ಪುಷ್ಪ ಪ್ರೀತಿಯಿಂದ ರೇವತಿಯರ ಪರಿಸರ ಪ್ರೇಮ ಆರಂಭ. ಇಂದು ಈಕೆ ಮರಗಿಡಗಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ತಾವು ನೆಟ್ಟ ಸಸಿಗಳು, ಎತ್ತರೆತ್ತರ ತಲೆದೂಗಿ ಬಾಂದಳಕ್ಕೆ ಚಿಮ್ಮಿದಾಗ, ಅವುಗಳ ಬೆಳವಣಿಗೆ ಕಂಡು ಸ್ವಂತ ಮಕ್ಕಳ ಪ್ರಗತಿ ಕಂಡಷ್ಟು ಧನ್ಯತೆ ಆನಂದವನ್ನು ಅನುಭವಿಸುತ್ತಾರೆ. ಹಸಿರ ಸಿರಿ, ಬಣ್ಣದ ಹೂಗಳನ್ನು ಕಂಡರೆ ಇವರಿಗೆ ಪಂಚಪ್ರಾಣ. ಪರಿಸರ ಆರಾಧನಾ ಮನೋವೃತ್ತಿ ಬಾಲ್ಯದಿಂದಲೂ ಇವರಲ್ಲಿ ಮನೆ ಮಾಡಿಕೊಂಡಿದ್ದು, ಅದು ಕ್ರಮೇಣ ಅವರ ಜೀವನಶೈಲಿಯಾಗಿ ಬದಲಾಗಿದೆ. ಪ್ರಕೃತಿ ಪ್ರೇಮ ಅವರಲ್ಲಿ ಆವಾಹನೆಯಾಗಿದ್ದು ಇಂದು ಹಗಲಿರುಳೂ ಇದಕ್ಕಾಗಿ ಶ್ರಮಿಸುತ್ತಿದ್ದಾರೆ.
ಕಣ್ಣಿಗೆ ತಂಪೆರೆವ, ಮನಸ್ಸಿಗೆ ಉಲ್ಲಾಸ ನೀಡುವ, ನಿಸ್ವಾರ್ಥ ಸಂಪದ, ಮುದ ನೀಡುವ ಪ್ರಕೃತಿಯ ರಮ್ಯತೆ ಇವರ ಪ್ರಥಮ ಆಯ್ಕೆ. ಬಣ್ಣ ಬಣ್ಣದ ಹೂಗಳನ್ನು ಆಯ್ದು, ಅವುಗಳನ್ನು ನೀರು ತುಂಬಿದ ಹೂದಾನಿಯಲ್ಲಿ ಅಂದವಾಗಿ, ಆಕರ್ಷಕವಾಗಿ ಜೋಡಿಸಿ, ಅದು ಬಾಡದಂತೆ ಪ್ರತಿದಿನ ನೀರೆರೆದು ಪೋಷಿಸುವ ಕೋಮಲ ಭಾವನೆ ಅವರ ಅರಿವಿಲ್ಲದೆ ರೇವತಿಗೆ ಹಿಂದಿನಿಂದಲೂ ಬೆಳೆದು ಬಂದಿತ್ತು. ಈ ಪ್ರವೃತ್ತಿ ಬೆಳೆದು ಬಂದಂತೆ ಪ್ರೀತಿಯ ಹವ್ಯಾಸವಾಗಿದ್ದದ್ದು ಇಂದು ಹಗಲಿರುಳೂ ಇದೇ ಪಥದಲ್ಲಿ ಸಾಗುತ್ತಾ ಅವರ ಮೈಮನವನ್ನು ವ್ಯಾಪಿಸಿದಂಥ ಕಾರ್ಯಸಾಧನೆಯಾಗಿದೆ.
ಪರಿಸರ ತಜ್ಞೆ
ಹೀಗಾಗಿ ಇಂದು ಖ್ಯಾತ ಪರಿಸರ ತಜ್ಞೆಯೆಂದು ಖ್ಯಾತರಾಗಿ ಇದರ ಸಂಬಂಧಿತ ಅನೇಕ ಕಲ್ಯಾಣ ಪ್ರಗತಿಪರ ಕಾರ್ಯಗಳನ್ನು ಅತ್ಯಂತ ಕಾಳಜಿ, ಆಸಕ್ತಿಯಿಂದ ನಿರ್ವಹಿಸುತ್ತಿರುವ ರೇವತಿ ಮೂಲತಃ ಕಲಾವಿದೆ. ಉತ್ತಮ ವೀಣಾ ವಾದಕಿ ಕೂಡ. ಸಂಗೀತದ ಮನೆತನದ ಹಿನ್ನಲೆಯುಳ್ಳ ಅವರಲ್ಲಿ ಮೈದುಂಬಿರುವ ಕಲಾಗುಣ ಎಲ್ಲವನ್ನೂ ಅಕ್ಕರೆಯಿಂದ ನೋಡುವ ಜೀವನ ಸೌಂದರ್ಯ ದೃಷ್ಟಿಗೆ ಮೂಲಕಾರಣ. ಆಕೆಯ ತಂದೆ ಹಿರಿಯ ವೈಣಿಕರಾದ ಕೃಷ್ಣಮೂರ್ತಿಯವರು. ತಂದೆಯಿಂದ ವೀಣೆಯ ಪಾಠವನ್ನು ಅಭ್ಯಾಸ ಮಾಡಿರುವ ಈಕೆ, ಇಂದು ನಾಡಿನ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ವೀಣಾ ವಾದನ ಕಚೇರಿಗಳನ್ನು ನೀಡಿ ಕಲಾರಸಿಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಅಷ್ಟೇ ಅಲ್ಲದೆ, ನಿರಂತರ ಸಂಗೀತ ರಸಿಕರನ್ನು ರಂಜಿಸುತ್ತಿರುವ ಇವರು ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ ಕೂಡ. ಸಂಗೀತ ಪ್ರೇಮ ಆಕೆಯ ರಕ್ತಗತ ಗುಣವಾದ್ದರಿಂದ ಇಂದು ಅವರ ಮೊಮ್ಮಗ ಮಾಸ್ಟರ್ ಕಿಯಾನ್ ಪುಟ್ಟ ವಯಸ್ಸಿಗೇ ಮೃದಂಗದಲ್ಲಿ ಸಾಧನೆ ಮಾಡುವ ಪಥದಲ್ಲಿ ವೇಗವಾಗಿ ಸಾಗುತ್ತಿರುವ ಬಾಲಪ್ರತಿಭೆ.
ಸಂಗೀತ ಸಾಧನೆ
ಸಂಗೀತ ಸಾಧನೆಯ ಜೊತೆಗೆ ಇಂದು ಅಗಾಧ ಮಟ್ಟದಲ್ಲಿ ಪ್ರಕೃತಿ ಪೋಷಣೆಯ ಕಾರ್ಯಗಳನ್ನು ಎಲೆಮರೆಯ ಕಾಯಿಯಂತೆ, ತಮ್ಮ ಪಾಡಿಗೆ ತಾವು ಪರಿಸರ ರಕ್ಷಣೆ ಸಮೃದ್ಧ ಹಸಿರ ಸಿರಿಯನ್ನು ಬೆಳೆಸುವ ನಿಟ್ಟಿನಲ್ಲಿ ತೊಡಗಿಕೊಂಡಿರುವ `ಪ್ರಕೃತಿ ರಕ್ಷಕಿ’ ರೇವತಿ ಕಾಮತ್ ಎಂದರೆ ಅತಿಶಯೋಕ್ತಿಯಲ್ಲ.
ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವೀಧರೆಯಾಗಿರುವ ಇವರಿಗೆ ತಮ್ಮ ಓದೂ ಕೂಡ ಕಾರ್ಯಾಧ್ಯಯನಕ್ಕೆ ಪೂರಕವಾಗಿದೆ. ಇವೆಲ್ಲದರ ಫಲಶೃತಿ, ರೇವತಿ ಇಂದು ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಲು ಪ್ರೇರಕ. ಪ್ರಾರಂಭದಲ್ಲಿ ಹೂ ಜೋಡಣೆಯ ಸ್ವಂತ ವೃತ್ತಿ ಕೈಗೊಂಡು, ಸುಮಾರು ಎಂಟು ವರ್ಷಗಳ ಕಾಲ ಯಶಸ್ವೀ `ಇವೆಂಟ್ ಮ್ಯಾನೇಜ್ ಮೆಂಟ್’ ಕಾರ್ಯ ನಿರ್ವಾಹಕಿಯಾಗಿ ಅಸಂಖ್ಯಾತ ಕೆಲಸಗಳನ್ನು ಪೂರೈಸಿ ಆತ್ಮವಿಶ್ವಾಸ ಸ್ಥೈರ್ಯ ಗಳಿಸಿದರು. ಅವರದೇ ಆದ `ಕ್ಯಾಬಿಕ್ಸ್’ ಹೂ ಜೋಡಣಾ ಕೇಂದ್ರ ಸ್ಥಾಪಿಸಿ ಬಹು ಬೇಗ ಗ್ರಾಹಕರ ಲಯವನ್ನು ಬೆಳೆದು ಉತ್ತಮ ಸೇವೆ ನೀಡಿ, ಹೆಸರು ಗಳಿಸಿದರು.
ತರಬೇತಿ ಸಮಾಜ ಸೇವೆ
ಈ ದಿಸೆಯಲ್ಲಿ ಇವರು ನೀಡಿದ ಕುಶಲ ತರಬೇತಿಯಿಂದ ಅನೇಕ ಜನ ಯುವಜನತೆ ಇಂದು ತಮ್ಮದೇ ಆದ ಸ್ವಂತ ಹೂ ಜೋಡಣೆ ಅಲಂಕರಣದ ಮಾರುಕಟ್ಟೆಗಳನ್ನು ನಿರ್ಮಿಸಿಕೊಂಡು ಈ ಕ್ಷೇತ್ರದಲ್ಲಿ ಯಶಸ್ವೀ `ಎಂಟರ್ ಪ್ರಿನ್ಯುರ್’ ಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಲೀಲಾ ಪ್ಯಾಲೇಸ್, ವೆಸ್ಟೆಂಡ್ ಮುಂತಾದ ಪ್ರಸಿದ್ಧ ಹೋಟೆಲ್ ಗಳಲ್ಲಿ ಮತ್ತು ವಿಪ್ರೋ ಮುಂತಾದ ಅನೇಕಾನೇಕ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಬಹು ಸುಂದರವಾಗಿ, ಯಶಸ್ವಿಯಾಗಿ ನಿರ್ವಹಿಸಿದ ಇವರ ಸಮರ್ಥ ಕಾರ್ಯಗಳು ಶ್ಲಾಘನೆ ಪಡೆದವು. ಇವುಗಳಿಂದ ಸಾಕಷ್ಟು ಅನುಭವ ಪಡೆದ ರೇವತಿ ಅವರ ಚಿಂತನಾ ಲಹರಿ ಮುಂದೆ ಬದಲಾಗುತ್ತಾ ಹೋಯಿತು.
ವಿವಿಧ ಸಾಧನೆ
ಪ್ರಾರಂಭದಲ್ಲಿ ಸಣ್ಣದಾಗಿದ್ದ `ಕ್ಯಾಲಿಕ್ಸ್’ ಪುಷ್ಪಾಲಂಕಾರದ ಕಾರ್ಯ ಯೋಜನೆಯ ಸ್ವರೂಪ ರೂಪಾಂತರಗೊಂಡು, ಇದರ ರೂವಾರಿಯಾದ ಇವರು ಇಂದು ಭಾರತದಲ್ಲಿಯೇ ಖ್ಯಾತ `ಲ್ಯಾಂಡ್ ಸ್ಕೇಪರ್’ ಆಗಿ ಪ್ರಸಿದ್ಧರಾಗಿದ್ದಾರೆ. ಬೆಲ್ಟ್ ಕೊಲಿನ್ಸ್, ಪೆರಿಡಿಯನ್, ಜುರೊಂಗ್ ಮುಂತಾದ ಖ್ಯಾತ ಅಂತಾರಾಷ್ಟ್ರೀಯ ಆರ್ಕಿಟೆಕ್ಟ್ ಗಳ ಜೊತೆ ಕೆಲಸ ಮಾಡಿದ್ದಾರೆ. ಆಕೆ ಬೆಂಗಳೂರು ನಗರ ಮಾತ್ರವಲ್ಲದೆ, ಇನ್ನಿತರ ಸ್ಥಳಗಳಲ್ಲಿ, ಉದ್ಯಾನವನಗಳಲ್ಲಿ ಇಂದಿಗೂ ಕಾಣಸಿಗುವ ಅನೇಕ ಲ್ಯಾಂಡ್ ಸ್ಕೇಪ್ ಕಾರ್ಯ ಯೋಜನೆಗಳು, ವಿವರಗಳು, ಫೋಟೋಗಳನ್ನು ಈಕೆಯ ವೆಬ್ ಸೈಟ್ `ಎಕೋ ಕ್ಯಾಲಿಕ್ಸ್ ಡಾಟ್ ಕಾಮ್’ನಲ್ಲಿ ಕಾಣಬಹುದಾಗಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ಇವರು ಅನೇಕ ಕಡೆಗಳಲ್ಲಿ ಟ್ರೀ ಪ್ಲಾಂಟೇಶನ್ ನಡೆಸುತ್ತಲೇ ಬಂದಿದ್ದು, ಕೈಗಾರಿಕಾ ಪ್ರದೇಶಗಳ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ವ್ಯರ್ಥವಾದ, ಖಾಲಿ ಇರುವ ಜಾಗಗಳಲ್ಲಿ ಬೇವು ಹೊಂಗೇ ಮರಗಳು ಸೇರಿದಂತೆ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸುತ್ತಾ ಬಂದಿರುವುದು ಇತರರಿಗೆ ಮಾದರಿಯಾಗಿದೆ.
ವಿಸ್ತೃತ ಕಾರ್ಯಕ್ಷೇತ್ರ
ಪ್ರಸ್ತುತ ರೇವತಿ ಕಾಮತ್, ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದು, ಪರಿಸರ ಸಮಸ್ಯೆಗಳನ್ನು ಪರಿಹರಿಸುತ್ತ, ಅಸಂಖ್ಯಾತ ಸಸಿಗಳು, ಗಿಡಗಳನ್ನು ಬೆಳೆಸುತ್ತ, ಅರಣ್ಯ ರಕ್ಷಣೆ, ಸೋಮನಹಳ್ಳಿ ಮುಂತಾದ ಕೆರೆ ಅಭಿವೃದ್ಧಿ ಮತ್ತು ರಾಜಕಾಲುವೆಗಳ ಸ್ಪಷ್ಟೀಕರಣ ಅಭಿವೃದ್ಧಿಯತ್ತ ತಮ್ಮ ಆದ್ಯತೆಯನ್ನು ಹರಿಸಿ, ಕಟಿಬದ್ಧರಾಗಿ ಈ ದಿಸೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಲ್ಲ.
ಅಶಕ್ತರು ಬಡ ವರ್ಗದ ಬಗ್ಗೆ ಅತೀ ಕಾಳಜಿಯುಳ್ಳ ರೇವತಿಯರು, ಅನೇಕ ಗ್ರಾಮ ಹಳ್ಳಿಗಳಲ್ಲಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಶ್ರಮಿಸುತ್ತಿದ್ದಾರೆ. ಹಳ್ಳಿಗೆರೆ ಹಳ್ಳಿಯ ಶಾಲೆಯಲ್ಲಿ ತಾಂತ್ರಿಕ ಉಪಕರಣಗಳನ್ನು ಮತ್ತಿತರ ಶೈಕ್ಷಣಿಕ ಉನ್ನತಿಯ `ಡಿಜಿಟೈಸ್’ ಸೌಲಭ್ಯಗಳನ್ನು ಒದಗಿಸಲು ಶಾಲೆಯನ್ನು ದತ್ತು ಸ್ವೀಕಾರ ಮಾಡಿ ನೂರಾರು ಮಕ್ಕಳಿಗೆ ಸಹಾಯಹಸ್ತ ನೀಡಿದ್ದಾರೆ. ಗೋರಕ್ಷಣಾ ಕೇಂದ್ರಗಳಿಗೆ ಉದಾರ ದೇಣಿಗೆ ನೀಡಿದ್ದಾರೆ.
ರೇವತಿಯರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿ ವಿವಿಧ ಪ್ರಶಸ್ತಿಗಳನ್ನು ನೀಡಿವೆ. ಪ್ರಕೃತಿ ಮಾತೆಯ ರಕ್ಷಣೆಯ ವಿವಿಧ ಕೆಲಸ ಕಾರ್ಯಗಳನ್ನು ನಮ್ಮ ಯುವ ಜನಾಂಗ ಕೈಗೊಳ್ಳುವಂತೆ ಪ್ರೇರೇಪಿಸಲು ಹಲವಾರು ಮಾದರಿ ಕಾರ್ಯ ಯೋಜನೆಗಳನ್ನು ನಿರಂತರ ಕೈಗೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಇವರಂಥವರ ಸಂತತಿ ಸಾವಿರವಾಗಲಿ ಎಂದು ಓದುಗರ ಪರವಾಗಿ ಗೃಹಶೋಭಾ ಹಾರೈಸುತ್ತಾಳೆ.
– ವೈ.ಕೆ. ಸಂಧ್ಯಾ ಶರ್ಮ