೂಡ ದೀರ್ಘ ಎನಿಸುತ್ತದೆ. ಇನ್ನು, ಲವ್ ಸ್ಟೋರಿಯಲ್ಲಿ ಕಾಡುವ ಗುಣ ಮಿಸ್ ಆದಂತಿದೆ. ಡೈಲಾಗ್ಗಳನ್ನು ಕೇಳಿ ಎಂಜಾಯ್ ಮಾಡುವವರಿಗೆ ಈ ಸಿನಿಮಾ ಮನರಂಜನೆ ನೀಡುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ