ಅಕ್ರಮ ಬೆಟ್ಟಿಂಗ್, ಜೂಜಾಟ ಮತ್ತು ಕ್ಯಾಸಿನೊ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕೇಸ್ ದಾಖಲಾಗುತ್ತಲೇ ನಟ ಪ್ರಕಾಶ್ ರೈ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ.

ಅಕ್ರಮ ಬೆಟ್ಟಿಂಗ್, ಜೂಜಾಟ ಮತ್ತು ಕ್ಯಾಸಿನೊ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿ ಸಾರ್ವಜನಿಕರಿಗೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದ ಮೇಲೆ ನಟ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ ಮತ್ತು ನಿಧಿ ಅಗರ್ವಾಲ್ ಸೇರಿದಂತೆ ಟಾಲಿವುಡ್ ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಸೇರಿದಂತೆ 25 ಜನರ ವಿರುದ್ಧ ತೆಲಂಗಾಣದ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಟರಾದ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರು ಪಾಪ್-ಅಪ್ ಜಾಹೀರಾತುಗಳ ಮೂಲಕ ಜಂಗ್ಲೀ ರಮ್ಮಿಯನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹೇಳಿಕೆ ನೀಡಿದ್ದು, ‘ತುಂಬಾ ವರ್ಷಗಳ ಹಿಂದೆ ಆ ಜಾಹಿರಾತು ಮಾಡಿದ್ದು ನಿಜ.. ಬಳಿಕ ಅದು ತಪ್ಪು ಎಂದು ತಿಳಿಯಿತು. ಕೂಡಲೇ ಅದನ್ನು ನಿಲ್ಲಿಸಿದೆ. ಅಂತೆಯೇ ನನ್ನ ಜಾಹಿರಾತು ಬಳಕೆ ಮಾಡದಂತೆ ಆ ಸಂಸ್ಥೆಗೂ ಸೂಚಿಸಿದ್ದೆ ಎಂದು ಹೇಳಿದ್ದಾರೆ.

‘ಇಲ್ಲೇ ಚಿತ್ರವೊಂದರ ಶೂಟಿಂಗ್ ನಲ್ಲಿದ್ದೆ. ಈಗಷ್ಟೇ ನನಗೆ ಬೆಟ್ಟಿಂಗ್ ಆ್ಯಪ್ ಪ್ರಕರಣದ ಕುರಿತು ಮಾಹಿತಿ ತಿಳಿಯಿತು. ಎಲ್ಲರನ್ನೂ ಪ್ರಶ್ನಿಸುವ ನಾನು ನನ್ನ ಬಗ್ಗೆ ಪ್ರಶ್ನೆಗಳು ಎದ್ದಾಗ ಅದಕ್ಕೆ ಉತ್ತರ ನೀಡಬೇಕು. ಪೊಲೀಸ್ ಪ್ರಕರಣದ ಬಗ್ಗೆ ಹೇಳುತ್ತಿದ್ದಾರೆ. ಆದರೆ ನನಗೆ ಈವರೆಗೂ ಪೊಲೀಸರಿಂದ ಯಾವುದೇ ಸಂದೇಶ ಬಂದಿಲ್ಲ. ಬಂದರೂ ಅದಕ್ಕೆ ನಾನು ಉತ್ತರ ನೀಡುತ್ತೇನೆ. ಆದರೆ ನಿಮಗೆ ನಾನು ಉತ್ತರ ನೀಡಲೇಬೇಕು. ಹೀಗಾಗಿ ಈ ವಿಡಿಯೋ ಮೂಲಕ ಉತ್ತರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘2016ರಲ್ಲಿ ನನಗೆ ಈ ಬೆಟ್ಟಿಂಗ್ ಆ್ಯಪ್ ಜಾಹಿರಾತು ಬಂತು. ನಾನು ಕೂಡ ಆ ಜಾಹಿರಾತು ಮಾಡಿದ್ದೆ. ಆದರೆ ಬಳಿಕ ಅದು ತಪ್ಪು ಎಂದು ತಿಳಿದು ಅದನ್ನು ನಿಲ್ಲಿಸಲು ಯತ್ನಿಸಿದೆ. ಆದರೆ ಒಪ್ಪಂದದ ಅನ್ವಯ ಒಂದು ವರ್ಷ ಜಾಹಿರಾತು ನಡೆದಿತ್ತು. 2017ರಲ್ಲಿ ಜಾಹಿರಾತು ವಿಸ್ತರಣೆಗೆ ಅವರು ಬಂದಿದ್ದರು. ಆದರೆ ನಾನು ಅದಕ್ಕೆ ನಿರಾಕರಿಸಿದೆ. ಬಳಿಕ ಅಂತಹ ಯಾವುದೇ ಗೇಮಿಂಗ್ ಆ್ಯಪ್ ಗಳಿಗೆ ನಾನು ಜಾಹಿರಾತು ನೀಡಿಲ್ಲ. 2021ರಲ್ಲಿ ಆ ಕಂಪನಿ ಆ ಜಾಹಿರಾತನ್ನು ಬೇರೆ ಸಂಸ್ಥೆಗೆ ಮಾರಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಮಾಡಿತ್ತು. ಆದರೆ ನಾನು ಅವರಿಗೆ ಅದನ್ನು ಬಳಕೆ ಮಾಡದಂತೆ ದೂರು ದಾಖಲಿಸಿದ್ದೆ. ಬಳಿಕ ಅವರು ಅದನ್ನು ನಿಲ್ಲಿಸಿದರು. ಇದೀಗ ಮತ್ತೆ ಅದು ಲೀಕ್ ಆಗಿದೆ. ಹೀಗಾಗಿ ನಾನು ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ವಿವರಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ